| ಕೀರ್ತಿನಾರಾಯಣ ಸಿ. ಬೆಂಗಳೂರುಬಳಸುತ್ತಿಲ್ಲವೆಂದು ಸರ್ಕಾರದ ಸುಪರ್ದಿಗೆ ಒಪ್ಪಿಸಿರುವ ಸಾವಿರಾರು ಖಾಸಗಿ ವಾಹನಗಳ ಇಂಜಿನ್ ನಂಬರ್ ಹಾಗೂ ಚಾಸ್ಸಿ ನಂಬರ್​ಗಳನ್ನೇ ಟ್ಯಾಂಪರಿಂಗ್ ಮಾಡಿ ಕಳ್ಳಾಟ ನಡೆಸುತ್ತಿರುವ ಸ್ಪೋಟಕ ವಿಚಾರ ಬಹಿರಂಗವಾಗಿದೆ. ಸುಪರ್ದಿಗೆ ಒಪ್ಪಿಸಿರುವ ವಾಹನಗಳಿಗೆ ಬೇರೊಂದು ವೆಹಿಕಲ್ ನಂಬರ್ ಪ್ಲೇಟ್ ಅಳವಡಿಸಿಕೊಂಡು ಸಂಚರಿಸುವ ಮೂಲಕ ಪೊಲೀಸರಿಗೆ ಯಾಮಾರಿಸುವುದರ ಜತೆಗೆ ಸರ್ಕಾರಕ್ಕೂ ವಾರ್ಷಿಕ ಅಂದಾಜು 350 ಕೋಟಿ ರೂ. ರಸ್ತೆ ತೆರಿಗೆ ವಂಚಿಸಲಾಗುತ್ತಿದೆ.
ಕಂಡೂ ಕಾಣದಂತೆ ನಡೆಯುತ್ತಿರುವ ಈ ಖಾಸಗಿ ವಾಹನಗಳ ಟ್ಯಾಕ್ಸ್ ವಂಚನೆ ದಂಧೆಯ ಬೆನ್ನತ್ತಿರುವ ಲೋಕಾಯುಕ್ತ ಸಂಸ್ಥೆ, 2010ರಿಂದ ಈವರೆಗೆ ‘ಸರೆಂಡರ್’ ಆಗಿರುವ ವಾಹನಗಳ ಮಾಹಿತಿಯೊಳಗೊಂಡ ವರದಿಯನ್ನು ಸೆ.30ರ ಒಳಗೆ ಸಲ್ಲಿಸುವಂತೆ ಸಾರಿಗೆ ಇಲಾಖೆಗೆ ಸೂಚನೆ ನೀಡಿದೆ. ಸಾರಿಗೆ ಇಲಾಖೆ ಈಗಾಗಲೆ ಆಯಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್​ಟಿಒ) ಮುಖೇನ ಮಾಹಿತಿ ಸಂಗ್ರಹ ಆರಂಭಿಸಿದ್ದು, ಕಳ್ಳಾಟವಾಡಿರುವ ವಾಹನ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಆದೇಶಿಸಿದೆ.
