ರೈತ ಕುಟುಂಬದ ಹಿನ್ನೆಲೆಯುಳ್ಳ ಎಸ್. ಶಶಿರೇಖಾ ಜಯರಾಮ್ ಬಡವರ ನೋವು-ನಲಿವುಗಳನ್ನು ಅರಿತು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿರುವವರು. ಪಾಲಿಕೆ ಸದಸ್ಯೆಯಾಗಿ ಸತತ ಎರಡು ಬಾರಿ ಆಯ್ಕೆಯಾಗಿ ಕೋಣನಕುಂಟೆ ವಾರ್ಡ್​ನೆಲ್ಲೆಡೆ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಮದುವೆಯಾಗಿ ಪತಿ ಮನೆಗೆ ಬಂದಾಗ ಚುಂಚಘಟ್ಟದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಕಾಡಿದ್ದ ವೇಳೆ ಅಲ್ಲಿನ ಮಕ್ಕಳಿಗೆ 2 ವರ್ಷ ಪಾಠ ಮಾಡಿದರು. ಸಮಾಜಮುಖಿ ಈ ಅಂತಃಕರಣ ಪಾಲಿಕೆ ಚುನಾವಣೆಗೆ ಸ್ಪರ್ಧಿಸುವಂತೆ ಪ್ರೇರೇಪಿಸಿತು. ಕಾಪೋರೇಟರ್ ಆದನಂತರ ವಾರ್ಡ್​ನೆಲ್ಲೆಡೆ ಇರುವ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಿ ಆ ಶಾಲೆಗಳನ್ನು ವಿದ್ಯಾರ್ಥಿಸ್ನೇಹಿಯಾಗಿ ಅಣಿಗೊಳಿಸಿದ್ದಾರೆ. ಕೋವಿಡ್ ವೇಳೆ ದೊಡ್ಡ ಪ್ರಮಾಣದಲ್ಲಿ ಸೇವೆ ಕೈಗೊಂಡು ಜನಾನುರಾಗಿ ಮಹಿಳಾ ಮುಖಂಡರಾಗಿ ಹೊರಹೊಮ್ಮಿದರು. ಮಹಿಳಾ ಸಬಲೀಕರಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಸ್ಥಳೀಯರಿಂದ ಮುನ್ನಡೆಸಿಕೊಂಡು ಹೋಗುವಲ್ಲಿ ಯಶಸ್ಸು ಕಂಡಿರುವ ಶಶಿರೇಖಾ ಸಾಧನೆಯನ್ನು ಗುರುತಿಸಿ ‘ವಿಜಯವಾಣಿ’ ಪತ್ರಿಕೆ ಪ್ರತಿಷ್ಠಿತ ‘ಬೆಂಗಳೂರು ರತ್ನ’ ಪ್ರಶಸ್ತಿ ಮೂಲಕ ಗೌರವಿಸಿದೆ.
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮದುವೆಯಾಗಿ ಪತಿ ಮನೆಗೆ ಬಂದ ಹೊಸದರಲ್ಲಿ ತಾವಾಯ್ತು ತಮ್ಮ ಮನೆಯಾಯ್ತು ಎಂಬಂತೆ ಇರುವವರೇ ಜಾಸ್ತಿ. ಆದರೆ ಎಸ್. ಶಶಿರೇಖಾ ಜಯರಾಮ್ ಹಾಗಲ್ಲ. ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದಾಗಿ ವಿದ್ಯಾರ್ಥಿಗಳು ಪಾಠ-ಪ್ರವಚನದಿಂದ ವಂಚಿತರಾಗಬಾರದು ಎಂಬ ಆಸ್ಥೆಯಿಂದ ಶಾಲೆಗೆ ತೆರಳಿ ಬೋಧಿಸಲಾರಂಭಿಸಿದರು. ಎರಡು ವರ್ಷ ಪಾಠ ಮಾಡಿದ ಬಳಿಕ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುತ್ತಿದ್ದಂತೆಯೇ ಕೋಣನಕುಂಟೆ ವಾರ್ಡ್​ನಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳ ಮೇಲ್ದರ್ಜೆಗೆ ಸಂಕಲ್ಪ ತೊಟ್ಟು, ಕಾಲಮಿತಿಯಲ್ಲಿ ಅದನ್ನು ಸಾಕಾರಗೊಳಿಸಿದರು. ಶಿಕ್ಷಣದ ಮಹತ್ವವನ್ನು ಸದ್ದಿಲ್ಲದೆ ಸಾರಿದ ಪರಿಣಾಮ, ನಾಗರಿಕರು ಕ್ರಮೇಣ ಶಶಿರೇಖಾ ಬೆನ್ನಿಗೆ ನಿಂತು ಸಮಾಜಸೇವೆ ಕಾರ್ಯದಲ್ಲಿ ಕೈಜೋಡಿಸಿದರು.
