| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಇಡೀ ವಿಶ್ವವನ್ನು ನಡುಗಿಸಿರುವ ಕರೊನಾದಿಂದಾಗಿ ಕುಸಿದಿರುವ ಆರ್ಥಿಕತೆ ಚೇತರಿಸಿಕೊಳ್ಳುವುದು ಯಾವಾಗ? ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್​ಡೌನ್ ಸಡಿಲ ಮಾಡಿ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಇಂಥದ್ದೊಂದು ಯಕ್ಷಪ್ರಶ್ನೆ ಕಾಡಲಾರಂಭಿಸಿದೆ.
ಕೃಷಿ, ಕೈಗಾರಿಕೆ, ಸೇವಾ ವಲಯದ ಬೆಳವಣಿಗೆ, ವಾಣಿಜ್ಯ ಚಟುವಟಿಕೆಗಳ ಪರಿಸ್ಥಿತಿ ಗಮನಿಸಿದಾಗ ಆರ್ಥಿಕ ಸ್ಥಿತಿಯ ಚೇತರಿಕೆಗೆ ಎರಡರಿಂದ ಮೂರು ತಿಂಗಳಾದರೂ ಬೇಕಾಗಬಹುದೆಂದು ವಿವಿಧ ಕ್ಷೇತ್ರದ ಗಣ್ಯರು ಅಭಿಪ್ರಾಯಪಡುತ್ತಾರೆ. ಸರ್ಕಾರ ಅನುಮತಿ ನೀಡಿದ್ದರೂ ವಾಣಿಜ್ಯ ಚಟುವಟಿಕೆಗಳ ಆರಂಭಕ್ಕೆ ಎದುರಾಗಿರುವ ಅಡ್ಡಿ-ಆತಂಕ ಉದ್ದಿಮೆದಾರರ ಚಿಂತೆ ಹೆಚ್ಚಿಸಿದೆ. ಆದ್ದರಿಂದಲೇ ಎಷ್ಟು ಉದ್ದಿಮೆಗಳು ಉಳಿಯಲಿವೆ, ಅಳಿಯಲಿವೆ? ನಿರುದ್ಯೋಗ ಎಷ್ಟು ಪ್ರಮಾಣದಲ್ಲಿ ಹೆಚ್ಚಾಗಲಿದೆ? ಸರ್ಕಾರದ ತೆರಿಗೆ ವಸೂಲಿ ಮೇಲೆ ಎಷ್ಟರ ಮಟ್ಟಿನ ಪರಿಣಾಮ ಬೀರಲಿದೆ ಎಂಬುದನ್ನು ಅಂದಾಜು ಮಾಡಲಾಗದ ಸ್ಥಿತಿ ಎದುರಾಗಿದೆ.
ಕಾಲಾವಕಾಶ ಏಕೆ ಬೇಕು?
ಬೊಕ್ಕಸಕ್ಕೆ ತೆರಿಗೆ ತುಂಬುವ ಒಂದೊಂದು ವಲಯದಲ್ಲೂ ಒಂದೊಂದು ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳದ ಹೊರತು ಚಟುವಟಿಕೆಗಳು ಬಿರುಸಾಗಲು ಸಾಧ್ಯವಿಲ್ಲ.
ಕೃಷಿ ಉತ್ಪನ್ನ ಮಾರುಕಟ್ಟೆಗಳ ಚೇತರಿಕೆಗೆ ಕಾಲಾವಕಾಶ ಬೇಕು. ಅನೇಕ ಸಣ್ಣ ಸಣ್ಣ ಟ್ರೇಡರ್​ಗಳು ಉಳಿಯುವುದು ಕಷ್ಟ ಎಂಬ ಪರಿಸ್ಥಿತಿ ಇದೆ.
