| ಪರಶುರಾಮ ಭಾಸಗಿ/ ಗೋವಿಂದರಾಜು ಚಿನ್ನಕುರ್ಚಿ ವಿಜಯಪುರ/ಬೆಂಗಳೂರು
ಖೊಟ್ಟಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಸುವ ಭೂಗಳ್ಳರು, ದಂಧೆಕೋರರ ಹಾವಳಿ ರಾಜ್ಯದಲ್ಲಿ ಮಿತಿಮೀರಿದೆ. ಆದರೆ ದಾಖಲೆಗಳ ನೈಜತೆ ಪರಿಶೀಲಿಸಿ, ದಸ್ತಾವೇಜು ನೋಂದಣಿಗೆ ನಿರಾಕರಿಸುವ ಅಧಿಕಾರ ಸಬ್ ರಿಜಿಸ್ಟ್ರಾರ್​ಗಳಿಗಿಲ್ಲ ಎಂಬ ಕರ್ನಾಟಕ ನೋಂದಣಿ (1965ರ ನಿಯಮ 73) ನಿಯಮಾವಳಿ ದಂಧೆಗೆ ಕಡಿವಾಣ ಹಾಕುವ ಕೈಗಳನ್ನು ಕಟ್ಟಿಹಾಕಿದೆ. ಭಾರತೀಯ ನೋಂದಣಿ ಕಾಯ್ದೆ 1908ರ ಅನ್ವಯ ಕರ್ನಾಟಕ ನೋಂದಣಿ ನಿಯಮಾವಳಿ 1965ಕ್ಕೆ ತಿದ್ದುಪಡಿ ತಂದು ಜಿಲ್ಲಾ ನೋಂದಣಾಧಿಕಾರಿಗೆ ರಿಜಿಸ್ಟ್ರೇಷನ್ ರದ್ದುಪಡಿಸುವ ಅಧಿಕಾರ ನೀಡಬೇಕಿದೆ. ಆದರೆ ಈ ಮಸೂದೆಗೆ ರಾಷ್ಟ್ರಪತಿ ಅಂಕಿತ ಬೀಳದೆ ಇರುವ ಪರಿ ಣಾಮ ಭೂ ಕಬ್ಜ ಮಾಡುವವರಿಗೆ ವರವಾಗಿದೆ. ಭೂಗಳ್ಳರು ನಿಯಮ ದುರ್ಬಳಕೆ ಮಾಡಿ ಕೊಳ್ಳುತ್ತಿರುವುದರಿಂದ ಅಮಾಯಕರ ಆಸ್ತಿ ನುಂಗುವವರ ಸಂಖ್ಯೆ ಹೆಚ್ಚಾಗಿದೆ.
ಖಾಲಿ ಸೈಟ್, ವಾರಸುದಾರರು ಇಲ್ಲದ, ವೃದ್ಧರು, ವಿಧವೆಯರು, ವಿದೇಶದಲ್ಲಿರುವ ಅಮಾಯಕರ ಆಸ್ತಿಗೆ ನಕಲಿ ದಾಖಲೆ ಮತ್ತು ಮಾಲೀಕತ್ವ ಸೃಷ್ಟಿಸಿ ಒಬ್ಬರಿಂದ ಮತ್ತೊಬ್ಬರಿಗೆ, ಮತ್ತೊಬ್ಬರಿಂದ ಇನ್ನೊಬ್ಬರಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮೂಲ ಮಾಲೀಕರು ಯಾರೆಂಬುದೇ ತಿಳಿಯದ ಸ್ಥಿತಿ ನಿರ್ವಣವಾಗಿದೆ. ಭೂಮಿ ಕಳೆದು ಕೊಂಡವರು ಯಾರಿಗೆ ದೂರು ಕೊಡಬೇಕೆಂಬುದನ್ನು ತಿಳಿಯದೆ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಕೊಟ್ಟು ಆಸ್ತಿ ಖರೀದಿಸಿದವನಿಗೂ ವಿವಾದ ಮೈಗಂಟಿಕೊಂಡು ಕೋರ್ಟು, ಕಚೇರಿ ಎಂದು ಜೀವನ ಪರ್ಯಂತ ಅಲೆಯುವ ಅಥವಾ ರಾಜಿ-ಸಂಧಾನ ಸೂತ್ರಕ್ಕೆ ಬಗ್ಗಬೇಕಿದೆ. ಒಂದೊಮ್ಮೆ ಸಬ್ ರಿಜಿಸ್ಟ್ರಾರ್​ಗಳ ಕೈವಾಡ ಇದ್ದರೂ ಅವರ ವಿರುದ್ಧವೂ ದೂರು ಕೊಡಲು ನೋಂದಣಿ ಕಾಯ್ದೆಯಲ್ಲಿ ಅವಕಾಶ ಇಲ್ಲವಾಗಿದೆ.