ಧೈರ್ಯದಿಂದ ಮುನ್ನುಗ್ಗಿದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಅರಿತುಕೊಂಡ ಶಶಿರೇಖಾ ಜಯರಾಮ್ ವಾರ್ಡ್ ಅನ್ನು ಮಾದರಿಯಾಗಿ ಅಭಿವೃದ್ಧಿಪಡಿಸಬೇಕೆಂಬ ಛಲ ತೊಟ್ಟರು. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡು ಪತಿ ಹಾಗೂ ಪಕ್ಷದ ಮುಖಂಡರ ಬೆಂಬಲದೊಂದಿಗೆ ಒಂದೊಂದಾಗಿ ಕೆಲಸಗಳನ್ನು ಕೈಗೆತ್ತಿಕೊಂಡು ಕಾಲಮಿತಿಯಲ್ಲಿ ಪೂರ್ಣಗೊಳಿಸುತ್ತ ಹೋದರು. ಎಲ್ಲ ಕಾಮಗಾರಿಗಳಲ್ಲೂ ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿ, ಅನುದಾನ ಸದ್ಬಳಕೆಯಾಗುವಂತೆಯೂ ನಿಗಾ ವಹಿಸಿದರು. ದೊಡ್ಡ ಮಟ್ಟದಲ್ಲಿ ಅನುದಾನ ತಂದು ಅಭಿವೃದ್ಧಿ ಮಾಡಿದರೂ ಮೂಲಸೌಕರ್ಯ ಕಲ್ಪಿಸುವ ಬೇಡಿಕೆ ತಗ್ಗಲಿಲ್ಲ. ಇದನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಅವರ ಬಳಿ ರ್ಚಚಿಸಿ ಶಾಸಕರ ನಿಧಿ ಹಾಗೂ ಇನ್ನಿತರ ಅನುದಾನ ಕ್ರೋಡೀಕರಿಸಿ ಪ್ರಮುಖ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ವಾರ್ಡ್ ಅನ್ನು ಮೇಲ್ಮಟ್ಟಕ್ಕೆ ತರುವಲ್ಲಿ ಯಶಸ್ವಿಯಾದರು.

ಜನರ ಸಮಸ್ಯೆ ನಿವಾರಣೆಯೇ ಆದ್ಯತೆ:ಶಶಿಕಲಾ ಜಯರಾಮ್ ಅವರು ನಾಗರಿಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ನಾಗರಿಕರು ತಮ್ಮ ಅಹವಾಲಿಗೆ ಕಾಪೋರೇಟರ್ ಕಡೆಯಿಂದ ತ್ವರಿತ ಸ್ಪಂದನೆ ಅಪೇಕ್ಷಿಸುವುದು ಸ್ವಾಭಾವಿಕ. ಇದನ್ನು ಅರ್ಥ ಮಾಡಿಕೊಂಡ ಶಶಿರೇಖಾ, ಮೊಬೈಲ್ ಕರೆ ಮಾಡಿದ ವ್ಯಕ್ತಿಯಿಂದ ಸಮಸ್ಯೆಯ ವಿವರ ಪಡೆದು ಅದನ್ನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ರ್ಚಚಿಸಿ ಪರಿಹಾರ ಒದಗಿಸುವ ಕಾರ್ಯಶೈಲಿಯನ್ನು ರೂಢಿಸಿಕೊಂಡರು. ಇದರಿಂದ ಯಾವುದೇ ಕ್ಲಿಷ್ಟ ಸಮಸ್ಯೆ ಎದುರಾದರೂ ಅದನ್ನು ಸಮಾಧಾನವಾಗಿಯೇ ಆಲಿಸಿ ನಾಗರಿಕರಿಗೆ ಸ್ಪಂದಿಸುತ್ತಿದ್ದರು. ಈ ಕಾರಣದಿಂದಲೇ ಶಶಿರೇಖಾ 2ನೇ ಬಾರಿಯೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲು ಸಾಧ್ಯವಾಯಿತು.
