ಬೆಂಗಳೂರು:ಔಷಧ ಮಳಿಗೆಗಳಲ್ಲಿ ಬಳಕೆ ಅವಧಿಯ ದಿನಾಂಕ ಹಾಗೂ ನಿಗದಿತ ದರ ಪರಿಶೀಲಿಸಿದ ಬಳಿಕವಷ್ಟೇ ಸಾರ್ವಜನಿಕರು ಕಡ್ಡಾಯವಾಗಿ ಔಷಧ ಖರೀದಿಸಬೇಕು. ವೈದ್ಯರ ಸಲಹಾ ಚೀಟಿ ಪಡೆದು ಔಷಧಗಳನ್ನು ಕೊಳ್ಳಬೇಕು. ಔಷಧ ಮಳಿಗೆಗಳ ಮಾಲೀಕರೂ ವೈದ್ಯರು ಬರೆದುಕೊಟ್ಟಿರುವ ಚೀಟಿಯಲ್ಲಿನ ಅಂಶದಂತೆ ಔಷಧಗಳನ್ನು ಕೊಟ್ಟಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಿ ಕಡ್ಡಾಯವಾಗಿ ಬಿಲ್ ಪಡೆದುಕೊಳ್ಳಬೇಕು. ಒಂದು ವೇಳೆ ಬೇರೆ ಔಷಧಗಳನ್ನು ನೀಡಿದರೆ ಸ್ಥಳದಲ್ಲೇ ಬದಲಾಯಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅಂದಾಜಿನ ಮೇಲೆ ಔಷಧ ಖರೀದಿಸಬಾರದು. ಅಲ್ಲದೆ, ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್​ಪಿಪಿಎ) ನಿಗದಿಪಡಿಸಿದ ದರದಲ್ಲೇ ಔಷಧ ಮಳಿಗೆಗಳ ಮಾಲೀಕರು ಔಷಧಗಳನ್ನು ಮಾರಾಟ ಮಾಡಬೇಕು. ಇಲ್ಲದಿದ್ದರೆ, ಅಂಥವರ ಮೇಲೆ ಔಷಧ ನಿಯಂತ್ರಣ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ.
ಸ್ವ-ಔಷಧ ಸೇವನೆ ನಿಂತಿಲ್ಲ:ಒಬ್ಬರಿಗೆ ಕೊಟ್ಟಿರುವ ಔಷಧಗಳನ್ನು ವೈದ್ಯರ ಸಲಹೆ ಇಲ್ಲದೆ ಮತ್ತೊಬ್ಬರು ಬಳಸುವುದು ಅನೇಕ ಸಂದರ್ಭಗಳಲ್ಲಿ ಜೀವಕ್ಕೆ ಅಪಾಯ ತಂದೊಡ್ಡುತ್ತವೆ. ಹಾಗಾಗಿ, ವೈದ್ಯರಿಂದ ಸಲಹೆ ಪಡೆದು ಔಷಧ ಖರೀದಿಸಬೇಕು. ಔಷಧಗಳನ್ನು ರಾಸಾಯನಿಕ ಬೆರೆಸಿ ತಯಾರಿಸಲಾಗಿರುತ್ತದೆ. ಬಳಕೆ ಅವಧಿ ಮೀರಿದ ನಂತರ ಆ ಔಷಧಗಳಲ್ಲಿ ಕೆಲ ರಾಸಾಯನಿಕ ಬದಲಾವಣೆಗಳು ಆಗುತ್ತವೆ. ಅಂಥ ಔಷಧಗಳನ್ನು ಸೇವಿಸುವುದರಿಂದ ಮಾನವನ ದೇಹಕ್ಕೆ ಹಾನಿಯಾಗುವ ಸಂಭವ ಹೆಚ್ಚು. ಇದು ತಕ್ಷಣ ಕಾಣಿಸಿಕೊಳ್ಳದಿದ್ದರೂ, ಕ್ರಮೇಣ ದೇಹವನ್ನು ದುರ್ಬಲಗೊಳಿಸುತ್ತದೆ. ಕೆಲ ಔಷಧಗಳು ವಿಷಕಾರಿಯಾಗಿಯೂ ಬದಲಾಗಬಹುದು. ಹಾಗಾಗಿ, ಕಡ್ಡಾಯವಾಗಿ ವೈದ್ಯರ ಸಲಹೆ ಪಡೆದು ಔಷಧ ಖರೀದಿಸಬೇಕು ಹಾಗೂ ಅವಧಿ ಮೀರಿದ ಔಷಧಗಳನ್ನು ಬಳಸಬಾರದು ಎಂದು ಇಲಾಖೆ ಸಲಹೆ ನೀಡಿದೆ.
