| ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ತುಂಗಭದ್ರಾ ಅಣೆಕಟ್ಟೆಯ 33 ಕ್ರಸ್ಟ್​ಗೇಟ್​ಗಳ ಪೈಕಿ ಮಧ್ಯದ ಮೂರು ಗೇಟ್​ಗಳ ಮೇಲೆ ನಿರಂತರ ಒತ್ತಡ ಬಿದ್ದಿದ್ದೇ 19ನೇ ಕ್ರಸ್ಟ್​ಗೇಟ್ ಕೊಚ್ಚಿಹೋಗಲು ಕಾರಣ ಎನ್ನುವ ಅಂಶ ಬಯಲಾಗಿದೆ.
ಜಲಾಶಯದ ಹೊರ ಮತ್ತು ಒಳ ಹರಿವನ್ನು ಮೊದಲಿಂದಲೂ ಸಿಡಬ್ಲ್ಯುಸಿ ಮಾರ್ಗಸೂಚಿಯಂತೆ ನಡೆಸಿಕೊಂಡು ಬರಲಾಗುತ್ತಿದೆ. ಟಿಬಿ ಡ್ಯಾಂ 133 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಅದರಲ್ಲಿ 28 ಟಿಎಂಸಿ ಹೂಳು ತುಂಬಿದೆ. ಹೀಗಾಗಿ 105 ಟಿಎಂಸಿ ನೀರು ಸಂಗ್ರಹವಾಗುತ್ತಿದೆ. ಇದಕ್ಕಿಂತಲೂ ಹೆಚ್ಚುವರಿಯಾಗಿ ಒಳಹರಿವು ಬಂದರೆ ಮೊದಲಿಗೆ ಜಲಾಶಯದ 17, 18 ಮತ್ತು 19ನೇ ಕ್ರಸ್ಟ್​ಗೇಟ್​ಗಳಿಂದಲೇ ನೀರು ಹೊರ ಹರಿಸಲಾಗುತ್ತದೆ. ಮಧ್ಯದಲ್ಲಿರುವ ಈ ಮೂರು ಗೇಟ್​ಗಳೇ ಜಲಾಶಯದ ಆಧಾರ ಸ್ತಂಭಗಳು. ಈ ಮೂರು ಗೇಟ್ ಎತ್ತಿದ ಬಳಿಕವೇ ಉಳಿದ ಕ್ರಸ್ಟ್ಗೇಟ್​ಗಳ ಮೂಲಕ ನೀರನ್ನು ಹೊರ ಹರಿಸುವುದು ಸಂಪ್ರದಾಯ. ಈ ಬಾರಿ ಜಲಾಶಯ ತುಂಬಿದ 22 ದಿನಗಳ ಅವಧಿಯಲ್ಲಿ 115 ಟಿಎಂಸಿ ನೀರು ನದಿ ಪಾಲಾಗಿದೆ. ಅತಿ ಕಡಿಮೆ ಅವಧಿಯಲ್ಲಿ ಈ ಪ್ರಮಾಣದ ನೀರು ಹರಿದಿದ್ದರಿಂದಲೇ 19ನೇ ಗೇಟ್ ಕೊಚ್ಚಿಹೋಗಲು ಕಾರಣವಾಗಿದೆ.
ಈ ಗೇಟ್ ತುಂಡಾಗಿದ್ದರಿಂದ ನೀರಿನ ಪೋಲು ಮಾತ್ರವಲ್ಲದೆ ಅಣೆಕಟ್ಟೆಯ ಸುರಕ್ಷತೆ ಆತಂಕಕ್ಕೂ ಕಾರಣವಾಗಿದೆ. 19ನೇ ಗೇಟ್​ವೊಂದರ ಮೂಲಕವೇ ಬರೋಬ್ಬರಿ 35 ಸಾವಿರ ಕ್ಯೂಸೆಕ್ ನೀರು ಹೊರ ಹರಿಯುತ್ತಿದೆ. ಜಲಪಾತದ ಮಾದರಿಯಲ್ಲಿ ಗೇಟ್ ಮೂಲಕ ಧುಮ್ಮಿಕ್ಕುತ್ತಿರುವ ನೀರು ಜಲಾಶಯದಿಂದ ಕೆಳಗೆ ಬಿದ್ದು ಪುಟಿದೇಳುತ್ತಿದೆ. ನೀರಿನ ತೀವ್ರತೆಯಿಂದ ಇತರೆ ಗೇಟ್​ಗಳಿಗೆ ಹಾನಿಯುಂಟು ಮಾಡುವ ಆತಂಕದಿಂದ ಎಲ್ಲ ಗೇಟುಗಳ ಮೂಲಕ ನೀರು ಹರಿಸಲಾಗುತ್ತಿದೆ.
