| ದೇವರಾಜ್ ಎಲ್.
ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಭವಿಷ್ಯ ರೂಪಿಸುವ ಶಾಲಾ ಶಿಕ್ಷಕರ ಬದುಕು ಕರೊನಾ ಮಹಾಮಾರಿ ಪರಿಣಾಮ ಅಂಧಕಾರದಲ್ಲಿ ಮುಳುಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರಿಗೆ ಪಾಠ ಮಾಡದಿದ್ದರೂ ವೇತನ ಸಿಗುತ್ತಿದ್ದರೆ, ಖಾಸಗಿ ಶಾಲೆಗಳ ಶಿಕ್ಷಕರು ಪೈಸೆ ಪೈಸೆಗೂ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಕರೊನಾ ಮಹಾಮಾರಿ ಶಾಲೆಗಳ ಬಾಗಿಲು ಮುಚ್ಚಿಸಿದ್ದರಿಂದಾಗಿ ಹೊಸ ವಿದ್ಯಾರ್ಥಿಗಳ ದಾಖಲಾತಿ ಆಗುತ್ತಿಲ್ಲ. ವಿದ್ಯಾರ್ಥಿಗಳ ವಾರ್ಷಿಕ ಶುಲ್ಕಗಳೂ ಪಾವತಿಯಾಗುತ್ತಿಲ್ಲ. ಹೀಗಾಗಿ ಆದಾಯಮೂಲವಿಲ್ಲದೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಶಾಲೆ ನಿರ್ವಹಿಸುವುದೇ ದೊಡ್ಡ ಸವಾಲಾಗಿದೆ. ಇದರಿಂದ ಪೆಟ್ಟು ಬಿದ್ದಿರುವುದು ಶಿಕ್ಷಕರ ಬದುಕಿಗೆ. ಆಡಳಿತ ಮಂಡಳಿಗಳು ವೇತನ ನೀಡುವುದನ್ನೇ ನಿಲ್ಲಿಸಿರುವ ಹಿನ್ನೆಲೆಯಲ್ಲಿ ತಿಂಗಳ ವೇತನವನ್ನೇ ನಂಬಿಕೊಂಡಿದ್ದ ಶಿಕ್ಷಕರು ತುತ್ತಿನ ಚೀಲ ತುಂಬಿಸಲು ಸಿಕ್ಕಿದ ಸಣ್ಣ ಪುಟ್ಟ ಕೆಲಸವನ್ನೆಲ್ಲ ಮಾಡುತ್ತಿದ್ದಾರೆ. ಅನೇಕರು ಇದ್ದ ಬದ್ದ ವಾಹನ ಚಿನ್ನಾಭರಣ ಮಾರಾಟ ಮಾಡಿಕೊಂಡಿದ್ದಾರೆ. ಹಲವರು ಪಟ್ಟಣ ಸಹವಾಸ ಬೇಡವೆಂದು ಹುಟ್ಟೂರು ಸೇರಿದ್ದಾರೆ. ಆದರೆ, ಹಳ್ಳಿಯಲ್ಲಿಯೂ ದುಡಿಮೆ ಇಲ್ಲದೆ ಪರದಾಡುತ್ತಿದ್ದಾರೆ.ಇದನ್ನೂ ಓದಿ:ಚಿಕ್ಕಪ್ಪ-ಚಿಕ್ಕಮ್ಮ ಬಿಡುಗಡೆ ಮಾಡ್ತಾರೆ ನಿರಂಜನ್​ ಹೊಸ ಚಿತ್ರದ ಟೈಟಲ್​
ಇನ್ನು ರಾಜ್ಯಾದ್ಯಂತ ಶಿಕ್ಷಕಿಯಾಗಿ ಬದುಕು ಕಟ್ಟಿಕೊಂಡಿದ್ದ ವಿಧವೆಯರು, ವಿಚ್ಚೇದಿತೆಯರು, ಮಕ್ಕಳೊಂದಿಗೆ ಒಂಟಿಮಹಿಳೆಯರು ಸಂಬಳವಿಲ್ಲದೆ, ಅನ್ಯ ಆದಾಯವಿಲ್ಲದೆ ಗೋಳಾಡುತ್ತಿದ್ದಾರೆ. ಗಂಡನ ಮನೆ, ತವರುಮನೆ ಎರಡೂ ದಿಕ್ಕಿಲ್ಲದ ಇಂಥ ಶಿಕ್ಷಕಿಯರ ನರಕಯಾತನೆ ಯಾರಿಗೂಬೇಡವೆಂಬಂಥ ಸ್ಥಿತಿ ಇದೆ.