ಜನರೊಂದಿಗೆ ಸತತ ಸಂಪರ್ಕ ಸಾಧಿಸಲು ವರ್ಷದುದ್ದಕ್ಕೂ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಆಯೋಜಿಸಿ ಅವು ಜನೋಪಯೋಗಿ ಆಗುವಂತೆ ನಿಗಾ ಹರಿಸಿದ್ದರು. ಉಚಿತ ಆರೋಗ್ಯ ಶಿಬಿರ, ನೇತ್ರಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ, ಅಂಗವಿಕರು ಹಾಗೂ ವೃದ್ಧರಿಗೆ ಉಚಿತ ಪರಿಕರ ವಿತರಿಸಿ ಅಸಹಾಯಕ ವರ್ಗದವರಿಗೆ ಸಹಾಯಹಸ್ತ ಚಾಚಿದ್ದಾರೆ. ಪರಿಸರ ಸಂರಕ್ಷಣೆಗಾಗಿ ಪ್ರತಿ ಮಳೆಗಾಲದಲ್ಲಿ ಸಾವಿರಾರು ಸಂಖ್ಯೆಯ ಸಸಿಗಳನ್ನು ಶಾಲಾ ವಿದ್ಯಾರ್ಥಿಗಳು ಹಾಗೂ ಸ್ಥಳೀಯರ ಜತೆ ನೆಟ್ಟು ಪರಿಸರ ಕಾಳಜಿ ಮೆರೆದಿದ್ದಾರೆ. ಪ್ರತಿವರ್ಷ ಜ.26, ಆ.15 ಹಾಗೂ ನ.1ರಂದು ರಾಷ್ಟ್ರೀಯ ಹಾಗೂ ನಾಡ ಹಬ್ಬಗಳನ್ನು ಜನರೊಟ್ಟಿಗೆ ಆಚರಿಸಿ ದೇಶಭಕ್ತಿ ಉದ್ದೀಪಿಸುವ ಕಾರ್ಯವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.

ಕಾಪೋರೇಟರ್ ಅವಧಿ ಪೂರ್ಣಗೊಂಡ ನಂತರವೂ ಶಶಿರೇಖಾ ತಮ್ಮನ್ನು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗಿ ಸೋದರಿ ರೀತಿ ಸೇವಾಕಾರ್ಯದಲ್ಲಿ ನಿರತರಾಗಿದ್ದಾರೆ. ಮಕ್ಕಳ ಶಾಲಾ ಶುಲ್ಕ ಪಾವತಿಗೆ ನೆರವು ಕೋರಿ ಬರುವವರಿಗೆ ಧನಸಹಾಯ ಮಾಡುತ್ತಿದ್ದಾರೆ. ಮಹಿಳಾ ಸ್ವಸಹಾಯ ಸಂಘಗಳ ಜತೆಗೂ ಒಡನಾಟ ಮುಂದುವರಿಸಿದ್ದು, ಬಡವರ ಆರ್ಥಿಕ ಸ್ವಾವಲಂಬನೆ ಟೇಲರಿಂಗ್ ಕೋರ್ಸ್​ಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಪಕ್ಷ ಸಂಘಟನೆಗೆ ಒತ್ತು:ಬಿಜೆಪಿಯಲ್ಲಿ ಸಕ್ರಿಯವಾಗಿರುವ ಶಶಿರೇಖಾ ಜಯರಾಮ್ ಕೋಣನಕುಂಟೆ ವಾರ್ಡ್​ನಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರತಿ ತಿಂಗಳು ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಸ್ಥಳೀಯವಾಗಿ ಸಂಘಟನೆಯ ಕೆಲಸ ಬಗ್ಗೆ ಪರಾಮರ್ಶೆ ನಡೆಯುತ್ತದೆ. ಯುವ ವಿಭಾಗ, ಮಹಿಳಾ ವಿಭಾಗ ಸೇರಿ ಪ್ರಮುಖ ಮೋರ್ಚಾಗಳ ಪದಾಧಿಕಾರಿಗಳ ಜತೆಗೂಡಿ ಏರಿಯಾದ ಸಮಸ್ಯೆ ಅರಿಯುವ ಯತ್ನ ಮಾಡಲಾಗುತ್ತದೆ. ಸರ್ಕಾರದ ವಿವಿಧ ಸವಲತ್ತುಗಳನ್ನು ಜನರಿಗೆ ತಲುಪಿಸಲು ವಿಶೇಷ ಕಾಳಜಿ ವಹಿಸಲಾಗಿದೆ.
