ಆಗ್ನೇಯ ಏಷ್ಯಾದಲ್ಲಿ ‘ಕಲ್ಪಿತ’ ಎದುರಾಳಿಗಳ ‘ನಿಗ್ರಹ’ಕ್ಕೆಂದು 1950-60ರ ದಶಕಗಳಲ್ಲಿ ವಿಯೆಟ್​ನಾಂ ಪ್ರವೇಶಿಸಿದ ಅಮೆರಿಕ ಎಂಟು ವರ್ಷಗಳ ಅಮಾನವೀಯ ಸಮರದ ನಂತರ ಕಳೆದುಕೊಂಡದ್ದು, ಕಾಣೆಯಾದವರೂ ಸೇರಿ, ಐವತೆôದು ಸಾವಿರ ಸೈನಿಕರು! ಖರ್ಚು ಮಾಡಿದ ಹಣ ನೂರೈವತ್ತು ಬಿಲಿಯನ್ ಡಾಲರ್​ಗಳಿಗೂ ಅಧಿಕ. ಗಳಿಸಿದ್ದು…? ಏನೂ ಇಲ್ಲ.
‘ಬಡಪಾಯಿ ಮೆಕ್ಸಿಕೋ, ಅಮೆರಿಕಕ್ಕೆ ಬಲು ಹತ್ತಿರ, ದೇವರಿಂದ ಬಹು ದೂರ!’ ಮೆಕ್ಸಿಕೋದ ಆಂತರಿಕ ರಾಜಕಾರಣದಲ್ಲಿ ಅಮೆರಿಕದ ನಿರಂತರ ಹಸ್ತಕ್ಷೇಪದ ಕುರಿತಾಗಿ ಶತಮಾನದ ಹಿಂದೆ ಆ ದೇಶದ ಅಧ್ಯಕ್ಷ ಫಿಗರೆಡೋ ಡಯಾಝå್ ಅಲವತ್ತುಕೊಂಡ ಬಗೆ ಇದು. ಅಂದು ಅಮೆರಿಕಕ್ಕೆ ಅಂಟಿಕೊಂಡ ನೆರೆನಾಡು ಮೆಕ್ಸಿಕೋದ ಪರಿಸ್ಥಿತಿ ಇದಾದರೆ ಇಂದು ಗೋಳದ ಆಚೆಬದಿಯಲ್ಲಿರುವ ಬಾಂಗ್ಲಾದೇಶದ ಉಚ್ಛಾಟಿತ ಪ್ರಧಾನಿ ಷೇಖ್ ಹಸೀನಾ ತಮ್ಮ ದೇಶದಲ್ಲಿ ಅಮೆರಿಕ ಎಸಗುತ್ತಿರುವ ದುಷ್ಕೃತ್ಯಗಳಿಗಾಗಿ ಹಿಡಿಶಾಪ ಹಾಕುತ್ತಿದ್ದಾರೆ.
ಇದೇ ಅಮೆರಿಕ ಎರಡೂವರೆ ವರ್ಷಗಳ ಹಿಂದೆ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರ್ಕಾರವನ್ನು ಉರುಳಿಸಿ ತನಗೆ ಬೇಕಾದ ಸೇನಾ ಹಿಡಿತದ ಕೈಗೊಂಬೆ ‘ನಾಗರಿಕ’ ಸರ್ಕಾರವನ್ನು ಸ್ಥಾಪಿಸಿತು. ಕಳೆದ ತಿಂಗಳು ಅದು ಬಾಂಗ್ಲಾದೇಶದಲ್ಲಿ ಪುನರಾವರ್ತನೆಯಾಯಿತು. ಈ ವಲಯದಲ್ಲಿ ಹೀಗೆ ಅಮೆರಿಕದ ಹಸ್ತಕ್ಷೇಪಕ್ಕೆ ಗುರಿಯಾಗುವ ರಾಷ್ಟ್ರಗಳ ಪಟ್ಟಿಯಲ್ಲೀಗ ಇಂಡೋನೇಷ್ಯಾ ಮೇಲಿನ ಸ್ಥಾನದಲ್ಲಿದೆ. ಮೊನ್ನೆಮೊನ್ನೆಯವರೆಗೂ ಜನಪ್ರಿಯರಾಗಿದ್ದ ಅಕ್ಷ ಜೋಕೋ ವಿಡೋಡೋ ಇಂದು ಅಪಾರ ಪ್ರಮಾಣದ ಜನವಿರೋಧವನ್ನು ಎದುರಿಸುತ್ತಿದ್ದಾರೆ. ಅವರ ವಿರುದ್ಧ ಪ್ರದರ್ಶನಗಳು ರಾಜಧಾನಿ ಜಕಾರ್ತಾ ಅಲ್ಲದೆ ಹದಿನಾರು ನಗರಗಳಲ್ಲಿ ಭುಗಿಲೆದ್ದಿವೆ.
