| ದೇವರಾಜ್ ಕನಕಪುರ ಬೆಂಗಳೂರು
ರಾಜ್ಯ ಸರ್ಕಾರಕ್ಕೆ ಹೊಸ ವಿಶ್ವವಿದ್ಯಾಲಯಗಳನ್ನು ಘೋಷಣೆ ಮಾಡುವಾಗ ಇರುವ ಆಸಕ್ತಿ ಅನುದಾನ ನೀಡುವ ವಿಚಾರದಲ್ಲಿ ಇಲ್ಲದ ಕಾರಣ ವಿಶ್ವವಿದ್ಯಾಲಯಗಳ ಕಾರ್ಯಚಟುವಟಿಕೆ ಕುಂಠಿತವಾಗಿದೆ.
ಸಾಂಪ್ರದಾಯಿಕ ವಿವಿಗಳ ಜತೆಗೆ, ವಿಭಿನ್ನ ಕ್ಷೇತ್ರಗಳ ಅಭಿವೃದ್ಧಿಗೆಂದು ರಾಜ್ಯ ಸರ್ಕಾರ ಆಗಿಂದಾಗ್ಗೆ ಘೋಷಣೆ ಮಾಡಿರುವ ವಿಶೇಷ ವಿಶ್ವವಿದ್ಯಾಲಯಗಳು ಸಂಪೂರ್ಣ ಅವಗಣನೆಗೆ ಒಳಗಾಗಿವೆ. ಬಹುತೇಕ ವಿವಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿರುವ ನೌಕರರಿಗೆ ವೇತನ ನೀಡಲೂ ಅನುದಾನ ಇಲ್ಲದ ಕಾರಣ ಆರೇಳು ತಿಂಗಳಿಂದ ಸಂಬಳ ಸ್ಥಗಿತಗೊಂಡಿದೆ. ಅಭಿವೃದ್ಧಿ ಚಟುವಟಿಕೆಗಳನ್ನು ಕೇಳುವಂತೆಯೇ ಇಲ್ಲ. ಹಂಪಿ ಕನ್ನಡ ವಿವಿ, ಜನಪದ ವಿವಿ, ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿವಿ, ಸಂಸ್ಕೃತ ವಿವಿ, ಲಲಿತಕಲೆ ವಿವಿ, ಚೆನ್ನಮ್ಮ ವಿವಿಗಳು ಅತಂತ್ರ ಸ್ಥಿತಿಯಲ್ಲಿವೆ.
ಕನ್ನಡ ವಿವಿಯಲ್ಲಿ ವೇತನಕ್ಕೂ ಹಣವಿಲ್ಲ:ಸಂಶೋಧನಾ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯದಲ್ಲಿ 260 ಕಾಯಂ ನೌಕರರು ಮತ್ತು 160 ಹೊರಗುತ್ತಿಗೆ ನೌಕರರಿದ್ದಾರೆ. ಕಾಯಂ ನೌಕರರಿಗೆ ಎಚ್​ಆರ್​ಎಂಎಸ್​ನಿಂದ ನೇರವಾಗಿ ವೇತನ ಬಿಡುಗಡೆಯಾಗುತ್ತಿದ್ದು, ಹೊರಗುತ್ತಿಗೆ ನೌಕರರಿಗೆ ವಿವಿಯಿಂದ ಅನುದಾನ ನೀಡಬೇಕಿದೆ. ಆದರೆ ಹಣದ ಕೊರತೆಯಿಂದ 10 ತಿಂಗಳಿಂದ ವೇತನ ನೀಡಿಲ್ಲ. ಮೊದಲಿಗೆ 5ರಿಂದ 25 ಕೋಟಿ ರೂ. ವರೆಗೆ ಅಭಿವೃದ್ಧಿ ಅನುದಾನ ನೀಡಿರುವ ವಿಶ್ವವಿದ್ಯಾಲಯಕ್ಕೆ ಕಳೆದ ಬಾರಿ ಸರ್ಕಾರ ಕೇವಲ 50 ಲಕ್ಷ ರೂ. ನೀಡಿ ಕೈ ತೊಳೆದುಕೊಂಡಿದೆ. ಇದರಿಂದ ಸಂಶೋಧನೆ ಕುಂಠಿತವಾಗಿದೆ. ಮಾರ್ಚ್ ಅಂತ್ಯದವರೆಗೆ ವೇತನ ನೀಡಲು ಕನಿಷ್ಠ 6 ಕೋಟಿ ರೂ. ಬೇಕಿದೆ. ಸರ್ಕಾರಕ್ಕೆ ಹಲವು ಬಾರಿ ಪ್ರಸ್ತಾವನೆ ಸಲ್ಲಿಸಿದ್ದು, ಅನುದಾನಕ್ಕಾಗಿ ವಿವಿಯು ಸರ್ಕಾರದ ಕಡೆ ಮುಖ ಮಾಡಿ ಕಾದು ಕುಳಿತಿದೆ.
