ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ರಾಜ್ಯದಲ್ಲಿ ಕರೊನಾ ಮಹಾಮಾರಿಯನ್ನು ಪೂರ್ಣ ಪ್ರಮಾಣದಲ್ಲಲ್ಲವಾದರೂ ಕೊಂಚಮಟ್ಟಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿರುವುದರ ಹಿಂದೆ ವಾರಿಯರ್​ಗಳ ಶ್ರಮವಿರುವುದನ್ನು ಯಾರೂ ಅಲ್ಲಗಳೆಯು ವಂತಿಲ್ಲ. ಈ ಕಾರ್ಯದಲ್ಲಿ ಜೀವಪಣಕ್ಕಿಟ್ಟು ಪರಿಸ್ಥಿತಿ ಯನ್ನು ನಿಭಾಯಿಸುತ್ತಿರುವ ವೈದ್ಯ ಸಿಬ್ಬಂದಿ, ಪೊಲೀಸ್, ಪೌರಕಾರ್ವಿುಕರು, ಆಶಾ ಕಾರ್ಯಕರ್ತೆಯರಂತಹ ನೂರಾರು ಶ್ರಮಜೀವಿಗಳ ಹಿಂದೆ ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳ ಬೆವರಿದೆ. ಸರ್ಕಾರ ವಹಿಸಿದ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಇಂತಹ ಕೆಲವರ ಕಾರ್ಯದ ಕುರಿತು ಬೆಳಕು ಚೆಲ್ಲುವ ಯತ್ನ ಇಲ್ಲಿದೆ.
ಕ್ಯಾ.ಮಣಿವಣ್ಣನ್:ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೊಗ ಹೊತ್ತಿರುವ ಕ್ಯಾ.ಮಣಿವಣ್ಣನ್, ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಇಲಾಖೆಯನ್ನು ಹತ್ತಿರವಾಗಿಸಿ ಹತ್ತಾರು ಸಮಸ್ಯೆ ಗಳಿಗೆ ಪರಿಹಾರ ಕೊಡಿಸಿದ್ದಾರೆ. ಜತೆಗೆ ಇಲಾಖೆಯಲ್ಲಿ ವಾರ್ ರೂಂ ತೆಗೆದು ರಾಜ್ಯದಾದ್ಯಂತ ಬರುವ ದೂರುಗಳಿಗೆ ತಕ್ಷಣವೇ ದನಿಯಾಗಿ ಕಷ್ಟ ಬಗೆಹರಿಸಿದ್ದಾರೆ. ಊಟ, ದಿನಸಿ ವಿತರಣೆಯಲ್ಲಿ ಇವರ ಪಾತ್ರ ನಿರ್ಣಾಯಕ. ತಾಂತ್ರಿಕತೆ ಬಳಸಿಕೊಂಡು ಟ್ರಾ್ಯಕಿಂಗ್ ಮಾಡಿ ಪರಿಸ್ಥಿತಿ ಗಮನಿಸುವುದು ಇವರ ಕಾರ್ಯನಿರ್ವಹಣೆ ವಿಶೇಷ. ಮಧ್ಯರಾತ್ರಿ 1, 2 ಗಂಟೆವರೆಗೂ ಸಂಕಷ್ಟದಲ್ಲಿರುವವರಿಗೆ ನೆರವಾಗಿದ್ದಿದೆ.
ಪಿ.ಸಿ.ಜಾಫರ್: ಆರೋಗ್ಯ ಕ್ಷೇತ್ರಕ್ಕೆ ಹೊಸತಾದ ಕರೊನಾ ಕುರಿತಂತೆ ತರಬೇತಿ ನೀಡುವ ಜವಾಬ್ದಾರಿಯನ್ನು ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್ ವಹಿಸಿಕೊಂಡಿದ್ದರು. ರಾಜೀವ್ ಗಾಂಧಿ ಆರೋಗ್ಯ ವಿವಿ ಸಹಯೋಗದಲ್ಲಿ ಅಗತ್ಯ ತರಬೇತಿಗೆ ಯೋಜನೆ ರೂಪಿಸುವ ತಂಡದಲ್ಲೂ ಇವರಿದ್ದರು. ಡಾಕ್ಟರ್, ನರ್ಸ್ ಸೇರಿ 54 ಸಾವಿರ ಕರೊನಾ ವಾರಿಯರ್​ಗಳಿಗೆ ತರಬೇತಿ ನೀಡಲಾಗಿದೆ. ಜತೆಗೆ ಯಾರೆಲ್ಲ ಕರೊನಾ ನಿರ್ವಹಣೆಯಲ್ಲಿ ತೊಡಗಿದ್ದಾರೋ ಅವರಿಗೆಲ್ಲ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿಡಿಯೋ, ಆನ್​ಲೈನ್ ಮೂಲಕ ತರಬೇತಿ ನೀಡಲಾಗಿದೆ.
