ಉಡುಪಿ: ಪರ್ಯಾಯ ಮಹೋತ್ಸವಕ್ಕೆ ಉಡುಪಿ ನಗರಿ ಸಜ್ಜಾಗಿದ್ದು, ಶ್ರೀಕೃಷ್ಣ ಮಠದಲ್ಲಿ ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪ್ರಥಮ ಸರ್ವಜ್ಞ ಪೀಠಾರೋಹಣ ಜ.18ರ ಪ್ರಾತಃಕಾಲ 5.57ರ ಸುಮುಹೂರ್ತದಲ್ಲಿ ನೆರವೇರಲಿದೆ.
ಸೋದೆ ಮಠದ ಪ್ರಸಿದ್ಧ ಯತಿ ಶ್ರೀ ವಾದಿರಾಜರು ಕ್ರಿ.ಶ.1522ರಲ್ಲಿ ರೂಪಿಸಿದ ದ್ವೈವಾರ್ಷಿಕ ಕ್ರಮದಲ್ಲಿ ಈ ಬಾರಿ 250ನೇ ಪರ್ಯಾಯ ಮಹೋತ್ಸವದ ಸರದಿ ಅದಮಾರು ಮಠದ್ದಾಗಿದೆ. ಶನಿವಾರ ಪರ್ಯಾಯ ಪೀಠವೇರುವ ಯತಿಗಳು ಮುಂಜಾನೆ 1.20ಕ್ಕೆ ಕಾಪು ಸಮೀಪದ ದಂಡ ತೀರ್ಥದಲ್ಲಿ ಪವಿತ್ರ ಸ್ನಾನ ನೆರವೇರಿಸಿ, ನಗರದ ಜೋಡುಕಟ್ಟೆಯಲ್ಲಿ 1.50ಕ್ಕೆ ಪಟ್ಟದ ದೇವರಿಗೆ ಪೂಜೆ ನೆರವೇರಿಸುವರು. ನಂತರ ಮೆರವಣಿಗೆ ಪ್ರಾರಂಭವಾಗಲಿದೆ. ತೆಂಕಪೇಟೆ ಮೂಲಕ ರಥಬೀದಿ ಪ್ರವೇಶಿಸುವ ಶ್ರೀಗಳು, 4.50ಕ್ಕೆ ಕನಕಗೋಪುರದಲ್ಲಿ ಕನಕನ ಕಿಂಡಿ ಮೂಲಕ ಕೃಷ್ಣದರ್ಶನಗೈದು ಚಂದ್ರಮೌಳೀಶ್ವರ ಮತ್ತು ಅನಂತೇಶ್ವರ ದೇವರನ್ನು ಪ್ರಾರ್ಥಿಸಿ ಮಧ್ವಸರೋವರದಲ್ಲಿ ತೀರ್ಥ ಪೋ›ಕ್ಷಿಸಿಕೊಂಡು ಬೆಳಗ್ಗೆ 5.30ಕ್ಕೆ ಕೃಷ್ಣಮಠವನ್ನು ಪೂರ್ವದ್ವಾರದಿಂದ ಪ್ರವೇಶಿಸಲಿದ್ದಾರೆ.
ಪರ್ಯಾಯದಿಂದ ನಿರ್ಗಮಿಸುವ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರಿಗೆ ನವಗ್ರಹ ಕಿಂಡಿ ಮೂಲಕ ಕೃಷ್ಣನ ದರ್ಶನ ಮಾಡಿಸಲಿದ್ದಾರೆ. ಬಳಿಕ ಮಧ್ವಾಚಾರ್ಯ ಗುಡಿ ಮುಂಭಾಗದಲ್ಲಿ ಮರದ ಅಕ್ಷಯಪಾತ್ರೆ-ಬೆಳ್ಳಿಯ ಸಟ್ಟುಗದೊಂದಿಗೆ ಗರ್ಭಗುಡಿಯ ಕೀಲಿಕೈಯನ್ನು ಪಲಿಮಾರು ಶ್ರೀಗಳು ಅದಮಾರು ಶ್ರೀಪಾದರಿಗೆ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಲಿದ್ದಾರೆ.
ಸರ್ವಜ್ಞ ಪೀಠಾರೋಹಣ: ಏಳು ಶತಮಾನದ ಹಿಂದೆ ಮಧ್ವಾಚಾರ್ಯರು ಆಸೀನರಾಗಿ ಕೃಷ್ಣನ ಪೂಜೆ ನೆರವೇರಿಸಿದ ಸರ್ವಜ್ಞಪೀಠದಲ್ಲಿ ಪರ್ಯಾಯ ಅದಮಾರು ಶ್ರೀಪಾದರನ್ನು ಪಲಿಮಾರು ಶ್ರೀಗಳು ಕೈ ಹಿಡಿದು ಕುಳ್ಳಿರಿಸುತ್ತಾರೆ.