ತನ್ನ ಜಾಗತಿಕ ಸಾಮರಿಕ ಉದ್ದೇಶಗಳಿಗಾಗಿ ವಿವಿಧ ದೇಶಗಳಲ್ಲಿ ತನಗೆ ಹೊಂದಿಕೆಯಾಗದ ಸರ್ಕಾರಗಳನ್ನು ಉರುಳಿಸಿ ಕೈಗೊಂಬೆ ಸರ್ಕಾರಗಳನ್ನು ಅಸ್ತಿತ್ವಕ್ಕೆ ತರುವುದು ಕಳೆದ ಮುಕ್ಕಾಲು ಶತಮಾನದಲ್ಲಿ ಅಮೆರಿಕದ ಜಾಯಮಾನವೇ ಆಗಿಹೋಗಿದೆ. 1947-89ರ ನಡುವಿನ ಶೀತಲ ಸಮರ ಕಾಲದಲ್ಲೇ ಅಮೆರಿಕ ಅಂಥ 72 ಪ್ರಯತ್ನಗಳನ್ನು ಮಾಡಿದೆ ಎಂದು ಪ್ರಾಧ್ಯಾಪಕಿ ಲಿಂಡ್ಸೇ ಲ‘ರೂಕ್ ಬರೆಯುತ್ತಾರೆ. ಅವುಗಳಲ್ಲಿ ಆರು ಮಾತ್ರ ಜಗತ್ತಿನ ಕಣ್ಣಿಗೆ ಕಂಡಂತಹವು. ಉಳಿದ 66 ತೆರೆಯ ಹಿಂದೆ ಆಡಲಾದ ಕುತಂತ್ರಗಳು. ಅಮೆರಿಕದ ಈ ನೀತಿಯನ್ನು ವಿಶ್ಲೇಷಿಸಲು ಮತ್ತು ಇಂದು ಅದು ಭಾರತಕ್ಕೆ ಹತ್ತಿರವಾಗುತ್ತಿರುವುದನ್ನು ಅರ್ಥೈಸಿಕೊಳ್ಳಲು ಕೊನೇಪಕ್ಷ ದ್ವಿತೀಯ ಜಾಗತಿಕ ಸಮರಾನಂತರ ಅಮೆರಿಕ ಎದುರಿಸಿದ ನೈಜ ಅಥವಾ ಕಲ್ಪಿತ ಅಪಾಯಗಳ ಪರಿಚಯ ಅಗತ್ಯ.
1950-60ರ ದಶಕಗಳಲ್ಲಿ ಆಗ್ನೇಯ ಏಷ್ಯಾದಲ್ಲಿ ‘ಕಲ್ಪಿತ’ ಎದುರಾಳಿಗಳ ‘ನಿಗ್ರಹ’ಕ್ಕೆಂದು ವಿಯೆಟ್​ನಾಂ ಪ್ರವೇಶಿಸಿದ ಅಮೆರಿಕ ಎಂಟು ವರ್ಷಗಳ ಅಮಾನ ವೀಯ ಸಮರದ ನಂತರ ಕಳೆದುಕೊಂಡದ್ದು, ಕಾಣೆಯಾದವರೂ ಸೇರಿ, ಐವತೆôದು ಸಾವಿರ ಸೈನಿಕರು! ಖರ್ಚು ಮಾಡಿದ ಹಣ ನೂರೈವತ್ತು ಬಿಲಿಯನ್ ಡಾಲರ್​ಗಳಿಗೂ ಅಧಿಕ. ಗಳಿಸಿದ್ದು…? ಏನೂ ಇಲ್ಲ. ವಿಶ್ಲೇಷಣಕಾರ ಜಾನ್ ಸ್ಟೋಯ್ಸಿಂಗರ್​ನಿಂದ ‘ಐದು ಅಂಕಗಳ ಒಂದು ಗ್ರೀಕ್ ದುರಂತ ನಾಟಕ’ ಎಂದು ಕರೆಸಿಕೊಂಡ (ವಿಯೆಟ್​ನಾಂ ದುರಂತಕ್ಕೆ ಕಾರಣವಾದ ನಿರ್ಧಾರಗಳನ್ನು ಕೈಗೊಂಡದ್ದು ಹ್ಯಾರಿ ಟ್ರೂಮನ್​ನಿಂದ ರಿಚರ್ಡ್ ನಿಕ್ಸನ್​ವರೆಗೆ ಐವರು ಅಧ್ಯಕ್ಷರುಗಳು) ವಿಯೆಟ್​ನಾಂ ಯುದ್ಧದಿಂದ ಅಮೆರಿಕ ಕೊನೇಪಕ್ಷ ಅನುಭವವನ್ನಾದರೂ ಗಳಿಸಲಿಲ್ಲ ಎನ್ನುವುದು ನಂತರ ಇರಾಕ್ ಮತ್ತು ಅಫ್ಘನ್ ಘಟನಾವಳಿಗಳಿಂದ ವೇದ್ಯವಾಯಿತು. ಇಂದು ಬಾಂಗ್ಲಾದೇಶ, ಇಂಡೋನೇಷ್ಯಾಗಳಲ್ಲಿ ಅದು ಮತ್ತೆ ತಲೆಯೆತ್ತಿದೆ. ಇತಿಹಾಸ ಮರುಕಳಿಸುತ್ತಿದೆ. ಅಮೆರಿಕ ಹೀಗೇಕೆ ವರ್ತಿಸುತ್ತಿದೆ? ಇದರ ಉತ್ತರದ ಹುಡುಕಾಟವನ್ನು ನಮ್ಮ ತಲೆಮಾರಿನ ನೆನಪಿನಲ್ಲಿನ್ನೂ ಹಸಿರಾಗಿಯೇ ಇರುವ ಇರಾಕ್​ನಿಂದಲೇ ಆರಂಭಿಸೋಣ.
