ತುಮಕೂರು ಲೋಕಸಭಾ ಅಖಾಡಕ್ಕೆ ಕಳೆದ ಬಾರಿ ಅಚ್ಚರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸ್ಪರ್ಧಿಸಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ನಡುವೆ ಫೈಟ್ ಜೋರಾಗಿತ್ತು. ಬದಲಾದ ಬೆಳವಣಿಗೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಈ ಬಾರಿ ಕಾಂಗ್ರೆಸ್ ಜತೆ ಹೋರಾಟ ನಡೆಸಲಿವೆ.
| ಜಗನ್ನಾಥ್ ಕಾಳೇನಹಳ್ಳಿ ತುಮಕೂರುಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಚುನಾವಣಾ ಅಖಾಡದಲ್ಲಿ ಮಣಿಸಿ ರಾಷ್ಟ್ರದಲ್ಲಿ ಗಮನಸೆಳೆದಿದ್ದ ‘ದೈತ್ಯ ಸಂಹಾರಿ’, ಐದು ಬಾರಿ ಲೋಕಸಭೆಯಲ್ಲಿ ತುಮಕೂರು ಕ್ಷೇತ್ರ ಪ್ರತಿನಿಧಿರುವ ಹಾಲಿ ಸಂಸದ ಜಿ.ಎಸ್.ಬಸವರಾಜು ಚುನಾವಣಾ ರಾಜಕಾರಣಕ್ಕೆ ಗುಡ್​ಬೈ ಹೇಳುತ್ತಿರುವುದು ಕದನಕಣದ ಚಿತ್ರಣವನ್ನೇ ಬದಲಿಸಿದೆ.
2019ರ ಲೋಕ ಸಮರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಏರ್ಪಟ್ಟಿದ್ದರಿಂದ ದೇವೇಗೌಡರಿಗಾಗಿ ಕ್ಷೇತ್ರವನ್ನು ಅಂದು ಕಾಂಗ್ರೆಸ್ ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇಗೌಡ ‘ತ್ಯಾಗ’ ಮಾಡಿದ್ದರು. ನಂತರದ ರಾಜಕೀಯ ಬೆಳವಣಿಗೆಗಳಿಂದ ಕಮಲ ಮುಡಿದಿದ್ದ ಎಸ್ಪಿಎಂ, ಮತ್ತೆ ಕೈ ಹಿಡಿದಿರುವುದು 2024ರ ಚುನಾವಣೆಗೆ ಸಮರ್ಥ ಅಭ್ಯರ್ಥಿ ಶೋಧ ನಡೆಸಿದ್ದ ಕಾಂಗ್ರೆಸ್​ನ ದೊಡ್ಡ ಚಿಂತೆಯನ್ನೇ ದೂರ ಮಾಡಿದೆ. ಸಚಿವ ಟಿ.ಬಿ.ಜಯಚಂದ್ರ ಪುತ್ರ ಸಂಜಯ್ ಜಯಚಂದ್ರ, ಕೆಪಿಸಿಸಿ ವಕ್ತಾರರಾದ ಮುರಳೀಧರ ಹಾಲಪ್ಪ, ನಿಕೇತ್ ರಾಜ್ ಮೌರ್ಯ ಹೆಸರೂ ಕೈ ಪಾಳಯದಲ್ಲಿ ಕೇಳಿಬಂದಿವೆ.
ಕ್ಷೇತ್ರ ಉಳಿಸಿಕೊಳ್ಳುವ ಸವಾಲು ಬಿಜೆಪಿಗೆ ಎದುರಾಗಿದ್ದು, ಸೀಟು ಹಂಚಿಕೆ ಬಳಿಕವಷ್ಟೇ ಮೈತ್ರಿ ಅಭ್ಯರ್ಥಿ ಫೈನಲ್ ಆಗಲಿದೆ. ಈ ನಡುವೆ ಮಾಜಿ ಸಚಿವ ವಿ.ಸೋಮಣ್ಣ ಹೆಸರನ್ನು ಬಸವರಾಜು ಮುನೆ್ನಲೆಗೆ ತಂದಿದ್ದಾರೆ. ಇದು ಜಿಲ್ಲಾ ಬಿಜೆಪಿಯಲ್ಲಿ ಬಣ ಸೃಷ್ಟಿಗೆ ಕಾರಣವಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಬಳಿ ಸ್ಪರ್ಧೆ ಇಂಗಿತ ವ್ಯಕ್ತಪಡಿಸಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಥಳೀಯರು, ಹೊರಗಿನವರು ಎಂಬ ಅಸ್ತ್ರ ಪ್ರಯೋಗಿಸಿದ್ದಾರೆ. ಹಿರಿಯ ಬಿಜೆಪಿ ಮುಖಂಡ ದೊಡ್ಡಮನೆ ಗೋಪಾಲಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್, ಬಿಜೆಪಿ ಕಾರ್ಯದರ್ಶಿ ವಿನಯ್ಬಿದರೆ, ರಾಜ್ಯ ವಕ್ತಾರ ಎಚ್.ಎನ್.ಚಂದ್ರಶೇಖರ್, ಜಿಲ್ಲಾ ಕೋಶಾಧ್ಯಕ್ಷ ಡಾ.ಎಸ್.ಪರಮೇಶ್, ಸ್ಪೂರ್ತಿ ಡೆವಲಪರ್ಸ್​ನ ಎಸ್.ಪಿ.ಚಿದಾನಂದ ಪ್ರಬಲ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.
