ವಿಜಯವಾಣಿ ಸುದ್ದಿಜಾಲ ಕಾರವಾರ/ಅಂಕೋಲಾ
ಮಹಾಮಳೆ ಆರ್ಭಟಕ್ಕೆ ತತ್ತರಿಸಿರುವ ಉತ್ತರ ಕನ್ನಡದಲ್ಲಿ ಮಂಗಳವಾರ ಭೀಕರ ದುರಂತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ ಬದಿಯ ಬೃಹತ್ ಗುಡ್ಡವೊಂದು ಏಕಾಏಕಿ ಜರಿದು ಬಿದ್ದ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟು, ಇನ್ನೂ 6-7 ಜನ ನಾಪತ್ತೆಯಾಗಿರುವ ದುರ್ಘಟನೆ ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಸಂಭವಿಸಿದೆ.
ಶಿರೂರಿನ ಲಕ್ಷ್ಮಣ ಬೊಮ್ಮಯ್ಯ ನಾಯ್ಕ (50), ಅವರ ಪತ್ನಿ ಶಾಂತಿ ನಾಯ್ಕ (45), ಮಗ ರೋಷನ್ (11), ಮಗಳು ಅವಂತಿಕಾ (5), ಭಾವ ಜಗನ್ನಾಥ ನಾಯ್ಕ (60), ಉಪೇಂದ್ರ ನಾಯ್ಕ (45) ನಾಪತ್ತೆಯಾಗಿದ್ದರು. ಅದರಲ್ಲಿ ಲಕ್ಷ್ಮಣ ನಾಯ್ಕ, ಶಾಂತಿ ನಾಯ್ಕ, ಬಾಲಕ ರೋಷನ್, ಆವಂತಿಕಾ ಹಾಗೂ ಒಂದು ಅಪರಿಚಿತ ಶವ ಗಂಗಾವಳಿ ನದಿ ದಂಡೆಯ ಊರುಗಳಲ್ಲಿ ಸಿಕ್ಕಿದೆ. ಕುಸಿದ ಗುಡ್ಡದಡಿ ಸಿಲುಕಿದ್ದ ಕಾರು ಹಾಗೂ 2 ಟ್ಯಾಂಕರ್​ನಲ್ಲಿ ಎಷ್ಟು ಜನ ಇದ್ದರು? ಎಲ್ಲಿಯವರು? ಅವರ ಹೆಸರುಗಳೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 250 ಅಡಿ ಎತ್ತರದ ಗುಡ್ಡದ ಒಂದು ಎಕರೆಯಷ್ಟು ಜಾಗ ಮೂಲ ಗುಡ್ಡದಿಂದ ಬೇರ್ಪಟ್ಟು, ನೆಲಕ್ಕಪ್ಪಳಿಸಿದ್ದರಿಂದ ದುರಂತ ಸಂಭವಿಸಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಅಂಕೋಲಾ- ಕುಮಟಾ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಅಂಕೋಲಾ-ಕುಮಟಾ ಮಾರ್ಗದಲ್ಲಿ ಅಂಕೋಲಾದಿಂದ 10 ಕಿಮೀ ದೂರದ ಶಿರೂರಿನ ಗಂಗಾವಳಿ ನದಿ ದಂಡೆ ಮೇಲೆ ರಾ. ಹೆದ್ದಾರಿ 66 ಹಾದು ಹೋಗಿದೆ.ಹೆದ್ದಾರಿಯನ್ನು ಚತುಷ್ಪಥವಾಗಿ ವಿಸ್ತರಿಸಲು ಕೆಲ ವರ್ಷಗಳ ಹಿಂದೆ 250 ಅಡಿಗಿಂತ ಎತ್ತರದ ಗುಡ್ಡವನ್ನು ಲಂಬವಾಗಿ ಕಡಿಯಲಾಗಿತ್ತು.
