ನನ್ನ ತಂದೆ – ತಾಯಿ ಓದಿದ್ದು ಅಷ್ಟಕ್ಕಷ್ಟೇ. ದರ್ಜಿವೃತ್ತಿ ಹಾಗೂ ಸ್ವಲ್ಪ ಜಮೀನು. ಅವರು ಪಡುವ ಕಷ್ಟ ನನ್ನ ಕಣ್ಣೆದುರಿಗೆ ಇದ್ದುದರಿಂದ ನನ್ನ ಆಶೋತ್ತರಗಳ ಬಗೆಗೆ ಏನನ್ನೂ ಕೇಳದೆ ಗುರು ಹಿರಿಯರ ಮಾತುಗಳನ್ನು ಕೇಳುತ್ತ ಹೈಸ್ಕೂಲು ಕಟ್ಟೆ ಹತ್ತಿದೆ. ನನ್ನ ತರಗತಿಯ ಮೇಷ್ಟ್ರು ಹನುಮಂತಪ್ಪ ಅವರಿಂದ ಸೈನ್ಸ್ ಬದಲು ಆರ್ಟ್ಸ್ ತೆಗೆದುಕೊಳ್ಳಲು ಸಲಹೆ.. ಹಾಗೆಯೇ ಪಿಯುಸಿ ಹೋದಾಗ ಕಾಮರ್ಸ್ ತೆಗೆದುಕೋ ಎಂಬ ಸಲಹೆ.. ಇದರ ಪರಿಣಾಮ ಬಿ.ಕಾಂ ಪದವಿ ಪಡೆದು ಹೆಸರಾಂತ ಕೆನರಾ ಬ್ಯಾಂಕಿನಲ್ಲಿ ಉದ್ಯೋಗ ಪಡೆದು ರಾಷ್ಟ್ರದ ಉದ್ದಗಲಕ್ಕೂ ವರ್ಗಾವಣೆ ಆಗುತ್ತಾ ಹಂಪೆಯಿಂದ ಪಂಜಾಬ್​ವರೆಗೂ ಸುತ್ತಾಡಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಈಗ ದಾವಣಗೆರೆಯಲ್ಲಿ ನೆಲೆಸಿದ್ದೇನೆ. ಈ ಹಿಂದೆ ನನ್ನ ಕಾರ್ಯಚಟುವಟಿಕೆಯನ್ನು ಗಮನಿಸಿದ ಬ್ಯಾಂಕ್ ದಾವಣಗೆರೆ ಜಿಲ್ಲೆಯ ಪ್ರಪ್ರಥಮ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಆರ್ಥಿಕ ಸಲಹೆಗಾರ ಎಂದು ನಾಲ್ಕು ವರ್ಷ ಪುನಃ ನೇಮಕ ಮಾಡಿದಾಗ ಗ್ರಾಮೀಣ ಭಾಗದ ಜನರ ಮನೆಯ ಬಾಗಿಲಿಗೆ ಹೋಗಿ, ಸಭೆಗಳನ್ನು ಏರ್ಪಡಿಸಿ ಬ್ಯಾಂಕ್ ಸೇವಾ ಸೌಲಭ್ಯಗಳನ್ನು ಜನ ಸಾಮಾನ್ಯರಿಗೆ ಅರ್ಥೈಸುವ ಮಹಾತ್ಕಾರ್ಯ ನನ್ನ ಪಾಲಿಗೆ ಲಭಿಸಿತು. ಇದಕ್ಕೆ ಕಾರಣ ಎಸ್. ಬಿ. ಹನುಮಂತಪ್ಪ ಗುರುಗಳ ಮಾರ್ಗದರ್ಶನ. ಅವರ ಮಾರ್ಗದರ್ಶನ ಇಲ್ಲದಿದ್ದರೆ ನಾನೂ ಕೂಡ ನಮ್ಮ ತಂದೆಯಂತೆ ಟೈಲರ್ ಆಗಿರುತ್ತಿದ್ದೆ.
| ರಘುನಾಥರಾವ್ ತಾಪ್ಸೆ ದಾವಣಗೆರೆ
ಇಲ್ಲ ಎಂಬುವುದನ್ನು ಮರೆಸಿ ಇದೆ ಎಂಬುದನ್ನು ನನಗೆ ಅರಿವು ಮೂಡಿಸಿದ ಗುರು ನನ್ನ ಪದವಿ ವಿದ್ಯಾಭ್ಯಾಸದಲ್ಲಿ ಸಿಕ್ಕ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ ಪಿ.ಆರ್. ನಿಡ್ಪಳ್ಳಿ. ಅದ್ಯಾವುದೇ ಸಂದರ್ಭವಿರಲಿ ಏನೇ ಸಮಸ್ಯೆ ಬರಲಿ ಯಾರೊಂದಿಗಾದರೂ ಹಂಚಿಕೊಳ್ಳೋಣ ಎಂದರೆ ಥಟ್ಟನೆ ನೆನಪಾಗುವವರೆ ಇವರು. ಗೆದ್ದಾಗ ಬೆನ್ನು ತಟ್ಟಿ ಸೋತಾಗ ಕೈ ಹಿಡಿದು ಮುನ್ನಡೆಸಿ, ಸಾಗು ನೀ ಗಾವುದ ದೂರ ಜೊತೆಗಿರುವೆ ಎಂದು ಧೈರ್ಯ ತುಂಬಿದವರು. ಯಾರೇ ಆಗಲಿ ಕುಗ್ಗಿದಾಗ ಮತ್ತೆ ಮೇಲೇಳುವುದಕ್ಕೆ ಬೇಕಾಗಿರುವುದು ಆತ್ಮವಿಶ್ವಾಸದ ಎರಡು ಒಳ್ಳೆಯ ಮಾತು ಅಷ್ಟೆ. ಹಾಗೆಯೇ ನಾನು ಕುಗ್ಗಿದಾಗಲೂ ನಿನ್ನಿಂದ ಸಾಧ್ಯವಿದೆ ಎಂದು ಧೈರ್ಯ ತುಂಬಿದ ಗುರು ಈಕೆ. ಅಡಗಿ ಕುಳಿತ ಅದೆಷ್ಟೋ ಕನಸುಗಳಿಗೆ ರೆಕ್ಕೆ ಮೂಡಿಸಿ ಸರಿ ದಾರಿ ತೋರಿದ ನನ್ನ ಈ ಗುರುವಿಗೆ ನಾನೆಂದೂ ಆಭಾರಿ. ಒಬ್ಬ ತಾಯಿ ಹೇಗೆ ಮಕ್ಕಳ ಪಾಲನೆ ಪೋಷಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಾಳೋ , ಅದೇ ರೀತಿ ಒಬ್ಬ ಗುರು ಶಿಷ್ಯನ ಬಾಳನ್ನು ಬೆಳಗುತ್ತಾರೆ. ಗುರು ಗುರುವಾಗಿರದೆ ಅನೇಕ ಬಾರಿ ಬೇರೆ ಬೇರೆ ಸಂದರ್ಭಗಳಲ್ಲಿ ಸ್ನೇಹಿತರು, ಹಿತೈಷಿಗಳು, ತಾಯಿಯ ಪಾತ್ರ ವಹಿಸುತ್ತಾರೆ. ನಾವು ಎಡವುವ ಬದುಕಿನ ಪ್ರತೀ ಹೆಜ್ಜೆಯನ್ನು ಗಮನಿಸಿ ಜ್ಞಾನದ ಸರೋವರಕ್ಕೆ ಕೊಂಡೊಯ್ಯುವವರೆ ಗುರುವರ್ಯರು.