ಇರಾಕ್​ನಲ್ಲಿನ ಅಮೆರಿಕನ್ ಮಿಲಿಟರಿ ಕಾರ್ಯಾಚರಣೆಯ ಮೂಲವನ್ನು ಶೋಧಿಸಬೇಕಾದರೆ ನಾವು ನಲವತೆôದು ವರ್ಷಗಳ ಹಿಂದಕ್ಕೆ ಹೋಗಬೇಕು. ಅದೆಲ್ಲವೂ ಆರಂಭವಾದದ್ದು 1979ರ ಫೆಬ್ರವರಿಯಲ್ಲಿ ಇರಾನಿನಲ್ಲಿ ಅಮೆರಿಕದ ಮಿತ್ರ ಅರಸ ರೆಜಾ ಷಾ ಪಹ್ಲವಿ ಪತನಗೊಂಡು ಇಸ್ಲಾಮಿಕ್ ಮೂಲಭೂತವಾದಿ ಅಯಾತೊಲ್ಲಾ ಖೊಮೇನಿ ಅಧಿಕಾರಕ್ಕೆ ಬಂದಾಗ. ಪಶ್ಚಿಮದ ನಾಗರಿಕತೆಗಳ ಮೌಲ್ಯಗಳ ಬಗ್ಗೆ ತೀವ್ರ ಅಸಹನೆ ಹಾಗೂ ಕಡುವಿರೋಧವನ್ನು ಮೈಗೂಡಿಸಿಕೊಂಡಿದ್ದ ಖೊಮೇನಿ ಸಹಜವಾಗಿಯೇ ಪಶ್ಚಿಮದ ಸಂಕೇತವಾದ ಅಮೆರಿಕದ ಮೇಲೆ ಕಿಡಿಕಾರತೊಡಗಿದ. ಈ ನೀತಿಯ ಮುಂದುವರಿಕೆಯಾಗಿ ಪಶ್ಚಿಮ ಏಷ್ಯಾದಲ್ಲಿ ಅಮೆರಿಕನ್ ಹಿತಾಸಕ್ತಿಗಳಿಗೆ ತೀವ್ರತರ ಪ್ರತಿರೋಧವನ್ನೊಡ್ಡತೊಡಗಿದ. ಈ ಅಮೆರಿಕನ್ ವಿರೋಧಿ ಇಸ್ಲಾಮಿಕ್ ಮೂಲಭೂತವಾದವನ್ನು ಮೊಳಕೆಯಲ್ಲೇ ಚಿವುಟಿಹಾಕಬೇಕೆಂದು ನಿರ್ಧರಿಸಿದ ಜಿಮ್ಮಿ ಕಾರ್ಟರ್ ಸರ್ಕಾರಕ್ಕೆ ತಕ್ಷಣಕ್ಕೆ ಮಿತ್ರನಾಗಿ ಕಂಡುಬಂದದ್ದು ನೆರೆಯ ಇರಾಕಿನ ನಾಯಕ ಸದ್ದಾಂ ಹುಸೇನ್. ಮೂಲಭೂತವಾದಿ ಖೊಮೇನಿಯ ಪ್ರಭಾವವನ್ನು ಮಟ್ಟಹಾಕಲು ಇರಾನಿನ ಐತಿಹಾಸಿಕ ಶತ್ರುವಾದ ಇರಾಕಿನ ಸೆಕ್ಯೂಲರ್ ಸರ್ಕಾರವೇ ಸಮರ್ಪಕ ಎಂದು ಅಮೆರಿಕ ಭಾವಿಸಿತು. ಸದ್ದಾಂ ಹುಸೇನ್ ಒಬ್ಬ ಸರ್ವಾಧಿಕಾರಿಯಾಗಿದ್ದ ಎಂಬ ವಾಸ್ತವ ಆಗ ಗೌಣವಾಗಿಬಿಟ್ಟಿತು. ಹೀಗಾಗಿಯೇ 1980ರ ಸೆಪ್ಟೆಂಬರ್​ನಲ್ಲಿ ಇರಾನಿನ ಮೇಲೆ ಸದ್ದಾಂ ಎಸಗಿದ ದಾಳಿಗೆ ಅಮೆರಿಕ ಕುಮ್ಮಕ್ಕು ನೀಡಿತು. ಈ ಇರಾನ್-ಇರಾಕ್ ಸಮರ ಅಮೆರಿಕನ್ ವಿರೋಧಿ ಖೊಮೇನಿ ಸರ್ಕಾರವನ್ನು ನಿರ್ವೀರ್ಯಗೊಳಿಸುತ್ತದೆ ಹಾಗೂ ತನ್ಮೂಲಕ ಪಶ್ಚಿಮ ಏಷ್ಯಾದಲ್ಲಿ ಅಮೆರಿಕನ್ ವಿರೋಧಿ ಭಾವನೆಗಳು ಕ್ಷೀಣಗೊಳ್ಳುತ್ತವೆ ಎಂದು ಕಾರ್ಟರ್ ಸರ್ಕಾರ ಭಾವಿಸಿತು. ಸದ್ದಾಂ ಇರಾನ್​ನೊಡನೆ ನಡೆಸುತ್ತಿರುವುದು ‘ಪಶ್ಚಿಮದ ಸಮರ’ ಎಂದು ಅಮೆರಿಕ ತಿಳಿಯಿತು. ವಿಪರ್ಯಾಸವೆಂದರೆ ಸದ್ದಾಂ ತನ್ನ ನೆರೆದೇಶದೊಡನೆ ನಡೆಸುತ್ತಿದ್ದುದು