ಪ್ರಕೃತಿಯ ಒಡನಾಟದಲ್ಲಿಯೇ ನಮ್ಮ ಪ್ರತಿಯೊಂದು ಸಂಸ್ಕೃತಿಯು ಬೆಳೆದಿದೆ. ಹಾಗಾಗಿ ಪ್ರಕೃತಿ ಸಂರಕ್ಷಣೆ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ಆಧುನಿಕ ಐಶಾರಾಮಿ ಜಗತ್ತು ಸೃಷ್ಟಿಸುವ ಭರದಲ್ಲಿ ನೈಸರ್ಗಿಕ ಮಹತ್ವವನ್ನು ಮರೆಯದಿರೋಣ. ಕಾಡು ಮತ್ತು ಜೀವವೈವಿಧ್ಯವನ್ನು ಉಳಿಸುವ ಕಾರ್ಯ ನಿತ್ಯನಿರಂತರವಾಗಿ ಮಾಡೋಣ.
ಕಳೆದ ಸಾವಿರಾರು ವರ್ಷಗಳಿಂದಲೂ ಪ್ರಕೃತಿಯ ಮೇಲೆ ಆಘಾತಗಳು ನಡೆಯುತ್ತ ಬಂದಿವೆ. ಕೃಷಿಗಾಗಿ, ಭೂಮಿಗಾಗಿ ಕಾಡನ್ನು ಕಡಿದರು. ಜನವಸತಿ ಪ್ರದೇಶ ನಿರ್ವಿುಸಲು ಸುತ್ತಲಿರುವ ಕಾಡುಗಳನ್ನು ಕಡಿದ ಪರಿಣಾಮ ಕಾಡುಪ್ರಾಣಿಗಳು ಅಲ್ಲಿಂದ ದೂರ ಹೋಗುವ ಪರಿಸ್ಥಿತಿ ಬಂತು. ಹೀಗೆ ಅನೇಕ ಕಾರಣಗಳಿಂದ ಕಾಡು, ವನಗಳನ್ನು ನಾಶ ಮಾಡುವ ಪರಿಸ್ಥಿತಿ ಬೆಳೆಯುತ್ತ ಬಂತು. ಅಂತೆಯೇ ಕಾಡನ್ನು ರಕ್ಷಣೆ ಮಾಡುವ ನಿಟ್ಟಿನಲ್ಲೂ ಅನೇಕರು ತಮ್ಮ ಕೈಲಾದಷ್ಟು ಶ್ರಮ ಪಟ್ಟಿದ್ದಾರೆ. ಅನೇಕ ಪರಿಸರ ಪ್ರೇಮಿಗಳು ನಿತ್ಯನಿರಂತರವಾಗಿ ಪ್ರಕೃತಿ ಮತ್ತು ಪ್ರಕೃತಿ ಸಂಪತ್ತಿನ ರಕ್ಷಣೆಗಾಗಿ ಕಟಿಬದ್ಧರಾಗಿ ಶ್ರಮಿಸುತ್ತಿದ್ದಾರೆ. ಅಷ್ಟೇ ಅಲ್ಲ, ಬುದ್ಧ, ಮಹಾವೀರ, ಕೃಷ್ಣ ಮತ್ತು ಇತರ ಅನೇಕ ಮಂದಿ ಮಹಾತ್ಮರು, ಗಣ್ಯರು ತಮ್ಮ ಬೋಧನೆಗಳಲ್ಲಿ ಮನುಷ್ಯನಷ್ಟೇ ಪ್ರಾಮುಖ್ಯವನ್ನು ವನ್ಯಜೀವಿಗಳಿಗೆ, ವನ್ಯರಕ್ಷಣೆಗೆ ಕೊಟ್ಟು, ‘ಕಾಡು ಬೆಳೆಸಿ, ನಾಡು ಉಳಿಸಿ’ ಅನ್ನುವಂತಹ ಸಂದೇಶ ನೀಡುತ್ತ ಬಂದಿದ್ದಾರೆ. ಈ ಎಲ್ಲ ಸಂದೇಶಗಳನ್ನು ನಾವು ಸರಿಯಾಗಿ ತಿಳಿದುಕೊಂಡು ಕಾಡು, ನಾಡು ಇವೆರಡೂ ಕೂಡ ಉಳಿಸಿ ಬೆಳೆಸಬೇಕಾದ ಸಂದರ್ಭವು ಒದಗಿ ಬಂದಿದೆ.