ಕಡಿದ ಗುಡ್ಡದಿಂದ ಮಳೆಗಾಲದಲ್ಲಿ ನೀರಿನ ಒರತೆ ಹರಿಯುತ್ತಿತ್ತು. ಕಳೆದ ಮಳೆಗಾಲದಲ್ಲಿ ಅಲ್ಪ ಪ್ರಮಾಣದಲ್ಲಿ ಗುಡ್ಡ ಕುಸಿದಿತ್ತು. ಹೆದ್ದಾರಿಯ ಒಂದೆಡೆ ಗುಡ್ಡ ಇದ್ದರೆ ಇನ್ನೊಂದು ಪಕ್ಕದಲ್ಲಿ 15-20 ಅಡಿ ಕೆಳಗೆ ನದಿ ಇದೆ. ಹೆದ್ದಾರಿ ಪಕ್ಕದಲ್ಲಿ ನದಿಯ ಕಡೆಗಿನ ಜಾಗದಲ್ಲಿ ಲಕ್ಷ್ಮಣ ನಾಯ್ಕ ಕುಟುಂಬ ಟೀ ಸ್ಟಾಲ್ ಇಟ್ಟುಕೊಂಡು ವಾಸವಿತ್ತು. ಹೆದ್ದಾರಿಯಲ್ಲಿ ಹೋಗಿ ಬರುವ ವಾಹನ ಸವಾರರು ಚಹಾ-ತಿಂಡಿ ಸೇವನೆಗಾಗಿ ಅಲ್ಲಿ ನಿಲ್ಲುತ್ತಿದ್ದರು. ಮಂಗಳವಾರ ಬೆಳಗ್ಗೆ 2 ಟ್ಯಾಂಕರ್​ಗಳು, ಒಂದು ಕಾರು ನಿಂತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಂಗಳವಾರ ಬೆಳ್ಳಂಬೆಳಗ್ಗೆ ಸುಮಾರು 1 ಎಕರೆಗೂ ಹೆಚ್ಚು ವಿಸ್ತಾರದ ಗುಡ್ಡದ ಭಾಗ ಏಕಾಏಕಿ ಜರಿದಿದೆ. ಗುಡ್ಡದ ಅವಶೇಷಗಳು 60 ಮೀಟರ್ ಅಗಲದ ಹೆದ್ದಾರಿಯನ್ನು ಮುಚ್ಚಿಹಾಕಿ, ಅದರಾಚೆ 30 ಮೀಟರ್ ದೂರದಲ್ಲಿರುವ ಟೀ ಸ್ಟಾಲ್ ಆಪೋಶನ ಗೈದು ನದಿಗೂ ಬಿದ್ದಿವೆ. ಬಂಡೆಗಲ್ಲು ಸಹಿತ ಮಣ್ಣು ಅಪ್ಪಳಿಸಿದ ರಭಸಕ್ಕೆ ನದಿಯಲ್ಲಿ ಸುನಾಮಿಯಂಥ ಅಲೆ ಎದ್ದು ಇನ್ನೊಂದು ದಡಕ್ಕೆ ಹೋಗಿ ಅಪ್ಪಳಿಸಿ ಅಲ್ಲೂ ಅನಾಹುತಕ್ಕೆ ಕಾರಣವಾಗಿದೆ! ಈ ರೀತಿ ಗುಡ್ಡದ ಭಾಗ ಮಗುಚಿ ನದಿಗೆ ಬಿದ್ದು ಸುನಾಮಿ ಎದ್ದಿದ್ದನ್ನು ಕೇಳಿರಲಿಲ್ಲ ಎಂದು ಶಿರೂರಿನ ಕೆಲ ಹಿರಿಯರು ಹೇಳಿದ್ದಾರೆ.