ಸ್ವಸಹಾಯ ಸಂಘಗಳಿಗೆ ಸಾಲ:ಕೋಣನಕುಂಟೆ ವಾರ್ಡ್​ನಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾದ ಪ್ರದೇಶವಾಗಿರುವುದರಿಂದ ಗ್ರಾಮೀಣ ಭಾಗದ ಜನರೂ ನೆಲೆಸಿದ್ದಾರೆ. ಇಲ್ಲಿನ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಅದರ ಸದಸ್ಯರಿಗೆ ಬ್ಯಾಂಕ್ ಸಾಲ ಒದಗಿಸಲಾಗಿದೆ. ಬಡ ಮಹಿಳೆಯರಿಗೆ ಟೇಲರಿಂಗ್ ಕಲಿಕಾ ತರಗತಿ, ಬ್ಯುಟಿಷಿಯನ್ ಕೋರ್ಸ್​ಗೆಅವಕಾಶ ಮಾಡಿಕೊಟ್ಟು ಸ್ವಾವಲಂಬನೆಯ ಬದುಕಿಗೆ ನೆರವಾಗಿದ್ದಾರೆ.

ಸರ್ಕಾರಿ ಕಾಲೇಜು ಅಗತ್ಯ:ಕೋಣನಕುಂಟೆ ಭಾಗದಲ್ಲಿ ಸರ್ಕಾರಿ ಕಾಲೇಜು ಇಲ್ಲ. ಇದರಿಂದ ಸ್ಥಳೀಯ ವಿದ್ಯಾರ್ಥಿಗಳು ದೂರದ ಪ್ರದೇಶಗಳನ್ನು ಆಶ್ರಯಿಸಬೇಕಿದೆ. ಹೆಣ್ಣುಮಕ್ಕಳು ತಮ್ಮ ಶೈಕ್ಷಣಿಕ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆ- ಕಾಲೇಜು ಸೇರ್ಪಡೆ ಪ್ರಮಾಣ ಹೆಚ್ಚುತ್ತಿದೆ. ಇದನ್ನು ಶಿಕ್ಷಣ ಇಲಾಖೆ ಗಮನಕ್ಕೆ ತಂದಿದ್ದರೂ ಇನ್ನೂ ಸ್ಪಂದನೆ ವ್ಯಕ್ತವಾಗಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರಿ ಕಾಲೇಜು ಮಂಜೂರು ಮಾಡಿಸಿ ಶಿಕ್ಷಣಕ್ಕೆ ಇನ್ನಷ್ಟು ಒತ್ತು ನೀಡುವ ಕೆಲಸ ಮಾಡಬೇಕಿದೆ ಎನ್ನುತ್ತಾರೆ ಶಶಿರೇಖಾ.
ಬಾಲರಾಮನ ಪ್ರತಿಷ್ಠಾಪನೆ ಕಾರ್ಯ:ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನಾ ಕಾರ್ಯದ ವೇಳೆ ಶಶಿಕಲಾ ಜಯರಾಮ್ ದಂಪತಿ ಕೋಣನಕುಂಟೆಯ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಿ ಮೂರ್ತಿ ಸ್ಥಾಪನೆ ದಿನವನ್ನು ವಿಜೃಂಭಣೆಯಿಂದ ಆಚರಿಸಿದ್ದಾರೆ. ಗೌರಿಶಂಕರ ದೇಗುಲ, ಗಣಪತಿ ದೇವಸ್ಥಾನ, ವರದಾಂಜನೇಯಸ್ವಾಮಿ ದೇಗುಲ, ಮುತ್ತೂರಾಯಸ್ವಾಮಿ- ಹೀಗೆ ಐದಾರು ಪ್ರಮುಖ ದೇವಸ್ಥಾನಗಳಲ್ಲಿ ಸಹಸ್ರಾರು ಜನರಿಗೆ ಪ್ರಸಾದ ವ್ಯವಸ್ಥೆ ಹಾಗೂ ಅನ್ನದಾನ ಏರ್ಪಡಿಸಿದ್ದರು. ಸ್ಥಳೀಯ ಮುಖಂಡರ ಜತೆಗೂಡಿ ಇತರ ದೇಗುಲಗಳಲ್ಲೂ ಧಾರ್ವಿುಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಿ ದೈವಭಕ್ತಿ ಪ್ರದರ್ಶಿಸಿದ್ದರು.