ಇತ್ತೀಚೆಗೆ ನಾನೊಂದು ಪುಸ್ತಕವನ್ನು ಓದುತ್ತಿದ್ದೆ. ಅದರಲ್ಲಿ ಕಾಡನ್ನು ಸರಿಯಾಗಿ ತಿಳಿದುಕೊಂಡಿರುವ ಒಬ್ಬ ವ್ಯಕ್ತಿ ಕಾಡನ್ನೆಲ್ಲ ಸಂಚರಿಸುತ್ತಾನೆ. ಕಾಡಿನಲ್ಲಿರುವ ಮರಗಳ ಪರಿಚಯ ಅವನಿಗೆ ಇರುತ್ತದೆ. ಕಾಡಿನಲ್ಲಿರುವ ಕೆಲವು ಮರಗಳು ಅವನಿಗೆ ಎಲ್ಲಿಯವರೆಗೆ ಪರಿಚಯವಿತ್ತೆಂದರೆ ಯಾರಿಗಾದರೂ ಗಾಯವಾದರೆ, ಕಾಯಿಲೆ ಬಂದರೆ ಅಥವಾ ಆಯುರ್ವೆದ ಔಷಧದ ಅಗತ್ಯವಿದ್ದರೆ ಅವನು ತಕ್ಷಣ ಕಾಡಿಗೆ ಹೋಗಿ ಇಂತಹ ಗಿಡದಲ್ಲಿ ಇಂತಹದ್ದು ಮದ್ದಿದೆ ಮತ್ತು ಈ ಕಾಯಿಲೆ, ಗಾಯಕ್ಕೆ ಈ ಮದ್ದು ಮಾಡಿದರೆ ಪರಿಹಾರ ಎಂದು ಆ ಮದ್ದನ್ನು ಸಂಗ್ರಹ ಮಾಡುತ್ತಿದ್ದ. ಆತ ಪೇಪರ್ ಮಿಲ್ಲಿನ ಅಧಿಕೃತ ಪ್ರತಿನಿಧಿಯಾಗಿರುತ್ತಾನೆ. ಅಂದರೆ ಆತ ಕೆಲಸಕ್ಕೆ ಇರುವುದಲ್ಲ. ಬದಲಿಗೆ ಎಲ್ಲೆಲ್ಲಿ ಮರಗಳಿವೆ? ಎಲ್ಲೆಲ್ಲಿ ಮರಗಳ ಸಂರಕ್ಷಣೆಯಾಗಬೇಕಾಗಿದೆ ಎಂದು ಆತ ತಿಳಿದುಕೊಂಡಿರುತ್ತಾನೆ. ಈ ಕಾಡನ್ನು ಕಡಿಯುವುದು ಯಾಕೆ ಎಂಬ ಪ್ರಶ್ನೆಗೆ ಅವನು ಹೇಳುವ ಪ್ರಕಾರ, ‘ಸಾಗುವಾನಿ ಮತ್ತು ಒಳ್ಳೆಯ ಫಲವತ್ತಾದ ಹಲಸಿನ, ಮಾವಿನ ಮರಗಳು ಪೀಠೋಪಕರಣಕ್ಕೆ ಬೇಕಾಗಿರುವುದರಿಂದ ಕಡಿದು ಬಳಸಲಾಗುತ್ತಿದೆ. ಇನ್ನೂ ಕೆಲವು ವೃಕ್ಷಗಳನ್ನು ನಾಶ ಮಾಡಲಿಕ್ಕೆ ಕಾರಣ ಅವುಗಳ ಮೌಲ್ಯ. ಅಪರೂಪದ ತಳಿ ಎಂಬ ಕಾರಣದಿಂದ ಅವುಗಳಿಗೆ ಹೆಚ್ಚಿನ ಮೌಲ್ಯವಿದ್ದು, ಕಡಿದು ಮಾರಾಟ ಮಾಡುವ ವ್ಯವಹಾರದೃಷ್ಟಿಯೂ ಸೇರಿದೆ. ಇನ್ನೂ ಕೆಲವು ಮರಗಳನ್ನು ಪೇಪರ್ ತಯಾರಿಕೆಗೆ ಕಡಿಯಲಾಗುತ್ತದೆ’ ಎನ್ನುತ್ತಾನೆ. ಹೀಗೆ ಮರಗಳನ್ನು ವಿವಿಧ ಉದ್ದೇಶಗಳಿಗೆ ಕಡಿಯಲಾಗಿ ಅರಣ್ಯನಾಶ ಮಾಡಲಾಗುತ್ತಿದೆ.