ಮೊದಲಿನಿಂದ ಶಿಕ್ಷಕ ವೃತ್ತಿಯೊಂದನ್ನೇ ನೆಚ್ಚಿಕೊಂಡು, ಬೇರೆ ಕೆಲಸ, ಕೌಶಲ ಗೊತ್ತಿಲ್ಲದ ಅನೇಕ ಶಿಕ್ಷಕರು ಹಳ್ಳಿಗಳಲ್ಲೀಗ ನರೇಗಾ ಕೂಲಿಗೆ ಹೋಗುತ್ತಿದ್ದಾರೆ. ಪದವಿ, ಸ್ನಾತಕೋತ್ತರ ಪದವಿ ಓದಿ ಕೂಲಿಗೆ ಹೋಗುವುದಕ್ಕೆ ಬಿಗುಮಾನವಾದರೂ ನಿರ್ವಾಹವಿಲ್ಲದಾಗಿದೆ. ಈ ರೀತಿ ಅನೇಕ ಶಿಕ್ಷಕರು ತರಕಾರಿ ವ್ಯಾಪಾರ, ಬಟ್ಟೆ ವ್ಯಾಪಾರ, ನರೇಗಾದಲ್ಲಿ ಕೂಲಿ ಕೆಲಸ, ಕೃಷಿ ಕೆಲಸ ಮಾಡುತ್ತಿದ್ದಾರೆ. ಹಲವು ಶಿಕ್ಷಕರು ಮಾನಸಿಕ ವ್ಯಾಧಿ, ಖಿನ್ನತೆಗೆ ಸಿಲುಕಿದ್ದಾರೆ. ಇನ್ನು ಅವಲಂಬಿತರನ್ನು ಸಾಕುವ ಜವಾಬ್ದಾರಿ ಹೊತ್ತ ಶಿಕ್ಷಕರ ಬವಣೆಯಂತೂ ಹೇಳತೀರದು. ಮನೆಯಲ್ಲಿರುವ ವಯೋವೃದಟಛಿರ ಔಷಧಿ, ಚಿಕಿತ್ಸೆಗೂ ಹಣಹೊಂದಿಸಲಾಗದ ದುಸ್ಥಿತಿ ಅವರದು.ಇದನ್ನೂ ಓದಿ:ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದವನಿಗೆ 3 ಲಕ್ಷ ದಂಡ, 5 ತಿಂಗಳು ಜೈಲು
ಎಷ್ಟಿವೆ ಖಾಸಗಿ ಶಾಲೆಗಳು?:ರಾಜ್ಯದಲ್ಲಿ 50,066 ಸರ್ಕಾರಿ ಶಾಲೆ, 7,330 ಅನುದಾನಿತ ಮತ್ತು 19,645 ಖಾಸಗಿ ಅನುದಾನಿತ, 19,645 ಖಾಸಗಿ ಶಾಲೆಗಳಿವೆ. ಸರ್ಕಾರಿ ಶಾಲೆಗಳಲ್ಲಿ 49,73,140, ಅನುದಾನಿತ 15,83,204 ಮತ್ತು ಖಾಸಗಿಯಲ್ಲಿ 45,71,165 ವಿದ್ಯಾರ್ಥಿಗಳಿದ್ದಾರೆ.