| ದೀಪ್ತಿ ಅಡ್ಡಂತ್ತಡ್ಕ, ಪುತ್ತೂರು ಪತ್ರಿಕೋದ್ಯಮ ವಿದ್ಯಾರ್ಥಿನಿ
1983 ರಿಂದ 1986ರವರೆಗೆ ನಾನು ಸುಳ್ಯ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಾರೆಯಲ್ಲಿ 4 ರಿಂದ 7ರವರೆಗೆ ಓದಿದ ಸಮಯ. ಬೆಳ್ಳಾರೆಯಲ್ಲಿ ಆಗ ಇದ್ದದ್ದು ಅದೊಂದೇ ಸರಕಾರಿ ಸ್ಕೂಲ್. ಆಗ ನಮಗೆ ದೈಹಿಕ ಶಿಕ್ಷಕರಾಗಿ ಚೀನಪ್ಪ ಗೌಡ ಎಂಬ ಚಿನ್ನದಂತಹ ಮನಸ್ಸಿನ ಮೇಷ್ಟ್ರು. ಬರೀ ಪಾಠದಿಂದ ಮಕ್ಕಳ ಪರಿಪೂರ್ಣ ಬೆಳವಣಿಗೆ ಸಾಧ್ಯವಿಲ್ಲ. ದೈಹಿಕ ಚಟುವಟಿಕೆಯಿಂದ ಕೂಡಿದ ಆಟೋಟ ಕೂಡಾ ಮಾನಸಿಕ ಬೆಳವಣಿಗೆಗೆ ಪೂರಕ ಎಂದು ಮುಖ್ಯ ಶಿಕ್ಷಕರಿಗೆ ಮನವರಿಕೆ ಮಾಡಿ ನಮ್ಮೆಲ್ಲರನ್ನೂ ಆಟೋಟಗಳಿಗೆ ಪಾಲ್ಗೊಳ್ಳಲು ಹುರಿದುಂಬಿಸುತ್ತಿದ್ದರು. ದೈಹಿಕ ತರಬೇತಿಯ ಡ್ರಿಲ್ ಸಮಯದಲ್ಲಿ ತಪ್ಪು ಮಾಡಿದಾಗ ಇಡೀ ಮೈದಾನದ ಸುತ್ತ ಹತ್ತು ರೌಂಡ್ ಓಡಿಸಿ ನಮ್ಮನ್ನ ಪಳಗಿಸುತ್ತಿದ್ದರು. ಆ ಶಿಕ್ಷೆಯಿಂದಲೇ ನಾವಿಂದು ಉಸಿರಾಡುತ್ತಿದ್ದೇವೆ ಎಂದರೆ ತಪ್ಪಾಗದು. ಈಗಲೂ ನನ್ನ ಬಳಿ ಅಂದು ಸಂಪಾದಿಸಿದ ಖೋ ಖೋ ಮತ್ತು ಕಬಡ್ಡಿಯ ಫಲಕಗಳು ಮತ್ತು ಸರ್ಟಿಫಿಕೇಟು ಭದ್ರವಾಗಿವೆ. ನಮ್ಮೊಂದಿಗೆ ಚೀನಪ್ಪ ಮೇಷ್ಟ್ರು ಕೂಡಾ ಮಕ್ಕಳಾಗಿ ನಲಿದಿದ್ದರು.
| ಡಾ. ಮುರಲೀ ಮೋಹನ್ ಚೂಂತಾರು
ನನ್ನ ಜೀವನದಲ್ಲಿ ತಿರುವು ಕೊಟ್ಟಂತಹ ಘಟನೆ, ವ್ಯಕ್ತಿ, ವಸ್ತು ಯಾವುದು ಎಂದು ಯೋಚಿಸುತ್ತ ಹಿಂದೆ ಹೋದೆ. ಥಟ್ಟನೆ ನೆನಪಾಗಿದ್ದು ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಪುರುಷೋತ್ತಮಾನಂದರು ಬರೆದ ವಿದ್ಯಾರ್ಥಿಗಾಗಿ ಮತ್ತು ಶಕ್ತಿಶಾಲಿ ವ್ಯಕ್ತಿತ್ವ ನಿರ್ಮಾಣ ಎಂಬ ಪುಸ್ತಕಗಳು. ಮತ್ತು ಈ ಪುಸ್ತಕಗಳನ್ನು ಓದಲು ಪ್ರೇರೇಪಿಸಿದ ಐ .ಘ. ಹುಡೆದ ಗುರುಗಳು. ಒಬ್ಬ ವಿದ್ಯಾರ್ಥಿಯ ಜ್ಞಾನಾರ್ಜನೆಗೆ ಬೇಕಾಗಿರುವಂಥ ಅಂಶಗಳು ಯಾವುವು? ಪೆನ್ಸಿಲ್, ಪುಸ್ತಕಗಳಿಂದ ಹಿಡಿದು ಆಹಾರ ವಿಹಾರದವರೆಗೆ, ಗುರುಹಿರಿಯರು, ಸಹಪಾಠಿಗಳು, ಜನರೊಡನೆ ನಮ್ಮ ನಡವಳಿಕೆ, ನಮ್ಮ ಅಭ್ಯಾಸ ಹವ್ಯಾಸಗಳು, ದೈವಶಕ್ತಿಯ ಕೃಪೆಯ ಬಗೆಗೆ ತಿಳಿಸಿ ಕೊಡುವಂತಹ ಅದ್ಭುತ ಪುಸ್ತಕಗಳಿವು . ಈ ಪುಸ್ತಕಗಳನ್ನು ಪರಿಚಯಿಸಿ, ಕಲಿಸಿ, ಪರೀಕ್ಷೆ ಬರೆಸಿದ್ದು ಗುರುಗಳಾದ ಐ.