ನಾನು ಏನನ್ನಾದರೂ ಪೇಪರ್​ನಲ್ಲಿ ಬರೆದು ಬೇಡವೆಂದು ಬಿಸಾಡಿದರೆ ನನ್ನ ಮಗಳು ಶ್ರದ್ಧಾ ಯಾವಾಗಲೂ ನನ್ನನ್ನು ಬಹಳ ಹೆದರಿಸುತ್ತಿದ್ದಳು. ‘ಅಪ್ಪಾ, ನೀವು ವಿನಾಃಕಾರಣ ಪೇಪರ್ ಬಳಸಬೇಡಿ, ಆ ಪೇಪರ್ ಮಾಡಲು ಎಷ್ಟು ಮರಗಳನ್ನು ಉಪಯೋಗಿಸುತ್ತಾರೆ ಗೊತ್ತಾ?’ ಎಂದು ಕೇಳುತ್ತಿದ್ದಳು. ಅದನ್ನು ಕೇಳಿ ಕೇಳಿ ನನ್ನ ಶ್ರೀಮತಿಯವರು (ಹೇಮಾವತಿಯವರು) ಕೂಡ ಟಿಶ್ಯು ಬಳಕೆ ಮಾಡುವುದನ್ನು ಕಡಿಮೆ ಮಾಡಿದರು. ಟಿಶ್ಯು ಪೇಪರ್ ಅನ್ನು ಕೂಡ ಮರದಿಂದಲೇ ತಯಾರಿಸಬೇಕಾಗುತ್ತದೆ ಎಂದು ಆದಷ್ಟು ಜಾಗ್ರತೆ ವಹಿಸುತ್ತಿದ್ದರು.
ಕಾಡುಗಳಲ್ಲಿ ಅನೇಕ ಮರಗಳನ್ನು ಕಡಿದು ಬಳಿಕ ನೆಟ್ಟ ಮರಗಳು ಯಾವುದು ಎಂದರೆ ನೀಲಗಿರಿ. ಇದು ಸಾಫ್ಟ್​ವುಡ್- ಬಹಳ ಮೃದುವಾದ ಮರ. ಇದು ಪೇಪರ್ ತಯಾರಿಕೆಗೆ ಅತ್ಯಂತ ಉಪಯುಕ್ತ ಮರ. ಇನ್ನು ಲಾಭದಾಯಕವಾದಂತಹ ಸಾಗವಾನಿ ಮರ, ಅಕೇಶಿಯಾ, ಮ್ಯಾಂಜಿಯಮ್ ಮುಂತಾದ ಗಿಡಗಳು ಬಹಳ ವೇಗವಾಗಿ ಬೆಳೆಯುತ್ತವೆ ಎಂದು ಸರ್ಕಾರ ಒಂದು ಕಾಲದಲ್ಲಿ ಬಹಳ ಪ್ರಚಾರ ಕೊಟ್ಟಿತ್ತು. ಸರ್ಕಾರಿ ಭೂಮಿಗಳಲ್ಲಿ ಲಕ್ಷಾಂತರ-ಕೋಟ್ಯಂತರ ಎಕರೆ ಪ್ರದೇಶಗಳಲ್ಲಿ ಈ ಗಿಡಗಳನ್ನು ಬೆಳೆಸಲಾಯಿತು. 