ಮಾರಾಟ ಮಾಡುವಂತಿಲ್ಲ:ಅವಧಿ ಮೀರಿದ ಔಷಧಗಳನ್ನು ಯಾವುದೇ ಕಾರಣಕ್ಕೂ ಔಷಧ ಮಳಿಗೆಗಳಲ್ಲಿ ಮಾರಾಟ ಮಾಡುವಂತಿಲ್ಲ. ಒಂದೊಮ್ಮೆ ಅಂತಹ ಔಷಧಗಳು ಇದ್ದರೆ ಅವುಗಳನ್ನು ಪ್ರತ್ಯೇಕ ರ್ಯಾಕ್​ನಲ್ಲಿ ಇಡಬೇಕು. ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆ ಮೂಲಕ ನಿಯಮಾನುಸಾರ ಅವಧಿ ಮೀರಿದ ಔಷಧಗಳನ್ನು ವಿಲೇವಾರಿ ಮಾಡಬೇಕು. ಇಂತಹ ಔಷಧಗಳನ್ನು ರೋಗಿಗಳಿಗೆ ಕೊಡಬಾರದು. ಈ ಔಷಧಗಳನ್ನು ರೋಗಿ ತೆಗೆದುಕೊಂಡ ಬಳಿಕ ಆರೋಗ್ಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ, ಇದರ ಬಗ್ಗೆ ಸಾರ್ವಜನಿಕರು ಎಚ್ಚರವಹಿಸುವುದು ಒಳಿತು.
ಪರಿವೀಕ್ಷಣಾ ಆಂದೋಲನ:ರಾಜ್ಯದಲ್ಲಿ ನಿಷೇಧಿತ ಔಷಧಗಳು ಕಂಡುಬಂದಲ್ಲಿ ತಕ್ಷಣವೇ ಔಷಧ ಅಂಗಡಿ ಹಾಗೂ ಔಷಧ ತಯಾರಿಕಾ ಘಟಕದಲ್ಲಿ ಪರಿಶೀಲಿಸಿ ಇಲಾಖೆ ಕ್ರಮ ಜರುಗಿಸಲಿದೆ. ಇಲಾಖೆ ವತಿಯಿಂದ ಪ್ರತಿ ವರ್ಷ 2 ಬಾರಿ ಎನ್​ಡಿಪಿಎಸ್ ಔಷಧಗಳನ್ನು 2 ದಿನಗಳ ಕಾಲ ವಿಶೇಷ ಪರಿವೀಕ್ಷಣಾ ಆಂದೋಲನ ನಡೆಸುತ್ತಿದೆ. ಮಾದಕ ಹಾಗೂ ಮತ್ತು ಬರುವ ಔಷಧಗಳನ್ನು ಬಳಸದಂತೆ ಪ್ರತಿ ವರ್ಷ ಜೂ.26ರಂದು ‘ಮಾದಕ ವಸ್ತು ಮತ್ತು ಅಕ್ರಮ ಕಳ್ಳಸಾಗಣೆ ವಿರೋಧಿ ಅಂತಾರಾಷ್ಟ್ರೀಯ ದಿನ’ ಆಚರಿಸುತ್ತದೆ. ಔಷಧ ವ್ಯಾಪಾರಸ್ಥರ ಸಹಯೋಗದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.