| ರಮೇಶಚಂದ್ರ ಲಹೋಠಿಅಧ್ಯಕ್ಷರು, ಎಪಿಎಂಸಿ ಸಮಿತಿ
ಜಿಎಸ್​ಡಿಪಿಗೆ ಕೊಡುಗೆ
1.ಕೃಷಿ ಮಾರುಕಟ್ಟೆ ವಹಿವಾಟಿಲ್ಲ:ಕೃಷಿ ಮಾರುಕಟ್ಟೆಯಲ್ಲಿ ಶೇ.40 ವಹಿವಾಟು ನಡೆಯುತ್ತಿದೆ. ಮಿಲ್ಲಿಂಗ್ ಚಟುವಟಿಕೆ ಸಂಪೂರ್ಣ ನಿಂತುಹೋಗಿವೆ. ಸರಕು ಸಾಗಣೆಗೆ ಚೆಕ್​ಪೋಸ್ಟ್​ಗಳಿಂದ ಅಡ್ಡಿ ಇದೆ. ಹೋಟೆಲ್ ಮತ್ತು ರೆಸ್ಟೋರೆಂಟ್​ಗಳು ಮತ್ತೆ ಆರಂಭವಾಗಬೇಕಾಗಿದೆ. ಸಭೆ, ಸಮಾರಂಭ, ಕ್ಯಾಟರಿಂಗ್, ಮೆಸ್​ಗಳು ನಡೆಯುವಂತಾಗಬೇಕು. ಆಗ ಮಾರುಕಟ್ಟೆಯಲ್ಲಿ ಹೆಚ್ಚಿನ ವಹಿವಾಟು ನಡೆಯಲು ಸಾಧ್ಯವಾಗುತ್ತದೆ. ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯೊಂದರಲ್ಲೇ ದಿನಕ್ಕೆ 10 ಕೋಟಿ ರೂ.ಗಳಿಗೂ ಹೆಚ್ಚಿನ ವಹಿವಾಟು ನಡೆಯುತ್ತದೆ. ರಾಜ್ಯದಲ್ಲಿ ನಿತ್ಯ ನಡೆಯುವ ವಹಿವಾಟಿನ ಶೇ. 50 ಬೆಂಗಳೂರಿನಲ್ಲಿರುತ್ತದೆ. ಕಾರ್ವಿುಕರನ್ನು ಕೆಲಸಕ್ಕೆ ಕರೆಯುವುದಕ್ಕೂ ಭಯ ಪಡಬೇಕಾದ ವಾತಾವರಣ ಇದೆ. ಕರೊನಾ ಕಾಟ ಮುಗಿದ ನಂತರ ಎಷ್ಟು ಜನ ವ್ಯಾಪಾರಸ್ಥರು ಉಳಿಯುತ್ತಾರೋ, ಎಷ್ಟು ಜನ ತಮ್ಮ ವಹಿವಾಟು ಮುಚ್ಚಿ ಕೊಳ್ಳುತ್ತಾರೋ ಎಂಬ ಆತಂಕ ಅಲ್ಲಿನ ವ್ಯಾಪಾರಿಗಳಲ್ಲಿ ಇದೆ.
2.ಕೈಗಾರಿಕೆಗಳ ಸಮಸ್ಯೆ:ರಾಜ್ಯದಲ್ಲಿ 8.5 ಲಕ್ಷ ಎಂಎಸ್​ಎಂಇಗಳಿವೆ. ಅವುಗಳಲ್ಲಿ 25 ಲಕ್ಷ ಕಾರ್ವಿುಕರು ದುಡಿಯುತ್ತಿದ್ದಾರೆ. 4 ಸಾವಿರ ದೊಡ್ಡ ಕೈಗಾರಿಕೆಗಳಿದ್ದು, ಇವುಗಳಲ್ಲಿ ದುಡಿಯುವವರೆಲ್ಲ ವಲಸೆ ಕಾರ್ವಿುಕರು. ಬಹುತೇಕರು ತಮ್ಮ ಊರಿಗೆ ವಾಪಸ್ ಹೋಗಿದ್ದಾರೆ. ಅವರೆಲ್ಲ ವಾಪಸ್ ಬರದಿದ್ದರೆ ಸಮಸ್ಯೆ ದೊಡ್ಡದಾಗುತ್ತದೆ. ಕಚ್ಚಾ ಪದಾರ್ಥ, ದುಡಿಯುವ ಬಂಡವಾಳ ಹೀಗೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಬ್ಯಾಂಕ್​ಗಳು ಉದ್ದಿಮೆಗಳ ನೆರವಿಗೆ ಬರುತ್ತಿಲ್ಲ. ಯಾವುದೇ ವಸ್ತು ಉತ್ಪಾದಿಸಿದರೂ ಗ್ರಾಹಕರು ಯಾರೆಂಬ ಪ್ರಶ್ನೆ ಸಹ ಎದುರಾಗಿದೆ. ಸಣ್ಣ ಕೈಗಾರಿಕೆಗಳೆಲ್ಲ ಹೆಚ್ಚಾಗಿ ಅವಲಂಬಿಸಿರುವುದು ದೊಡ್ಡ ಉದ್ದಿಮೆಗಳನ್ನು. ಸರ್ಕಾರ ಅನುಮತಿ ಕೊಟ್ಟ ಕೂಡಲೇ ಮಿಷಿನರಿಗಳನ್ನು ಸಜ್ಜುಗೊಳಿಸುವ ಕಡೆ ಮಾಲೀಕರು ದೃಷ್ಟಿ ನೆಟ್ಟಿದ್ದಾರೆ. ಕನಿಷ್ಠ ಇನ್ನೂ 20 ದಿನ ಕೈಗಾರಿಕೆಗಳಲ್ಲಿ ಯಂತ್ರೋಪಕರಣಗಳನ್ನು ಆರಂಭಿಸಲು ಸಾಧ್ಯವಿಲ್ಲ.
