ಮುಂಬೈ:ಚಿಣ್ಣರ ಬಿಂಬದ 21ನೇ ವರ್ಷದ ಮಕ್ಕಳ ಉತ್ಸವವು ವಾಣಿಜ್ಯ ನಗರ ಮುಂಬೈನ ಕುರ್ಲಾ ಪೂರ್ವದ ಬಂಟರ ಭವನದ ರಾಧಾಬಾಯಿ ಟಿ. ಭಂಡಾರಿ ಸಭಾಂಗಣದಲ್ಲಿ ಚಿಣ್ಣರ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜನವರಿ 7ರ ಭಾನುವಾರದಂದು ನಡೆಯಿತು.

ಕಾರ್ಯಕ್ರಮವನ್ನು ಮುಂಬಯಿ ಸಂಸದರಾದ ಗೋಪಾಲ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕನ್ನಡ ಮಾಧ್ಯಮದಲ್ಲಿ ಕಲಿಯದ ಮಕ್ಕಳಿಗೆ ಕನ್ನಡ ಕಲಿಸಿ, ಇಂತಹ ಕಾರ್ಯಕ್ರಮವನ್ನು ಪ್ರಕಾಶ್ ಭಂಡಾರಿ ಅವರ ನೇತೃತ್ವದಲ್ಲಿ ಅವರ ಪತ್ನಿ, ಮಕ್ಕಳು ಮತ್ತು ತಂಡದ ಎಲ್ಲ ಸದಸ್ಯರ ಸಹಾಯದಿಂದ ನಡೆಸುತ್ತಿದ್ದಾರೆ. ಪ್ರತಿ ವರ್ಷ ಸುಮಾರು 7 ಸಾವಿರ ಮಕ್ಕಳಿಗೆ ತರಬೇತಿಯನ್ನು ನೀಡುತ್ತಿರುವುದು ಸುಲಭದ ಮಾತಲ್ಲ. ನಾನು ಕೂಡ ತಿಂಗಳಿಗೆ ಸುಮಾರು 250 ಕಾರ್ಯಕ್ರಮ ಅಂದರೆ ವರ್ಷಕ್ಕೆ 3000 ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಅದರಲ್ಲಿ 50 ಕಾರ್ಯಕ್ರಮಗಳು ಮುಖ್ಯವೆಂದು ಭಾವಿಸುತ್ತೇನೆ. ಅದರಲ್ಲಿ ಪ್ರಥಮ ಆದ್ಯತೆ ಈ ಕಾರ್ಯಕ್ರಮವಾಗಿದೆ ಎಂದು ಗೋಪಾಲ ಶೆಟ್ಟಿ ಹೇಳಿದರು.
ಮುಂದುವರಿದು ಮಾತನಾಡಿದ ಅವರು ಕಳೆದ 21 ವರ್ಷಗಳಿಂದ ಪ್ರಕಾಶ್ ಭಂಡಾರಿಯವರಿಗೆ ಸಹರಿಸಿದ ಎಲ್ಲರಿಗೂ ಅಭಿನಂದನೆಗಳು. ಈ ಸಂಸ್ಥೆಯ 25ನೇ ವರ್ಷಾಚರಣೆಯು ದೊಡ್ಡ ಇತಿಹಾಸವನ್ನೇ ನಿರ್ಮಿಸಲಿದೆ. ಕೇವಲ ಸಂಸದನಾಗಿ ಮಾತ್ರವಲ್ಲ ನನ್ನ ಪಕ್ಷದ ಪರವಾಗಿ ನಾನು ನಿಮ್ಮೆಲ್ಲರಿಗೂ ಅಭಿನಂದಿಸುತ್ತಿದ್ದೇನೆ. ನಮ್ಮ ನಾಡಿನ ಸಂಸ್ಕೃತಿಯನ್ನು ನಾವಿಲ್ಲಿ ಜೀವಂತವಾಗಿ ಉಳಿಸಿ ಬೆಳೆಸುತ್ತಿದ್ದೇವೆ. ಜಾಗತೀಕರಣದೊಂದಿಗೆ ನಮ್ಮ ಮಕ್ಕಳು ಕೂಡಾ ಅದಕ್ಕೆ ಹೊಂದಿಕೊಳ್ಳುವಂತಾಗಬೇಕು. ಇಂದಿನ ಮಕ್ಕಳ ಪ್ರತಿಭೆಯನ್ನು ನಿಜಕ್ಕೂ ಮೆಚ್ಚಬೇಕಾಗಿದೆ. ಅವರ ಧೈರ್ಯವನ್ನು ನಿಜಕ್ಕೂ ಮೆಚ್ಚಬೇಕಾಗಿದೆ. ನಮ್ಮ ಸಂಸ್ಕಾರವನ್ನು ಮತ್ತು ಸಂಸ್ಕೃತಿಯನ್ನು ಈ ಮಕ್ಕಳಿಗೆ ಬಾಲ್ಯದಿಂದಲೇ ತಿಳಿಸುವ ಈ ಒಂದು ಸಂಸ್ಥೆಯ ಕಾರ್ಯ ಅದ್ಭುತವಾಗಿದೆ. ಜನವರಿ 22ರ ನಂತರ ಹೊಸ ಯುಗ ಪ್ರಾರಂಭವಾಗಲಿದ್ದು, ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವಲ್ಲಿ ನಮ್ಮ ಮಹತ್ತರವಾದ ಜವಾಬ್ದಾರಿ ಇದೆ ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಚರಿಷ್ಮಾ ಬಿಲ್ಡರ್ಸ್‌ನ ಆಡಳಿತ ನಿರ್ದೇಶಕರಾಗಿರುವ ಸುಧೀರ್ ವಿ ಶೆಟ್ಟಿ ಮಾತನಾಡಿ, ಸಾವಿರಾರು ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕಾರವಂತ ಶಿಕ್ಷಣ ನೀಡುವುದು ಸುಲಭದ ಕೆಲಸವಲ್ಲ. ಇಂದು ಈ ಸಂಸ್ಥೆ ಮಾಡುತ್ತಿರುವ ಸೇವಾಕಾರ್ಯಗಳು ಗಣನೀಯವಾಗಿದೆ. ಚಿಣ್ಣರಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸುವ ಕಾರ್ಯಗಳು ಇನ್ನಷ್ಟು ನಡೆಯಲಿ. ನನ್ನ ಸಹಕಾರ ಸದಾ ಇದೆ ಎಂದು ನುಡಿದರು.
ವಿ.ಕೆ.ಗ್ರೂಪ್ ಆಫ್ ಕಂಪನಿಯ ಆಡಳಿತ ನಿರ್ದೇಶಕ ಗುತ್ತು ಕರುಣಾಕರ್ ಶೆಟ್ಟಿ ಮಾತನಾಡುತ್ತಾ, ಇಂದು ನಾವು ಎರಡೆರಡು ಸಂಭ್ರಮದಲ್ಲಿದ್ದೇವೆ. ಮಕ್ಕಳ ಉತ್ಸವ ಮತ್ತು ಪ್ರಕಾಶ್ ಭಂಡಾರಿಯವರ ಚಿಣ್ಣರ ಬಿಂಬಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂಭ್ರಮ. ಈಗಾಗಲೇ ಚಿಣ್ಣರ ಬಿಂಬದಲ್ಲಿ 7000 ಕ್ಕೂ ಹೆಚ್ಚು ಮಕ್ಕಳು ತರಬೇತಿ ಪಡೆಯುತ್ತಿದ್ದು, ಮಕ್ಕಳು ಇದರ ಲಾಭವನ್ನು ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಒಳ್ಳೆಯ ವಿದ್ಯಾರ್ಥಿಗಳಾಗಿ, ಸಭ್ಯ ಮಕ್ಕಳಾಗಿ, ತಂದೆ ತಾಯಿಯಂದಿರಿಗೆ, ಕಲಿತ ಶಾಲೆಗೆ ಹಾಗೂ ಚಿಣ್ಣರ ಬಿಂಬಕ್ಕೆ ಉತ್ತಮ ಹೆಸರನ್ನು ತರುವಂತಾಗಲಿ. ಈ ರೀತಿ ನಮ್ಮ ದೇಶಕ್ಕೂ ಕೀರ್ತಿಯನ್ನು ತರಲಿ. ನಾವೆಲ್ಲರೂ ಚಿನ್ನದ ಬಿಂಬಕ್ಕೆ ಸಾಧ್ಯವಾದಷ್ಟು ಸಹಕರಿಸೋಣ ಎಂದರು ಕರೆ ನೀಡಿದರು.
