ಹುಬ್ಬಳ್ಳಿ:ಗುರುಗಳನ್ನು ಒಮ್ಮೆ ಭೇಟಿಯಾಗಿ ಸನ್ಮಾನಿಸಿ, ಆಶೀರ್ವಾದ ಪಡೆಯಬೇಕು. ಅವರನ್ನು ಫೆ. 23ರ ‘ಸತ್ಯದರ್ಶನ’ ಸಭೆಗೆ ಆಹ್ವಾನಿಸಿ, ನೇತೃತ್ವ ವಹಿಸಿಕೊಳ್ಳುವಂತೆ ವಿನಂತಿಸಿಕೊಳ್ಳಬೇಕು ಎಂದು ಇಲ್ಲಿಯ ಮೂರುಸಾವಿರ ಮಠಕ್ಕೆ ಬಂದ ಶ್ರೀ ದಿಂಗಾಲೇಶ್ವರ ಸ್ವಾಮೀಜಿಗೆ, ಮಠದಲ್ಲೇ ಇರುವ ಜಗದ್ಗುರುಗಳು ದರ್ಶನಾವಕಾಶ ನೀಡದಿರುವ ವಿದ್ಯಮಾನ ಗುರುವಾರ ನಡೆಯಿತು. ಇದರಿಂದಾಗಿ ನೊಂದುಕೊಂಡ ದಿಂಗಾಲೇಶ್ವರ ಸ್ವಾಮೀಜಿ, ಗುರುಗಳನ್ನು ಸನ್ಮಾನಿಸಲು ತಂದಿದ್ದ ಶಾಲು, ಹೂ ಹಾರ, ಹಣ್ಣು ಹಂಪಲಗಳು ಹಾಗೂ ಒಂದು ಬಿನ್ನಹ ಪತ್ರವನ್ನು ಮಠದ ಸಮಿತಿಯವರಿಗೆ ಕೊಟ್ಟು ಗುರುಗಳಿಗೆ ತಲುಪಿಸಲು ಹೇಳಿದರಲ್ಲದೇ, ಬಿನ್ನಹ ಪತ್ರದ ಪ್ರತಿಯನ್ನು ಕರ್ತೃ ಗದ್ದುಗೆ ಮೇಲಿಟ್ಟು ನಮಸ್ಕರಿಸಿ ತೆರಳಿದರು. ಈ ವಿದ್ಯಮಾನದಿಂದ ದಿಂಗಾಲೇಶ್ವರ ಸ್ವಾಮೀಜಿ ಭಕ್ತರು ತೀವ್ರ ನೊಂದುಕೊಂಡರೆ, ಮಠದ ಆವರಣದಲ್ಲಿ ಸೇರಿದ್ದ ನೂರಾರು ಜನರಿಗೆ ಅಚ್ಚರಿ ಉಂಟಾಯಿತು.
ಈ ಬೆಳವಣಿಗೆ, ಉತ್ತರಾಧಿಕಾರಿ ಸಂಬಂಧ ಫೆ. 23ರಂದು ದಿಂಗಾಲೇಶ್ವರ ಸ್ವಾಮೀಜಿ ನಿಗದಿಪಡಿಸಿರುವ ಸತ್ಯದರ್ಶನ ಸಭೆ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬ ಜಿಜ್ಞಾಸೆಗೂ ಕಾರಣವಾಗಿದೆ. ಮೂರುಸಾವಿರ ಮಠದ ಈಗಿನ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ (ಮೂಜಗು) ಉತ್ತರಾಧಿಕಾರಿಯಾಗಿ ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮಿ ಅವರನ್ನು ನೇಮಿಸುವ ಕುರಿತು 2014ರಲ್ಲಿ ನೇಮಣೂಕಿ ಪತ್ರ ಸಿದ್ಧಪಡಿಸಿದ್ದರು. ಮೂಜಗು ಅವರೇ ಮುಂದೆ ನಿಂತು ನೇಮಣೂಕಿ ಪತ್ರಕ್ಕೆ ಕೆಲವು