ಬೆಂಗಳೂರು:ಕರ್ನಾಟಕ ನೀರಾವರಿ (ನೀರಿನ ಕರ ವಿಧಿಸುವಿಕೆ) ನಿಯಮಗಳು 1965ಕ್ಕೆ ತಿದ್ದುಪಡಿ ಮಾಡುವ ತೀರ್ಮಾನಿಸಿರುವ ರಾಜ್ಯ ಸರ್ಕಾರ, ವಾರ್ಷಿಕ ನೀರಿನ ಕರ ಏರಿಸುವ ಪ್ರಸ್ತಾಪ ಮಾಡಿದೆ. ನೀರಿನ ಕರ ದರವನ್ನು ಇನ್ನು ಮುಂದೆ ವಾರ್ಷಿಕ ಹಣದುಬ್ಬರ ಸೂಚ್ಯಂಕಕ್ಕೆ ಸಂವೇದಿಯಾಗಿ ಹೆಚ್ಚಳ ಮಾಡುವ ಷರತ್ತಿನೊಂದಿಗೆ ಕಾನೂನಿಗೆ ತಿದ್ದುಪಡಿ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಗೃಹ ಬಳಕೆ ನೀರಿಗೆ ಪ್ರತಿ ಎಂಸಿಎಫ್​ಟಿಗೆ 320 ರೂ. ರಾಜಧನ ಹಾಗೂ ಕೈಗಾರಿಕೆಗಳಿಗೆ ಕಾಲುವೆ, ಕೆರೆ, ಜಲಾಶಯ ಇತ್ಯಾದಿಗಳಿಂದ ಒದಗಿಸುವ ನೀರಿಗೆ ಪ್ರತಿ ಎಂಸಿಎಫ್​ಟಿ 3 ಲಕ್ಷ ರೂ. ರಾಜಧನ, ನೈಸರ್ಗಿಕ ಜಲಮಾರ್ಗಗಳು, ನದಿ, ಹಳ್ಳಗಳಿಂದ ಪ್ರತಿ ಎಂಸಿಎಫ್​ಟಿ 1.50 ಲಕ್ಷ ರೂ. ರಾಜಧನ ನಿಗದಿಪಡಿಸಲು ಸಚಿವ ಸಂಪುಟ ಅನುಮೋದಿಸಿದೆ. ಬಹಳ ವರ್ಷಗಳಿಂದ ಕೈಗಾರಿಕೆ ನೀರಿನ ಕರ ಪರಿಷ್ಕರಣೆಯಾಗಿಲ್ಲ. ಈಗ ಮಾಡಲಾಗುತ್ತಿದೆ ಎಂದು ಸರ್ಕಾರ ತನ್ನ ತೀರ್ವನವನ್ನು ಸಮರ್ಥಿಸಿಕೊಂಡಿದೆ. ಕೈಗಾರಿಕೆಗಳಿಗೆ ಕಾಲುವೆ, ಕೆರೆ, ಜಲಾಶಯ ಇತ್ಯಾದಿಗಳಿಂದ ಒದಗಿಸುವ ನೀರಿಗೆ ಕರ ವಾರ್ಷಿಕ 50 ಸಾವಿರ ರೂ. ಗಿಂತ ಕಡಿಮೆ ಇತ್ತು. ಈಗ ಮೂರು ಲಕ್ಷಕ್ಕೆ ಪರಿಷ್ಕರಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ ಪಾಟೀಲ್ ತಿಳಿಸಿದರು.
