ಶಿಕ್ಷಣ ಕ್ಷೇತ್ರಕ್ಕೆ ಮೂಲಸೌಕರ್ಯ ಕಲ್ಪಿಸಲು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗೆ ಈ ಬಾರಿಯ ಬಜೆಟ್ ಒತ್ತು ನೀಡಿದೆ. ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 500 ಕೋಟಿ ರೂ. ಅನುದಾನ ನೀಡಿದೆ. ಜತೆಗೆ 15 ಸಾವಿರ ಶಿಕ್ಷಕರ ನೇಮಕ, ಪಿಯು ಕಾಲೇಜುಗಳಿಗೆ 100 ಕೋಟಿ ರೂ. ಘೋಷಣೆ ಮಾಡಿದೆ. ಈ ಮೂಲಕ ಸರ್ಕಾರಿ ಶಾಲಾ-ಕಾಲೇಜುಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ.
ನೇಮಕಾತಿ ಪರ್ವ:ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ 15 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದೆ. ಈ ಶಿಕ್ಷಕರು ನೇಮಕವಾಗುವವರೆಗೆ 27 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ನಿರ್ವಹಿಸಲು ನಿರ್ಧರಿಸಿದೆ.
ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆಗಳು:ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮಪಡಿಸಲು ಹೋಬಳಿ ಮಟ್ಟದಲ್ಲಿ ಮೂಲಭೂತ ಸೌಕರ್ಯವಿರುವ ಶಾಲೆಗಳನ್ನು ‘ಮಾದರಿ ಶಾಲೆ’ ಆಗಿ ಉನ್ನತೀಕರಿಸಲಿದೆ. ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಪೀಠೋಪಕರಣ ಒದಗಿಸಲು 100 ಕೋಟಿ ರೂ.ಗಳ ಅನುದಾನ ಘೋಷಿಸಿದೆ. ಜತೆಗೆ ಮೂಲಭೂತ ಸೌಲಭ್ಯಗಳನ್ನು ಹೊಂದಿದ ಆಯ್ದ ಪ್ರೌಢಶಾಲೆಗಳನ್ನು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲಿದೆ.
ಗೌರವಧನ ಹೆಚ್ಚಳ:ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಬಿಸಿಯೂಟ ಕಾರ್ಯಕರ್ತರ ಸೇವೆಯನ್ನು ಗುರುತಿಸಿ ಬಿಸಿಯೂಟ ತಯಾರಕರಿಗೆ ಹಾಗೂ ಸಹಾಯಕರಿಗೆ ನೀಡುವ ಗೌರವಧನವನ್ನು 1 ಸಾವಿರಗಳಷ್ಟು ಹೆಚ್ಚಳ ಮಾಡಿದೆ.
ಫುಲೆ ಹೆಸರಲ್ಲಿ ಪ್ರಶಸ್ತಿ:ಬಾಲಕಿಯರ ಶಿಕ್ಷಣಕ್ಕೆ ದೇಶದಲ್ಲಿ ಮೊದಲ ಶಾಲೆ ಸ್ಥಾಪಿಸಿದ ಧೀಮಂತೆ, ಸಾಧಕಿ ಸಾವಿತ್ರಿಬಾಯಿ ಫುಲೆಯವರ ಹೆಸರಿನಲ್ಲಿ ರಾಜ್ಯಮಟ್ಟದ ಆದರ್ಶ ಶಿಕ್ಷಕ/ ಶಿಕ್ಷಕಿ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತದೆ.
ನೂತನ ಪಠ್ಯ:ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನ್ವಯ 3ರಿಂದ 6ನೇ ವಯೋಮಾನದ ಮಕ್ಕಳಿಗೆ ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಆರೈಕೆ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆಯ ಸಮನ್ವಯದೊಂದಿಗೆ 20 ಸಾವಿರ ಅಂಗನವಾಡಿಗಳಲ್ಲಿ 30 ಕೋಟಿ ರೂ.ಗಳ ವೆಚ್ಚದಲ್ಲಿ ನೂತನ ಪಠ್ಯಕ್ರಮ ಜಾರಿಯಾಗಲಿದೆ. ಲೋಕ ಶಿಕ್ಷಣ ನಿರ್ದೇಶನಾಲಯವು ಆಯೋಜಿಸಿರುವ ಕಾರ್ಯಕ್ರಮಗಳನ್ನು ಇನ್ನು ಮುಂದೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮುಂದುವರಿಸಿ, ಮುಂದಿನ 2 ವರ್ಷಗಳಲ್ಲಿ ಒಂದು ಸಾವಿರ ಗ್ರಾಮಪಂಚಾಯಿತಿಗಳನ್ನು ಸಂಪೂರ್ಣ ‘ಸಾಕ್ಷರ ಗ್ರಾಮ ಪಂಚಾಯತ್’ಗಳಾಗಿ ಮಾಡಲು ನಿರ್ಧರಿಸಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ರಾಜ್ಯಾದ್ಯಂತ ಡಿಜಿಟಲ್ ಗ್ರಂಥಾಲಯಗಳನ್ನು ಸ್ಥಾಪಿಸಲು ಹಾಗೂ ಎಲ್ಲ ಇಲಾಖೆಗಳ ವತಿಯಿಂದ ಈಗಾಗಲೇ ಸ್ಥಾಪಿಸಿರುವ ಡಿಜಿಟಲ್ ಗ್ರಂಥಾಲಯಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯೊಂದಿಗೆ ಸಂಯೋಜಿಸಲು ತೀರ್ವನಿಸಿದೆ.
