ಬೆಂಗಳೂರು:ಲಾಕ್​ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲೇ ಕುಳಿತು ದಿನಸಿ ಪದಾರ್ಥ, ಹಣ್ಣು, ತರಕಾರಿ ಹಾಗೂ ಔಷಧ ಖರೀದಿಗೆ ಬಿಬಿಎಂಪಿ ರೂಪಿಸಿರುವ ಹೋಮ್ ಲೈನ್ ಹೋಮ್ ಡೆಲಿವರಿ ಸೇವೆ ಸಾವಿರಾರು ಜನರಿಗೆ ಅನುಕೂಲ ಕಲ್ಪಿಸಿದೆ. ಆದರೆ, ಕೆಲವೊಂದು ಸುಧಾರಣೆಗಳನ್ನು ಕೈಗೊಂಡರೆ ಮತ್ತಷ್ಟು ಪರಿಣಾಮಕಾರಿಯಾಗುತ್ತದೆ.
ಸಾಮಾನ್ಯ ಹೋಂ ಡೆಲಿವರಿ ಸಂಸ್ಥೆಗಳಿಗಿಂತ ಅತ್ಯಂತ ಕಡಿಮೆ ದರದಲ್ಲಿ (ಕೇವಲ 10 ರೂ.) ಮನೆಗೆ ಉತ್ಪನ್ನ ತಲುಪಿ ಸುವ ಹಾಗೂ ಸ್ಥಳೀಯ ದಿನಸಿ ಅಂಗಡಿ ಗಳಿಗೂ ಅನುಕೂಲ ಮಾಡಿಕೊಡುವ ಯೋಜನೆಗೆ ಮಂಗಳವಾರ ಚಾಲನೆ ಸಿಕ್ಕಿದೆ. ಆದರೆ ಕರೆ ಮಾಡಿ ಅಗತ್ಯ ವಸ್ತು ಆರ್ಡರ್ ಮಾಡಲು ತಿಳಿಸಲಾಗಿರುವ ದೂರವಾಣಿಗೆ ಪ್ರತಿಕ್ರಿಯೆ ಸಿಗುತ್ತಿಲ್ಲ, ಖಾತ್ರಿಯಾದ ಅನೇಕ ಆರ್ಡರ್ ಡೆಲಿವರಿ ಆಗುತ್ತಿಲ್ಲ ಎಂಬ ದೂರುಗಳಿವೆ.
ತುರ್ತು ಸಂದರ್ಭದ ಸಂಕಷ್ಟ
ನೆರವು: 080-61914960 ಸಂಖ್ಯೆಗೆ ಕರೆ ಮಾಡಿ ಅಗತ್ಯ ವಸ್ತು ಗಳನ್ನು ತಿಳಿಸಿದರೆ ಆರ್ಡರ್ ಖಾತ್ರಿ ಮಾಡಿ ಮನೆಗೆ ತಲುಪಿಸಲಾಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ. ವಾಟ್ಸ್ ಆಪ್​ನಲ್ಲಿ ಆರ್ಡರ್ ಖಚಿತಪಡಿಸುವ ಬಾಟ್, ಒಂದು ಸಾಮಾನ್ಯ ಸಂದೇಶವನ್ನು ಇಂಗ್ಲಿಷ್​ನಲ್ಲಿ ಕಳಿಸುತ್ತದೆ. ಇದು ತುರ್ತು ಸಂದರ್ಭವಾದ್ದರಿಂದ ನೀವು ಆರ್ಡರ್ ಮಾಡಿದ ವಸ್ತು ಒದಗಿಸಲು ಸಾಧ್ಯವಾಗದಿದ್ದರೆ, ಲಭ್ಯವಿಲ್ಲ ಎಂದು ಭಾವಿಸಬೇಕು. ಅಗತ್ಯ ವಸ್ತು ಪೂರೈಸಲು ಡೆಲಿವರಿ ಪಾರ್ಟ್​ನರ್ ಪ್ರಯತ್ನಿಸುತ್ತಾರೆ, ಖಚಿತಪಡಿಸಲು ನಿಮಗೆ ಕರೆ ಮಾಡಬಹುದು ಎಂದು ತಿಳಿಸಲಾಗುತ್ತದೆ. ಅಂದರೆ, ಆರ್ಡರ್ ಮಾಡಿದ ವಸ್ತು ತಲುಪಿಸಲು ಸಾಕಷ್ಟು ತೊಂದರೆಗಳಿವೆ ಎಂಬುದನ್ನು ಪ್ರಾರಂಭದಲ್ಲೆ ತಿಳಿಸಲಾಗುತ್ತದೆ.