ಕೋವಿಡ್ ವೇಳೆ ಸಕ್ರಿಯ ಕೆಲಸ:ಕರೊನಾ ಸಂದರ್ಭದಲ್ಲಿ ಶಶಿರೇಖಾ ಅವರು ತಮ್ಮ ಪತಿ ಜಯರಾಮ್ ಜತೆ ವಾರ್ಡ್​ನೆಲ್ಲೆಡೆ ಸೇನಾನಿಯಂತೆ ಕೆಲಸ ಮಾಡಿದ್ದರು. ಪ್ರತಿದಿನ ಜನರಿಗೆ ಲಸಿಕೆ ಹಾಕಿಸುವುದು, ಔಷಧ ಪೂರೈಕೆ ಇತ್ಯಾದಿ ತಲುಪಿಸುವಲ್ಲಿ ನಿರತರಾಗಿದ್ದರು. ನಿತ್ಯವೂ ಬಡವರಿಗಾಗಿ 3 ಸಾವಿರ ಜನರಿಗೆ ಆಹಾರ ಪೊಟ್ಟಣ ವಿತರಿಸಿದ್ದರು. ಅಗತ್ಯವುಳ್ಳವರಿಗೆ ಸಾವಿರಾರು ಸಂಖ್ಯೆಯ ದಿನಸಿ ಕಿಟ್​ಗಳನ್ನೂ ನೀಡಿದ್ದಾರೆ. ನಗರದಾಚೆಯ ರೈತರಿಂದ ತರಕಾರಿಗಳನ್ನು ಖರೀದಿಸಿ ಅವುಗಳನ್ನು ನಾಗರಿಕರಿಗೆ ಹಂಚಿಕೆ ಮಾಡಿದ್ದಾರೆ. ವೃದ್ಧರು, ಮಕ್ಕಳು ಸೇರಿ ಅಶಕ್ತರನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದಾರೆ. ಆಂಬುಲೆನ್ಸ್ ಸಿಗದ ಸಮಯದಲ್ಲಿ ಖಾಸಗಿಯವರಿಂದ ಪಡೆದು ರೋಗಿಗಳಿಗೆ ನೆರವಾಗಿದ್ದಾರೆ. ಈ ಕಾರ್ಯ ನಮಗೆ ಸವಾಲಿನಂತಿತ್ತು ಎನ್ನುತ್ತಾರೆ ಶಶಿರೇಖಾ.
ಪಿಎಚ್​ಸಿ ಮೇಲ್ದರ್ಜೆಗೆ:ಕೋಣನಕುಂಟೆಯಲ್ಲಿ ಹಿಂದಿನಿಂದಲೂ ‘ಪ್ರಾಥಮಿಕ ಆರೋಗ್ಯ ಕೇಂದ್ರ’ (ಪಿಎಚ್​ಸಿ) ಕಾರ್ಯಾಚರಿಸುತ್ತಿತ್ತು. ಪಾಲಿಕೆ ವಿಸ್ತಾರ ಆಗುತ್ತಿದ್ದಂತೆ ಇಲ್ಲಿನ ಪಿಎಚ್​ಸಿಯಲ್ಲಿ ಹೆಚ್ಚಿನ ಚಿಕಿತ್ಸಾ ಸೌಲಭ್ಯ ಸಾಲದಾದವು. ಗಂಭೀರ ಸಮಸ್ಯೆಗಳು ಎದುರಾದಲ್ಲಿ ದೂರದ ಬನಶಂಕರಿ ಅಥವಾ ಯಡಿಯೂರು ಆಸ್ಪತ್ರೆಗೆ ತೆರಳಬೇಕಿತ್ತು. ಈ ಸಮಸ್ಯೆಯನ್ನು ಮನಗಂಡು ಶಶಿರೇಖಾ ಅವರು ಪಿಎಚ್​ಸಿ ಅನ್ನು ಸಣ್ಣ ಪ್ರಮಾಣದ ಹೆರಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿದ್ದಾರೆ. ಈ ಆರೋಗ್ಯ ಕೇಂದ್ರವನ್ನು ಇನ್ನಷ್ಟು ಚಂದಗೊಳಿಸುವ ಅಭಿಲಾಷೆಯನ್ನೂ ಹೊಂದಿದ್ದಾರೆ.
50+ ಕೊಳವೆಬಾವಿಗಳು;ಕೋಣನಕುಂಟೆ ವಾರ್ಡ್ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದ ವೇಳೆ ಕಾವೇರಿ ಪೈಪ್​ಲೈನ್ ಅಳವಡಿಸಿ ಜನರಿಗೆ ನೀರಿನ ದಾಹವನ್ನು ತಣಿಸಲಾಯಿತು. ಕೆಲ ಬಡಾವಣೆಗಳಲ್ಲಿ ನೀರು ಪೂರೈಕೆಯಾಗದ ಕಡೆಗಳಲ್ಲಿ ಬೋರ್​ವೆಲ್​ಗಳನ್ನು ಕೊರೆಯಿಸಿ ಜಲ ಸೌಲಭ್ಯ ಕಲ್ಪಿಸಲಾಗಿದೆ. ಈ ರೀತಿ ವಿವಿಧ ಯೋಜನೆಗಳಡಿ 50ಕ್ಕೂ ಹೆಚ್ಚು ಬೋರ್​ವೆಲ್​ಗಳನ್ನು ಕೊರೆಯಿಸಿದ್ದ ಪರಿಣಾಮ ಪ್ರಸ್ತುತ ಈ ಭಾಗ ನೀರಿನ ಸಮಸ್ಯೆಯಿಂದ ಹೊರಬಂದಿದೆ.
ಎರಡು ಬಾರಿ ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾಗಿದ್ದ ವೇಳೆ ಪಾಲಿಕೆಯ ವಿವಿಧ ಕಾರ್ಯಕ್ರಮಗಳಡಿ ಹೆಚ್ಚಿನ ಅನುದಾನ ತಂದು ವಾರ್ಡ್ ಅಭಿವೃದ್ಧಿಪಡಿಸಿರುವ ತೃಪ್ತಿ ಇದೆ. ಆದರೂ, ಇನ್ನಷ್ಟು ಮೂಲಸೌಕರ್ಯ ಕಲ್ಪಿಸಬೇಕಿತ್ತು ಎಂದು ಅನಿಸುತ್ತಿದೆ. ಶಾಸಕರು ಕೂಡ ಬೆಂಬಲವಾಗಿ ನಿಂತು ವಿವಿಧ ಯೋಜನೆಗಳಿಗೆ ಅನುದಾನ ನೀಡಿದ್ದಾರೆ. ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಿದ ಕೆಲಸ ಹೆಚ್ಚು ಖುಷಿ ಕೊಟ್ಟಿತು. ಜನರ ಸಹಕಾರದಿಂದ ಉತ್ತಮ ಕೆಲಸ ಮಾಡಲು ಸಾಧ್ಯವಾಯಿತು. ಪಕ್ಷ ಮತ್ತೆ ಅವಕಾಶ ಮಾಡಿಕೊಟ್ಟರೆ ಜನಸೇವೆ ಮಾಡಲು ಸಿದ್ಧಳಿದ್ದೇನೆ.
