ಕರೊನಾವೈರಸ್ ಜನರನ್ನಷ್ಟೇ ಅಲ್ಲದೆ, ದೇವರನ್ನೂ ‘ಲಾಕ್’ ಮಾಡಿಸಿತ್ತು! ಇದೀಗ ಲಾಕ್​ಡೌನ್ ಸಡಿಲಕೆ ಹಿನ್ನೆಲೆ ಸೋಮವಾರ (ಜೂ.8)ದಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲು ರಾಜ್ಯಾದ್ಯಂತ ದೇವಾಲಯಗಳಲ್ಲಿ ಭರದ ಸಿದ್ಧತೆ ನಡೆದಿದೆ. ಸರ್ಕಾರದ ಮಾರ್ಗಸೂಚಿಯಂತೆ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ವ್ಯವಸ್ಥೆ, ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ. ಮಂತ್ರಾಲಯ, ಉಡುಪಿ, ಹೊರನಾಡು, ಸಿಗಂದೂರು ದೇವಸ್ಥಾನಗಳಲ್ಲಿ ಸದ್ಯಕ್ಕೆ ದರುಶನ ಭಾಗ್ಯವಿಲ್ಲ. ಆಧಾರ್ ಕಾರ್ಡ್ ತೋರಿಸಿ, ಮೊಬೈಲ್ ಸಂಖ್ಯೆ ನೀಡಿದರಷ್ಟೇ ಆನೆಗುಂದಿ ಆಂಜನೇಯ ನೋಡಬಹುದು. ದೇಗುಲಗಳಲ್ಲಿ ಏನೆಲ್ಲ ವ್ಯವಸ್ಥೆ ಮಾಡಲಾಗಿದೆ ಎಂಬುದರ ಮಾಹಿತಿ ಇಲ್ಲಿದೆ.
ಆಧಾರ ಕಾರ್ಡ್ ಕಡ್ಡಾಯ:ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ಅಂಜನಾದ್ರಿ ಬೆಟ್ಟದ ದೇವರ ದರುಶನಕ್ಕೆ ಆಧಾರ್​ಕಾರ್ಡ್ ಮತ್ತು ಮೊಬೈಲ್ ನಂಬರ್ ಕಡ್ಡಾಯ. 65 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 10 ವರ್ಷದೊಳಗಿನವರಿಗೆ ದೇವಾಲಯಕ್ಕೆ ಪ್ರವೇಶವಿಲ್ಲ ಎಂದು ತಿಳಿಸಲಾಗಿದೆ.
ಮುರ್ಡೆಶ್ವರ:ಮುರ್ಡೆಶ್ವರ ದೇವಸ್ಥಾನ ಪ್ರವೇಶ ದ್ವಾರದ ಹೊರಗೆ ಸರತಿ ನಿಲ್ಲಲು ಪ್ರತಿ ಆರು ಅಡಿಗೆ ಗುರುತು ಹಾಕಲಾಗಿದೆ. ಕಾಲು ತೊಳೆಯುವ, ಪ್ರತಿಯೊಬ್ಬರ ಕೈಗೆ ಸ್ಯಾನಿಟೈಸರ್, ಜ್ವರ ತಪಾಸಣೆಗೆ ಒಳಪಡಿಸಲು ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ದೇವರ ದರ್ಶನ ಪಡೆಯುವ ಸ್ಥಳದಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಇರಲಿದ್ದು, ಅವರು ಹೊರಬಂದ ನಂತರವೇ ಇನ್ನೊಬ್ಬರನ್ನು ಒಳಗೆ ಬಿಡಲು ನಿರ್ಣಯಿಸಲಾಗಿದೆ.
ದೇವಲ ಗಾಣಗಾಪುರ:ದೇವಲ ಗಾಣಗಾಪುರದ ಐತಿಹಾಸಿಕ ಶ್ರೀ ದತ್ತಾತ್ರೇಯ ಮಂದಿರ ಆರಂಭಕ್ಕೆ ಸಿದ್ಧತೆ ಪೂರ್ಣಗೊಂಡಿದೆ. ಮಂದಿರ ಶುದ್ಧಗೊಳಿಸಲಾಗಿದ್ದು, ದರ್ಶನಕ್ಕೆ ಆಗಮಿಸುವ ಭಕ್ತರು ದೈಹಿಕ ಅಂತರ ಕಾಪಾಡುವಂತೆ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಫಲಕದಲ್ಲಿ ಸೂಚಿಸಲಾಗಿದೆ. ಮಂದಿರದ ಮುಖ್ಯದ್ವಾರ ಬಳಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ.