ಬಳಿಕ ಬಡಗುಮಾಳಿಗೆಯಲ್ಲಿ ಎಲ್ಲ ಶ್ರೀಪಾದರಿಗೆ ಅರಳುಗದ್ದಿಗೆಯಲ್ಲಿ ಪರ್ಯಾಯ ಮಠದಿಂದ ಸಂಭ್ರಮದ ಗೌರವ ಸಮರ್ಪಣೆ ನಡೆಯಲಿದೆ. ಬೆಳಗ್ಗೆ 10ಕ್ಕೆ ಅದಮಾರು ಶ್ರೀಗಳು ಶ್ರೀಕೃಷ್ಣನಿಗೆ ಪ್ರಥಮ ಮಹಾಪೂಜೆ ನೆರವೇರಿಸಲಿದ್ದಾರೆ. 10.30ರಿಂದ 40ರಿಂದ 50 ಸಾವಿರ ಜನರಿಗೆ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಇಂದು ಪಲಿಮಾರು ಶ್ರೀಗಳಿಗೆ ಅಭಿನಂದನೆ
ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ ಜ.17ರ ರಾತ್ರಿ 7ಕ್ಕೆ ಕೃಷ್ಣ ಪೂಜಾ ಪರ್ಯಾಯ ಯಶಸ್ವಿಯಾಗಿ ನೆರವೇರಿಸಿ ನಿರ್ಗಮಿಸುತ್ತಿರುವ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ನಡೆಯಲಿದೆ. ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಪಲಿಮಾರು ಮಠದ ಕಿರಿಯಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಭಾಗವಹಿಸಲಿದ್ದಾರೆ. ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ ಸತ್ಯನಾರಾಯಣ ಆಚಾರ್ಯ ಅಭಿನಂದನಾ ಭಾಷಣ ಮಾಡಲಿದ್ದಾರೆ. ಸನ್ಮಾನ ಕಾರ್ಯಕ್ರಮದ ಬಳಿಕ ರಥೋತ್ಸವ ನಡೆಯಲಿದೆ.
ತೀರ್ಥ ವೇದಿಕೆಯಲ್ಲಿ ದರ್ಬಾರ್
ಪ್ರತೀ ಪರ್ಯಾಯದಲ್ಲಿ ಬಡಗುಮಾಳಿಗೆಯಲ್ಲಿ ಯತಿಗಳಿಗೆ ಗೌರವ ಸಮರ್ಪಣೆ ಬಳಿಕ ರಾಜಾಂಗಣದಲ್ಲಿ ಬೆಳಗ್ಗೆ ಪರ್ಯಾಯ ದರ್ಬಾರ್ ಸಭಾ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಆದರೆ ಶ್ರೀಗಳ ಸೂಚನೆಯಂತೆ ಮಧ್ಯಾಹ್ನ 2.30ಕ್ಕೆ ರಾಜಾಂಗಣದ ನರಸಿಂಹ ತೀರ್ಥ ವೇದಿಕೆಯಲ್ಲಿ ಪರ್ಯಾಯ ದರ್ಬಾರ್ ಆರಂಭವಾಗಲಿದೆ. ಪರ್ಯಾಯ ಶ್ರೀಪಾದರು ಪ್ರಪ್ರಥಮ ಪರ್ಯಾಯ ಸಂದೇಶ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸಿಎಂ ಯಡಿಯೂರಪ್ಪ, ಮೈಸೂರಿನ ಯದುವೀರ ಒಡೆಯರ್ ಇತರರು ಭಾಗಿಯಾಗಲಿದ್ದಾರೆ.
ಪಾಕಶಾಲೆಯಲ್ಲಿ ಸೂರೆ ಬಿಡುವುದು
ಶ್ರೀಕೃಷ್ಣ ಮಠದಲ್ಲಿ ಶುಕ್ರವಾರ ಮಧ್ಯಾಹ್ನ ಪಲಿಮಾರು ಮಠ ಪರ್ಯಾಯದ ಕೊನೆಯ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಪಾಕಶಾಲೆಯಲ್ಲಿ ಸೂರೆ ಬಿಡುವ ವಿಶೇಷ ಕಾರ್ಯಕ್ರಮ ಜರುಗಲಿದೆ. ಈ ಆಚರಣೆಗಾಗಿಯೇ ದೊಡ್ಡ ಕೊಪ್ಪರಿಗೆಗಳಲ್ಲಿ ಅನ್ನ, ಸಾರು, ಸಿಹಿತಿಂಡಿ ಉಳಿಸಲಾಗುತ್ತದೆ. ಮಠದಿಂದ ಭಕ್ತರಿಗೆ ಸೂರೆಗೆ ಆದೇಶವಾಗುತ್ತಲೇ ಎಲ್ಲ ಭಕ್ತರು ತಮ್ಮಿಂದಾಗುವಷ್ಟು ಅನ್ನ, ಸಾರು, ಪಾಯಸ ಮನೆಗೆ ಕೊಂಡೊಯ್ಯಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + eleven =
Remember me