ಹಲವು ಕಂಪನಿಗಳ ಸಹಯೋಗ: ಕಲೆರಾ ಎಂಬ ಸಂಸ್ಥೆಯು ವಾಟ್ಸ್​ಆಪ್​ನಲ್ಲಿ ಬಾಟ್(ಕೃತಕ ಬುದ್ಧಿಮತ್ತೆ) ಮೂಲಕ ಆರ್ಡರ್ ಪಡೆಯುವ ಕಾರ್ಯ ಮಾಡುತ್ತಿದೆ. ರ್ಯಾಪಿಡೋ, ಡಂಜೋ, ಎಲಿಫೆಂಟ್ ಇಯರ್ ಕನ್ಸಲ್ಟಿಂಗ್, ಐ ಸ್ಪಿರಿಟ್ ಫಾಮ್ರ್ ಈಜಿ, ಸ್ಪಾಟ್ ಕೇರ್, ಬಿಗ್ ಬಜಾರ್, ಸ್ಟೋರ್ ಸೆ, ಶಾಪ್ ಜಿ, ಕ್ಲೋವರ್ ವೆಂಚರ್ಸ್ ಮತ್ತು ನಿಂಜಾ ಕಾರ್ಟ್ ಸಂಸ್ಥೆಗಳು ಅಗತ್ಯ ವಸ್ತು ಒದಗಿಸುವುದು ಹಾಗೂ ತಲುಪಿಸುವಲ್ಲಿ ಸಹಕಾರ ಒದಗಿಸುತ್ತಿವೆ.
198 ವಾರ್ಡ್​ಗೂ ವಿಸ್ತರಣೆ
ಲಾಕ್​ಡೌನ್ ಅವಧಿಯಲ್ಲಿ ನಾಗರಿಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಬೆಂಗಳೂರು ದಕ್ಷಿಣ ಪೊಲೀಸ್ ವಿಭಾಗದ ವ್ಯಾಪ್ತಿಯಲ್ಲಿ ‘ಹೋಮ್ ಡೆಲಿವರಿ’ ಸಹಾಯವಾಣಿಗೆ ಏ.12ಕ್ಕೆ ಚಾಲನೆ ನೀಡಲಾಗಿದೆ. ಈ ಭಾಗದಲ್ಲಿ 7 ದಿನದಲ್ಲಿ 11,500ಕ್ಕಿಂತ ಹೆಚ್ಚಿನ ನಾಗರಿಕರು ಈ ಸೇವೆಯ ಸೌಲಭ್ಯ ಪಡೆದುಕೊಂಡಿದ್ದು, ಯೋಜನೆ ಯಶಸ್ವಿಯಾಗಿದೆ. ಆದ್ದರಿಂದಲೇ ಎಲ್ಲ 198 ವಾರ್ಡ್​ಗಳಿಗೂ ವಿಸ್ತರಿಸಲಾಗಿದೆ.
ಲಭ್ಯತೆ ಮಾಹಿತಿ ಕೊರತೆ
ಯಾವ ವಸ್ತು ಎಷ್ಟು ಪ್ರಮಾಣದಲ್ಲಿ ಲಭ್ಯವಿವೆ ಎಂಬ ಮಾಹಿತಿ ಸಿಗುವುದಿಲ್ಲ. ಜತೆಗೆ, ಯಾವ ವಸ್ತುವಿನ ಬೆಲೆಯೂ ತಿಳಿಯುವುದಿಲ್ಲ. ಡೆಲಿವರಿ ಮಾಡುವ ಮುನ್ನ ಕರೆ ಮಾಡಿದರೆ ಅಥವಾ ವಸ್ತುಗಳು ಮನೆಗೆ ಬಂದಾಗಲೇ ಬೆಲೆ ತಿಳಿಯುತ್ತದೆ. 2 ಪಪ್ಪಾಯ, ತಲಾ 3 ಬಾಳೆ ಹಣ್ಣು, ಸೇಬು, ಮಾವಿನ ಹಣ್ಣಿಗೆ 500 ರೂ. ದರ ಪಡೆದಿದ್ದಾರೆ ಎಂದು ಶೇಶು ಎಂಬುವರು ಟ್ವೀಟ್ ಮಾಡಿದ್ದಾರೆ. ವಾಟ್ಸ್​ಆಪ್​ನಲ್ಲಾದರೂ ವಸ್ತುಗಳ ಬೆಲೆ ತಿಳಿಸಿದರೆ ಅನುಕೂಲವಾಗುತ್ತದೆ ಎನ್ನುವುದು ಗ್ರಾಹಕರ ಅಭಿಪ್ರಾಯ.
