ಬೆಂಗಳೂರು:ಹೊಸ ಸರ್ಕಾರದ ಮನೋರಥ, ಆಶಯ, ಸಂಕಲ್ಪ, ಮುಂದಿನ ಐದು ವರ್ಷಗಳ ಅವಧಿಯಲ್ಲಿ ಸರ್ಕಾರ ಸಾಗುವ ದಿಕ್ಕಿನ ನೀಲಿನಕ್ಷೆಯನ್ನು ರಾಜ್ಯಪಾಲ ಥಾವರ್​ಚಂದ್ ಗೆಹಲೋತ್ ನಾಡಿನ ಮುಂದಿಟ್ಟಿದ್ದಾರೆ. 16ನೇ ವಿಧಾನಸಭೆ ವಿಧ್ಯುಕ್ತವಾಗಿ ಆರಂಭವಾಗಿದ್ದು, ಅನೂಚಾನವಾಗಿ ನಡೆದುಬಂದಂತೆ ಮೊದಲಿಗೆ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ಪ್ರತಿಪಕ್ಷದ ನಾಯಕರಿಲ್ಲದೇ ರಾಜ್ಯಪಾಲರ ಭಾಷಣ ನೆರವೇರಿತು. ರಾಜ್ಯಪಾಲರು ಸರ್ಕಾರದ ಆಶೋತ್ತರಗಳನ್ನು ವಿವರಿಸಿ ಎಲ್ಲರೂ ಜತೆಗೂಡಿ ಸಮೃದ್ಧ, ಸೌಹಾರ್ದಪೂರ್ವಕ ನಾಡು ನಿರ್ವಿುಸೋಣ ಎಂದು ಕರೆಕೊಟ್ಟರು.
ಒಟ್ಟಾರೆ ನಾವು ಏನು ಮಾಡಬೇಕು ಎಂಬ ನೀಲಿನಕಾಶೆ ನಮ್ಮ ಮುಂದೆ ಇದೆ. ನನ್ನ ಸರ್ಕಾರಕ್ಕೆ ಇಚ್ಛಾ ಶಕ್ತಿಯಿದೆ. ಅನುಭವ ಮತ್ತು ತಾರುಣ್ಯ ಬೆರೆತ ರೀತಿಯಲ್ಲಿ ಸರ್ಕಾರ ರೂಪುಗೊಂಡಿದೆ. ಜನಹಿತ ಎಲ್ಲಕ್ಕಿಂತ ಮುಖ್ಯ ಎಂದು ಸರ್ಕಾರ ಭಾವಿಸಿದೆ ಎಂದ ಅವರು ದೇಶಕ್ಕೆ ಕರ್ನಾಟಕದ ಮಾದರಿಗಳನ್ನು ನಿರ್ವಿುಸಿ ಸಾಬೀತು ಮಾಡಲು ಅಗತ್ಯವಿರುವ ಯೋಜನೆ ರೂಪಿಸಿ ಅನುಷ್ಠಾನ ಮಾಡುತ್ತದೆ ಎಂದರು.
ಕರ್ತವ್ಯ ಗೀತೆ:ಹೊಸ ಸರ್ಕಾರವೊಂದನ್ನು ಆರಿಸುವಾಗ ಜನರ ನಿರೀಕ್ಷೆಗಳೂ ಹೊಸತಾಗಿರುತ್ತವೆ. ಹಳೆಯದಕ್ಕಿಂತ ಭಿನ್ನವಾದ ಮತ್ತು ತಮ್ಮ ಆಶೋತ್ತರಗಳನ್ನು ಪ್ರತಿಬಿಂಬಿಸುವ ಆಡಳಿತವೊಂದನ್ನು ಅವರು ನಿರೀಕ್ಷಿಸುತ್ತಿರುತ್ತಾರೆ. ಕಳೆದ 34 ವರ್ಷಗಳಲ್ಲಿ ಯಾರಿಗೂ ನೀಡದ ಬಹುಮತದೊಂದಿಗೆ ಈ ಸರ್ಕಾರವನ್ನು ಜನರು ಆಯ್ಕೆಮಾಡಿದ್ದಾರೆ. ಅಂದರೆ ಅವರು ಈ ನಿರ್ಣಾಯಕ ತೀರ್ಪಿನ ಮೂಲಕ ಮಹತ್ತರವಾದುದನ್ನೇ ನಿರೀಕ್ಷಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಅವರ ನಿರೀಕ್ಷೆಯನ್ನು ಹುಸಿಗೊಳಿಸದೆ ಇರಲು ಸರ್ಕಾರ ಬಸವಣ್ಣನವರ ದೀಕ್ಷಾ ವಾಕ್ಯವಾದ ನುಡಿದಂತೆ ನಡೆಯಬೇಕು ಎಂಬುದನ್ನು ಕರ್ತವ್ಯ ಗೀತೆಯಾಗಿ ಅಳವಡಿಸಿಕೊಂಡಿದೆ ಎಂದು ಸರ್ಕಾರದ ಆಭಿಲಾಷೆಯನ್ನು ಪ್ರಕಟಪಡಿಸಿದರು.
