| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಮುಡಾ ಬಹುಕೋಟಿ ಮೊತ್ತದ ನಿವೇಶನ ಹಗರಣದ ಸ್ವರೂಪದಲ್ಲೇ ನಡೆದಿದ್ದ ರಾಜ್ಯ ಹೆದ್ದಾರಿ ಯೋಜನೆ (ಎಸ್​ಎಚ್​ಡಿಪಿ) ಟೆಂಡರ್ ಫಿಕ್ಸಿಂಗ್ ಅಕ್ರಮ ಕುಣಿಕೆ ಬಿಗಿಯಾಗಲಾರಂಭಿಸಿದೆ. ಪರಿಣಾಮ ಉರುಳಿನಿಂದ ತಪ್ಪಿಸಿಕೊಳ್ಳಲು ಕಾಣದ ದೊಡ್ಡ ಕೈಗಳು ದಾರಿಗಾಗಿ ಹುಡುಕಾಟ ತೀವ್ರಗೊಳಿಸಿವೆ. ಸಿಎಂ ತವರು ಜಿಲ್ಲೆ ಹಾಗೂ ನೆರೆ ಹೊರೆಯ ಜಿಲ್ಲೆಯೂ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಗುತ್ತಿಗೆದಾರರುನ್ನು ‘ಫಿಕ್ಸಿಂಗ್’ ಮಾಡಿದ್ದು ಸ್ಪಷ್ಟವಾಗಿ ಗೋಚರಿಸಿದ್ದು, ಸಮಗ್ರ ತನಿಖೆ ನಡೆದರೆ ಇನ್ನಷ್ಟು ಹುಳುಕು ಹೊರಬೀಳುವ ಸಾಧ್ಯತೆ ಇದೆ. ಜತೆಗೆ ಬಹುಕೋಟಿ ಮೊತ್ತದ ಟೆಂಡರ್​ನಲ್ಲಿ ಹಸ್ತಕ್ಷೇಪ ಮಾಡಿದವರ ಬಣ್ಣವೂ ಬಯಲಾಗಲಿದೆ. ಎಲ್ಲ ಟೆಂಡರ್​ಗಳನ್ನು ಪೂರ್ಣ ಪ್ರಮಾಣದಲ್ಲಿ ಮರು ಟೆಂಡರ್ ಮಾಡದಿದ್ದರೆ ಸಿಎಂಗೇ ಸಂಕಷ್ಟ ಎದುರಾಗಲಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸಲು 204 ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿ ಕೈಗೊಳ್ಳಲು ಪ್ಯಾಕೇಜ್ ಟೆಂಡರ್​ಗೆ 2024ರ ಫೆ.29ರಂದು ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು.
2024ರ ಮಾರ್ಚ್ 6ರಂದು ಟೆಂಡರ್ ಕರೆಯಲಾಗಿತ್ತು. 2024ರ ಮೇ 15ರಂದು ಟೆಂಡರ್ ಸ್ವೀಕೃತಿ ಅಂತಿಮಗೊಂಡಿತ್ತು. ಒಟ್ಟಾರೆ 4396 ಕೋಟಿ ರೂ. ಮೊತ್ತದ 206 ಪ್ಯಾಕೇಜ್ ಟೆಂಡರ್ ಕರೆದಿದ್ದು, ಗುತ್ತಿಗೆದಾರರನ್ನು ಫಿಕ್ಸ್ ಮಾಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಪ್ರಭಾವಿಗಳ ಅಣತಿಯಂತೆ ಮುಖ್ಯ ಯೋಜನಾಧಿಕಾರಿ ಬದಲು ಅಧೀನ ಅಧಿಕಾರಿಗಳು ಕೈ ಚಳಕ ತೋರಿಸಿ ನಿರ್ದಿಷ್ಟ ಗುತ್ತಿಗೆದಾರರಿಗೆ ಅವಕಾಶ ಮಾಡಿಕೊಡಲು ಪಟ್ಟಿಯನ್ನೂ ಸಿದ್ಧಪಡಿಸಿಕೊಂಡು ವರ್ಕ್ ಆರ್ಡರ್ ಕೊಡುವುದಕ್ಕೆ ತರಾತುರಿ ತೋರಿಸಿದ್ದರು. ಈ ಬಗ್ಗೆ ಸುಳಿವರಿತ ವಿಜಯವಾಣಿ ಟೆಂಡರ್ ಫಿಕ್ಸ್ ಮಾಡಲು ಪ್ರಭಾವಿ ‘ಕೈ’ ಕೆಲಸ ಮಾಡಿದೆ ಎಂದು ಜೂ. 15ರಂದು ವಿಸõತ ವರದಿ ಮಾಡಿತ್ತು.
