
ಬೆಂಗಳೂರು:ರಾಜ್ಯದ 10 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಭಾರಿ ಮುಖಭಂಗ ಅನುಭವಿಸಿದ್ದು, ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಪಡೆದು ಬೀಗಿದೆ. ಜೆಡಿಎಸ್ ಎರಡನೇ ಸ್ಥಾನದಲ್ಲಿರುವುದು ವಿಶೇಷ. ಸಾಮಾನ್ಯವಾಗಿ ನಗರ ಪ್ರದೇಶದ ಮತದಾರರು ಬಿಜೆಪಿ ಬೆಂಬಲಿಸುತ್ತಾರೆ ಎಂಬ ಮಾತನ್ನು ಈ ಚುನಾವಣೆ ಫಲಿತಾಂಶ ಸುಳ್ಳಾಗಿಸಿದೆ. ನಗರ ಪ್ರದೇಶದ ಮತದಾರರೇ ಕಮಲಪಡೆಯನ್ನು ಕೈಬಿಟ್ಟಿರುವುದು ಸ್ಪಷ್ಟವಾಗಿದೆ.
ಎಚ್ಚರಿಕೆ ಗಂಟೆ:ಈ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವುದು ಬಿಜೆಪಿಗೆ ಆಘಾತ ಉಂಟು ಮಾಡಿದೆಯಲ್ಲದೆ, ಮುಂಬರುವ ಚುನಾವಣೆಗೆ ಎಚ್ಚರಿಕೆ ಗಂಟೆಯಾಗಿದೆ.
ಸಂಜೀವಿನಿ:ಇತ್ತೀಚಿನ ಬಹುತೇಕ ಚುನಾವಣೆಗಳಲ್ಲಿ ಬಿಜೆಪಿ ಅಬ್ಬರದಲ್ಲಿ ಇನ್ನೇನು ಕಳೆದೇ ಹೋಯಿತು ಎನ್ನುತ್ತಿದ್ದ ಕಾಂಗ್ರೆಸ್​ಗೆ ಈ ಚುನಾವಣೆ ರಿಸಲ್ಟ್ ಸಂಜೀವಿನಿಯಾಗಿದೆ. ಪಕ್ಷವನ್ನು ಮತ್ತೆ ಸಂಘಟಿಸಲು, ಜನರ ವಿಶ್ವಾಸ ಗಳಿಸಲು ಕಾಂಗ್ರೆಸ್​ಗೆ ಈ ಫಲಿತಾಂಶ ಹೊಸ ಆಶಾಕಿರಣ ಮೂಡಿಸಿದೆ. ಕಾಂಗ್ರೆಸ್​ನ ಒಗ್ಗಟ್ಟಿನ ಕೆಲಸ ಫಲಿತಾಂಶ ರೂಪದಲ್ಲಿ ಹೊರಬಿದ್ದಿದೆ. ಈ ಫಲಿತಾಂಶದಿಂದ ಕಾಂಗ್ರೆಸ್ ಸಂಭ್ರಮ ಮುಗಿಲು ಮುಟ್ಟಿದೆ. ವಿಶೇಷವೆಂದರೆ, ಜೆಡಿಎಸ್ ಮತ್ತು ಬಿಜೆಪಿಯ ದುಪ್ಪಟ್ಟು ಸ್ಥಾನಗಳಲ್ಲಿ ಕಾಂಗ್ರೆಸ್ ಕಲರವ ಕಂಡಿದೆ.
ಜೆಡಿಎಸ್​ಗೆ ಅಚ್ಚರಿ:ಅಚ್ಚರಿ ಸಂಗತಿ ಎಂದರೆ, ಈ ಚುನಾವಣೆಯಲ್ಲಿ ಜೆಡಿಎಸ್ ಎರಡನೇ ಸ್ಥಾನ ಪಡೆದಿದ್ದು, ಪ್ರಾದೇಶಿಕ ಪಕ್ಷಕ್ಕೂ ಭವಿಷ್ಯವಿದೆ ಎಂಬ ಭರವಸೆಯನ್ನು ಮತದಾರ ಮಾಡಿಕೊಟ್ಟಿದ್ದಾನೆ.