ಜೀವನೋಪಾಯ ವರ್ಷ:ಗ್ರಾಮೀಣ ಜೀವನೋಪಾಯ ಅಭಿಯಾನವು ಒಂದು ದಶಕ ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ 2022-23ನೇ ವರ್ಷವನ್ನು ‘ಜೀವನೋಪಾಯ ವರ್ಷ’ವೆಂದು ಆಚರಣೆ. ದುರ್ಬಲ ವರ್ಗದವರಿಗೆ ಉದ್ಯೋಗ ಒದಗಿಸಲು 1,100 ಕೋಟಿ ರೂ.ಗಳ ಕ್ರಿಯಾ ಯೋಜನೆ ಪ್ರಸ್ತಾಪಿಸಿದ್ದಾರೆ.
ವಿನೂತನ ಮಾದರಿಯ 7 ವಿವಿ ಸ್ಥಾಪನೆ:ಕಾಲೇಜುಗಳ ಮೇಲ್ವಿಚಾರಣೆಯನ್ನು ಸುಧಾರಿಸಲು ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ವಿನೂತನ ಮಾದರಿಯ ಏಳು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುತ್ತದೆ. ಇದಕ್ಕಾಗಿ ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲ ಕೋಟೆ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಈ ವಿವಿಗಳು ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಉಪಯೋಗಿಸದೆ ಕಾರ್ಯನಿರ್ವಹಿಸಲಿವೆ. ಅತ್ಯುನ್ನತ ಗುಣಮಟ್ಟದ ತಾಂತ್ರಿಕ ಬೋಧನೆ-ಕಲಿಕೆಗಳಿಗೆ ಹಾಗೂ ಸಂಶೋಧನೆಯನ್ನು ಉತ್ತೇಜಿಸಲು ರಾಜ್ಯದ ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಕರ್ನಾಟಕ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳಾಗಿ ಉನ್ನತೀಕರಿಸಿ, ಪ್ರತಿಷ್ಠಿತ ವಿದೇಶಿ ವಿವಿಯೊೂಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಗೆ ಮಾರ್ಗದರ್ಶಿನಿ:ಕೆಪಿಎಸ್​ಸಿ, ಯುಪಿಎಸ್​ಸಿ, ಎಸ್​ಎಸ್​ಸಿ, ಬ್ಯಾಂಕಿಂಗ್, ರೈಲ್ವೆ, ಸಿಡಿಎಸ್, ನೀಟ್, ಜೆಇಇ ಮುಂತಾದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ‘ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ’ ಎಂಬ ಹೊಸ ಯೋಜನೆ ಅಡಿ ವಿದ್ಯಾರ್ಥಿಗಳಿಗೆ ಆನ್​ಲೈನ್ ವೇದಿಕೆ ಮೂಲಕ ಉಚಿತ ತರಬೇತಿ ಸಿಗಲಿದೆ.
ನ್ಯಾಕ್ ಮಾನ್ಯತೆ:ರಾಯಚೂರು ವಿಶ್ವವಿದ್ಯಾಲಯಕ್ಕೆ ಪ್ರಯೋಗಶಾಲೆ ಒದಗಿಸಲು 15 ಕೋಟಿ ರೂ. ಒದಗಿಸಲಾಗಿದೆ. ರಾಜ್ಯದ 215 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ನ್ಯಾಕ್ ಮಾನ್ಯತಾ ಪ್ರಕ್ರಿಯೆಗಳಿಗೆ ಒಳಪಡಿಸಲು ಹಾಗೂ 40 ಸರ್ಕಾರಿ ಪಾಲಿಟೆಕ್ನಿಕ್​ಗಳು ಮತ್ತು 4 ಸರ್ಕಾರಿ ಇಂಜಿನಿ ಯರಿಂಗ್ ಕಾಲೇಜುಗಳಲ್ಲಿ ಕೋರ್ಸ್​ಗಳನ್ನು ಎನ್​ಬಿಎ ಮಾನ್ಯತೆಗೆ ಒಳಪಡಿಸಲು ಕ್ರಮ ಕೈಗೊಳ್ಳಲಿದೆ.
ವೇತನ ಹೆಚ್ಚಳ:ಸಂಕ್ರಾಂತಿಯಂದು ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ ಮಾಡಿ ಘೋಷಣೆ ಮಾಡಿದ್ದ ಸರ್ಕಾರ ಅದಕ್ಕೆ ಬಜೆಟ್​ನಲ್ಲಿ ಅನುಮೋದನೆ ಪಡೆದಿದೆ. 11 ಸಾವಿರ ರೂ.ಗಳಿಂದ 32 ಸಾವಿರ ರೂ.ಗೆ ಹೆಚ್ಚಳ ಮಾಡಿದೆ.
ರಾಯರ ಸನ್ನಿಧಿಯಲ್ಲಿ ನಟ ಸುದೀಪ್​; ಶ್ರೀಸುಬುಧೇಂದ್ರ ತೀರ್ಥರಿಂದ ಸನ್ಮಾನ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 17 =
Remember me