ಸಂಸ್ಕೃತ ವಿವಿ ಸ್ಥಿತಿ ಚಿಂತಾಜನಕ
ಬೆಂಗಳೂರಿನಲ್ಲಿರುವ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಯಾಗಿ 10 ವರ್ಷವಾಗಿದೆ. ದಶಕ ಕಳೆದರೂ ಇಲ್ಲಿ ವಿದ್ಯುತ್ ಬಿಲ್, ನೀರಿನ ಬಿಲ್, ಕಟ್ಟಡದ ಬಾಡಿಗೆ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ವಣವಾಗಿದೆ. ವಿದ್ಯಾರ್ಥಿಗಳಿಂದ ಸಂಗ್ರಹವಾಗುವ ಹಣ ವಿದ್ಯಾರ್ಥಿಗಳ ಅಂಕಪಟ್ಟಿ ಮುದ್ರಿಸುವುದಕ್ಕೂ ಸಾಕಾಗದೇ ಸರ್ಕಾರದ ಅನುದಾನಕ್ಕಾಗಿ ಕಾಯುವಂತಾಗಿದೆ.
ಚೆನ್ನಮ್ಮ ವಿವಿಗೆ ಅನುದಾನವಿಲ್ಲ
ಬೆಳಗಾವಿಯಲ್ಲಿರುವ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಇಷ್ಟು ವರ್ಷ ವಿಶ್ವವಿದ್ಯಾಲಯ ವಿಸ್ತರಣೆಗೆ ಸ್ಥಳದ ಕೊರತೆ ಇತ್ತು. ಇದೀಗ ಸರ್ಕಾರದಿಂದ ಸ್ಥಳ ಮಂಜೂರು ಮಾಡಿಸಿಕೊಂಡಿದ್ದೇವೆ. ಆದರೆ, ಕಟ್ಟಡ ನಿರ್ವಣಕ್ಕೆ ಅನುದಾನ ಇಲ್ಲ. 600 ಕೋಟಿ ರೂ. ನೀಡಿದರೆ ವಿಶ್ವವಿದ್ಯಾಲಯವನ್ನು ಒಂದು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದಾಗಿದೆ ಅನ್ನುತ್ತಾರೆ ಅಲ್ಲಿನ ಕುಲಪತಿ ಡಾ. ರಾಮಚಂದ್ರಗೌಡ.
