ಯಾರಿಗೂ ಬೇಡವಾದ ಬುದ್ಧಿಮಾಂದ್ಯರು, ಅಂಗವಿಕಲರು ಮತ್ತು ಅಮಾನವೀಯ ಶೋಷಣೆಗಳಿಂದ ಅನಾಥರಾದ ಮಕ್ಕಳ ಮಕ್ಕಳ ಪಾಲಿಗೆ ಆಶಾಕಿರಣವಾದ ಸಂಘ-ಸಂಸ್ಥೆಗಳ ಪೈಕಿ ಕೋಲಾರದ ಅಂತರಗಂಗೆ ಬುದ್ಧಿ ಮಾಂದ್ಯ ಹಾಗೂ ಅಂಗವಿಕಲರ ಪುನರ್​ವಸತಿ ಶಾಲೆಯೂ ಒಂದು. ಇಂಥ ಶಾಲೆಯನ್ನು ನಡೆಸುವಾಗ ಎದುರಾಗುವ ಅನೇಕ ತೊಂದರೆ, ಸವಾಲುಗಳ ನಡುವೆಯೇ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ಪ್ರಜ್ಞಾ ಅವರಿಗೆ ಕ್ಯಾಡ್​ಬರಿ ಡೈರಿ ಮಿಲ್ಕ್ ಅವರಿಗೆ ಧನ್ಯವಾದ ಅರ್ಪಿಸುತ್ತದೆ.
ಮಕ್ಕಳು ಮಕ್ಕಳೇ. ಆದರೆ ವಿವಿಧ ಕಾರಣಗಳಿಗಾಗಿ ಅವರು ಹೆತ್ತವರಿಗೆ ಬೇಡವಾಗುವುದುಂಟು. ಅದರಲ್ಲೂ ಹುಟ್ಟಿದಾಗಲೇ ಬುದ್ಧಿಮಾಂದ್ಯತೆ ಅಥವಾ ಅಂಗವೈಕಲ್ಯ ಕಾಣಿಸಿಕೊಂಡಲ್ಲಿ ಆ ಮಕ್ಕಳನ್ನು ಪೋಷಣೆ ಮಾಡಲು ತಂದೆ-ತಾಯಿ ಹಿಂಜರಿಯುತ್ತಾರೆ. ಅಂಥ ಮಕ್ಕಳ ಪಾಲಿಗೆ 30 ವರ್ಷಗಳ ಹಿಂದೆ ಶಂಕರ್ ಎಂಬುವವರು ಪ್ರಾರಂಭಿಸಿದ ವಸತಿ ಶಾಲೆಯಿದು. ಇಂದು ಅನೇಕ ಅನಾಥರ ಪಾಲಿನ ಆಶ್ರಯತಾಣವಾಗಿದೆ. ಸಂಸ್ಥೆಯ ಯಶಸ್ಸಿಗೆ ಶಂಕರ್ ಪತ್ನಿ ಪ್ರಜ್ಞಾ ಅವರ ನಿಸ್ವಾರ್ಥ ಸೇವೆ ಕಾರಣವೆಂದರೆ ಅತಿಶಯೋಕ್ತಿಯಲ್ಲ.
ಪ್ರಜ್ಞಾ ಮೂಲತಃ ಉತ್ತರಕನ್ನಡ ಜಿಲ್ಲೆಯವರು. 27 ವರ್ಷಗಳ ಹಿಂದೆ ಶಂಕರ್ ಅವರನ್ನು ವಿವಾಹವಾಗಿ ಬಂದ ನಂತರ ಕೋಲಾರ ಜಿಲ್ಲೆಯ ಹೆಮ್ಮೆಯ ಸೊಸೆ ಎನಿಸಿಕೊಂಡಿದ್ದಾರೆ. ತಮ್ಮ ಸಂಸ್ಥೆಯಲ್ಲಿ ನೂರಾರು ಮಕ್ಕಳಿಗೆ ತಾಯಿಯ ವಾತ್ಸಲ್ಯ ನೀಡುತ್ತ ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದಾರೆ. ಒಂದು