ಇಲ್ಲಿನ ಕ್ರಸ್ಟ್ಗೇಟ್​ಗಳ ನಿರ್ವಹಣೆ, ಜಲಾಶಯದ ಸುರಕ್ಷತೆ ವಾರ್ಷಿಕವಾಗಿ ನಡೆಯುತ್ತಲೇ ಇರುತ್ತದೆ. ಆದರೆ, ಇದಕ್ಕೆ ತನ್ನದೆ ನೀತಿ-ನಿಯಮಗಳಿವೆ. ಸಿಡಬ್ಲ್ಯುಸಿ ಮಾರ್ಗಸೂಚಿ, ಮಾರ್ಗದರ್ಶನದ ಅನ್ವಯ ಟಿಬಿ ಬೋರ್ಡ್ ಅಧಿಕಾರಿಗಳು ನಿರ್ವಹಣೆ ಕೈಗೆತ್ತಿಕೊಳ್ಳುತ್ತಾರೆ. ಕಳೆದ ಮೇ ತಿಂಗಳಲ್ಲಷ್ಟೇ ಜಲಾಶಯ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆದಿತ್ತು. ತಜ್ಞರು ಯಾವ ಹಾನಿಯ ಭೀತಿಯಿಲ್ಲ ಎನ್ನುವ ವರದಿ ನೀಡಿದ್ದರು. ಆದರೆ, ಕಡಿಮೆ ಅವಧಿಯಲ್ಲಿ ಅತಿಹೆಚ್ಚು ಪ್ರಮಾಣದ ನೀರು ಹೊರ ಹರಿದ ಪರಿಣಾಮವೇ ದುರ್ಘಟನೆಗೆ ಕಾರಣ ಎಂದು ಅಧಿಕಾರಿಗಳು ಸ್ಪಷ್ಟವಾಗಿ ಹೇಳುತ್ತಿದ್ದಾರೆ.
ಜಲಾಶಯವು ವಿಜಯನಗರ, ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ಆಂಧ್ರ- ತೆಲಂಗಾಣ ರಾಜ್ಯಗಳಿಗೆ ಕುಡಿವ ನೀರು, ಕೃಷಿ ಚಟುವಟಿಕೆಗೆ ಆಧಾರವಾಗಿದೆ. ಕರ್ನಾಟಕದ ಆರು ಲಕ್ಷ ಹೆಕ್ಟೇರ್, ಆಂಧ್ರದ 1.50 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸುತ್ತದೆ. ಸದ್ಯದ ಆಂಧ್ರ, ತೆಲಂಗಾಣಕ್ಕೆ 25 ಟಿಎಂಸಿ ನೀರು ಹರಿಸಲಾಗಿದ್ದು, ಇನ್ನು 90 ಟಿಎಂಸಿ ನೀರು ಹರಿಸುವುದು ಬಾಕಿ ಇದೆ. ಈಗ ಗೇಟ್ ಅಳವಡಿಕೆಯಿಂದ 60 ಟಿಎಂಸಿ ನೀರು ಹೊರ ಹರಿಸಿದರೆ ನೀರಿನ ಕೊರತೆ ಉಂಟಾಗಲಿದ್ದು, ಮೂರು ರಾಜ್ಯದ ಅಚ್ಚುಕಟ್ಟು ಪ್ರದೇಶದಲ್ಲಿ ತೀವ್ರ ಹಾನಿ ಉಂಟಾಗಲಿದೆ.
ದುರಂತದ ನಡುವೆ ಏರುತ್ತಿದೆ ಒಳಹರಿವು: ತುಂಗಭದ್ರಾ ಜಲಾಶಯದ ಗೇಟ್ ದುರಂತದ ನಡುವೆಯೇ ಮಂಗಳವಾರ 32425 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಟಿಬಿಬಿಗೆ ಮತ್ತೊಂದು ಆತಂಕ ಎದುರಾಗಿದೆ. ಶನಿವಾರ ತಡರಾತ್ರಿ ನಡೆದ ಘಟನೆ ವೇಳೆ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. ಅಂದು 25605 ಕ್ಯೂಸೆಕ್ ಒಳಹರಿವಿತ್ತು. ಘಟನೆ ನಂತರ ಹಂತಹಂತವಾಗಿ ಲಕ್ಷ ಕ್ಯೂಸೆಕ್ ಅಧಿಕ ನೀರು ಹೊರಗೆ ಬಿಡಲಾಗುತ್ತಿದೆ. ಸೋಮವಾರ 25 ಸಾವಿರ ಕ್ಯೂಸೆಕ್ ಇದ್ದ ಒಳಹರಿವು, ಮಂಗಳವಾರ 35 ಸಾವಿರ ಕ್ಯೂಸೆಕ್​ಗೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾದರೆ ಜಲಾಶಯ ಗೇಟ್ ಅಳವಡಿಕೆ ಮತ್ತಷ್ಟು ಜಟಿಲವಾಗುತ್ತದೆ. ತಜ್ಞರ ತಂಡ ನೀರಿನಲ್ಲೇ ಗೇಟ್ ಅಳವಡಿಕೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ಆದರೆ, ನೀರಿನ ಒಳಹರಿವು ಹೆಚ್ಚಾದರೆ ಸಮಸ್ಯೆಯಂತೂ ಇನ್ನಷ್ಟು ಹೆಚ್ಚಾಗಲಿದೆ.
