| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಚುನಾವಣೆಗೆ ಮುನ್ನ ಘೋಷಿಸಿದ್ದ ಗ್ಯಾರಂಟಿಗಳ ಅನುಷ್ಠಾನವನ್ನು ಆದ್ಯತೆಯಾಗಿ ತೆಗೆದುಕೊಂಡಿರುವ ಸರ್ಕಾರ, ರಾಜ್ಯವನ್ನು ಆವರಿಸಿರುವ ಭೀಕರ ಬರವನ್ನು ನಿಭಾಯಿಸುವ ಬೃಹದಾಕಾರದ ಸವಾಲಿಗೆ ಎದೆಗೊಡಬೇಕಾಗಿದೆ. ಕೇಂದ್ರ ಸರ್ಕಾರ ಕೈ ಹಿಡಿಯದೇ ಹೋದರೆ ಸಂಕಷ್ಟ ಸ್ಥಿತಿ ಎದುರಾಗಲಿದೆ.
ಇಡೀ ದೇಶವನ್ನೇ ಈ ವರ್ಷ ಮಳೆ ಕೊರತೆ ಕಾಡಿದೆ. ರಾಜ್ಯದಲ್ಲಿಯೂ ಶೇ.27 ರಷ್ಟು ಕಡಿಮೆ ಮಳೆಯಾಗಿದ್ದು 132 ವರ್ಷಗಳಲ್ಲಿ ಕೃಷಿ ಇಷ್ಟು ಸಮಸ್ಯೆಗೆ ಒಳಗಾಗಿರಲಿಲ್ಲ. ಕೇರಳ, ಮಹಾರಾಷ್ಟ್ರ, ಉತ್ತರಪ್ರದೇಶ…. ಹೀಗೆ ಬಹುತೇಕ ರಾಜ್ಯಗಳಲ್ಲಿ ಬರದ ತೀವ್ರ ಛಾಯೆ ಇದೆ.
ವಾರದಲ್ಲಿ ಮಳೆಯಾಗದಿದ್ದರೆ ಉಷ್ಣಾಂಶ ಹೆಚ್ಚಾಗಿ ಅದರ ಅಡ್ಡ ಪರಿಣಾಮಗಳು ಎದುರಾಗುವ ಅಪಾಯ ಇದೆ. ಕುಡಿಯುವ ನೀರಿನ ಸಮಸ್ಯೆ ಭೀಕರವಾಗಲಿದೆ. ಬೆಳೆ ಒಣಗಿ ಕೃಷಿ ಉತ್ಪಾದನೆ ಕಡಿಮೆಯಾಗಲಿದೆ. ಬರ ಹಾಗೂ ಅದರ ಪರಿಣಾಮ ಗಳನ್ನು ಎದುರಿಸಲು ಕಂದಾಯ, ಆರೋಗ್ಯ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳನ್ನು ಸರ್ಕಾರ ಸಜ್ಜುಗೊಳಿಸಬೇಕಾಗಿದೆ. ಪರಿಹಾರ ಕಾರ್ಯಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಇದುವರೆಗೂ ಮಳೆಯಾಗದ 15 ತಾಲೂಕುಗಳಿವೆ. 190 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಳೆಯೇ ಇಲ್ಲದೇ ಬಿತ್ತನೆ ಮಾಡಿರುವ ಬೆಳೆ ಮೊಳಕೆಯೊಡೆದಿಲ್ಲ. ರೈತರು ಮುಂಗಾರು ಬೆಳೆಯ ಆಸೆಯನ್ನು ಕೈಬಿಟ್ಟಿದ್ದಾರೆ. ಜತೆಗೆ, ಹಿಂಗಾರು ಮಳೆ ಬಂದರೂ ಅದರಿಂದ ಕೃಷಿಗೆ ಅನುಕೂಲವಾಗುತ್ತದೆ ಎಂಬ ಯಾವ ನಿರೀಕ್ಷೆಯೂ ಇಲ್ಲ.