ಘ. ಹುಡೆದ ಅವರು. ಪಕ್ಕದ ಶಾಲೆಯ ಶಿಕ್ಷಕರಾಗಿದ್ದರೂ ಅತೀವ ಕಾಳಜಿ, ಪ್ರೀತಿಯಿಂದ ಈ ಪುಸ್ತಕಗಳ ಬಗ್ಗೆ ನಮಗೆ ಮನೆ ಪಾಠ ಮಾಡಿದವರು. ಒಂದು ಬಾರಿ ಫೀಸ್ ಕೊಡಲು ಹೋದಾಗ ನಾನು ವಿದ್ಯೆಯನ್ನು ದುಡ್ಡಿಗೆ ಮಾರಿಕೊಳ್ಳುವುದಿಲ್ಲ. ನೀನು ಜೀವನದಲ್ಲಿ ಒಳ್ಳೆಯ ವ್ಯಕ್ತಿಯಾದರೆ ಅಷ್ಟೇ ಸಾಕು ಎಂದು ಹೇಳಿ ಕಳುಹಿಸಿದರು. ರೋಣದಂತಹ ಒಂದು ಪುಟ್ಟ ಪಟ್ಟಣದಲ್ಲಿ, ಅಪ್ಪಟ ಕನ್ನಡ ಮಾಧ್ಯಮದಲ್ಲಿ ಕಲಿತ ನಾನು, ಇಂದು ಸಾಫ್ಟ್​ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುವವರೆಗೂ ಜೀವನದ ವಿವಿಧ ಹಂತಗಳಲ್ಲಿ ನನಗೆ ದಾರಿ ದೀಪವಾದದ್ದು ಈ ಪುಸ್ತಕಗಳು ಮತ್ತು ನನ್ನ ಗುರುಗಳು.
| ಜಯಲಕ್ಷ್ಮೀ ಜಿ. ರೋಣ
ಎಸ್​ಎಸ್​ಎಲ್​ಸಿ ನಂತರ ವಿಜ್ಞಾನ ವಿಭಾಗದಲ್ಲಿ ಕಲಿತರೆ ಮಾತ್ರ ಭವಿಷ್ಯ, ಮಿಕ್ಕೆಲ್ಲವೂ ವ್ಯರ್ಥ ಎನ್ನುವ ಪರಿಸ್ಥಿತಿ. ಆಗ ನನ್ನ ಭೀತಿ ದೂರ ಮಾಡಿ ಮಾರ್ಗದರ್ಶನ ಮಾಡಿದವರು ನಮ್ಮ ರೋಣದ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಗಂಜಿಗಟ್ಟಿ ಮೇಡಂ. ಅವರ ಮಾರ್ಗದರ್ಶನದ ಪರಿಣಾಮ ನಾನು ಇಂದು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಕಲಿಕೆ ಒತ್ತಾಯ ಅಥವಾ ಅನಿವಾರ್ಯ ಆಗಬಾರದು, ಯಾವುದೇ ವಿಷಯವನ್ನು ನಾವು ಶ್ರದ್ಧೆ ಮತ್ತು ಪ್ರೀತಿಯಿಂದ ಕಲಿತರೆ ಮಾತ್ರ ಯಶಸ್ಸು ಸಾಧ್ಯ ಎಂಬುದನ್ನು ನನ್ನ ಗುರುಗಳು ಅಂದು ಮನವರಿಕೆ ಮಾಡಿ ಕೊಟ್ಟರು. ಅವರ ಸಲಹೆಯಂತೆ ನಾನು ನನ್ನಿಷ್ಟದ ಕಲಾವಿಭಾಗ ಆಯ್ಕೆ ಮಾಡಿಕೊಂಡು ಸ್ನಾತಕೋತ್ತರ ಪದವಿ ಪಡೆದು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ. ವಿಜಯಪುರದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿಯಾಗಿ ಸರ್ಕಾರದಿಂದ ಗೌರವಿಸಲ್ಪಟ್ಟಿದ್ದೇನೆ. ಹಲವಾರು ಸಂಘ ಸಂಸ್ಥೆಗಳು ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ. ಸಾಹಿತ್ಯ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಾ ಹಲವಾರು ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮತ್ತು ಆನ್ಲೈನ್ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕವನ ವಾಚನ ಮಾಡಿ ಮೆಚ್ಚುಗೆಗೆ ಪಾತ್ರವಾಗಿದ್ದೇನೆ. ನನ್ನ ಈ ಬೆಳವಣಿಗೆಗೆ ಕಾರಣರಾದ ಶ್ರೀಮತಿ ಗಂಜಿಗಟ್ಟಿ ಮೇಡಂ ಅವರನ್ನು ಮರೆಯಲಾದೀತೇ?
