‘ಕಾಳಿ ಸೇತುವೆ ಬಿತ್ತಂತೆ’ ಹೀಗೊಂದು ಸಂದೇಶವನ್ನು ಬೆಳಗ್ಗೆ ಮೊಬೈಲಿನಲ್ಲಿ ಓದುತ್ತಿದಂತೆಯೇ ಹೌಹಾರಿದೆ. ಮನಸ್ಸು ಫ್ಲ್ಯಾಶ್​ಬ್ಯಾಕ್​ಗೆ ಹೋಗಿ ಬಾಲ್ಯದ ದಿನಗಳಿಗೆ ಜಾರಿತು. ಚಿಕ್ಕವರಿದ್ದಾಗ ಅಮ್ಮನ ತವರೆಂದು ಪ್ರತಿ ಬೇಸಿಗೆ ರಜೆಗೆ ನಮ್ಮ ಕಾರವಾರ ಪ್ರವಾಸ ನಿಕ್ಕಿಯಾಗಿರುತ್ತಿತ್ತು. ಆಗ ಸೋದರಮಾವ ಸದಾಶಿವಗಡದ ಕೋಟೆ ತೋರಿಸಲು ಕಾರವಾರದಿಂದ ಬಾರ್ಜ ಮೂಲಕ ನದಿನೀರಲ್ಲಿ ಕಾಳಿ ಸಂಗಮವನ್ನು ದಾಟಿ ಸದಾಶಿವಗಡಕ್ಕೆ ಕರೆದುಕೊಂಡು ಹೋಗುವಾಗ ನಮಗೆಲ್ಲ ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೆ ಬಂದೇವೇನೋ ಎನ್ನುವಂತಹ ಅನುಭವ. ನದಿ ದಾಟುವಾಗ ಸೋದರಮಾವ, ‘ಇಲ್ಲಿ ಸದ್ಯದಲ್ಲೇ ಸೇತುವೆ ಬರಲಿದೆ. ಆಮೇಲೆ ನಾವು ಅದರ ಮೇಲೆಯೇ ಸದಾಶಿವಗಡಕ್ಕೆ ಹೋಗಬಹುದು’ ಎಂದು ಹೇಳುತ್ತಿದ್ದರು. ಮಜವೆಂದರೆ ಅದನ್ನು ಕೇಳುತ್ತಲೇ ನಮ್ಮ ಶಾಲಾದಿನಗಳು ಮುಗಿದು ಹೋದರೂ ಸೇತುವೆಯ ನಿರ್ಮಾಣ ಮಾತ್ರ ನಡೆಯುತ್ತಲೇ ಇತ್ತು. ನಂತರ ಹೈಸ್ಕೂಲಿಗೆ ಬಂದು ಕಾಲೂರು ವಷ್ಟರಲ್ಲಿ ಒಂದು ದಿನ ಕಾಳಿ ಸೇತುವೆ ಉದ್ಘಾಟನೆಗೊಂಡಿರುವ ಸುದ್ದಿ ಪತ್ರಿಕೆಗಳಲ್ಲಿ ಓದಿದೆ. ಆ ವರ್ಷದ ಬೇಸಿಗೆ ರಜೆಗೆ ವಾಡಿಕೆಯಂತೆ ಕಾರವಾರಕ್ಕೆ ಹೋಗಿ ಮೊದಲ ಬಾರಿ ಕಾಳಿ ಸೇತುವೆಯ ಮೇಲೆ ಓಡಾಡಿದಾಗ ನನಗಂತೂ ‘ಲವ್ ಎಟ್ ಫಸ್ಟ್ ಸೈಟ್’.
