ಬೆಂಗಳೂರು:ರಾಜ್ಯದ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿಯೊಂದಿದೆ. ಹೊಸದಾಗಿ 27 ಸಕ್ಕರೆ ಕಾರ್ಖಾನೆಗಳ ಸ್ಥಾಪನೆಗೆ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ನಿಯಮಾನುಸಾರ ಪರಿಶೀಲಿಸಿ ಶೀಘ್ರ ಅನುಮತಿ ನೀಡುವ ಪ್ರಕ್ರಿಯೆ ಬಿರುಸಿನಿಂದ ನಡೆದಿದೆ. ವಿಜಯವಾಣಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದದಲ್ಲಿ ಸಕ್ಕರೆ ಮತ್ತು ಜವಳಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಈ ವಿಷಯ ತಿಳಿಸಿದರು.
ಬದಲಾದ ತಂತ್ರಜ್ಞಾನ, ಉಪ ಉತ್ಪನ್ನಗಳಿಗೆ ವಿಪುಲ ಅವಕಾಶ, ಎಥೆನಾಲ್​ಗೆ ಉತ್ತೇಜನದಿಂದ ಸಕ್ಕರೆ ಉದ್ಯಮ ಹೊಸ ಆಯಾಮ ಪಡೆದುಕೊಳ್ಳುತ್ತಿದ್ದು, ಲಾಭದ ಹಳಿಗೆ ಬಂದಿರುವುದರಿಂದ ಹೆಚ್ಚೆಚ್ಚು ಉದ್ಯಮಿಗಳು ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಉತ್ಸುಕರಾಗಿರುವುದು ಈ ಬೆಳವಣಿಗೆ ನಿದರ್ಶನವಾಗಿದೆ. ಹೊಸ ಸಕ್ಕರೆ ಕಾರ್ಖಾನೆ ಪ್ರಸ್ತಾವನೆಗಳು ರಾಜ್ಯದ ಯಾವುದೋ ಒಂದು ಭಾಗಕ್ಕೆ ಸೀಮಿತವಾಗಿಲ್ಲ. ಎಲ್ಲ ಪ್ರದೇಶ ಜಿಲ್ಲೆಗಳನ್ನು ಒಳಗೊಂಡಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ, ಗದಗ, ಬೀದರ್, ಕಲಬುರಗಿ ಸೇರಿ ಇನ್ನು ಹಲವು ಜಿಲ್ಲೆಗಳಲ್ಲಿ ಹೊಸ ಕಾರ್ಖಾನೆ ಆರಂಭಕ್ಕೆ ಅವಕಾಶ ಕೋರಲಾಗಿದೆ ಎಂದು ಮುನೇನಕೊಪ್ಪ ವಿವರಿಸಿದರು. ಹೊಸ ಸಕ್ಕರೆ ಕಾರ್ಖಾನೆಗಳ ಸ್ಥಾಪನೆಯಿಂದ ಉದ್ಯೋಗ ಸೃಷ್ಟಿ, ರೈತರಿಗೆ ಬೆಲೆ ಖಾತ್ರಿ, ಸಕಾಲಕ್ಕೆ ಪಾವತಿ, ಉಪ ಉತ್ಪನ್ನಗಳ ಉತ್ಪಾದನೆ ಹೆಚ್ಚಳ ಆ ಮೂಲಕ ತೆರಿಗೆ ರೂಪದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೂ ಆದಾಯ ಬರಲಿದೆ ಎಂದರು.