ಇದನ್ನೂ ಓದಿ:‘ನನ್ನನ್ನು ಟೀಕಿಸಿದರೂ ಸರಿ…ನಾನು ಆ ಕೆಲಸ ಮಾಡುವುದಿಲ್ಲ’: ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ
3.ಸೇವಾ ವಲಯ ಚೇತರಿಸಬೇಕು:ರಾಜ್ಯದ ಜಿಡಿಪಿಗೆ ಶೇ. 8 ರಿಂದ 9 ಕೊಡುಗೆ ನೀಡುವ ಸೇವಾ ವಲಯದಲ್ಲಿ ಏನೂ ಕೆಲಸ ನಡೆಯುತ್ತಿಲ್ಲ. ಐಟಿ-ಬಿಟಿ ಕ್ಷೇತ್ರದಲ್ಲಿ ಶೇ. 33 ಉದ್ಯೋಗಿಗಳನ್ನು ಇಟ್ಟು ಕೆಲಸ ನಡೆದರೂ ವಿದೇಶಗಳ ಗ್ರಾಹಕರಿಲ್ಲದೆ ಸೊರಗುತ್ತಿದೆ. ಉಳಿದ ಸೇವಾ ಕ್ಷೇತ್ರಗಳಲ್ಲಿ ಯಾವುದೇ ತೆರಿಗೆ ನಿರೀಕ್ಷೆ ಮಾಡುವಂತಿಲ್ಲ.
4.ಕೃಷಿ ಉತ್ಪನ್ನ ರಫ್ತಿಲ್ಲ:ವಾಹನಗಳ ಸಮಸ್ಯೆಯಿಂದಾಗಿ ಹಣ್ಣು-ತರಕಾರಿ ನೆರೆರಾಜ್ಯಗಳಿಗೆ ರಫ್ತಾಗುತ್ತಿಲ್ಲ. ವಿದೇಶಗಳಿಗೂ ರಫ್ತು ನಿಂತಿದೆ. ರಾಜ್ಯದಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಖರ್ಚಾಗುತ್ತಿದೆ. ಪ್ರತಿ ವರ್ಷ ಸರಾಸರಿ 11 ಸಾವಿರ ಕೋಟಿ ರೂ. ಕೃಷಿ ಉತ್ಪನ್ನಗಳು ಬೇರೆ ಬೇರೆ ರಾಜ್ಯಗಳೇ ಅಲ್ಲದೆ ಸಿಂಗಾಪುರ, ಚೀನಾ, ಅಮೆರಿಕ, ಬಾಂಗ್ಲಾದೇಶ, ಇಂಡೋನೇಷ್ಯಾ, ಜಪಾನ್, ಬೆಲ್ಜಿಯಂ ಸೇರಿ ಅನೇಕ ರಾಷ್ಟ್ರಗಳಿಗೆ ರಫ್ತಾಗುತ್ತವೆ. ಆದರೆ ಈಗ ಆ ದೇಶಗಳೆಲ್ಲ ಕರೊನಾಪೀಡಿತವಾಗಿದ್ದು, ಚೇತರಿಕೆಗೆ ಎಷ್ಟು ಸಮಯ ತೆಗೆದುಕೊಳ್ಳುವುದೋ ಗೊತ್ತಿಲ್ಲ.