ವಾರಸುದಾರನಾಗಲು ಪಣ:ಜನಪರ ಆಡಳಿತದ ಅನನ್ಯ ಮತ್ತು ಅನುಕರಣೀಯವಾದ ಹಲವು ಮಾದರಿಗಳನ್ನು ಆವಿಷ್ಕರಿಸಿದ ಖ್ಯಾತಿ ಕರ್ನಾಟಕಕ್ಕೆ ಇದೆ. ಈ ಸರ್ಕಾರವನ್ನು ಅಧಿಕಾರಕ್ಕೆ ತಂದಿರುವ ಜನಾದೇಶದ ಸಂದೇಶವೂ ಅದುವೇ ಆಗಿದೆ. ಜನಪರ ಆಡಳಿತ ನೀತಿಗಳನ್ನು ಆವಿಷ್ಕರಿಸುವ ಮತ್ತು ಅಳವಡಿಸಿಕೊಳ್ಳುವ ಮಹಾಪರಂಪರೆಯ ವಾರಸುದಾರನಾಗಲು ಸರ್ಕಾರ ಪಣತೊಡುತ್ತಿದೆ ಎಂದರು.
ಪೈಪೋಟಿಗೆ ತಯಾರಿ:ನಾವು ನಮ್ಮ ಉತ್ಪಾದನೆ, ವಿತರಣೆ ಮತ್ತು ಮಾರುಕಟ್ಟೆ ವ್ಯವಸ್ಥೆಯಲ್ಲಿ ಅಕ್ಕಪಕ್ಕದ ರಾಜ್ಯಗಳಳೊಂದಿಗಷ್ಟೇ ಅಲ್ಲದೇ, ದೂರದ ಚೀನಾ ಮುಂತಾದ ದೇಶಗಳೊಂದಿಗೂ ಸ್ಪರ್ಧಿಸಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ನನ್ನ ಸರ್ಕಾರವು ಮನಗಂಡಿದೆ ಹಾಗೂ ಅದಕ್ಕಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನತ್ತಲೂ ಗಮನ:ಕರ್ನಾಟಕದ ಆರ್ಥಿಕತೆಯಷ್ಟೇ ಅಲ್ಲ ದೇಶದ ಅಭಿವೃದ್ಧಿಗೂ ಸಿಂಹಪಾಲನ್ನು ನೀಡುತ್ತಿರುವ ನಮ್ಮ ಬೆಂಗಳೂರನ್ನು ಮತ್ತೊಮ್ಮೆ ವಿಶ್ವದ ಗಮನ ಸೆಳೆಯುವಂತೆ ಮಾಡುತ್ತೇವೆ. ಅಗತ್ಯ ವಿರುವ ಎಲ್ಲ ನಾಗರಿಕ ವ್ಯವಸ್ಥೆಗಳನ್ನು ನನ್ನ ಸರ್ಕಾರವು ಅಚ್ಚುಕಟ್ಟಾಗಿ ರೂಪಿಸಲಿದೆ. ಅಭಿವೃದ್ಧಿ ಹೊಂದಿದ ನಗರವನ್ನಾಗಿ ಬೆಂಗಳೂರನ್ನು ರೂಪಿಸಲು ಸರ್ಕಾರವು ಬದ್ಧವಾಗಿದೆ ಎಂದು ಹೇಳಿದರು.