ಉತ್ಪಾದನೆ ಕುಸಿಯುವ ಭೀತಿ:ಈ ವರ್ಷ 82.35 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. 66.68 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆಯಾಗಿ ಶೇ.81 ರಷ್ಟು ಸಾಧನೆ ಮಾಡಲಾಗಿತ್ತು. ಈ ವರ್ಷ ರಾಜ್ಯದಲ್ಲಿ 148.16 ಲಕ್ಷ ಟನ್ ಆಹಾರ ಧಾನ್ಯ ಹಾಗೂ 13.84 ಲಕ್ಷ ಟನ್ ಎಣ್ಣೆಕಾಳು ಉತ್ಪಾದನೆಯ ಗುರಿ ಇದೆ. ಅದರಲ್ಲೂ ಮುಂಗಾರಿನಲ್ಲಿಯೇ 111.93 ಲಕ್ಷ ಟನ್ ಆಹಾರ ಹಾಗೂ 9.89 ಲಕ್ಷ ಟನ್ ಎಣ್ಣೆಕಾಳು ಉತ್ಪಾದನೆಯ ಗುರಿಯಿದೆ. ಆದರೆ, ಮಳೆ ಇಲ್ಲದೆ ಉತ್ಪಾದನೆಯ ನಿರೀಕ್ಷೆಯನ್ನೇ ಕೈಬಿಡಬೇಕಾಗಿದೆ.
ಉಷ್ಣಾಂಶ ಹೆಚ್ಚಳ:ಮಳೆಯ ಕೊರತೆಯಿಂದಾಗಿ ಉಷ್ಣಾಂಶದಲ್ಲಿ ಹೆಚ್ಚಳವಾಗಿದೆ. ಆಗಸ್ಟ್​ನಲ್ಲಿ ತಾಪಮಾನ ಕನಿಷ್ಠ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಿದ್ದು, ಇನ್ನೂ ಹದಿನೈದು ದಿನ ಕಳೆದರೆ ಇನ್ನಷ್ಟು ಧಗೆ ಉಂಟಾಗಲಿದೆ. ಉಷ್ಣಾಂಶದಲ್ಲಿನ ಹೆಚ್ಚಳ ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜ್ವರ, ತಲೆನೋವು, ಕಾಲುಗಳ ನೋವು, ಒಣ ಚರ್ಮ, ವಾಂತಿ, ನಿಶ್ಯಕ್ತಿ, ಅತಿಸಾರ, ಸನ್​ಸ್ಟ್ರೋಕ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆಗಳಿದ್ದು ಆರೋಗ್ಯ ಇಲಾಖೆ ಇದನ್ನು ಎದುರಿಸಲು ಸಿದ್ಧತೆಯನ್ನು ತೀವ್ರಗೊಳಿಸಬೇಕಾಗಿದೆ.
4ಕ್ಕೆ ಸಭೆ:ಪ್ರಕೃತಿ ವಿಕೋಪ ನಿಯಂತ್ರಣ ಸಚಿವ ಸಂಪುಟ ಉಪ ಸಮಿತಿ ಸೆ.4 ರಂದು ಸಭೆ ಸೇರುತ್ತಿದೆ. ಆ ಸಭೆಯಲ್ಲಿ ರಾಜ್ಯದ ಬರ ಘೋಷಣೆಯ ಬಗ್ಗೆ ತೀರ್ಮಾನ ಮಾಡಲಿದೆ.