ಪಶ್ಚಿಮದ ಸಮರವಾಗಿರಲಿಲ್ಲ, ಬದಲಾಗಿ ನೆಲ-ಜಲ ಗಡಿಗಳನ್ನು ತನ್ನ ದೇಶದ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ಬದಲಾಯಿಸುವುದಾಗಿತ್ತು. ಈ ಅಮೆರಿಕನ್ ಬೆಂಬಲವನ್ನು ಹಾಗೂ ಈ ಮೊದಲೇ ಘನಿಷ್ಟವಾಗಿದ್ದ ಸೋವಿಯತ್ ಸ್ನೇಹವನ್ನೂ ಆತ ಚೆನ್ನಾಗಿಯೇ ಬಳಸಿಕೊಂಡ. ಎಂಟು ವರ್ಷಗಳ ಈ ಯುದ್ಧದಲ್ಲಿ ಮೇಲುಗೈ ಸಾಧಿಸಿದ ಇರಾನ್​ನಿಂದ ತನ್ನ ದೇಶದ ಮಾನವನ್ನೂ, ತನ್ನ ಸ್ಥಾನವನ್ನೂ ಆತ ಉಳಿಸಿಕೊಂಡದ್ದು ಅಮೆರಿಕ ಮತ್ತು ಸೋವಿಯತ್ ಯೂನಿಯನ್​ಗಳ ಬೆಂಬಲದಿಂದಲೇ. ಈ ಬೆಂಬಲವೇ ಅವನನ್ನು ಮತ್ತೊಂದು ದುಸ್ಸಾಹಸಕ್ಕೆ ಪ್ರೇರೇಪಿಸಿತು. ಇರಾನ್-ಇರಾಕ್ ಸಮರ 1988ರಲ್ಲಿ ಮುಕ್ತಾಯಗೊಂಡ ಎರಡೇ ವರ್ಷಗಳಲ್ಲಿ ಕ್ಷುಲ್ಲಕ ಹಾಗೂ ಅಸಂಬದ್ಧ ಕಾರಣಗಳನ್ನೊಡ್ಡಿ ಸದ್ದಾಂ ನೆರೆಯ ಕುವೈತ್ ಮೇಲೆ ದಾಳಿ ಎಸಗಿ ಅದನ್ನು ಆಕ್ರಮಿಸಿಕೊಂಡು ಅದು ತನ್ನ ದೇಶದ ಒಂದು ಭಾಗ ಎಂದು ಘೊಷಿಸಿದ. ಆದರೀಗ ವಿವಿಧ ಕಾರಣಗಳಿಂದಾಗಿ ಅಂತಾರಾಷ್ಟ್ರೀಯ ರಾಜಕಾರಣ ಬದಲಾಗಿತ್ತು. ಇರಾನಿನ ಅಮೆರಿಕನ್ ವಿರೋಧಿ ಭಾವನೆಗಳು ಕುಸಿದಿದ್ದವು, ಜತೆಗೆ ಸೋವಿಯತ್ ಯೂನಿಯನ್ ಪತನದ ಹಾದಿಯಲ್ಲಿತ್ತು. ಈ ಬದಲಾದ ಸಂದರ್ಭದಲ್ಲಿ ಸದ್ದಾಂನ ಈ ಕುವೈತ್ ಆಕ್ರಮಣ ಒಂದು ಅನಗತ್ಯ ಹಾಗೂ ಅಪಾಯಕಾರಿ ಬೆಳವಣಿಗೆಯೆಂದು ತೀರ್ವನಿಸಿದ ಅಮೆರಿಕ ಅದನ್ನು ತೆರವುಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿತು. ವಿಶ್ವದ ಬಹುತೇಕ ರಾಷ್ಟ್ರಗಳ ಬೆಂಬಲವನ್ನು ಪಡೆದ ಅಮೆರಿಕ ವಿಶ್ವಸಂಸ್ಥೆಯ ಮೂಲಕ ಸದ್ದಾಂನ ಮೇಲೆ ರಾಜತಾಂತ್ರಿಕ ಒತ್ತಡ ಹಾಕಿತು. ಅವನದಕ್ಕೆ ಸೊಪ್ಪು ಹಾಕದೆ ಹೋದಾಗ ಮೊದಲೇ ಎಚ್ಚರಿಸಿದ್ದಂತೆ ಅಮೆರಿಕನ್ ನಾಯಕತ್ವದ ಅಂತಾರಾಷ್ಟ್ರೀಯ ಸೇನೆ ಇರಾಕಿನ ಮೇಲೆ ದಾಳಿಯೆಸಗಿ ಕುವೈತ್​ನ್ನು ವಿಮೋಚನೆಗೊಳಿಸಿತು. ಈ ಯುದ್ಧದಲ್ಲಿ ಅಮೆರಿಕಕ್ಕೆ ಸಂಪೂರ್ಣ ಸಹಕಾರ ನೀಡಿದ್ದು ಮುಸ್ಲಿಮ್ ರಾಷ್ಟ್ರಗಳ ನಾಯಕ ಸೌದಿ ಅರೇಬಿಯಾ.