ಅಸಮತೋಲನ ನಿವಾರಣೆಗೆ ಕ್ರಮ:ಸರ್ಕಾರವು ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ಸ್ಪಷ್ಟವಾದ ಯೋಜನೆಯನ್ನು ರೂಪಿಸಿ ಅನುಷ್ಠಾನ ಮಾಡಲು ಬದ್ಧವಾಗಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಆರೋಗ್ಯ, ಶಿಕ್ಷಣ ಮತ್ತು ಅಗತ್ಯ ಸೇವೆಗಳನ್ನು ಒದಗಿಸಲು ಅಗತ್ಯವಿರುವ ಆರ್ಥಿಕ ಮತ್ತು ಆಡಳಿತಾತ್ಮಕ ನೆರವುಗಳನ್ನು ನೀಡಿ ಈ ಅಸಮಾನತೆ ಹೋಗಲಾಡಿಸಲು ಅಗತ್ಯವಿರುವ ಎಲ್ಲ ಕ್ರಮ ತೆಗೆದುಕೊಳ್ಳುವುದು ಎಂದು ರಾಜ್ಯಪಾಲರು ತಿಳಿಸಿದರು.
ಶ್ರೀವಿಜಯ, ಕುವೆಂಪು, ಪಂಪನ ಪ್ರಸ್ತಾಪ:ಜಾತಿ-ಧರ್ಮಗಳ ಬೇಧದ ವಿರುದ್ಧ ಮೊದಲಿನಿಂದಲೂ ಜೀವಪರ ಸೆಲೆಯನ್ನು ಚಿಮ್ಮುತ್ತಾ ಬಂದಿದೆ. ಕರ್ನಾಟಕದ ಮೊದಲ ಲಭ್ಯ ಕೃತಿ ಕವಿರಾಜಮಾರ್ಗದಲ್ಲಿ ಕವಿ ಶ್ರೀವಿಜಯ ‘ಪರ ವಿಚಾರಗಳನ್ನು, ಪರ ಧರ್ಮಗಳನ್ನು, ಪರ ಬದುಕಿನ ನೀತಿಗಳನ್ನು ಗೌರವಿಸುವುದೇ ನಿಜವಾದ ಬಂಗಾರದ ಒಡವೆ; ಎಂದು ಹೇಳಿದ್ದಾರೆ. ಆನಂತರ ಕನ್ನಡದ ಆದಿಕವಿ ಪಂಪ ’ಮನುಷ್ಯ ಜಾತಿ ತಾನೊಂದೆ ವಲಂ ಅಂದರೆ ಇಡೀ ಮನುಷ್ಯ ಸಂಕುಲವೇ ಒಂದು’ ಎಂದು ಹೇಳಿದ್ದಾರೆ. ಕರ್ನಾಟಕತ್ವದ ಸಾಂಸ್ಕೃತಿಕ ಚಹರೆಗಳನ್ನು ರೂಪಿಸಿದ ರಾಷ್ಟ್ರಕವಿ ಕುವೆಂಪು ಅವರು ಇದನ್ನು ’ಸರ್ವ ಜನಾಂಗದ ಶಾಂತಿಯ ತೋಟ’ ಎನ್ನುವವರೆಗೆ ಈ ನೆಲವು ಹಾದು ಬಂದ ರೀತಿಯನ್ನು ನಾವಿಲ್ಲಿ ಸ್ಮರಿಸಬೇಕು. ಕರ್ನಾಟಕದ ಜನರು ಈ ಸರ್ಕಾರದಿಂದ ಅದಕ್ಕೆ ಪೂರಕವಾದ ಆಡಳಿತವನ್ನೇ ಬಯಸಿದ್ದಾರೆ ಎಂದು ರಾಜ್ಯಪಾಲರು ತಿಳಿಸಿದರು.
ರಾಜ್ಯಪಾಲರ ಭಾಷಣವನ್ನು ಗಮನಿಸಿದರೆ ಈ ಸರ್ಕಾರ ಆದಷ್ಟು ಬೇಗ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ವೆಂಟಿಲೇಟರ್ ಮೇಲೆ ಮಲಗಿಸಲಿದೆ. ಈ ಭಾಷಣ ರಾಜ್ಯದ ಮುಂದಿನ ರ್ದಬರ ದಿನಗಳತ್ತ ಬೊಟ್ಟು ಮಾಡಿದೆ. ಚುನಾವಣೆ ವೇಳೆ ಕಾಂಗ್ರೆಸ್ ಜನರಿಗೆ ಕೊಟ್ಟ ಆಶ್ವಾಸನೆ ಏನು? ಈಗ ಹೇಳುತ್ತಿರುವುದೇನು? ಭವಿಷ್ಯದ ಕರ್ನಾಟಕದ ಬಗ್ಗೆ ಯಾವುದೇ ಒಳನೋಟ ಇಲ್ಲದ ಭಾಷಣ ಇದಾಗಿದೆ. ಈ ಸರ್ಕಾರಕ್ಕೆ ದೂರದೃಷ್ಟಿ, ಆತ್ಮವಿಶ್ವಾಸವೇ ಇಲ್ಲ. ಸರ್ಕಾರದ ಮುಂದಿನ ಆಶಯಗಳ ಬಗ್ಗೆ ಬೆಳಕು ಚೆಲ್ಲಬೇಕು. ಈ ಭಾಷಣದಲ್ಲಿ ಬೆಳಕಿನ ಮಾತು ಹಾಗಿರಲಿ, ಬರೀ ಕತ್ತಲೇ ತುಂಬಿದೆ.
| ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ನಾಯಕ
ರಾಜ್ಯಪಾಲರ ಭಾಷಣ ಸಪ್ಪೆಯಾಗಿದ್ದು ಯಾವುದೇ ಜೀವಾಳ ಇಲ್ಲ. ಹೊಸ ಸರ್ಕಾರ ಬಂದಾಗ, ಹೊಸ ಚೈತನ್ಯ, ಹೊಸ ದಿಕ್ಸೂಚಿ ಇಲ್ಲದೆ ಸರ್ಕಾರ ಕವಲು ದಾರಿಯಲ್ಲಿದೆ. ರಾಜ್ಯಪಾಲರ ಭಾಷಣದಲ್ಲಿ ಭರವಸೆ ಮೂಡುವಂತಹ ಯಾವುದೇ ಅಂಶ ಇಲ್ಲ. ಸುಳ್ಳಿನ ಕಂತೆ ಅಂತ ಸಾಬೀತಾಗಿದೆ. ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿದ್ದಾರೆ.
| ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ
ಇಂದು ಜಗತ್ತಿನ ಅನೇಕ ದೇಶಗಳು ಜನಕೇಂದ್ರಿತ ಆರ್ಥಿಕತೆಯನ್ನು ಪ್ರತಿಪಾದಿಸುತ್ತಿವೆ. ಈ ದೇಶಗಳಲ್ಲಿ ಸಾರ್ವತ್ರಿಕ ಮೂಲ ಆದಾಯ ಎಂಬ ಪರಿಕಲ್ಪನೆಯು ಪ್ರಬಲಗೊಳ್ಳುತ್ತಿದೆ. ಇದು ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವನ್ನು ತುಸುವಾದರೂ ಕಡಿಮೆ ಮಾಡಲು ಸಹಕಾರಿಯಾಗುತ್ತಿದೆ ಎಂದು ರಾಜ್ಯಪಾಲರು ತಿಳಿಸಿದರು.
ಮಾನವೀಯತೆ ಮತ್ತು ಅಭಿವೃದ್ಧಿಪರ ಚಿಂತನೆಯೊಂದಿಗೆ ವಿಕಾಸವಾಗುತ್ತಿರುವ ಈ ಆರ್ಥಿಕ ನೀತಿಯು, ಸಂಪತ್ತು ಕೆಲವರ ಕೈಯಲ್ಲೇ ಕೇಂದ್ರೀಕೃತಗೊಳ್ಳುವುದನ್ನು ಇಲ್ಲವಾಗಿಸುತ್ತದೆ. ಒಂದರ್ಥದಲ್ಲಿ ಇದು ಬೆಲೆ ಏರಿಕೆ ಹಾಗೂ ಕಡಿಮೆ ಆದಾಯದಿಂದ ತತ್ತರಿಸಿರುವ ಜನರಿಗೆ ಘನತೆಯನ್ನು ತಂದುಕೊಡುತ್ತದೆ, ಸರ್ಕಾರವು ಈ ಯೋಜನೆಗಳ ಮೂಲಕ ಹೊಸ ಅಭಿವೃದ್ಧಿ ಮಾದರಿಯೊಂದನ್ನು ರೂಪಿಸಿ ಅನುಷ್ಠಾನ ಮಾಡುತ್ತಿದೆ ಎಂದರು.