ಹೇರಂಬ ಇಂಡಸ್ಟ್ರೀಸ್​ನ ಆಡಳಿತ ನಿರ್ದೇಶಕ ಸದಾಶಿವ ಶೆಟ್ಟಿ ಕನ್ಯಾನ ಮಾತನಾಡಿ, ನನ್ನನ್ನು ವಿಶ್ವಾಸದಿಂದ ಚಿಣ್ಣರ ಬಿಂಬ ಸಂಸ್ಥೆಯ ವಿಶ್ವಸ್ಥರಾಗಿ ಮಾಡಿದ್ದಾರೆ. ಇದು ನನಗೆ ಬಹಳ ಸಂತೋಷ ನೀಡಿದೆ. ಬಹಳಷ್ಟು ಸಂಸ್ಥೆಗಳಲ್ಲಿ ನನ್ನನ್ನು ವಿಶ್ವಸ್ಥರನ್ನಾಗಿ, ಬೇರೆ ಬೇರೆ ಪದವಿಗಳನ್ನು ನೀಡಿದ್ದಾರೆ. ಆ ಸಂಸ್ಥೆಗಳಿಗಿಂತ ಈ ಸಂಸ್ಥೆ ಭಿನ್ನವಾಗಿದೆ. ಮಕ್ಕಳಿಗೆ ಸಂಸ್ಕಾರವನ್ನು ನೀಡುವುದಲ್ಲದೇ ಸಂಸ್ಕೃತಿಯನ್ನು ತಿಳಿಸುವ ಸಂಸ್ಥೆಯಿದಾಗಿದೆ. ಇದು ದೇಶದಲ್ಲಿ ಪ್ರಪ್ರಥಮವಾಗಿದೆ ಎನ್ನಬಹುದು. ಇದಕ್ಕೆ ನನ್ನಿಂದಾಗುವ ಎಲ್ಲಾ ಸೇವೆಗಳನ್ನು ಮಾಡುತ್ತೇನೆ ಎಂದು ನುಡಿದರು.

ತ್ರಿವೇಣಿ ಮ್ಯಾನೇಜ್‌ಮೆಂಟ್ ಸರ್ವೀಸಸ್ ಲಿಮಿಟೆಡ್​ ನಿರ್ದೇಶಕರಾಗಿರುವ ಸಿ.ಎ ಎನ್.ಬಿ.ಶೆಟ್ಟಿ ಮಾತನಾಡಿ, ನಾನು ಈ ಸಂಸ್ಥೆಯ ಪ್ರಾರಂಭದಿಂದಲೂ ಸಂಪರ್ಕದಲ್ಲಿರಿಸಿಕೊಂಡವನು. ಮಕ್ಕಳ ಸಂತೋಷ, ಮತ್ತವರ ಕಾರ್ಯ ಚಟುವಟಿಕೆಗಳ ಮಾತುಗಳನ್ನು ಕಂಡಾಗ ಬಹಳ ಸಂತೋಷವಾಗುತ್ತದೆ. ನಮ್ಮನ್ನು ಈ ಸಂಸ್ಥೆಯ ವಿಶ್ವಸ್ಥರನ್ನಾಗಿ ಮಾಡಿದ್ದಾರೆ. ಅದು ಕೂಡ ನನಗೆ ಬಹಳ ಆನಂದ ನೀಡಿದೆ. ಮುಂದಿನ ದಿನಗಳಲ್ಲಿ ಕೂಡ ಈ ಸಂಸ್ಥೆಗೆ ಬೇಕಾಗುವ ರೀತಿಯಲ್ಲಿ ಸಹಕಾರ ಮಾಡುತ್ತೇನೆ ಎಂದು ತಿಳಿಸಿದರು.
