ಬೆಂಗಳೂರು:ರಾಜ್ಯದಲ್ಲಿ ಹೊಸ ಶಾಲಾ ಕೊಠಡಿ ನಿರ್ವಣಕ್ಕೆ ಶುಕ್ರದೆಸೆ ಶುರುವಾಗಿದೆ. 8,100 ಕೊಠಡಿ ನಿರ್ವಣಕ್ಕೆ ಸರ್ಕಾರ ಐತಿಹಾಸಿಕ ನಿರ್ಣಯ ಕೈಗೊಂಡಿದ್ದು, 15 ದಿನಗಳ ಒಳಗಾಗಿ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳಲಿದೆ.
ಕೋವಿಡ್ ಮತ್ತಿತರ ಕಾರಣಗಳಿಂದ 4-5 ವರ್ಷಗಳಿಂದ ಹೊಸ ಕೊಠಡಿ ನಿರ್ವಣವಾಗಿರಲಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು 1,200 ಕೋಟಿ ರೂ. ವೆಚ್ಚದಲ್ಲಿ ಕೊಠಡಿಗಳ ನಿರ್ವಣಕ್ಕೆ ಸಜ್ಜಾಗಿದೆ. ಆಯಾ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಶಾಲಾ ಕೊಠಡಿ ನಿರ್ವಣದ ಜವಾಬ್ದಾರಿ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ‘ವಿಜಯವಾಣಿ’ ಸಂವಾದದಲ್ಲಿ ತಿಳಿಸಿದರು.
ಅತಿವೃಷ್ಟಿ ಕೂಡ ಶಾಲಾ ಕೊಠಡಿ ಹಾನಿಗೆ ಕಾರಣವಾಗಿದೆ. ಕಳೆದ ವರ್ಷ 48 ಸಾವಿರ ಶಾಲೆಯನ್ನು ಎ-ಬಿ-ಸಿ ಎಂದು ವರ್ಗೀಕರಣ ಮಾಡಿದ್ದೇವೆ. ಎ ವರ್ಗದಲ್ಲಿ 28 ಸಾವಿರ ಶಾಲೆಗಳಿವೆ. ಬಿ ವರ್ಗದಲ್ಲಿ 12-13 ಸಾವಿರ, ಸಿ ವರ್ಗದಲ್ಲಿ 7-8 ಸಾವಿರ ಶಾಲೆಗಳಿವೆ. ಮಲೆನಾಡು ಮತ್ತಿತರ ಕಡೆ ಮಳೆಯಿಂದ ಶಾಲೆಗಳು ಹಾನಿಗೀಡಾಗಿವೆ. ಅನೇಕ ಶಾಲೆಗಳು 10ಕ್ಕಿಂತ ಕಡಿಮೆ ಮಕ್ಕಳು ಇರುವಂತಹವುಗಳಾಗಿವೆ ಎಂದರು.
ಅನೇಕ ಕಡೆ ಅತ್ಯುತ್ತಮ ನಿರ್ವಹಣೆ:ಒಂದು, ಎರಡು ಮಕ್ಕಳಿರುವ 6 ಸಾವಿರ ಅಂಗನವಾಡಿಗಳು ರಾಜ್ಯದಲ್ಲಿವೆ. ಇಂತಹ ಕಡೆ ಸರ್ಕಾರ ಕಟ್ಟಡ ದುರಸ್ತಿ, ಹೊಸ ಕಟ್ಟಡ ನಿರ್ವಣಕ್ಕೆ ಹೂಡಿಕೆ ಮಾಡುವುದು ಕಷ್ಟ. ಆದಾಗ್ಯೂ ಆಸಕ್ತ ಶಿಕ್ಷಕರಿರುವ ಕಡೆ ಸ್ಥಳೀಯರು, ಹಳೆಯ ವಿದ್ಯಾರ್ಥಿಗಳು, ದಾನಿಗಳ ನೆರವಿನಿಂದ ಶಾಲೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರಲಾಗುತ್ತಿದೆ. ಜತೆಗೆ ಎಲ್ಲೆಲ್ಲಿ ಶಾಸಕರು, ಸ್ಥಳೀಯರು ಆಸಕ್ತಿ ವಹಿಸಿದ್ದಾರೋ ಅಂತಹ ಕಡೆಗಳಲ್ಲಿ ಶಾಲೆಗಳು ಚೆನ್ನಾಗಿವೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡಿನಲ್ಲಿ ಸ್ಥಳೀಯರು ಹೆಚ್ಚು ಆಸಕ್ತಿವಹಿಸಿರುವ ಕಾರಣ ಬಹುತೇಕ ಎಲ್ಲ ಶಾಲೆಗಳೂ ಚೆನ್ನಾಗಿವೆ ಎಂದು ನಾಗೇಶ್ ಹೇಳಿದರು.