| ಸುಮಲತಾ.ಕೆ.ಜಿ ಬಿದರಕುಂದಿ, ಮುದ್ದೇಬಿಹಾಳ ತಾಲೂಕು
ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇದ್ದವು. ತಂಟೆ ಹುಡುಗರ ಸಹವಾಸದಲ್ಲಿ ನನ್ನ ಓದು ಗಂಭೀರತೆ ಕಳೆದುಕೊಂಡಿತ್ತು. ಅವರ ಕಣ್ಣುಗಳು ನನ್ನನ್ನೇ ಕೆಲಹೊತ್ತು ಭಯಾನಕ ರೂಪದಲ್ಲಿ ದಿಟ್ಟಿಸುತ್ತಿದ್ದವು. ನಂತರ ತೀರಾ ಸಹಜ ಶಾಂತರಾಗಿ ನನ್ನನ್ನು ತಮ್ಮ ಎದುರಿನ ಕುರ್ಚಿಯಲ್ಲಿ ಕೂರಲು ಹೇಳಿದರು. ಮಾತು ಪ್ರಾರಂಭಿಸಿ; ನಿನಗೆ ಒಡಹುಟ್ಟಿದವರು ಅಂಥ ಕೆಲವರಿರಬೇಕು., ಅವರನ್ನು ಕೇವಲ ನಿನ್ನ ಸೋದರ ಸೋದರಿಯರೆಂದು ಭಾವಿಸಬೇಡ. ಅವರು ಮನೆಯ ಗೋಡೆಗಳಿದ್ದಂತೆ, ಮಕ್ಕಳಿಗೆ ಆಸರೆಯಾಗಿರುವ ನಿನ್ನ ತಂದೆಯೇ ಆ ಮನೆಯ ಸೂರು. ಇವುಗಳೆಲ್ಲದರ ಭಾರವನ್ನು ಸಹಿಸಿಕೊಂಡಿರುವ ನೆಲವೇ ನಿನ್ನ ತಾಯಿ. ಮನೆಯ ನೆಲ ಮತ್ತು ಸೂರಿಗೆ ನಂಟು ಬೆಸೆದ ಆಧಾರಸ್ತಂಭ ಅಂಥ ಒಂದು ಇರುತ್ತೆ ಅದೇ ನೀನು! ಆ ಕಂಬ ಅಲುಗಾಡಿದರೆ ಮನೆಗೆ ಆಪತ್ತು ಎಂದು ಮಾರ್ವಿುಕವಾಗಿ ನುಡಿದು ಸುಮ್ಮನಾದರು. ಗುರುಗಳನ್ನೇ ನೋಡುತ್ತಾ ಅವರ ಮಾತುಗಳನ್ನು ಆಲಿಸುತ್ತಿದ್ದ ನನಗೆ ತಪ್ಪಿನ ಅರಿವಾಗಿತ್ತು. ಮಾತು ಹೊರಡದೆ ಕಣ್ಣುಗಳಲ್ಲಿ ನೀರು ಧಾರಾಕಾರವಾಗಿ ಹರಿಯತೊಡಗಿತು. ಅಂದಿನ ಘಟನೆ ನನ್ನ ಬದುಕನ್ನೇ ಬದಲಿಸಿತು.
| ರವೀಂದ್ರ ಸಿಂಗ್, ಬೂರಮಾಕನಹಳ್ಳಿ, ಬಂಗಾರಪೇಟೆ
ಒಂದಕ್ಷರ ಕಲಿಸಿದವರೂ ಗುರುಗಳು ಹೌದಾದರೆ, ಆಧುನಿಕ ಜೀವನದ ಇನ್ನೊಂದು ಬಗೆಯ ಪಾಠಗಳನ್ನು ಕಲಿಸಿದವರೂ ಕೂಡಾ ಗುರುಗಳೇ. ಹಾಗಾಗಿ ನನ್ನ ದೃಷ್ಟಿಯಲ್ಲಿ ನಮ್ಮ ಮಕ್ಕಳೂ ಕೂಡಾ ನಮಗೆ ಗುರುವೇ . ನಮ್ಮ ಮಕ್ಕಳು ಚಿಕ್ಕವರಿದ್ದಾಗ ನಾವು ಅವರ ಕೈ ಹಿಡಿದು ನಡೆಸಿ, ತಿಳಿಸಿ, ತಿದ್ದಿ ತೀಡಿದಂತೆ ಅವರು ದೊಡ್ಡವರಾದಾಗ, ಅವರ ಜೊತೆ ಜೊತೆಗೆ ನಾವೂ ಹೆಜ್ಜೆ ಇಟ್ಟು ನಡೆಯುತ್ತಾ ಹೋದರೆ ಅವರ ಪ್ರಪಂಚಕ್ಕೆ ನಾವೂ ಸೇರ್ಪಡೆಯಾದರೆ, Computer, mobile, internet etc ಇವುಗಳು ಇಲ್ಲದಿದ್ದ ಕಾಲ ಘಟ್ಟದವರಾದ ನಾವು update ಆಗಿ ಈ ಆಧುನಿಕ ಪ್ರಪಂಚವನ್ನು ಅವರ ಕಣ್ಣಿನಿಂದ ನೋಡುತ್ತಾ, ಆಧುನಿಕ ಜಗತ್ತನ್ನ ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತಾಗುವುದು ಅವರು ಹೇಳಿಕೊಡುವ ಪಾಠದಿಂದ ಹೌದು ತಾನೆ. ಅಕ್ಷರ ಕಲಿಸಿದವ ಗುರುವೇ ಹೌದಾದರೂ ಬದುಕಿನ ಇನ್ನೊಂದು ಬಗೆಯ ಪಾಠವನ್ನು ತಮ್ಮದೇ ಆದ ರೀತಿಯಲ್ಲಿ ಕಲಿಸುವ ಮಕ್ಕಳೂ ಕೂಡಾ ನಮಗೆ ಗುರುವೇ ಹೌದಲ್ಲವೇ? medicine ಅನ್ನು 25 ವರ್ಷಗಳ ಹಿಂದೆ ಓದಿದ್ದ ನಾನು ಈಗ update ಆಗುತ್ತಿರುವುದಕ್ಕೆ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ನನ್ನ ಮಗನೂ ಕಾರಣ.