ಡೆಲಿವರಿ ಖಾತ್ರಿಯಾಗಲಿ
ವಾಟ್ಸ್​ಆಪ್​ನಲ್ಲಿ ಏಜಿ ಎಂದು ಸಂದೇಶ ಕಳಿಸಿದರೆ ಅತ್ತ ಕಡೆಯಿಂದ ಬಾಟ್(ಕೃತಕ ಬುದ್ಧಿಮತ್ತೆ) ಉತ್ತರಿಸುತ್ತದೆ. ಆರ್ಡರ್ ತಲುಪಬೇಕಾದ ಸ್ಥಳ, ಅಗತ್ಯ ವಸ್ತು ನಮೂದಿಸಿದರೆ ಮನೆಗೆ ಡೆಲಿವರಿ ಮಾಡಲಾಗುತ್ತದೆ. ವಸ್ತುಗಳ ದರದ ಜತೆಗೆ 10 ರೂ. ಮಾತ್ರ ಡೆಲಿವರಿ ಶುಲ್ಕ ನೀಡಬೇಕು ಎಂದು ತಿಳಿಸಲಾಗಿತ್ತು. ಆದರೆ ದೂರವಾಣಿ ಕರೆಯನ್ನು ಸಿಬ್ಬಂದಿಯಾಗಲಿ, ಆಟೋಮೇಟೆಡ್ ವ್ಯವಸ್ಥೆಯಾಗಲಿ ಸ್ವೀಕರಿಸಲಿಲ್ಲ. ವಾಟ್ಸ್ ಆಪ್ ಸಂದೇಶಕ್ಕೆ ಕ್ಷಣಮಾತ್ರದಲ್ಲಿ ಬಾಟ್ ಪ್ರತಿಕ್ರಿಯಿಸುತ್ತ ಹೋಯಿತು. ಲೊಕೇಷನ್ ಪಡೆಯಿತು, ನಂತರ ಅಗತ್ಯ ವಸ್ತು ನಮೂದಿಸಲು ತಿಳಿಸಿತು. ವಸ್ತುಗಳ ಪಟ್ಟಿ ನೀಡಿದ ಕೂಡಲೇ ಆರ್ಡರ್ ಖಚಿತ ಪಡಿಸಿ ನೋಂದಣಿ ಸಂಖ್ಯೆಯನ್ನೂ ಒದಗಿಸಿತು. ಒಮ್ಮೆ ಖಾತ್ರಿಯಾದ ಡೆಲಿವರಿ ಇಂತಿಷ್ಟು ನಿಮಿಷದಲ್ಲಿ ಅಥವಾ ಗಂಟೆಯಲ್ಲಿ ತಲುಪುತ್ತದೆ ಎಂಬ ಖಾತ್ರಿ ನೀಡಿ ತಲುಪಿಸಿದರೆ ವ್ಯವಸ್ಥೆ ಮೇಲೆ ಗ್ರಾಹಕರಿಗೆ ನಂಬಿಕೆ ಬರುತ್ತದೆ.
ದಿನಸಿ ಅಂಗಡಿಗಳಿಗೆ ಅನುಕೂಲ
ಹೋಂ ಡೆಲಿವರಿ ಕಾರ್ಯಕ್ಕಾಗಿ ಬೆಂಗಳೂರಿನ 18 ಸಾವಿರ ತರಕಾರಿ, ದಿನಸಿ ಮತ್ತು ಔಷಧಗಳ ಅಂಗಡಿಗಳನ್ನು ಜಿಯೋ ಮ್ಯಾಪಿಂಗ್ ಮಾಡಿ ಸಂಯೋಜಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿತ್ತು. ಇದರಿಂದ, ಸಂಕಷ್ಟದ ಸಮಯದಲ್ಲಿ ಸ್ಥಳೀಯ ದಿನಸಿ ಅಂಗಡಿಗಳಿಗೆ, ತರಕಾರಿ ವ್ಯಾಪಾರಿಗಳಿಗೆ ಅನುಕೂಲವಾಗುವುದರಿಂದ ಉತ್ತಮ ಯೋಜನೆ. ಆದರೆ, ಮಲ್ಲೇಶ್ವರದ ಪ್ರತಿಷ್ಠಿತ ದಿನಸಿ ಅಂಗಡಿ, ಮತ್ತೊಂದು ಮಧ್ಯಮ ದರ್ಜೆಯ ದಿನಸಿ ಅಂಗಡಿಯಲ್ಲಿ ಈ ಕುರಿತು ವಿಚಾರಿಸಿದಾಗ, ನೋಂದಣಿ ಆಗಿಲ್ಲದಿರುವುದು ಕಂಡುಬಂತು. ಇದು, ಒಳ್ಳೆಯ ಯೋಜನೆ. ಲಾಕ್​ಡೌನ್ ಸಮಯದಲ್ಲಿ ಆಗಿರುವ ನಷ್ಟ ಭರಿಸಿಕೊಳ್ಳಲು ಇದು ಸಹಕಾರಿ. ಕೇಳಿದರೆ ನೋಂದಣಿ ಮಾಡಿಕೊಳ್ಳುತ್ತೇವೆ ಎಂದು ಮಾಲೀಕರು ತಿಳಿಸಿದ್ದಾರೆ.
|ರಮೇಶ ದೊಡ್ಡಪುರ
ಸಮಾಧಾನ ತಂದ ಸಡಿಲಿಕೆ; ಜನಜೀವನ ಸಹಜಸ್ಥಿತಿಗೆ ತರಲು ವಿನಾಯಿತಿಗಳ ಸರಣಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 1 =
Remember me