ಲ್ಯಾಬ್​ಗೆ ಉಪಕರಣ ಖರೀದಿ:ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ನಿರಂತರವಾಗಿ ರೋಗ ಪತ್ತೆ ಸೇವೆಗಳನ್ನು ಒದಗಿಸಲು ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಿರುವ ಲ್ಯಾಬ್ ಉಪಕರಣಗಳಿಗೆ ರಾಸಾಯನಿಕಗಳು ಹಾಗೂ ಕಂಪ್ಯೂಟರ್ ರೆಡಿಯಾಗ್ರಫಿ ಸಿಸ್ಟಮ್ಳಿಗೆ ಡ್ರೖೆ ಲೇಸರ್ ಎಕ್ಸರೇ ಫಿಲ್ಮ್ ಮತ್ತು ಪರಿಕರಗಳನ್ನು ಒದಗಿಸಲು ಸಚಿವ ಸಂಪುಟ ನಿರ್ಧರಿಸಿದೆ. ಒಟ್ಟು ಯೋಜನಾ ವೆಚ್ಚ 50.15 ಕೋಟಿ ರೂ.ಗಳಾಗಿದ್ದು, ಉಪಕೇಂದ್ರದ ಮಟ್ಟದಲ್ಲಿ 14 ಪರೀಕ್ಷೆಗಳು, ಪ್ರಾಥಮಿಕ ಮತ್ತು ನಗರ ಆರೋಗ್ಯ ಕೇಂದ್ರಗಳಲ್ಲಿ 63 ಪರೀಕ್ಷೆ, ತಾಲೂಕು ಆಸ್ಪತ್ರೆ ಮಟ್ಟದಲ್ಲಿ 111 ಪರೀಕ್ಷೆಗಳು, ಜಿಲ್ಲಾಸ್ಪತ್ರೆ ಮಟ್ಟದಲ್ಲಿ 134 ಪ್ರಯೋಗಶಾಲಾ ಪರೀಕ್ಷೆಗೆ ಇವುಗಳನ್ನು ಬಳಸಲಾಗುತ್ತದೆ.
ಸಿಎಂ ಬ್ರೇಕ್:ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2023ಕ್ಕೆ ಸಂಪುಟ ಸಭೆ ಅನುಮೋದಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೆಪಿಎಸ್​ಸಿ ಅಥವಾ ಕೆಇಎ ಎಂಬುದರ ಬದಲಾಗಿ ಕೆಪಿಎಸ್​ಸಿ ಅಥವಾ ಸರ್ಕಾರದಿಂದ ವಹಿಸಬಹುದಾದ ಬೇರೆ ಯಾವುದಾದರು ಸಂಸ್ಥೆ ಮೂಲಕ ನೇಮಕ ಮಾಡಲು ಶಿಕ್ಷಣ ಇಲಾಖೆ ಬಯಸಿತ್ತು. ಆದರೆ, ಸಿಎಂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲು ಬಯಸಿದರೆಂದು ಮೂಲಗಳು ತಿಳಿಸಿವೆ.
ಅಧಿಕಾರ ಮೊಟಕು:ಕೌಶಲ ಅಭಿವೃದ್ಧಿ ಪ್ರಾಧಿಕಾರದ ಉದ್ದೇಶಗಳು ಹಾಗೂ ಪ್ರಕ್ರಿಯೆಗಳನ್ನು ಪರಿಷ್ಕರಿಸುವ ಬಗ್ಗೆ ತೀರ್ಮಾನ ಮಾಡಲಾಗಿದೆ. ಮಾರ್ಗಸೂಚಿಗಳನ್ನು, ತರಬೇತಿ ಪಾಲುದಾರರ, ತರಬೇತಿ ಕೇಂದ್ರಗಳ ಕಾರ್ಯಕ್ಷಮತೆಯ ವಿಶ್ಲೇಷಣೆ ಪದ್ಧತಿ, ಮೌಲ್ಯಮಾಪನ ಸಂಸ್ಥೆಗಳನ್ನು ಅನುಮೋದಿಸುವ ಅಧಿಕಾರ ನಿಗದಿಪಡಿಸಲಾಗಿತ್ತು. ಈಗ ಕೇವಲ ಶಿಫಾರಸು ಮಾಡುವ ಅಧಿಕಾರ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಹನ್ನೊಂದು ಬುಡಕಟ್ಟು ಜನಾಂಗಕ್ಕೆ ವರ್ಷ ಪೂರ್ತಿ ಪೌಷ್ಟಿಕ ಆಹಾರರಾಜ್ಯದ 8 ಜಿಲ್ಲೆಗಳಲ್ಲಿ ವಾಸಿಸುತ್ತಿರುವ 11 ಬುಡಕಟ್ಟು ಪಂಗಡಗಳಿಗೆ ವರ್ಷಪೂರ್ತಿ ಪೌಷ್ಟಿಕ ಆಹಾರ ಒದಗಿಸುವ ಯೋಜನೆಯನ್ನು ಸರ್ಕಾರ ಮುಂದುವರಿಸಿದೆ. ಸರ್ಕಾರ ಬದಲಾದಂತೆ ಈ ಯೋಜನೆ ನಿಲ್ಲಿಸಲಾಯಿತೆಂದು ತೀವ್ರ ಆಕ್ಷೇಪ ಕೇಳಿಬಂದಿತ್ತು. ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ. ಕೊರಗ, ಜೇನುಕುರುಬ, ಸೋಲಿಗ, ಎರವ, ಕಾಡುಕುರುಬ, ಮಲೆಕುಡಿಯ, ಸಿದ್ದಿ, ಹಸಲರು, ಗೌಡಲು, ಗೊಂಡ ಮತ್ತು ಬೆಟ್ಟಕುರುಬ ಜನಾಂಗದ ಕುಟುಂಬಗಳಿಗೆ ವರ್ಷಪೂರ್ತಿ ಪೌಷ್ಟಿಕ ಆಹಾರವನ್ನು ಉಚಿತವಾಗಿ ಒದಗಿಸಲು 120 ಕೋಟಿ ರೂ. ಅಂದಾಜು ಮೊತ್ತದಲ್ಲಿ ಸರಬರಾಜು ಮಾಡುವ ಯೋಜನೆಯನ್ನು ಅನುಷ್ಠಾನ ಗೊಳಿಸಲು ಅನುಮೋದನೆ ನೀಡಲಾಗಿದೆ. 11 ಬುಡಕಟ್ಟು ಪಂಗಡಗಳ 47859 ಕುಟುಂಬಗಳಿಗೆ ಈ ಯೋಜನೆ ಲಾಭ ಸಿಗಲಿದೆ.
ಹೊಸ ಬಸ್​ಗಳು ರಸ್ತೆಗೆಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ 300 ಎಲೆಕ್ಟ್ರಿಕ್ ಬಸ್​ಗಳನ್ನು (ಎಸಿ-75, ನಾನ್ ಎಸಿ-225) ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 450 ನಾನ್ ಎಸಿ ಎಲೆಕ್ಟ್ರಿಕ್ ಬಸ್​ಗಳನ್ನು ಜೆಸಿಸಿ (ಗುತ್ತಿಗೆ) ಆಧಾರದ ಮೇಲೆ ಕಾರ್ಯಾಚರಣೆಗೊಳಿಸಲು ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 100 ಬಿಎಲ್​ಟಿಎಸ್ 150 ನಗರ ಸಾರಿಗೆ (ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿ ನಗರಗಳಿಗೆ) ಮತ್ತು 200 ಗ್ರಾಮಾಂತರ ಸಾರಿಗೆ ಸೇರಿ ಒಟ್ಟು 450 ಬಸ್ ಸೇವೆ ಬಳಸಿಕೊಳ್ಳಲಾಗುತ್ತದೆ.
ಠೇವಣಿ ಮೇಲೆ ಕಣ್ಣಿಡಲು ಸಂಪುಟ ಉಪ ಸಮಿತಿಮುಖ್ಯ ವಾಹಿನಿಯ ಹೊರಗಿರುವ ವಿವಿಧ ಇಲಾಖೆ ಠೇವಣಿಯನ್ನು ಗುರುತಿಸಿ ಅದನ್ನು ವಾಪಸ್ ಪಡೆದು ಕ್ರಮಕೈಗೊಳ್ಳಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಸಂಪುಟ ಉಪ ಸಮಿತಿ ರಚಿಸಲಾಗುತ್ತಿದೆ. ಸರ್ಕಾರದ ಠೇವಣಿಯನ್ನು ಖಜಾನೆಯಲ್ಲಿಡುವ ಬದಲು ಬೇರೆಡೆ (ಖಾಸಗಿ ಬ್ಯಾಂಕ್) ತೊಡಗಿಸಿದ್ದರೆ ಗುರುತಿಸಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ. ಎಷ್ಟು ಹಣ ಇದೆ ಎಂಬ ಮಾಹಿತಿ ಇಲ್ಲ. ಈ ಹಿಂದೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲೇ ಆರುನೂರು ಕೋಟಿಗಳಷ್ಟಿತ್ತು ಎಂದರೆ ಹೊರಗೆ ಎಷ್ಟಿರಬಹುದೆಂದು ಅಂದಾಜಿಸಬಹುದು ಎಂದು ಸಚಿವ ಎಚ್.ಕೆ ಪಾಟೀಲ್ ತಿಳಿಸಿದರು.
