ತ್ರಾಸಿನಲಿ ಕಪ್ಪೆಗಳ ಸರಿಕೂಡಿಸುವ ಚತುರಿ|ಸಂಸ್ಖೃ ದ್ವಂದ್ವಗಳ ಸಮತೂಗಲರಿವಂ||ಬೀಸುಕತ್ತಿಗಳ ಮಧ್ಯದಿ ನೂಲಮೇಲ್ ನಡೆವ|ಸಾಸವೀ ಗೃಹಧರ್ಮ-ಮಂಕುತಿಮ್ಮ||606||
ತಕ್ಕಡಿಯಲ್ಲಿ ಕಪ್ಪೆಗಳನ್ನು ಇಟ್ಟು ತೂಕ ನೋಡಲು ಸಾಧ್ಯವಿರುವ ಚತುರನು ಸಂಸ್ಕೃತಿ ಮತ್ತು ದ್ವಂದ್ವಗಳನ್ನು ಸಮತೂಗಿಸಿಕೊಂಡು ಹೋಗಬಲ್ಲ. ಬೀಸುವ ಕತ್ತಿಗಳ ನಡುವೆ ನೂಲ ಮೇಲೆ ನಡೆಯುವಂಥಹುದೇ ಸಾಹಸ ಈ ಗೃಹಧರ್ಮ ಅಂದರೆ ಸಂಸಾರ ಎನ್ನುತ್ತದೆ ಈ ಕಗ್ಗ. ಹುಟ್ಟಿದಂದಿನಿಂದಲೇ ಹಲವು ವಿಧದಲ್ಲಿ ಸುತ್ತಿಕೊಳ್ಳುವ ಬಾಂಧವ್ಯದ ಎಳೆಗಳು ಜೀವಪೋಷಕವೂ ಆಗಬಹುದು, ಬಂಧನವೂ ಆಗಬಹುದು. ವಿಭಿನ್ನ ಸ್ವಭಾವ ಮತ್ತು ಜೀವನ ದೃಷ್ಟಿಯ ಜನರು ಸೌಹಾರ್ದದಿಂದ ಬಾಳುವುದು ಸುಲಭದ ಮಾತಲ್ಲ. ಯಾವುದೋ ನಿಯಮ, ಸಿದ್ದಾಂತಗಳ ಆಧಾರವಿಲ್ಲದೆ ಒಮ್ಮತವು ಸಾಧ್ಯವಿಲ್ಲ. ಸಹಮತವಿಲ್ಲದಿದ್ದರೂ ನಂಬಿದ ಆದರ್ಶಕ್ಕಾಗಿ ಒಗ್ಗೂಡುವುದು, ಕ್ಲೇಶ ಮರೆತು ಜೊತೆಗೆ ದುಡಿಯುವುದು ಸಾಮಾನ್ಯ.
ಅಸಹನೆ, ಬೇಸರಗಳನ್ನು ಮೀರಿ ಯಾವುದೋ ಕಾರಣಕ್ಕಾಗಿ ಸಂಘಟನೆಯ ಸದಸ್ಯರು ಹೊಂದಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಕುಟುಂಬದಲ್ಲೂ ಅಸಮಾಧಾನ, ಬಲಿಷ್ಠರ ಸರ್ವಾಧಿಕಾರ, ಅನ್ಯಾಯ, ಅವಮಾನಗಳಾಗುತ್ತಿದ್ದರೂ ಕೌಟುಂಬಿಕ ಮೋಹವು ಎಲ್ಲವನ್ನೂ ಸಹಿಸಿಕೊಳ್ಳುವಂತೆ ಮಾಡಿರುತ್ತದೆ.
ಎಲ್ಲರನ್ನೂ ಏಕಸೂತ್ರದಲ್ಲಿ ಕೊಂಡೊಯ್ಯಲು, ಎಲ್ಲರನ್ನೂ ಒಮ್ಮತದಿಂದ ಒಂದಾಗಿಸಲು ಶ್ರಮಿಸುವ ನಾಯಕನಿಗೆ ವಿಶೇಷವಾದ ಕೌಶಲ ಬೇಕು. ಸರ್ವಾಧಿಕಾರಿಯಂತೆ ವರ್ತಿಸದೆ ಸಮಚಿತ್ತದಿಂದ ಪರಿಸ್ಥಿತಿಯನ್ನು ನಿಭಾಯಿಸುವ, ಪ್ರತಿಯೊಬ್ಬ ಸದಸ್ಯನನ್ನು ಗೌರವಿಸುವ ಜಾಣ್ಮೆಯನ್ನು ಹೊಂದಿರಬೇಕು. ಅಸೂಯೆ, ಅಹಂಕಾರ, ಪೂರ್ವಗ್ರಹ, ಸ್ವಾರ್ಥ, ತಾರತಮ್ಯ, ಉದ್ವೇಗ ಮುಂತಾದ ನಕಾರಾತ್ಮಕ ಭಾವಗಳನ್ನು ಪೋಷಿಸದೆ ವಿಶಾಲವಾಗಿ ಯೋಚಿಸುವ ನಾಯಕತ್ವದ ಗುಣವು ಭವದ ಬದುಕಿಗೆ ಬಂದ ಪ್ರತಿಯೊಬ್ಬರಿಗೂ ಬೇಕು.