ಸದ್ದಾಂನ ಕುವೈತ್ ಆಕ್ರಮಣದಿಂದಾಗಿ ತನಗೆ ಹಾಗೂ ಪಶ್ಚಿಮ ದೇಶಗಳಿಗೆ ತೈಲಪೂರೈಕೆಯಲ್ಲಿ ತಡೆಯುಂಟಾಗುತ್ತದೆ ಎಂದು ಅಮೆರಿಕ ಹೆದರಿದ್ದರಿಂದಲೇ ಅದು ಕಳೆದ ಹತ್ತುವರ್ಷಗಳಿಂದ ತಾನೇ ಸಾಕಿ ಕೊಬ್ಬಿಸಿದ್ದ ಸದ್ದಾಂಗೆ ಮಾರಣಾಂತಿಕ ಪೆಟ್ಟು ಕೊಟ್ಟು ಅವನು ಕುವೈತ್​ನಿಂದ ಕಾಲ್ತೆಗೆಯುವಂತೆ ಮಾಡಿತೆಂದು ಸಾಮಾನ್ಯ ನಂಬಿಕೆ. ಆದರೆ ವಾಸ್ತವ ಸಂಗತಿ ಬೇರೆ.
1990ರ ಆಗಸ್ಟ್ 2ರಂದು ಸದ್ದಾಂನ ಕುವೈತ್​ನ್ನು ಆಕ್ರಮಿಸಿಕೊಂಡ ನಂತರದ ಎರಡು-ಮೂರು ತಿಂಗಳುಗಳಲ್ಲಿ ಅಮೆರಿಕ ಅಲ್ಲದೆ ಯುರೋಪಿನ ರಾಜಕೀಯ ಹಾಗೂ ರಾಜತಾಂತ್ರಿಕ ವಲಯಗಳಲ್ಲಿ ಮತ್ತೆ ಮತ್ತೆ ಚರ್ಚೆಗೊಳಗಾದ ಪ್ರಶ್ನೆಗಳು ಎರಡು: ಒಂದು- ‘ಸದ್ದಾಂ ಹುಸೇನ್ ಪಶ್ಚಿಮ ಏಷ್ಯಾದ ಹಿಟ್ಲರ್ ಆಗಿ ಬೆಳೆಯುತ್ತಿದ್ದಾನೆಯೇ?’ ಎರಡು- ‘ಹಿಟ್ಲರ್​ನ ವಿಷಯದಲ್ಲಿ ಪಶ್ಚಿಮದ ರಾಷ್ಟ್ರಗಳು ಮಾಡಿದ ತಪ್ಪನ್ನೇ ಈಗ ಸದ್ದಾಂನ ವಿಷಯದಲ್ಲೂ ಮಾಡುತ್ತಿವೆಯೇ?’ ಈ ಸಂದರ್ಭದಲ್ಲಿ ಬ್ರಿಟನ್ ಮಾಜಿ ಪ್ರಧಾನಮಂತ್ರಿ ವಿನ್​ಸ್ಟನ್ ರ್ಚಚಿಲ್ ಹೇಳಿದ್ದ ಒಂದು ಮಾತು ವ್ಯಾಪಕವಾಗಿ ಚರ್ಚೆಗೊಳಗಾಯಿತು. ಎರಡನೇ ಮಹಾಯುದ್ಧಕ್ಕೆ ರ್ಚಚಿಲ್ ನೇರವಾಗಿ ಬ್ರಿಟನ್ ಸೇರಿದಂತೆ ಪಶ್ಚಿಮದ ರಾಷ್ಟ್ರಗಳನ್ನೇ ದೂಷಿಸಿದ್ದರು. ಅವರ ಪ್ರಕಾರ ಹಿಟ್ಲರ್ 1935-36ರಲ್ಲಿ ವರ್ಸೆಲ್ಸ್ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿ ರೈನ್​ಲ್ಯಾಂಡ್​ನಲ್ಲಿ ಸೇನೆಯನ್ನಿರಿಸಿದಾಗ ಪಶ್ಚಿಮದ ರಾಷ್ಟ್ರಗಳು ಸುಮ್ಮನಿದ್ದುದ್ದು ಅವನ ಧೈರ್ಯವನ್ನು ಹೆಚ್ಚಿಸಿತು. ಈ ಧೈರ್ಯವೇ ಅವನು ಮುಂದಿನ ಎರಡೇ ವರ್ಷಗಳಲ್ಲಿ ನೆರೆಯ ಆಸ್ಟ್ರಿಯಾ ಹಾಗೂ ಝೆಕೊಸ್ಲೊವೇಕಿಯಾ ದೇಶಗಳನ್ನು ಆಕ್ರಮಿಸಿಕೊಳ್ಳಲು