5. ಸಾರಿಗೆ ಕ್ಷೇತ್ರದಲ್ಲಿ ಸಮಸ್ಯೆ ನೂರಾರು:ಸಾವಿರಾರು ವಾಹನಗಳು ಒಂದೂವರೆ ತಿಂಗಳಿನಿಂದ ಮೂಲೆ ಸೇರಿವೆ. ಸಾರಿಗೆ ಸಂಸ್ಥೆಯೊಂದಕ್ಕೇ ಸರಿಸುಮಾರು 1000 ಕೋಟಿ ರೂ.ಗೂ ಅಧಿಕ ನಷ್ಟವಾಗಿದೆ. ಕರೊನಾ ಸಂಕಷ್ಟ ಮುಗಿದರೂ ಸಾರಿಗೆ ಆರಂಭ ಕಷ್ಟವೆಂದೇ ಹೇಳಲಾಗುತ್ತಿದೆ. ದೈಹಿಕ ಅಂತರ ಕಾಯ್ದುಕೊಳ್ಳಬೇಕೆಂಬ ಷರತ್ತು ಇರುತ್ತದೆ. ಹೊಸ ವಾಹನಗಳ ನೋಂದಣಿ ತಕ್ಷಣಕ್ಕೆ ಆರಂಭವಾಗುವ ಸಾಧ್ಯತೆಗಳಿಲ್ಲ. ಆದ್ದರಿಂದ ತೆರಿಗೆ ವಸೂಲಿ ಮೇಲೆ ಪರಿಣಾಮ ಬೀರಲಿದೆ.
6. ಕೇವಲ 2000 ಕೋಟಿ ರೂ. ತೆರಿಗೆ:ಏಪ್ರಿಲ್​ನಲ್ಲಿ ಸರ್ಕಾರಕ್ಕೆ ಬಂದಿರುವ ತೆರಿಗೆ ಕೇವಲ 2000 ಕೋಟಿ ರೂ. ಅದೂ ಪೆಟ್ರೋಲ್ ಮತ್ತು ಡೀಸೆಲ್​ನಿಂದ ಮಾತ್ರ.
ಸರ್ಕಾರ ಉದ್ದಿಮೆದಾರರ ನೆರವಿಗೆ ಬರದಿದ್ದಲ್ಲಿ ಉದ್ದಿಮೆಗಳ ಆರಂಭ ಸಾಧ್ಯವೇ ಇಲ್ಲ. ಎಷ್ಟೋ ಸಣ್ಣ ಕೈಗಾರಿಕೆಗಳು ಮುಚ್ಚಿ ಹೋಗುತ್ತವೆ. ಉತ್ತರ ಪ್ರದೇಶ ಹಾಗೂ ಇತರ ರಾಜ್ಯಗಳ ರೀತಿಯಲ್ಲಿ ಕಾರ್ವಿುಕರ ಕಾನೂನನ್ನು ಮೂರು ವರ್ಷ ತಡೆಹಿಡಿಯಬೇಕು.
| ಜೆ. ಕ್ರಾಸ್ಟರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು, ಫಿಕ್ಕಿ
ಕಾರ್ವಿುಕರ ಸಮಸ್ಯೆ ಬಿಗಡಾಯಿಸಿದೆ. ರಿಯಲ್ ಎಸ್ಟೇಟ್ ಚೇತರಿಕೆ ಕಷ್ಟವಾಗಿದೆ. ಉದ್ದಿಮೆಗಳಲ್ಲಿ ಕೆಲಸ ಆರಂಭವಾಗಲು ಸಾಕಷ್ಟು ಕಾಲ ಹಿಡಿಯುತ್ತದೆ. ಆರ್ಥಿಕ ಚೇತರಿಕೆಗೆ ಎರಡರಿಂದ ಮೂರು ತಿಂಗಳಾದರೂ ಬೇಕಾಗುತ್ತದೆ.
| ಬಿ.ಟಿ. ಮನೋಹರ್ತೆರಿಗೆ ಸಲಹೆಗಾರರ
ಕೃಷಿ ಉತ್ಪನ್ನ ನೆರೆ ರಾಜ್ಯಗಳಿಗೆ ರಫ್ತಾಗುತ್ತಿಲ್ಲ. ಇದರಿಂದ ರೈತರಿಗೆ ಬೆಲೆ ಸಿಗುತ್ತಿಲ್ಲ. ಈ ಎಲ್ಲ ಚಟುವಟಿಕೆಗಳು ಆರಂಭವಾದರಷ್ಟೇ ಅನುಕೂಲ.
| ಜೆ.ಸಿ. ಬಯ್ಯಾರೆಡ್ಡಿಅಧ್ಯಕ್ಷ, ಪ್ರಾಂತ ರೈತ ಸಂಘ
ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಬಿಜೆಪಿ ಶಾಸಕರಿಂದಲೇ ವಿರೋಧ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + twenty =
Remember me
