ಪಂಕಜ ಕೆ.ಎಂ.
ಬೆಂಗಳೂರು:ಕಳೆದ ಎರಡು ಮೂರು ತಿಂಗಳಿಂದ ‘ಟೆಲಿ ಮೆಂಟಲ್ ಹೆಲ್ತ್ ಅಸಿಸ್ಟೆನ್ಸ್ ಆ್ಯಂಡ್ ನೆಟ್‌ವರ್ಕಿಂಗ್ ಅಕ್ರಾಸ್ ಸ್ಟೇಟ್ಸ್’ (ಟೆಲಿ ಮನಸ್) ರಾಜ್ಯದಲ್ಲಿ ನಿತ್ಯ 120-150 ಕರೆಗಳನ್ನು ಸ್ವೀಕರಿಸುತ್ತಿದ್ದು, ದೇಶಾದ್ಯಂತ ಈ ಸಂಖ್ಯೆ ನಿತ್ಯ 1,800ರಿಂದ 2 ಸಾವಿರಕ್ಕೆ ಹೆಚ್ಚಿದೆ. ಈ ಪೈಕಿ ಶೇ.29 ಕರೆಗಳು ನಿದ್ರಾ ಸಮಸ್ಯೆಗೆ ಸಂಬಂಧಿಸಿದ್ದಾಗಿವೆ.
ದೇಶಾದ್ಯಂತ ಈವರೆಗೂ 3.10 ಲಕ್ಷ ಕರೆಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ 34 ಸಾವಿರಕ್ಕೂ ಅಧಿಕ (ಶೇ.29) ಕರೆಗಳು ನಿದ್ರಾ ಸಮಸ್ಯೆ ಕುರಿತದ್ದಾಗಿವೆ. ನಿದ್ರೆ ಪ್ರಾರಂಭಿಸುವ ಮತ್ತು ನಿದ್ರೆ ಮಾಡುವ ಸಂದರ್ಭದಲ್ಲಿನ ತೊಂದರೆಗಳು, ಅತಿಯಾದ ನಿದ್ರಾಹೀನತೆ, ನಿದ್ರೆಯ ನಡುವೆ ಎಚ್ಚರ, ನಿದ್ರೆಯ ಹಂತಗಳು, ಹೀಗೆ ನಿದ್ರೆಗೆ ಸಂಬಂಧಿಸಿದ ನಾನಾ ರೀತಿಯ ಸಮಸ್ಯೆಗಳು ಸೇರಿವೆ.
ನಿದ್ರಾ ಭಂಗಕ್ಕೆ ಕಾರಣಗಳು ಹಲವಾರು. ಒತ್ತಡ, ಪರಸ್ಪರ ಸಮಸ್ಯೆಗಳು, ಆರ್ಥಿಕ ಸಮಸ್ಯೆ, ಆತಂಕ, ಖಿನ್ನತೆ, ಚಿಂತೆ, ಜೀವನ ಶೈಲಿ ಹಾಗೂ ಆಹಾರ ಕ್ರಮವೂ ಸೇರಿವೆ. ನಿದ್ರಾ ಸಮಸ್ಯೆಯನ್ನು ನಿರ್ಲಕ್ಷಿಸದೆ ಆರಂಭದಲ್ಲೇ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಸಲಹೆ ಪಡೆಯುವುದು ಸೂಕ್ತ ಎನ್ನುತ್ತಾರೆ ನಿಮ್ಹಾನ್ಸ್‌ನ ಮನೋವೈದ್ಯಶಾಸದ ಪ್ರಾಧ್ಯಾಪಕ ಮತ್ತು ಟೆಲಿ ಮನಸ್‌ನ ಪ್ರಧಾನ ತನಿಖಾಧಿಕಾರಿ ಸಿ. ನವೀನ್‌ಕುಮಾರ್.
ಆರೋಗ್ಯದ ಮೇಲೆ ಪರಿಣಾಮ:ನಿದ್ರಾ ಭಂಗಕ್ಕೆ ಒಳಗಾದ ವ್ಯಕ್ತಿಯ ಒಟ್ಟಾರೆ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲ, ನಿತ್ಯದ ಚಟುವಟಿಕೆಗಳ ಮೇಲೂ ಪರಿಣಾಮ ಬೀರಲಿದೆ. ಕೆಲವರಲ್ಲಿ ದೀರ್ಘಾವಧಿ ಸಮಸ್ಯೆಗಳಿಗೂ (ನೆನಪಿನ ಶಕ್ತಿ ಕುಂದುವುದು, ಕಿರಿಕಿರಿ, ರೋಗನಿರೋಧಕ ಶಕ್ತಿ ಕುಗ್ಗುವುದು, ಅಧಿಕ ರಕ್ತದೊತ್ತಡ, ಹೃದಯರಕ್ತನಾಳದ ಸಮಸ್ಯೆ ಇತ್ಯಾದಿ) ಕಾರಣವಾಗಲಿದೆ. ಹಾಗಾಗಿ ದೇಹಕ್ಕೆ ಅಗತ್ಯವಾದಷ್ಟು ನಿದ್ರೆ ಪಡೆಯುವುದು ಅತ್ಯಗತ್ಯ. ನಿದ್ರೆ ದೇಹವನ್ನು ಆರೋಗ್ಯಕರವಾಗಿಡುವ ಹಾಗೂ ಅಗತ್ಯ ರಾಸಾಯನಿಕ ಸಮತೋಲನ ಕಾಯ್ದುಕೊಳ್ಳಲು ಪೂರಕವಾದ ಪ್ರಕ್ರಿಯೆ ಎಂದು ಸಲಹೆ ನೀಡಿದರು.