ಸಂಪುಟ ಸಭೆ ಮುಖ್ಯಾಂಶ
· ಸಂಸದೀಯ ವ್ಯವಹಾರ ಇಲಾಖೆ ಕಾರ್ಯದರ್ಶಿ ಶ್ರೀಧರ್ ವಯೋನಿವೃತ್ತಿ ಹೊಂದುತ್ತಿದ್ದು, ಅವರ ಸೇವೆ 2 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ವಿಸ್ತರಣೆ.
· ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿ, ಆಡಳಿತ ನಿಯಂತ್ರಣದಲ್ಲಿರುವ ಕೆಲವು ಕಾಮಗಾರಿಗಳ ಆಸ್ತಿ, ಹೊಣೆಗಾರಿಕೆ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತಕ್ಕೆ ವರ್ಗಾಯಿಸಲು ಒಪ್ಪಿಗೆ.
· ಎಡಿಬಿ ನೆರವಿನಡಿ ಮಂಗಳೂರು ನಗರದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ 247 ನೀರು ಸರಬರಾಜು ಕಾಮಗಾರಿಯಲ್ಲಿ ಹೊಸದಾಗಿ 125 ಎಂಎಲ್​ಡಿ ನೀರು ಶುದ್ಧೀಕರಣ ಘಟಕವನ್ನು 127.70 ಕೋಟಿ ರೂ. ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಒಪ್ಪಿಗೆ.
ಹಿರಿಯ ವಕೀಲರ ನೇಮಕಬೆಂಗಳೂರು: ಪಿಎಸ್​ಐ ನೇಮಕಾತಿ ಪರೀಕ್ಷಾ ಅಕ್ರಮದ ಕುರಿತು ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಏಕಸದಸ್ಯ ಆಯೋಗ ನಡೆಸುತ್ತಿರುವ ನ್ಯಾಯಾಂಗ ವಿಚಾರಣೆಯಲ್ಲಿ ಆಯೋಗದ ಮುಂದೆ ವಾದ ಮಂಡಿಸಲು ಮತ್ತೊಬ್ಬರು ಹಿರಿಯ ವಕೀಲರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಿರಿಯ ವಕೀಲ ಡಿ.ಎಸ್. ಸುಧನ್ವ ಅವರನ್ನು ನೇಮಿಸಲಾಗಿದೆ. ಈಗಾಗಲೆ ಆಯೋಗದ ವಿಚಾರಣೆಯಲ್ಲಿ ಹಿರಿಯ ವಕೀಲ ಅಶೋಕ್ ಎನ್.ನಾಯ್್ಕ ಅವರನ್ನು ನೇಮಿಸಲಾಗಿತ್ತು. ಆದರೆ, ಒಬ್ಬರೇ ವಕೀಲರು ಆಯೋಗದ ಮುಂದೆ ಪರಿಣಾಮಕಾರಿಯಾಗಿ ವಿಷಯ ಮಂಡಿಸುವುದು ಕಷ್ಟಕರವಾಗುತ್ತದೆ. ಹೀಗಾಗಿ ಡಿ.ಎಸ್.ಸುಧನ್ವ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ರೈತರಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಿದರೆ ಸುಸ್ಥಿರ ಅಭಿವೃದ್ಧಿ: ಡಾ. ಶಾಲಿನಿ ರಜನೀಶ್ ಹೇಳಿಕೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 3 =
Remember me