ಕಟ್ಟಡ ತ್ಯಾಜ್ಯ ತೆರವುಗೊಳಿಸಿಲ್ಲ:ಕಲ್ಯಾಣ ಕರ್ನಾಟಕದಲ್ಲಿ ಅನೇಕ ಶಾಲೆಗಳು ತುಂಬಾ ಚೆನ್ನಾಗಿವೆ. ಕೆಲವು ಕಡೆ ಸಮಸ್ಯೆಗಳೂ ಇವೆ. ಬಿದ್ದು ಹೋದ ಶಾಲೆ ಕೊಠಡಿ ತ್ಯಾಜ್ಯ ತೆರವುಗೊಳಿಸಿಲ್ಲ. ಕಟ್ಟಡ ದುರಸ್ತಿ ಸಮಸ್ಯೆ ಎದ್ದು ಕಾಣುವಲ್ಲಿ ಇದು ಕೂಡ ಒಂದು ಕಾರಣ ಎಂದು ಸಚಿವರು ತಿಳಿಸಿದರು.
ಶಿಶುಪಾಲನಾ ರಜೆ ದುರ್ಬಳಕೆ:ಶಿಶುಪಾಲನಾ ರಜೆ ದುರ್ಬಳಕೆಯಾಗುತ್ತಿದೆ. ಈ ರಜೆ ಮಂಜೂರಿನಲ್ಲೂ ಅನುಮಾನ ವ್ಯಕ್ತವಾಗುತ್ತಿದೆ. ಒಂದೊಂದು ಶಾಲೆಯಲ್ಲಿ 3-4 ಜನ ಒಟ್ಟೊಟ್ಟಿಗೆ ಶಿಶುಪಾಲನಾ ರಜೆ ತೆಗೆದುಕೊಳ್ಳುತ್ತಾರೆ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಇದು ಗಮನಕ್ಕೆ ಬಂದಿದೆ. ಇದನ್ನು ಸುಧಾರಣೆ ಮಾಡುವ ಆಲೋಚನೆ ಇದೆ ಎಂದು ಬಿ.ಸಿ.ನಾಗೇಶ್ ತಿಳಿಸಿದರು.

ಸರ್ಕಾರಿ ಶಾಲೆಗಳನ್ನು ಮಾರ್ಕೆಟಿಂಗ್ ಮಾಡುವಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿರುವ ಶೌಚಗೃಹಗಳನ್ನು ನಿರ್ವಹಣೆ ಮಾಡುವಲ್ಲಿ ವಿಫಲವಾಗಿದ್ದೇವೆ. ಆದರೆ ಸರ್ಕಾರದ ಎಲ್ಲ ಶಾಲಾ-ಕಾಲೇಜುಗಳಲ್ಲಿ ಶೌಚಗೃಹಗಳಿವೆ.