| ಡಾ. ಸುಮನಾ ತಿಪಟೂರು
ಅದು 2001- 2002 ರಲ್ಲಿ ಹರಿಹರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಮಹಾವಿದ್ಯಾಲಯದಲ್ಲಿ (ಖಒಕ ಇಟ್ಝ್ಝಜಛಿ) ನಡೆದ ಘಟನೆ. 10ನೇ ತರಗತಿ ಹೇಗೋ ಪಾಸಾದ ನಾನು ತಂದೆಯ ಭಯ ಮತ್ತು ಸ್ನೇಹಿತರ ಒತ್ತಾಯಕ್ಕೆ ಪಿಯುಸಿಗೆ ಪ್ರವೇಶ ಪಡೆದೆ. ಹಾಜರಾತಿಗಾಗಿಯೇ ತರಗತಿ ಹಾಜರಾಗುತ್ತಿದ್ದ ನಮಗೆ ಶಿಕ್ಷಕರ ಪಾಠದ ಕಡೆಗೆ ಗಮನ ಅಷ್ಟಕ್ಕಷ್ಟೇ. ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ತರಗತಿಯದು. ಅತ್ಯಂತ ಉತ್ಸಾಹದಿಂದ ಪಾಠ ಮಾಡುತ್ತಿದ್ದ ಶಿಕ್ಷಕರು, ಆ ಕ್ಷಣಕ್ಕೆ ಅವರ ಹೆಸರೇ ತಿಳಿಯದ ನಾನು ಸ್ನೇಹಿತರೊಂದಿಗೆ ಕೊನೆಯ ಬೆಂಚಿನಲ್ಲಿ ಕೂತುಕೊಂಡು ಪಾಠವ ಕೇಳುವ ಮನಸ್ಸಿಲ್ಲದೆ ನಮ್ಮದೇ ಲೋಕದಲ್ಲಿ ಹಾಸ್ಯ ಮಾಡುತ್ತಾ ಕಾಲ ಕಳೆಯುತ್ತಿದ್ದ ಸಂದರ್ಭ. ಸ್ನೇಹಿತನ ಯಾವುದೋ ಮಾತಿಗೆ ನಗು ತಡೆಯಲಾರದೆ ನಕ್ಕು ಬೀಗಿದ ಕ್ಷಣ. ಇದನ್ನು ಗಮನಿಸಿದ ನಮ್ಮ ಶಿಕ್ಷಕರು ಅದ್ಯಾಕೋ ಉಗ್ರರೂಪ ತಾಳಿ ದರದರನೇ ನನ್ನ ಕಡೆ ಬಂದು ಸುಮಾರು 150 ವಿದ್ಯಾರ್ಥಿಗಳ ಸಮ್ಮುಖದಲ್ಲಿ ನನ್ನ ಕೆನ್ನೆಗೆ ಮೂರ್ನಾಲ್ಕು ಬಾರಿ ಪೆಟ್ಟು ನೀಡಿ ತರಗತಿಯಿಂದ ಹೊರನಡೆದರು. ಸ್ನೇಹಿತರ ಎದುರು ಅವಮಾನಕ್ಕೆ ಒಳಗಾದ ನಾನು ಉಪನ್ಯಾಸಕರ ಮೇಲೆ ಒಂದು ರೀತಿಯ ಹಗೆತನ ಬೆಳೆಸಿಕೊಂಡೆ. ಮರುದಿನವೇ ನನ್ನನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ತಾವು ತರಗತಿಯಲ್ಲಿ ನನ್ನನ್ನು ಹೊಡೆದ ಬಗ್ಗೆ ವಿಷಾದ ವ್ಯಕ್ತಪಡಿಸಿ ನನಗೆ ಬುದ್ಧಿವಾದ ಹೇಳಿದ ಆ ಕ್ಷಣ ನನ್ನ ಜೀವನದ ಬಹುದೊಡ್ಡ ತಿರುವಿಗೆ ಕಾರಣವಾಯಿತು. ನನ್ನ ಮುಂದಿನ ಅಭ್ಯಾಸವನ್ನು ಇಂಗ್ಲಿಷ್ ಐಚ್ಚಿಕ ವಿಷಯವಾಗಿ ಅಭ್ಯಾಸ ಮಾಡಿ ಇಂದು ಇಂಗ್ಲಿಷ್ ಭಾಷಾಶಿಕ್ಷಕ ನಾಗಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನ್ನ ಈ ವೃತ್ತಿ ಬದುಕಿಗೆ ಬಹುತೇಕ ಕಾರಣ ಅಂದಿನ ನಮ್ಮ ಆಂಗ್ಲಭಾಷಾ ಉಪನ್ಯಾಸಕ ಎಚ್. ಎ ಬಿಕ್ಷಾವರ್ತಿಮಠ ಕಾರಣ.
| ಸಂತೋಷ್ ವಿ. ಶಿಕ್ಷಕರು, ಹಾನಗಲ್
ಬೆಟ್ಟದೂರು ಎಂದು ಕರೆಸಿಕೊಳ್ಳುವ ಅಂಕೋಲಾ ತಾಲೂಕಿನ ಮೊಗಟಾ ಗ್ರಾಮದಲ್ಲಿ ನಾವು ಪ್ರಾಥಮಿಕ ಶಾಲೆಗೆ ಹೋಗುವಾಗ ಯಾವ ನಾಗರಿಕ ಸೌಲಭ್ಯವೂ ಇರಲಿಲ್ಲ. ನಮ್ಮೂರ ಶಾಲೆಗೆ ಶಿಕ್ಷಕರಾಗಿ ಬಂದವರೇ ಹಿರೇಗುತ್ತಿಯ ಶಾಂತಿ ಶಂಕರ ನಾಯಕ. ಆತ್ಮ ವಿಶ್ವಾಸ, ಬದುಕಿನ ವಿಶ್ವಾಸ ಎಂದು ಹೇಳುತ್ತ ಆತ್ಮವಿಶ್ವಾಸ ತುಂಬಿದ, ಸ್ಟೇಜ್ ಫಿಯರ ಇರುವ ನಮಗೆ ನಾಟಕ ಆಡಿಸಿ, ಭಾಷಣ ಮಾಡಿಸಿ ಸ್ಟೇಜ್ ಫಿಯರ್ ಹೋಗಲಾಡಿಸಿದ, ನಮ್ಮ ಜೊತೆಗೆ ತಾವು ಆಟವಾಡುತ್ತ ಕ್ರೀಡಾ ಮನೋಭಾವನೆ ಬೆಳೆಸಿದ, ರಾಷ್ಟ್ರ ಭಕ್ತಿ ಗೀತೆ ನಮ್ಮೊಡನೆ ಹಾಡುತ್ತ ರಾಷ್ಟ್ರೀಯತೆ ಬೆಳೆಸಿದ, ನೀತಿ ಕತೆಯನ್ನು ಮನಮುಟ್ಟುವಂತೆ ಹೇಳಿ ತಂದೆ ತಾಯಿ, ಗುರು ಹಿರಿಯರ ಬಗ್ಗೆ ಗೌರವ ಮೂಡಿಸಿದ, ಸಾಮಾನ್ಯ ಜ್ಞಾನದ ಪ್ರಶ್ನೆ ಕೇಳುತ್ತ ನಮಗೆ ಸ್ಪರ್ಧಾತ್ಮಕ ಮನೋಭಾವನೆ ಮೂಡಿಸಿದ ಶಾಂತಿ ಅಕ್ಕೋರಿಗೊಂದು ಸಲಾಮ್ ನಾನು ಉತ್ತಮ ಪ್ರಾಂಶುಪಾಲ ರಾಜ್ಯ ಪ್ರಶಸ್ತಿ, ಉತ್ತಮ ಎನ್​ಎಸ್​ಎಸ್ ಆಫೀಸರ್ ರಾಜ್ಯ ಪ್ರಶಸ್ತಿ, ಉತ್ತಮ ಉಪನ್ಯಾಸಕ ಪ್ರಶಸ್ತಿ ಎಲ್ಲ ಪಡೆಯುವುದಕ್ಕೆ ಮೂಲ ಕಾರಣ ನನ್ನ ಗುರುಗಳಾದ ಶಾಂತಿ ಅಕ್ಕೋರ!