| ಶಶಿರೇಖಾ ಜಯರಾಮ್
1994ರಲ್ಲಿ ಗ್ರಾಪಂ ಪಂಚಾಯಿತಿಗೆ ಆಯ್ಕೆಯಾಗಿ ಜನರ ನಿರೀಕ್ಷೆಯನ್ನು ಹುಸಿ ಮಾಡದೆ ಕೆಲಸ ಮಾಡಿರುವೆ. ಇದೇ ಅನುಭವವನ್ನು ಪತ್ನಿಗೆ ವಿವರಿಸಿ ಆಕೆಯಿಂದ ವಾರ್ಡ್​ನೆಲ್ಲೆಡೆ ಅಭಿವೃದ್ಧಿ ಕಾರ್ಯ ಆಗುವಂತೆ ಬೆಂಬಲವಾಗಿ ನಿಂತಿದ್ದೇನೆ. ಆಕೆಯೇ ಖುದ್ದು ಮುಂದಾಗಿ ಹಲವು ಕೆಲಸಗಳನ್ನು ಮಾಡಿಸಿದ್ದಾರೆ. ವಾರ್ಡ್​ನಲ್ಲಿ ಉತ್ತಮ ಕೆಲಸ ಆಗಿರುವುದಾಗಿ ಜನರು ಸಂತಸ ವ್ಯಕ್ತಪಡಿಸಿರುವುದು ಖುಷಿ ತಂದಿದೆ. ಈಗ ನನ್ನಾಕೆಯ ಸಮಾಜಸೇವೆ ಪರಿಗಣಿಸಿ ಬೆಂಗಳೂರು ರತ್ನ ಪ್ರಶಸ್ತಿ ನೀಡಿರುವುದು ಸಂತೋಷ ತಂದಿದೆ.
| ಎಂ. ಜಯರಾಮ್ ಶಶಿರೇಖಾ ಪತಿ
ಶಶಿರೇಖಾ ಅವರು ಪಾಲಿಕೆ ಸದಸ್ಯರಾಗಿ ಆಯ್ಕೆಯಾದ ವೇಳೆ ಹೆಚ್ಚಿನ ಕಡೆಗಳಲ್ಲಿ ಮಣ್ಣಿನ ರಸ್ತೆಗಳೇ ಇದ್ದವು. ಆಮೇಲೆ ಒಂದಾದ ಮೇಲೊಂದರಂತೆ ನಾಗರಿಕ ಮೂಲಸೌಲಭ್ಯಗಳು ಅನುಷ್ಠಾನಗೊಂಡವು. ರಸ್ತೆ, ಒಳಚರಂಡಿ, ರಾಜಕಾಲುವೆ ನಿರ್ವಣವಾಗಿವೆ. ಹಲವು ಸಂಖ್ಯೆಯ ಬೋರ್​ವೆಲ್​ಗಳನ್ನು ಕೊರೆಯಿಸಿ ನೀರು ಪೂರೈಕೆಗೆ ಕ್ರಮ ಕೈಗೊಂಡಿದ್ದಾರೆ. ಆರ್​ಒ ಪ್ಲ್ಯಾಂಟ್ ಘಟಕಗಳು ಜನರಿಗೆ ಸಹಕಾರಿಯಾಗುತ್ತಿವೆ. ಮಹಿಳಾ ಸಮೂಹಕ್ಕೂ ಉತ್ತಮ ಕೆಲಸ ಮಾಡಿದ್ದಾರೆ.
| ಐ. ಕೃಷ್ಣಯ್ಯಬಿಜೆಪಿಯ ಬೆಂ. ದಕ್ಷಿಣ ಜಿಲ್ಲಾ ಸಹ ಪ್ರಭಾರಿ
ಶಶಿರೇಖಾ ಅವರು ಕಾಪೋರೇಟರ್ ಆದ ಬಳಿಕ ಇಲ್ಲಿನ ಹಲವು ಬಡಾವಣೆಗಳು ಡಾಂಬರು ಕಂಡಿವೆ. ಕಾಮಗಾರಿ ನಡೆಯುವ ಸಂದರ್ಭಗಳಲ್ಲಿ ಸ್ಥಳದಲ್ಲಿದ್ದು ಅವುಗಳ ಮೇಲ್ವಿಚಾರಣೆ ಮಾಡುತ್ತಿದ್ದರಿಂದ ಗುಣಮಟ್ಟದ ರಸ್ತೆಗಳಾಗಿವೆ. ಆಸ್ಪತ್ರೆ ಸಹಿತ ಪಾಲಿಕೆಯ ಇತರ ಸೌಲಭ್ಯಗಳೂ ಅನುಷ್ಠಾನ ಆಗಿವೆ. ಜತೆಗೆ ಬಿಬಿಎಂಪಿ ಕೆಲ ಕಚೇರಿಗಳು ಕಾರ್ಯಾರಂಭ ಮಾಡಿವೆ. ಎಸ್.ಕೆ. ನಟರಾಜ್ ಮೇಯರ್ ಆಗಿದ್ದ ವೇಳೆ ಕೋಣನಕುಂಟೆ ಮಾದರಿ ವಾರ್ಡ್ ಪಟ್ಟಿಗೆ ಸೇರಿದ್ದು ನಮಗೆ ಹೆಮ್ಮೆ ತಂದಿತ್ತು.
