ಬೆಂಗಳೂರು:ಕೋಲಾರ ಗೋಲ್ಡ್ ಫೀಲ್ಡ್​ನಲ್ಲಿ (ಕೆಜಿಎಫ್) ಇನ್ನೂ ಉಳಿದಿರುವ ಅಪರಿಮಿತ ಸಂಪತ್ತನ್ನು ಬಳಸಿಕೊಳ್ಳಲು ವಿಶೇಷ ಆಸಕ್ತಿ ತೋರಿರುವ ಕೇಂದ್ರ ಸರ್ಕಾರ, ಜಾಗತಿಕ ಟೆಂಡರ್ ಕರೆಯಲು ಪ್ರಕ್ರಿಯೆ ಆರಂಭಿಸಿದೆ. ಈ ಯತ್ನ ಯಶನೀಡಿದಲ್ಲಿ ಕೆಜಿಎಫ್ ಮತ್ತೆ ಬಂಗಾರದ ಮೆರುಗು ಕಾಣಲಿದೆ.
ಕೋಲಾರದ ಚಿನ್ನದ ಗಣಿ ಬಾಗಿಲು ಮುಚ್ಚಿ ಎರಡು ದಶಕ ಕಳೆದಿದೆ. ಆದರೆ, ಗಣಿಗಾರಿಕೆಯಿಂದ ಹೊರಹಾಕಿರುವ ಭಾರಿ ಪ್ರಮಾಣದ ಮಣ್ಣಿನಲ್ಲಿಯೇ ಚಿನ್ನ ಹಾಗೂ ಅಪರೂಪದ ಬೆಲೆಬಾಳುವ ಲೋಹವಿದ್ದು, ಇದನ್ನು ಬಳಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದೆ. ಇತ್ತೀಚಿನ ಬೆಳವಣಿಗೆಯಂತೆ ಟೆಂಡರ್ ಕರೆಯುವ ಸಂಬಂಧ ಮೂರು ಸುತ್ತಿನ ಸಭೆ ಕೂಡ ನಡೆದಿದೆ. 2023ರ ಮೊದಲಾರ್ಧದಲ್ಲಿ ಪ್ರಕ್ರಿಯೆಗಳು ನಡೆಯುವ ಸಾಧ್ಯತೆ ಹೆಚ್ಚಿದೆ. 2001ರ ಮಾರ್ಚ್1 ರಂದು ಕೆಜಿಎಫ್ ಚಿನ್ನದ ಗಣಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು. ಹತ್ತು ಗ್ರಾಂ ಚಿನ್ನ ತೆಗೆಯಲು 12 ಸಾವಿರ ರೂ. ವೆಚ್ಚವಾಗುತ್ತಿದೆ ಎಂಬ ಕಾರಣ ನೀಡಿ ಕೇಂದ್ರದ ಎನ್​ಡಿಎ ಸರ್ಕಾರ ಗಣಿ ಮುಚ್ಚುವ ತೀರ್ಮಾನ ಪ್ರಕಟಿಸಿತು. ಗಣಿಗಾರಿಕೆಯ ಆರಂಭದಿಂದ ಹೊರಹಾಕಿದ 13 ದಶಲಕ್ ಟನ್​ನಷ್ಟು ಮಣ್ಣಿನ ಅಗಾಧ ರಾಶಿಯಿದೆ. ಈ ಮಣ್ಣು ಅಂದಾಜು ಮೂರು ಸಾವಿರ ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ.