ಕೃತಕ ವಿಪತ್ತಿನಿಂದ ಆರ್ಥಿಕತೆಗೆ ಕುತ್ತು:ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಸಮಸ್ಯೆ ಮತ್ತು ಬರದ ಛಾಯೆ ಪರಿಣಾಮ ಕೆಲ ವರ್ಷಗಳಿಂದ ಭತ್ತ, ಅಕ್ಕಿ ಉತ್ಪಾದನೆ ಕುಸಿಯುವಂತೆ ಮಾಡಿದೆ. ಇದೀಗ ಗೇಟ್ ಕೊಚ್ಚಿ ಹೋಗಿ ಕೃತಕ ವಿಪತ್ತು ಸೃಷ್ಟಿಯಾಗಿದೆ. ಅಚ್ಚುಕಟ್ಟು ವ್ಯಾಪ್ತಿಯಲ್ಲಿ 12 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿ ಸೌಲಭ್ಯ ಪಡೆದಿದೆ. ನಾಲೆಗಳಿಗೆ ನೀರು ಬಿಟ್ಟಿದ್ದರಿಂದ ಎಕರೆಗೆ 20-30 ಸಾವಿರ ರೂ. ಖರ್ಚು ಮಾಡಿರುವ ಅನ್ನದಾತರು ಶೇ.80 ಭತ್ತ ನಾಟಿ ಮಾಡಿದ್ದಾರೆ. ಒಂದು ಬೆಳೆಗೆ ಕನಿಷ್ಠ 60-70 ಟಿಎಂಸಿ ಅಡಿ ನೀರು ಅತ್ಯವಶ್ಯ. ಸದ್ಯದ ಸ್ಥಿತಿಯಲ್ಲಿ ಅಷ್ಟು ನೀರು ಉಳಿಸುವುದು ಸವಾಲೇ ಸರಿ. ಪರಿಣಾಮ ಕೃಷಿ ಚಟುವಟಿಕೆ ಸ್ಥಗಿತಗೊಳ್ಳಲಿದ್ದು, ಪೂರಕ ಉದ್ಯಮಗಳಿಗೂ ಪರೋಕ್ಷ ಹೊಡೆತ ಬೀಳಲಿದೆ. ಅಕ್ಕಿ ದರವೂ ಗಗನಕ್ಕೇರಲಿದೆ. ಕೃಷಿಕರು, ಕೃಷಿ ಕೂಲಿಕಾರರು, ರಸಗೊಬ್ಬರ, ಕ್ರಿಮಿನಾಶಕ, ಟ್ರ್ಯಾಕ್ಟರ್ ಉದ್ಯಮ, ಗ್ಯಾರೇಜ್, ಎಪಿಎಂಸಿ, ರೈಸ್ ಮಿಲ್, ಹಮಾಲರಿಗೆ ನೇರ ಪರಿಣಾಮ ಬೀರಲಿದೆ. ಉಳಿದಂತೆ ಹೋಟೆಲ್ ಸೇರಿ ಇತರೆಲ್ಲ ಉದ್ಯಮಗಳ ಮೇಲೂ ಪರೋಕ್ಷ ಪರಿಣಾಮ ಆಗಲಿದ್ದು, ಸುಮಾರು 50-60 ಸಾವಿರ ಕೋಟಿ. ರೂ.ನಷ್ಟು ನಷ್ಟ ಸಂಭವಿಸಲಿದೆ ಎಂಬುದು ಆರ್ಥಿಕ ತಜ್ಞರ ಅಂಬೋಣ.
ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಮ್ಯ ರೆಡ್ಡಿ ಆಯ್ಕೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 4 =
Remember me