ಮಠಾಧೀಶರು ಮತ್ತು ಗಣ್ಯ ಭಕ್ತರ ಸಹಿ ಮಾಡಿಸಿದ್ದಾರೆ. ನಂತರದಲ್ಲಿ ಕೆಲವರು ವಿವಾದ ಎಬ್ಬಿಸಿದ್ದರು. ಅದೇ ಸಂದರ್ಭದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಗಂಭೀರ ಆರೋಪ ಮಾಡಲಾಗಿತ್ತು. ಇದೇ ಹಿನ್ನೆಲೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಫೆ. 23ರಂದು ಬೆಳಗ್ಗೆ ಮೂರುಸಾವಿರ ಮಠದಲ್ಲಿ ‘ಸತ್ಯದರ್ಶನ ಸಭೆ’ ಕರೆದಿದ್ದಾರೆ. ತಮ್ಮನ್ನು ಉತ್ತರಾಧಿಕಾರಿಯಾಗಿ ನೇಮಿಸಿದವರು, ಆರೋಪ ಮಾಡುತ್ತಿರುವವರು, ಭಕ್ತರು ಎಲ್ಲರೂ ಅಂದಿನ ಸಭೆಗೆ ಬನ್ನಿ, ಸತ್ಯ ಏನೆಂದು ಬಹಿರಂಗವಾಗಿ ತಿಳಿಸಿ ಎಂದು ಕೇಳಿಕೊಂಡಿದ್ದಾರೆ. ಮೂಜಗು ಅವರ ದರ್ಶನ ಪಡೆದು, ಸತ್ಯದರ್ಶನ ಸಭೆ ನೇತೃತ್ವ ವಹಿಸಿಕೊಳ್ಳುವಂತೆ ಕೇಳಿಕೊಳ್ಳಲು ಗುರುವಾರ ಮಧ್ಯಾಹ್ನ ಅವರು ಮಠಕ್ಕೆ ಬಂದಿದ್ದರು.
ಗುರುವಾರ ಏನೇನಾಯಿತು?:ಮಧ್ಯಾಹ್ನ 3.05ಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಮಠಕ್ಕೆ ಆಗಮಿಸಿ, ಶ್ರಿ ಗುರುಸಿದ್ಧೇಶ್ವರರ ಮತ್ತು ಹಿಂದಿನ ಜಗದ್ಗುರು ಮೂಜಗಂ ಅವರ ಗದ್ದುಗೆ ದರ್ಶನ ಪಡೆದರು. ಈ ವೇಳೆಯಲ್ಲಿ ಮೂಜಗು ಅವರು ಮಠದ ಮಹಡಿಯಲ್ಲಿಯ ವಿಶ್ರಾಂತಿ ಕೋಣೆಯಲ್ಲಿದ್ದರು. ಮಠಕ್ಕೆ ಭಾರಿ ಪೊಲೀಸ್ ಭದ್ರತೆ ಹಾಕಲಾಗಿತ್ತು. ಪ್ರಧಾನ ಬಾಗಿಲ ಬಳಿಯಲ್ಲೂ ಪೊಲೀಸರು ಪಹರೆಗೆ ನಿಂತಿದ್ದರು. ತಾವು ಬಂದಿದ್ದು, ದರ್ಶನಾವಕಾಶ ಕೋರಿರುವುದಾಗಿ ಮೂಜಗು ಅವರಿಗೆ ಮಾಹಿತಿ ನೀಡುವಂತೆ ಮಠದ ಸಿಬ್ಬಂದಿಗೆ ತಿಳಿಸಿದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಮಠದ ಹಜಾರದಲ್ಲಿ ಸಾಮಾನ್ಯ ಭಕ್ತರಂತೆ ನೆಲದ ಮೇಲೆಯೇ ಕುಳಿತು