| ರುದ್ರಣ್ಣ ಹರ್ತಿಕೋಟೆ, ಬೆಂಗಳೂರು
ಕರೊನಾ ಹಾಗೂ ಪ್ರವಾಹದ ಕಾರಣದಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಆರ್ಥಿಕ ಸಂಕಷ್ಟ ತಲೆದೋರಿದ್ದು, ಈ ವರ್ಷ ಚೇತರಿಕೆ ಕಷ್ಟ ಎಂದು ಅಂದಾಜು ಮಾಡಲಾಗಿದೆ. ರಾಜ್ಯದಲ್ಲಿ ತೆರಿಗೆ ಸಂಗ್ರಹಣೆ ದಾಖಲೆಯ ಕುಸಿತ ಕಂಡಿದೆ. ಜಿಎಸ್​ಟಿ ಪರಿಹಾರದ ವಿಚಾರದಲ್ಲಿ ಕೇಂದ್ರ ಸರ್ಕಾರ ಸರಿಯಾದ ಸ್ಪಂದನೆ ನೀಡದಿರುವ ಕಾರಣ ಸರ್ಕಾರಕ್ಕೆ ದಿಕ್ಕು ತೋಚದಂತಾಗಿದೆ.
ನಾಲ್ಕು ತಿಂಗಳ ಅವಧಿಯಲ್ಲಿ ತೆರಿಗೆ ಸಂಗ್ರಹಣೆ ಶೇ. 40 ಕಡಿಮೆಯಾಗಿ, ಸರ್ಕಾರಕ್ಕೆ 14,702 ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯ ಖೋತಾ ಆಗಿದೆ. ಕೇಂದ್ರ ಸರ್ಕಾರ ಜಿಎಸ್​ಟಿ ಪರಿಹಾರ 13,764 ಕೋಟಿ ರೂ. ಕೊಡಲು ಸಾಧ್ಯವಿಲ್ಲ ಎಂದು ಹೇಳಿರುವ ಹಿನ್ನೆಲೆಯಲ್ಲಿ ರಾಜ್ಯದ ಪಾಲಿಗೆ ಈ ವರ್ಷ ಅಭಿವೃದ್ಧಿ ಎಂಬುದು ಮರೀಚಿಕೆಯೇ ಆಗಲಿದೆ.
ನಾಲ್ಕು ತಿಂಗಳ ಅವಧಿಯಲ್ಲಿ ಒಟ್ಟಾರೆ 37,332 ಕೋಟಿ ರೂ. ತೆರಿಗೆ ವಸೂಲಿ ಗುರಿ ಇತ್ತು. ಆದರೆ ಆಗಿರುವುದು 27,630 ಕೋಟಿ ರೂ. ಎಂದು ಹಣಕಾಸು ಇಲಾಖೆಯ ಮೂಲಗಳೇ ಹೇಳುತ್ತವೆ. ಗುತ್ತಿಗೆದಾರರ ಬಾಕಿ ಪಾವತಿಗೂ ಪರದಾಡುವಂತಹ ಸ್ಥಿತಿ ನಿರ್ವಣವಾಗಿದೆ. ರಾಜ್ಯದಲ್ಲಿ ಈ ವರ್ಷ 1,79,920 ಕೋಟಿ ರೂ.ಗಳ ರಾಜಸ್ವ ಹಾಗೂ 52,918 ಕೋಟಿ ರೂ.ಗಳ ಸಾಲದೊಂದಿಗೆ ರಾಜ್ಯ ಮುನ್ನಡೆಸುವ ಉದ್ದೇಶವನ್ನು ಸರ್ಕಾರ ಹೊಂದಿತ್ತು. ಜಿಎಸ್​ಟಿ ಸಂಗ್ರಹಣೆಯಲ್ಲಿ ಕುಂಠಿತವಾದರೆ ಕೇಂದ್ರದಿಂದ ಪರಿಹಾರ ಬರಬಹುದೆಂಬ ವಿಶ್ವಾಸ ಇತ್ತು. ಈ ವರ್ಷಕ್ಕೆ 28 ಸಾವಿರ ಕೋಟಿ ರೂ.ಗಳ ತನಕ ಕೇಂದ್ರದಿಂದ ಪರಿಹಾರ ಸಿಗಬಹುದೆಂದು ಹಣಕಾಸು ಇಲಾಖೆ ನಿರೀಕ್ಷೆ ಮಾಡಿತ್ತು. ಮೊದಲ ನಾಲ್ಕು ತಿಂಗಳಿಗೆ 13764 ಕೋಟಿ ರೂ.ಗಳ ಪರಿಹಾರ ನೀಡಬೇಕಾಗಿದ್ದ ಕೇಂದ್ರ, ಈಗ ಸಾಲ ಪಡೆಯುವಂತೆ ಸೂಚನೆ ನೀಡಿದೆ.