ಪ್ರೇರೇಪಿಸಿತು. ಬ್ರಿಟನ್ ಮತ್ತು ಫ್ರಾನ್ಸ್ ಆಗಲೂ ಸುಮ್ಮನಿದ್ದುವಷ್ಟೇ ಅಲ್ಲ, ಹಿಟ್ಲರ್​ನ ಆಕ್ರಮಣಗಳನ್ನು ಬಹಿರಂಗವಾಗಿ ಒಪ್ಪಿಕೊಂಡವು. ಇದರಿಂದ ಇನ್ನೂ ಕೊಬ್ಬಿದ ಹಿಟ್ಲರ್ ಸೋವಿಯತ್ ಯೂನಿಯನ್ ಜೊತೆಗೂಡಿ ಪೋಲ್ಯಾಂಡ್ ದೇಶವನ್ನು ಹರಿದು ಹಂಚಿಕೊಳ್ಳಲು ಹೊರಟಾಗ ವಾರ್ಸಾದ ಜತೆಗಿನ ತನ್ನ ಒಪ್ಪಂದದ ಕಟ್ಟುಪಾಡಿಗೆ ಒಳಗಾಗಿ ಬ್ರಿಟನ್ ಜರ್ಮನಿಯ ಮೇಲೆ ಯುದ್ಧ ಸಾರಿತು. ಎರಡನೇ ಮಹಾಯುದ್ಧ ಆರಂಭವಾಯಿತು. ‘ಹಿಟ್ಲರ್​ನನ್ನು ನಾವು ರೈನ್​ಲ್ಯಾಂಡ್​ನಲ್ಲೇ ತಡೆದಿದ್ದರೆ ಅವನು ನೆರೆಯ ದೇಶಗಳ ಮೇಲೆ ಒಂದೊಂದಾಗಿ ಆಕ್ರಮಣವೆಸಗುತ್ತಿರಲಿಲ್ಲ, ಬಲಿಷ್ಠ ಶಾಂತಿಕಂಟಕನಾಗಿ ಬೆಳೆಯುತ್ತಿರಲಿಲ್ಲ, ಘೊರ ಹಾರೂ ದೀರ್ಘ ಮಹಾಯುದ್ಧದಲ್ಲಿ ಕಾದಾಡುವ ಸಂಕಷ್ಟಕ್ಕೆ ನಾವು ಒಳಗಾಗುತ್ತಿರಲಿಲ್ಲ’ ಎಂದು ರ್ಚಚಿಲ್ ಸ್ಪಷ್ಟವಾಗಿ ಹೇಳಿದ್ದರು.
ಅವರ ಮಾತು ನಿಜ. ಸೋವಿಯತ್ ಯೂನಿಯನ್ ಅನ್ನು ಬಗ್ಗುಬಡಿದು ಅಲ್ಲಿ ತಲೆಯೆತ್ತಿರುವ ಕಮ್ಯೂನಿಸ್ಟ್ ವ್ಯವಸ್ಥೆಯನ್ನು ಬೇರುಸಹಿತ ಕಿತ್ತೊಗೆಯುವುದಾಗಿ ಹಿಟ್ಲರ್ ಬುಡುಬುಡುಕೆ ಅಲ್ಲಾಡಿಸಿದಾಗ ಅದನ್ನು ನಂಬಿದ ಪಶ್ಚಿಮದ ರಾಷ್ಟ್ರಗಳು ಅವನ ಎಲ್ಲ ‘ಸಣ್ಣಪುಟ್ಟ’ ತಪ್ಪುಗಳನ್ನು ಮನ್ನಿಸಿ ಮುಂದೊಂದು ದಿನ ಅವನು ರಷ್ಯಾದ ಮೇಲೆ ದಾಳಿಯೆಸಗುವುದನ್ನೇ ಬಾಯಿಬಿಟ್ಟುಕೊಂಡು ಕಾದದ್ದು ಐತಿಹಾಸಿಕ ಸತ್ಯ. ಕುತಂತ್ರಿ ಹಿಟ್ಲರ್ ಸೋವಿಯತ್ ವಿರೋಧಿ ಹೇಳಿಕೆಗಳನ್ನು ಪುಂಖಾನುಪುಂಖವಾಗಿ ನೀಡುತ್ತಲೇ ತನಗೆ ಬೇಕಾದ್ದೆಲ್ಲವನ್ನೂ ಗಳಿಸಿಕೊಂಡು, ಕೊನೆಗೆ ಮಾಸ್ಕೋದ ಜತೆಗೆ ಮಿತ್ರತ್ವ ಸಾಧಿಸಿ ಬ್ರಿಟನ್, ಫ್ರಾನ್ಸ್ ಹಾಗೂ ಅಮೆರಿಕಗಳ ವಿರುದ್ಧವೇ ತಿರುಗಿಬಿದ್ದಾಗ ಅವು ಇಂಗು ತಿಂದ ಮಂಗನಂತಾದದ್ದೂ ಅಷ್ಟೇ ಐತಿಹಾಸಿಕ ಸತ್ಯ.