ನಾವು ಜನರಿಗೆ ಅವರಿಂದಲೇ ಸೃಷ್ಟಿಯಾದ ಸಂಪತ್ತಿನಲ್ಲಿ ಒಂದು ಪಾಲನ್ನು ಕೊಡುವ ಕೆಲಸವನ್ನು ಮಾಡುತ್ತಿದ್ದೇವೆ. ಆ ಮೂಲಕ ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಅನುಚ್ಛೇದ 38, 39 (ಎ), (ಬಿ) ಮತ್ತು (ಸಿ) ಗಳ ಪರೋಕ್ಷ ಅನುಷ್ಠಾನವನ್ನೂ ಸರ್ಕಾರ ಮಾಡುತ್ತಿದೆ. ಸರ್ಕಾರಗಳು ಆಡಳಿತ ನಡೆಸಬೇಕಾದರೆ, ಕಾನೂನುಗಳನ್ನು ತರಬೇಕಾದರೆ, ಕಡ್ಡಾಯವಾಗಿ ಈ ತತ್ತ್ವಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.
ನನ್ನ ಸರ್ಕಾರವು ಜನ ಕೇಂದ್ರಿತವಾದ ಆರ್ಥಿಕತೆಯನ್ನು ರೂಪಿಸಲು ಬಯಸಿದೆ. ಇದು ಸಾಧ್ಯವಾಗಬೇಕಾದರೆ ಕಡಿಮೆ ಜಾಗದಲ್ಲಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ ಎಂದರು.
2. ಸಂಕುಚಿತವಾದಿ ಮನಸ್ಸುಗಳು ತಾರತಮ್ಯ, ಒಡಕು ಸೃಷ್ಟಿಸಿತ್ತು. ಸಮಾಜದ ವಿವಿಧ ಪದರಗಳಲ್ಲಿ ಈ ರೀತಿಯ ಮನಸ್ಥಿತಿಯ ಅವಶೇಷ ಇನ್ನೂ ಜೀವಂತವಾಗಿ ಉಳಿದುಕೊಂಡಿವೆ. ದ್ವೇಷರಹಿತ, ಪ್ರೀತಿಯುಕ್ತ ಸಮಾಜ ನಿರ್ಮಾಣ ಮಾಡಲು ಸರ್ಕಾರ ಹಲವು ಬಗೆಯ ಕ್ರಮ ಕೈಗೊಳ್ಳಲಿದೆ.
3. ಸರ್ಕಾರವು ಆಡಳಿತವನ್ನು ಪವಿತ್ರ ಕರ್ತವ್ಯವೆಂದು ಪರಿಗಣಿಸುತ್ತದೆ. ಬಡವರು, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರ ಪರವಾಗಿ ನಿಲ್ಲುತ್ತದೆ ಜತೆಗೆ ಎಲ್ಲ ಜಾತಿ, ಧರ್ಮ ಮತ್ತು ಪಂಗಡಗಳ ಜನರು ತಮ್ಮ ನ್ಯಾಯಯುತ ಪಾಲನ್ನು ಪಡೆಯುವಂತೆ ಮಾಡುವುದು ಸರ್ಕಾರದ ಗುರಿಯಾಗಿದೆ.
4. ನಮ್ಮ ವ್ಯವಸ್ಥೆಯೊಳಗೆ ಭ್ರಷ್ಟಾಚಾರವು ಸಾಂದ್ರೀಕರಣಗೊಳ್ಳುವ ಮಟ್ಟಕ್ಕೆ ಬೇರು ಬಿಟ್ಟಿದೆ. ಇದನ್ನು ತೊಡೆದು ಹಾಕುವುದು ದೊಡ್ಡ ಸವಾಲು. ಈ ಸವಾಲನ್ನು ಎದುರಿಸಿ, ಭ್ರಷ್ಟಾಚಾರ ಮೂಲೋಚ್ಚಾಟನೆ ಮಾಡಲು ಅಗತ್ಯವಿರುವ ಆಡಳಿತಾತ್ಮಕ, ಶಾಸನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.
5. ಶಾಂತಿಯುತ, ಸಮೃದ್ಧವಾದ, ಸೌಹಾರ್ದಯುತ ಸರ್ವಜನಾಂಗದ ಶಾಂತಿಯ ತೋಟ ನಿರ್ವಿುಸಲು ಬದ್ಧ. ಯಾರನ್ನೂ ಹೊರಗೆ ಇಡದ ಎಲ್ಲರನ್ನೂ ಒಳಗೊಂಡು ‘ಇವ ನಮ್ಮವ’ ಎಂದು ಕೂಡಿ ಬಾಳುವ ನಮ್ಮ ಹಿರಿಯರ ಕನಸನ್ನು ನನಸು ಮಾಡಲು ನನ್ನ ಸರ್ಕಾರ ಬದ್ಧವಾಗಿದೆ.