25 ವರ್ಷಗಳ ನಂತರ ಒಳ್ಳೆಯ ಮರಗಳು ಸಿಗುತ್ತಿದ್ದವು. ಆದರೆ ಕಾಡಿನಲ್ಲಿರುವಂತಹ ಯಾವುದೇ ಪ್ರಾಣಿಗಳಿಗೂ ಉಪಯೋಗವಾಗುತ್ತಿರಲಿಲ್ಲ. ಕಾಡಿನಲ್ಲಿದ್ದ ಪ್ರಾಣಿಗಳಿಗೆ ಚಿಗುರು, ಹಣ್ಣುಹಂಪಲು ಮತ್ತು ಕೆಲವಾರು ರೀತಿಯ ಆಹಾರಗಳು ಇತರ ಮರಗಳಿಂದ ಸಿಗುತ್ತಿದ್ದವು. ಅವುಗಳನ್ನು ತಿಂದು ಬದುಕುತ್ತಿದ್ದವು. ಆದರೆ ಈ ಮರಗಳಿಂದ (ಅಕೇಶಿಯಾ, ಮ್ಯಾಂಜಿಯಮ್ ಅವುಗಳಿಗೆ ಆಹಾರ ದೊರೆಯುತ್ತಿರಲಿಲ್ಲ. ಹಾಗಾಗಿ ಕಾಡಿನಲ್ಲಿದ್ದ ಪ್ರಾಣಿಗಳೆಲ್ಲ ನಾಡಿಗೆ ಬರಲಾರಂಭಿಸಿದವು, ಈಗಲೂ ಬರುತ್ತಿವೆ ಎಂಬುದು ನಮಗೆಲ್ಲ ತಿಳಿದಿರುವ ವಿಷಯ. ಇಲಿ, ಹೆಗ್ಗಣ, ಹಾವು, ಕೋತಿಗಳು ಮಾತ್ರವಲ್ಲ ಆನೆ, ಚಿರತೆಗಳು ಕೂಡ ನಾಡಿಗೆ ಬರುತ್ತವೆ. ಅವುಗಳಿಗೆ ತಮ್ಮ ಬದುಕಿನ, ಅಳಿವು ಉಳಿವಿನ ಪ್ರಶ್ನೆಯಿಂದಾಗಿ ಆಹಾರ ಅರಸಿಕೊಂಡು ಊರಿಗೆ ಬರುತ್ತವೆ. ಇಲ್ಲಿಗೆ (ನಾಡಿಗೆ) ಬಂದು ಮನುಷ್ಯರು ಬೆಳೆದ ಒಳ್ಳೆಯ ಬೆಳೆಗಳನ್ನು ತಿನ್ನುತ್ತವೆ. ಅವುಗಳನ್ನು ಕಂಡ ತಕ್ಷಣ ಜನರು ಅವುಗಳನ್ನು ಹೇಗೆ ಕೊಲ್ಲುವುದು ಎನ್ನುವುದರ ಬಗ್ಗೆ ಯೋಚಿಸುತ್ತಾರೆ.
