|ಕೀರ್ತಿನಾರಾಯಣ ಸಿ.ಬೆಂಗಳೂರು
ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಪಡೆಯಲು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ (ಸಿಎಲ್​ಟಿ)ಯಲ್ಲಿ ಉತ್ತೀರ್ಣರಾಗುವುದನ್ನು ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ನಿಯಮವೇ ಈಗ ಅವ್ಯವಹಾರಕ್ಕೆ ಆಸ್ಪದವಾಗಿದೆ. ಹಲವು ಬಾರಿ ಪರೀಕ್ಷೆ ಬರೆದರೂ ಅನುತ್ತೀರ್ಣ ರಾಗಿರುವವರು ಹಾಗೂ ಕಂಪ್ಯೂಟರ್ ಜ್ಞಾನವಿಲ್ಲದೆ ಟೆಸ್ಟ್​ಗೆ ಹಾಜರಾಗಲು ಹೆದರುತ್ತಿರುವ ನೌಕರರು ಅಡ್ಡದಾರಿ ಹಿಡಿದಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರದ ಸಿಬ್ಬಂದಿ, ತಲಾ ನೌಕರನಿಂದ 20ರಿಂದ 30 ಸಾವಿರ ರೂ. ಲಂಚ ಪಡೆದು ಪಾಸ್ ಆಗಲು ಸಹಾಯ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ.
ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ನೌಕರರು, ನಿಗಮ-ಮಂಡಳಿಗಳ ಅಧಿಕಾರಿ ಮತ್ತು ನೌಕರರು ಪರೀಕ್ಷೆ ತೆಗೆದುಕೊಳ್ಳುವ ಅವಧಿಯನ್ನು 2022ರ ಡಿ.31ರವರೆಗೂ ಸರ್ಕಾರ ವಿಸ್ತರಿಸಿದೆ. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ನಿಗಮ-ಮಂಡಳಿ ಸೇರಿ ಕೆಲ ಇಲಾಖೆಗಳ ನೌಕರರು ಹಲವು ಬಾರಿ ಪರೀಕ್ಷೆಗೆ ಹಾಜರಾದರೂ, ಉತ್ತೀರ್ಣರಾಗಿಲ್ಲ. ಮೊದಲ ಬಾರಿ ಪರೀಕ್ಷೆಗೆ ಉಚಿತ ಅವಕಾಶ ಇರುತ್ತದೆ. ನಂತರದ ಅವಕಾಶಗಳಿಗೆ 359 ರೂ. ಹಾಗೂ ಬ್ಯಾಂಕ್ ಸರ್ವೀಸ್ ಶುಲ್ಕವನ್ನು ನೌಕರನೇ ಪಾವತಿಸಬೇಕು.
2021ರ ಅಂತ್ಯದವರೆಗೆ 2.55 ಲಕ್ಷ ನೌಕರರು ನೋಂದಣಿ ಮಾಡಿಕೊಂಡಿದ್ದು, 2.46 ಲಕ್ಷ ನೌಕರರು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 1.65 ಲಕ್ಷ ನೌಕರರ ಮಾತ್ರವೇ ಉತ್ತೀರ್ಣರಾಗಿದ್ದರು. ಉಳಿದ 90 ಸಾವಿರಕ್ಕೂ ಅಧಿಕ ಮಂದಿ ಫೇಲ್ ಆಗಿದ್ದರು. ರಾಜ್ಯದಲ್ಲಿ ಇನ್ನೂ ಅಂದಾಜು 3.50 ಲಕ್ಷಕ್ಕೂ ಅಧಿಕ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆ ತೆಗೆದುಕೊಳ್ಳಬೇಕಿದೆ. ಹೀಗಾಗಿಯೇ 2022ರ ಅಂತ್ಯದವರೆಗೂ ಅವಧಿ ವಿಸ್ತರಿಸಲಾಗಿದೆ. ಆದರೆ, ಈಗಾಗಲೆ ಹಲವರು ಹಲವು ಸಲ ಪರೀಕ್ಷೆ ತೆಗೆದುಕೊಂಡರೂ ಪಾಸ್ ಆಗಿಲ್ಲ. ಪ್ರತಿ ಬಾರಿಯೂ ಒಒಡಿ ಹೆಸರಲ್ಲಿ ಪರೀಕ್ಷಾ ಕೇಂದ್ರಕ್ಕೆ ಹೋಗುವ ಕಿರಿಕಿರಿ ಜತೆಗೆ ಶುಲ್ಕ ಪಾವತಿಸುವ ಮೂಲಕ ಜೇಬಿಗೂ ಕತ್ತರಿ. ಹೀಗಾಗಿ ಲಂಚ ಕೊಟ್ಟು ಪಾಸ್ ಆಗೋಣ ಎನ್ನುವ ಮನಃಸ್ಥಿತಿಗೆ ನೌಕರರು ಬಂದಿದ್ದಾರೆ. ಯಾವುದೇ ಇಲಾಖೆ ಪರೀಕ್ಷೆಯಾದರೂ ತರಬೇತಿ ಕೊಟ್ಟು ನಂತರ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಕೊಡಬೇಕು. ಆದರೆ, ಸಿಎಲ್​ಟಿ ಪರೀಕ್ಷೆ ಬಗ್ಗೆ ಯಾವುದೇ ಟ್ರೖೆನಿಂಗ್ ಕೊಡದೆ ನೇರವಾಗಿ ಹೋಗಿ ಪರೀಕ್ಷೆ ಬರೆಯಬೇಕಿದೆ. ಹೀಗಾಗಿ ಕಂಪ್ಯೂಟರ್ ಜ್ಞಾನ ಇಲ್ಲದ ನೌಕರರು, ಎಷ್ಟು ಬಾರಿ ಪರೀಕ್ಷೆ ಬರೆದರೂ ಉತ್ತೀರ್ಣರಾಗಲು ಸಾಧ್ಯವಾಗುತ್ತಿಲ್ಲ. ಗಣಕೀಕೃತ ಪದಗಳಾಗಿರುವುದರಿಂದ ಅಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲೂ ಆಗಲ್ಲ.