| ಬೀರಣ್ಣ ನಾಯಕ ಮೊಗಟಾ ಯಲ್ಲಾಪುರ
ಪಿಯುಸಿಯಲ್ಲಿ ನನ್ನದು ಕಾಮರ್ಸ್ ವಿಭಾಗ. ದ್ವಿತಿಯ ಪಿಯುಸಿ ವೇಳೆಗೆ ಅನಾರೋಗ್ಯ ಕಾರಣ ಏಳೆಂಟು ತಿಂಗಳು ಕಾಲೇಜಿಗೆ ಹೋಗಲಾಗಲಿಲ್ಲ. ಲೆಕ್ಕಶಾಸ್ತ್ರ ವಿಷಯ ಹೊರತುಪಡಿಸಿ ಉಳಿದ ವಿಷಯಗಳನ್ನು ಮನೆಯಲ್ಲೇ ಓದಿಕೊಂಡು ಪರೀಕ್ಷೆ ಬರೆದು ಪಾಸ್ ಮಾಡಿಕೊಂಡೆ. ಲೆಕ್ಕಶಾಸ್ತ್ರ ಮಾತ್ರ ಉಳಿದುಕೊಂಡಿತು. ಜುಲೈ ನಡುವ ಪೂರಕ ಪರೀಕ್ಷೆಯಲ್ಲಾದರೂ ಲೆಕ್ಕಶಾಸ್ತ್ರ ವಿಷಯ ಪಾಸ್ ಮಾಡಲೇಬೇಕೆಂದು ಗಟ್ಟಿನಿರ್ಧಾರ ಮಾಡಿ ರಾಯಚೂರಿನ ವಿಶ್ವನಾಥ ಭಟ್ ಅವರಲ್ಲಿ ಟ್ಯೂಷನ್ ಹೋಗಲು ಪ್ರಾರಂಭಿಸಿದೆ. ಇಪ್ಪತ್ತು ದಿನಗಳಲ್ಲಿ ಆರು ಚಾಪ್ಟರ್​ಗಳ ಪೈಕಿ ಕೇವಲ ಮೂರು ಚಾಪ್ಟರ್ ಮಾತ್ರ ಕಲಿಯಲು ಸಾಧ್ಯವಾಯಿತು. ಪರೀಕ್ಷೆ ಹಿಂದಿನ ದಿನ ವಿಶ್ವನಾಥ ಭಟ್ ಸರ್ ಅವರನ್ನು ಭೇಟಿಯಾದಾಗ ಅವರು ನನ್ನಲ್ಲಿದ್ದ ಅಳಕು, ದುಗುಡ ಮತ್ತು ಭಯ ಕಂಡರು. ನಿನಗೆ ಕಲಿಸಿರುವ ಮೂರು ಚಾಪ್ಟರನಿಂದಲೇ ಶೇ. 60 ರಷ್ಟು ಪ್ರಶ್ನೆಗಳು ಬರಲಿವೆ. ಹೆದರಬೇಡ ಎಂದು ಧೈರ್ಯ ತುಂಬಿದರು. ನಪಾಸಾಗಿ ಕುಗ್ಗಿಹೋಗಿದ್ದ ನನಗೆ ಮಾನಸಿಕ ಧೈರ್ಯ ತುಂಬಿದ್ದರಿಂದ ಪರೀಕ್ಷೆ ಬರೆದು ಪ್ರತಿಶತ 70 ಅಂಕಗಳೊಂದಿಗೆ ತೇರ್ಗಡೆಯಾದೆ. ಒಂದು ವೇಳೆ ಕೇವಲ ಮೂರೇ ಚಾಪ್ಟರ್ ಕಲಿತಿದ್ದೇನೆ ಎಂಬ ಭಯದಲ್ಲಿ ಪರೀಕ್ಷೆಗೆ ಹಾಜರಾಗಿದ್ದರೆ ಇಷ್ಟೊಂದು ಅಂಕಗಳು ಬರುತ್ತಿರಲಿಲ್ಲ. ಕಲಿಸುವುದರ ಜತೆಗೆ ಅವರು ನನ್ನಲ್ಲಿ ಆತ್ಮಸ್ಥೈರ್ಯ ತುಂಬಿದರು.
| ಶ್ರೀ ರಂಗ ಪುರಾಣಿಕ ವಿಜಯಪುರ
ನಾನಾಗ ಹೈಸ್ಕೂಲ್ ನಲ್ಲಿ ಕಲಿಯುವ ಸಮಯ. ಕನ್ನಡ ಶಿಕ್ಷಕ ಕುಬೇರ ನಾಯ್್ಕ ಹಳಗನ್ನಡ ಮತ್ತು ವ್ಯಾಕರಣವನ್ನು ಅರಳು ಹುರಿದಂತೆ ಬೋಧಿಸುತ್ತಿದ್ದರು. ಆದರೆ ಪರೀಕ್ಷೆಯಲ್ಲಿ ಅಂಕ ಹೆಚ್ಚಿರಲಿ ಕಡಿಮೆ ಇರಲಿ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೂ ಬಾರಿಸುತ್ತಿದ್ದರು. ಒಮ್ಮೆ 25 ಕ್ಕೆ 23 ಅಂಕ ಪಡೆದ ನನಗೂ ಅವರ ಏಟಿನಿಂದ ಕೈ ಉಳುಕಿ ನೋವಿನಿಂದ ಒದ್ದಾಡಿ 2 ದಿನ ಶಾಲೆ ಬಿಟ್ಟಿದ್ದೆ. ಹಳ್ಳಿ ಶಾಲೆ ಆಗಿದ್ದರಿಂದ ನಮ್ಮ ತಾತ ಶಾಲೆಗೆ ಹೋಗಿ ಅವರೊಂದಿಗೆ ವಾಗ್ವಾದ ಮಾಡಿ ಬಂದರು. ಮಾರನೇ ದಿನಾ ನಮ್ಮ ತಂದೆ ಮಾತ್ರ ನನಗೆ ಬೈದು ಶಾಲೆಯಲ್ಲಿ ಎಲ್ಲಾ ಮಕ್ಕಳು ಒಂದೇ. ಹೆಚ್ಚು ಅಂಕ ಪಡೆದವನಿಗೆ ಹೊಡೆಯದೆ ಬಿಟ್ಟರೆ ಆತ ಮುಂದಿನ ಪರೀಕ್ಷೆಯಲ್ಲಿ ಅಸಡ್ಡೆ ಮಾಡುತ್ತಾನೆ ಹಾಗೆಯೇ ಕಡಿಮೆ ಅಂಕ ಪಡೆದ ಮಕ್ಕಳಿಗೆ ಮಾನಸಿಕವಾಗಿ ನೋವಾಗಬಾರದೆಂದು ಹೊಡೆಯುತ್ತಾರೆಂದು ತಿಳಿ ಹೇಳಿದರು. ಮುಂದೆ ನಾನು ಒಂದು ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುವಾಗ. ಅವರ ಮಕ್ಕಳು ಸಹ ಅದೇ ಶಾಲೆಯಲ್ಲಿ ನನ್ನ ವಿದ್ಯಾರ್ಥಿಗಳಾಗಿದ್ದರು. ಒಮ್ಮೆ ಪೋಷಕರ ಸಭೆ ನಡೆಯುವಾಗ ಬಂದ ಅವರು ಎಲ್ಲರ ಸಮ್ಮುಖದಲ್ಲಿ ನನ್ನ ಕುರಿತು ನಾನು ನಿಮಗೆಲ್ಲ ಹೇಗೆ ಹೊಡೆದು ಕಲಿಸಿದ್ದೆನೋ ಹಾಗೆಯೇ ನನ್ನ ಮಕ್ಕಳಿಗೂ ನೀನು ಹೊಡೆದು ವಿದ್ಯೆ ಕಲಿಸು; ಶಿಕ್ಷೆ -ಶಿಕ್ಷಣ ಒಟ್ಟಿಗೆ ಇರಬೇಕು ಎಂದು ಹೇಳಿದಾಗ ಎಲ್ಲರಿಗೂ ಆಶ್ಚರ್ಯ. ಆಗ ನಾನೇ ಹೇಳಿದೆ ಅವರು ನನ್ನ ಗುರುಗಳು ಅಂತ.
| ಸಂತೋಷ್ ಹೆಚ್. ಜಿ. ಹಿರೇಗೋಣಿಗೆರೆ. ಹೊನ್ನಾಳಿ
ಜಮಖಂಡಿಯ ಬಿಎಲ್​ಡಿ ಕಾಲೇಜಿನಲ್ಲಿ ಬಿಇಡಿ ಪದವಿ ಕಲಿಯಲು ನನ್ನ ತಂದೆ ಪ್ರವೇಶ ದೊರಕಿಸಿ ಕೊಟ್ಟಿದ್ದರು. ನನಗೆ ಇದು ಬೇಜಾರದ ಸಂಗತಿಯಾಗಿತ್ತು. ಕಾಲೇಜಿನಲ್ಲಿ ನನ್ನ ಗೈರು ಹಾಜರಿ ಗಮನಿಸಿದ ಪ್ರಾಂಶುಪಾಲರು ನೋಟೀಸ್ ಮೂಲಕ ತರಗತಿಗೆ ಹಾಜರಾಗಲು ತಿಳಿಸಿದರು. ನಾನು ನನ್ನ ಪ್ರವೇಶಾತಿ ರದ್ದುಪಡಿಸಿಕೊಳ್ಳಬೇಕೆಂದು ಕಾಲೇಜಿಗೆ ಹೋದೆ, ಪಾಠ ಆರಂಭವಾಗಿತ್ತು. ಹೊರಗಡೆ ಕುಳಿತು ಕೊಂಡಿದ್ದೆ. ಆಗ ಕಾಲೇಜು ಪ್ರಾಚಾರ್ಯರಾಗಿದ್ದ ಡಾ. ಡಿ.ಎಚ್. ಹುಸೆನ್ಮಿಯ ಅವರು, ಯಾಕಮ್ಮ ನಮ್ಮ ಕಾಲೇಜ್ ಸ್ಟೂಡೆಂಟ್ ಅಲ್ವಾ..? ಎಂದಾಗ ಹೌದು ಸರ್, ನನಗೆ ಕ್ಲಾಸಿಗೆ ಅಟೆಂಡ್ ಆಗೋದು ಸಾಧ್ಯವಿಲ್ಲ ಹೆಸರು ಕಡಿಮೆ ಮಾಡಿರಿ.’ ಎಂದೆ. ಆಯ್ತಮ್ಮ ಈಗ ಕ್ಲಾಸ್ ಆರಂಭ ಆಗಿದೆ. ಅರ್ಧ ಗಂಟೆ ಕ್ಲಾಸ್​ನಲ್ಲಿ ಕುಳಿತು ಬಾರಮ್ಮಾ ಎಂದು ಪ್ರೇರೇಪಿಸಿದರು. ಅಲ್ಲಿ ಪ್ರೊ. ಎಲ್.ಎಂ. ಮಾರ್ಕಪ್ನಳ್ಳಿ ಅವರು ಸ್ತ್ರೀ ಶಿಕ್ಷಣ ಕುರಿತು ಉಪನ್ಯಾಸ ಮಾಡುತ್ತಿದ್ದರು. ಜವಾಬ್ದಾರಿಯಿಂದ ವಿಮುಖರಾಗಲು ಯಾರೂ ಪ್ರಯತ್ನಿಸಬಾರದೆನ್ನುವ ಕಿವಿ ಮಾತು, ನನಗೆ ಶಿಕ್ಷಣ ಮುಂದುವರಿಸುವುದು ಉಚಿತವೆಂದು ಅರಿತು ; ನಾಳೆಯಿಂದ ತಪ್ಪದೆ ಕ್ಲಾಸಿಗೆ ಬರುತ್ತೇನೆ ಸರ್’ ಎಂದು ಪ್ರಾಂಶುಪಾಲರಿಗೆ ಹೇಳಿಬಂದೆ. ಇಲ್ಲಿಯ ಗುರುಗಳ ಕಾಳಜಿ ಹಾಗೂ ಪ್ರೇರಣೆ ನನಗೆ ಉನ್ನತ ಶಿಕ್ಷಣ ಪಡೆಯಲು ಸಹಕಾರಿಯಾಯ್ತು.
| ವಂದನಾ ಗು. ಸುತಾರ ಹುಲ್ಯಾಳ, ಜಮಖಂಡಿ ತಾ.
