ರಾಜ್ಯದ ಪ್ರಮುಖ ದೇವಾಲಯಗಳಿಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು ಭೂಗಳ್ಳರು ಹಾಗೂ ಅತಿಕ್ರಮಣದಾರರ ಪಾಲಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸಮೀಕ್ಷೆ ನಡೆಸಿ ದೇವಾಲಯಗಳ ಆಸ್ತಿಗಳನ್ನು ರಕ್ಷಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಕಳೆದ ಸೆಪ್ಟಂಬರ್ ಅಂತ್ಯದವರೆಗಿನ ವರದಿ ಪ್ರಕಾರ, 176 ಒತ್ತುವರಿ ಪ್ರಕರಣಗಳು ದೃಢಪಟ್ಟಿವೆ. ಹೀಗಾಗಿ ದೇಗುಲಗಳ ಸ್ಥಿರಾಸ್ತಿಗಳ ದಾಖಲೀಕರಣದತ್ತ ಮುಜರಾಯಿ ಇಲಾಖೆ ಗಮನಹರಿಸಿದ್ದು, ಭೂಗಳ್ಳರಿಂದ ಈ ಜಮೀನು ವಾಪಸ್ ಪಡೆಯುವ ನಿಟ್ಟಿನಲ್ಲಿ ಕಾನೂನು ಕ್ರಮಕ್ಕೆ ಮುಂದಾಗಿದೆ.
ಪೌರಾಣಿಕ, ಐತಿಹಾಸಿಕ, ಪಾರಂಪರಿಕ, ಸಾಂಸ್ಕೃತಿಕ ಹಿನ್ನೆಲೆ ಹಾಗೂ ಜಾಗೃತ ದೈವಗಳೆಂಬ ಕಾರಣಕ್ಕೆ ಪ್ರಸಿದ್ಧವಾದ ದೇವಸ್ಥಾನಗಳು ಸೇರಿ 36,000 ದೇವಾಲಯಗಳು ಮುಜರಾಯಿ ಇಲಾಖೆ ಸುಪರ್ದಿಯಲ್ಲಿವೆ. ಸಾವಿರಾರು ಎಕರೆ ಭೂಮಿ ಈ ದೇವಸ್ಥಾನಗಳ ಒಡೆತನದಲ್ಲಿವೆ. ಇವುಗಳ ಮೌಲ್ಯ ಒಟ್ಟು 10 ಲಕ್ಷ ಕೋಟಿ ರೂ.ಗೂ ಅಧಿಕ ಎಂದು ಅಂದಾಜಿಸಲಾಗಿದೆ.
ಅಧಿಕಾರಿಗಳಿಗೆ ಜವಾಬ್ದಾರಿ: ಪ್ರಭಾವಿಗಳ ಕುತಂತ್ರ, ಹಣದಾಸೆಗೆ ದೇವಾಲಯಗಳ ಜಮೀನು ಕೈತಪ್ಪಿ ಹೋಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅತಿಕ್ರಮಣ ಪತ್ತೆ ಜವಾಬ್ದಾರಿಯನ್ನು ಇಲಾಖೆ