ಮಗುವನ್ನೇ ನಿಭಾಯಿಸಲು ಕಷ್ಟ ಪಡುವ ತಂದೆ ತಾಯಂದಿರಿಗೆ ಪ್ರಜ್ಞಾ ಮಾದರಿಯಾಗಿದ್ದಾರೆ. ಸದ್ಯ 27 ಮಕ್ಕಳು ಜನ್ಮ ಕೊಟ್ಟ ತಂದೆ-ತಾಯಿಯಿಂದ ದೂರವಾಗಿ ಅಂತರಗಂಗೆ ವಸತಿ ಶಾಲೆಯಲ್ಲಿ ಇವರ ಬಳಿ ನೆಮ್ಮದಿಯ ಬದುಕು ಕಾಣುತ್ತಿದ್ದಾರೆ. ದಾನಿಗಳು ಸ್ವಯಂಪ್ರೇರಣೆಯಿಂದ ನೀಡುವ ನೆರವು ಹಾಗೂ ತಮ್ಮ ಸಂಪನ್ಮೂಲಗಳಿಂದಲೇ ಶಾಲೆಯ ನಿರ್ವಹಣೆ ನಡೆಸುವ ಪ್ರಜ್ಞಾ ತನ್ನ ಮಡಿಲು ಸೇರಿರುವ ಮಕ್ಕಳಿಗೆ ಕಿಂಚಿತ್ತೂ ನೋವಾಗದಂತೆ ಬೆಳಗ್ಗೆ 5ರಿಂದ ರಾತ್ರಿ 11ರವರೆಗೆ ನಿರಂತರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮೈಸೂರಿನಲ್ಲಿ ಬುದ್ಧಿಮಾಂದ್ಯ ಮಕ್ಕಳ ಆರೈಕೆಗೆ ಸಂಬಂಧಿಸಿದಂತೆ ವಿಶೇಷ ತರಬೇತಿ ಪಡೆದಿದ್ದಾರೆ. ತಮಗೆ ಅರಿವಿಲ್ಲದೆ ಮಕ್ಕಳು ಅನೇಕ ಬಾರಿ ಪ್ರಜ್ಞಾ ಅವರಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದರೂ ಅವರು ಬೇಸರಿಸಿಕೊಳ್ಳುವುದಿಲ್ಲ. ಆ ಮಕ್ಕಳಿಗೆ ತಾವು ಕಲಿತ ಪರಿಭಾಷೆಯಡಿ ಸಾಂತ್ವನ ಹೇಳಿ ಸಮಾಧಾನಪಡಿಸುತ್ತಾರೆ.
ಸ್ವಂತ ಮನೆ ಇದ್ದರೂ ಇಂದಿಗೂ ಪ್ರಜ್ಞಾ ವಸತಿ ಶಾಲೆಯಲ್ಲೇ ಉಳಿದುಕೊಂಡಿದ್ದಾರೆ. ಎಲ್ಲ ಮಕ್ಕಳು ಮಲಗುವವರೆಗೂ ಅವರು ಮಲಗುವುದಿಲ್ಲ. ರಾತ್ರಿಯೂ ಅಷ್ಟೇ, ಕೊಠಡಿಯಿಂದ ಶಬ್ದ ಬಂದರೆ ಸಾಕು, ಓಡಿಹೋಗಿ ನೋಡುತ್ತಾರೆ. ಯಾವುದೇ ಮಗು ಹೇಸಿಗೆ ಮಾಡಿಕೊಂಡಿದ್ದರೆ ಅಸಹ್ಯ ಪಡದೆ ಸ್ವಚ್ಛಗೊಳಿಸುತ್ತಾರೆ. ಆ ಮಕ್ಕಳ ಪಾಲಿಗೆ ತಾಯಿ ಎಂಬ ಹೆಸರನ್ನು ಸಾರ್ಥಕಪಡಿಸಿದ್ದಾರೆ.