ಶಿರಸಿ ಮಾರಿಕಾಂಬಾ:ಮಾರಿಕಾಂಬಾ ದೇವಾಲಯದ ಹೊರಗಡೆಯೇ ಭಕ್ತರು ಕಾಲು ತೊಳೆದು ಒಳಬರುವಂತೆ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಜಾಗೃತಿ ಮೂಡಿಸಲು , ಕರೊನಾದಿಂದ ರಕ್ಷಿಸಿಕೊಳ್ಳಲು ಸ್ವಚ್ಛತೆಗೆ ಆದ್ಯತೆ ನೀಡಲು ಸೂಚನಾ ಫಲಕ ಹಾಕಲಾಗಿದೆ.
ಶ್ರೀಕ್ಷೇತ್ರ ಧರ್ಮಸ್ಥಳ:ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ದೇವಸ್ಥಾನದ ಒಳಪ್ರವೇಶ ಮಾಡುವವರು ಮುಖಕ್ಕೆ ಮಾಸ್ಕ್ ಧರಿಸಿರಬೇಕು, ಥರ್ಮಲ್ ಸ್ಕ್ರೀನಿಂಗ್​ಗೆ ಒಳಪಡಬೇಕು, ಅರ್ಚಕ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ, ಸ್ವಯಂಸೇವಕರು ಕೈಗೊಳ್ಳಬೇಕಾದ ಕ್ರಮಗಳನ್ನು ವಿಮಶಿಸಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅನ್ನಪೂರ್ಣ ಭೋಜನಾಲಯದಲ್ಲಿ ಭೋಜನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಕೊಲ್ಲೂರು ಶ್ರೀ ಮೂಕಾಂಬಿಕಾ:ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ನಿಯಮಾವಳಿ ಅನುಸರಿಸಿ ದರ್ಶನಕ್ಕೆ ಅನುವು ನೀಡಲಾಗುವುದು. ತೀರ್ಥ ಪ್ರಸಾದ ವಿತರಣೆ ಇರುವುದಿಲ್ಲ. ಹಿಂದಿನ ಬಾಗಿಲಿನಿಂದ ಪ್ರವೇಶಿಸಿ ದೇವರ ದರ್ಶನ ಪಡೆದು ಆವರಣದಲ್ಲಿ ಕೂರದೆ ತಕ್ಷಣ ಹೊರಬರಬೇಕು. ಸಾಮಾಜಿಕ ಅಂತರ ನಿಯಮ ಪ್ರಕಾರ, ಅನ್ನ ಪ್ರಸಾದ ವಿತರಣೆ ನಡೆಯಲಿದೆ. ಮಳೆಯಿಂದ ರಕ್ಷಣೆಗಾಗಿ ತಾತ್ಕಾಲಿಕ ಮಾಡು ನಿರ್ವಿುಸಲಾಗಿದೆ. ಒಳಗಿನ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗುತ್ತದೆ.
ಕುಕ್ಕೆ ಸುಬ್ರಹ್ಮಣ್ಯ:ದಕ್ಷಿಣ ಭಾರತದ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲ ವಾಗುವಂತೆ ಪೇಂಟ್​ನಲ್ಲಿ ಚೌಕಗಳನ್ನು ರಚಿಸಲಾಗಿದೆ. ಥರ್ಮಲ್ ಸ್ಕ್ಯಾನರ್, ಪ್ರಧಾನ ದ್ವಾರದ ಬಳಿ ಪ್ರತಿ ಭಕ್ತರಿಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡ ಲಾಗಿದೆ. ತೀರ್ಥ, ಪ್ರಸಾದ, ಭೋಜನ ವ್ಯವಸ್ಥೆ ಇರುವುದಿಲ್ಲ.
ಎಡೆಯೂರು ಸಿದ್ದಲಿಂಗೇಶ್ವರ:ತುಮಕೂರು ಜಿಲ್ಲೆಯ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನ, ದೇವರಾಯನದುರ್ಗ ಶ್ರೀ ಭೋಗನರಸಿಂಹಸ್ವಾಮಿ ಹಾಗೂ ಗೊರವನಹಳ್ಳಿ ಲಕ್ಷ್ಮೀದೇವಸ್ಥಾನದಲ್ಲಿ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇವಸ್ಥಾನ ಹಾಗೂ ಆವರಣವನ್ನು ಶುಚಿಗೊಳಿಸಿ, ಸೋಂಕು ನಿವಾರಕ ಸಿಂಪಡಿಸಲಾಗಿದೆ.