ನ್ಯಾಷನಲ್ ಪರ್ವಿುಟ್​ನ ರಸ್ತೆ ತೆರಿಗೆ ಪ್ರತಿ ತ್ರೖೆ ಮಾಸಿಕಕ್ಕೆ ವಾಹನದ ಸೀಟಿಂಗ್ ಕೆಪ್ಯಾಸಿಟಿ ಮೇಲೆ 1 ಲಕ್ಷಕ್ಕೂ ಅಧಿಕ ಇರುತ್ತದೆ. ಒಂದೇ ನಂಬರ್​ನಲ್ಲಿ 2 ಅಥವಾ 3 ಬಸ್​ಗಳನ್ನು ಓಡಿಸುತ್ತಾ ಸರ್ಕಾರಕ್ಕೆ ತ್ರೖೆ ಮಾಸಿಕವಾಗಿ ಲಕ್ಷಾಂತರ ರೂ. ತೆರಿಗೆ ವಂಚನೆ ಮಾಡಲಾಗುತ್ತಿದೆ. ಉದಾಹರಣಗೆ ಇಂಜಿನ್, ಚಾಸ್ಸಿ ನಂಬರ್ ಟ್ಯಾಂಪರಿಂಗ್ ಮಾಡಿ ಒಂದೇ ನಂಬರ್ ಪ್ಲೇಟ್​ಗಳ ಅಳವಡಿಸಿದ ತರುವಾಯ ಬೆಂಗಳೂರಿನಿಂದ ಕೋಲಾರ ಮಾರ್ಗವಾಗಿ ಚೆನ್ನೈಗೆ ಒಂದು ಬಸ್ ಹೊರಟರೆ ಅದೇ ಸಮಯಕ್ಕೆ ಅದೇ ನಂಬರ್​ನ ಇನ್ನೊಂದು ಬಸ್ ಬೆಂಗಳೂರಿನಿಂದ ಮಂಗಳೂರಿಗೆ ಹೊರಡುತ್ತದೆ. ಒಂದೇ ಸಮಯದಲ್ಲಿ ಬೇರೆಬೇರೆ ಮಾರ್ಗಗಳಲ್ಲಿ ಸಂಚರಿಸುವುದರಿಂದ ಪತ್ತೆಹಚ್ಚುವುದು ಅಸಾಧ್ಯ. ಒಂದು ವೇಳೆ ಈ ಕಳ್ಳಾಟದ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಏಕಕಾಲದಲ್ಲಿ ಎರಡೂ ವಾಹನಗಳನ್ನು ಜಪ್ತಿ ಮಾಡಿ ಮೋಟಾರು ವಾಹನ ನಿಯಮಾನುಸಾರ ಕ್ರಮ ಜರುಗಿಸಲು ಆಗುವುದಿಲ್ಲ. ಟ್ಯಾಕ್ಸ್ ವಂಚನೆ ದಂಧೆಯಿಂದ ಸರ್ಕಾರಕ್ಕೆ ತೆರಿಗೆ ಮೋಸ ಮಾಡುವುದರ ಜತೆಗೆ ವಾಹನ ಖರೀದಿಗೆ ಸಾಲ ಕೊಡುವ ಬ್ಯಾಂಕ್​ಗಳಿಗೂ ವಂಚನೆ ಮಾಡಲಾಗುತ್ತಿದೆ. ಒಂದು ವೇಳೆ ಅಪಘಾತ ಸಂಭವಿಸಿ ಪ್ರಯಾಣಿಕರು ಮೃತರಾದರೂ ವಿಮೆ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ವಂಚನೆ ಹೇಗೆ?:ವಾಣಿಜ್ಯ ಬಳಕೆಯ ವಾಹನಗಳು ಸಂಚಾರ ಮಾಡುತ್ತಿವೆ ಎಂದಾದರೆ ತ್ರೖೆಮಾಸಿಕವಾಗಿ ತೆರಿಗೆ ಪಾವತಿಸಬೇಕು. ಆದರೆ, ಕೆಲ ವಾಹನ ಮಾಲೀಕರು ವಾಹನ ಗಳು ಸಂಚರಿಸುತ್ತಿಲ್ಲ ಎಂದು ದಾಖಲಾತಿಗಳನ್ನು ಸಾರಿಗೆ ಇಲಾಖೆ ವಶಕ್ಕೆ ಒಪ್ಪಿಸುತ್ತಾರೆ. ಇಲಾಖೆಯಿಂದ ಸರೆಂಡರ್ ಅಂಗೀಕಾರವಾದ ಕೆಲವೇ ದಿನಗಳಲ್ಲಿ ಸರೆಂಡರ್​ನಲ್ಲಿರುವ ವಾಹನಗಳ ಇಂಜಿನ್ ನಂಬರ್, ಚಾಸ್ಸಿ ನಂಬರ್ ಟ್ಯಾಂಪರಿಂಗ್ ಮಾಡಿ ಬೇರೊಂದು ವಾಹನದ ನಂಬರ್ ಪ್ಲೇಟ್ ಅಳವಡಿಸಿಕೊಂಡು ಚಾಲನೆ ಮಾಡಲಾಗುತ್ತಿದೆ.