ಆಸ್ಟ್ರೇಲಿಯಾ ಮೂಲದ ಕಂಪನಿಯೊಂದು ಈ ಮಣ್ಣನ್ನು ಶೋಧಿಸಿ ಮತ್ತೆ ಚಿನ್ನ ಉತ್ಪಾದಿಸುವ ಬಗ್ಗೆ ಮಾತು ಕೇಳಿ ಬಂದಿತ್ತು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಕೇಂದ್ರ ಸರ್ಕಾರದ ಜತೆ ಚರ್ಚೆ ನಡೆಸಿದ್ದರು. ಇದರ ಮುಂದುವರಿದ ಪ್ರಯತ್ನವಾಗಿ ಮಿನರಲ್ ಎಕ್ಸ್​ಪ್ಲೋರೇಷನ್ ಕಾರ್ಪೆರೇಷನ್ ಲಿಮಿಟೆಡ್ ಈ ಮಣ್ಣಿನಲ್ಲಿ ಸಾಕಷ್ಟು ಚಿನ್ನದ ಅಂಶ ಹಾಗೂ ಪಲಾಡಿಯಂ, ಟಂಗ್​ಸ್ಟನ್ ಲೋಹ ಇದೆ ಎಂಬುದನ್ನು ಖಾತ್ರಿಮಾಡಿತ್ತು. ಈ ನಡುವೆ ರಾಜ್ಯ ಸರ್ಕಾರ ಕೆಜಿಎಫ್ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಬಳಸಲು ಕೋರಿಕೆ ಸಲ್ಲಿಸಿದಾಗ ಮತ್ತೊಂದು ಸುತ್ತಿನ ಪ್ರಯತ್ನ ನಡೆಯಿತು. 14 ಸಾವಿರ ಎಕರೆ ಭೂಮಿ ಭಾರತ್ ಗೋಲ್ಡ್ ಮೈನ್ಸ್ ವ್ಯಾಪ್ತಿಯಲ್ಲಿದ್ದು, ಗಣಿಯಿಂದ ತೆಗೆದ ಮಣ್ಣನ್ನು ರಾಶಿ ಹಾಕಿರುವ ಜಾಗ ಹೊರತು ಉಳಿದಿದ್ದನ್ನು ಬಳಸಿಕೊಳ್ಳುವ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಚರ್ಚೆಗಳು ನಡೆದಿದ್ದವು.
ಇಡೀ ಆಸ್ತಿಯನ್ನು ರಾಜ್ಯ ಸರ್ಕಾರವೇ ವಹಿಸಿಕೊಂಡು ಭಾರತ್ ಗೋಲ್ಡ್ ಮೈನ್ಸ್​ನ ಹೊಣೆಗಾರಿಕೆಯನ್ನೂ ಹೊರುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ರಾಜ್ಯ ಸರ್ಕಾರ ಈ ಉಸಾಬರಿ ಅಸಾಧ್ಯವೆಂದು ಭಾವಿಸಿ ಕೈಚೆಲ್ಲಿತ್ತು. ನಂತರ ಮತ್ತೆ ಪ್ರಯತ್ನ ನಡೆದು, ಕೇಂದ್ರದ ಮೇಲೆ ರಾಜ್ಯ ಸರ್ಕಾರದ ಒತ್ತಡ ಹೆಚ್ಚಾದಂತೆ ಪರಿಹಾರವಾಗಿ ಮೂರು ಸಾವಿರ ಎಕರೆ ಭೂಮಿಯಲ್ಲಿರುವ, ಗಣಿಯಿಂದ ತೆಗೆದ 13 ಸಾವಿರ ಮಿಲಿಯನ್ ಟನ್ ಮಣ್ಣನ್ನು ಸಂಸ್ಕರಿಸಿ ಚಿನ್ನ ಹಾಗೂ ಇತರ ಲೋಹ ಬಳಸಿಕೊಳ್ಳಲು ಮುಂದಾಯಿತು.
ಒಟ್ಟಾರೆ ಆ ಮಣ್ಣಿನಲ್ಲಿ 25 ಸಾವಿರ ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ಇತರ ಲೋಹ ಸಿಗಬಹುದೆಂಬ ಅಂದಾಜಿದ್ದು, ಪ್ರಸ್ತುತ ಮಣ್ಣನ್ನು ಸಂಸ್ಕರಿಸಿ ಚಿನ್ನವನ್ನು ಬೇರ್ಪಡಿಸುವ ಸಂಬಂಧ ಜಾಗತಿಕ ಟೆಂಡರ್ ಕರೆಯುವ ಕೆಲಸ ಆರಂಭವಾಗಿದೆ.
ವಿಜಯವಾಣಿಗೆ ಲಭ್ಯವಾದ ಮಾಹಿತಿ ಪ್ರಕಾರ ಜಾಗತಿಕವಾಗಿ ಏಳು ಕಂಪನಿಗಳು ಈ ಸಂಸ್ಕರಣೆ ನಡೆಸುವ ಸಾಮರ್ಥ್ಯ ಹೊಂದಿವೆ. ಅವುಗಳನ್ನು ಸಂರ್ಪಸಿ ಪ್ರಕ್ರಿಯೆಗೆ ವೇಗ ಕೊಡುವ ಕೆಲಸ ಆರಂಭವಾಗಿದೆ.
ಮುಖ್ಯಾಂಶ
ಸಂಸ್ಕರಣೆಗೆ ವೈಜ್ಞಾನಿಕ ಹಾದಿ
ಆರ್ಸೆನಿಕ್ ರಾಸಾಯನಿಕ ಬಳಸಿ ಸಂಸ್ಕರಣೆ ಮಾಡುವ ಸುಲಭ ವಿಧಾನವಿದೆ. ಆದರೆ, ಈ ಮಾರ್ಗ ಅನುಸರಿಸಿದರೆ ಈ ಭಾಗದ ಜಲಮೂಲ ವಿಷವಾಗುವ ಸಂದರ್ಭ ಹೆಚ್ಚಿರುತ್ತದೆ. ಈ ಕಾರಣಕ್ಕೆ, ಆರ್ಸೆನಿಕ್​ರಹಿತವಾಗಿ ಸಂಸ್ಕರಣೆ ಮಾಡುವ ಬಗ್ಗೆ ಕೇಂದ್ರ ಹುಡುಕಾಟ ನಡೆಸಿದ್ದು, ವಿಶ್ವದ ವಿವಿಧೆಡೆ ಈ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಕಂಪನಿಗಳಿಗೆ ಟೆಂಡರ್​ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲು ಉದ್ದೇಶಿಸಲಾಗಿದೆ.
ಜಾಗತಿಕ ಟೆಂಡರ್ ಕರೆಯುವ ಬಗ್ಗೆ ಇಲಾಖೆಗೆ ಸೂಚನೆ ಕೊಡಲಾಗಿದ್ದು, ಪ್ರಕ್ರಿಯೆ ಕೂಡ ಆರಂಭವಾಗಿದೆ. ಬಳಕೆಯಾಗದೆ ಅನುಪಯುಕ್ತವಾಗಿರುವ ಸಂಪತ್ತನ್ನು ಸದ್ಬಳಕೆ ಮಾಡಿಕೊಳ್ಳುವ ಪ್ರಯತ್ನ ಇದಾಗಿದೆ.| ಪ್ರಲ್ಹಾದ ಜೋಶಿ ಕಲ್ಲಿದ್ದಲು ಸಚಿವ
ಗಣಿಗಾರಿಕೆ ಆರಂಭಿಸುತ್ತಾ?
ಸಂಸ್ಕರಣೆ ಬಳಿಕ ಈ ಜಾಗವನ್ನು ಬಳಸಿಕೊಳ್ಳುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಲಿದೆ. ಮತ್ತೆ ಚಿನ್ನದ ಗಣಿ ಆರಂಭಿಸುವ ಉದ್ದೇಶ ಕಾಣಿಸುತ್ತಿಲ್ಲ. ಗಣಿಯಿಂದ ಮಣ್ಣನ್ನು ತೆಗೆದು ಚಿನ್ನ ಉತ್ಪಾದಿಸುವ ವೆಚ್ಚ ಹೆಚ್ಚಾಗುವ ಕಾರಣ ವೈಜ್ಞಾನಿಕ ಮಾರ್ಗದ ಬಗ್ಗೆ ನಂತರ ಚಿಂತನೆ ನಡೆಸಲಾಗುತ್ತದೆ. ಅವಕಾಶಗಳು ಸಿಕ್ಕರೆ ತೀರ್ಮಾನ ಮಾಡಬಹುದು, ಈ ಹಂತದಲ್ಲಂತೂ ಯೋಚನೆ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಒಂದೊಮ್ಮೆ ಕೇಂದ್ರ, ರಾಜ್ಯ ಸರ್ಕಾರ ಒಮ್ಮತಕ್ಕೆ ಬಂದರೆ 14 ಸಾವಿರ ಎಕರೆ ವಿಶಾಲ ಜಾಗ ಕೈಗಾರಿಕೆ ಉದ್ದೇಶಕ್ಕೆ ಬಳಕೆಯಾಗಬಹುದು. ಈ ಮೂಲಕ ಕೋಲಾರ ಭಾಗಕ್ಕೆ ಹೆಚ್ಚಿನ ಲಾಭವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