ಚಾಮುಂಡೇಶ್ವರಿ, ನಂಜುಂಡೇಶ್ವರ:ಮೈಸೂರು ಜಿಲ್ಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇಗುಲ, ನಂಜನಗೂಡಿನ ಶ್ರೀಕಂಠೇಶ್ವರ ಸೇರಿ ಎಲ್ಲ ದೇವಸ್ಥಾನಗಳನ್ನು ಜೂ.8ರಿಂದ ತೆರೆಯಲು ಸಿದ್ಧತೆ ಕೈಗೊಳ್ಳಲಾಗಿದೆ. ದೇವಸ್ಥಾನಗಳಲ್ಲಿ ಭಕ್ತರಿಗೆ ಸ್ಯಾನಿಟೈಸರ್, ಮಾಸ್ಕ್ ಸೇರಿ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.
ಮಲೆ ಮಹದೇಶ್ವರ:ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಸ್ವಾಮಿ, ಬಿಳಿಗಿರಿರಂಗನಾಥಸ್ವಾಮಿ, ಹಿಮವದ್ ಗೋಪಾಲಸ್ವಾಮಿ, ಚಾಮರಾಜೇಶ್ವರ, ಮಧ್ಯರಂಗ ದೇಗುಲಗಳಲ್ಲಿ ಭಕ್ತರ ಸಾಮಾಜಿಕ ಅಂತರಕ್ಕೆ ವೃತ್ತಗಳನ್ನು ಗುರುತು ಹಾಕಲಾಗುತ್ತಿದೆ. ಮಲೆ ಮಹದೇಶ್ವರ ಸ್ವಾಮಿ ದೇಗುಲದಲ್ಲಿ ತಿರುಪತಿ ಮಾದರಿಯಲ್ಲಿ ಭಕ್ತರಿಗೆ ದೇವರ ದರ್ಶನ, ಲಾಡು ಕೌಂಟರ್​ನಲ್ಲಿ ಜನಜಂಗುಳಿ ತಪ್ಪಿಸಲು ಮುಂಜಾಗ್ರತೆ ವಹಿಸಲಾಗಿದೆ.
15ರ ಬಳಿಕ ಮಂತ್ರಾಲಯ ರಾಯರ ದರ್ಶನ:ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ ಬೃಂದಾವನಕ್ಕೆ ಜೂ.15ರ ನಂತರ ಭಕ್ತರಿಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ. ಆಂಧ್ರಪ್ರದೇಶದ ಮುಜರಾಯಿ ಇಲಾಖೆ ನಿರ್ದೇಶನ ಅನುಸಾರ ಪ್ರಾಯೋಗಿಕವಾಗಿ ಜೂ.8ರಿಂದ ಶ್ರೀಮಠದ ಸಿಬ್ಬಂದಿ ಮತ್ತವರ ಕುಟುಂಬ ಸದಸ್ಯರು, ಗ್ರಾಮಸ್ಥರಿಗೆ ದರ್ಶನಕ್ಕೆ ಅವಕಾಶ ನೀಡಿ, ಮುಂದಿನ ದಿನಗಳಲ್ಲಿ ಭಕ್ತರಿಗೆ ಅವಕಾಶ ಕೊಡಲು ತೀರ್ವನಿಸಲಾಗಿದೆ. ಕೇವಲ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಪ್ರಾಕಾರದಲ್ಲಿ ಪ್ರದಕ್ಷಿಣೆ, ಉರುಳು ಸೇವೆ, ತೀರ್ಥ, ಮಂತ್ರಾಕ್ಷತೆ, ಪ್ರಸಾದ, ಮುದ್ರಾ ಪ್ರದಾನ, ಪಾದಪೂಜೆ ಇರುವುದಿಲ್ಲ. ಅರ್ಜಿತ ಸೇವೆಗಳನ್ನು ಪರೋಕ್ಷ ಪದ್ಧತಿಯಲ್ಲಿ ನಿರ್ವಹಿಸಲಾಗುತ್ತಿದೆ. ಭಕ್ತರು ಕಡ್ಡಾಯವಾಗಿ ಆಧಾರ್ ಸೇರಿ ಇತರ ಯಾವುದಾದರೂ ಗುರುತಿನ ಚೀಟಿ ತರುವುದು, ಮೊಬೈಲ್ ಸಂಖ್ಯೆ ಕೊಡುವುದು ಕಡ್ಡಾಯ.