ತೆರಿಗೆ ವಿನಾಯ್ತಿಗಾಗಿ ಮೋಸ!:ವಾಣಿಜ್ಯ ವಾಹನಗಳು ಒಂದು ವೇಳೆ ಕಾರಣಾಂತರಗಳಿಂದ ಓಡಾಟ ನಿಲ್ಲಿಸಿದರೆ ಆಗ ‘ನಾನ್ ಯೂಸ್’ಎಂದು ವಾಹನದ ದಾಖಲಾತಿಗಳನ್ನು ಆರ್​ಟಿಒ ಅಧಿಕಾರಿಗಳಿಗೆ ಸರೆಂಡರ್ ಮಾಡಬೇಕು. ಅಂತಹ ವಾಹನಗಳಿಗೆ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ಕಾಯ್ದೆ 1957ರ ಸೆಕ್ಷನ್ 16ರ ಅನ್ವಯ ತೆರಿಗೆ ವಿನಾಯಿತಿ ನೀಡಲು ಅವಕಾಶ ಇದೆ.
ಬ್ರೇಕ್ ಇನ್​ಸ್ಪೆಕ್ಟರ್​ಗಳ ನಿರ್ಲಕ್ಷ್ಯ:ಒಮ್ಮೆ ವಾಹನ ಸರೆಂಡರ್ ಮಾಡಿದ ನಂತರ ಯಾವುದೇ ಕಾರಣಕ್ಕೂ ನಿಗದಿತ ಸ್ಥಳದಿಂದ ವಾಹನ ಬೇರೆಡೆಗೆ ಸ್ಥಳಾಂತರವಾಗಬಾರದು. ಆಯಾ ವ್ಯಾಪ್ತಿಯ ಆರ್​ಟಿಒ ಅಧಿಕಾರಿಗಳು 15 ದಿನಕ್ಕೊಮ್ಮೆ ವಾಹನಗಳಿರುವ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ ವರದಿ ಸಲ್ಲಿಸಬೇಕು. ಆದರೆ ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ವಾಹನ ಗಳಿವೆ ಎಂದು ವರದಿ ಕೊಟ್ಟು ಸುಮ್ಮನಾಗುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ವಾಹನ ಮಾಲೀಕರ ಜತೆ ಆರ್​ಟಿಒ ಅಧಿಕಾರಿಗಳು ಶಾಮೀಲಾಗಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸುತ್ತಾರೆ.
132ರಲ್ಲಿ 100 ಬಸ್ ನಾಪತ್ತೆ…!:ತುಮಕೂರು, ತಿಪಟೂರು ಮತ್ತು ಮಧುಗಿರಿ ಆರ್​ಟಿಒ ವ್ಯಾಪ್ತಿಯಲ್ಲಿ 250ಕ್ಕೂ ಹೆಚ್ಚು ವಾಹನಗಳು ಸರೆಂಡರ್​ನಲ್ಲಿರುವುದಾಗಿ ತೋರಿಸಲಾಗುತ್ತಿದೆ. 2010ರಿಂದ ಇದುವರೆಗೂ ತುಮಕೂರು ಆರ್​ಟಿಒ ಕಚೇರಿಯಲ್ಲಿ 132 ವಾಹನಗಳು ಸರೆಂಡರ್​ನಲ್ಲಿವೆ ಎಂದು ವರದಿ ಕೊಡಲಾಗಿದೆ. ಆದರೆ, ಸರೆಂಡರ್ ವಿಳಾಸದಲ್ಲಿ 100ಕ್ಕೂ ಅಧಿಕ ವಾಹನಗಳು ಇಲ್ಲ. ಇದರಿಂದ ಒಂದೇ ಕಚೇರಿಯಲ್ಲಿ 5 ಕೋಟಿ ರೂ.ಗೂ ಅಧಿಕ ರಸ್ತೆ ತೆರಿಗೆ ಸರ್ಕಾರಕ್ಕೆ ವಂಚನೆಯಾಗಿದೆ. ಇದಲ್ಲದೆ ರಾಜ್ಯದ 71 ಆರ್​ಟಿಒ ವ್ಯಾಪ್ತಿಯಲ್ಲಿಯೂ ಅಂದಾಜು 350 ಕೋಟಿ ರೂ.ಗೂ ಅಧಿಕ ರಸ್ತೆ ತೆರಿಗೆ ವಂಚನೆ ಆಗುತ್ತಿರುವ ಬಗ್ಗೆ ಅ.8ರಂದು ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಈ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಆ.30ರಂದು ಸಾರಿಗೆ ಇಲಾಖೆಗೆ ಮಾಹಿತಿ ಕೇಳಿದ್ದಾರೆ.