ಬಸವಣ್ಣನವರ ವಚನದಂತೆ, ‘ನಿಜ ನಾಗರ ಕಂಡರೆ ಹೊಡೆದು ಕೊಲ್ಲುವರೈಯ್ಯ ಕಲ್ಲನಾಗರ ಕಂಡರೆ ಹಾಲೆರೆವರೈಯ್ಯ’ ಎನ್ನುವುದು ಸತ್ಯವೆಂದು ಭಾಸವಾಗುತ್ತದೆ. ಒಂದಕ್ಕೊಂದು ಸಂಬಂಧ ಇರುವ ವಿಚಾರಗಳು. ಕೆಲವು ವರ್ಷಗಳ ಹಿಂದೆ ಮೈಸೂರಿನ ಸಮೀಪದ ಪಕ್ಷಿಧಾಮಕ್ಕೆ ಪಕ್ಷಿಗಳು ಕಡಿಮೆ ಬಂದಿದ್ದವು. ಇಲ್ಲವಾದರೆ ಯಥೇಚ್ಛವಾಗಿ ಅಂದರೆ ಸುಮಾರು 16 ಸಾವಿರದಷ್ಟು ಪಕ್ಷಿಗಳು ವಿದೇಶಗಳಿಂದ ಹಾಗೂ ವಿವಿಧೆಡೆಗಳಿಂದ ಬಂದು ಮೊಟ್ಟೆಗಳನ್ನು ಇಟ್ಟು ಸಂತಾನೋತ್ಪತ್ತಿ ಮಾಡಿಕೊಂಡು ಮರಿಗಳೊಂದಿಗೆ ಹೋಗುತ್ತಿದ್ದವು. ಆದರೆ ಆ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಬರಲೇ ಇಲ್ಲ. ಕಾರಣ ಏನೆಂದು ಕೇಳಿದರೆ, ವಿದೇಶಗಳಲ್ಲಿ ಸಮುದ್ರದ ಬಳಿ ಏಡಿಗಳು ಸಾಕಷ್ಟು ಪ್ರಮಾಣದಲ್ಲಿ ಇರಲಿಲ್ಲ. ಹಾಗಾಗಿ ಆಹಾರ ಸಿಗದೆ ಪಕ್ಷಿಗಳು ಸಮುದ್ರೋಲ್ಲಂಘನ ಮಾಡಲಿಲ್ಲವಂತೆ. ಸಮುದ್ರವನ್ನು ದಾಟುವಾಗ ಏಡಿಗಳು ಅವುಗಳ ಆಹಾರ. ಆದರೆ ಆ ವರ್ಷ ಏಡಿಗಳ ಸಂಖ್ಯೆ ಕಡಿಮೆಯಾದ ಕಾರಣ ಪಕ್ಷಿಗಳಿಗೆ ಆಹಾರ ಕೊರತೆಯಾಗಿ ಸಮುದ್ರ ದಾಟಲು ಶಕ್ತವಾಗದೆ ಸಮುದ್ರಯಾನ ಮಾಡುವುದನ್ನು ಕಡಿಮೆ ಮಾಡಿದ್ದವು.
ನಾವು ಪ್ರಕೃತಿಯ ಇಕೋ ಸಿಸ್ಟಮ್ ಬಗ್ಗೆ ಮಾತನಾಡುತ್ತೇವೆ. ‘ಇಕೋ ಸಿಸ್ಟಮ್ ಎಂದರೆ ಪ್ರಕೃತಿಯ ಸಮತೋಲನ. ಪ್ರಕೃತಿಯ ಸ್ವಾಭಾವಿಕವಾದಂತಹ ಕೆಲವು ಪದ್ಧತಿಗಳನ್ನು ಬದಲಾಯಿಸುವಂಥ ಕಾರ್ಯಗಳು ನಡೆದಾಗ ಪ್ರಕೃತಿಯ ಸಮತೋಲನಕ್ಕೆ ಧಕ್ಕೆ ಉಂಟಾಗುತ್ತದೆ. ಕೃಷಿ ಉದ್ದೇಶಕ್ಕಾಗಿ ಬೆಲೆಬಾಳುವ ಮರಗಳನ್ನು ಕಡಿದ ಪರಿಣಾಮ ಪ್ರಕೃತಿಯ ಸಮತೋಲನಕ್ಕೆ ಧಕ್ಕೆ ಉಂಟಾಯಿತು. ಹಾಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸುವುದು ಅನಿವಾರ್ಯ.
ಒಬ್ಬರು ರಬ್ಬರ್ ತೋಟದಲ್ಲಿ ಜೇನುಸಾಕಾಣೆ ಮಾಡಿದರು. ಜೇನುಸಾಕಾಣೆ ಮಾಡುವಾಗಲೂ, ರಬ್ಬರ್ ಗಿಡ ಯಾವುದೇ ಆಹಾರಗಳನ್ನು ಪ್ರಾಣಿ, ಪಕ್ಷಿಗಳಿಗೆ ಕೊಡುವುದಿಲ್ಲ. ಆದರೆ ಈ ಜೇನುಗಳು ಹೂವುಗಳ ಮಕರಂದದಿಂದ ಜೇನು ತಯಾರಿ ಮಾಡಿಕೊಳ್ಳುತ್ತವೆ ಎಂಬುದು ಗೊತ್ತಿರುವ ವಿಚಾರ. ಆದರೆ ಈ ರಬ್ಬರ್ ಗಿಡಕ್ಕೆ ಸಿಂಪಡಿಸಿದ ಔಷಧಗಳು ಈ ಜೇನುನೊಣಗಳನ್ನು ನಾಶ ಮಾಡಿ ಜೇನಿನ ಗೂಡು ಕೂಡ ಖಾಲಿಯಾಗುವಂತೆ ಮಾಡಿವೆ ಎಂದು ನಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿಕರೊಬ್ಬರು ತಿಳಿಸುತ್ತಾರೆ.