ವಿಧಾನ ಸಭೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ರಾಜ್ಯಪಾಲರ ಭಾಷಣದ ವೇಳೆಗೆ ಪ್ರತಿಪಕ್ಷ ನಾಯಕನ ಸ್ಥಾನ ಖಾಲಿ ಇತ್ತು. ಹೊಸ ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆದರೂ ಬಿಜೆಪಿ ವರಿಷ್ಠರು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಮಯ ಮೀಸಲಿಟ್ಟಿಲ್ಲ, ಆಸಕ್ತಿಯನ್ನೂ ತೋರಿಸಿಲ್ಲ. ಹೀಗಾಗಿ ಸೋಮವಾರ ಆರಂಭವಾದ ಅಧಿವೇಶನದಲ್ಲಿ ಬಿಜೆಪಿ ಅಕ್ಷರಶಃ ಮುಜುಗರಕ್ಕೊಳಗಾಯಿತು.
ಎರಡು ಬಾರಿ ಶಾಸಕಾಂಗ ಪಕ್ಷದ ಸಭೆ ಸಮಯ ನಿಗದಿಯಾದರೂ ವಿವಿಧ ಕಾರಣಗಳಿಂದ ಮುಂದೂಡಲ್ಪಟ್ಟ ಕಾರಣ, ಸೋಮವಾರ ಕಲಾಪ ಆರಂಭದ ವೇಳೆ ಪ್ರತಿಪಕ್ಷ ನಾಯಕನ ಸ್ಥಾನ ಖಾಲಿ ಉಳಿಯುವಂತಾಯಿತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರತಿಪಕ್ಷ ನಾಯಕನ ಸ್ಥಾನದ ಪಕ್ಕದ ಆಸನದಲ್ಲಿ ಕುಳಿತುಕೊಂಡು ಕಲಾಪದಲ್ಲಿ ಪಾಲ್ಗೊಂಡರು. ಆರಗ ಜ್ಞಾನೇಂದ್ರಗೆ ಮೀಸಲಾಗಿದ್ದ ಆಸನದಲ್ಲಿ ಬೊಮ್ಮಾಯಿ ಕುಳಿತಿದ್ದರಿಂದ ಆರಗ ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳುವಂತಾಯಿತು.
ವಿಧಾನಸಭೆ ಮುಖ್ಯ ಸಚೇತಕರಾಗಿ ರಾಮದುರ್ಗ ಶಾಸಕ ಅಶೋಕ್ ಪಟ್ಟಣ, ವಿಧಾನ ಪರಿಷತ್​ನ ಮುಖ್ಯ ಸಚೇತಕರಾಗಿ ಸಲೀಂ ಅಹ್ಮದ್ ನೇಮಕಗೊಂಡಿದ್ದಾರೆ. 2013ರಿಂದ 2018ರ ಅವಧಿಯ ಕಾಂಗ್ರೆಸ್ ಸರ್ಕಾರದಲ್ಲಿ ಪಟ್ಟಣ ಹಾಗೂ ಸಲೀಂ ಇಬ್ಬರು ಇದೇ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಜೆಡಿಎಸ್ ನಾಯಕರಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಉಪ ನಾಯಕರಾಗಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್್ಕ ನಿಯೋಜಿತರಾಗಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕಳಿಸಿದ ಪಕ್ಷದ ನಿರ್ಣಯದ ಪತ್ರವನ್ನು ಸ್ಪೀಕರ್ ಯು.ಟಿ. ಖಾದರ್ ವಿಧಾನಸಭೆಯಲ್ಲಿ ವಾಚಿಸಿದರು.
ಟಿಬಿಜೆ ವಿಶೇಷ ಪ್ರತಿನಿಧಿ:ನವದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರನ್ನು ನೇಮಕ ಮಾಡಲಾಗಿದೆ. ಸಚಿವ ಸ್ಥಾನದ ಆಕಾಂಕ್ಷಿ ಯಾಗಿದ್ದ ಜಯಚಂದ್ರರನ್ನು ಇದೀಗ ದೆಹಲಿ ವಿಶೇಷ ಪ್ರತಿನಿಧಿ ಹುದ್ದೆಗೆ ನೇಮಕವಾಗಿದ್ದಾರೆ. ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಸಚಿವ ರಾಗಿದ್ದ ಜಯಚಂದ್ರರನ್ನು 2002ರಲ್ಲಿ ಸಂಪುಟದಿಂದ ಕೈ ಬಿಟ್ಟಾಗ ಅವರನ್ನು ದೆಹಲಿ ವಿಶೇಷ ಪ್ರತಿನಿಧಿಯಾಗಿ ನೇಮಿಸಲಾಗಿತ್ತು.