10 ವರ್ಷಗಳ ಹಿಂದೆ ಕೋಲಾರ ನಗರದ ಎಸ್.ಎನ್.ಆರ್. ಆಸ್ಪತ್ರೆ ಹಿಂಭಾಗದ ಚರಂಡಿಯಲ್ಲಿ ಪಾಪಿಗಳು ಎಸೆದು ಹೋಗಿದ್ದ ಮೂರು ವರ್ಷದ ಹೆಣ್ಣು ಮಗುವನ್ನು ಪೊಲೀಸರು ಪ್ರಜ್ಞಾ ವಶಕ್ಕೆ ಒಪ್ಪಿಸಿದ್ದರು. ಮಗು ವಿಕಾರವಾಗಿತ್ತು, ಅಮ್ಮ ಎಂಬ ಎರಡು ಅಕ್ಷರ ಮಾತ್ರ ಗೊತ್ತಿತ್ತು. ಮೈ ತುಂಬಾ ಗಾಯಗಳಾಗಿದ್ದವು. ಬುದ್ಧಿಮಾಂದ್ಯಳಂತೆ ಕಾಣುತ್ತಿದ್ದಳು. ಈ ಮಗುವನ್ನು ಹೇಗೆ ಪೋಷಿಸುವುದು ಎಂಬ ಭಯ ಪ್ರಾರಂಭದಲ್ಲಿ ಇತ್ತಾದರೂ ಕ್ರಮೇಣ ಆ ಮಗುವನ್ನು ಸ್ವಂತ ಮಗಳಂತೆ ಆರೈಕೆ ಮಾಡತೊಡಗಿದರು. ಈಗ ಆ ಮಗು ವಸತಿ ಶಾಲೆಯ ಪ್ರೀತಿಯ ಮಗಳಾಗಿ ಬೆಳೆದಿದ್ದಾಳೆ. ಇನ್ನೊಂದು ಮಗು ಅಕ್ರಮ ಸಂಬಂಧದಿಂದ ಜನಿಸಿದೆಯೆಂಬ ಕಾರಣಕ್ಕೆ ಅನಾಥವಾಗಿತ್ತು. ಪಾಪಿಗಳು ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದರು. ಅದನ್ನು ತಿಳಿದ ಪ್ರಜ್ಞಾ ಆ ಮಗುವನ್ನು ಕರೆತಂದು ಪೋಷಣೆ ಮಾಡುತ್ತಿದ್ದಾರೆ. ಈ ವಸತಿ ಶಾಲೆಯಲ್ಲಿ ಶೇ. 60 ಮಕ್ಕಳು ಬುದ್ಧಿಮಾಂದ್ಯರು. ಜತೆಗೆ ಅಂಗವಿಕಲರೂ, ವೃದ್ಧರೂ ಇದ್ದಾರೆ. ಆಯಾ ಒಬ್ಬರು ಇದ್ದರೂ ತಾವೇ ಸ್ನಾನ ಮಾಡಿಸುತ್ತಾರೆ, ಬಟ್ಟೆ ತೊಳೆಯುತ್ತಾರೆ, ಮಕ್ಕಳಿಗೆ ಇಷ್ಟವಾದ ತಿಂಡಿ ತಿನಿಸು ಸಿದ್ಧಪಡಿಸಿ ಉಣಬಡಿಸುತ್ತಾ ಬಂದಿದ್ದಾರೆ.
ವಸತಿ ಶಾಲೆಯಲ್ಲೇ ಬೆಳೆದು ದೊಡ್ಡವರಾದ ಮಕ್ಕಳನ್ನು ಸಮೀಪದ ಶಾಲೆಗಳಿಗೆ ಸೇರಿಸಿ ವಿದ್ಯೆ ಕಲಿಸುತ್ತಿದ್ದಾರೆ. ಪ್ರತಿ ವರ್ಷ ಇಲ್ಲಿಯ ಮಕ್ಕಳು ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ದಿನದಂದು ಜಿಲ್ಲಾಡಳಿತ ಆಯೋಜಿಸುವ ಪಥಸಂಚಲನದಲ್ಲಿ ಪಾಲ್ಗೊಂಡು ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ವಸತಿ ಶಾಲೆಯಲ್ಲಿ ಪ್ರತಿವರ್ಷ ಬೇಸಿಗೆ ಶಿಬಿರ ನಡೆಸಲಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳು ಬಂದು ಸಂಗೀತ, ನಾಟಕ, ಕರಕುಶಲ ತರಬೇತಿ ನೀಡುತ್ತಾರೆ, ಆದರೆ ಈ ಬಾರಿ ಕರೊನಾ ಲಾಕ್​ಡೌನ್​ನಿಂದ ಮಕ್ಕಳು ಕಲೆಯಿಂದ ವಂಚಿತರಾಗಿದ್ದರೂ ಪ್ರಜ್ಞಾ ತಮ್ಮಲ್ಲಿನ ಜ್ಞಾನ ಧಾರೆ ಎರೆದು ಮಕ್ಕಳನ್ನು ಕ್ರಿಯಾಶೀಲರಾಗಿರುವಂತೆ ನೋಡಿಕೊಂಡಿದ್ದಾರೆ. ಪ್ರಜ್ಞಾ ಅವರ ಇಂಥ ಔದಾರ್ಯ ಹಾಗೂ ನಿಸ್ವಾರ್ಥ ಸೇವೆಗೆ ಕ್ಯಾಡ್​ಬರಿ ಡೈರಿಮಿಲ್ಕ್ ಧನ್ಯವಾದ ಅರ್ಪಿಸುತ್ತದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − thirteen =
Remember me