ಕಾಯತೊಡಗಿದರು. ಮಾತಿಗೆಳೆದ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಬೇರೊಂದು ಕಾರ್ಯಕ್ರಮ ನಿಗದಿಯಾಗಿದ್ದು, ಸ್ವಲ್ಪ ಹೊತ್ತು ಕಾಯುತ್ತೇನೆ. ಅಷ್ಟರೊಳಗೆ ಜಗದ್ಗುರುಗಳು ಆಹ್ವಾನಿಸಬಹುದು ಎಂದು ಆಶಾವಾದಿಯಾಗಿಯೇ ಹೇಳಿದರು. ಸುಮಾರು 15 ನಿಮಿಷದ ನಂತರ ಮೂಜಗು ಅವರ ಸಂದೇಶ ಹೊತ್ತು ತಂದ ಮಠದ ದಾಸೋಹ ಸಮಿತಿ ಅಧ್ಯಕ್ಷ ವಿಜಯ ಶೆಟ್ಟರ್ ಅವರು, ಹಿರಿಯರ ಸಮ್ಮುಖದಲ್ಲೇ ಭೇಟಿಯಾಗುವುದಾಗಿ ಮೂಜಗು ಅವರು ಹೇಳಿದ್ದಾರೆ ಎಂದರು. ಇದರಿಂದ ಅಚ್ಚರಿಗೊಂಡ ದಿಂಗಾಲೇಶ್ವರರು, ಈ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ. ತಮಗೆ 33 ವರ್ಷದಿಂದ ಗುರುಗಳ ಜತೆ ಅನ್ಯೋನ್ಯ ಸಂಬಂಧ ಇದೆ. ಇಲ್ಲಿ ಗುರುಗಳನ್ನು ಮುಚ್ಚಿಡುವ ಪ್ರಯತ್ನ ನಡೆದಿದೆ. ಜಗದ್ಗುರು ಆಗುವುದೇ ಭಕ್ತರಿಗೆ ದರ್ಶನ ನೀಡಲು. ನಾನು ಅವರ ಶಿಷ್ಯ. ಇಲ್ಲಿ ಗುರುಗಳ ಸ್ವಾತಂತ್ರ್ಯ್ಕೆ ಯಾರೋ ಅಡ್ಡಿ ಉಂಟುಮಾಡುತ್ತಿದ್ದಾರೆ ಎನಿಸುತ್ತಿದೆ. ಗುರುಗಳಿಗೆ ಹೊರಗೆ ಬಾರದಿರಿ ಎಂದವರು ಯಾರು? ಅಂಥ ಸಮಸ್ಯೆ ಏನಿದೆ? ಇರುವ ಸಮಸ್ಯೆ ಪರಿಹಾರವಾಗುವುದು ಬೇಡವೆ? ಎಂದು ಪ್ರಶ್ನಿಸಿದರು. ಇನ್ನೂ ಸ್ವಲ್ಪ ಹೊತ್ತು ಕಾಯಲು ಸಿದ್ಧ ಎಂದರು. ಆದಾಗ್ಯೂ ಮೂಜಗು ಅವರ ಕಡೆಯಿಂದ ಯಾವುದೇ ಸಂದೇಶ ಬಾರದಿದ್ದಾಗ ದಿಂಗಾಲೇಶ್ವರ ಸ್ವಾಮೀಜಿ, ಸನ್ಮಾನಕ್ಕೆ ತಂದಿದ್ದ ಸಾಮಗ್ರಿಗಳು ಹಾಗೂ ಬಿನ್ನಹ ಪತ್ರವನ್ನು ವಿಜಯ ಶೆಟ್ಟರ್, ಮೋಹನ ಅಸುಂಡಿ ಅವರಿಗೆ ಕೊಟ್ಟು ಮೂಜಗು ಅವರಿಗೆ ತಲುಪಿಸುವಂತೆ ಹೇಳಿದರು. ಬಿನ್ನಹ ಪತ್ರದ ಪ್ರತಿಯೊಂದನ್ನು ಕರ್ತೃ ಗದ್ದುಗೆ ಮೇಲಿಟ್ಟು ಪ್ರಾರ್ಥಿಸಿ, ಹೊರಟರು.