ಸದಾ ಕುಪ್ಪಳಿಸುವ ಕಪ್ಪೆಗಳನ್ನು ತಕ್ಕಡಿಯಲ್ಲಿಟ್ಟು ತೂಕ ಮಾಡಲು ಸಾಧ್ಯವೇನು? ಎಲ್ಲೆಂದರಲ್ಲಿಗೆ ನೆಗೆಯುವ, ಸ್ಥಿರಬುದ್ಧಿ ಇಲ್ಲದ ಕಪ್ಪೆಗಳನ್ನು ಹಿಡಿದಿಡಲು, ತೂಕ ಮಾಡಲು ತಿಳಿದಿರುವವನು ನಿಜವಾಗಿಯೂ ಚತುರನೇ ಹೌದು. ಅಂತೆಯೇ ಸಂಸಾರದಲ್ಲಿ ಅವೆಷ್ಟೋ ಸಂಬಂಧಗಳು ಜೊತೆಗೂಡಿರುತ್ತವೆ. ಪ್ರತಿಯೊಬ್ಬರದ್ದೂ ವಿಭಿನ್ನ ಗುಣಸ್ವಭಾವ. ಜತೆಗೆ ಮತ್ಸರ, ಹಗೆ, ಅಹಂಕಾರ, ವ್ಯಾಮೋಹಗಳಿಗೆ ಒಳಗಾಗುವ ಸಂದರ್ಭಗಳು. ಇವರೆಲ್ಲರನ್ನೂ ಏಕಸೂತ್ರದಲ್ಲಿ ಸೌಹಾರ್ದದಿಂದ ಬದುಕುವಂತೆ ಮಾಡುವುದು ಸುಲಭವಲ್ಲ. ಒಬ್ಬರಿಗೆ ಸರಿ ಎನ್ನಿಸಿದ್ದು ಇನ್ನೊಬ್ಬರಿಗೆ ತಪ್ಪಾಗಿ ಕಾಣಬಹುದು. ಅವರವರ ತಿಳಿವಳಿಕೆ, ಅನುಭವಕ್ಕೆ ಒಳಪಟ್ಟಂತೆ ಅಭಿಮತಗಳು ವ್ಯಕ್ತವಾಗುತ್ತವೆ. ಇದರಿಂದಾಗಿ ಪರಸ್ಪರ ಕೋಪ, ತಾಪ, ಹಗೆತನಗಳು ಬೆಳೆಯುವುದು, ಸಂಸಾರದ ನೆಮ್ಮದಿಗೆ ಮಾರಕವಾಗುವುದು ಸುಳ್ಳಲ್ಲ. ಇದು ಸಂಸಾರಕ್ಕಷ್ಟೇ ಸೀಮಿತವಾಗಿರದೆ, ಸಂಸ್ಥೆ, ರಾಜ್ಯ, ದೇಶಗಳವರೆಗೂ ವ್ಯಾಪಿಸಿರುತ್ತದೆ.