ತಕ್ಷಣವೇ ಕಾರ್ಯಪ್ರವೃತ್ತರಾದ ಲೋಕೋಪಯೋಗಿ ಸಚಿವರು, ಇದರ ಬಗ್ಗೆ ವಿಚಾರಿಸಿದ್ದಲ್ಲದೇ ಶೀಘ್ರವಾಗಿ ಹಾಗೂ ಪಾರದರ್ಶಕವಾಗಿ ಪ್ರಕ್ರಿಯೆ ನಡೆಸುವಂತೆ ತಾಕೀತು ಮಾಡಿದ್ದರು. ಪರಿಣಾಮ ಗುತ್ತಿಗೆದಾರರು ಸಲ್ಲಿಸಿದ್ದ ಪ್ರತಿ ದಾಖಲೆಯನ್ನೂ ಪರಿಶೀಲನೆ, ಮರು ಪರಿಶೀಲನೆ, ಸೂಕ್ಷ್ಮ ಪರಿಶೀಲನೆಯನ್ನೂ ನಡೆಸಿ, 206 ಪ್ಯಾಕೇಜ್​ಗಳನ್ನು ವಿಭಾಗವಾರು ಪ್ರತ್ಯೇಕಿಸಿ ಅವಲೋಕನ ಆರಂಭಿಸಿದರು. ಗುತ್ತಿಗೆದಾರರು ಬಿಡ್ ಮಾಡುವಾಗ ಸಲ್ಲಿಸಿದ ದಾಖಲೆ ನೈಜತೆ ಏನು, ನಿಗದಿತ ಕ್ರಮದಲ್ಲಿ ದಾಖಲೆ ಸಲ್ಲಿಸಿದ್ದಾರೆಯೇ ಎಂದು ಪರಿಶೀಲನೆ ಮಾಡಿ, ಅನರ್ಹರನ್ನು ಹೊರಗಿಟ್ಟಿದ್ದು ಅರ್ಧಕ್ಕರ್ಧ ಟೆಂಡರ್ ಫಿಕ್ಸಿಂಗ್ ಪ್ರಯತ್ನ ನಿಂತು ಕೆಲವಕ್ಕೆ ಮರುಟೆಂಡರ್ ಕರೆಯುವ ಅನಿವಾರ್ಯತೆ ಎದುರಾಗಿದೆ.
ಅಲ್ಲದೇ, ಗುತ್ತಿಗೆದಾರರು ಸರಿಯಾದ ದಾಖಲೆ ಸಲ್ಲಿಕೆ ಮಾಡದಿರುವುದು, ಅರ್ಹತೆ ಇಲ್ಲದೇ ಇರುವವರೂ ಬಿಡ್ ಮಾಡಿರುವುದು ಮರು ಟೆಂಡರ್ ಕರೆಯಲು ಪ್ರಮುಖ ಕಾರಣ ಎಂದು ಮೇಲ್ನೋಟಕ್ಕೆ ಕಾಣಿಸಿದರೂ, ಕಾಣದ ಕೈಗಳು ಅನರ್ಹರಿಗೆ ‘ಟೆಂಡರ್ ಫಿಕ್ಸಿಂಗ್’ ಮಾಡಲು ಹೊರಟಿದ್ದವು ಎಂಬ ಸಂಗತಿಯ ಮುಖ ಇದರೊಂದಿಗೆ ಬಯಲಾಗಿದೆ. ಮುಖ್ಯ ಯೋಜನಾಧಿಕಾರಿ ನೇತೃತ್ವದಲ್ಲಿ ಮೌಲ್ಯಮಾಪನ ನಡೆದಿದ್ದು, 75 ಪ್ಯಾಕೇಜ್ ಪೈಕಿ 38 ಪ್ಯಾಕೇಜ್ ಟೆಂಡರ್ ರದ್ದಾಗಿವೆ.