ಕಾಳಿ ಅರಬ್ಬಿ ಸಂಗಮವನ್ನು ಸೇತುವೆ ಮೇಲಿನಿಂದಲೇ ನೋಡಿ ಕಣ್ತುಂಬಿಕೊಂಡಾಗ ಒಂದು ಕ್ಷಣಕ್ಕೆ ನಾನೇ ಹಕ್ಕಿಯಾಗಿ ಹಾರಾಡುತ್ತಿರುವ ಅನುಭವ. ಸೂರ್ಯೋದಯಕ್ಕೂ ಮುನ್ನವೇ ತಮ್ಮ ಕಾಯಕದಲ್ಲಿ ತೊಡಗಿಕೊಳ್ಳುವ ಬೆಸ್ತರು, ನಿಲ್ದಾಣಕ್ಕಿಂತ ಪ್ರಯಾಣವೇ ಹೆಚ್ಚು ಆಹ್ಲಾದಕರವೆಂಬ ಭಾವವನ್ನು ಮನದಲ್ಲಿ ತೇಲಿಸುತ್ತಿದ್ದ ಸದಾಶಿವಗಡದ ಗುಡ್ಡವನ್ನು ಸೀಳಿ ಮುನ್ನುಗ್ಗುವ ಹೆದ್ದಾರಿ, ಗೋವಾದಿಂದ ಬರುವ ಪ್ರಯಾಣಿಕರಿಗೆ ಕರ್ನಾಟಕಕ್ಕೆ ಸ್ವಾಗತಿಸಲು ಪ್ರಕೃತಿಯೇ ಎದ್ದು ನಿಂತಂತಿದ್ದ ಸೀಳಿದ ಗುಡ್ಡದ ಕಮಾನು, ಪ್ರತಿದಿನ ಬಂದು ತನ್ನ ಹಾಜರಿಯಿಂದ ಪ್ರೇಮಿಗಳಿಗೆ ಕಚಗುಳಿ, ಚಿಣ್ಣರಿಗೆ ಗಮ್ಮತ್ತು, ಕವಿಗಳಿಗೆ ಸ್ಪೂರ್ತಿ, ಹಿರಿಯರಿಗೆ ಸಾಂತ್ವನ ಕೊಟ್ಟು ಅರಬ್ಬಿಯಲ್ಲಿ ಮುಳುಗುತ್ತಿದ್ದ ಸೂರ್ಯ. ಹೀಗೆ ಕಾರವಾರ, ಉತ್ತರಕನ್ನಡದ ಅಸ್ಮಿತೆಯಾಗಿದ್ದ ಕಾಳಿ ಸೇತುವೆ ಬಿದ್ದು ಹೋಗಿದ್ದು ನನಗಿನ್ನೂ ಜೀರ್ಣವಾಗದ ವಿಷಯ.
ವಿಷಯ ಹೀಗಿರುವಾಗ, ನಮ್ಮ ದೇಶದ ಈಶಾನ್ಯ ಭಾಗದಲ್ಲಿ ಬುಡಕಟ್ಟು ಜನಾಂಗವೊಂದು ನಿರ್ವಿುಸಿರುವ ನೈಸರ್ಗಿಕ ಸಾಲುಸಾಲು ಸೇತುವೆಗಳು ನೂರಾರು ವರ್ಷಗಳಿಂದ ದಟ್ಟ ಅರಣ್ಯದಲ್ಲಿ ಇಂದಿಗೂ ಅಲ್ಲಿನ ಜನರಿಗೆ ಸಂಪರ್ಕಸೇತುವಾಗಿರುವ ವಿಷಯ ಥಟ್ಟನೇ ನೆನಪಿಗೆ ಬಂತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೇಘಾಲಯದ ನೋಗ್ರಿಯಾಟ್ ಎಂಬ ಪುಟ್ಟ ಹಳ್ಳಿಯ ಚಿತ್ರಗಳು ಜಾಲತಾಣಗಳಲ್ಲಿ ಓಡಾಡುತ್ತಿದ್ದವು. ಮೇಘಾಲಯದ ರಾಜಧಾನಿ ಶಿಲ್ಲಾಂಗ್​ನ ದಕ್ಷಿಣದಲ್ಲಿ ದಟ್ಟಡವಿ ಮತ್ತು ಹಸಿರನ್ನೇ ಹೊದ್ದು ಮಲಗಿರುವ ಗಿರಿಶಿಖರಗಳ ನಡುವೆಯೆಲ್ಲೋ ಅಡಗಿರುವ ಪುಟ್ಟ ಹಳ್ಳಿಯದು. 