ಎಲ್ಲರೂ ಒಟ್ಟಿಗೆ ಇದ್ದಾಗ ನೋವಿನಲ್ಲಿ ಕೂಡ ನಲಿವನ್ನು ಕಾಣುವ ಅವಕಾಶ ಇರುತ್ತದೆ. ಮನೆಯ ಯಾರಾದರೂ ಸದಸ್ಯ ಏನಾದರೂ ಸಮಸ್ಯೆಗೆ ಸಿಲುಕಿಕೊಂಡಾಗ ಅಥವಾ ದುಃಖಕ್ಕೆ ಈಡಾದಾಗ ಸಾಂತ್ವನ ಹೇಳುವ ಹೃದಯಗಳು ಇರುತ್ತವೆ. ‘ನಾನಿದ್ದೇನೆ ಹೆದರಬೇಡ’ ಎಂದು ಧೈರ್ಯ ತುಂಬುವ ಮನಸುಗಳು ಇರುತ್ತವೆ. ಆಗ ಎಂತಹ ಪ್ರಪಾತಕ್ಕೆ ಬಿದ್ದವನಿಗೂ ಎದ್ದು ನಿಲ್ಲುವ ಚೈತನ್ಯ ಬರುತ್ತದೆ.
ಮನೆಯಲ್ಲಿ ಎರಡು ಪಂಕ್ತಿಯಲ್ಲಿ ಊಟ ನಡೆಯುತ್ತಿದೆ. ಹದಿನೈದು, ಹದಿನಾರು ಜನರು ಕುಳಿತಿದ್ದಾರೆ. ಮಕ್ಕಳು, ಯುವಕರು, ಮಧ್ಯವಯಸ್ಕರು, ವೃದ್ಧರು ಹೀಗೆ ಬಹುತೇಕ ಎಲ್ಲ ವಯೋಮಾನದವರು ಇದ್ದಾರೆ. ಒಬ್ಬರು ಸಾಂಬಾರು ಎಂದರೆ ಮತ್ತೊಬ್ಬರಿಗೆ ಮಜ್ಜಿಗೆ ಬೇಕು. ಇನ್ನೊಬ್ಬರು ಪಲ್ಯ ಬಡಿಸಿ ಎನ್ನುತ್ತಾರೆ. ಊಟ ಬಡಿಸುವವರಿಗೆ ಎಷ್ಟು ಶಕ್ತಿ ಮತ್ತು ತಾಳ್ಮೆ ಇದ್ದರೂ ಸಾಲದು. ಸ್ಪಲ್ಪವೂ ಸಿಟ್ಟು ಅಥವಾ ಬೇಜಾರು ಮಾಡಿಕೊಳ್ಳಬಾರದು. ಒಮ್ಮೊಮ್ಮೆ ರುಚಿಯಾದ ಪದಾರ್ಥ ಹೆಚ್ಚು ಹಾಕಿಸಿಕೊಂಡು ನಂತರ ಊಟ ಮಾಡುವವರಿಗೆ ಕಡಿಮೆ ಬೀಳುವ ಸಂಭವ. ಅಂತಹ ಸಂದರ್ಭದಲ್ಲಿ ಯಾರಿಗೂ ತೊಂದರೆ ಆಗದ ರೀತಿಯಲ್ಲಿ, ಮುಜುಗರ ಆಗದಂತೆ ಉಪಾಯದಿಂದ, ಜಾಣ್ಮೆಯಿಂದ ಸನ್ನಿವೇಶವನ್ನು ನಿಭಾಯಿಸಬೇಕು. ಸ್ವಲ್ಪ ಹೆಚ್ಚುಕಡಿಮೆಯಾದರೂ ಯಜಮಾನ ಸಿಟ್ಟು ಮಾಡುತ್ತಾನೆ. ಅದರಲ್ಲೂ ಮನೆಗೆ ಯಾರಾದರೂ ಅತಿಥಿಗಳು ಬಂದಾಗಲಂತೂ ಹೆಚ್ಚುವರಿ ಎಚ್ಚರಿಕೆ ತೆಗೆದುಕೊಳ್ಳಲೇಬೇಕು. ಏಕೆಂದರೆ ಕುಟುಂಬದ ಮರ್ಯಾದೆ ಪ್ರಶ್ನೆ.