ಅನುಮಾನ ನೂರೆಂಟು:ಸರಾಸರಿ 15ರಿಂದ 20 ಕೋಟಿ ರೂ. ಕಾಮ ಗಾರಿಯ ಗುತ್ತಿಗೆ ಪ್ರಕ್ರಿಯೆಗೆ ಬಿಡ್ ಸಲ್ಲಿಸಿರುವ ಗುತ್ತಿಗೆದಾರರು ನಿಗದಿತ ಪ್ರಮಾಣದಲ್ಲಿ ದಾಖಲೆ ಸಲ್ಲಿಸದೇ ಇರುವುದು ಟೆಂಡರ್ ಫಿಕ್ಸಿಂಗ್​ನ ಭಾಗವಾಗಿ ಕಾಣಿಸುತ್ತಿರುವುದು ಅನುಮಾನಕ್ಕೆ ಪುಷ್ಟಿ ನೀಡುವಂತಿದೆ. ಇಷ್ಟೊಂದು ದೊಡ್ಡ ಮೊತ್ತದ ಕಾಮಗಾರಿಗೆ ಸ್ಪರ್ಧೆ ಬಯಸಿದವರು ಸಾಮಾನ್ಯರು, ಅನಕ್ಷರಸ್ಥರು ಅಥವಾ ಟೆಂಡರ್ ಬಗ್ಗೆ ಅರಿವಿಲ್ಲದವರಾಗಿರುವುದಿಲ್ಲ. ಹೊಂದಾಣಿಕೆ ಉದ್ದೇಶದಿಂದಲೇ ಉದ್ದೇಶಪೂರ್ವಕವಾಗಿ ಕೆಲವು ದಾಖಲೆ ಕೊಡದೇ ಇರುವುದು, ತಮ್ಮಲ್ಲಿ ಅಗತ್ಯ ದಾಖಲೆ ಇಲ್ಲದೆ ಇದ್ದರೂ ಬಿಡ್​ಗೆ ಸ್ಪರ್ಧೆನಡೆಸಿರುವಂತಿದೆ. ಲಭ್ಯ ದಾಖಲೆ ಪ್ರಕಾರ ಶೇ.80ರಷ್ಟು ಟೆಂಡರ್​ಗೆ ಇಬ್ಬರೇ ಗುತ್ತಿಗೆದಾರರಿದ್ದಾರೆ. ಅವರಲ್ಲಿ ಒಬ್ಬರು ‘ಅನರ್ಹರು’ ಅಂತಾದರೆ ಯಾರಿಗೆ ಟೆಂಡರ್ ನಿಗದಿ ಮಾಡಬೇಕೆಂಬುದು ಅಜ್ಞಾತ ಸ್ಥಳದಲ್ಲಿ ಮುಂಚಿತವಾಗಿ ನಿರ್ಧರಿತವಾದಂತೆ ಕಾಣಿಸಿದೆ.
ವರುಣಾದಲ್ಲಿ 120 ಕೋಟಿ ಕಾಮಗಾರಿ:ಮೈಸೂರು ಜಿಲ್ಲೆ ವ್ಯಾಪ್ತಿಯ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಈ ಪ್ಯಾಕೇಜ್​ನಲ್ಲಿ 13 ಕಾಮಗಾರಿ ಸಿಕ್ಕಿದೆ. ನೆರೆಯ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಆರು ಪ್ಯಾಕೇಜ್ ಸಿಕ್ಕಿದೆ. ಬಹುತೇಕ ಪ್ಯಾಕೇಜ್​ನಲ್ಲಿ ಇಬ್ಬರು ಗುತ್ತಿಗೆದಾರರು ಮಾತ್ರ ಬಿಡ್ ಮಾಡಿದ್ದಾರೆ. ಇಲ್ಲೂ ಹೊಂದಾಣಿಕೆ ಸ್ಪಷ್ಟವಾಗಿದ್ದು, ತನಿಖೆ ನಡೆಸಿದರೆ ಫಿಕ್ಸಿಂಗ್ ಬಣ್ಣ ಬಯಲಾಗಬಹುದೆಂಬ ವಾದವೂ ಗುತ್ತಿಗೆದಾರರ ವಲಯದಿಂದ ಕೇಳಿಬಂದಿದೆ. ವರುಣಾದಲ್ಲಿ ಒಟ್ಟಾರೆ 120 ಕೋಟಿ ಕಾಮಗಾರಿ ನಡೆಯಲಿದ್ದು, ಫಿಕ್ಸಿಂಗ್ ವ್ಯವಹಾರ ಮುಡಾ ಅಕ್ರಮದಷ್ಟೇ ಸದ್ದು ಮಾಡುವ ಮಾತುಗಳಿವೆ.
