ಬೆಂಗಳೂರು:ಕೇಂದ್ರೀಯ ಉದ್ದಿಮೆಗಳು ಮತ್ತು ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ, ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನ, ಸರ್ಕಾರಿ ಶಾಲೆಗಳ ಸಬಲೀಕರಣ, ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರಥಮ ಭಾಷೆಯಾಗಿ ಕನ್ನಡ ಭಾಷೆ ಬೋಧನೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಕನ್ನಡ ಪರ ಸಂಘಟನೆಗಳ ಸದಸ್ಯರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲಹೆಗಳನ್ನು ನೀಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿಧಾನಸೌಧದಲ್ಲಿ ಕನ್ನಡಪರ ಸಂಘಟನೆಗಳೊಂದಿಗೆ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ಮತ್ತು ಸಮಸ್ಯೆಗಳ ಬಗ್ಗೆ ಹೋರಾಟಗಾರರು ಪ್ರಾಧಿಕಾರದ ಗಮನ ಸೆಳೆದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಿ, ಅಂಕಿ ಅಂಶಗಳನ್ನು ಗಮನಿಸುವುದಾದರೆ ಶೇ.66ರಷ್ಟು ವೇಗದಲ್ಲಿ ಹಿಂದಿ ಭಾಷೆಯ ಬೆಳವಣಿಗೆ ಆಗುತ್ತಿದೆ. ಪಂಜಾಬಿ ಭಾಷೆ ಶೇ.12 ರಿಂದ 13ರಷ್ಟು ವೇಗದಲ್ಲಿ ಬೆಳವಣಿಗೆಯಾಗುತ್ತಿದೆ. ಕರ್ನಾಟಕದ್ದೆ ಭಾಷೆಯಾದ ತುಳು ಶೇ.7 ರಷ್ಟು ವೇಗದಲ್ಲಿ ಬೆಳವಣಿಗೆಯಾಗುತ್ತಿದೆ. ಆದರೆ ರಾಜ್ಯದ ಅಧಿಕೃತ ಭಾಷೆಯಾದ ಕನ್ನಡ ಭಾಷೆ ಬೆಳವಣಿಗೆ ಶೇ.3.7ರಷ್ಟಿದೆ ಇದೆ ಎಂಬುದು ಅಂಕಿ-ಅಂಶಗಳಿಂದ ತಿಳಿದು ಬರುತ್ತಿದೆ ಎಂದರು.
ಡಾ.ಸರೋಜಿನಿ ಮಹಿಷಿ ವರದಿ ನೀಡಿ ಹಲವು ವರ್ಷಗಳಾಗಿವೆ. ಆಗಿನ ಸಂದರ್ಭದಲ್ಲಿ ಐಟಿ, ಬಿಟಿ, ಬಹುರಾಷ್ಟ್ರೀಯ ಕಂಪನಿಗಳು ಇರಲಿಲ್ಲ. ಅಲ್ಲಿನ ಉದ್ಯೋಗದ ಸಮಸ್ಯೆಗಳ ಬಗ್ಗೆ ಮಹಿಷಿ ವರದಿಯಲ್ಲಿ ಉಲ್ಲೇಖಿಸಿಲ್ಲ. ಈ ನಿಟ್ಟಿನಲ್ಲಿ ಪ್ರಾಧಿಕಾರದಿಂದಲೇ ಡಾ. ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಿಸಲಾಗಿದೆ. ಅದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಾಧಿಕಾರ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.
ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸಾ.ರಾ. ಗೋವಿಂದು ಮಾತನಾಡಿ, ಪ್ರಾಧಿಕಾರ ಕೇವಲ ಕರ್ನಾಟಕದೊಳಗಿನ ಕನ್ನಡಿಗರ ಬಗ್ಗೆ ಮಾತ್ರವಲ್ಲದೇ ಹೊರನಾಡು, ಗಡಿನಾಡು ಕನ್ನಡಿಗರ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಬೇಕಿದೆ ಎಂದು ತಿಳಿಸಿದರು.
ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷರಾದ (ಪ್ರವೀಣ್ ಶೆಟ್ಟಿ ಬಣ) ಪ್ರವೀಣ್ ಶೆಟ್ಟಿ ಮಾತನಾಡಿ, ಕನ್ನಡಪರ ಹೋರಾಟಗಾರರ ಮೇಲಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಕನ್ನಡ ನಾಡು-ನುಡಿ ಮತ್ತು ಕನ್ನಡಿಗರಿಗಾಗಿ ಕನ್ನಡಪರ ಹೋರಾಟಗಾರರು ಬೀದಿಗೀಳಿದು ಹೋರಾಟ ನಡೆಸುತ್ತಾರೆ. ಇದರ ಹಿಂದೆ ಯಾವುದೇ ದುರುದ್ದೇಶ ಇರುವುದಿಲ್ಲ. ರಾಜ್ಯದ ಜನರ ಹಕ್ಕುಗಳಿಗಾಗಿ ಹೋರಾಟ ನಡೆಸುವುದು. ಆದ್ದರಿಂದ ಕನ್ನಡಪರ ಹೋರಾಟಗಾರರ ಮೇಲಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.