ಅವಿಭಕ್ತ ಕುಟುಂಬಗಳಲ್ಲಿ ಕಂಡುಬರುವ ಸಾಮಾನ್ಯ ದೃಶ್ಯ ಇದು. ಅದು ಒಂದು ಬಗೆಯಲ್ಲಿ ಸಮೂಹಗಾನ. ಎಲ್ಲರೂ ಅವರವರ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋದರೆ ಕುಟುಂಬ ಚೆಂದ. ಎಲ್ಲಿಯಾದರೂ ಸ್ವಲ್ಪ ಏರುಪೇರು ಆಯಿತೋ ಬಿಕ್ಕಟ್ಟು ಗ್ಯಾರಂಟಿ. ಭಾರತವು ವಿಶ್ವಕ್ಕೆ ಕೊಟ್ಟ ಅಮೂಲ್ಯ ಕೊಡುಗೆಗಳಲ್ಲಿ ಕುಟುಂಬ ವ್ಯವಸ್ಥೆ ಸಹ ಪ್ರಮುಖವಾದುದು. ‘ತಾನುಂಟು ಮೂರು ಲೋಕವುಂಟು’ ಎಂದು ಗತ್ತು ಗೈರತ್ತು ತೋರಿಸುವ ಸಂಸ್ಕೃತಿಯಲ್ಲಿ ಬೆಳೆದವರಿಗೆ ಭಾರತದ ಕುಟುಂಬ ವ್ಯವಸ್ಥೆ ಒಂದು ಅದ್ಭುತದಂತೆ, ಅಚ್ಚರಿಯಂತೆ ಭಾಸವಾಗುತ್ತದೆ. ಮತ್ತಿನ್ನೇನು? ವಿವಿಧ ವಯೋಮಾನದ, ವಿಭಿನ್ನ ಹಿನ್ನೆಲೆಯ- ಮನಸ್ಥಿತಿಯ ಜನರು ಒಂದೇ ಸೂರಿನಡಿಯಲ್ಲಿ, ಭಿನ್ನಾಭಿಪ್ರಾಯಗಳ ನಡುವೆಯೂ ಜೀವನ ಸಾಗಿಸುವುದು ತಮಾಷೆಯ ಮಾತಲ್ಲ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚು ಮಹತ್ವ ಕೊಡುವ ಪಾಶ್ಚಿಮಾತ್ಯರಿಗೆ ಕೂಡು ಕುಟುಂಬದ ಪರಿಕಲ್ಪನೆಯೇ ಬರಲಿಕ್ಕಿಲ್ಲ. ಸಣ್ಣಪುಟ್ಟ ಕಾರಣಕ್ಕೂ ಹೊಂದಾಣಿಕೆ ಸಮಸ್ಯೆ ಕಂಡುಬರುವ ಇಂದಿನ ಕಾಲದಲ್ಲಿ ನಮ್ಮ ದೇಶದಲ್ಲಿ ಸಹ ಈಗಿನ ಪೀಳಿಗೆಗೆ ಅವಿಭಕ್ತ ಕುಟುಂಬ ಎಂಬುದು ಅಪರಿಚಿತ ಎಂಬ ವಾತಾವರಣ ಇದೆ.
ಅವಿಭಕ್ತ ಕುಟುಂಬದ ಯಜಮಾನ ಎಂದರೆ ಒಂದು ಬಗೆಯಲ್ಲಿ ಮುಖ್ಯಮಂತ್ರಿ ಇದ್ದ ಹಾಗೆ. ಅವನ ಮಾತಿಗೆ ಎದುರಾಡುವ ಧೈರ್ಯ ಎಲ್ಲರಿಗೂ ಇರುವುದಿಲ್ಲ. ಅದರಲ್ಲೂ ಕೆಲವು ಮನೆಯ ಹೆಂಗಸರು, ಸೊಸೆಯರು ಅವನ ಎದುರಿಗೆ ನಿಲ್ಲುವ ಧೈರ್ಯ ಸಹ ತೋರಿಸುವುದಿಲ್ಲ. ಹಾಗಂತ ಅಧಿಕಾರ ಇದೆ ಎಂದು ಆತ ಬೇಕಾಬಿಟ್ಟಿ ವರ್ತಿಸುವ ಹಾಗಿಲ್ಲ. ಆತ ಸರ್ವಾಧಿಕಾರಿ ಅಲ್ಲ. ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಇತರ ಸದಸ್ಯರ ಅಭಿಪ್ರಾಯ ಆಲಿಸಬೇಕು. ಕುಟುಂಬದ ಗೌರವ ಕಾಪಾಡಿಕೊಂಡು, ಸಮತೋಲನ ತಪ್ಪದಂತೆ ಹೊಣೆ ನಿರ್ವಹಣೆ ಮಾಡಬೇಕು. ಎಲ್ಲರ ಮನಸ್ಥಿತಿ ಅರಿತು ಅದಕ್ಕೆ ತಕ್ಕಂತೆ ವ್ಯವಹರಿಸಬೇಕು. ಮನೆಯ ಎಲ್ಲ ಸದಸ್ಯರ ಮಕ್ಕಳ ಓದು, ಮದುವೆ ಜವಾಬ್ದಾರಿ ನಿಭಾಯಿಸಬೇಕು. ಎಲ್ಲರೂ ಒಂದಾಗಿ ದುಡಿದು ಮನೆಯ ಆರ್ಥಿಕ ಅಭಿವೃದ್ಧಿ ಆಗುವಂತೆ ನೋಡಿಕೊಳ್ಳಬೇಕು. ಯಜಮಾನಿಕೆ ಎಂಬುದು ಅಧಿಕಾರವೂ ಹೌದು; ಹೊಣೆಗಾರಿಕೆಯೂ ಹೌದು. ಯಜಮಾನ ಈ ಹೊಣೆಯನ್ನು ಸರಿಯಾಗಿ ನಿರ್ವಹಣೆ ಮಾಡಲಾಗದೆ ಎಷ್ಟೋ ಕುಟುಂಬಗಳು ತೊಂದರೆ ಪಟ್ಟಿದ್ದಿದೆ. ಅದೇ ವೇಳೆ, ಪ್ರತಿ ನಿರ್ಣಯವನ್ನೂ ಸರ್ವಾನುಮತದಿಂದಲೆ ಕೈಗೊಳ್ಳುವುದು ಕೂಡ ಅಸಾಧ್ಯ. ಕೆಲವು ಸಂದರ್ಭದಲ್ಲಿ ಒಬ್ಬನೇ ನಿರ್ಣಯ ಕೈಗೊಂಡು ಜಾರಿಗೆ ತರಬೇಕಾಗುತ್ತದೆ. ಇಲ್ಲವಾದಲ್ಲಿ ಸಮಯ ಹಾಗೂ ಆರ್ಥಿಕ ನಷ್ಟದ ಸಾಧ್ಯತೆ ಇರುತ್ತದೆ.
ಇನ್ನು ಅವಿಭಕ್ತ ಕುಟುಂಬಗಳಲ್ಲಿ ನಡೆಯುವ ಮದುವೆ, ಮುಂಜಿ ಇತ್ಯಾದಿ ಶುಭಕಾರ್ಯಗಳ ಗಮ್ಮತ್ತೇ ಬೇರೆ. ಮಕ್ಕಳು, ಹೆಣ್ಣುಮಕ್ಕಳು, ಸೊಸೆಯಂದಿರು, ಹೀಗೆ ಎಲ್ಲರೂ ಅವರವರ ಕಾರ್ಯದಲ್ಲಿ ತೊಡಗಿ, ಹಾಸ್ಯ, ತಮಾಷೆ ಮಾಡುತ್ತ ಸಡಗರವನ್ನು ಪಸರಿಸುತ್ತಾರೆ. ಇದನ್ನು ನೋಡುವುದೇ ಒಂದು ಸಂಭ್ರಮ. ಇದು ಒಂದು ಕಡೆಗಾದರೆ, ನವ ವಿವಾಹಿತರು ಎದುರಿಸುವ ಸಮಸ್ಯೆಯೇ ಬೇರೆ ಬಗೆಯದು. ಹೊಸದಾಗಿ ಮದುವೆಯಾಗಿ ಬಂದವಳಿಗೆ ಗಂಡನ ಹತ್ತಿರ ನೂರೆಂಟು ಮಾತಾಡಬೇಕೆಂಬ ಬಯಕೆ. ಆದರೆ ಇದು ಸುಲಭವಲ್ಲ. ಏಕಾಂತದಲ್ಲಿ ಮಾತಾಡಲು ಅವಕಾಶ ಬೇಕಲ್ಲ. ಹೀಗಾಗಿ ಎಷ್ಟೋ ಸಲ ಕಣ್ಣಲ್ಲೇ ಮಾತಾಡುವ ಅನಿವಾರ್ಯತೆ. ಕಣ್ಣು ಕಣ್ಣು ಕಲೆತಾಗ ಮನದ ಉಯ್ಯಾಲೆ ಜೀಕುತ್ತದೆ.