ಸದ್ದಾಂನ ವಿಷಯದಲ್ಲಿ ಆದದ್ದೂ ಸರಿಸುಮಾರು ಇದೇ. ಇರಾನ್​ನಲ್ಲಿ ತಲೆಯೆತ್ತಿದ ಪಶ್ಚಿಮ ವಿರೋಧಿ ಮುಸ್ಲಿಂ ಮೂಲಭೂತವಾದವನ್ನು ಇವನು ಮೊಳಕೆಯಲ್ಲೇ ಚಿವುಟಿಹಾಕುತ್ತಾನೆಂದು ನಂಬಿದ ಅಮೆರಿಕ ಮತ್ತಿತರ ಪಶ್ಚಿಮದ ರಾಷ್ಟ್ರಗಳು ಅವನ ಇರಾನ್ ವಿರುದ್ಧದ ಸಮರಕ್ಕೆ ಸಹಕಾರ ನೀಡಿದವು. ಅದರಿಂದ ಕೊಬ್ಬಿದ ಅವನು ಕುವೈತ್​ನ್ನು ಆಕ್ರಮಿಸಿಕೊಂಡ. ಪಶ್ಚಿಮದ ರಾಷ್ಟ್ರಗಳು ಇದನ್ನೂ ಸಹಿಸಿಕೊಂಡರೆ ಅವನ ಮುಂದಿನ ಯೋಜನೆ ಏನಿರಬಹುದು? ಸೌದಿ ಅರೇಬಿಯಾದ ಜತೆ ಇರಾಕ್​ನ ಗಡಿತಂಟೆಗಳಿವೆ, ಅದೂ ತೈಲಭರಿತ ಪ್ರದೇಶಗಳ ಬಗ್ಗೆ. ಈ ಗಡಿಸಮಸ್ಯೆಯನ್ನು ತನ್ನ ದೇಶದ ಪರವಾಗಿ ಪರಿಹರಿಸಿಕೊಳ್ಳಲು ಸದ್ದಾಂ ಪ್ರಯತ್ನಿಸಿದರೆ? ಅವನು ಕಾಲು ಕೆರೆದು ಪಶ್ಚಿಮ ಏಷ್ಯಾದ ಬಲಾಢ್ಯ ಹಾಗೂ ವಿಶ್ವದ ಪ್ರಮುಖ ತೈಲ ನಿರ್ಯಾತಕ ಸೌದಿ ಅರೇಬಿಯಾವನ್ನು ಯುದ್ಧಕ್ಕೆಳೆದರೆ? ವಿಶ್ವದ ಆರ್ಥಿಕ ಹಾಗೂ ರಾಜಕೀಯ ಸ್ಥಿತಿಗತಿಗಳ ಮೇಲೆ ಅದರ ಪರಿಣಾಮ ಭೀಕರ. ಅದನ್ನು ತಡೆಯಬೇಕಾದರೆ ಸದ್ದಾಂಗೆ ಕುವೈತ್​ನಲ್ಲೇ ಬುದ್ಧಿ ಕಲಿಸಿ ಅವನ ರೆಕ್ಕೆಪುಕ್ಕಗಳನ್ನು ಕತ್ತರಿಸಿಬಿಡಬೇಕು! ಸದ್ದಾಂ ’ಹಿಟ್ಲರ್​ನ ಪಶ್ಚಿಮ ಏಷ್ಯಾ ಅವತಾರ’ವಾಗುವುದನ್ನು ತಪ್ಪಿಸಲೇಬೇಕು!