140 ಮತದಾರರಿರುವ ಆ ಹಳ್ಳಿ ಭಾರತದ ದುರ್ಗಮ ಮತದಾನ ಕೇಂದ್ರಗಳಲ್ಲೊಂದು. ಆ ಸ್ಥಳಕ್ಕೆ ತನ್ನ ತಂಡದೊಂದಿಗೆ ಕಾಲ್ನಡಿಗೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಹೊತ್ತೊಯ್ದ ಮೇಘಾಲಯದ ಮುಖ್ಯ ಚುನಾವಣಾಧಿಕಾರಿಯಾದ ಎಂ.ಡಿ.ತಿವಾರಿ, ‘ನೋಗ್ರಿಯಾಟ್​ನಂತಹ ದುಸ್ತರ ಪ್ರದೇಶದಲ್ಲೂ ಮತಗಟ್ಟೆಯನ್ನು ಸ್ಥಾಪಿಸಿ ಭಾರತದ ಕಟ್ಟಕಡೆಯ ವ್ಯಕ್ತಿಯತ್ತ ಚುನಾವಣೆ ಪ್ರಕ್ರಿಯೆಯನ್ನು ಕೊಂಡೊಯ್ದಿದ್ದಕ್ಕೆ ಹೆಮ್ಮೆಯಿದೆ’ ಎಂದು ಹೇಳಿಕೊಂಡಿದ್ದರು.
ಎರಡು ದೊಡ್ಡ ಗುಡ್ಡಗಳನ್ನು ಕಾಲ್ನಡಿಗೆಯಲ್ಲೇ ಹತ್ತಿಳಿದು, ನಂತರ ಅಲ್ಲಿನ ಸ್ಥಳೀಯ ಖಾಸಿ ಬುಡಕಟ್ಟಿನವರು ನಿರ್ವಿುಸಿದ್ದ ಎರಡು ನೈಸರ್ಗಿಕ ಸೇತುವೆಗಳನ್ನು ಬಳಸಿ ಮೊಬೈಲ್, ವೈದ್ಯಕೀಯ ಸೇವೆಯಂತಹ ಯಾವೊಂದೂ ಮೂಲಸೌಕರ್ಯಗಳಿಲ್ಲದ ನೋಗ್ರಿಯಾಟ್​ಗೆ ಬಂದು ಅಲ್ಲಿನ ಪ್ರಾಥಮಿಕ ಶಾಲೆಯಲ್ಲಿಯೇ ರಾತ್ರಿ ಕಳೆದು ಮಾರನೇ ದಿನ ಅಲ್ಲಿಯೇ ಜಗತ್ತಿನ ಅತ್ಯಂತ ದೊಡ್ಡ ಪ್ರಜಾತಾಂತ್ರಿಕ ಆಯ್ಕೆಯ ಕಾರ್ಯಕ್ರಮವನ್ನು ಮಾಡಿ ಮುಗಿಸಿದ ಖುಷಿ ಅಂದು ಆ ತಂಡದ್ದಾಗಿತ್ತು. ನೆಟ್ಟಿಗರಿಂದ ಬಹಳಷ್ಟು ಶ್ಲಾಘನೆ ಪಡೆದ ಈ ಪ್ರಕ್ರಿಯೆಯ ದೃಶ್ಯಾವಳಿಯಲ್ಲಿ ಬರುವ ನೈಸರ್ಗಿಕ ಸೇತುವೆಯ ಕುರಿತು ಹಲವರು ಅಚ್ಚರಿ ವ್ಯಕ್ತಪಡಿಸಿದ್ದು, ಖಾಸಿ ಬುಡಕಟ್ಟಿನವರ ಪರಿಸರ ಜ್ಞಾನದ ವಿಸ್ತಾರ ಮತ್ತೊಮ್ಮೆ ಹೊರಗಿನವರ ಅರಿವಿಗೆ ಬಂತು.