ಹಾಗಂತ, ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಎಲ್ಲವೂ ಸುಗಮ, ಸರಾಗ ಎಂದು ಹೇಳುವ ಹಾಗಿಲ್ಲ. ಹಿಂದೆಲ್ಲ ಅಸಮಾಧಾನ ಇದ್ದರೂ ತೋರಿಸಿಕೊಳ್ಳದೆ ಹೊಂದಿಕೊಂಡು ಹೋಗುವುದು ಅನಿವಾರ್ಯ ಇತ್ತು. ಏಕೆಂದರೆ ಬಹುಮುಖ್ಯವಾಗಿ ಆರ್ಥಿಕ ಸ್ವಾವಲಂಬನೆ ಇರಲಿಲ್ಲ. ಒಂದೊಮ್ಮೆ ಭಿನ್ನಾಭಿಪ್ರಾಯದಿಂದ ಬೇರೆ ಮನೆ ಮಾಡಿಕೊಂಡು ಹೋದರೆ ಜೀವನ ಸಾಗಿಸುವಷ್ಟು ಆದಾಯ ಮೂಲ ಬೇಕಲ್ಲ. ಅದರಲ್ಲೂ ಕೃಷಿ ಮನೆತನಗಳಲ್ಲಿ ಎಷ್ಟು ಕುಟುಂಬಗಳು ಸಾಕಷ್ಟು ಭೂಮಿ ಹೊಂದಿರುತ್ತವೆ? ಹಾಗೇ ಒಂದು ಮನೆ ಎಂದ ಮೇಲೆ ಪ್ರತಿಯೊಬ್ಬರೂ ತಮ್ಮದೇ ಆದ ವ್ಯಕ್ತಿತ್ವ ಹೊಂದಿರುತ್ತಾರೆ. ಬೇರೆ ಬೇರೆ ವಿಷಯಗಳಲ್ಲಿ ಭಿನ್ನ ಭಿನ್ನ ಅಭಿಪ್ರಾಯ ಸಹಜ. ಇನ್ನೇನು ಹಗ್ಗ ತುಂಡಾಗುತ್ತದೆ ಎನ್ನುವ ಹಂತದಲ್ಲಿ ಹಿಸೆ ಅರ್ಥಾತ್ ಬೇರೆಯಾಗುವುದು ಅನಿವಾರ್ಯ. ಆದರೆ ಎಲ್ಲರೂ ಒಟ್ಟಿಗೆ ಇದ್ದಾಗ ನೋವಿನಲ್ಲಿ ಕೂಡ ನಲಿವನ್ನು ಕಾಣುವ ಅವಕಾಶ ಇರುತ್ತದೆ. ಮನೆಯ ಯಾರಾದರೂ ಸದಸ್ಯ ಏನಾದರೂ ಸಮಸ್ಯೆಗೆ ಸಿಲುಕಿಕೊಂಡಾಗ ಅಥವಾ ದುಃಖಕ್ಕೆ ಈಡಾದಾಗ ಸಾಂತ್ವನ ಹೇಳುವ ಹೃದಯಗಳು ಇರುತ್ತವೆ. ‘ನಾನಿದ್ದೇನೆ ಹೆದರಬೇಡ’ ಎಂದು ಧೈರ್ಯ ತುಂಬುವ ಮನಸುಗಳು ಇರುತ್ತವೆ. ಆಗ ಎಂತಹ ಪ್ರಪಾತಕ್ಕೆ ಬಿದ್ದವನಿಗೂ ಎದ್ದು ನಿಲ್ಲುವ ಚೈತನ್ಯ ಬರುತ್ತದೆ. ಆದರೆ ವರ್ತಮಾನದ ಜೀವನ ಶೈಲಿಯಲ್ಲಿ, ವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಮನೆಯಲ್ಲಿ ಗಂಡ-ಹೆಂಡತಿ ಮತ್ತು ಮಕ್ಕಳು ಮಾತ್ರ ಇರುವ ಸನ್ನಿವೇಶದಲ್ಲಿ, ಹೀಗೆ ನೋವು-ನಲಿವುಗಳಲ್ಲಿ ಜೊತೆಯಾಗುವವರು ಸಿಗುವುದಿಲ್ಲ. ಕಷ್ಟಕ್ಕೂ ಅವರೇ ಜೊತೆ; ದುಃಖಕ್ಕೂ ಅವರೇ ಸಾಥ್. ಆಸರೆಯಾಗಿ ನಿಲ್ಲುವ ಬೇರೆ ಹೆಗಲು ಇರುವುದಿಲ್ಲ. ಏನೇ ಇದ್ದರೂ, ಒಮ್ಮೊಮ್ಮೆ ಗದರಿಸುವ, ಮರುಕ್ಷಣವೇ ಪ್ರೀತಿಸುವ, ಹೀಗೆ ತಮ್ಮ ವರ್ತನೆಯ ಮೂಲಕವೇ ಜೀವನಪಾಠ ಹೇಳುವ ಹಿರಿಯರು ಇಲ್ಲದ ಮನೆ ಭಣಭಣ.