ಎಂಎಸ್ ವರ್ಡ್​ನಲ್ಲಿ ಫಾಂಟ್ ಸೈಜ್ ಹೆಚ್ಚು ಮಾಡಲು ಯಾವ ಮೆನುಗೆ ಹೋಗಬೇಕು? ಕೀ ಪ್ಯಾಡ್​ನಲ್ಲಿ ಎಷ್ಟು ಅಕ್ಷರಗಳಿವೆ? ಸಿಪಿಯು ಎಂದರೇನು? ಹೀಗೆ 80 ಪ್ರಶ್ನೆಗಳಿಗೆ 90 ನಿಮಿಷದಲ್ಲಿ ಉತ್ತರಿಸಬೇಕು. ಟೆಕ್ನಿಕಲ್ ಕೋರ್ಸ್ ಮಾಡಿರುವವರು ಹಾಗೂ ದಿನನಿತ್ಯ ಕಂಪ್ಯೂಟರ್ ಒಡನಾಟ ಇರುವ ಕ್ಲರಿಕಲ್ ಸಿಬ್ಬಂದಿ ಹೊರತುಪಡಿಸಿ ಬೇರೆಯವರು ಸರಳವಾಗಿ ಉತ್ತರಿಸಲು ಸಾಧ್ಯವಿಲ್ಲ ಎನ್ನುವುದು ಬಹುತೇಕ ಅಧಿಕಾರಿ ಮತ್ತು ನೌಕರರ ಅಭಿಪ್ರಾಯವಾಗಿದೆ.
ಆರಕ್ಷಕರಿಗೆ ಯಾಕೆ ಬೇಕು?:ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನ್​ಸ್ಟೇಬಲ್​ನಿಂದ ಡಿವೈಎಸ್ಪಿವರೆಗೂ ಸಿಎಲ್​ಟಿ ಪಾಸ್ ಆಗಬೇಕು. ಕಳ್ಳಕಾಕರನ್ನು ಹಿಡಿಯುವ, ಬಂದೋಬಸ್ತ್ ಡ್ಯೂಟಿ ಮಾಡುವವರಿಗೆ ಕಂಪ್ಯೂಟರ್ ಜ್ಞಾನ ಏಕೆ ಬೇಕು ಎಂಬುದು ಪೊಲೀಸರ ಪ್ರಶ್ನೆ. ಬಹುತೇಕರಿಗೆ ಕಂಪ್ಯೂಟರ್ ಜ್ಞಾನ ಇಲ್ಲ. ಅದರಲ್ಲೂ ಕೆಲ ಹೆಡ್ ಕಾನ್​ಸ್ಟೇಬಲ್​ಗಳಿಗೆ ಕಂಪ್ಯೂಟರ್, ಕೀ ಪ್ಯಾಡ್, ಮೌಸ್ ಏನೆಂಬುದೇ ತಿಳಿದಿಲ್ಲ. ಅಂತದ್ದರಲ್ಲಿ ಪರೀಕ್ಷೆ ಬರೆದು ಪಾಸ್ ಆಗುವುದು ಹೇಗೆ? ಹೀಗಾಗಿ ಲಂಚ ಕೊಟ್ಟು ಪಾಸ್ ಆಗಲು ದುಂಬಾಲು ಬೀಳುತ್ತಿದ್ದಾರೆ.