130 ತಾಲೂಕುಗಳಲ್ಲಿ ಬರ:ರಾಜ್ಯದಲ್ಲಿ ನಡೆದಿರುವ ಅಧ್ಯಯನದ ಪ್ರಕಾರ 130 ತಾಲೂಕುಗಳಲ್ಲಿ ಬರ ವ್ಯಾಪಿಸಿದೆ. ಬೆಳೆ ಪೂರ್ಣ ಹಾಳಾಗಿದೆ. ಈ ವಾರ ಅಧ್ಯಯನ ಪೂರ್ಣವಾಗಲಿದ್ದು, ಈ ತಾಲೂಕುಗಳ ಸಂಖ್ಯೆ 150 ದಾಟಿದರೂ ಅಚ್ಚರಿಯೇನಿಲ್ಲ.
ಬೆಲೆ ಏರಿಕೆ:ಭತ್ತ, ರಾಗಿ, ಜೋಳ, ಎಣ್ಣೆಕಾಳು, ದ್ವಿದಳ ಧಾನ್ಯಗಳ ಉತ್ಪಾದನೆ ಗಣನೀಯವಾಗಿ ಕುಸಿಯಲಿದ್ದು, ಬೆಲೆ ಏರಿಕೆ ತಟ್ಟಲಿದೆ. ಅಕ್ಕಿ, ತೊಗರಿ ಬೆಲೆ ಶೇ.5 ರಿಂದ 10ರಷ್ಟು ಏರಿಕೆಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ಕುಡಿಯುವ ನೀರಿನ ಸಮಸ್ಯೆ:ರಾಜ್ಯದ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರು ಹತ್ತು ವರ್ಷಗಳಲ್ಲಿಯೇ ಕಡಿಮೆ. ಲಿಂಗನಮಕ್ಕಿ, ಸೂಪ, ವಾರಾಹಿ, ಹೇಮಾವತಿ, ಕೆಆರ್​ಎಸ್, ಕಬಿನಿ, ಭದ್ರಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ಕನಿಷ್ಠ ಒಂದು ಅಡಿಯಿಂದ 5 ಅಡಿಯ ತನಕ ಕಡಿಮೆ ನೀರಿದೆ. ಈ ನೀರು ಡಿಸೆಂಬರ್​ವರೆಗೆ ಸಾಕಾಗಬಹುದು. ಆ ನಂತರ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ. ನೀರಿನ ಕೊರತೆ ವಿದ್ಯುತ್ ಉತ್ಪಾದನೆಯ ಮೇಲೂ ಪರಿಣಾಮ ಬೀರಲಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 3,673 ಕೆರೆಗಳ ಪೈಕಿ ಶೇ.30ರಷ್ಟು ಕೆರೆಗಳಲ್ಲಿ ಮಾತ್ರ ಶೇ.50 ರಷ್ಟು ನೀರಿದೆ. ಶೇ.9 ರಷ್ಟು ಕೆರೆಗಳು ಪೂರ್ಣ ಒಣಗಿವೆ. ಶೇ.61 ರಷ್ಟು ಕೆರೆಗಳಲ್ಲಿ ಶೇ.30 ರಿಂದ 50 ರಷ್ಟು ನೀರಿದೆ. ಜತೆಗೆ, ತಾಪಮಾನ ಹೆಚ್ಚಿದಂತೆ ನೀರು ಆವಿಯಾಗುತ್ತದೆ.
ಮಳೆಯ ನಿರೀಕ್ಷೆ:ಸೆಪ್ಟಂಬರ್ ಮೊದಲ ವಾರದಲ್ಲಿ ಉತ್ತಮ ಮಳೆ ಬರಬಹುದೆಂಬ ನಿರೀಕ್ಷೆಯಲ್ಲಿ ಸರ್ಕಾರ ಇದೆ. ಹವಾಮಾನ ಇಲಾಖೆಯಿಂದ ಸ್ಪಷ್ಟ ಭರವಸೆಯೇನೂ ಇಲ್ಲ. ಮಳೆಯಾದರೆ ಮತ್ತೆ ಬಿತ್ತನೆಗೆ ಬೀಜ ಹಾಗೂ ರಸಗೊಬ್ಬರ ನೀಡಲು ಸಿದ್ಧತೆ ಮಾಡಿಕೊಂಡಿದೆ.