ಯಾರಿಗೆ ಎಷ್ಟು?:10 ನಗರ ಸ್ಥಳೀಯ ಸಂಸ್ಥೆಗಳ 263 ವಾರ್ಡ್​ಗಳಲ್ಲಿ 120 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದು ಬೀಗಿದೆ. ಜೆಡಿಎಸ್ 66 ಸ್ಥಾನ ಪಡೆದರೆ, ಬಿಜೆಪಿ 57 ವಾರ್ಡ್ ಗೆದ್ದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಎಸ್​ಡಿಪಿಐ 5, ಎಎಪಿ 1, ಎಐಎಂಐಎಂ 1, 13 ಸ್ಥಾನಗಳಲ್ಲಿ ಪಕ್ಷೇತರರು ಗೆಲುವಿನ ನಗೆ ಬೀರಿದ್ದಾರೆ.
ಉಪ ಚುನಾವಣೆ ಫಲಿತಾಂಶ: ಬೀದರ್ ಜಿಲ್ಲೆ ಹಳ್ಳಿಖೇಡ ಬಿ ಪುರಸಭೆಯ 1 ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಹಿರೆಕೇರೂರು ಪಟ್ಟಣ ಪಂಚಾಯಿತಿಯ 1 ವಾರ್ಡ್​ಗೆ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ವಿಜಯಶಾಲಿಯಾಗಿದ್ದಾರೆ.
ರಾಮನಗರ:ನಗರಸಭೆ ಚುನಾವಣೆಯಲ್ಲಿ ಭಾರಿ ಅಂತರದ ಗೆಲುವು ದಕ್ಕಿದರೂ ಅದನ್ನು ಸಂಭ್ರಮಿಸಲು ಅಭ್ಯರ್ಥಿಯೇ ಬದುಕಿಲ್ಲ! ಇಂಥದೊಂದು ದುಃಖಕರ ಘಟನೆಗೆ ರಾಮನಗರ ನಗರಸಭೆ ಫಲಿತಾಂಶ ಸಾಕ್ಷಿಯಾಗಿದೆ. ಚುನಾವಣೆ ಫಲಿತಾಂಶ ಬರುವ ಹಿಂದಿನ ದಿನ ಕರೊನಾಗೆ ಬಲಿಯಾದ ಕಾಂಗ್ರೆಸ್ ಅಭ್ಯರ್ಥಿ ಲೀಲಾ ಗೋವಿಂದರಾಜು ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ರಾಮನಗರ 4ನೇ ವಾರ್ಡ್​ನಿಂದ ಸ್ಪರ್ಧಿಸಿದ್ದ ಲೀಲಾ 917 ಮತಗಳನ್ನು ಪಡೆದುಕೊಂಡಿದ್ದರೆ, ಇವರ ಪ್ರತಿಸ್ಪರ್ಧಿ ಜೆಡಿಎಸ್​ನ ಅನಸೂಯ ಕೇವಲ 107 ಮತ ಪಡೆದುಕೊಂಡಿದ್ದಾರೆ. ಲೀಲಾ ಅವರ ಗೆಲುವಿನ ಅಂತರ 810 ಮತಗಳು. ಆದರೆ, ಫಲಿತಾಂಶಕ್ಕೂ ಮುನ್ನವೇ ಆಕೆ ಮೃತಪಟ್ಟ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಮತ್ತೊಮ್ಮೆ ಚುನಾವಣೆ ನಡೆಯಬೇಕಿದೆ.
ಶಿವಮೊಗ್ಗ:ಜಿಲ್ಲೆಯ 2 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಭದ್ರಾವತಿ ನಗರಸಭೆ ಹಾಗೂ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಪಕ್ಷ ಸರಳ ಬಹುಮತ ಪಡೆದಿದ್ದು ಅಧಿಕಾರ ಹಿಡಿಯಲಿದೆ. ತೀರ್ಥಹಳ್ಳಿಯಲ್ಲಿ 2 ದಶಕಗಳಿಂದ ಅಧಿಕಾರದಲ್ಲಿದ್ದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ವಿಫಲವಾಗಿದ್ದು, ಕಾಂಗ್ರೆಸ್ ಅಧಿಕ ಸ್ಥಾನ ಗಳಿಸಿದೆ. ಭದ್ರಾವತಿಯಲ್ಲಿ ಮಾಜಿ ಶಾಸಕ ಅಪ್ಪಾಜಿ ಗೌಡ ಸಾವಿನ ಅನುಕಂಪ ಜೆಡಿಎಸ್ ತಡ ಸೇರಿಸಲು ನೆರವಾಗಿಲ್ಲ. ಇಲ್ಲಿ ಅಧಿಕಾರ ಹಿಡಿಯುವ ಕಾಂಗ್ರೆಸ್ ಯತ್ನ ಫಲಿಸಿದೆ.