ಜಿ.ಕುಮಾರ ನಾಯಕ್: ಲಾಕ್​ಡೌನ್ ಸಂದರ್ಭ ಸಂಕಷ್ಟಕ್ಕೀಡಾದ ಹೊರ ರಾಜ್ಯದವರು, ಕೂಲಿ ಕಾರ್ವಿುಕರು, ವಲಸೆ ಕಾರ್ವಿುಕರ ಬಗ್ಗೆ ಕಾಳಜಿ ವಹಿಸಿ ಸಮಾಜ ಕಲ್ಯಾಣ ಇಲಾಖೆ ತನ್ನ ವಸತಿ ನಿಲಯಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿತು. ಊಟೋಪಚಾರ, ಸಾಮಾಜಿಕ ಅಂತರ, ಆರೋಗ್ಯ ಕಾಳಜಿ ವಹಿಸಿತು. ಈ ಕೆಲಸ ಅಚ್ಚುಕಟ್ಟಾಗಿ ನಡೆದು ಒಂದೇ ಒಂದು ದೂರು ಬಾರದಂತೆ ನೋಡಿಕೊಂಡವರು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ್ ನಾಯಕ್.
ಬಿ. ಎಚ್.ಅನಿಲ್​ಕುಮಾರ್: ಜನಸಾಂದ್ರತೆ ಹೆಚ್ಚಿರುವ ರಾಜಧಾನಿ ಬೆಂಗಳೂರಲ್ಲಿ ಕರೊನಾ ತೀವ್ರವಾಗಿ ವ್ಯಾಪಿಸದಂತೆ ತಡೆಯುವಲ್ಲಿ ಬಿಬಿಎಂಪಿ ಮಾಡಿದ ಕಾರ್ಯತಂತ್ರ ಮಹತ್ವದ್ದು. ಈ ಕೆಲಸದಲ್ಲಿ ಪರಿಪೂರ್ಣವಾಗಿ ತೊಡಗಿಕೊಂಡವರು ಆಯುಕ್ತ ಬಿ.ಎಚ್.ಅನಿಲ್​ಕುಮಾರ್. ಬಿಬಿಎಂಪಿಗೊಂದು ಕರೊನಾ ವಾರ್ ರೂಂ ಸ್ಥಾಪಿಸಿ, ಇಡೀ ಬೆಂಗಳೂರಿನ ಮೇಲೆ ಕಣ್ಗಾವಲಿಡಲಾಯಿತು. ಹಸಿದವರಿಗೆ ಊಟದ ವ್ಯವಸ್ಥೆ ಮಾಡಿ, ಸೋಂಕು ಹರಡದಂತೆ ಸ್ವಚ್ಛತೆಗೂ ಗಮನ ಕೊಟ್ಟು, ಸೀಲ್​ಡೌನ್ ಸಂದರ್ಭ ಬಂದಾಗ ಇಡೀ ಪ್ರದೇಶಕ್ಕೆ ಕೋಟೆ ಕಟ್ಟಿಸಿದ್ದು ಇವರ ತಂಡವೇ.
ಪಂಕಜ್​ಕುಮಾರ್ ಪಾಂಡೆ: ಆರೋಗ್ಯ ವಿಚಾರದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ, ಸರ್ಕಾರ ಮಾಡಿಕೊಳ್ಳಬೇಕಾದ ತಯಾರಿ, ಕೊರತೆ ನೀಗಿಸಿಕೊಳ್ಳುತ್ತಲೇ ವೈದ್ಯ ಸಮೂಹಕ್ಕೆ ಮಾರ್ಗಸೂಚಿ ಕೊಡುತ್ತಾ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮಹತ್ವದ ತೀರ್ಮಾನ ಕೈಗೊಳ್ಳುತ್ತಿರುವವರು ಪಂಕಜ್​ಕುಮಾರ್ ಪಾಂಡೆ. ಆರೋಗ್ಯ ಇಲಾಖೆ ಆಯುಕ್ತರಾಗಿರುವ ಅವರು ಕೇಂದ್ರದಿಂದ ನಿರಂತರವಾಗಿ ಬರುತ್ತಿರುವ ಆರೋಗ್ಯ ಸಂಬಂಧಿ ಆದೇಶಗಳ ಪಾಲನೆಗೆ ಒತ್ತು ನೀಡುವ ಮೂಲಕ ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅಕ್ಕಪಕ್ಕದ ರಾಜ್ಯಗಳು ಕರ್ನಾಟಕದ ಆರೋಗ್ಯ ವ್ಯವಸ್ಥೆ ಬಗ್ಗೆ ಗಮನ ಹರಿಸುವಂತೆ ಕೆಲಸಗಳು ನಡೆದಿವೆ. ಪಾಂಡೆ ಅವರೊಂದಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಪಾತ್ರವೂ ಪ್ರಮುಖವಾಗಿದೆ.