ಬಾಕಿ ಪಾವತಿ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶಯದಂತೆ ಇಲಾಖೆಯಲ್ಲಿನ ಗೊಂದಲವನ್ನು ನಿವಾರಿಸಿ ರೈತರಿಗೆ ಸರಿಯಾದ ಸಮಯಕ್ಕೆ ಕಬ್ಬು ಹಣ ಪಾವತಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರಸಕ್ತ ವರ್ಷ 17 ಕಾರ್ಖಾನೆಗಳಿಂದ 50 ಕೋಟಿ ರೂ. ಮಾತ್ರ ಬಾಕಿ ಇದೆ. ರೈತರು, ಕಾರ್ಖಾನೆ ಮಾಲಿಕರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗೊಂದಲ ನಿವಾರಿಸಲಾಗಿದೆ ಎಂದು ಹೇಳಿದರು. ಕಬ್ಬು ಬೆಳೆಯಲ್ಲಿ ತಾಂತ್ರಿಕತೆ, ಉತ್ಪಾದನಾ ವೆಚ್ಚ ಕಡಿತ, ಉತ್ತಮ ಗುಣಮಟ್ಟ ಸೇರಿದಂತೆ ಈ ಕ್ಷೇತ್ರದ ಸಮಗ್ರ ಅಧ್ಯಯನಕ್ಕಾಗಿ ರೈತರ ನೇತೃತ್ವದಲ್ಲೇ ತಂಡ ರಚಿಸಿದ್ದು, ಈಗಾಗಲೇ ಉತ್ತರಪ್ರದೇಶಕ್ಕೆ ಭೇಟಿ ನೀಡಿದೆ. ಮುಂದಿನ ಹಂತದಲ್ಲಿ ಅಧ್ಯಯನಕ್ಕಾಗಿ ವಿದೇಶಕ್ಕೆ ಕಳಿಸಲಾಗುತ್ತಿದೆ ಎಂದು ಸಚಿವ ಮುನೇನಕೊಪ್ಪ ಹೇಳಿದರು.
ಕಬ್ಬಿನ ದರ ಏರಿಕೆ:ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುವ ಎಥೆನಾಲ್​ನಿಂದ ಗಳಿಸುವ ಲಾಭಾಂಶದಲ್ಲಿ ರೈತರಿಗೂ ಪಾಲು ನೀಡಬೇಕೆಂಬ ಬೇಡಿಕೆ ಪ್ರಸ್ತಾಪವಾಗಿರುವುದು ನಿಜ. ಆದರೆ, ಕಬ್ಬು ಹಾಗೂ ಎಥೆನಾಲ್ ದರವನ್ನು ಕೇಂದ್ರವೇ ನಿಗದಿಪಡಿಸಲಿದ್ದು ರಾಜ್ಯ ಸರ್ಕಾರದ ಕೈಯಲ್ಲಿಲ್ಲ. ಆದರೂ ರೈತರ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿ ಪ್ರಸಕ್ತ ವರ್ಷ ಅಕ್ಟೋಬರ್- ಸೆಪ್ಟೆಂಬರ್ ಹಂಗಾಮಿನಲ್ಲಿ ಕಬ್ಬು ನ್ಯಾಯೋಚಿತ ಹಾಗೂ ಲಾಭದಾಯಕ ದರವನ್ನು ಪ್ರತಿ ಕ್ವಿಂಟಾಲ್​ಗೆ 15 ರೂ. ಹೆಚ್ಚಿಸಿದೆ. ಜತೆಗೆ, ಶೇ.10.25ರಷ್ಟು ಸಕ್ಕರೆ ಇಳುವರಿ ನೀಡುವ ಕಬ್ಬಿಗೆ ಪ್ರತಿ ಕ್ವಿಂಟಾಲ್​ಗೆ 305ಕ್ಕೆ ಏರಿಸಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದ ಸಕ್ಕರೆ ಉದ್ದಿಮೆ ಬೆಳವಣಿಗೆಗೆ ಸರ್ಕಾರ ಎಲ್ಲ ರೀತಿಯ ಕ್ರಮಕೈಗೊಳ್ಳುತ್ತಿದೆ. ಪ್ರಧಾನಿ ಮೋದಿ ಆಶಯದಂತೆ ಹೆಚ್ಚೆಚ್ಚು ಎಥೆನಾಲ್ ಉತ್ಪಾದನೆಗೆ ಗಮನ ನೀಡಲಾಗಿದೆ. ಸಕ್ಕರೆ ಕಾರ್ಖಾನೆ ಸಂಖ್ಯೆಯೂ ಹೆಚ್ಚುತ್ತಿದೆ.