|ಬಿ.ಸಿ.ನಾಗೇಶ್ಶಿಕ್ಷಣ ಸಚಿವ
ಪರೀಕ್ಷಾ ಮಂಡಳಿ ವಿಲೀನ:ಪ್ರೌಢಶಾಲೆ ಮತ್ತು ಪಿಯು ಪರೀಕ್ಷಾ ಮಂಡಳಿಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಈ ಎರಡೂ ಮಂಡಳಿಗಳು ಒಟ್ಟಿಗೆ ಕೆಲಸ ಮಾಡಲಿವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಐಎಎಸ್ ಅಧಿಕಾರಿಯೊಬ್ಬರನ್ನು ಈ ಮಂಡಳಿಗೆ ನೇಮಕ ಮಾಡಲಾಗುತ್ತದೆ. ಪಿಯು ಪರೀಕ್ಷಾ ಮಂಡಳಿಯಲ್ಲಿ ಸಿಬ್ಬಂದಿ ಸಮಸ್ಯೆಯಿಂದ ಪರೀಕ್ಷೆ ನಡೆಸುವುದೇ ಕಷ್ಟವಾಗಿದೆ. ಜತೆಗೆ ವಿಲೀನದಿಂದ ವೆಚ್ಚ ಕೂಡ ಕಡಿತವಾಗಲಿದೆ. ಅತ್ಯಂತ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಸಹಕಾರಿಯಾಗಲಿದೆ. ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹೆಸರಿನಲ್ಲೇ ಈ ಮಂಡಳಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
11 ಸಾವಿರ ಶಿಕ್ಷಕರ ಭರ್ತಿ ವಿಶ್ವಾಸ:ಶಿಕ್ಷಕರ ನೇಮಕಾತಿಯನ್ನು ದೇಶದಲ್ಲಿಯೇ ಕರ್ನಾಟಕ ಉತ್ತಮವಾಗಿ ಕೆಲಸ ಮಾಡುತ್ತಿದೆ. ಸುರೇಶ್​ಕುಮಾರ್ ಶಿಕ್ಷಣ ಸಚಿವರಾಗಿದ್ದಾಗ 10 ಸಾವಿರ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಪ್ರಯತ್ನ ಮಾಡಿದ್ದಾಗ ಅದರಲ್ಲಿ ಭರ್ತಿಯಾಗಿದ್ದು 3,600 ಮಾತ್ರ. ಈ ಬಾರಿ 15 ಸಾವಿರ ಶಿಕ್ಷಕರಲ್ಲಿ 11 ಸಾವಿರ ಭರ್ತಿ ಮಾಡುತ್ತೇವೆ ಎಂಬ ವಿಶ್ವಾಸವಿದೆ. ಇದಕ್ಕೆ 2-3 ಕಾರಣವಿದೆ. ಟಿಇಟಿ ಮಾಡಿದವರ ಸಂಖ್ಯೆ ಈ ಬಾರಿ ಹೆಚ್ಚಿದೆ. ಅನುಭವವುಳ್ಳ ಅತಿಥಿ ಶಿಕ್ಷಕರು ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ. ಮೊದಲು ಕಾಂಬಿನೇಷನ್​ಗಳು ಜಟಿಲವಾಗಿತ್ತು. ಈಗ ಇಂಜಿಯರಿಂಗ್ ಬಳಿಕ ಬಿ.ಇಡಿ ಮಾಡಿದವರಿಗೂ ಗಣಿತ ಭೌತಶಾಸ್ತ್ರ ಪಾಠ ಮಾಡಲು ಅವಕಾಶ ಕೊಡಲಾಗಿದೆ. ಕಟ್​ಆಫ್ ಶೇ.50 ಇಂಡಿವಿಜುವಲ್ ಇದ್ದದನ್ನು ಆವರೇಜ್ ಶೇ.50 ಮಾಡಲಾಗಿದೆ. ಹೀಗಾಗಿ ಈ ಬಾರಿ ಶಿಕ್ಷಕರ ಭರ್ತಿ ಹೆಚ್ಚಾಗಲಿದೆ ಎಂದು ಬಿ.ಸಿ.ನಾಗೇಶ್ ತಿಳಿಸಿದರು.
ಶಿಕ್ಷಕರ ಕೊರತೆ ನೀಗಲಿದೆ:ಈ ಬಾರಿಯ ಪರೀಕ್ಷೆಯಲ್ಲಿ ಉಂಟಾಗುವ ಶಿಕ್ಷಕರ ಕೊರತೆಯನ್ನು ಫೆಬ್ರವರಿಯಲ್ಲಿ ಸಿಇಟಿ ಮೂಲಕ ನೇಮಕ ಮಾಡಿಕೊಳ್ಳಲಾಗುವುದು. ನವೆಂಬರ್​ನಲ್ಲಿ ಟಿಇಟಿ ಮಾಡಿ ಅದರಲ್ಲಿ ಪಾಸಾದವರನ್ನು ಫೆಬ್ರವರಿಯಲ್ಲಿ ನಡೆಯಲಿರುವ ಟಿಇಟಿ ಬರೆಯಲು ಅವಕಾಶ ನೀಡಲಾಗುತ್ತದೆ. ಮೊದಲ ಬಾರಿಗೆ 34 ಸಾವಿರ ಅತಿಥಿ ಶಿಕ್ಷಕರನ್ನು ಜೂನ್ 1ರಿಂದಲೇ ನೇಮಕ ಮಾಡಿ ಶಾಲೆಗಳಿಗೆ ಕಳುಹಿಸಿಕೊಡಲಾಗಿದೆ. ಶಿಕ್ಷಕರ ಮರು ಹೊಂದಾಣಿಕ ತುಂಬಾ ವರ್ಷಗಳಿಂದ ಆಗಿರಲಿಲ್ಲ. ಇದನ್ನು ಈ ಬಾರಿ ನಮ್ಮ ಸರ್ಕಾರ ಮಾಡಿದೆ. 11 ಸಾವಿರ ಶಿಕ್ಷಕರ ನೇಮಕ ಮತ್ತು ಮರು ಹೊಂದಾಣಿಕೆಯಿಂದ ಅನೇಕ ಶಾಲೆಗಳಲ್ಲಿ ಇರುವ ಶಿಕ್ಷಕರ ಕೊರತೆ ಕಡಿಮೆಯಾಗಲಿದೆ ಎಂದು ಬಿ.ಸಿ.ನಾಗೇಶ್ ವಿವರಿಸಿದರು.