ಸರ್ಕಾರಿ ಶಾಲೆಗಳಿಗೂ ಖಾಸಗಿ ಶಾಲೆಗಳಿಗೂ ಕೇವಲ 4 ಲಕ್ಷ ವಿದ್ಯಾರ್ಥಿಗಳ ವ್ಯತ್ಯಾಸವಷ್ಟೇ ಇದೆ. ಸರ್ಕಾರಿ ಶಾಲೆಗಳ 2.20 ಲಕ್ಷ ಶಿಕ್ಷಕರಿಗೆ ನಿಯಮಿತವಾಗಿ ವೇತನ ಸಿಗುತ್ತಿದ್ದರೆ, ಅನುದಾನಿತ ಶಾಲೆಗಳಲ್ಲಿ 51 ಸಾವಿರ ಶಿಕ್ಷಕರು ದುಡಿಯುತ್ತಿದ್ದು, ಅಲ್ಲಿಯೂ ಅನೇಕ ಶಾಲೆಗಳಲ್ಲಿ ಸಂಬಳ ನಿಲ್ಲಿಸಿದ್ದಾರೆ. ಖಾಸಗಿ ಶಾಲೆಗಳಲ್ಲಿ ಬದುಕು ಕಟ್ಟಿಕೊಂಡಿರುವ 1.49 ಲಕ್ಷ ಶಿಕ್ಷಕರಿಗೆ ಸಂಬಳ ನಿಂತುಹೋಗಿದೆ. ಕೆಲವು ಪ್ರತಿಷ್ಠಿತ ಶಾಲೆಗಳು ಮಾತ್ರ ಅರ್ಧ ಸಂಬಳ, ಭಾಗಶಃ ವೇತನ ನೀಡುತ್ತಿವೆ.ಇದನ್ನೂ ಓದಿ:ಸೆಪ್ಟೆಂಬರ್‌ನಲ್ಲಿ ಶಾಲೆ ಶುರುವಾಗತ್ತಾ? ಸಚಿವ ಸುರೇಶ್‌ಕುಮಾರ್‌ ಏನು ಹೇಳಿದ್ದಾರೆ ಕೇಳಿ…
ನಿರ್ವಹಣೆ ಕಠಿಣ:ಮಾರ್ಚ್​ನಲ್ಲೇ ಕರೊನಾ ಕಾಲಿಟ್ಟ ಕಾರಣ ಪರೀಕ್ಷೆ ನಡೆಸಲು ಸಾಧ್ಯವೇ ಆಗಿಲ್ಲ. ಇದರ ಪರಿಣಾಮ ಶಾಲೆಗಳಿಗೆ ಕಳೆದ ಶೈಕ್ಷಣಿಕ ವರ್ಷದ ಕೊನೆಯ ಕಂತಿನ ಶುಲ್ಕವೇ ಪಾವತಿಯಾಗಿಲ್ಲ. ಪರೀಕ್ಷೆಯೇ ಇಲ್ಲದೆ ಫಲಿತಾಂಶ ನೀಡಿದ ಕಾರಣ ಅನೇಕ ಪಾಲಕರು ಶುಲ್ಕ ಕಟ್ಟಲು ಹೋಗಲಿಲ್ಲ. ಹೀಗಾಗಿ ಕಳೆದ ವರ್ಷದ ಶುಲ್ಕ ಸಾಕಷ್ಟು ಬಾಕಿ ಉಳಿದಿದೆ. ಇದನ್ನು ಪಾವತಿಸುವಂತೆ ಸರ್ಕಾರ ಹೇಳುವುದು ಕಷ್ಟ.
ಆಡಳಿತ ಮಂಡಳಿಗಳು ಪಾಲಕರನ್ನು ಕೇಳುವುದು ಕೂಡ ಕಷ್ಟ. ಹೊಸ ಶೈಕ್ಷಣಿಕ ವರ್ಷದ ಶುಲ್ಕ ಪಾವತಿಸುವಂತೆ ಈಗಾಗಲೇ ಪಾಲಕರಿಗೆ ಸೂಚನೆ ನೀಡಿದ್ದರೂ ಸಹ ಬಹುತೇಕರು ಪಾಲಿಸಿಲ್ಲ. ಶಾಲೆ ಆರಂಭವಾದ ಮೇಲೆ ಪಾವತಿಸಿದರೇ ಆಯ್ತು ಎಂಬ ಆಲೋಚನೆಯಲ್ಲಿದ್ದಾರೆ. ಅಲ್ಲೂ ಇಲ್ಲ, ಇಲ್ಲೂ ಇಲ್ಲ: ಮಾರ್ಚ್ ವೇಳೆಗೆ ಆರ್ಥಿಕ ವರ್ಷ ಮುಕ್ತಾಯವಾಗುವಾಗ ಶಿಕ್ಷಕರು ಹೊಸ ಅವಕಾಶ ಹುಡುಕಿಕೊಂಡು ಹೋಗುವುದು ಸಾಮಾನ್ಯ. ಈ ರೀತಿ ಹೊಸ ಶಾಲೆಗಳಲ್ಲಿ ಆಫರ್ ಲೆಟರ್ ತೆಗೆದುಕೊಂಡು ಹಳೇ ಶಾಲೆಯಲ್ಲಿ ರಿಲೀವ್ ಲೆಟರ್ ತೆಗೆದುಕೊಂಡ ಹಲವು ಶಿಕ್ಷಕರಿದ್ದಾರೆ. ಕರೊನಾ ಪರಿಸ್ಥಿತಿಯಿಂದ ಇತ್ತ ಹಳೇ ಶಾಲೆಯಲ್ಲಿ ಕೆಲಸವೂ ಇಲ್ಲದೆ, ಹೊಸ ಶಾಲೆ ಆರಂಭವಾಗದೆ ಹಲವರು ಅತಂತ್ರ ಸ್ಥಿತಿ ತಲುಪಿದ್ದಾರೆ.ಇದನ್ನೂ ಓದಿ:
ಮನೆಪಾಠವೂ ಇಲ್ಲ:ಅನೇಕ ಶಿಕ್ಷಕರು ಶಾಲೆ ಸಂಬಳದ ಜೊತೆಗೆ ಮನೆಪಾಠ ನಡೆಸುವ ಮೂಲಕ ಸಂಸಾರದ ಖರ್ಚು ಸರಿದೂಗಿಸುತ್ತಿದ್ದರು. ಆದರೆ, ಕರೊನಾ ಕಾರಣಕ್ಕೆ ಪಾಲಕರು ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸದೇ ಇರುವ ಕಾರಣ ಶಿಕ್ಷಕರಿಗೆ ಮನೆಪಾಠದ ಆದಾಯವೂ ಇಲ್ಲವಾಗಿದೆ.