***
ಸಮಕಾಲೀನ ಭಾರತದ ರಾಜಕಾರಣದಲ್ಲಿ ನರೇಂದ್ರ ಮೋದಿ ಅವರಷ್ಟು ಚರ್ಚೆ ಹುಟ್ಟುಹಾಕಿದ, ವಿಮರ್ಶೆಗೆ ಗುರಿಯಾದ, ಹೊಗಳಿಕೆ-ತೆಗಳಿಕೆ ಗಳಿಸಿದ ಮತ್ತೊಬ್ಬ ನಾಯಕ ಸಿಗುವುದಿಲ್ಲ. ಈಗಲೂ ಹಾಗೇ. ಮೋದಿಯವರು ತಮ್ಮ ನಡೆಗಳ ಮೂಲಕವೇ ಎಲ್ಲರನ್ನೂ ಚಕಿತಗೊಳಿಸುತ್ತಾರೆ. ಎದುರಾಳಿಗಳು ಊಹಿಸದ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದಾರೆ. ಸುಮ್ಮನೆ ಗಮನಿಸಿ. ಈ ಸಲ ಚುನಾವಣ ಪ್ರಚಾರದ ನಂತರ ಕನ್ಯಾಕುಮಾರಿಯಲ್ಲಿ ಧ್ಯಾನಕ್ಕೆ ತೆರಳುವ ಮುಖಾಂತರ ಮೋದಿ ಅಚ್ಚರಿಯಲ್ಲಿ ಕೆಡವಿದರು. ಅವರ ಸ್ಟೈಲ್ ಹಾಗೆ. ಕೆಲವರಿಗೆ ಮೋದಿ ಏನು ಮಾಡಿದರೂ ಸರಿ. ಮೋದಿ ಸರಿಯಾದುದನ್ನೇ ಮಾಡುತ್ತಾರೆ ಎಂಬುದು ಇಂಥವರ ವಾದ. ಇನ್ನು ಕೆಲವರಿಗೆ ಮೋದಿ ಮಾಡಿದ್ದೆಲ್ಲವೂ ತಪ್ಪು. ಮೋದಿ ಏನು ಹೇಳಿದರೂ ಅದರಲ್ಲಿ ನ್ಯೂನತೆ ಹುಡುಕಿ ವಿಶ್ಲೇಷಣೆ ಮಾಡುತ್ತಾರೆ. ಆರ್ಥಿಕ ನೀತಿ ಇರಲಿ, ಭದ್ರತಾ ನೀತಿ ಇರಲಿ, ವಿದೇಶಾಂಗ ನೀತಿ ಇರಲಿ… ಯಾವುದೂ ಸರಿ ಇಲ್ಲ ಎಂಬುದು ಇಂಥವರ ವಾದ. ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ‘ಗುಜರಾತ್ ಮಾಡೆಲ್’ ಅಭಿವೃದ್ಧಿ ಎಂಬ ಪದಪುಂಜ ಭರ್ಜರಿ ಪ್ರಚಾರ ಪಡೆದಿತ್ತು. ಕ್ರಮೇಣ ಬಿಜೆಪಿ ಆಡಳಿತದ ಇತರ ರಾಜ್ಯಗಳಲ್ಲಿ ಸಹ ಈ ಸ್ಲೋಗನ್ ಮುನ್ನೆಲೆಗೆ ಬಂತು. ಆದರೆ ವಿರೋಧಿಗಳು ಈ ಬಗ್ಗೆ ತಕರಾರು ಎತ್ತಿದರು. ಅದರಲ್ಲೂ ಗೋಧ್ರೋತ್ತರ ಗಲಭೆಗಳ ನಂತರವಂತೂ ಮೋದಿ ವಿರೋಧಿಗಳ ಕೂರಂಬುಗಳು ಹೆಚ್ಚಿದವು. ಇದೇನೇ ಇದ್ದರೂ ಮೋದಿ ಎಂಬ ನಾಯಕನ ಬಗ್ಗೆ ದೇಶವಾಸಿಗಳಲ್ಲಿ ಒಂದು ಬಗೆಯ ಕುತೂಹಲ ಇದ್ದೇ ಇತ್ತು. ಹೀಗಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಬಿಜೆಪಿ ತನ್ನ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೊಷಿಸಿದಾಗ ಚುನಾವಣಾ ಕಣದ ಖದರೇ ಬದಲಾಗಿಹೋಯಿತು. ಹತ್ತು ವರ್ಷಗಳ ಕಾಂಗ್ರೆಸ್ ನೇತೃತ್ವದ ಆಡಳಿತದ ಬಗ್ಗೆ ತಮ್ಮದೇ ಶೈಲಿಯಲ್ಲಿ ಟೀಕಿಸುತ್ತ, ವಿಮರ್ಷಿಸುತ್ತ, ಶರವೇಗದಲ್ಲಿ ಸಂಚರಿಸುತ್ತ ಆಕ್ರಮಕ ಶೈಲಿಯಲ್ಲಿ ಪ್ರಚಾರ ಸಭೆಗಳನ್ನು ನಡೆಸಿದ ಮೋದಿ ಜನರ ಮನಸಿನಲ್ಲಿ ದೇಶದ ಅಭಿವೃದ್ಧಿ ಕುರಿತು ಹೊಸ ಕನಸುಗಳನ್ನು ಬಿತ್ತಿದರು. ಜನರು ಅಧಿಕಾರದ ತಾಂಬೂಲವನ್ನು ಮೋದಿಗೆ ಕೊಟ್ಟರು. 2019ರಲ್ಲೂ ಇದು ಪುನರಾವರ್ತನೆ ಆಯಿತು. ಮೈತ್ರಿ ಪಕ್ಷಗಳು ಜೊತೆಗೆ ಇದ್ದರೂ, ಅವುಗಳ ಹಂಗು ಇಲ್ಲದ ಹಾಗೆ ಬಿಜೆಪಿ ಭರ್ಜರಿ ಬಹುಮತ ಪಡೆಯಿತು. ಆದ್ದರಿಂದ ಈ ಎರಡು ಅವಧಿಯಲ್ಲಿ, ಜಿಎಸ್​ಟಿ ಜಾರಿ, ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ, ತ್ರಿವಳಿ ತಲಾಕ್ ನಿಷೇಧದಂತಹ ಮಹತ್ವದ ನಿರ್ಣಯಗಳು ಹೊರಹೊಮ್ಮಿದವು. ಇನ್ನೊಂದೆಡೆ ರಾಮ ಮಂದಿರ ನಿರ್ವಣವೂ ಕೈಗೂಡಿತು. ಆದರೆ 2024ರಲ್ಲಿ ಸನ್ನಿವೇಶ ಬದಲಾಗಿದೆ. ಮೈತ್ರಿ ಪಕ್ಷಗಳ ನೆರವಿಂದ ಸರ್ಕಾರ ರಚಿಸುವುದು ಅನಿವಾರ್ಯವಾಗಿದೆ. ಅಂದರೆ ಅವಿಭಕ್ತ ಕುಟುಂಬದ ಯಜಮಾನನ ರೀತಿಯಲ್ಲಿ ಮೋದಿ ಕಾರ್ಯ ನಿರ್ವಹಣೆ ಮಾಡಬೇಕಾಗಿದೆ. ಕುಟುಂಬದಲ್ಲಿ ಬರಬಹುದಾದ ತೊಂದರೆ ತೊಡಕು, ಭಿನ್ನಾಭಿಪ್ರಾಯಗಳನ್ನು ಸಮಚಿತ್ತದಿಂದ ನಿಭಾಯಿಸಬೇಕಿದೆ. ಬೇರೆ ಬೇರೆ ಹಿನ್ನೆಲೆ ಹಾಗೂ ಮನೋಭಾವದ ಜನರನ್ನು ತೂಗಿಸಿಕೊಂಡು ಹೋಗುವ ವಿವೇಕವನ್ನು