ಮತ ಲೆಕ್ಕಾಚಾರ:ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿ.ಎಸ್.ಬಸವರಾಜು 5,96,127 ಮತ ಪಡೆದು 13,339 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಪ್ರತಿ ಸ್ಪರ್ಧಿ ಎಚ್.ಡಿ.ದೇವೇಗೌಡ 5,82,788 ಮತ ಪಡೆದು ಸೋಲುಂಡರು.
ಜಾತಿ ವೋಟ್ ಬ್ಯಾಂಕ್:ಕಾಂಗ್ರೆಸ್ ಟಿಕೆಟ್ ಮುದ್ದಹನುಮೇ ಗೌಡರಿಗೆ ಗ್ಯಾರಂಟಿ ಆದಲ್ಲಿ ಬಿಜೆಪಿ ತನ್ನ ಪ್ರಬಲ ವೋಟ್ ಬ್ಯಾಂಕ್ ಲಿಂಗಾಯತ ಸಮಾಜದ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ಇದೆ. ಒಕ್ಕಲಿಗ ಮತಗಳಿಗೆ ಜೆಡಿಎಸ್ ದೋಸ್ತಿಯನ್ನೇ ನೆಚ್ಚಿಕೊಂಡಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಏರ್ಪಟ್ಟಿದೆಯಾದರೂ ಕ್ಷೇತ್ರಕ್ಕಾಗಿ ಜೆಡಿಎಸ್ ಪಟ್ಟು ಹಿಡಿಯುವ ಸಾಧ್ಯತೆ ಕಡಿಮೆ. ಏಕೆಂದರೆ, ಈವರೆಗೆ ಒಮ್ಮೆ ಮಾತ್ರ ಜನತಾದಳ ಗೆದ್ದಿದೆ. ಅಲ್ಲದೆ, ಕಳೆದ ಬಾರಿ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದರೂ ಗೆಲುವಿನ ದಡ ಮುಟ್ಟಲಾಗಲಿಲ್ಲ. ಈ ನಡುವೆ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಜಿ.ಜ್ಯೋತಿಪ್ರಕಾಶ್ ಮಿರ್ಜಿ ಜೆಡಿಎಸ್ ಸೇರ್ಪಡೆ ಕುತೂಹಲ ಕೆರಳಿಸಿದೆ.
ಮೋದಿ-ರಾಮ ನಾಮ ಬಲದ ‘ಗ್ಯಾರಂಟಿ’:ಪ್ರತಿಬಾರಿಯಂತೆ ಚುನಾವಣೆಯಲ್ಲಿ ಅಭಿವೃದ್ಧಿ ವಿಚಾರ ಗೌಣವಾಗಲಿದ್ದು, ಜಾತಿ ಮುನ್ನೆಲೆಗೆ ಬರಲಿದೆ. ಈ ಬಾರಿ ಕಾಂಗ್ರೆಸ್ ‘ಗ್ಯಾರಂಟಿ’ ಹೆಚ್ಚು ಸದ್ದು ಮಾಡುತ್ತಿದೆಯಾದರೂ ಲೋಕ ಸಮರದಲ್ಲಿ ಮೋದಿ, ರಾಮ ನಾಮ ಎಲ್ಲ್ಲೆಡೆ ಕೇಳಿಬರುತ್ತಿದೆ. ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕೊಬ್ಬರಿ ಬೆಳೆಗಾರರ ಕೂಗು ಕೇಳುವುದೇ ಇಲ್ಲ. ಹೇಮೆ, ಎತ್ತಿನಹೊಳೆ, ಭದ್ರಾ ಯೋಜನೆಗಳು ಮತದಾರರ ಮೇಲೆ ಪರಿಣಾಮ ಬೀರುವಂತೆ ಕಾಣುತ್ತಿಲ್ಲ.