ಪರಿಷ್ಕರಣೆಗೆ ಒಳಪಡುತ್ತಾ ಸ್ಥಿರವಾಗಿ ರೂಪುಗೊಂಡ ಸಂಸ್ಕೃತಿಯು ಮನೆಯಿಂದ ತೊಡಗಿ ವಿಶ್ವದವರೆಗೂ ವಿಸ್ತರಿಸಿಕೊಂಡಿದೆ. ಆದರೆ ಇದರಲ್ಲಿ ಏಕರೂಪತೆ ಇಲ್ಲ. ಹಾಗಾಗಿ ಏಕಾಭಿಪ್ರಾಯವು ಸಾಧ್ಯವಿಲ್ಲ. ಸಂಸ್ಕೃತಿ ಎಂದರೆ ಪ್ರಕೃತಿಗೆ ಸಹಜವಾದ ವಸ್ತು ವಿಚಾರವನ್ನು ವಿವೇಕದಿಂದ ಸೊಗಸಾಗಿಸುವುದು. ಜೀವನದಲ್ಲಿ ಯಾವುದೂ ಅತಿಯಾಗದಂತೆ ಎಚ್ಚರಿಕೆ ವಹಿಸುವುದು ಸಂಸ್ಕೃತಿಯ ರೀತಿ. ಹಲವರಿಗೆ ವೇಗದ, ಭೋಗದ, ಅಬ್ಬರಿಸುವ ಜೀವನಗತಿಯು ಇಷ್ಟ. ಇವರೆಂದಿಗೂ ಸಂಸ್ಕೃತಿಯ ಮಿತಿಗೆ ಒಳಪಡುವವರಲ್ಲ. ಹೀಗೆ ಎಲ್ಲವನ್ನೂ ಆವೇಶ ಮತ್ತು ಆವೇಗದಿಂದ ನೋಡುವವರು ಬದುಕಿನ ಸಂದರ್ಭಗಳಲ್ಲಿ ವಿಪರೀತವಾಗಿ ವರ್ತಿಸುತ್ತಾರೆ. ಒತ್ತಡಕ್ಕೆ ಸಿಲುಕುತ್ತಾರೆ. ಆದರೆ ಸಂಸ್ಕೃತಿಯ ಮಿತಿಯೊಳಗೆ ಇರಲು ಬಯಸುವವರನ್ನು ಎಂದಿಗೂ ದ್ವಂದ್ವವು ಕಾಡುವುದಿಲ್ಲ. ಅವರು ಪೂರ್ವಗ್ರಹ ಪೀಡಿತರಲ್ಲ. ಹಾಗೆಂದು ತನ್ನ ಸುತ್ತಲೂ ನಡೆಯುತ್ತಿರುವ ಅನ್ಯಾಯವನ್ನು, ಆವೇಶದ ವರ್ತನೆಗಳನ್ನು ಕಂಡು ಮೌನ ವಹಿಸುವವರಲ್ಲ. ಅವುಗಳನ್ನು ತಿದ್ದುವುದಕ್ಕೆ ಸಂಯಮದಿಂದ ಪ್ರಯತ್ನಿಸುತ್ತಾರೆ. ಮನಸ್ಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುತ್ತಾರೆ. ಅನ್ಯಾಯವನ್ನು ಸಹಿಸದೆ, ಅನ್ಯಾಯಕ್ಕೆಳಸದೆ ಅವ್ಯವಸ್ಥೆಯಲ್ಲೂ ವ್ಯವಸ್ಥೆಯನ್ನು ತರಬಲ್ಲ, ಪ್ರತಿಕೂಲ ಸಂದರ್ಭದಲ್ಲೂ ಎಲ್ಲವನ್ನೂ ಸರಿತೂಗಿಸಿಕೊಂಡು ಹೋಗಬಲ್ಲ ಧರ್ಮಬುದ್ಧಿಯು ಯಜಮಾನನಿಗಿದ್ದರೆ ಸಂಸಾರವು ಸುಖಪ್ರದವಾಗಿರುತ್ತದೆ. ಹರಿತವಾದ ಕತ್ತಿಯನ್ನು ಒಂದೇ ಸವನೆ ಬೀಸುತ್ತಿರುವಾಗ ಅವುಗಳಿಂದ ತಪ್ಪಿಸಿಕೊಂಡು ಹಗ್ಗದ ಮೇಲೆ ನಡೆಯುವ ಸಾಹಸವನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಸಂಸ್ಕೃತಿ ಮತ್ತು ಅದನ್ನು ಮೀರುವ ಅನಿವಾರ್ಯತೆಗಳನ್ನು ತಂದಿಡುವ ವೈಪರೀತ್ಯಗಳು ಬೀಸುಕತ್ತಿಯಂತೆ ವ್ಯಕ್ತಿಯ ಅಂತಃ ಸತ್ತ್ವವನ್ನು ಪರೀಕ್ಷಿಸುತ್ತಿರುತ್ತದೆ. ಅವುಗಳಿಂದ ತಪ್ಪಿಸಿಕೊಂಡು ಸಂಸಾರವೆಂಬ ನೂಲಿನ ಮೇಲೆ ನಡೆಯುವ ಕೌಶಲ ಇರುವಾತನು ಉತ್ತಮ ಗೃಹಸ್ಥನಾಗುತ್ತಾನೆ. ಎಲ್ಲಾ ರೀತಿಯ ಬಾಂಧವ್ಯಗಳನ್ನು ಉಳಿಸಿಕೊಂಡು, ವಿವಿಧ ಮನೋಭಾವದ ಜನರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುವ ಕುಶಲತೆಯು ಒಂದು ತಪಸ್ಸಿನಂತೆ. ಇದು ಆತ್ಮಕ್ಕೆ ಶಿಕ್ಷಣ, ಆತ್ಮೋದ್ಧಾರಕ್ಕೆ ಕಾರಣ.
ಕ್ರಿಕೆಟಿಗ ಸರ್ಫರಾಜ್ ಖಾನ್ ತಂದೆಗೆ ಥಾರ್ ಬಹುಮಾನ: ಆನಂದ್ ಮಹೀಂದ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