ಜನ ಇಲ್ಲದ ಜನಪದ ವಿವಿ
ಜನಪದ ವಿಶ್ವವಿದ್ಯಾಲಯದಲ್ಲಿ ಕುಲಪತಿ, ಕುಲಸಚಿವ ಹಾಗೂ ವಿತ್ತಾಧಿಕಾರಿ ಹೊರತಾಗಿ ಉಳಿದ ಬೆರಳೆಣಿಕೆಯಷ್ಟು ಸಿಬ್ಬಂದಿ ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 13 ವಿಭಾಗಗಳಿವೆ. ಕಳೆದ ಮೂರು ತಿಂಗಳಿನಿಂದ ವೇತನ ನೀಡಿಲ್ಲ. ಕಳೆದ ಬಾರಿ ಅಭಿವೃದ್ಧಿ ಅನುದಾನವೆಂದು 50 ಲಕ್ಷ ರೂ. ಬಿಡುಗಡೆಯಾಗಿತ್ತು. ಹೊಸ ಕಟ್ಟಡ ನಿರ್ಮಾಣ ಸೇರಿ ವಿವಿಧ ಯೋಜನೆಗಳಿಗೆ 20 ಕೋಟಿ ರೂ. ಅನುದಾನ ಕೇಳಿದ್ದೇವೆ ಎನ್ನುತ್ತಾರೆ ಅಲ್ಲಿನ ಅಧಿಕಾರಿಗಳು.
ಸಂಗೀತ ವಿವಿ ಕೇಳುವವರಿಲ್ಲ
ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಲ್ಲಿ ಕುಲಪತಿ ಮತ್ತು ವಿತ್ತಾಧಿಕಾರಿ ಮಾತ್ರವೇ ಕಾಯಂ ನೌಕರರಾಗಿದ್ದಾರೆ. 71 ನೌಕರರು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಯುಜಿಸಿ 12(ಬಿ) ಪಡೆಯಲು ಇಂತಿಷ್ಟು ಕಾಯಂ ಸಿಬ್ಬಂದಿ ಮತ್ತು ಮೂಲಭೂತ ಸೌಕರ್ಯ ಇರಬೇಕೆಂದು ನಿಯಮ ಇದೆ. ಆದರೆ, ನಮ್ಮಲ್ಲಿ ಇದ್ಯಾವುದು ಇಲ್ಲದೆಯೇ 12(ಬಿ)ಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಸ್ಥಿತಿ ಶೋಚನೀಯವಾಗಿದೆ ಎನ್ನುತ್ತಾರೆ ಅಲ್ಲಿನ ಕುಲಪತಿ ಡಾ. ನಾಗೇಶ್ ಬೆಟ್ಟಕೋಟೆ.
ಸಾಂಪ್ರದಾಯಿಕ ವಿವಿಗಳು ಓಕೆ
ರಾಜ್ಯದಲ್ಲಿ ಕೃಷಿ, ಸಾಹಿತ್ಯ, ತೋಟಗಾರಿಕೆ, ಗ್ರಾಮೀಣ, ಕಾನೂನು, ತಂತ್ರಜ್ಞಾನ ಸೇರಿ ಸರ್ಕಾರದ ಸ್ವಾಮ್ಯದಲ್ಲಿ 29 ವಿಶ್ವವಿದ್ಯಾಲಯಗಳಿವೆ. ಸಾಂಪ್ರದಾಯಿಕ ವಿವಿಗಳು ತಮ್ಮ ವ್ಯಾಪ್ತಿಯಲ್ಲಿರುವ ಕಾಲೇಜುಗಳ ಸಂಯೋಜನಾ ಶುಲ್ಕ ಸೇರಿ ಆರ್ಥಿಕ ಸಂಪನ್ಮೂಲಗಳನ್ನು ಸೃಷ್ಟಿಸಿಕೊಂಡು, ಬರುವ ಆದಾಯದಲ್ಲಿ ವಿಶ್ವವಿದ್ಯಾಲಯಗಳನ್ನು ನಡೆಸಿಕೊಂಡು ಹೋಗುತ್ತಿವೆ. ಆದರೆ, ಕಳೆದ ಐದಾರು ವರ್ಷಗಳ ಹಿಂದೆ ಆರಂಭವಾದ ವಿಶೇಷ ವಿಶ್ವವಿದ್ಯಾಲಯಗಳು ಅಭಿವೃದ್ಧಿ ಅನುದಾನ ಇಲ್ಲದೆ ಸಂಕಷ್ಟದಲ್ಲಿವೆ. ಈ ಬಾರಿ ಬಜೆಟ್​ನಲ್ಲಿಯಾದರೂ ಅನುದಾನ ಘೋಷಣೆಯಾಗಬಹುದು ಎಂಬ ನಿರೀಕ್ಷೆಯಲ್ಲಿವೆ.