ಮೇಘಾಲಯದ ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿರುವ ಖಾಸಿ ಬುಡಕಟ್ಟಿನವರಿಗೆ ಕೃಷಿಯೇ ಜೀವಾಳ. ಅವರ ಪುರಾಣದ ಕತೆಯ ಪ್ರಕಾರ, ದೇವರು ಮೊದಲಿಗೆ ಮಾನವಜೀವಿಗಳನ್ನು ಹದಿನಾರು ಕುಟುಂಬವಾಗಿ ವಿಭಾಗಿಸಿದ್ದನಂತೆ. ಅವರೆಲ್ಲ ಭೂಮಿ ಮತ್ತು ಸ್ವರ್ಗ ಹೀಗೆ ಎರಡೂ ಕಡೆ ವಾಸಿಸುತ್ತಿದ್ದರು. ಸ್ಥಳೀಯ ಪರ್ವತವೊಂದರ ಮೂಲಕ ಸಾಗುತ್ತಿದ್ದ ರಹದಾರಿಯ ಮೂಲಕ ಭೂಮಿ ಮತ್ತು ಸ್ವರ್ಗಕ್ಕೆ ಈ ಕುಟುಂಬಗಳು ಓಡಾಡುತ್ತಿದವು. ಹೀಗೊಮ್ಮೆ ಆ ಕುಟುಂಬದವರೊಬ್ಬರು ರಹದಾರಿಯಲ್ಲಿದ್ದ ಮರವೊಂದನ್ನು ಕಡಿದ ಪರಿಣಾಮ ಆ ದಾರಿ ಶಾಶ್ವತವಾಗಿ ಮುಚ್ಚಿಹೋಯಿತು. ಹೀಗಾಗಿ ಆ ಸಮಯದಲ್ಲಿ ಭೂಮಿಯಲ್ಲಿದ್ದ ಕುಟುಂಬಗಳು ಇಲ್ಲೇ ಉಳಿದವು.
ಈ ಪುರಾಣ ಕಥೆಯನ್ನು ಬಲವಾಗಿ ನಂಬುವ ಕಾರಣಕ್ಕೆ ಖಾಸಿ ಬುಡಕಟ್ಟಿನವರಿಗೆ ವೃಕ್ಷವೇ ದೇವರು. ಯಾವತ್ತೂ ಮರಗಿಡ ಮತ್ತು ಪ್ರಕೃತಿಗೆ ಕೇಡಾಗದಂತೆ ತಮ್ಮ ಜೀವನಶೈಲಿಯನ್ನು ರೂಪಿಸಿಕೊಂಡಿರುವ ಈ ಪಂಗಡದವರಿಗೆ ಕಾಡಿನ, ಅಲ್ಲಿನ ಗಿಡಮೂಲಿಕೆಗಳ ಬಗ್ಗೆ ಅಪಾರ ಜ್ಞಾನವಿದೆ. ಅವರ ಈ ಜ್ಞಾನದ ಒಂದು ಉದಾಹರಣೆಯೇ ಈ ನೈಸರ್ಗಿಕ ಸೇತುವೆಗಳು.