ಅಧಿಕಾರಿಗಳಿಗೆ ಒಪ್ಪಿಸಿದೆ. ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಭೂಮಾಪನ ಇಲಾಖೆ ನೆರವು ಪಡೆದು ಸಮೀಕ್ಷೆ ನಡೆಸಲು ಸೂಚಿಸಿದೆ. ಸರ್ಕಾರಿ ಜಮೀನು ಒತ್ತುವರಿಗೆ ಸಂಬಂಧಿಸಿದಂತೆ ಎ.ಟಿ. ರಾಮಸ್ವಾಮಿ ಆಯೋಗದ ವರದಿಯಲ್ಲಿ ಉಲ್ಲೇಖಿಸಿದ ಅಂಶಗಳನ್ನು ಗಣನೆಗೆ ತೆಗೆದುಕೊಂಡಿದೆ. ಒತ್ತುವರಿ ತೆರವು ಜತೆಗೆ ದೇಗುಲಗಳ ಆಸ್ತಿ ಜತನ ಮಾಡುವುದಕ್ಕೂ ಆದ್ಯತೆ ನೀಡಲಾಗಿದೆ. ಕೋರ್ಟ್, ಜಿಲ್ಲಾಧಿಕಾರಿ
ಕೋರ್ಟ್​ನಲ್ಲಿರುವ ಹತ್ತಾರು ವ್ಯಾಜ್ಯಗಳನ್ನು ಇತ್ಯರ್ಥಪಡಿಸಬೇಕಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಯಾವ ಶ್ರೇಣಿ ದೇವಸ್ಥಾನ ಎಷ್ಟಿವೆ?:ವಾರ್ಷಿಕ 25 ಲಕ್ಷ ರೂ. ಅಧಿಕ ಆದಾಯವುಳ್ಳ ದೇವಸ್ಥಾನಗಳನ್ನು ಎ ಗ್ರೇಡ್, 5-25 ಲಕ್ಷ ರೂ. ಆದಾಯ ದವರೆಗಿನ ದೇವಾಲಯಗಳನ್ನು ಬಿ ಗ್ರೇಡ್, 5 ಲಕ್ಷ ರೂ. ಹಾಗೂ ಅದಕ್ಕಿಂತ ಕಡಿಮೆ ಆದಾಯವಿರುವ ದೇಗುಲಗಳನ್ನು ಸಿ ಗ್ರೇಡ್ ಎಂದು ವರ್ಗೀಕರಿಸಲಾಗಿದೆ. ಈ ಮಾನದಂಡದ ಪ್ರಕಾರ ಎ ಗ್ರೇಡ್- 205, ಬಿ ಗ್ರೇಡ್- 139 ಹಾಗೂ ಸಿ ಗ್ರೇಡ್- 34,220 ದೇವಾಲಯಗಳು ರಾಜ್ಯದಲ್ಲಿವೆ.
ಗುರುತಿಸಿದ ಜಮೀನು:ಎ ಗ್ರೇಡ್​ನ 56 ದೇವಸ್ಥಾನಗಳ ಅಳತೆ ಪೂರ್ಣಗೊಂಡಿದ್ದು, ನಗರ ಪ್ರದೇಶದಲ್ಲಿ 2,01,444.49 ಚದರ ಮೀಟರ್, ಕಂದಾಯ ಭೂಮಿ 1523.19 ಎಕರೆ ಇದೆ ಎಂದು ಗುರುತಿಸಲಾಗಿದೆ. ಬಿ ಗ್ರೇಡ್​ನ 27 ದೇವಾಲಯಗಳಿಗೆ ಸೇರಿದ ನಗರ ಪ್ರದೇಶದ 50,399.86 ಚದರ ಮೀಟರ್ ಭೂಮಿ ಇದ್ದು, ಕಂದಾಯದ 3125.06 ಎಕರೆ ಜಮೀನಿದೆ. ಸಿ ಗ್ರೇಡ್​ನ 164 ದೇವಾಲಯಗಳ ಜಮೀನಿನ ಅಳತೆ ಮುಗಿದಿದ್ದು, ನಗರ ಮಾಪನದಲ್ಲಿ ಒಟ್ಟು 1,74,323.61 ಚದರ ಮೀಟರ್, ಕಂದಾಯದಲ್ಲಿ 14,269.36 ಎಕರೆ ಜಮೀನು ಗುರುತಿಸಲಾಗಿದೆ.
