ನವದೆಹಲಿ: ಉತ್ತರ ಕರ್ನಾಟಕ ಜನರ ಬಹುದಿನಗಳ ‘ಮಹಾ’ ದಾಹ ನೀಗುವ ಭರವಸೆ ಗೋಚರಿಸಿದೆ. ಮಹದಾಯಿ ನದಿ ನೀರು ಹಂಚಿಕೆ ವಿವಾದ ಕುರಿತಂತೆ ನ್ಯಾ.ಜೆ.ಎಂ. ಪಾಂಚಾಲ್ ನೇತೃತ್ವದ ತ್ರಿಸದಸ್ಯ ಪೀಠದ ನ್ಯಾಯಾಧಿಕರಣ 2018ರ ಆ.14ರಂದು ನೀಡಿದ್ದ ಐತೀರ್ಪಿನ ಅಧಿಸೂಚನೆ ಪ್ರಕಟಣೆಗೆ (ಗೆಜೆಟ್ ನೋಟಿಫಿಕೇಷನ್) ಸುಪ್ರೀಂಕೋರ್ಟ್ ಸಮ್ಮತಿ ನೀಡಿರುವುದು ಇದಕ್ಕೆ ಕಾರಣ.
ಮಹದಾಯಿ ನ್ಯಾಯಾಧಿಕರಣ ಐತೀರ್ಪ ಪ್ರಕಟಿಸಿ 2 ವರ್ಷ ಪೂರ್ಣಗೊಳ್ಳುವ ಹಂತಕ್ಕೆ ಬಂದರೂ ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಿಸದ ಪರಿಣಾಮ ಹಂಚಿಕೆಯಾದ ನೀರನ್ನು ಬಳಸಿಕೊಳ್ಳುವ ಅವಕಾಶ ಗೋವಾ, ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕಿರಲಿಲ್ಲ. ಹೀಗಾಗಿ, ಸುಪ್ರೀಂಕೋರ್ಟ್ ಅಂತಿಮ ತೀರ್ಪು ಏನೇ ಇರಲಿ, ನ್ಯಾಯಾಧಿಕರಣದ ಐತೀರ್ಪಿನ ಅಧಿಸೂಚನೆಯಾದರೆ ಈಗ ನಿಗದಿ ಮಾಡಿರುವ ನೀರನ್ನು ಬಳಸಿಕೊಳ್ಳುತ್ತೇವೆ ಎಂದು ಕರ್ನಾಟಕ ಕೇಂದ್ರ ಸರ್ಕಾರದ ಮುಂದೆ ಪ್ರತಿಪಾದಿಸುತ್ತಲೇ ಇತ್ತು. ಆದರೆ ಗೋವಾ ಸರ್ಕಾರ ಇದಕ್ಕೆ ವಿರೋಧಿಸುತ್ತಲೇ ಇದ್ದುದರಿಂದ ಕೇಂದ್ರ ಸರ್ಕಾರ ಕೂಡ ಏಕಪಕ್ಷೀಯ ನಿರ್ಣಯ ತೆಗೆದುಕೊಳ್ಳುವ ಯಾವುದೇ ರೀತಿಯ ಸಾಹಸಕ್ಕೆ ಮುಂದಾಗಿರಲಿಲ್ಲ.
ಅಚ್ಚರಿಯ ಬೆಳವಣಿಗೆಯಲ್ಲಿ ಗುರುವಾರ ಸುಪ್ರೀಂಕೋರ್ಟ್ ವಿಚಾರಣೆ ವೇಳೆ ಗೆಜೆಟ್ ನೋಟಿಫಿಕೇಷನ್​ಗೆ ನಮ್ಮ ಸಹಮತಿಯೂ ಇದೆ ಎಂಬ ಅಫಿಡವಿಟ್ ಅನ್ನು ಗೋವಾ ಸಲ್ಲಿಸಿತು. ಮಹಾರಾಷ್ಟ್ರದ ವಕೀಲರು ಈ ಮೊದಲೇ ಕರ್ನಾಟಕದ ನಿಲುವಿಗೆ ಒಪ್ಪಿದ್ದರಿಂದ ಅಲ್ಲಿಂದ ಯಾವುದೇ ಅಡೆತಡೆ ಇರಲಿಲ್ಲ. ಗೋವಾ ಕೂಡ ಕರ್ನಾಟಕದ ಬೇಡಿಕೆಗೆ ಸಮ್ಮತಿಸಿರುವುದರಿಂದ ಈ ವಿಷಯಕ್ಕೆ ಸೀಮಿತವಾಗಿ ಹೆಚ್ಚೇನೂ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಅಜಯ್ ರಸ್ತೋಗಿ ದ್ವಿಸದಸ್ಯ ಪೀಠ, ಗೆಜೆಟ್ ನೋಟಿಫಿಕೇಷನ್​ಗೆ ಪೂರಕ ಕ್ರಮ ಕೈಗೊಳ್ಳಬಹುದು ಎಂದು ನಿರ್ದೇಶನ ನೀಡಿತು.