ಅವಕಾಶ ಕೊಡದೇ ಇದ್ದರೆ ತಿರುವು: ಮಠದಿಂದ ಹೊರಡುವಾಗ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಫೆ. 23ರ ಸತ್ಯದರ್ಶನ ಸಭೆಗೆ ಅವಕಾಶ ಕೊಡದೇ ಇದ್ದರೆ ತಿರುವು ಬೇರೆ ಆಗಲಿದೆ ಎಂದರು. ಮಠದ ಉತ್ತರಾಧಿಕಾರಿ ವಿಷಯದಲ್ಲಿ ಎದ್ದಿರುವ ವಿವಾದ ಅತ್ಯಂತ ಶಾಂತವಾಗಿ ಪರಿಹಾರವಾಗಬೇಕು ಎಂಬುದು ತಮ್ಮ ಅಪೇಕ್ಷೆ. ಭಕ್ತರ ಅಪೇಕ್ಷೆಯೂ ಅದೇ ಆಗಿದೆ. ಆದ್ದರಿಂದ, ಈ ರೀತಿ (ಕಾಣದ ಕೈಗಳಿಂದ ದರ್ಶನಕ್ಕೆ ಅಡ್ಡಿ) ಹಠ ಮಾಡದೇ ಅತ್ಯಂತ ನಿಗಾ ವಹಿಸಿ ಸತ್ಯದರ್ಶನಕ್ಕೆ ಅವಕಾಶ ಮಾಡಿಕೊಡಬೇಕು. ಶಾಂತಿ ಕಾಪಾಡಿಕೊಳ್ಳೋಣ. ಒಂದುವೇಳೆ 23ರ ಸಭೆ ನಡೆಯಬಾರದು ಎಂದು ಇದ್ದಲ್ಲಿ, ಅಷ್ಟರೊಳಗೇ ತಮ್ಮ ಅಹವಾಲಿನನ್ವಯ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಹೇಳಿದರು. ಅಂದು 144ನೇ ಕಲಂ ಪ್ರಕಾರ ನಿಷೇಧಾಜ್ಞೆ ಜಾರಿಮಾಡಿದರೆ…? ಎಂಬ ಸುದ್ದಿಗಾರರ ಪ್ರಶ್ನೆಗೆ, ಹಾಗೆ ಮಾಡಿದಲ್ಲಿ ನಾನು ಸರ್ಕಾರದೊಂದಿಗೆ ಮಾತನಾಡುತ್ತೇನೆ ಎಂದು ಸ್ವಾಮೀಜಿ ಹೇಳಿದರು.
ಬಿನ್ನಹಪತ್ರದಲ್ಲೇನಿದೆ?: ಮೂಜಗು ಅವರಿಗೆ ಸಲ್ಲಿಸಲು ದಿಂಗಾಲೇಶ್ವರ ಸ್ವಾಮೀಜಿ ತಂದಿದ್ದ ಪತ್ರದ ಸಾರಾಂಶ ಇಲ್ಲಿದೆ. ತಾವು (ಮೂಜಗು) ನನ್ನನ್ನು ಮೂರುಸಾವಿರ ಮಠದ ಉತ್ತರಾಧಿಕಾರಿ ಎಂದು ಸರ್ವ ಭಕ್ತರ ಸಮಕ್ಷಮದಲ್ಲಿ ನೇಮಕ ಪತ್ರ ಮಾಡಿದ ನಂತರದಲ್ಲಿ ಕೆಲವು ನಾಟಕೀಯ ಬೆಳವಣಿಗೆಗಳು ಆಗಿರುವುದು ತಮಗೂ, ನನಗೂ, ಸಮಾಜಕ್ಕೂ ಮುಜುಗರ ಮತ್ತು ನೋವು ಉಂಟುಮಾಡಿವೆ. ಸತತ 6 ವರ್ಷದಿಂದ ಸಮಸ್ಯೆಗೆ ಪರಿಹಾರ ನೀಡುವಂತೆ ತಮ್ಮಲ್ಲಿ, ನಾಡಿನ ಪೂಜ್ಯ ಮಠಾಧೀಶರಲ್ಲಿ ಹಾಗೂ ಹಿರಿಯ ಭಕ್ತರಲ್ಲಿ ಕೇಳಿಕೊಳ್ಳುತ್ತ ಬಂದಿದ್ದೇನೆ. ಗೊಂದಲಕ್ಕೆ ಶಾಶ್ವತ ಪರಿಹಾರ ದೊರೆಯಬೇಕೆಂದು ಫೆ. 23ರಂದು, ಸತ್ಯದರ್ಶನ ಶಿರೋನಾಮೆಯಲ್ಲಿ ಬೃಹತ್ ಸಭೆಯನ್ನು ಕರ್ತೃ ಶ್ರೀ ಗುರುಸಿದ್ಧೇಶ್ವರನ ಸನ್ನಿಧಿಯಲ್ಲಿ ಕರೆದಿದ್ದೇನೆ. ತಾವು ಮತ್ತು ಸಮಾಜ ಬಾಂಧವರು ಶಾಂತ ರೀತಿಯಲ್ಲಿ ಮತ್ತು ಮಾದರಿ ಎನ್ನುವಂತೆ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಪ್ರಣಾಮಗಳೊಂದಿಗೆ ಬೇಡಿಕೊಳ್ಳುತ್ತೇನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + nineteen =
Remember me