ಭಾ ರಾವ್: ಜಿಲ್ಲಾ ಕೇಂದ್ರಗಳಲ್ಲಿ ಪೊಲೀಸ್ ರಕ್ಷಣಾಧಿಕಾರಿಗಳು ಜನರ ಓಡಾಟ ನಿಯಂತ್ರಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದರು. ಆದರೆ, ಬೆಂಗಳೂರಲ್ಲಿ ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಸಿಲುಕಿ ಬೇಕಾಬಿಟ್ಟಿಯಾಗಿ ಪಾಸ್ ವಿತರಿಸಿದ ಬಳಿಕವೂ ಜನರ ಓಡಾಟ ನಿಯಂತ್ರಿಸುವಲ್ಲಿ ಸಫಲರಾಗಿದ್ದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್. ಆರಂಭದಲ್ಲಿ ಪೊಲೀಸರ ಕಾರ್ಯಾಚರಣೆಗೆ ಟೀಕೆ ಬಂದ ಕೂಡಲೇ ವಾಹನಗಳನ್ನು ವಶಕ್ಕೆ ಪಡೆಯುವ ತೀರ್ಮಾನ ಮಾಡಿ ನಂತರ ತಪಾಸಣೆ ಹೆಚ್ಚಿಸಿ ಪರಿಸ್ಥಿತಿ ನಿಯಂತ್ರಿಸುವಲ್ಲಿ ಸಫಲರಾದರು.
ಮನಿಷ್ ಮೌದ್ಗಿಲ್: ಕರೊನಾ ವ್ಯಾಪಕತೆ ಅಂದಾಜಿಗೆ ತಂತ್ರಜ್ಞಾನ ಬಳಕೆ ಅತಿ ಮುಖ್ಯ. ಈ ವಿಚಾರದಲ್ಲಿ ಕರ್ನಾಟಕ ದೇಶದ ಗಮನ ಸೆಳೆದಿದೆ. ‘ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ’ ಮೂಲಕ ಜಿಲ್ಲೆ, ತಾಲೂಕು, ಪಟ್ಟಣ, ನಗರ, ವಾರ್ಡ್, ಗ್ರಾಮ ಮಟ್ಟದವರೆಗೆ (ಕೆಜಿಐಸಿ) ಮ್ಯಾಪ್ ಬಳಸಿ ಕರೊನಾ ಮ್ಯಾಪಿಂಗ್ ಮಾಡಲಾಗಿದೆ. ಪ್ರತಿ ದಿನದ ಅಂಕಿ ಅಂಶ ದಾಖಲಿಸಿಕೊಳ್ಳುವ ಮೂಲಕ ಇಡೀ ರಾಜ್ಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಸರ್ಕಾರಕ್ಕೆ ಸ್ಪಷ್ಟತೆ ತಂದುಕೊಟ್ಟು ಮಾರ್ಗದರ್ಶರ್ಕವಾಗಿ ಕೆಜಿಐಸಿ ಕೆಲಸ ಮಾಡುತ್ತಿದೆ. ಈ ಕೆಲಸದ ಹಿಂದೆ ಐಎಎಸ್ ಅಧಿಕಾರಿ ಮನಿಷ್ ಮೌದ್ಗಿಲ್ ಶ್ರಮವಿದೆ.
ಇನ್ನೂ ಹಲವು ಮಂದಿ: ಸಂಕಷ್ಟ ಕಾಲದಲ್ಲಿ ಬಡವರಿಗೆ ಸುಸೂತ್ರವಾಗಿ ಪಡಿತರ ವ್ಯವಸ್ಥೆ ಸಿಗುವಂತೆ ಮಾಡಿದ ಐಎಎಸ್ ಅಧಿಕಾರಿಗಳಾದ ಶ್ಯಾಮಲಾ ಇಕ್ಬಾಲ್, ಹೆಚ್ಚಾಗಿದ್ದ ಸಪ್ಲೇ ಚೈನ್ ಸಮಸ್ಯೆಯನ್ನು ಸಲೀಸು ಮಾಡಿದ ರಾಜೇಂದ್ರ ಕಠಾರಿಯಾ ಸೇರಿ ಹಲವರ ಶ್ರಮ ಗಮನಾರ್ಹ. ಅನೇಕ ಐಎಎಸ್, ಐಪಿಎಸ್ ಅಧಿಕಾರಿಗಳು ಕರೊನಾ ನಿಯಂತ್ರಣದ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕರೊನಾ ಮಹಾಮಾರಿಗೆ ಕಲಬುರಗಿಯಲ್ಲಿ 5ನೇ ಬಲಿ: ರಾಜ್ಯದಲ್ಲಿ ಮೃತರ ಸಂಖ್ಯೆ 20ಕ್ಕೆ ಏರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