ಬೆಳಗಾವಿ ಜಿಲ್ಲೆಯಲ್ಲಿ ನಿರ್ಬಂಧ:ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ರೇಣುಕಾದೇವಿ ಯಲ್ಲಮ್ಮ, ಶಿರಸಂಗಿಯ ಕಾಳಿಕಾ ದೇವಿ, ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕ ದೇಗುಲ, ರಾಮದುರ್ಗ ತಾಲೂಕಿನ ಗೊಡಚಿ ವೀರಭದ್ರೇಶ್ವರ ದೇವಸ್ಥಾನಗಳಲ್ಲಿ ಜೂ.15ರವರೆಗೆ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಇಲ್ಲ. ನೆರೆಯ ರಾಜ್ಯಗಳಿಂದ ಹೆಚ್ಚಿನ ಭಕ್ತರು ಆಗಮಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕರೊನಾ ವೈರಸ್ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ದೇಗುಲ ತೆರೆಯದಿರಲು ದೇವಸ್ಥಾನ ಆಡಳಿತ ಮಂಡಳಿಗಳು ನಿರ್ಧರಿಸಿವೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಪ್ರಮಾಣ ಏರುತ್ತಿರುವ ಹಿನ್ನೆಲೆಯಲ್ಲಿ ಕೊಲ್ಲಾಪುರ ಮಹಾಲಕ್ಷೀ ದೇವಸ್ಥಾನಕ್ಕೆ ಭಕ್ತರ ಪ್ರವೇಶ ಬಂದ್ ಮಾಡಲಾಗಿದೆ.
ಸದ್ಯಕ್ಕಿಲ್ಲ ದರುಶನ:ಉಡುಪಿಯ ಶ್ರೀಕೃಷ್ಣ, ಹೊರನಾಡು ಅನ್ನಪೂರ್ಣೆಶ್ವರಿ, ಶಿವಮೊಗ್ಗ ಜಿಲ್ಲೆಯ ಸಿಗಂದೂರೇಶ್ವರಿ ಇನ್ನಿತರ ದೇವಸ್ಥಾನಗಳಲ್ಲಿ ಸದ್ಯಕ್ಕೆ ದರುಶನ ಭಾಗ್ಯ ಕಲ್ಪಿಸಿಲ್ಲ. ‘ಶ್ರೀಕೃಷ್ಣ ದೇವರ ದರ್ಶನಕ್ಕೆ ಜುಲೈವರೆಗೆ ಕಾಯಬೇಕಿದೆ. ಮುಂದಿನ ಬೆಳವಣಿಗೆಗಳನ್ನು ನೋಡಿ ದರ್ಶನ ವ್ಯವಸ್ಥೆ ಮಾಡುತ್ತೇವೆ’ ಎಂದು ಪರ್ಯಾಯ ಅದಮಾರು ಶ್ರೀ ಈಶಪ್ರೀಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಸದ್ಯಕ್ಕೆ ದೇವರ ದರ್ಶನ, ಪೂಜೆ, ವಾಸ್ತವ್ಯದ ಅವಕಾಶ ಮುಂದೂಡಲಾಗಿದೆ. ನಿತ್ಯವೂ ಫೇಸ್​ಬುಕ್ ಆನ್​ಲೈನ್ ಮಹಾಮಂಗಳಾರತಿ ದರ್ಶನ ವ್ಯವಸ್ಥೆ ಮುಂದುವರಿಸಲಾಗುವುದು ಎಂದು ಹೊರನಾಡು ಶ್ರೀ ಅನ್ನಪೂರ್ಣೆಶ್ವರಿ ದೇವಸ್ಥಾನ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಜೂ.8ರಿಂದ ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದ್ದು, ಸಾಮಾನ್ಯ ಪೂಜೆ ಸಲ್ಲಿಸಬಹುದಾಗಿದೆ. ತೀರ್ಥ ವಿತರಣೆ ಇರುವುದಿಲ್ಲ. ಕುಂಕುಮಾರ್ಚನೆ, ಗಂಧ ಪ್ರಸಾದ ನೀಡಲು ವ್ಯವಸ್ಥೆ ಕಲ್ಪಿಸಲಾಗುವುದು.
| ಕೋಟ ಶ್ರೀನಿವಾಸ ಪೂಜಾರಿ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