ಪ್ರದರ್ಶಿಸಬೇಕಿದೆ. ಪ್ರಧಾನಿಯಾಗಿ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿರುವ ಮತ್ತು ಅದಕ್ಕೆ ಮುನ್ನ ಗುಜರಾತ್ ಮುಖ್ಯಮಂತ್ರಿಯಾಗಿ ಸುದೀರ್ಘ ಅವಧಿಗೆ ಆಡಳಿತ ನಡೆಸಿರುವ ಮೋದಿ ಸಹೋದ್ಯೋಗಿಗಳ ಮತ್ತು ಸರ್ಕಾರದ ಸಹಕಾರಿಗಳ ನಾಡಿಮಿಡಿತ ಅರಿಯಬಲ್ಲರು ಮತ್ತು ಸುಸೂತ್ರವಾಗಿ ಆಡಳಿತ ನಡೆಸಬಲ್ಲರು ಎಂಬುದು ಅವರ ಬೆಂಬಲಿಗರ ವಿಶ್ವಾಸ. ಮೋದಿ ಸಮ್ಮಿಶ್ರ ಸರ್ಕಾರ ಮುನ್ನಡೆಸುವುದು ಹೌದಾದರೂ ವಾಜಪೇಯಿ ಅವರ ಹಾಗೆ 17-18 ಪಕ್ಷಗಳನ್ನು ಸಂಭಾಳಿಸುವ ಸವಾಲು ಅವರಿಗೆ ಇಲ್ಲ ಎಂಬುದನ್ನು ಗಮನಿಸಬೇಕು. ವಾಜಪೇಯಿಯಂತಹ ಲಿಬರಲ್ ವ್ಯಕ್ತಿತ್ವದ ನಾಯಕನಿಗೆ ಮೈತ್ರಿ ಸರ್ಕಾರ ಮುನ್ನಡೆಸುವುದು ಅಷ್ಟು ಕಷ್ಟವಾಗಿರುವಾಗ, ಮೋದಿಯಂತಹ ಖಡಕ್ ನಾಯಕನಿಗೆ ಅಷ್ಟು ಸುಲಭವಿಲ್ಲ ಎಂಬುದು ಕೆಲವರ ಅಂಬೋಣ. ಆ ಲೆಕ್ಕದಲ್ಲಿ ನೋಡಿದರೆ, ಮೋದಿಯವರ ಹಿಂದಿನ ಎರಡು ಅವಧಿಗಳದ್ದು ಒಂದು ತೂಕವಾದರೆ, ಈಗಿನ ಆಡಳಿತವೇ ಒಂದು ತೂಕ.
ಕೊನೇ ಮಾತು:ಗುಜರಾತ್ ಗಲಭೆಗಳ ಸಂದರ್ಭದಲ್ಲಿ, ರಾಜಧರ್ಮ ಪಾಲಿಸುವಂತೆ ಆಗಿನ ಪ್ರಧಾನಿ ವಾಜಪೇಯಿ ಅವರು ಮೋದಿಯವರಿಗೆ ಸೂಚಿಸಿದ್ದರು ಎಂಬುದು ಬಹಳ ಸುದ್ದಿಯಾಗಿತ್ತು. ಈಗ ಮೈತ್ರಿಧರ್ಮ ಪಾಲಿಸುವ ಸವಾಲು- ಸಂದರ್ಭ ಮೋದಿ ಅವರಿಗೆ ಎದುರಾಗಿದೆ. ಆದರೆ ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಲು ವಾಜಪೇಯಿ ಇಲ್ಲ.
ಬಿಹಾರ: ಅರ್ಹ ಯುವಕರಿಗೆ ‘ನಿರುದ್ಯೋಗ ಭತ್ಯೆ’ ನೀಡುವುದಾಗಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಘೋಷಣೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