ಪೊಲೀಸರಿಗೆ ವಿನಾಯಿತಿ ಕೊಡಿ:2013-14ರಲ್ಲೇ ಕಾನ್​ಸ್ಟೇಬಲ್​ನಿಂದ ಇನ್​ಸ್ಪೆಕ್ಟರ್​ವರೆಗೆ 70 ಸಾವಿರಕ್ಕೂ ಅಧಿಕ ಪೊಲೀಸರಿಗೆ ರಾಜ್ಯ ಅಪರಾಧ ದಾಖಲಾತಿ ವಿಭಾಗದ (ಎಸ್​ಸಿಆರ್​ಬಿ) ವತಿಯಿಂದ ಸ್ಯಾನ್ ಐಟಿ ಸಂಸ್ಥೆ ಹಾಗೂ ಎಚ್​ಪಿ ಸಂಸ್ಥೆಯಿಂದ 10 ದಿನಗಳ ಕಾಲ ವೇತನ ಸಹಿತವಾಗಿ ಕಂಪ್ಯೂಟರ್ ತರಬೇತಿ ನೀಡಲಾಗಿತ್ತು. ಸಾಕ್ಷರತಾ ಪ್ರಮಾಣ ಪತ್ರವನ್ನೂ ಕೊಡಮಾಡಲಾಗಿತ್ತು. ಈಗ ಪುನಃ ಟೆಸ್ಟ್ ಬರೆಯುವ ಅಗತ್ಯ ಇಲ್ಲ. ಆದ್ದರಿಂದ ಪೊಲೀಸರಿಗೆ ಸಾಕ್ಷರತಾ ಪರೀಕ್ಷೆಯಿಂದ ವಿನಾಯಿತಿ ಕೊಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
50 ಸಾವಿರ ರೂ.ವರೆಗೆ ಬೇಡಿಕೆ!:ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸಲು ಆರಂಭದಲ್ಲಿ 3 ರಿಂದ 5 ಸಾವಿರ ರೂ. ಲಂಚ ಇತ್ತು. ನಂತರ 10 ರಿಂದ 15 ಸಾವಿರ ರೂ.ಗೆ ಏರಿಕೆಯಾಯಿತು. ಈಗ 20 ರಿಂದ 30 ಸಾವಿರ ರೂ. ಕೊಡಬೇಕಿದೆ. ಕೆಲ ಕೇಂದ್ರಗಳಲ್ಲಿ 50 ಸಾವಿರ ರೂ.ವರೆಗೂ ಬೇಡಿಕೆ ಇಡಲಾಗುತ್ತಿದೆ ಎಂದು ಸರ್ಕಾರಿ ನೌಕರರೇ ಹೇಳುತ್ತಾರೆ.
ಯಾರಿಗೆಲ್ಲ ಕಡ್ಡಾಯ?:ಕೆಲ ಹುದ್ದೆಗಳನ್ನು ಹೊರತುಪಡಿಸಿ ಗ್ರೂಪ್-ಎ, ಬಿ, ಸಿ ಸೇವೆಯಲ್ಲಿ ಇರುವವರಿಗೆ ಪರೀಕ್ಷೆ
ಯಾರಿಗೆ ವಿನಾಯಿತಿ?:ವಾಹನ ಚಾಲಕ, ಪೇದೆ, ನರ್ಸ್, ಅರಣ್ಯ ರಕ್ಷಕ, ಅಬಕಾರಿ ರಕ್ಷಕ, ಆರೋಗ್ಯ ಕಾರ್ಯಕರ್ತರು, ಅರಣ್ಯ ವೀಕ್ಷಕರು, ಡಿ ದರ್ಜೆ ನೌಕರರು
ಕಿಯಾನಿಕ್ಸ್ ಏಜೆನ್ಸಿ ಮೂಲಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ 3 ಬ್ಯಾಚ್​ನಂತೆ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷಾ ಕೇಂದ್ರದ ಸಿಬ್ಬಂದಿ ಜತೆ ಡೀಲ್ ಕುದುರಿಸಿಕೊಂಡರೆ ಯಾವುದೋ ನೆಪದಲ್ಲಿ ಅವರೇ ಸಮೀಪಕ್ಕೆ ಬಂದು ಪಾಸ್ ಆಗಲು ಬೇಕಿರುವಷ್ಟು ಪ್ರಶ್ನೆಗಳಿಗೆ ಸರಿ ಉತ್ತರದ ಮಾರ್ಕ್ ಮಾಡಿಕೊಡುತ್ತಾರೆ. ಪ್ರತಿ ಕೇಂದ್ರಕ್ಕೆ ಮೇಲ್ವಿಚಾರಣೆಗೆ ಇಬ್ಬರನ್ನು ನಿಯೋಜಿಸಲಾಗುತ್ತದೆ. 2012ಕ್ಕಿಂತ ಮುಂಚೆ ನೇಮಕಗೊಂಡವರು 28 ಅಂಕ ಹಾಗೂ 2012ರ ನಂತರ ನೇಮಕಾತಿ ಹೊಂದಿದವರು 40 ಅಂಕಗಳ ಪಡೆದರೆ ಉತ್ತೀರ್ಣರಾಗುತ್ತಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