ಫಸಲನ್ನು ಹೆಚ್ಚು ಪಡೆಯಬೇಕು ಎಂದು ವಿಮಾನದ ಮೂಲಕ ಎಂಡೋಸಲ್ಪಾನ್ ರಾಸಾಯನಿಕ ಕೀಟನಾಶಕಗಳನ್ನು ಬಳಸಿದ ಪರಿಣಾಮವಾಗಿ ನೂರಾರು ಜನರಿಗೆ ಅದರಿಂದ ತೊಂದರೆ ಆಯಿತು. ಕೆಲವರು ಅಂಗವಿಕಲರಾದರು, ಹುಟ್ಟುವ ಮಗುವೂ ಅಂಗವಿಕಲತೆ ಹಾಗೂ ಬುದ್ಧಿಭ್ರಮಣೆ ಹೊಂದಿದ್ದನ್ನು ನಾವು ಕಂಡಿದ್ದೇವೆ. ಬಳಿಕ ಸರ್ಕಾರ ಈ ಅನಾಹುತಕ್ಕೆ ಪರಿಹಾರ ಕೊಡಲು ಪ್ರಾರಂಭಿಸಿತು. ಇದನ್ನೆಲ್ಲ ಗಮನಸಿದಾಗ ಒಂದು ವಿಷಯ ಸ್ಪಷ್ಟವಾಗುತ್ತದೆ ಅದೇನೆಂದರೆ ಪ್ರಕೃತಿಯ ವಿರುದ್ಧವಾಗಿ ನಡೆದರೆ ಆಪತ್ತು ಬೆನ್ನ ಹಿಂದೆಯೇ ಇರುತ್ತದೆ. ಕೆಲವಾರು ಜನ ತಮ್ಮ ಸ್ವಾರ್ಥಕ್ಕಾಗಿ ಮಾಡುವ ಪ್ರಕೃತಿಯ ನಾಶದ ಕಾರ್ಯಗಳನ್ನು ಪ್ರಕೃತಿ ನಾಶ ಪಡಿಸಿ ತನ್ನ ಸಮತೋಲನ ಕಾಪಾಡಿಕೊಳ್ಳುತ್ತದೆ ಎಂದು ನೆನಪಿನಲ್ಲಿಟ್ಟುಕೊಳ್ಳಬೇಕು.
ಪ್ರಕೃತಿಯಲ್ಲಿ ಎಲ್ಲ ಜೀವಸಂಕುಲಗಳೂ ಬದುಕಬೇಕು. ಪ್ರಾಣಿಗಳು, ಪಕ್ಷಿಗಳು ಪ್ರಕೃತಿಯ ಒಂದು ಅವಿಭಾಜ್ಯ ಭಾಗವಾಗಿದ್ದು, ಅರಿವಿನ ಜ್ಞಾನ ಹೊಂದಿರುವ ಮನಷ್ಯ ಎಲ್ಲವನ್ನೂ ಸಂರಕ್ಷಿಸಿಕೊಂಡು ಬಾಳಿದರೆ ಉತ್ತಮವಾಗಿ ಜೀವಿಸಲು ಸಾಧ್ಯವಾಗುತ್ತದೆ. ಪ್ರಕೃತಿಯನ್ನು ಹಚ್ಚ ಹಸಿರಾಗಿಡೋಣ, ಸ್ವಚ್ಛವಾಗಿರಿಸೋಣ, ಜೀವಿಗಳನ್ನು ಸಂರಕ್ಷಿಸೋಣ. ಬದುಕು ನೀಡಿದ ಈ ಭೂಮಿಗೆ ಋಣಿಯಾಗಿರೋಣ.