ಒಂದೊಮ್ಮೆ ಗೋವಾ ಪ್ರತಿರೋಧವೊಡ್ಡಿದ್ದರೆ ಅಧಿಸೂಚನೆ ಪ್ರಕಟಣೆ ಸಾಧ್ಯವಾಗುತ್ತಿರಲಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ರಾಜ್ಯಗಳು ಅನುಮೋದಿಸಿದರಷ್ಟೇ ಕೇಂದ್ರ ಸರ್ಕಾರ ನೋಟಿಫಿಕೇಷನ್​ಗೆ ಮುಂದಾಗಬಹುದು. ಕಾವೇರಿ ಜಲ ವಿವಾದ ಪ್ರಕರಣದಲ್ಲೂ ಕರ್ನಾಟಕದ ವಕೀಲರು ಕಾವೇರಿ ನ್ಯಾಯಾಧಿಕರಣದ ಐತೀರ್ಪಿನ ಅಧಿಸೂಚನೆ ಪ್ರಕಟಣೆಗೆ ಒತ್ತಾಯಿಸುತ್ತಿದ್ದರು. ತಮಿಳುನಾಡು ಸೇರಿ ಕೇರಳ ಕೂಡ ಒಪ್ಪಿಗೆ ನೀಡಿದ್ದರಿಂದ ಕೇಂದ್ರ ಸರ್ಕಾರದ ಹಾದಿಯೂ ಸುಗಮವಾಗಿತ್ತು.
ಅಧಿಸೂಚನೆ ಸಂಬಂಧ ರಾಜ್ಯ ಸರ್ಕಾರ ಸುಪ್ರೀಂಗೆ ಮಧ್ಯಂತರ ಅರ್ಜಿಯನ್ನೇನೋ ಸಲ್ಲಿಸಿತ್ತು. ಆದರೆ, ಅಂತಾರಾಜ್ಯ ಜಲವ್ಯಾಜ್ಯ ಕಾಯ್ದೆಯ ಯಾವ ಸೆಕ್ಷನ್ ಅಡಿ ಕೇಂದ್ರದ ಅಧಿಸೂಚನೆಯನ್ನು ಪ್ರಕಟಿಸಬೇಕು ಎಂಬ ಪ್ರಮುಖ ಅಂಶವನ್ನು ರಾಜ್ಯದ ವಕೀಲರು ಅರ್ಜಿಯಲ್ಲಿ ದಾಖಲು ಮಾಡಿರಲಿಲ್ಲ. ಈ ಅರ್ಜಿಯನ್ನು ದೆಹಲಿಯಲ್ಲಿರುವ ರಾಜ್ಯದ ಕಾನೂನು ತಂಡದ ಗಮನಕ್ಕೆ ತಾರದೆಯೇ ಬೆಂಗಳೂರಿನ ವಕೀಲರ ಮೂಲಕ ಸಲ್ಲಿಸಲಾಗಿತ್ತು. ಈ ಲೋಪದೋಷಗಳ ಮಧ್ಯೆಯೂ ಸುಪ್ರೀಂಕೋರ್ಟ್​ನಿಂದ ಸಿಹಿ ಸುದ್ದಿ ಸಿಕ್ಕಿತು ಎಂದು ರಾಜ್ಯದ ಪ್ರಮುಖ ವಕೀಲರೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮಾಹಿತಿಯೇ ಇರಲಿಲ್ಲ!: ಮಹದಾಯಿ ನ್ಯಾಯಾಧಿಕರಣದ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ಸುಪ್ರೀಂಕೋರ್ಟ್ ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಮೂರೂ ರಾಜ್ಯಗಳಿಗೆ ಪರಸ್ಪರ ನೋಟಿಸ್ ಜಾರಿಯಾಗಬಹುದು ಎಂದೇ ರಾಜ್ಯದ ವಕೀಲರು ಸೇರಿ ಸರ್ಕಾರ ಭಾವಿಸಿತ್ತು. ಗೆಜೆಟ್ ನೋಟಿಫಿಕೇಷನ್​ಗೆ ಗೋವಾ ಒಪ್ಪಿಕೊಳ್ಳಲಿದೆ ಎಂಬ ಪೂರ್ವಮಾಹಿತಿ ಯಾರಿಗೂ ಇರಲಿಲ್ಲ. ಆದರೆ ಸುಪ್ರೀಂಕೋರ್ಟ್ ವಿಚಾರಣೆ ಆರಂಭವಾಗುವ 10 ನಿಮಿಷಕ್ಕೆ ಮುನ್ನ ಗೋವಾ ಸರ್ಕಾರ ಗೆಜೆಟ್ ನೋಟಿಫಿಕೇಷನ್​ಗೆ ತನ್ನ ಸಮ್ಮತಿ ನೀಡಲಿದೆ ಎಂಬುದು ಮಹಾರಾಷ್ಟ್ರ ವಕೀಲರ ಗಮನಕ್ಕೆ ಬಂತು. ತಕ್ಷಣವೇ ಈ ಮಾಹಿತಿಯನ್ನು ಕರ್ನಾಟಕದ ವಕೀಲರೊಂದಿಗೆ ಹಂಚಿಕೊಂಡರು. ವಿಚಾರಣೆ ವೇಳೆ ಹಾಜರಿದ್ದ ರಾಜ್ಯದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿಯವರಿಗೂ ಈ ಬಗ್ಗೆ ತಿಳಿಸಲಾಯಿತು. ಕರ್ನಾಟಕದ ಬೇಡಿಕೆ ಬಗ್ಗೆ ಮೊದಲೇ ತಿಳಿದುಕೊಂಡಿದ್ದ ನ್ಯಾಯಮೂರ್ತಿಗಳು, ಗೋವಾದ ಪ್ರಸ್ತಾವನೆಯನ್ನೂ ಗಮನಿಸಿ ಸುಮಾರು 10 ನಿಮಿಷ ಪರಸ್ಪರ ರ್ಚಚಿಸಿದರು. ನಂತರ, ‘ನಿಮ್ಮ ನಡುವೆ ಪರಸ್ಪರ ಸಹಮತಿ ಇರುವುದರಿಂದ ಕರ್ನಾಟಕದ ಅರ್ಜಿಯನ್ನು ಪರಿಗಣಿಸಿ ಕೇಂದ್ರ ಸರ್ಕಾರಕ್ಕೆ ಅಧಿಸೂಚನೆಗೆ ನಿರ್ದೇಶನ ನೀಡುತ್ತಿದ್ದೇವೆ’ ಎಂದು ನ್ಯಾಯಮೂರ್ತಿಗಳು ಪ್ರಕಟಿಸಿದರು.
ರಾಜ್ಯ ಮಾಡಬೇಕಾದ್ದು?
ಕೇಂದ್ರದ ಕಡೆಯಿಂದ ಗೆಜೆಟ್ ನೋಟಿಫಿಕೇಷನ್ ಪ್ರಕಟಣೆಗೆ ಯಾವುದೇ ಕಾರಣಕ್ಕೂ ವಿಳಂಬ ಆಗದಂತೆ ನೋಡಿಕೊಳ್ಳಬೇಕು.
ಮಹದಾಯಿ ಐತೀರ್ಪಿನ ಅನುಷ್ಠಾನದ ಉಸ್ತುವಾರಿ ನೋಡಿಕೊಳ್ಳಲಿರುವ ಮಹದಾಯಿ ನೀರು ನಿರ್ವಹಣಾ ಸಮಿತಿ (ಕಾವೇರಿ ನೀರು ನಿರ್ವಹಣಾ ಸಮಿತಿ ಮಾದರಿಯಲ್ಲಿ) ರಚನೆಗೆ ಕೇಂದ್ರದ ಮೇಲೆ ಒತ್ತಡ ಹೇರಬೇಕು.