ಭಾರಿ ಕುಸಿತಕಳೆದ ವರ್ಷವೇ ಆರ್ಥಿಕ ಕುಸಿತದಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹಣೆ ಆಗಿರಲಿಲ್ಲ. ಅದೇ ಸಂದರ್ಭದಲ್ಲಿ ಪ್ರವಾಹ ಬಂದು ಸಾಕಷ್ಟು ಹಾನಿ ಆಗಿತ್ತು. ಈ ವರ್ಷ ಆರ್ಥಿಕವಾಗಿ ಚೇತರಿಸಿಕೊಳ್ಳುವುದಕ್ಕೆ ಮುಂಚೆ ಕರೊನಾ ಮತ್ತು ಪ್ರವಾಹ ಬಂದಿದೆ. ಇದರಿಂದಾಗಿ ತೆರಿಗೆ ಸಂಗ್ರಹಣೆ ಮೇಲೆ ತೀವ್ರ ಪರಿಣಾಮ ಉಂಟಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ 14702 ಸಾವಿರ ಕೋಟಿ ರೂ.ಗಳಷ್ಟು ತೆರಿಗೆ ಸಂಗ್ರಹಣೆ ಕಡಿಮೆಯಾಗಿದೆ ಎಂಬ ಅಂದಾಜಿದೆ. ರಾಜ್ಯ ಸರ್ಕಾರಕ್ಕೆ ತೆರಿಗೆ ತರುವ ಪ್ರಮುಖ ಇಲಾಖೆಗಳಲ್ಲಿ ಎಲ್ಲಿಯೂ ಚೇತರಿಕೆ ಕಾಣುತ್ತಿಲ್ಲ.
ಇನ್ನೂ ಮೂರು ತಿಂಗಳು ಇದೇ ಸ್ಥಿತಿ:ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕಡಿಮೆ ಇದ್ದ ತೆರಿಗೆ ಸಂಗ್ರಹಣೆ ಪ್ರಮಾಣ, ಜೂನ್ ಮತ್ತು ಜುಲೈನಲ್ಲಿ ಚೇತರಿಕೆ ಹಾದಿಗೆ ಹೊರಳಿದ್ದರೂ ನಿರೀಕ್ಷೆಯಷ್ಟು ಇಲ್ಲ. ಕೈಗಾರಿಕೆ, ವಾಣಿಜ್ಯೋದ್ಯಮ ಇದೀಗ ವಹಿವಾಟು ಆರಂಭಿಸಿದ್ದರೂ ಚೇತರಿಸಿಕೊಂಡಿಲ್ಲ. ಇದರಿಂದಾಗಿ ತೆರಿಗೆ ಸಂಗ್ರಹಣೆ ಮೇಲೆ ಪರಿಣಾಮ ಬೀರಿದೆ. ಇನ್ನೂ ಕನಿಷ್ಠ ಮೂರು ತಿಂಗಳಾದರೂ ಬೇಕು, ಆದರೆ ಪೂರ್ಣ ಚೇತರಿಕೆ ಸಾಧ್ಯವಿಲ್ಲವೆಂದೇ ಹಣಕಾಸು ಇಲಾಖೆ ಮೂಲಗಳು ಹೇಳುತ್ತವೆ. ರಾಜ್ಯದಲ್ಲಿ ಜಿಎಸ್​ಟಿ ಸಂಗ್ರಹಣೆ ಶೇ. 24 ಕಡಿಮೆಯಾಗಿದೆ. ರಾಜ್ಯದ ಬೆಳವಣಿಗೆಯ ದರ ಶೇ.5ಕ್ಕಿಂತ ಕಡಿಮೆಗೆ ಕುಸಿದಿದೆ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ಅಂದಾಜು ಮಾಡುತ್ತಾರೆ. ಎಸ್​ಜಿಎಸ್​ಟಿ ಒಂದೇ ಐದು ತಿಂಗಳ ಅವಧಿಯಲ್ಲಿ 2500 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೊತ್ತ ಕಡಿಮೆಯಾಗಿದೆ. ಐಜಿಎಸ್​ಟಿ ಸೇರಿದರೆ 4 ಸಾವಿರ ಕೋಟಿ ರೂ. ಖೋತಾ ಆಗಿದೆ. ವಾಣಿಜ್ಯ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ನಡೆಯಬೇಕು, ಕೇಂದ್ರ ಕೊಡಬೇಕಾದ ಪರಿಹಾರ ನೀಡಬೇಕು, ಬಾರ್​ಗಳು, ವಾಹನಗಳ ಖರೀದಿ, ರಿಯಲ್ ಎಸ್ಟೇಟ್ ಉದ್ಯಮದ ಚೇತರಿಕೆಯಾದರೆ ಮಾತ್ರ ಕರೊನಾ ನಿಯಂತ್ರಣದ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.