ಬಳ್ಳಾರಿ:ಕರೊನಾತಂಕದ ನಡುವೆ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ದೊರೆತಿದ್ದು, ಬಿಜೆಪಿಗೆ ಮುಖಭಂಗವಾಗಿದೆ. ಪಾಲಿಕೆಯಲ್ಲಿ ಬಿಜೆಪಿ ಬಾವುಟ ಹಾರಿಸಬೇಕೆಂದು ಟೊಂಕ ಕಟ್ಟಿದ್ದ ಸಚಿವ ಶ್ರೀರಾಮುಲು ಮತ್ತು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರೆಡ್ಡಿಗೆ ಭಾರಿ ಮುಜುಗರವಾಗಿದೆ. 18ನೇ ವಾರ್ಡ್​ನಲ್ಲಿ ಸ್ಪರ್ಧಿಸಿದ್ದ ಪುತ್ರ ಶ್ರವಣಕುಮಾರ್ ರೆಡ್ಡಿ ಸೋಲು ಶಾಸಕ ಸೋಮಶೇಖರ ರೆಡ್ಡಿಗೆ ಶಾಕ್ ನೀಡಿದೆ. ಬಿಜೆಪಿ ಮಾಜಿ ಸಂಸದ ಸಣ್ಣ ಫಕೀರಪ್ಪರ ಪುತ್ರಿ ಉಮಾದೇವಿಗೆ 39ನೇ ವಾರ್ಡ್​ನಲ್ಲಿ ಸೋಲಾಗಿದೆ. ಟಿಕೇಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್​ನಲ್ಲಿ ಬುಗಿಲೆದ್ದಿದ್ದ ಭಿನ್ನಮತ ಬಿಜೆಪಿಗೆ ವರದಾನವಾಗಿಲ್ಲ.
ಎಲ್ಲಿ, ಯಾರಿಗೆ ಗೆಲುವು?: ಬಳ್ಳಾರಿ, ರಾಮನಗರ, ಭದ್ರಾವತಿ, ಬೇಲೂರು, ತೀರ್ಥಹಳ್ಳಿ ಹಾಗೂ ಗುಡಿಬಂಡೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಚನ್ನಪಟ್ಟಣ ಮತ್ತು ವಿಜಯಪುರಗಳಲ್ಲಿ ಜೆಡಿಎಸ್ ಗೆದ್ದರೆ, ಮಡಿಕೇರಿಗೆ ಮಾತ್ರ ಬಿಜೆಪಿ ಸೀಮಿತವಾಗಿದೆ. ಬೀದರ್​ನಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿದ್ದರೂ ಬಹುಮತಕ್ಕೆ ಮೂರು ಸ್ಥಾನಗಳ ಕೊರತೆ ಇದೆ.
ರಾಜ್ಯದಲ್ಲಿ ಬಿಜೆಪಿ ಜನಾಭಿಪ್ರಾಯ ಕಳೆದುಕೊಂಡಿರು ವುದು ಈ ಚುನಾವಣೆ ಫಲಿತಾಂಶದಿಂದ ಸ್ಪಷ್ಟವಾಗಿದೆ. ಜನತೆಯ ಕೆಂಗಣ್ಣಿಗೆ ಗುರಿಯಾಗಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ರಾಜಿನಾಮೆ ನೀಡಿ ಚುನಾವಣೆಗೆ ಹೋಗುವುದು ಉತ್ತಮ.
|ಸಿದ್ದರಾಮಯ್ಯವಿಧಾನಸಭೆ ಪ್ರತಿಪಕ್ಷ ನಾಯಕ
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಹಣದ ಅಬ್ಬರ, ಜೆಡಿಎಸ್ ವಿರುದ್ಧ ಮಾಡಿದ ಅಪಪ್ರಚಾರಗಳ ನಡುವೆಯೂ ಮತದಾರರು ಜೆಡಿಎಸ್ ಕೈ ಹಿಡಿದಿದ್ದಾರೆ. ಇದಕ್ಕಾಗಿ ಮತದಾರರಿಗೆ ಕೃತಜ್ಞತೆಗಳು.
|ಎಚ್.ಡಿ. ಕುಮಾರಸ್ವಾಮಿಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 2 =
Remember me