200 ಕೋಟಿ ರೂ.ಬೇಕು:ಕರೊನಾ ಸಂಕಷ್ಟದಲ್ಲಿ ಖಾಸಗಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಆರ್ಥಿಕ ಸಹಾಯ ಮಾಡುವುದಾದರೆ ಶಿಕ್ಷಣ ಇಲಾಖೆಗೆ 200 ಕೋಟಿ ರೂ. ಅವಶ್ಯಕತೆ ಇದೆ. ಇಷ್ಟು ಹಣ ನೀಡಲು ಸದ್ಯದ ಆರ್ಥಿಕ ಪರಿಸ್ಥಿತಿ ಅವಕಾಶ ನೀಡುವುದಿಲ್ಲ. ಎಲ್ಲ ಸರ್ಕಾರಿ ಶಾಲಾ ಶಿಕ್ಷಕರಿಂದ ಒಂದು ದಿನದ ಸಂಬಳ ಪಡೆಯುಲು ಆಲೋಚಿಸಿದರೂ ಇದು ಹೆಚ್ಚಿನ ಪ್ರಯೋಜನಕಾರಿಯಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಆರ್ಥಿಕ ಸಹಾಯ ಮಾಡಬೇಕಾದರೆ ಶಾಲೆ ಆರಂಭಿಸುವುದು ಅನಿವಾರ್ಯ.
ಆರಂಭವೊಂದೇ ಮಾರ್ಗ:ಸರ್ಕಾರಕ್ಕೆ ಖಾಸಗಿ ಶಿಕ್ಷಕರಿಗೆ ವೇತನ ನೀಡಲು ಸಾಧ್ಯವಿಲ್ಲ. ಫುಡ್ ಕಿಟ್ ವಿತರಿಸಿದರೂ ಸಮಸ್ಯೆ ಬಗೆಹರಿಯುವುದಿಲ್ಲ. ನಿಜಕ್ಕೂ ಶಿಕ್ಷಕರ ಪರಿಸ್ಥಿತಿ ಸುಧಾರಿಸಬೇಕಾದರೆ ಶಾಲೆ ಆರಂಭಿಸುವುದೊಂದೇ ಮಾರ್ಗ. ಪಾಲಕರಲ್ಲಿ ಮನವರಿಕೆ ಮಾಡಿ, ಧೈರ್ಯ ತುಂಬಿ, ಸುರಕ್ಷಿತ ಕ್ರಮ ಅನುಸರಿಸಿ ಪ್ರೌಢಶಾಲೆ ಆರಂಭಿಸುವುದರಿಂದ ಲಕ್ಷಾಂತರ ಶಿಕ್ಷಕರ ಜೀವನದಲ್ಲಿ ಬೆಳಕು ಕಾಣಬಹುದಾಗಿದೆ.