ಪ್ರಕೃತಿಯ ಆಕ್ರಂದನ ನಮ್ಮ ಕಿವಿಗೆ ಕೇಳಬೇಕಿದೆ. ಅರಣ್ಯ ಸಂರಕ್ಷಣೆಗೆ ಗರಿಷ್ಠವಾದ ಕಾರ್ಯಗಳನ್ನು ಕೈಗೊಳ್ಳಬೇಕು. ಮರ-ಗಿಡಗಳನ್ನು ನೆಟ್ಟು ಅರಣ್ಯವನ್ನು ಬೆಳೆಸುವುದರ ಜೊತೆಗೆ ಜೀವವೈವಿಧ್ಯ ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲರೂ ಪಣ ತೊಡಬೇಕಿದೆ. ಪ್ರಕೃತಿಯ ಒಡನಾಟದಲ್ಲಿಯೇ ನಮ್ಮ ಪ್ರತಿಯೊಂದು ಸಂಸ್ಕೃತಿಯು ಬೆಳೆದಿದೆ. ಹಾಗಾಗಿ ಪ್ರಕೃತಿ ಸಂರಕ್ಷಣೆ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ಆಧುನಿಕ ಐಶಾರಾಮಿ ಜಗತ್ತು ಸೃಷ್ಟಿಸುವ ಭರದಲ್ಲಿ ನೈಸರ್ಗಿಕ ಮಹತ್ವವನ್ನು ಮರೆಯದಿರೋಣ.
ಪ್ರಕೃತಿಯ ಮಡಿಲಲ್ಲಿದ್ದ ಅನೇಕ ಜೀವವೈವಿಧ್ಯ ಈಗಾಗಲೇ ನಶಿಸಿದೆ. ಇದೇ ರೀತಿ ಪ್ರಕೃತಿಗೆ ಹಾನಿ ಮಾಡಿದರೆ ಮುಂದೊಂದು ದಿನ ಪ್ರಕೃತಿ ತನ್ನ ಸಮತೋಲನವನ್ನು ಸಂಪೂರ್ಣ ಕಳೆದುಕೊಂಡು ಮನುಷ್ಯನ ಅಸ್ತಿತ್ವಕ್ಕೂ ಸಂಚಕಾರವಾಗಬಹುದು. ತನ್ನ ಸ್ವಾರ್ಥದಿಂದಾಗಿ ತನ್ನ ಅಳಿವಿಗೆ ತಾನೇ ನಾಂದಿ ಹಾಡಬಹುದು. ಹಾಗಾಗಿ ಪ್ರಕೃತಿಯನ್ನು ಸಂರಕ್ಷಿಸಿ ಜೀವವೈವಿಧ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಸ್ವಚ್ಛ ಪರಿಸರವನ್ನು ಬಳುವಳಿಯಾಗಿ ಕೊಡುವುದರ ಬಗ್ಗೆ ನಮ್ಮ ಮನ ಸದಾ ಮಿಡಿಯಲಿ ಎನ್ನುವುದು ನಮ್ಮ ಆಶಯ. ಬದುಕು ಮತ್ತು ಬದುಕಗೊಡು-ಜಿಯೋ ಔರ್ ಜೀನೆದೋ ಎನ್ನುವಂತೆ ನಾವು ಬದುಕಬೇಕು, ಇತರರೂ ಬದುಕುವಂತೆ ನೋಡಿಕೊಳ್ಳಬೇಕು ಎನ್ನುವುದು ಧರ್ಮದ ಸಂದೇಶ.
ಚಿತ್ರರಂಗದಲ್ಲಿ ‘ಸಾರಥಿ’ಗಿರುತ್ತ ಉಳಿವು​? ಮುಂದಿನ ಚಿತ್ರಗಳ ಕಥೆಯೇನು? ಹೀಗಿದೆ ವರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 17 =
Remember me