ಇಸ್ಸಾ‌ರ್ ಫೈನಾನ್ಸಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಆಡಳಿತ ನಿರ್ದೇಶಕರಾಗಿರುವ ಡಾ. ಆರ್. ಕೆ. ಶೆಟ್ಟಿ ಮಾತನಾಡುತ್ತಾ, ನಮ್ಮ ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗಳಿಸಿದ ಚಿಣ್ಣರ ಬಿಂಬದ ಎಲ್ಲಾ ಮಕ್ಕಳಿಗೆ, ಪ್ರಕಾಶ್ ಭಂಡಾರಿ ಮತ್ತು ಅವರ ತಂಡಕ್ಕೆ ಹಾಗೂ ಮಕ್ಕಳ ಪಾಲಕರಿಗೆ ಅಭಿನಂದನೆಗಳು. ಈ ಸಂಸ್ಥೆಯ ಟ್ರಸ್ಟಿಯಾಗಿ ನೇಮಿಸಿದಕ್ಕೆ ಚಿಣ್ಣರ ಬಿಂಬದ ಎಲ್ಲಾ ಕಾರ್ಯಕರ್ತರಿಗೆ ಅಭಾರಿಯಾಗಿದ್ದೇನೆ. ಇದರಲ್ಲಿನ ಎಲ್ಲಾ ಟ್ರಸ್ಟಿಗಳು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದವರಾಗಿದ್ದು ನಿಜಕ್ಕೂ ಸಂತಸವಾಗುತ್ತಿದೆ. ಚಿಣ್ಣರ ಬಿಂಬಕ್ಕೆ ಮುಂದಿನ ಎಲ್ಲಾ ಕಾರ್ಯಕ್ರಮಕ್ಕೆ ಶುಭ ಹಾರೈಕೆಗಳು ಎಂದರು.
ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ, ಚಿಣ್ಣರ ಬಿಂಬದ ಏಳು ಸಾವಿರ ಮಕ್ಕಳು ಎಂದರೆ ಏಳು ಸಾವಿರ ಕೋಟಿಯಂತೆ ಪ್ರಕಾಶ್ ಭಂಡಾರಿಯವರ ಆಸ್ತಿಯಾಗಿದ್ದಾರೆ. ಮಕ್ಕಳು ದೇವರ ಪ್ರತಿರೂಪವಾಗಿದ್ದು, ಮಕ್ಕಳದ್ದು ಮುಗ್ದ ಮನಸ್ಸು. ಈ ಸಂಸ್ಥೆಯ ಮೂಲಕ ಪ್ರಕಾಶ್ ಭಂಡಾರಿಯವರು ಮಕ್ಕಳನ್ನು ದೇಶದ ಉತ್ತಮ ಪ್ರಜೆಯನ್ನಾಗಿ ಮಾಡುತ್ತಿದ್ದು, ನಿಜಕ್ಕೂ ಮಕ್ಕಳಲ್ಲಿ ಉತ್ತಮ ಪರಿವರ್ತನೆಯನ್ನು ಮಾಡುತ್ತಿದ್ದಾರೆ. ಅವರೊಂದಿಗೆ ನಾವೆಲ್ಲರೂ ಸೇರಿ ಸರಕಾರಕ್ಕೆ ಮನವಿ ಮಾಡಿ ಚಿಣ್ಣರ ಬಿಂಬ ಸಂಸ್ಥೆಗೆ ಸ್ಥಳ ಒದಗಿಸುವಂತೆ ಮಾಡಬೇಕಾಗಿದೆ. ಇಂದು ಮಕ್ಕಳು ಬಹಳ ಸುಂದರವಾಗಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಈ ಸಂಸ್ಥೆ ತನ್ನ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಹತ್ತು ಸಾವಿರ ಮಕ್ಕಳನ್ನು ಹೊಂದಲಿ. ಮುಂದೆ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೊಂದಲಿ ಹಾಗೂ ಸಂಸ್ಥೆಗೆ ಇನ್ನೂ ಹೆಚ್ಚಿನ ಪ್ರಶಸ್ತಿ ದೊರೆಯಲಿ ಎಂದು ಅಭಿನಂದಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಹೇರಂಬ ಇಂಡಸ್ಟ್ರೀಸ್​ನ ಆಡಳಿತ ನಿರ್ದೇಶಕ ಸದಾಶಿವ ಶೆಟ್ಟಿ ಕನ್ಯಾನ, ತ್ರಿವೇಣಿ ಮ್ಯಾನೇಜ್‌ಮೆಂಟ್ ಸರ್ವೀಸಸ್ ಲಿಮಿಟೆಡ್​ ನಿರ್ದೇಶಕ ಸಿ.ಎ ಎನ್.ಬಿ.ಶೆಟ್ಟಿ, ವಿ ಕೆ ಗ್ರೂಪ್ ಕಂಪನಿಯ ಆಡಳಿತ ನಿರ್ದೇಶಕ ಕೆ.ಎಮ್. ಶೆಟ್ಟಿ, ಇಸ್ಸಾ‌ರ್ ಫೈನಾನ್ಸಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್​ನ ಆಡಳಿತ ನಿರ್ದೇಶಕ ಡಾ. ಆರ್. ಕೆ. ಶೆಟ್ಟಿ ಅವರು ವಿಶ್ವಸ್ಥರಾಗಿ ಚಿಣ್ಣರ ಬಿಂಬ ಸಂಸ್ಥೆಗೆ ಸ್ವಾಗತಿಸಿದ ಬಳಿಕ ಪದಗ್ರಹಣ ಸ್ವೀಕರಿಸಿದರು. ಡಾ. ಸುರೇಂದ್ರ ಕುಮಾರ್ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿಯವರು ಚಿಣ್ಣರ ಬಿಂಬದ ಉದ್ದೇಶಗಳನ್ನು ತಿಳಿಸಿದರು.