ಬಜೆಟ್​ಗೆ ಕತ್ತರಿ:ರಾಜ್ಯದ ಸಮಗ್ರ ಅಭಿವೃದ್ಧಿಯ ಕನಸಿನೊಂದಿಗೆ ಯಡಿಯೂರಪ್ಪ ಅವರು ಬಜೆಟ್ ಮಂಡಿಸಿದ್ದರು. ಆದರೆ ಈಗ ಹಣಕಾಸಿನ ಕೊರತೆ ಎದುರಾಗಿರುವುದರಿಂದ ಮುಂದಿನ ಬಜೆಟ್​ನಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ. ಸಮಗ್ರವಾಗಿ ಬಜೆಟ್ ಬದಲಾವಣೆ ಮಾಡದಿದ್ದರೂ ಪೂರಕ ಅಂದಾಜುಗಳಲ್ಲಿ ಅನುದಾನ ಕಡಿತ ತೋರಿಸುವ ಮೂಲಕ ಸರಿದೂಗಿಸಲಾಗುತ್ತದೆ. ಈಗಾಗಲೇ ಎಲ್ಲ ಇಲಾಖೆಗಳಿಗೂ ಅನುದಾನ ಕಡಿತ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
‘ಸಾಲ ಮಾಡದ ಸ್ಥಿತಿ:ನಮ್ಮ ಸಾಲದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಕೇಂದ್ರ ಸರ್ಕಾರ ಸಮ್ಮತಿಸಿತ್ತು. ಆದರೆ ಅದಕ್ಕೆ ಕೆಲವೊಂದು ತಿದ್ದುಪಡಿಗಳನ್ನು ಸರ್ಕಾರ ಮಾಡಿಕೊಳ್ಳಬೇಕಿದೆ. ಆ ಬಗ್ಗೆ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಸದ್ಯಕ್ಕೆ ಆರ್​ಬಿಐನಿಂದ ಮಾತ್ರ ಮಾರುಕಟ್ಟೆ ಸಾಲ ಪಡೆಯಲಾಗುತ್ತಿದೆ.
ಗುತ್ತಿಗೆದಾರರಿಗೆ ಬಾಕಿ:ಲೋಕೋಪಯೋಗಿ, ಜಲ ಸಂಪನ್ಮೂಲ, ಮೂಲಸೌಕರ್ಯ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಸುಮಾರು 20 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚಿನ ಬಾಕಿ ಉಳಿದಿದೆ.
ಎಷ್ಟು ಕುಂಠಿತ?:ಒಟ್ಟಾರೆ ಆದಾಯದಲ್ಲಿ ಕಳೆದ ವರ್ಷ 5 ತಿಂಗಳಿನಲ್ಲಿ 81052 ಕೋಟಿ ರೂ. ಸಂಗ್ರಹವಾಗಿತ್ತು. ಆದರೆ ಈ ವರ್ಷ ಕಡಿಮೆಯಾಗಿದೆ. ಎಸ್​ಜಿಎಸ್​ಟಿ ಐದು ತಿಂಗಳಿನಲ್ಲಿ ಕಳೆದ ವರ್ಷ 10115.75 ಕೋಟಿ ರೂ. ಸಂಗ್ರಹವಾಗಿದ್ದರೆ ಈ ವರ್ಷ 7597.49 ಕೋಟಿ ರೂ. ಸಂಗ್ರಹವಾಗಿದೆ.ಪೆಟ್ರೋಲ್, ಡೀಸೆಲ್​ನಲ್ಲೂ ಇಲ್ಲ: ಇಂಧನ ದೊಡ್ಡ ಮಟ್ಟದಲ್ಲಿ ಮಾರಾಟವಾಗುತ್ತಿಲ್ಲ. ಪೆಟ್ರೋಲ್ ಮತ್ತು ಡೀಸೆಲ್​ನಿಂದಲೇ ಈ ವರ್ಷ ಸುಮಾರು 17 ಸಾವಿರ ಕೋಟಿ ರೂ.ಗಳ ತೆರಿಗೆ ನಿರೀಕ್ಷೆ ಮಾಡಲಾಗಿದೆ. ಆದರೆ ನಾಲ್ಕು ತಿಂಗಳ ಅವಧಿಯಲ್ಲಿ ಆಗಿರುವ ಸಂಗ್ರಹ 3957.95 ಕೋಟಿ ರೂ. ಮಾತ್ರ. ವೃತ್ತಿ ತೆರಿಗೆ 341 ಕೋಟಿ ರೂ.ಗಳು ಮಾತ್ರ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಅತ್ಯಂತ ಕಡಿಮೆ. ರೈಲುಗಳ ಓಡಾಟ ಆರಂಭವಾದರೆ ಮಾತ್ರ ಇಂಧನ ಮಾರಾಟ ಚೇತರಿಕೆ ಕಾಣುತ್ತದೆ.
ರಫ್ತು ಕುಸಿತ ಎಷ್ಟು?ಸರಕು – ಶೇ. 60.1ಸೇವಾ ವಲಯ – ಶೇ. 7.3
ತೆರಿಗೆ ಸಂಗ್ರಹ(ಜುಲೈ ಅಂತ್ಯದ ತನಕ ಕೋಟಿ ರೂ.ಗಳಲ್ಲಿ)ವಲಯ ಗುರಿ ಸಂಗ್ರಹವಾಣಿಜ್ಯ ತೆರಿಗೆ 82443 13835ಅಬಕಾರಿ 22700 5865ನೋಂದಣಿ 12655 1860ಮೋಟಾರ್ ವಾಹನ 7115 931


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eight =
Remember me