ನಾನು ಮೂಲತಃ ಬಡ ರೈತ ಕುಟುಂಬದಲ್ಲಿ ಜನಿಸಿದ್ದು, ಹುಟ್ಟಿನಿಂದಲೇ ಅಂಗವಿಕಲ. ಸರ್ಕಾರಿ ಶಾಲಾ ಕಾಲೇಜುಗಳಲ್ಲೇ ಶಿಕ್ಷಣ. ಬಡತನ ಮತ್ತು ಅಂಗವೈಕಲ್ಯದೊಂದಿಗೆ ಜೀವನದಲ್ಲಿ ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ಈಗ ಕೇಂದ್ರ ಸರ್ಕಾರದ ಉದ್ಯೋಗಿಯಾಗಿದ್ದೇನೆ ಎಂದರೆ ನನಗೆ ಗುರುಗಳಿಂದ ದೊರೆತ ಮಾರ್ಗದರ್ಶನ ಕಾರಣ. ವಿದ್ಯಾರ್ಥಿ ಜೀವನದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಿ ಅರಿವಿನ ಹಾದಿ ಹಾಗೂ ಬದುಕುವ ದಾರಿ ತೋರಿದವರು ಯಾಳಗಿ ಸರಕಾರಿ ಪ್ರೌಢ ಶಾಲೆ ಮುಖ್ಯಗುರುಗಳಾಗಿದ್ದ ಎಂ.ಎಂ ಸಿಂಧೂರ ಸರ್. ಶಿಕ್ಷಣದ ಮಹತ್ವ ವಿವರಿಸಿ ಪ್ರತಿ ದಿನ ನನ್ನನ್ನು ಓದಿಗೆ ಪ್ರೇರೇಪಿಸುತ್ತಿದ್ದರು. ಅವರ ಪ್ರೇರಣೆಯಿಂದ ಓದುವ ಮಹದಾಸೆ ಹುಟ್ಟಿತು. ಅವರ ಪ್ರತಿಯೊಂದು ಮಾತುಗಳು ನನ್ನ ಜೀವನದಲ್ಲಿ ಪಾಠಗಳಾಗಿ ಪರಿವರ್ತನೆಯಾದವು. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬುವ ಗುರಿ ಹುಟ್ಟಿತು. ಅವರ ಮಾರ್ಗದರ್ಶನದಲ್ಲಿ 10ನೇ ತರಗತಿಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡೆ. ಈಗಲೂ ಶಾಲೆಯ ಬೋರ್ಡ್ ಮೇಲೆ ನನ್ನ ಹೆಸರಿದೆ. ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಸ್ಪರ್ಧೆಯಲ್ಲಿ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಕೂಡ ಮೊದಲ ಸ್ಥಾನದಲ್ಲಿ ಇರುತ್ತಿದ್ದೆ. ನನ್ನ ಯಶಸ್ಸಿಗೆ ಕಾರಣಿಕರ್ತರಾದ ಸಿ.ಬಿ ನಾಯ್ಕೊಡಿ ಸರ್ ಹಾಗೂ ಅನಿಲಕುಮಾರ ಸೇಲರ್ ಸರ್ ಅವರನ್ನು ನೆನಪಿಸಿಕೊಳ್ಳದಿರಲು ಸಾಧ್ಯವೇ?
| ಬಸವರಾಜ ಹೆಳವರ ಯಾಳಗಿ, ಸುರಪುರ ತಾಲೂಕು
ಬಿ ಸಿಂಪಲ್, ಬಿ ಸ್ಯಾಂಪಲ್ ಎಂದು ನಮಗೆಲ್ಲ ಬೋಧಿಸುತ್ತ ಅದೇ ರೀತಿ ಬದುಕುತ್ತಿರುವವರು ನಮಗೆ ಅಕ್ಷರ ಕಲಿಸಿದ ಇಂಡಿಯ ನಿವೃತ್ತ ಪ್ರಾಥಮಿಕ ಶಿಕ್ಷಕರು ಹಾಗೂ ಕವಿ ಶಿವಾಜಿ ರಾಮಚಂದ್ರ ಸುಲಾಖೆ ಗುರುಗಳು. ಸದಾ ಬಿಳಿ ಪೈಜಾಮ- ಬುಶರ್ಟ್, ಗಾಂಧಿ ಟೋಪಿ ಧರಿಸಿ ಶಾಲೆಯಲ್ಲಿ ಅಡಿಯಿಟ್ಟರೆ ನಮಗೆಲ್ಲಾ ಉತ್ಸಾಹದ ಪುಳಕ. ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಅವರೇ ದೇಶಭಕ್ತಿ ಗೀತೆಗಳನ್ನು ರಚಿಸಿ ಅದಕ್ಕೆ ಹಳೆಯ ಹಿಂದಿ ಹಾಡುಗಳ ಚಾಲ್ ಅಳವಡಿಸಿ ಸ್ವತಃ ತಾವೇ ಹಾಡುತ್ತಾ ಅದಕ್ಕೆ ತಕ್ಕಂತೆ ಡಂಬೆಲ್ಸ, ಲೇಝೀಮ್ ಗಳನ್ನು ಮಕ್ಕಳಿಂದ ಮಾಡಿಸಿದರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಥಮ ಸ್ಥಾನ ಕಟ್ಟಿಟ್ಟ ಬುತ್ತಿ..!
ತರಗತಿ-ತರಗತಿಯ ಮಕ್ಕಳ ನಡುವೆ ಕಾಂಪಿಟೇಶನ್ನು. ವಿವಿಧ ವಿಷಯಾಂಶಗಳ ಮಾದರಿ ತಯಾರಿಸುವುದು, ಕೋಣೆಯೊಳಗೆಲ್ಲ ಪರಪರಿ ಅಂಟಿಸುವುದು, ಬಣ್ಣದ ಕಾಗದದಿಂದ ಚಾಪೆ ಹೆಣೆದು ಗೋಡೆಗೆ ನೇತಾಕುವುದು ಮುಂತಾದ ಕಾರ್ಯಗಳಿಗೆಲ್ಲ ಅವರು ಶಾಲಾ ಅವಧಿ ನಂತರವೂ ನಮ್ಮೊಂದಿಗಿದ್ದು ಉತ್ಸಾಹ ತುಂಬುತ್ತಾ ಮಾರ್ಗದರ್ಶನ ನೀಡುತ್ತಿದ್ದರು.
| ಬಸವರಾಜ ಕಿರಣಗಿ ಇಂಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − ten =
Remember me