ವೇದಿಕೆಯಲ್ಲಿ ಸ್ಥಾಪಕ ಕಾರ್ಯಾಧ್ಯಕ್ಷೆ ಪೂಜಾ ಪ್ರಕಾಶ್ ಭಂಡಾರಿ, ಕಾರ್ಯಾಧ್ಯಕ್ಷೆ ನಯನಾ ಪ್ರಕಾಶ್ ಭಂಡಾರಿ, ಗೀತಾ ಹೇರಳ, ಚಿಣ್ಣರ ಬಿಂಬದ ವಿಶ್ವಸ್ಥರಾದ ಡಾ ಸುರೇಂದ್ರ ಕುಮಾರ್ ಹೆಗ್ಡೆ, ಭಾಸ್ಕರ್ ಶೆಟ್ಟಿ ತಾಳಿಪಾಡಿ ಗುತ್ತು, ರಮೇಶ್ ರೈ, ಚಿಣ್ಣರ ಬಿಂಬದ ಸಮಿತಿಯ ಸದಸ್ಯರು, ಮತ್ತಿತರರು ಉಪಸ್ಥರಿದ್ದರು. ಕಾರ್ಯಕ್ರಮವನ್ನು ಪ್ರಾರಂಭದಲ್ಲಿ ಡಾ. ಪೂರ್ಣಿಮಾ ಶೆಟ್ಟಿ ನಿರೂಪಿಸಿದರು. ಸಭಾ ಕಾರ್ಯಕ್ರಮವನ್ನು ಅಶೋಕ್ ಪಕ್ಕಳ, ಪ್ರತ್ಯುಶ ಬಲ್ಲಾಳ್, ವಂಶಿಕ್ ಪೂಜಾರಿ ನಿರೂಪಿಸಿದರು. ಅತಿಥಿಗಳನ್ನು ಚಿಂತನ ಶೆಟ್ಟಿ, ಯಜ್ಞಾ ಶೆಟ್ಟಿ, ತನಿಷಾ ಶೆಟ್ಟಿಗಾರ್, ಆತ್ಮಿ ಶೆಟ್ಟಿ ಪರಿಚಯಿಸಿದರು. ಮಧ್ಯಾಹ್ನದಿಂದ ಚಿಣ್ಣರಿಂದ ಸಮೂಹ ಭಜನೆ, ಪ್ರತಿಭಾ ಪ್ರದರ್ಶನ, ಪಾಲಕರ ಸಮೂಹ ಗಾಯನ ಹಾಗೂ ವೈವಿಧ್ಯಮಯ ಮನೋರಂಜನ ಕಾರ್ಯಕ್ರಮಗಳು, ರಾಜ್ಯೋತ್ಸವದ ಸಂಭ್ರಮಾಚರಣೆ ನಡೆಯಿತು.
ಆರೋಗ್ಯದ ಸ್ಥಿತಿ ಆಧರಿಸಿ ಅಯೋಧ್ಯೆಗೆ ದೇವೇಗೌಡರ ಭೇಟಿ

ವರ್ಷದ ಆರಂಭದಲ್ಲೇ ನಿಜವಾಯ್ತು ಬಾಬಾ ವಂಗಾ ನುಡಿದ ಎರಡು ಭಯಾನಕ ಭವಿಷ್ಯವಾಣಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