ಸ್ಪೀಕರ್ ಯು.ಟಿ. ಖಾದರ್ ಓದಿದ ಸಂವಿಧಾನದ ಪೀಠಿಕೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರೋಧ ವ್ಯಕ್ತಪಡಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿ ಸದನದಿಂದ ನಿರ್ಗಮಿಸಿದ ನಂತರ ಮತ್ತೆ ಸದನ ಸಮಾವೇಶಗೊಂಡಾಗ ಸಭಾಧ್ಯಕ್ಷರು, ಸ್ವಯಂ ಪ್ರೇರಿತವಾಗಿ ಸಂವಿಧಾನದ ಪೀಠಿಕೆಯನ್ನು ಓದಲಾರಂಭಿಸಿ, ಸದಸ್ಯರು ಇದಕ್ಕೆ ಧ್ವನಿಗೂಡಿಸಬೇಕೆಂದು ಮನವಿ ಮಾಡಿಕೊಂಡರು.
ಪೀಠಿಕೆಯ ಪೂರ್ಣಪಾಠವನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಓದಿ ಮುಗಿಸಿದ ನಂತರ ಎದ್ದುನಿಂತ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ತೀವ್ರ ಆಕ್ಷೇಪ ವ್ಯಕ್ತಿಪಡಿಸಿ, ಅಂಬೇಡ್ಕರ್ ರಚಿಸಿರುವ ಸಂವಿಧಾನದ ಮೂಲ ಪೀಠಿಕೆಗೂ ತಾವು ಓದಿದ ಪೀಠಿಕೆಗೂ ವ್ಯತ್ಯಾಸವಿದೆ ಎಂದರು. ಬಳಿಕ ಸ್ಪೀಕರ್ ಯು.ಟಿ.ಖಾದರ್, ಆಗಿರುವ ಲೋಪವನ್ನು ಸರಿಪಡಿಸಿ ಕೊಳ್ಳಲು ತಾವು ನೀಡಿರುವ ಸಲಹೆಯನ್ನು ಪರಿಗಣಿಸುವುದಾಗಿ ತಿಳಿಸಿದರು.
ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹೈಕಮಾಂಡ್ ಯಾರನ್ನೆ ಆಯ್ಕೆ ಮಾಡಿದರೂ ನಾವು ಸ್ವಾಗತಿಸುತ್ತೇವೆ. ನಮ್ಮ ನಡುವೆ ತಕರಾರಿಲ್ಲ. ನಾನು ರೇಸ್​ನಲ್ಲಿದ್ದೀನಿ ಎನ್ನುವುದನ್ನು ನೀವೆ ಹೇಳಿದ್ದೀರಿ. ತೋರಿಸುತ್ತಿದ್ದೀರಿ. ಒಮ್ಮೊಮ್ಮೆ ರಾಜಕೀಯದಲ್ಲಿ ವ್ಯತ್ಯಾಸಗಳು ಆಗುತ್ತವೆ. ವಿರೋಧ ಪಕ್ಷದ ನಾಯಕನ ಆಯ್ಕೆ ಇಷ್ಟೊತ್ತಿಗೆ ಆಗಬೇಕಿತ್ತು ನಿಜ.
| ಬಸನಗೌಡ ಪಾಟೀಲ ಯತ್ನಾಳ್, ಶಾಸಕ
ಪಕ್ಷದ ಕಚೇರಿಯಲ್ಲಿ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದು ಮೃತಪಟ್ಟ ಬಿಜೆಪಿ ಮುಖಂಡ!

ಏ ಟ್ರೇಲರ್ ಹೈ, ಪಿಚ್ಚರ್ ಅಭಿ ಬಾಕಿ ಹೈ: ಹೆಣ್ಣುಮಕ್ಕಳ ಸಾಧನೆ ಬಗ್ಗೆ ರಾಷ್ಟ್ರಪತಿ ಮುರ್ಮು ಮಾರ್ಮಿಕ ಮಾತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