|ಶಂಕರ್ ಪಾಟೀಲ್ಮುನೇನಕೊಪ್ಪ ಸಕ್ಕರೆ ಸಚಿವ
ಇಂಧನವಾಗಿ ಬಳಕೆಗೆ ಉತ್ತೇಜನ:ಪೆಟ್ರೋಲ್ ಜತೆ ಎಥೆನಾಲ್ ಮಿಶ್ರಣ ಯೋಜನೆ ಪರಿಣಾಮಕಾರಿ ಅನು ಷ್ಠಾನಕ್ಕೆ ಸಚಿವರ ಅಧ್ಯಕ್ಷತೆಯಲ್ಲಿಯೇ ಸಮಿತಿ ರಚಿಸಲಾಗಿದೆ. ಈ ಸಮಿತಿ ರಾಜ್ಯದಲ್ಲಿ ಎಥೆನಾಲ್ ಘಟಕ ಸ್ಥಾಪಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವಶ್ಯವಿರುವ ನಿಯಮಗಳು ಹಾಗೂ ರೂಪುರೇಷೆಗಳನ್ನು ರಚಿಸಲಿದೆ. ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಮತ್ತು ಬಿಕ್ವೆಸ್ಟ್ ಕನ್ಸಲ್ಟೆನ್ಸಿಯು ಎಥೆನಾಲ್ ಉತ್ಪಾದನೆಯ ನಿಯಮ ಆವಿಷ್ಕಾರ ಹಾಗೂ ಸ್ಥಿರತೆಯ ಕುರಿತು ಗಂಭೀರ ಚಿಂತನೆ ನಡೆಸಿದೆ ಎಂದು ಸಚಿವರು ಹೇಳಿದರು.
ಎಥೆನಾಲ್ ಉತ್ಪಾದನೆಯಲ್ಲಿ ಮುಂಚೂಣಿ:ಸಕ್ಕರೆ ಉದ್ಯಮ ಹಿತದೃಷ್ಟಿಯಿಂದ ಎಥೆನಾಲ್ ನೀತಿಯನ್ನು ಜಾರಿಗೆ ತಂದಿದೆ. ಎಥೆನಾಲ್ ಉತ್ಪಾದಿಸುವ ಕಾರ್ಖಾನೆಗಳಿಗೆ ಲಾಭದಾಯಕ ಬೆಲೆ ಘೋಷಿಸಿದೆ. ಪೆಟ್ರೋಲ್​ನಲ್ಲಿ ಎಥೆನಾಲ್ ಮಿಶ್ರಣಕ್ಕೆ ಕೇಂದ್ರ ಸರ್ಕಾರ ಒತ್ತು ಕೊಡುತ್ತಿದೆ. 2025ರೊಳಗೆ ಶೇ.20ರಷ್ಟು ಎಥೆನಾಲ್ ಮಿಶ್ರಣ ಸಾಧಿಸುವ ಗುರಿ ಇಟ್ಟುಕೊಂಡಿದೆ. ರಾಜ್ಯದಲ್ಲೂ ಈ ನೀತಿ ಜಾರಿಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಸದ್ಯ 65 ಸಕ್ಕರೆ ಕಾರ್ಖಾನೆಗಳು ಕಾರ್ಯಾಚರಿಸುತ್ತಿದ್ದು, ಈ ಪೈಕಿ 32 ಕಾರ್ಖಾನೆಗಳು ಎಥೆನಾಲ್ ಉತ್ಪಾದಿಸುತ್ತಿದ್ದು, ಒಟ್ಟು ಉತ್ಪಾದನಾ ಸಾಮರ್ಥ್ಯ 3200 ಕೆಎಲ್​ಪಿಡಿ ಆಗಿದೆ. ರಾಜ್ಯದಲ್ಲಿ ಹೊಸದಾಗಿ 68 ಎಥೆನಾಲ್ ಘಟಕ ಸ್ಥಾಪಿಸಲು ಮತ್ತು ಹಾಲಿ ಇರುವ ಘಟಕಗಳ ಸಾಮರ್ಥ್ಯ ಹೆಚ್ಚಿಸಲು ಅನುಮೋದನೆ ಪಡೆದಿದ್ದು, ಒಟ್ಟು ಈ ಘಟಕಗಳ ಉತ್ಪಾದನಾ ಸಾಮರ್ಥ್ಯ 10,835 ಕೆಎಲ್​ಪಿಡಿಯಾಗಲಿದೆ. ದೇಶದಲ್ಲಿ ಕರ್ನಾಟಕವೇ ಎಥೆನಾಲ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ ಎಂದರು.
ಚಲಿಸುತ್ತಿದ್ದ ಕಾರಿನ ಮೇಲೇ ಬಿದ್ದ ಮರ, ತಂದೆ-ಮಗ ಸ್ಥಳದಲ್ಲೇ ಸಾವು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