ಇಲಾಖೆಯಲ್ಲೇ ಆಕ್ಷೇಪಣೆ:ಟೆಂಡರ್ ನಿರ್ವಹಣಾ ಪ್ರಾಧಿಕಾರ ಮುಖ್ಯಸ್ಥರ ಬಗ್ಗೆಯೇ ಇದೀಗ ಇಲಾಖೆಯಲ್ಲಿ ಆಕ್ಷೇಪಣೆ ಕೇಳಿಬಂದಿದೆ. ಮಂಜೂರಾತಿ ಇಲ್ಲದ ಹುದ್ದೆಯ ಪ್ರಭಾರದಲ್ಲಿರುವ ಅಧಿಕಾರಿ ಟೆಂಡರ್ ನಿರ್ವಹಣೆ ಮಾಡಿದ್ದು ನಿಯಮ ಬಾಹಿರವಾಗುತ್ತದೆ. ಅಲ್ಲದೇ ಆ ಅಧಿಕಾರಿ ನಿಯೋಜನೆ ಹಿಂದೆ ಪ್ರಭಾವಿ ವ್ಯಕ್ತಿ ಇದ್ದಾರೆ ಎಂದು ಹೇಳಲಾಗುತ್ತಿದೆ.
ಎಸ್ ಎಚ್​ಡಿಪಿ ಮುಖ್ಯ ಇಂಜಿನಿಯರ್ ಹುದ್ದೆಯನ್ನು 2023ರ ಡಿಸೆಂಬರ್​ನಲ್ಲಿ ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ಉಪವಲಯ (ಬೆಳಗಾವಿ) ಕಚೇರಿಗೆ ಮರು ಹೊಂದಾಣಿಕೆ ಮಾಡಲಾಗಿತ್ತು. ಈಗ ಹುದ್ದೆಯ ಪ್ರಭಾರವನ್ನು ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆ ಯೋಜನಾ ನಿರ್ದೇಶಕ ಪುರುಷೋತ್ತಮ ದಾಸ್ ಹೆಗಡೆ ಅವರಿಗೆ ವಹಿಸಿದ್ದು, ಅವರೇ ನಿರ್ವಹಿಸುತ್ತಿದ್ದಾರೆ. ಹುದ್ದೆಯ ಮಂಜೂರಾತಿ ಇಲ್ಲದಿರುವಾಗ ಟೆಂಡರ್ ಪ್ರಕ್ರಿಯೆ ಹೇಗೆ ನಡೆಸಲು ಸಾಧ್ಯ? ಇಲ್ಲಿಗೆ ಉದ್ದೇಶಪೂರ್ವಕವಾಗಿ ನಿಯೋಜಿಸಿದ್ದು ಯಾವ ಕಾರಣಕ್ಕೆ, ಇದರ ಹಿಂದೆ ಯಾರಿದ್ದಾರೆ? ಅಕ್ರಮಗಳು ನಡೆದರೆ ಆ ಅಧಿಕಾರಿಯನ್ನು ಹೊಣೆ ಮಾಡಲು ಹೇಗೆ ಸಾಧ್ಯವಾಗುತ್ತದೆ? ಎಂಬ ಪ್ರಶ್ನೆಗಳು ಇಲಾಖೆಯಲ್ಲೇ ಚರ್ಚೆಯಾಗುತ್ತಿದೆ. ಅಷ್ಟೇ ಅಲ್ಲದೇ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಹಳೇ ದಿನಾಂಕ ಹಾಕಿ ಸಭೆ ನಡೆಸಿ ದಾಖಲೆ ಸಿದ್ಧಪಡಿಸಲಾಗುತ್ತಿದೆ ಎಂಬ ಗುರುತರ ಆರೋಪವೂ ಕೇಳಿಬಂದಿದೆ.