ಏನಿದು ಇಲಾಖೆ?:ಆರೋಗ್ಯ ಇಲಾಖೆ ಅಧೀನದ ಔಷಧ ನಿಯಂತ್ರಣ ಇಲಾಖೆಯು ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ ಹಾಗೂ ಅದರ ಅಡಿಯಲ್ಲಿರುವ ನಿಯಮಗಳ ನಿಬಂಧನೆಗಳನ್ನು ಜಾರಿಗೊಳಿಸಿ ರಾಜ್ಯದಲ್ಲಿ ತಯಾರಾಗುವ ಮತ್ತು ಮಾರಾಟಕ್ಕಾಗಿ ಸರಬರಾಜುರಾಗುತ್ತಿರುವ ಔಷಧಗಳ ಹಾಗೂ ಕಾಂತಿ ವರ್ಧಕಗಳ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳುತ್ತಿದೆ. ಔಷಧ ಮಳಿಗೆಗಳಲ್ಲಿ ನಿಗದಿತ ದರದಲ್ಲೇ ಉತ್ತಮ ಗುಣಮಟ್ಟದ ಔಷಧಗಳನ್ನು ಸಾರ್ವಜನಿಕರಿಗೆ ಸಿಗುವಂತೆ ಮಾಡುವುದೇ ಇಲಾಖೆಯ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ ತನಿಖೆ ಮಾಡಿ ನಿಯಾಮಾನುಸಾರ ಕ್ರಮಕೈಗೊಳ್ಳುತ್ತದೆ. ಸಾರ್ವಜನಿಕರು ಯಾವುದೇ ದೂರುಗಳಿದ್ದಲ್ಲಿ ಆಯಾ ಜಿಲ್ಲೆಯ ಅಧಿಕಾರಿಗಳಿಗೆ ಹಾಗೂ ಕೇಂದ್ರ ಕಚೇರಿಗಳಲ್ಲಿ ಲಿಖಿತ ರೂಪದಲ್ಲಿ ದೂರು ನೀಡಬಹುದು. ಸಾರ್ವಜನಿಕರ ಆರೋಗ್ಯದಲ್ಲಿ ಯಾವುದೇ ದುಷ್ಪಾರಿಣಾಮ ಬೀರದಂತೆ ಕ್ರಮವಹಿಸುತ್ತಿದೆ.
ದೇಶದ ಯುವಕರಲ್ಲಿ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಇತ್ತೀಚೆಗೆ ಯುವಕರು ಹೆಚ್ಚೆಚ್ಚು ಇಂತಹ ವ್ಯಸನಗಳಿಗೆ ದಾಸರಾಗುತ್ತಿದ್ದಾರೆ. ಮಾದಕ ವಸ್ತು ನಿಷೇಧ ದಿನದಂದು ವಿವಿಧ ಕಾರ್ಯಕ್ರಮಗಳ ಮೂಲಕ ಇದರಿಂದಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಬೇಕು.
|ಎನ್.ಪುಷ್ಪಾಉಪ ಕಾರ್ಯದರ್ಶಿ, ಆರೋಗ್ಯ ಇಲಾಖೆ
ಮಾದಕ ವ್ಯಸನ ಎಂಬುದು ಸಮಾಜಕ್ಕೆ ಮಾರಕವಾಗಿದೆ. ಆಳವಾಗಿ ಬೇರೂರಿರುವ ಈ ವ್ಯಸನವನ್ನು ಬುಡ ಸಮೇತ ಕಿತ್ತುಹಾಕಬೇಕು. ದೇಶದ ಬೆಳವಣಿಗೆ ದೃಷ್ಟಿಯಿಂದ ಮಾದಕ ವ್ಯಸನಿಗಳಿಗೆ ಡ್ರಗ್ಸ್ ಸೇವನೆ ಅಪಾಯದ ಬಗ್ಗೆ ಅರಿವು ಮೂಡಿಸಬೇಕು.
|ಡಾ.ತುಷಾರ್ನಿರ್ದೇಶಕರು, ರೆಸೋನೆನ್ಸ್ ಲ್ಯಾಬೋರೆಟರೀಸ್
ಮಾದಕ ವ್ಯಸನದಿಂದ ಯುವಜನತೆ ಹಾಳಾಗುತ್ತಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆಯನ್ನು ತಡೆಗಟ್ಟಬೇಕು. ಸಮಾಜದ ಬೆಳವಣಿಗೆ ದೃಷ್ಟಿಯಿಂದ ಎಲ್ಲರೂ ಜತೆಗೂಡಿ ಡ್ರಗ್ಸ್ ಜಾಲದ ವಿರುದ್ಧ ಹೋರಾಡಬೇಕು.
|ಕೃಷ್ಣಮೂರ್ತಿಸಿಇಒ, ಎಂಸಿಒ ಆಸ್ಪತ್ರೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − twelve =
Remember me