ಕ್ರಿಮಿನಲ್ ಕೇಸ್ ದಾಖಲಿಸಲು ಸೂಚನೆ:ರಾಜ್ಯದ ಎಲ್ಲ ಆರ್​ಟಿಒ ಕಚೇರಿಗಳಲ್ಲಿ 2009 ಏ.1ರಿಂದ ಈವರೆಗೆ ಸರೆಂಡರ್​ನಲ್ಲಿರುವ ವಾಹನಗಳ ನೋಂದಣಿ ಸಂಖ್ಯೆ, ಗ್ಯಾರೇಜ್ ಅಥವಾ ವಶದಲ್ಲಿರುವ ಸ್ಥಳ ಹಾಗೂ ಯಾವ ದಿನಾಂಕದಿಂದ ಅಧ್ಯರ್ಪಣೆಗೊಂಡಿವೆ ಎಂಬುದರ ಬಗ್ಗೆ ವರ್ಷವಾರು ವಿವರಗಳನ್ನು ಪಡೆದುಕೊಂಡು ವರದಿ ಕಳುಹಿಸುವಂತೆ ಅಧಿಕಾರಿಗಳಿಗೆ ಸಾರಿಗೆ ಇಲಾಖೆ ಸೂಚನೆ ಕೊಟ್ಟಿದೆ. ಒಂದು ವೇಳೆ ಅಧ್ಯರ್ಪಣೆಗೊಂಡ ವಾಹನಗಳು ನಿರ್ದಿಷ್ಟ ಸ್ಥಳದಲ್ಲಿ ಇಲ್ಲದಿದ್ದರೆ ಆಯಾ ವಾಹನ ಮಾಲೀಕರು ಹಾಗೂ ಒಂದೇ ಸಂಖ್ಯೆ ಅಳವಡಿಸಿಕೊಂಡು ಓಡಾಡುತ್ತಿರುವ ವಾಹನಗಳ ಮಾಲೀಕರ ಮೇಲೆ ಪೋಲಿಸ್ ಇಲಾಖೆಯಲ್ಲಿ ಐಪಿಸಿ ಕಲಂನಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ರೀತಿ ಕ್ರಮ ಜರುಗಿಸಿರುವ ಕುರಿತು ವಿವರವಾದ ವರದಿಯನ್ನು ಸೆ.30ರ ಒಳಗೆ ಪ್ರಧಾನ ಕಚೇರಿಗೆ ಕಳುಹಿಸಲು ಸಾರಿಗೆ ಆಯುಕ್ತರು ಸೂಚಿಸಿದ್ದಾರೆ.
ಪ್ರವೇಶ ಇರದಿದ್ದರೂ ಬುಲೆಟ್​ನಲ್ಲಿ ಬಂದ ಯುವತಿಯ ರೋಷಾವೇಶ; ಪೊಲೀಸರಿಗೂ ಡೋಂಟ್ ಕೇರ್, ಕೊನೆಗೂ ಬಂಧನ

ವಾರವಿಡೀ ಹುಡುಕಾಡಿದರೂ ನಾಪತ್ತೆಯಾದವ ಸಿಗಲಿಲ್ಲ; ಒಂದು ಕಲ್ಲಿಗೆ ಪೂಜೆ ಮಾಡುತ್ತಿದ್ದಂತೆ ಆತ ಮನೆಗೆ ಮರಳಿದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + eighteen =
Remember me