ಲಲಿತಕಲೆ ವಿವಿ ಎಲ್ಲಿದೆ?
ಲಲಿತಕಲೆಗೇ ಒಂದು ವಿವಿ ಇರಬೇಕೆಂಬ ಉದ್ದೇಶದಿಂದ ಸ್ಥಾಪನೆಯಾದ ಲಲಿತಕಲಾ ವಿಶ್ವವಿದ್ಯಾಲಯವು ಈಗ ಯಾವ ಸ್ಥಳದಲ್ಲಿದೆ ಎಂಬುದೇ ಕಲಾವಿದರಿಗೆ ತಿಳಿದಿಲ್ಲ. 2011-12ರಲ್ಲಿ ಸ್ಥಾಪನೆಯಾದ ವಿವಿಗೆ ವಿಶೇಷಾಧಿಕಾರಿಯನ್ನು ನೇಮಿಸಿ ಬೆಂಗಳೂರಿನ ಕೊಳಚೆ ನಿಮೂಲನ ಮಂಡಳಿ ಕಟ್ಟಡದಲ್ಲಿ ಕಚೇರಿ ನೀಡಲಾಗಿತ್ತು. ಅನೇಕ ವರ್ಷ ಇದೇ ಸ್ಥಿತಿಯಲ್ಲಿದ್ದ ವಿವಿಗೆ ಬಾಗಲಕೋಟೆಯ ಖಾಡ್ಯ ಗ್ರಾಮದ ಬಳಿ 420 ಎಕರೆ ಭೂಮಿ ಗುರುತು ಮಾಡಿದ್ದು ಬಿಟ್ಟರೆ ಇಲ್ಲಿವರೆಗೆ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಅಸಲಿಗೆ ಈ ವಿವಿ ಕಾರ್ಯ ಆರಂಭಿಸುತ್ತದೆಯೋ ಇಲ್ಲವೋ ಎಂಬ ಬಗ್ಗೆಯೇ ಕಲಾವಿದರಲ್ಲಿ ಅನುಮಾನವಿದೆ.
ಉನ್ನತ ಶಿಕ್ಷಣದ ಬಜೆಟ್ ಹೇಗಿದೆ?
ವಿಶ್ವವಿದ್ಯಾಲಯ ಅನುದಾನ ಮತ್ತು ಅಭಿವೃದ್ಧಿಗಾಗಿ 2020-21ರಲ್ಲಿ 4,687 ಕೋಟಿ ರೂ. ಅನುದಾನ ಸಿಕ್ಕಿತ್ತು. ಇದರಲ್ಲಿ 3,998 ಕೋಟಿ ರೂ.(ಶೇ.88) ವೇತನಕ್ಕೆ ಹೋಗಿದೆ. ಉಳಿದ ಶೇ.12 ಅಂದರೆ 595 ಕೋಟಿ ರೂ.ಗಳಲ್ಲಿ ವಿವಿಯ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಿಲ್ಲ. ಎಲ್ಲ ಯೋಜನೆಗಳು ನನೆಗುದಿಗೆ ಬಿದ್ದಿದೆ. ಒಟ್ಟಾರೆ ಬಜೆಟ್​ನಲ್ಲಿ ಶೇ.3.5 ಅನುದಾನವನ್ನು ಉನ್ನತ ಶಿಕ್ಷಣಕ್ಕೆ ನೀಡಬೇಕೆಂಬ ಬೇಡಿಕೆ ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + eight =
Remember me