ಲಿಂಗಾಯತರ ಪ್ರಾಬಲ್ಯ ಕ್ಷೇತ್ರ:1967ರಿಂದ 1984ರವರೆಗೆ ಸತತ 4 ಬಾರಿ ಕಾಂಗ್ರೆಸ್ ಸಂಸದರಾಗಿದ್ದ ಒಕ್ಕಲಿಗ ಸಮುದಾಯದ ಕೆ.ಲಕ್ಕಪ್ಪಗೆ 1984ರಲ್ಲಿ ಟಿಕೆಟ್ ‘ಕೈ’ ತಪ್ಪಿತು. 1984ರಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿದ ಜಿ.ಎಸ್.ಬಸವರಾಜು ಮೊದಲ ಪ್ರಯತ್ನದಲ್ಲೇ ಲೋಕಸಭೆ ಪ್ರವೇಶಿಸಿ, ಕ್ಷೇತ್ರವನ್ನು ಲಿಂಗಾಯತರ ತೆಕ್ಕೆಗೆ ಪಡೆದುಕೊಂಡರು. ಈವರೆಗಿನ 10 ಚುನಾವಣೆಗಳಲ್ಲಿ 1996ರಲ್ಲಿ ಜನತಾದಳದ ಸಿ.ಎನ್.ಭಾಸ್ಕರಪ್ಪ, 2014ರಲ್ಲಿ ಕಾಂಗ್ರೆಸ್​ನ ಎಸ್.ಪಿ.ಮುದ್ದಹನುಮೇಗೌಡ ಹೊರತು ಪಡಿಸಿ ಲಿಂಗಾಯತ ಸಮುದಾಯದ ಬಸವರಾಜು 3 ಬಾರಿ ಕಾಂಗ್ರೆಸ್​ನಿಂದ 2 ಬಾರಿ ಬಿಜೆಪಿಯಿಂದ ಹಾಗೂ ಬಿಜೆಪಿಯಿಂದ ಮಲ್ಲಿಕಾರ್ಜುನಯ್ಯ 3 ಬಾರಿ ಗೆದ್ದಿರುವ ಇತಿಹಾಸ ಕ್ಷೇತ್ರದ್ದಾಗಿದೆ.
ಹೆಲಿಕಾಪ್ಟರ್ ತಯಾರಿಕ ಘಟಕ ಸ್ಥಾಪನೆ :ವಿಶ್ವಭೂಪಟದಲ್ಲಿ ತುಮಕೂರು ಜಿಲ್ಲೆಯ ಹೆಸರನ್ನು ಮೂಡಿಸಿದ ಕೀರ್ತಿ ಸಂಸದ ಜಿ.ಎಸ್.ಬಸವರಾಜುಗೆ ಸಲ್ಲುತ್ತದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಎಚ್​ಎಎಲ್ ಹೆಲಿಕಾಪ್ಟರ್ ತಯಾರಿಕ ಘಟಕ ಸ್ಥಾಪನೆಗೆ ಹಗಲಿರುಳು ಶ್ರಮಿಸಿದ್ದಾರೆ. ಗುಬ್ಬಿ ತಾಲೂಕು ಬಿದರೆಹಳ್ಳ ಕಾವಲ್​ನ 610 ಎಕರೆ ಪ್ರದೇಶದಲ್ಲಿ 6400 ಕೋಟಿ ರೂ. ವೆಚ್ಚದ ಎಚ್​ಎಎಲ್ ನಿರ್ವಣಗೊಂಡಿದೆ. ವಸಂತನರಾಸಪುರದಲ್ಲಿ 100 ಕೋಟಿ ವೆಚ್ಚದ ಫುಡ್​ಪಾರ್ಕ್ ಸ್ಥಾಪನೆ, ಜಿಲ್ಲಾ ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್, ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್, ತುಮಕೂರು-ರಾಯದುರ್ಗ, ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆ ಯೋಜನೆ, ಬೆಂಗಳೂರು-ತುಮಕೂರು ದ್ವಿಪಥ ರೈಲು ಮಾರ್ಗ ನಿರ್ಮಾಣ ಗಮನಾರ್ಹ. 5 ವರ್ಷದಲ್ಲಿ ಸಂಸದರ ಪ್ರದೇಶಾಭಿವೃದ್ಧಿಯಡಿ 11.53 ಕೋಟಿ ರೂ. ಬಿಡುಗಡೆಯಾಗಿದ್ದು, 11.28 ಕೋಟಿ ರೂ., ಬಳಕೆ ಆಗಿದೆ.
ಸದನದಲ್ಲಿ ಹಾಜರಾತಿ :ಸಂಸದ ಬಸವರಾಜು ಸಂಸತ್ ಕಲಾಪದಲ್ಲಿ ಶೇ.65 ಹಾಜರಾತಿ ಹೊಂದಿದ್ದಾರೆ. 59 ಪ್ರಶ್ನೆಗಳನ್ನು ಕೇಳಿದ್ದು 7 ಚರ್ಚೆಗಳಲ್ಲಿ ಭಾಗಿಯಾಗಿದ್ದಾರೆ.
IPL​ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಬಿಗ್ ಶಾಕ್! ಸ್ಟಾರ್​ ಆಟಗಾರನಿಗೆ ಗಾಯ! ತಂಡದಿಂದ ಹೊರಕ್ಕೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − 8 =
Remember me