ಕಾಲಾವಕಾಶ ಬೇಕು:ಸಮೀಕ್ಷೆ ತ್ವರಿತವಾಗಿ ಪೂರ್ಣಗೊಳ್ಳಲು ಸಾಧ್ಯವಿದ್ದರೂ ದಾಖಲೀಕರಣ, ಒತ್ತುವರಿ ಪ್ರಮಾಣವನ್ನು ನಿಖರವಾಗಿ ತಿಳಿದುಕೊಳ್ಳುವುದಕ್ಕೆ ಕಾಲಾವಕಾಶ ಬೇಕಾಗುತ್ತದೆ. ಕರೊನಾ, ಭೂಮಾಪಕರ ಕೊರತೆ ಇನ್ನಿತರ ಕಾರಣಗಳಿಂದ ಕಾರ್ಯ ತುಸು ವಿಳಂಬವಾಗಿದೆ. ಅಧಿಕಾರಿಗಳ ಹಂತದ ಸಭೆಗಳು ಪ್ರಗತಿಯಲ್ಲಿವೆ. ಇದೊಂದು ದೀರ್ಘಾವಧಿ ಪ್ರಕ್ರಿಯೆಯಾಗಿದೆ. ಕರ್ನಾಟಕ ಭೂಕಂದಾಯ ಅಧಿನಿಯಮ 1964, ಭೂ ಕಬಳಿಕೆ ನಿಷೇಧ ಕಾಯ್ದೆ 2011 ಹಾಗೂ ಹಿಂದು ಧಾರ್ವಿುಕ ಸಂಸ್ಥೆಗಳು ಹಾಗೂ ಧರ್ವದಾಯ ದತ್ತಿಗಳ ಅಧಿನಿಯಮ-1967 ಸಹಿತ ವಿವಿಧ ಕಾನೂನಿನಡಿ ಕ್ರಮಕೈಗೊಳ್ಳಲಾಗುತ್ತದೆ. ಇಲಾಖೆಗೆ ನ್ಯಾಯಾಂಗ ಅಧಿಕಾರವಿಲ್ಲ. ಜಿಲ್ಲಾಧಿಕಾರಿ ನೆರವಿನೊಂದಿಗೆ ಒತ್ತುವರಿ ತೆರವು, ತಗಾದೆ ವಿಲೇವಾರಿಗೆ ಗಮನಹರಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಎಷ್ಟು ಜಮೀನು ಒತ್ತುವರಿ?:ಎ ಗ್ರೇಡ್ ದೇವಾಲಯಗಳ ಒಟ್ಟು ನಗರ ಮಾಪನದಲ್ಲಿ 3433.33 ಚದರ ಮೀಟರ್, ಕಂದಾಯದಲ್ಲಿ 387.28 ಎಕರೆ, ಬಿ ಗ್ರೇಡ್ ದೇವಸ್ಥಾನಗಳ ಒಟ್ಟು ನಗರ ಮಾಪನ ಭೂಮಿಯಲ್ಲಿ 193.36 ಚ.ಮೀ, ಕಂದಾಯದಲ್ಲಿ 2.12 ಎಕರೆ, ಸಿ ಗ್ರೇಡ್ ದೇವಸ್ಥಾನಗಳ ಒಟ್ಟು ನಗರ ಮಾಪನ ಜಮೀನಿನ ಪೈಕಿ 886.32 ಚ.ಮೀ., ಕಂದಾಯದಲ್ಲಿ 192.27 ಎಕರೆ ಜಮೀನು ಒತ್ತುವರಿದಾರರ ಪಾಲಾಗಿದೆ.
ಕೋಟ್
ಮುಜರಾಯಿ ದೇವಸ್ಥಾನಗಳ ಜಮೀನಿನ ಅಳತೆ, ದಾಖಲೀಕರಣ, ಒತ್ತುವರಿ ಪತ್ತೆ ಕಾರ್ಯ ಪ್ರಗತಿಯಲ್ಲಿದ್ದು, ಪೂರ್ಣ ಪ್ರಮಾಣದ ವರದಿ ಸಿದ್ಧಪಡಿಸುವುದಕ್ಕೆ ಕಾಲಾವಕಾಶ ಅಗತ್ಯ. ಆಯಾ ಜಿಲ್ಲಾಧಿಕಾರಿಗಳ ನೆರವು ಪಡೆದು ಗುರುತಿಸಿದ ಜಮೀನು ಅತಿಕ್ರಮಣ ತೆರವಿಗೂ ಕ್ರಮವಹಿಸಲಾಗಿದೆ.
-ಕೆ.ಎ.ದಯಾನಂದ ಆಯುಕ್ತ, ಧಾರ್ವಿುಕ ಮತ್ತು ದತ್ತಿ ಇಲಾಖೆ.
ನೈಟ್​ ಶಿಫ್ಟ್​ ಉದ್ಯೋಗಿಗಳ ಗಮನಕ್ಕೆ.. ಯಾವುದಕ್ಕೂ ಇದು ನಿಮ್ಮ ಜತೆಗಿರಲಿ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + 14 =
Remember me