ಕಳಸಾ ಬಂಡೂರಿ ಯೋಜನೆ ಸೇರಿದಂತೆ ಮಹದಾಯಿ ನದಿ ನೀರು ಬಳಸಿಕೊಂಡು ಕೈಗೆತ್ತಿಕೊಳ್ಳಲಿರುವ ಯೋಜನೆಗಳಿಗೆ ಪರಿಸರ ಮತ್ತು ಅರಣ್ಯ ಇಲಾಖೆ ಸಮ್ಮತಿ ಪಡೆದುಕೊಳ್ಳಬೇಕು.
ಅದಕ್ಕೂ ಮುನ್ನ ಎಲ್ಲ ಯೋಜನೆಗಳ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರ ಜಲ ಸಂಪನ್ಮೂಲ ಮತ್ತು ಪರಿಸರ-ಅರಣ್ಯ ಇಲಾಖೆಗೆ ಸಲ್ಲಿಸಬೇಕು.
ತೀರ್ಪಿನ ಅನುಕೂಲ
ರಾಜ್ಯಕ್ಕೆ ಸಿಕ್ಕಿರುವ 13 ಟಿಎಂಸಿ ನೀರನ್ನು ಬಳಸಿಕೊಳ್ಳಬಹುದು
ಕಳಸಾ ಬಂಡೂರಿ ಯೋಜನೆ ಕೈಗೆತ್ತಿ ಕೊಳ್ಳಲು ಪೂರಕ ಕ್ರಮ ತೆಗೆದುಕೊಳ್ಳಲು ಮುಂದಾಗಬಹುದು
ಮಹದಾಯಿ ನೀರನ್ನು ಮಲಪ್ರಭಾ ನದಿಗೆ ಹರಿಸಿ ಕುಡಿಯುವ ನೀರು ಪೂರೈಕೆಗೆ ಯೋಜನೆ ಸಿದ್ಧಪಡಿಸಬಹುದು ಮಹದಾಯಿ ಜಲವಿದ್ಯುತ್ ಯೋಜನೆ ಯನ್ನೂ ಕೈಗೆತ್ತಿಕೊಳ್ಳಬಹುದು
ಇದು ನಮ್ಮ ಸುದೀರ್ಘ ಹೋರಾಟಕ್ಕೆ ಸಿಕ್ಕ ಜಯ ಎಂದೇ ಭಾವಿಸುತ್ತೇನೆ. ಅಧಿಸೂಚನೆ ಪ್ರಕಟವಾಗಿ, ನದಿ ನೀರು ನಿರ್ವಹಣಾ ಮಂಡಳಿ ರಚನೆಯಾದ ಬಳಿಕ ರಾಜ್ಯ ಸರ್ಕಾರ ತನ್ನ ಯೋಜನೆಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬಹುದು.
| ಮೋಹನ್ ಕಾತರಕಿ ಸುಪ್ರೀಂಕೋರ್ಟ್​ನಲ್ಲಿ ರಾಜ್ಯದ ಪರ ವಕೀಲರು
ಸುಪ್ರೀಂಕೋರ್ಟ್ ನೀಡಿರುವ ಸೂಚನೆ ಸ್ವಾಗತಾರ್ಹ. ಉತ್ತರ ಕರ್ನಾಟಕದ ಜನರ ಪಾಲಿಗೆ ಇದು ಸಂತಸದ ಸುದ್ದಿ. ನೀರಿನ ಬಳಕೆಗಿದ್ದ ತೊಡಕು ನಿವಾರಣೆಯಾಗಿದೆ. ಕಾಮಗಾರಿ ಕೈಗೊಳ್ಳಲು ಅನುದಾನ ಬಿಡುಗಡೆಗೆ ಒತ್ತಾಯಿಸುತ್ತೇವೆ.
| ಜಗದೀಶ ಶೆಟ್ಟರ್ ಕೈಗಾರಿಕೆ ಸಚಿವ
ಸುಪ್ರೀಂಕೋರ್ಟ್ ರಾಜ್ಯಕ್ಕೆ ಶುಭಸುದ್ದಿ ನೀಡಿದೆ. ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಮುಂದೆ ನಮ್ಮ ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಿದೆ.
| ಯಡಿಯೂರಪ್ಪ ಮುಖ್ಯಮಂತ್ರಿ
ರಾಘವ ಶರ್ಮ ನಿಡ್ಲೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 1 =
Remember me