| ಆರ್.ಕೆ. ವರದಾ ರೆಡ್ಡಿ, ಕೋಣನಕುಂಟೆ ವಾರ್ಡ್​ನ ಮಾಜಿ ಅಧ್ಯಕ್ಷ
ಬಿಬಿಎಂಪಿಗೆ ಎರಡು ಬಾರಿ ಆಯ್ಕೆಯಾಗಿ ವಾರ್ಡ್​ನಲ್ಲಿ ಜನರ ಬೇಡಿಕೆಗೆ ತಕ್ಕಂತೆ ಕೆಲಸ ಮಾಡಿದ್ದಾರೆ. ಶಾಲೆಗಳ ಅಭಿವೃದ್ಧಿ, ವಿವಿಧ ಬಡಾವಣೆಗಳಿಗೆ ಮೂಲಸೌಕರ್ಯವನ್ನು ಕಲ್ಪಿಸಿದ್ದಾರೆ. ಶಾಸಕರ ನಿಧಿಯಿಂದಲೂ ಅನುದಾನ ತಂದು ಅಭಿವೃದ್ಧಿಪಡಿಸಿದ್ದಾರೆ. ಪಕ್ಷದ ಚಟುವಟಿಕೆಗಳಲ್ಲೂ ಶಶಿರೇಖಾ ಜಯರಾಮ್ ಸಕ್ರಿಯರಾಗಿದ್ದಾರೆ. ಇಂತಹ ಹಿನ್ನೆಲೆಯುಳ್ಳವರಿಗೆ ‘ಬೆಂಗಳೂರು ರತ್ನ ಪ್ರಶಸ್ತಿ’ ಸಂದಿರುವುದು ಖುಷಿ ತಂದಿದೆ.
| ಎನ್. ಪ್ರಕಾಶ್ , ಬಿಜೆಪಿ ಬೆಂ. ದಕ್ಷಿಣ ನಗರ ಮಂಡಲದ ಒಬಿಸಿ ಅಧ್ಯಕ್ಷ
ಕೋಣನಕುಂಟೆ ವ್ಯಾಪ್ತಿಯಲ್ಲಿ ಶಶಿರೇಖಾ ಅವರು ಕಾಪೋರೇಟರ್ ಆಗಿ ಉತ್ತಮ ಕೆಲಸವನ್ನು ಮಾಡಿದ್ದಾರೆ. ಕುಗ್ರಾಮದಂತಿದ್ದ ಪ್ರದೇಶಕ್ಕೆ ಡಾಂಬರು ರಸ್ತೆ ಸಹಿತ ಇನ್ನಿತರ ಸೌಲಭ್ಯ ಒದಗಿಸಿದ್ದಾರೆ. ಇವರ ಪತಿಯೂ ಗ್ರಾಪಂ ಸದಸ್ಯರಾಗಿದ್ದ ಮೊದಲ ಬಾರಿಗೆ ಕುಡಿಯುವ ನೀರಿನ ಪೈಪ್​ಲೈನ್ ಹಾಕಿಸಿ ನೀರಿನ ದಾಹವನ್ನು ನೀಗಿಸಿದ್ದು ಇನ್ನೂ ಹಸಿರಾಗಿಯೇ ಇದೆ. ಪ್ರಸ್ತುತ ಈ ದಂಪತಿ ಬಡ ವರ್ಗದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರ ಏಳಿಗೆಯಲ್ಲಿ ನಿರತರಾಗಿರುವುದು ಶ್ಲಾಘನೀಯ.
| ಪುಟ್ಟಣ್ಣ ಕೋಣನಕುಂಟೆ ನಿವಾಸಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 11 =
Remember me