ಚರ್ಚ್‌ಗಳಲ್ಲಿ ಮತ್ತು ಮಸೀದಿ ಸೇರಿದಂತೆ ಇತರೆ ಪ್ರಾರ್ಥನ ಮಂದಿರಗಳಲ್ಲಿ ಕನ್ನಡ ಬಳಕೆ ಅವಕಾಶ ಸಿಗಬೇಕು. ಚರ್ಚ್‌ಗಳಲ್ಲಿ ಕನ್ನಡದಲ್ಲಿ ಪೂಜೆ ಮಾಡಲು ಅವಕಾಶ ದೊರೆಯುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಮದರಸಾಗಳಲ್ಲಿ ಕನ್ನಡ ಕಲಿಕೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಮಾಲ್‌ನಲ್ಲಿ ಅನ್ಯಭಾಷೆ ಪದ ಕನ್ನಡದಲ್ಲಿ:ಕಂಕಣ ಬಳಗದ ಕವಿರಾಜ್ ಮಾತನಾಡಿ, ಅಪಾರ್ಟ್‌ಮೆಂಟ್‌ಗಳಲ್ಲಿ ಮತ್ತು ಮಾಲ್‌ಗಳಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡಬೇಕು. ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುವವರು ಮತ್ತು ಮಾಲ್‌ಗಳಲ್ಲಿ ಕೆಲಸ ಮಾಡುವವರಿಗೆ ಕನ್ನಡಿಗರೊಂದಿಗೆ ವ್ಯವಹರಿಸುವಷ್ಟರ ಮಟ್ಟಿಗೆ ಸಂವಹನ ಕನ್ನಡ ಕಲಿಸಬೇಕು. ಮಾಲ್‌ಗಳಲ್ಲಿ ಪದಾರ್ಥ ಅಥವಾ ವಸ್ತುಗಳನ್ನು ಅನ್ಯ ಭಾಷೆಯ ಪದಗಳನ್ನು ಕನ್ನಡದಲ್ಲಿ ಬರೆಯುತ್ತಾರೆ. ಇದು ಕೂಡ ಕನ್ನಡಕ್ಕೆ ಧಕ್ಕೆ ತರುವಂತಹದು ಎಂದು ತಿಳಿಸಿದರು.ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ತ್ರಿವಳಿ ಮಂತ್ರದಡಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನದ ಅಗತ್ಯವೂ ಇದೆ. ಆದ್ದರಿಂದ ಸರ್ಕಾರ ಪ್ರಾಧಿಕಾರ ಹೆಚ್ಚಿನ ಒದಗಿಸುವ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳು ಕೆಲಸ ಮಾಡಬೇಕು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು ಎಂದು ಎಲ್ಲ ಕನ್ನಡಪರ ಸಂಘಟನೆಗಳ ಸದಸ್ಯರು ಅಭಿಪ್ರಾಯಪಟ್ಟರು.
ವೆಬ್ ಪೋರ್ಟಲ್ ಆರಂಭಿಸಬೇಕು:ಕನ್ನಡಿಗರಿಗೆ ಉದ್ಯೋಗವಾಕಾಶಗಳ ಬಗ್ಗೆ ಮಾಹಿತಿ ನೀಡುವ ವೆಬ್ ಪೋರ್ಟಲ್ ಆರಂಭಿಸಬೇಕು. ರಾಜ್ಯದಲ್ಲಿರುವ ಕೇಂದ್ರೀಯ ಉದ್ದಿಮೆಗಳಲ್ಲಿ ಸ್ಥಳೀಯರಿಗೆ (ಕನ್ನಡಿಗರಿಗೆ) ಉದ್ಯೋಗ ದೊರಕಿಸಿ ಕೊಡುವ ನಿಟ್ಟಿನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಿಗೆ ಪ್ರಾಧಿಕಾರ ಒತ್ತಡ ಹೇರಬೇಕು ಎಂದು ಕನ್ನಡ ಪರ ಚಿಂತಕರು ತಿಳಿಸಿದರು.
ತ್ರಿಭಾಷಾ ಸೂತ್ರದಿಂದಾಗಿ ಇಂದು ಕನ್ನಡ ಕಣ್ಮರೆಯಾಗಿ ಹಿಂದಿ ಹೇರಿಕೆಯಾಗುತ್ತಿದೆ. ಆದ್ದರಿಂದ ದ್ವಿಭಾಷಾ ಸೂತ್ರ ಅನುಷ್ಠಾನದ ಕುರಿತು ಯೋಚಿಸಬೇಕು. ರಾಜ್ಯದ ಲಾಂಛನದಲ್ಲಿ ಕನ್ನಡ ಭಾಷೆಯ ಬಳಕೆಯಾಗಬೇಕು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಕನ್ನಡ ಪರ ಹೋರಾಟ ಮಾಡುವ ಯುವ ಹೋರಾಟಗಾರರು ಗಮನ ಸೆಳೆದರು.
ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ, ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ಒದಗಿಸಲು ಕ್ರಮ ವಹಿಸಬೇಕು. ಕೇಂದ್ರೀಯ ವಿದ್ಯಾಲಯಗಳಲ್ಲಿ, ಸಿಬಿಎಸ್‌ಇ, ಐ.ಸಿ.ಎಸ್.ಇ ಮತ್ತು ನವೋದಯ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಕಲಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ಪ್ರಾಧಿಕಾರ ಗಂಭೀರ ಚಿಂತನೆ ಮಾಡಬೇಕು ಎಂದು ಸಭೆಯಲ್ಲಿ ಎಲ್ಲರೂ ಅಭಿಪ್ರಾಯಪಟ್ಟರು.
ಕನ್ನಡ ರಕ್ಷಣಾ ವೇದಿಕೆ (ಬಿ.ಶಿವರಾಮೇಗೌಡ ಬಣ) ಅಧ್ಯಕ್ಷ ಬಿ.ಶಿವರಾಮೇಗೌಡ, ಕನ್ನಡ ಪರ ಚಿಂತಕರಾದ ಟಿ.ತಿಮ್ಮೇಶ್ ಮತ್ತು ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 − two =
Remember me