ಕೆಲವು ಉದಾಹರಣೆ:ಕಲಬುರಗಿ ಜಿಲ್ಲೆಗೆ ಸಂಬಂಧಿಸಿದಂತೆ 9.5 ಕೋಟಿ ರೂ. ಟೆಂಡರ್​ನಲ್ಲಿ ಗುತ್ತಿಗೆದಾರ ನಿಗದಿತ ನಮೂನೆಯಲ್ಲಿ ಅಫಿಡೆವಿಟ್ ಸಲ್ಲಿಸಿಲ್ಲ. ಯಂತ್ರೋಪಕರಣ ಹೊಂದಿದ ಬಗ್ಗೆ ಅವಶ್ಯಕ ದಾಖಲೆ ನೀಡಿರಲಿಲ್ಲ. ಇನ್ನೊಬ್ಬ ಟೆಂಡರ್​ದಾರ ತಾಂತ್ರಿಕ ಬಿಡ್ ಸ್ಪಂದನಾತ್ಮಕವಾಗಿರಲಿಲ್ಲವೆಂದು ಬಿಡ್ ತಿರಸ್ಕರಿಸಲಾಗಿದೆ. ಬಾಗಲಕೋಟೆ- ಬಿಳಗಿರಿ ರಂಗನ ಬೆಟ್ಟ ರಾಜ್ಯ ಹೆದ್ದಾರಿ 7.73 ಕಿಮೀ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬಿಡ್ ಸಲ್ಲಿಸಿದ ಒಬ್ಬ ಗುತ್ತಿಗೆದಾರ ಕಳೆದ ಐದು ವರ್ಷದಲ್ಲಿ ಇಂತಹದ್ದೇ ಒಂದು ಕಾಮಗಾರಿ ನಡೆಸಿದ ಬಗ್ಗೆ ದಾಖಲೆ ಕೊಡಬೇಕಿತ್ತು, ಕೊಟ್ಟಿಲ್ಲ. ಬೆಳಗಾವಿ ಜಿಲ್ಲೆ ಗೋಕಾಕ್ ಕ್ಷೇತ್ರದ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರ ಅಫಿಡೆವಿಟ್ ಮಾನದಂಡ ಪೂರೈಸಿಲ್ಲ. ಬೆಳಗಾವಿ ಜಿಲ್ಲೆ ಚಿಕ್ಕೋಡಿ 28 ಕೋಟಿ ರೂ. ಮೊತ್ತದ ಕಾಮಗಾರಿಯ ಟೆಂಡರ್​ಗೆ ಗುತ್ತಿಗೆದಾರ ದಾಖಲಾತಿ ಕೊಟ್ಟಿಲ್ಲ, ನಿಗದಿತ ನಮೂನೆಯಲ್ಲಿ ಅಫಿಡೆವಿಟ್ ಸಲ್ಲಿಸಿಲ್ಲ. ತುಮಕೂರು ಜಿಲ್ಲೆ ಪಾವಗಡದ ಕಾಮಗಾರಿಯಲ್ಲಿ 24 ಕೋಟಿ ರೂ. ಕಾಮಗಾರಿಗೆ ಬಿಡ್ ಸಲ್ಲಿಸಿದ ಗುತ್ತಿಗೆದಾರರು, ಮುಳುಬಾಗಿಲು 9.5 ಕೋಟಿ ಕಾಮಗಾರಿಗೆ ಬಿಡ್ ಮಾಡಿದ ಗುತ್ತಿಗೆದಾರರು ನಿಗದಿತ ವಾರ್ಷಿಕ ವಹಿವಾಟು ಪತ್ರ ದೃಡೀಕರಿಸಲು ರವಾನಿಸಿದ ಪತ್ರ ವಾಪಸ್ ಬಂದಿದೆ. ಟರ್ನ್​ಓವರ್ ಮಾನದಂಡ ಪಾಲನೆಯಾಗಿಲ್ಲ. ಬೆಳಗಾವಿ ಜಿಲ್ಲೆ ಕಾಗವಾಡ, ಬಳ್ಳಾರಿ ಜಿಲ್ಲೆ ಸಿರಗುಪ್ಪ 19 ಕೋಟಿ ಕಾಮಗಾರಿಗೆ ಏಕೈಕ ಗುತ್ತಿಗೆದಾರ ಬಿಡ್ ಮಾಡಿದ್ದರಿಂದ ತಿರಸ್ಕಾರಗೊಂಡಿದೆ.