ಬೃಹತ್ ಬಂಡೆಗಳಿಂದ ಕೂಡಿ ಜರಿದ ಗುಡ್ಡವು ಬಲವಾಗಿ ತಳ್ಳಲ್ಪಟ್ಟಿದ್ದರಿಂದ ಅಡುಗೆ ಅನಿಲ ತುಂಬಿದ ಒಂದು ಟ್ಯಾಂಕರ್ ಲಾರಿ ಹಾಗೂ ಒಂದು ಖಾಲಿ ಟ್ಯಾಂಕರ್ ಲಾರಿ ಗಂಗಾವಳಿ ನದಿಗೆ ಬಿದ್ದು ಕಿಲೋಮೀಟರ್​ಗಟ್ಟಲೇ ದೂರಕ್ಕೆ ಕೊಚ್ಚಿಕೊಂಡು ಹೋಗಿವೆ. ಹೆದ್ದಾರಿ ಪಕ್ಕದ ಚಹಾ ಅಂಗಡಿ ಎದುರು ನಿಲ್ಲಿಸಿದ್ದ ಒಂದು ಕಾರು ಮತ್ತು ಅದರಲ್ಲಿದ್ದವರು, ಚಹಾ ಅಂಗಡಿ ಮಾಲೀಕನ ಕುಟುಂಬದ ಎಲ್ಲ ಐವರು ಸೇರಿ 11ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದರು. ಈ ಪೈಕಿ ಐವರ ಶವ ಸಮೀಪದ ಊರುಗಳಲ್ಲಿ ಗಂಗಾವಳಿ ನದಿ ದಂಡೆಯಲ್ಲಿ ಸಿಕ್ಕಿದ್ದು, ಉಳಿದವರು ಮಣ್ಣಿನಡಿ ಹುದುಗಿಹೋಗಿದ್ದಾರೆಯೋ ಅಥವಾ ನೀರಿನಲ್ಲಿ ಮುಳುಗಿದ್ದಾರೆಯೋ ಎಂಬುದು ತಿಳಿದಿಲ್ಲ. ಘಟನೆಯಲ್ಲಿ 11 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಯಾಚರಣೆ ಚುರುಕು:ಆಗಾಗ ಸುರಿಯುವ ಮಳೆಯ ಮಧ್ಯೆ ಮಣ್ಣು ಮತ್ತು ಬಂಡೆಯನ್ನು ಎಚ್ಚರಿಕೆಯಿಂದ ತೆರವು ಮಾಡುತ್ತ, ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಪತ್ತೆ ಮಾಡುವುದು ಸವಾಲಿನ ಕೆಲಸವಾಗಿದೆ. ಎನ್​ಡಿಆರ್​ಎಫ್ ಮತ್ತು ಇತರ ತಂಡಗಳು ಜೆಸಿಬಿ ಯಂತ್ರ ಬಳಸಿ ಕಾರ್ಯಾಚರಣೆ ನಡೆಸುತ್ತಿವೆ. ಒಂದು ಕಡೆ ಗುಡ್ಡ, ಇನ್ನೊಂದು ಕಡೆ ನದಿ ಇರುವ ಶಿರೂರಿನಲ್ಲಿ ತೆರವುಗೊಳಿಸಿದ ಅವಶೇಷಗಳನ್ನು ಸುರಿಯಲು ಸಮೀಪದಲ್ಲೇ ಜಾಗ ಇಲ್ಲದಿರುವುದು ಸಹ ತೊಡಕಾಗಿದೆ.