ಮುಂದೆ ನಡೆದದ್ದು ಇತಿಹಾಸ. ಸದ್ದಾಂನ ಇರಾಕ್ ಮೇಲೆ ಯುದ್ಧ ಸಾರಿ ಅಮೆರಿಕ, ಸೌದಿ ಅರೇಬಿಯಾ ಮತ್ತವುಗಳ ಮಿತ್ರದೇಶಗಳು ಕುವೈತ್​ನ್ನು ವಿಮೋಚನೆಗೊಳಿಸಿದವು. ನಿನ್ನೆಯವರೆಗೆ ಅಮೆರಿಕದ ‘ಪರಮಮಿತ್ರ’ನಾಗಿದ್ದ ಸದ್ದಾಂ ತತ್​ಕ್ಷಣ ಉಗ್ರ ಅಮೆರಿಕ ವಿರೋಧಿಯಾಗಿ ಬದಲಾಗಿಹೋದ. ಅಷ್ಟೇ ಅಲ್ಲ, ಸೆಕ್ಯೂಲರ್ ಆಗಿದ್ದ ಅವನು ಏಕಾಏಕಿ ಧಾರ್ವಿುಕನಾಗಿ ಬದಲಾಗಿಹೋದ. ಅಮೆರಿಕ ವಿರುದ್ಧ ಮುಸ್ಲಿಂ ರಾಷ್ಟ್ರಗಳ ಬೆಂಬಲ ಗಳಿಸಿಕೊಳ್ಳುವುದು ಅವನ ಹುನ್ನಾರವಾಗಿತ್ತು.
ಪೆಂಟಗನ್ ಮತ್ತು ವಿಶ್ವ ವ್ಯಾಪಾರ ಕೇಂದ್ರಗಳ ಮೇಲೆ ನಡೆದ ಅಲ್-ಖಯೀದಾ ದಾಳಿ ಮತ್ತೊಮ್ಮೆ ಇರಾಕ್​ನ್ನು ಮುಂಚೂಣಿಗೆ ತಂದಿತು. ತನ್ನ ಮೇಲಾದ ದಾಳಿಯ ಒಂದು ತಿಂಗಳಲ್ಲೇ ಅಲ್ ಖಯೀದಾ ಮತ್ತು ತಾಲಿಬಾನ್ ಜಿಹಾದಿಗಳ ಬೇಟೆಗೆಂದು ಅಮೆರಿಕನ್ ಸೇನೆ ಅಫ್ಘಾನಿಸ್ತಾನಕ್ಕೆ ಕಾಲಿಟ್ಟಿತಷ್ಟೇ. ಈ ಜಿಹಾದಿಗಳಲ್ಲಿ ಹೆಚ್ಚಿನವರು ಸದ್ದಿಲ್ಲದೆ ಅಪ್ಘಾನಿಸ್ತಾನದ ಗಡಿ ದಾಟಿ ನೆರೆಯ ಇರಾನ್ ಸೇರಿದರು. ತನ್ನ ನೆಲದಲ್ಲಿ ಅವರಿಗೆ ನಿಲ್ಲಲು ನೆಲೆ ನೀಡದ ಇರಾನ್ ಅವರು ತನ್ನ ಗಡಿ ದಾಟಿ ಇರಾಕ್ ಸೇರಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಕಟ್ಟಾ ಅಮೆರಿಕನ್ ವಿರೋಧಿ ಜಿಹಾದಿಗಳು ಕಟ್ಟಾ ಅಮೆರಿಕನ್ ವಿರೋಧಿ ಸದ್ದಾಂ ಹುಸೇನ್​ನ ನಾಡಿನಲ್ಲಿ ನೆಲೆ ನಿಂತರು! ಇದು ಪಶ್ಚಿಮ ಹಾಗೂ ಮಧ್ಯ ಏಷ್ಯಾದಲ್ಲಿ ಅಮೆರಿಕದ ಸೇನಾಹಸ್ತಕ್ಷೇಪದ ಮತ್ತೊಂದು ಅಧ್ಯಾಯವನ್ನು ತೆರೆಯಿತು. ಮೇಲ್ನೋಟಕ್ಕೆ ಗೋಚರವಾಗುವ ಚಿತ್ರಗಳ ಹಿಂದೆ ಇರುವ ವಾಸ್ತವಗಳೇ ಬೇರೆ ಎನ್ನುವುದರ ಇನ್ನೊಂದು ಜ್ವಲಂತ ಉದಾಹರಣೆ ನಮ್ಮ ಮುಂದೆ ತೆರೆದುಕೊಂಡಿತು. ಅದನ್ನು ಮುಂದಿನವಾರ ನೋಡೋಣ. ಇಂದಿನ ಗೊಂದಲಗಳನ್ನು ಅರ್ಥಮಾಡಿಕೊಳ್ಳಲು ಅದು ನಮಗೆ ಬಹುವಾಗಿ ಸಹಕಾರಿಯಾಗುತ್ತದೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)
ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ; 20 ಸರ್ಕಾರಿ ಪ್ರಾಥಮಿಕ, 11 ಪ್ರೌಢಶಾಲಾ, 8 ಪಿಯು, ಇಬ್ಬರು ಪ್ರಾಂಶುಪಾಲರಿಗೆ ಗೌರವ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 + eleven =
Remember me