ಥೇಟ್ ನಮ್ಮ ಮಲೆನಾಡಿನಂತೇ ನದಿ, ತೊರೆ, ಹಳ್ಳ, ಬೆಟ್ಟಗುಡ್ಡಗಳಿಂದ ಆವೃತ್ತವಾಗಿರುವ ಮೇಘಾಲಯದ ಹಲವು ಪ್ರದೇಶಗಳಿಗೆ ಇನ್ನೂ ರಸ್ತೆಸಂಪರ್ಕವೇ ಇಲ್ಲ. ಅಲ್ಲಿಯೂ ನಮ್ಮಲ್ಲಿನ ಹಾಗೆ ಇಂದಿಗೂ ತಲುಪಲು ತೂಗುಸೇತುವೆ, ಕಾಲುಸಂಕಗಳೇ ಆಧಾರ. ಈ ರೀತಿಯ ದುರ್ಗಮ ಪ್ರದೇಶಗಳಿಗೆ ಇಲ್ಲಿನ ಖಾಸಿ ಬುಡಕಟ್ಟಿನವರು ತಮ್ಮ ಪಾರಂಪರಿಕ ಜ್ಞಾನವನ್ನು ಬಳಸಿಕೊಂಡು ನೈಸರ್ಗಿಕ ಸೇತುವೆಗಳನ್ನು ನಿರ್ವಿುಸಿದ್ದಾರೆ. ನದಿ, ತೊರೆ ಹಾದು ಹೋಗುವ ದಾರಿಯ ಇಬ್ಬದಿಯಲ್ಲಿ ಬೆಳೆದಿರುವ ರಬ್ಬರ್ ಮರಗಳ ಬೇರುಗಳಿಗೆ ನೀರಿನ ಹರಿವಿರುವ ದಿಕ್ಕಿನಲ್ಲಿ ಬೆಳೆಯುವಂತೇ ಮೊದಲು ದಾರಿ ತೋರಿಸಲಾಗುತ್ತದೆ. ನಂತರ ಅಡಕೆ ಮತ್ತು ಬಿದಿರಿನ ಅಟ್ಟಣಿಗೆಗಳನ್ನು ಬಳಸಿ ಈ ದಾರಿಯಲ್ಲಿ ಅಟ್ಟಣಿಗೆ ನಿರ್ವಿುಸಲಾಗುತ್ತದೆ. ಕಾಲಕ್ರಮೇಣ ಈ ಅಟ್ಟಣಿಗೆಗಳ ಮೇಲೆ ಎರಡೂ ಬದಿಯಿಂದ ಬೆಳೆಯುವ ರಬ್ಬರ್ ಮರದ ಬೇರುಗಳು ಕೊನೆಗೆ ಪೂರ್ತಿ ನೀರಿನ ಸೆಳವಿನ ಹಾದಿಯನ್ನು ಕೂಡಿ ದಾಟಿ ಇಬ್ಬದಿಗೂ ಹರಡಿಕೊಂಡು ಸೇತುವೆ ನಿರ್ವಣವಾಗುತ್ತದೆ. ರಬ್ಬರ್ ಗಿಡದ ಬೇರುಗಳು ಬೆಳೆಯುತ್ತಿರುವ ಸಮಯದಲ್ಲಿ ಅಟ್ಟಣಿಗೆಗೆ ಕೊಳೆರೋಗ ಬಾಧಿಸದಂತೆ ಕಾಲಕಾಲಕ್ಕೆ ಅದನ್ನು ಬದಲಿಸುವುದರ ಜೊತೆಗೆ ಅವುಗಳನ್ನು ನೀಟಾಗಿ ಜಡೆಯಂತೇ ನೇಯ್ದು ಈ ನೈಸರ್ಗಿಕ ಸೇತುವೆಯ ಆರೋಗ್ಯವನ್ನು ದೃಢಪಡಿಸಿಕೊಳ್ಳುತ್ತಾರೆ ಈ ಬುಡಕಟ್ಟು ಜನರು.
ಮರಕ್ಕೆ ಯಾವುದೇ ರೋಗ ಬರದಂತೆ ನೋಡಿಕೊಂಡರೆ ಈ ಸೇತುವೆಗಳು ಐನೂರು ವರ್ಷಕ್ಕೂ ಹೆಚ್ಚುಕಾಲ ಬಾಳಬಲ್ಲವು. ಏಕೆಂದರೆ ಈ ಬೇರುಗಳು ನೈಸರ್ಗಿಕವಾಗಿ ಬೆಳೆಯುತ್ತಲೇ ಇರುವ ಕಾರಣ ಒಣಗಿದ ಬೇರು ಬಿದ್ದುಹೋದಂತೆ ಹೊಸದು ಹುಟ್ಟುತ್ತಲೇ ಇರುತ್ತದೆ. ಹೀಗಾಗಿ ಇವುಗಳು ಜೀವಂತ ಸೇತುವೆಗಳು. ಜೊತೆಗೆ ಮೊದಲೇ ಬೇರುಗಳನ್ನು ಹೆಣೆದಿರುವ ಕಾರಣ ಇವುಗಳು ಸಾಕಷ್ಟು ತೂಕವನ್ನು ಅಂದರೆ ಸುಮಾರು ಐವತ್ತು ಜನರನ್ನು ಒಟ್ಟಿಗೆ ಹೋರುವ ಸಾಮರ್ಥ್ಯ ಹೊಂದಿರುತ್ತವೆ. ಆದರೆ ಸೇತುವೆಯೊಂದನ್ನು ಕಟ್ಟುವ ಕಾರ್ಯ ಹೇಳಿದಷ್ಟು ಸುಲಭದ್ದಲ್ಲ. ಒಂದು ಸೇತುವೆಯನ್ನು ಕಟ್ಟಿ, ಅದು ಬಳಸಲು ಯೋಗ್ಯವಾಗಲು ಸುಮಾರು ಮೂವತ್ತು ವರ್ಷಗಳು ಬೇಕು. ರಬ್ಬರ್ ಮರಗಳ ವಿಸ್ತರಿತ ಭಾಗವಾಗಿರುವ ಕಾರಣ ಈ ಸೇತುವೆಗಳು ಮಾನವನಿಗಷ್ಟೇ ಅಲ್ಲ ಮರದ ಮೇಲೆ ಅವಲಂಬಿತವಾಗಿರುವ ಹಕ್ಕಿ, ಸಸ್ತನಿಗಳಿಗೂ ಬಳಕೆಗೆ ತೆರೆದುಕೊಳ್ಳುತ್ತವೆ. ಹುಲಿ, ಚಿರತೆಯಂತಹ ಪ್ರಾಣಿಗಳು ನೀರಿನ ಹರಿವನ್ನು ದಾಟಲು ಈ ಸೇತುವೆಗಳನ್ನೇ ಬಳಸಿಕೊಳ್ಳುತ್ತವೆ.
ಹೆನ್ರಿ ಯೂಲ್ ಎಂಬ ಬ್ರಿಟಿಷ್ ಅಧಿಕಾರಿ 1840ರ ಸಮಯದಲ್ಲಿ ಮೇಘಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಈ ಜೀವಂತ ಸೇತುವೆಗಳನ್ನು ಕಂಡು, ಅಚ್ಚರಿಗೊಂಡು ತನ್ನ ಪುಸ್ತಕದಲ್ಲಿ ದಾಖಲಿಸಿದ್ದಾನೆ. ಇದನ್ನು ಬಿಟ್ಟರೆ ಹೊರಗಿನ ಲೋಕಕ್ಕೆ ಇತ್ತೀಚಿನವರೆಗೂ ಮೇಘಾಲಯದ ಬುಡಕಟ್ಟು ಜನರ ಈ ದೇಸಿ ತಂತ್ರಜ್ಞಾನದ ಅರಿವೇ ಇರಲಿಲ್ಲ. ಕೆಲ ವರ್ಷಗಳ ಹಿಂದೆ ನಡೆದ ಸರ್ವೆಯ ಪ್ರಕಾರ ಮೇಘಾಲಯದಲ್ಲಿ ಸುಮಾರು ಎಪ್ಪತೆôದು ಇಂತಹ ಜೀವಂತ ಸೇತುವೆಗಳಿವೆಯೆಂದು ಅಂದಾಜಿಸಲಾಗಿದೆ. ಅದರಲ್ಲಿ ಹೆಚ್ಚಿನವು ಇನ್ನೂರಕ್ಕೂ ಹೆಚ್ಚು ವರ್ಷ ಪ್ರಾಯದವಾಗಿದ್ದು ಇನ್ನೂ ಬಳಕೆಯಲ್ಲಿವೆ. ಇತ್ತೀಚೆಗೆ ಈ ಸೇತುವೆಗಳು ಯುನೆಸ್ಕೋದ ಪಾರಂಪರಿಕ ತಾಣಗಳ ಸಂಭವನೀಯ ಪಟ್ಟಿಯಲ್ಲಿ ಕಂಡುಬಂದಿದ್ದೇ ಮತ್ತೆ ಪ್ರಚಾರಕ್ಕೆ ಬಂದವು. ಈ ಹಿನ್ನೆಲೆಯಲ್ಲಿ ಇದೀಗ ಈ ಭಾಗದಲ್ಲಿ ಪ್ರವಾಸೋದ್ಯಮವೂ ಗರಿಗೆದರಿದೆ.
ಮೇಘಾಲಯದ ಖಾಸಿ ಪಟ್ಟಣದ ಹತ್ತಿರವಿರುವ ಜೀವಂತ ಸೇತುವೆ ಐವತ್ತು ಮೀಟರ್ ಉದ್ದವಿದ್ದು, ವಿಶ್ವದ ಅತ್ಯಂತ ಉದ್ದದ ಜೀವಂತ ಸೇತುವೆಯೆಂಬ ಖ್ಯಾತಿ ಹೊಂದಿದೆ. ಹಾಗೆಯೇ ಚಿರಾಪುಂಜಿ ಬಳಿಯಿರುವ ನೊಂಗ್ರಿಯಾಟ್ ಎಂಬ ಹಳ್ಳಿಯ ಸೇತುವೆ ಒಂದರ ಮೇಲೊಂದು ಸೇತುವೆಯನ್ನು ಹೊಂದಿದ್ದು ‘ಡಬಲ್ ಡೆಕ್ಕರ್’ ಸೇತುವೆಯೆಂಬ ಹೆಸರನ್ನು ಪಡೆದಿದೆ. ಆಧುನಿಕ ತಂತ್ರಜ್ಞಾನದ ಕುರಿತು ಬಡಾಯಿ ಕೊಚ್ಚಿಕೊಳ್ಳುವ ನಾವುಗಳು ಮೇಘಾಲಯದ ಮೂಲನಿವಾಸಿಗಳ ವಿವೇಚನೆಯತ್ತ ಗಮನಹರಿಸಬೇಕಾಗಿದೆ. ನಿಸರ್ಗವನ್ನು ಅವರುಗಳು ಜತನದಿಂದ ಕಾಪಿಟ್ಟುಕೊಂಡು ಬಂದಿರುವಂತೆಯೇ ವೃಕ್ಷಗಳೂ ಅವರುಗಳಿಗೆ ಸೇವೆ ನೀಡುತ್ತಲೇ ಇವೆ. ಮಾನವ ಮತ್ತು ಪರಿಸರ ಸಹಜೀವನದ ಪಾಠವನ್ನು ಇಂದಿನ ಪೀಳಿಗೆಗೆ ನಿಂತಲ್ಲೇ ಹೇಳುತ್ತಿವೆ.
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)
ಸಿದ್ದರಾಮಯ್ಯ ಭೇಟಿ ಮಾಡಿ ಧೈರ್ಯ ಹೇಳಿದ್ದೇನೆ: ಸಿಎಂ ಇಬ್ರಾಹಿಂ‌

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:five + 9 =
Remember me