ಆಂಗ್ಲ ಮಾಧ್ಯಮ:ಕೆಪಿಎಸ್ ಅಂತ 276 ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲಾಗಿದೆ. ಇಲ್ಲಿ ಆಂಗ್ಲ ಮಾಧ್ಯಮದಲ್ಲಿ ಪಾಠ ಮಾಡುವ ಶಿಕ್ಷಕರಿಲ್ಲ. ಇದಕ್ಕೆ ತುಂಬಾ ಬೇಡಿಕೆ ಬಂದರೂ ಕೊಟ್ಟಿಲ್ಲ. ಆಂಗ್ಲ ಭಾಷೆಯಲ್ಲಿಯೇ ಹೇಳಿಕೊಡುವ ಶಿಕ್ಷಕರು ಬರುವ ತನಕ ಅದನ್ನು ಮಾಡಬಾರದೆಂದು ನಿರ್ಣಯಿಸಿದ್ದೇವೆ. 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿಯೇ 1,700 ಆಂಗ್ಲ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಆಯ್ಕೆಯಾಗುವ ಶಿಕ್ಷಕರ ಸಂಖ್ಯೆಯ ನಂತರ ಆಂಗ್ಲ ಮಾಧ್ಯಮ ಶಾಲೆಗಳ ಕಡೆ ಗಮನಹರಿ ಸಲಾಗುವುದು ಎಂದು ಬಿ.ಸಿ.ನಾಗೇಶ್ ತಿಳಿಸಿದರು.
ಶಾಲೆಗಳ ಆಸ್ತಿ ದಾಖಲೀಕರಣ:ಶಾಲೆಗಳ ಆಸ್ತಿ ದಾಖಲೀಕರಣ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಈ ಪ್ರಕ್ರಿಯೆ ಮುಗಿದಿದೆ. ಇನ್ನು 3-4 ಜಿಲ್ಲೆಗಳಲ್ಲಿ ಬಾಕಿ ಇದೆ. ಎಷ್ಟೋ ಶಾಲೆಗಳಿಗೆ ಜಾಗ, ಕಟ್ಟಡ ದಾನ ಮಾಡಿ ದ್ದಾರೆ. ಆದರೆ ಅದನ್ನು ಸರಿಯಾಗಿ ನಮ್ಮ ಹೆಸರಿಗೆ ಪಡೆದುಕೊಳ್ಳುವಲ್ಲಿ ಲೋಪವಾಗಿದ್ದು, ಅನೇಕ ಸಮಸ್ಯೆ ಗಳಿಗೂ ಕಾರಣವಾಗಿದೆ. ಆದ್ದರಿಂದ ಪ್ರತಿಯೊಂದು ಶಾಲೆಗಳ ಆಸ್ತಿ ಸರಿಯಾದ ರೀತಿಯಲ್ಲಿ ದಾಖಲೆ ಆಗಬೇಕು ಎನ್ನುವ ದೃಷ್ಟಿಯಿಂದ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿ ಕ್ರಮ ಕೈಗೊಂಡಿದೆ ಎಂದು ಸಚಿವರು ತಿಳಿಸಿದರು.
18ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ!; ನಷ್ಟದಲ್ಲಿದೆ 50 ವರ್ಷಗಳ ಇತಿಹಾಸವಿರುವ ಕಂಪನಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − eighteen =
Remember me