ಪರಿಹಾರಗಳು ಏನು?:ನಿದ್ರಾ ಭಂಗಗಳಿಗೆ ಹಲವು ಪರಿಹಾರಗಳಿದ್ದು, ಮೊದಲು ಜೀವನಶೈಲಿ ಹಾಗೂ ಆಹಾರ ಕ್ರಮ ಸರಿಪಡಿಸಿಕೊಳ್ಳಬೇಕಾಗುತ್ತದೆ. ಜೊತೆಗೆ ಯೋಗ, ಧ್ಯಾನ, ವ್ಯಾಯಾಮಗಳ ಮೂಲಕ ಒತ್ತಡ ನಿರ್ವಹಣೆ ಮಾಡಿಕೊಳ್ಳಬೇಕು. ನಿದ್ರೆಯ ನೈರ್ಮಲ್ಯ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಅಂದರೆ ನಿದ್ರೆಗೆ ಕೆಲವೊಮ್ಮೆ ಮಲಗುವ ಸ್ಥಳ ಎಷ್ಟು ಸ್ವಚ್ಛತೆಯಿಂದ ಕೂಡಿದೆ ಎನ್ನುವುದೂ ಮುಖ್ಯವಾಗುತ್ತದೆ. ಹಾಗಾಗಿ ವೈದ್ಯರಿಂದ ಸೂಕ್ತ ಸಲಹೆ ಪಡೆದು ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.
ಸರ್ಕಾರದ ಸಹಾಯವಾಣಿ‘ಟೆಲಿ ಮನಸ್’ ಇದು ಸರ್ಕಾರದಿಂದ ನಡೆಸಲಾಗುತ್ತಿರುವ ಮಾನಸಿಕ ಆರೋಗ್ಯ ಸಹಾಯವಾಣಿಯಾಗಿದ್ದು, ಕೇಂದ್ರ ಸರ್ಕಾರದಿಂದ 2022ರ ಅಕ್ಟೋಬರ್‌ನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಪ್ರಾರಂಭಿಸಲಾಯಿತು. ಈ 11 ತಿಂಗಳಲ್ಲಿ 3.10 ಲಕ್ಷಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಲಾಗಿದೆ. ದೇಶದಲ್ಲಿ ಈಗಾಗಲೆ 26 ರಾಜ್ಯಗಳು ಹಾಗೂ 6 ಕೇಂದ್ರಾಡಳಿತ ಪ್ರದೇಶಗಳಲ್ಲಿ ಟೆಲಿ ಮನಸ್ ಕಾರ್ಯನಿರ್ವಹಿಸುತ್ತಿದೆ. ಉಳಿದಂತೆ ಹಿಮಾಚಲ ಪ್ರದೇಶ ಮತ್ತು ಸಿಕ್ಕಿಂ ಹಾಗೂ ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ಪ್ರಾರಂಭವಾಗಬೇಕಿದೆ. ಕರ್ನಾಟಕದಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಐಇಸಿ ಕಾರ್ಯಕ್ರಮಟೆಲಿ ಮನಸ್ ಸೇವೆ ಬಹಳಷ್ಟು ಜನರಿಗೆ ಉಪಯುಕ್ತವಾಗಿದೆ. ಆದರೆ ಇದರ ಬಗ್ಗೆ ಜನರಿಗೆ ಸಮರ್ಪಕ ಮಾಹಿತಿ ಇಲ್ಲ. ಈ ಕುರಿತು ಜನರಿಗೆ ಅರಿವು ಮೂಡಿಸುವ ಅಗತ್ಯವಿದೆ. ಹಾಗಾಗಿ ಆರು ತಿಂಗಳ ಕಾಲ ನಿರಂತರವಾಗಿ ‘ಇನ್‌ಾರ್ಮೆಷನ್ ಎಜುಕೇಷನ್ ಕಮ್ಯುನಿಕೇಷನ್’ (ಐಇಸಿ) ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಸಿ. ನವೀನ್‌ಕುಮಾರ್ ಹೇಳಿದರು.
ಟೆಲಿ ಮನಸ್ 24 ಗಂಟೆ ನಿರಂತರ ಸೇವೆಗಾಗಿ ಟೋಲ್ ಫ್ರೀ ನಂ: 14416 ಅಥವಾ ವೆಬ್‌ಸೈಟ್ http://telemanas.mohfw.gov.in ಸಂಪರ್ಕಿಸಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