1.ತಾಂತ್ರಿಕ ಮೌಲ್ಯಮಾಪನ ಸಂದರ್ಭದಲ್ಲಿ ಅನೇಕ ಗುತ್ತಿಗೆದಾರರು ನಿಗದಿತ ನಮೂನೆಯಲ್ಲಿ ಅಫಿಡವಿಟ್ ಸಲ್ಲಿಸದೇ ಇರುವುದು ಕಂಡುಬಂದಿದೆ.
2.ಕೆಲವು ಗುತ್ತಿಗೆದಾರರು ಅಫಿಡವಿಟ್ ಅಪ್ಲೋಡ್ ಮಾಡಿಲ್ಲ. ಕೆಲವರು ಬೇರೆ ನಮೂನೆಯಲ್ಲಿ ಅಫಿಡವಿಟ್ ಅಪ್ಲೋಡ್ ಮಾಡಿದ್ದಾರೆ.
3.ಗುತ್ತಿಗೆದಾರನಿಗೆ ಅನಿವಾರ್ಯವಾದ ಯಂತ್ರೋಪಕರಣ ಹೊಂದಿದ ಬಗ್ಗೆ ಅವಶ್ಯಕ ದಾಖಲೆ ನೀಡಿರದ ಪ್ರಕರಣ ಹಲವಷ್ಟಿದೆ. ಕೆಲವರ ಟೆಂಡರ್ ಮೊತ್ತ ಸ್ಪಂದನಾತ್ಮಕವಾಗಿರಲಿಲ್ಲ.
4.ಗುತ್ತಿಗೆದಾರ ಕಳೆದ ಐದು ವರ್ಷದಲ್ಲಿ ಇಂಥದ್ದೇ ಒಂದು ಕಾಮಗಾರಿ ನಡೆಸಿದ ಬಗ್ಗೆ ದಾಖಲೆ ಕೊಡಬೇಕಿತ್ತು, ಬಹುತೇಕರು ಕೊಟ್ಟಿಲ್ಲ.
5.ವಾರ್ಷಿಕ ವಹಿವಾಟು ನಿಯಮವನ್ನು ಪಾಲಿಸದವರ ಸಂಖ್ಯೆ ಹೆಚ್ಚಿದೆ. ಇದರಿಂದ ರೇಸ್​ನಿಂದ ಹೊರಬಿದ್ದಿದ್ದಾರೆ.
6.ಕಳೆದ ಐದು ವರ್ಷದಲ್ಲಿ ನಿಗದಿತ ಸಮಾನ ರೂಪದ ಕಾಮಗಾರಿ ಮಾನದಂಡ ಪೂರೈಸದೇ ಇರುವವರ ಸಂಖ್ಯೆ ದೊಡ್ಡದಿದೆ.
7.ಬಿಡ್​ಗೆ ಸಲ್ಲಿಸಿರುವ ದಾಖಲೆಗಳು ಸಕ್ಷಮ ಪ್ರಾಧಿಕಾರ ದಾಖಲೆ ದೃಡೀಕರಿಸಿಲ್ಲ. ಅಂದರೆ ನಕಲಿ ದಾಖಲೆ ಎಂಬ ಸಂಶಯವಿದೆ.
ತಮಿಳುನಾಡನ್ನು ನಿರ್ಲಕ್ಷಿಸಲಾಗಿದೆ ಎಂಬ ಸಿಎಂ ಎಂಕೆ ಸ್ಟಾಲಿನ್ ಆರೋಪ ಸತ್ಯಕ್ಕೆ ದೂರವಾದುದು: ಕೇಂದ್ರ ಸರ್ಕಾರ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen + nine =
Remember me