5 ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ
. ರಾಷ್ಟ್ರೀಯ ಹೆದ್ದಾರಿ- 66ರಲ್ಲಿದೆ ಕಡಿದ ಗುಡ್ಡ
. ಒಂದು ಬದಿ ಗುಡ್ಡ, ಮತ್ತೊಂದೆಡೆ ನದಿ ಇದೆ
. ಕಡಿದ ಗುಡ್ಡದಿಂದ ಮಳೆಗಾಲದಲ್ಲಿ ನೀರಿನ ಒರತೆ
. ಕಳೆದ ಮಳೆಗಾಲದಲ್ಲಿ ಸ್ವಲ್ಪವೇ ಕುಸಿದಿತ್ತು ಗುಡ್ಡ
. ನದಿ ಕಡೆ ಲಕ್ಷ್ಮಣ ನಾಯ್ಕರ ಟೀ ಅಂಗಡಿ ಇತ್ತು
. ಲಕ್ಷ್ಮಣ ನಾಯ್ಕರ ಕುಟುಂಬದ ಐವರಿದ್ದರು
. ಟೀ ಸ್ಟಾಲ್​ಗೆ ವಾಹನ ಸವಾರರು ಬರುತ್ತಿದ್ದರು
. ಮಂಗಳವಾರ 1 ಎಕರೆ ವಿಸ್ತಾರದ ಗುಡ್ಡ ಜರಿತ
. ಟೀ ಸ್ಟಾಲ್ ಆಪೋಷನ ಪಡೆದುಕೊಂಡ ಗುಡ್ಡ
. ಗುಡ್ಡದ ಭಾಗ ಮಗುಚಿ ನದಿಗೆ ಬಿದ್ದು ಅವಘಢ
. ಗುಡ್ಡ ನದಿಗೆ ತಳ್ಳಲ್ಪಟ್ಟಿದ್ದರಿಂದ ಟೀ ಅಂಗಡಿ ಧ್ವಂಸ
. ಅನಿಲ ಟ್ಯಾಂಕರ್, ಖಾಲಿ ಟ್ಯಾಂಕರ್ ನದಿ ಪಾಲು
. ಹೋಟೆಲ್ ಬಳಿ ಇದ್ದ ಕಾರಿನ ಮೇಲೆ ಭೂಕುಸಿತ

. ಅರ್ಧ ರಾಜ್ಯದಲ್ಲಿ ಭಾರಿ ಮಳೆ
. ದ.ಕನ್ನಡ, ಉಡುಪಿ ಅಸ್ತವ್ಯಸ್ತ
. ಬೆಳಗಾವಿಯ 5 ಸೇತುವೆ ಜಲಾವೃತ
. 110 ಅಡಿ ತಲುಪಿದ ಕೆಆರ್​ಎಸ್
. ಕೊಡಗಲ್ಲಿ ಸರ್ಕಾರಿ ಶಾಲೆಗೆ ಹಾನಿ
. ಶಿವಮೊಗ್ಗದ ನದಿಗಳು ಬಹುತೇಕ ಭರ್ತಿ
. ಜಿಲ್ಲೆಯಲ್ಲಿ 20 ಮನೆಗಳಿಗೆ ತೀವ್ರ ಹಾನಿ
. ಹಲವೆಡೆ ನೂರಾರು ವಿದ್ಯುತ್ ಕಂಬ ಧರೆಗೆ

ಸುನಾಮಿ ಸೃಷ್ಟಿ:ಜರಿದ ಗುಡ್ಡ ಬೃಹತ್ ಬಂಡೆ ಸಹಿತ ಹೆದ್ದಾರಿ ದಾಟಿ ಪಕ್ಕದಲ್ಲಿನ ಗಂಗಾವಳಿ ನದಿ ಪಾತ್ರಕ್ಕೂ ಹೋಗಿ ಅಪ್ಪಳಿಸಿದ್ದರಿಂದ ಬೃಹತ್ ಸುನಾಮಿಯಂಥ ಅಲೆಗಳೆದ್ದಿದೆ. ಪರಿಣಾಮ ನದಿಯ ಇನ್ನೊಂದು ದಡದಲ್ಲಿಯ ಎರಡು ಮನೆಗಳು ಕೊಚ್ಚಿಹೋಗಿವೆ! ಇಂಥ ಅನೂಹ್ಯ ಘಟನೆಯು ಕೆಲವೇ ಸೆಕೆಂಡ್​ಗಳಲ್ಲಿ ಸಂಭವಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − two =
Remember me