ಬಿತ್ತನೆ ಸಾಧನೆ:ಬೀದರ್, ದಕ್ಷಿಣ ಕನ್ನಡ, ಹಾವೇರಿ ಜಿಲ್ಲೆಗಳಲ್ಲಿ ಶೇ.100 ರಷ್ಟು ಬಿತ್ತನೆಯಾಗಿತ್ತು. ರಾಮನಗರದಲ್ಲಿ ಶೇ.48, ಕೋಲಾರ ಶೇ.29, ಮಂಡ್ಯದಲ್ಲಿ ಶೇ.27 ರಷ್ಟು ಬಿತ್ತನೆಯಾಗಿದ್ದು ಕಡಿಮೆ ಬಿತ್ತನೆಯಾದ ಜಿಲ್ಲೆಗಳಾಗಿವೆ.
ಕೇಂದ್ರದ ಕಡೆ ಚಿತ್ತ:ಬರ ಘೋಷಣೆಗೆ ಇರುವ ನಿಯಮಗಳ ಬದಲಾವಣೆ ಮಾಡಬೇಕೆಂದು ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಪ್ರಮುಖವಾಗಿ ಮೂರು ವಾರಗಳ ಕಾಲ ಒಣ ಹವೆ ಇರಬೇಕು ಎಂಬುದನ್ನು ತೆಗೆಯಬೇಕು. ಇಲ್ಲದಿದ್ದಲ್ಲಿ ಪರಿಹಾರ ನೀಡಲು ಸಾಧ್ಯವಾಗುವುದಿಲ್ಲ. ಸರ್ಕಾರ ಪ್ರಕೃತಿ ವಿಕೋಪ ನಿಯಂತ್ರಣ ಸಚಿವ ಸಂಪುಟ ಉಪ ಸಮಿತಿ ಸಭೆಯ ನಂತರ ಕೇಂದ್ರಕ್ಕೆ ಮನವಿ ಅರ್ಪಿಸಲು ಸದ್ಧತೆ ಮಾಡಿಕೊಳ್ಳುತ್ತಿದೆ. ಕೇಂದ್ರದಿಂದ ಎನ್​ಡಿಆರ್​ಎಫ್​ನಲ್ಲಿ ನೆರವಿನ ನಿರೀಕ್ಷೆ ಮಾಡುತ್ತಿದೆ. ನಿಯಮಗಳ ಪ್ರಕಾರ ಪರಿಹಾರ ನೀಡಬೇಕಾಗಿದೆ. ಪರಿಹಾರಕ್ಕೆ ಸಾವಿರಾರು ಕೋಟಿ ರೂ.ಗಳ ಅಗತ್ಯವಿದೆ. ರಾಜ್ಯದಿಂದ ಮನವಿ ಹೋದ ನಂತರ ತಂಡ ಬಂದು ಅಧ್ಯಯನ ಮಾಡಬೇಕಾಗುತ್ತದೆ. ಆ ತಂಡ ನೀಡುವ ವರದಿ ಆಧರಿಸಿ ಕೇಂದ್ರ ನಿರ್ಧಾರ ಕೈಗೊಳ್ಳಲಿದೆ.
ಆದಿತ್ಯ ಎಲ್​-1 ಮಿಷನ್​: ಇಸ್ರೋದಿಂದ ತಿರುಪತಿಯಲ್ಲಿ ಮತ್ತೆ ಪೂಜೆ

‘ದಿಗ್ವಿಜಯ ನ್ಯೂಸ್’ ಇನ್ನು ‘ರಿಪಬ್ಲಿಕ್ ಕನ್ನಡ’; ರಾಷ್ಟ್ರೀಯತೆ ನಮ್ಮ ವಿಚಾರಧಾರೆ ಎಂದ ಅರ್ನಬ್ ಗೋಸ್ವಾಮಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 3 =
Remember me