ಮನೆಯಲ್ಲಿ ಇಬ್ಬರು ಮಕ್ಕಳಿದ್ದಾರೆ. ಗಂಡ ಅಪಘಾತದಲ್ಲಿ ತೀರಿ ಹೋಗಿದ್ದಾರೆ. ಮನೆ ಬಾಡಿಗೆ ಕಟ್ಟಿಕೊಂಡು ಮಕ್ಕಳು ಓದಿಸುವುದಕ್ಕೆ ನನ್ನ ಸಂಬಳ ಸಾಕಾಗುತ್ತಿತ್ತು. ಆರು ತಿಂಗಳಿಂದ ಅದು ಸಹ ಇಲ್ಲ. ಏನು ಮಾಡಬೇಕು ಎಂದು ತೋಚುತ್ತಿಲ್ಲ.| ನೊಂದ ಶಿಕ್ಷಕಿ
ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರ ಸಮಸ್ಯೆಯ ಬಗ್ಗೆ ತಿಳಿದಿದೆ. ಈಗಾಗಲೇ ಕೆಲವು ನಿರ್ಧಾರಗಳನ್ನು ನಾವು ತೆಗೆದು ಕೊಂಡಿದ್ದೇವೆ. ಆದರೆ, ಕಷ್ಟದಲ್ಲಿರುವ ಶಿಕ್ಷಕರ ಪರಿಸ್ಥಿತಿ ಅರಿತು ಭಾವನಾತ್ಮಕವಾದ ನಂಟನ್ನು ಹೊಂದಿರುವ ತಮ್ಮ ಮಕ್ಕಳ ಶಾಲೆಯ ಶಿಕ್ಷಕರ ಬಗ್ಗೆ ಪೋಷಕರೂ ಸಹ ಇನ್ನಷ್ಟು ಪ್ರತಿ ಸ್ಪಂದಿಸಬೇಕಾದ ಅಗತ್ಯವಿದೆ. ವಿದ್ಯಾಗಮದ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಬೇಕಿದೆ. ಇಷ್ಟರಲ್ಲಿಯೇ ಸರ್ಕಾರ ತನ್ನ ನಿಲುವು ಪ್ರಕಟಿಸಲಿದೆ.| ಎಸ್.ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
ಪಾಲಕರು ಶುಲ್ಕ ಪಾವತಿಸಿದರೆ ನಾವು ಶಿಕ್ಷಕರಿಗೆ ಸಂಬಳ ನೀಡಲು ಸಾಧ್ಯ. ಕರೊನಾ ಪರಿಸ್ಥಿತಿ ನಮಗೂ ಅರ್ಥವಾಗುತ್ತದೆ. ಆದರೆ, ಶಿಕ್ಷಕರ ಪರಿಸ್ಥಿತಿ ಕೂಡ ಅರ್ಥ ಮಾಡಿಕೊಳ್ಳಲೇಬೇಕಿದೆ.| ಡಿ.ಶಶಿಕುಮಾರ್ ಪ್ರಧಾನ ಕಾರ್ಯದರ್ಶಿ, ಕ್ಯಾಮ್ಸ್ ಸಂಘಟನೆ
ವೇತನ ಇಲ್ಲ ಸಿಬಿಎಸ್​ಇ ಮತ್ತು ಐಸಿಎಸ್​ಇ ಪಠ್ಯಕ್ರಮದ ಪ್ರತಿಷ್ಠಿತ ಶಾಲೆಗಳು ಶಿಕ್ಷಕರಿಗೆ ವೇತನ ನೀಡುತ್ತಿರುವ ಮಾಹಿತಿ ಇದೆ. ಉಳಿದಂತೆ ಬಜೆಟ್ ಶಾಲೆಗಳು ಶಾಲೆ ಉಳಿಸಿಕೊಳ್ಳುವುದೇ ಕಷ್ಟವಾಗಿರುವುದರಿಂದ ಶಿಕ್ಷಕರಿಗೆ ವೇತನ ನೀಡುವುದನ್ನು ಕೈ ಬಿಟ್ಟಿವೆ. ಆದರೆ, ಆನ್​ಲೈನ್ ತರಗತಿ ಮಾಡುವ ಕೆಲವರಿಗಷ್ಟೇ ಭತ್ಯೆ ರೀತಿ ವೇತನ ನೀಡುತ್ತಿದೆ. ಉಳಿದವರಿಗೆ ಮನೆಯಿಂದಲೇ ಪಾಠದ ವೀಡಿಯೋ ಮಾಡುವಂತೆ ಹೇಳಿ ಅದನ್ನು ಪಡೆದುಕೊಂಡು ಶುಲ್ಕ ನೀಡದೆಯೇ ವಂಚಿಸುತ್ತಿವೆ ಎಂದು ತಿಳಿದು ಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