ಡಿಆರ್​ಗೆ ಅಧಿಕಾರ ತ್ರಿಶಂಕು?:ನಕಲಿ ದಾಖಲೆ ಸೃಷ್ಟಿಸಿ ನೋಂದಾಯಿಸುವ ದಸ್ತಾವೇಜುಗಳನ್ನು ರದ್ದುಪಡಿಸುವ ಅಧಿಕಾರವನ್ನು ಜಿಲ್ಲಾ ನೋಂದಣಾಧಿಕಾರಿಗೆ ನೀಡುವ ರಾಜ್ಯ ಸರ್ಕಾರದ ಮಸೂದೆ ರಾಷ್ಟ್ರಪತಿ ಅಂಗಳದಲ್ಲಿದೆ. ಭಾರತೀಯ ನೋಂದಣಿ ಕಾಯ್ದೆ 1908ರ ಅನ್ವಯ ಕರ್ನಾಟಕ ನೋಂದಣಿ ನಿಯಮಾವಳಿ 1965ಕ್ಕೆ ತಿದ್ದುಪಡಿ ತಂದು 2023ರಲ್ಲಿ ಅಧಿವೇಶನದಲ್ಲಿ ಪಾಸ್ ಮಾಡಿ ರಾಷ್ಟ್ರಪತಿ ಸಹಿಗೆ ಕಳುಹಿಸಲಾಗಿತ್ತು.
ತಿರುಚಿದ ದಾಖಲೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಯ್ದೆಗೆ ವಿರುದ್ಧವಾಗಿ ಮತ್ತು ಕೇಂದ್ರ, ರಾಜ್ಯ ಸರ್ಕಾರ ಜಪ್ತಿಯಾದ ಸ್ಥಿರಾಸ್ತಿಗಳನ್ನು ಕ್ರಯ, ದಾನ, ಗುತ್ತಿಗೆ ಮತ್ಯಾವುದೇ ನೋಂದಣಿ ಮಾಡಿಸಿದರೆ ನೋಂದಣಿ ರದ್ದುಪಡಿಸುವ ಅಧಿಕಾರ ಡಿಆರ್ ವಹಿಸಲಾಗಿತ್ತು. ಇದರಿಂದ ಸಿವಿಲ್ ಕೋರ್ಟ್​ಗೆ ಹೋಗುವ ಅಗತ್ಯ ಇರಲಿಲ್ಲ. 2021ರಲ್ಲಿ ತಮಿಳುನಾಡು ಸರ್ಕಾರ ಇಂಥದ್ದೇ ಮಸೂದೆ ಅಂಗೀಕರಿಸಿತ್ತು. ಅದೇ ಮಾದರಿಯಲ್ಲಿ ಜಾರಿಗೆ ತರಲು ಕರ್ನಾಟಕ ಸರ್ಕಾರ ಮುಂದಾಗಿತ್ತು. ಆದರೆ, ಇತ್ತೀಚೆಗೆ ಭಾರತೀಯ ನೋಂದಣಿ ಕಾಯ್ದೆ 1908 ಸೆಕ್ಷನ್ 77-ಎ ಅನ್ವಯ ತಿದ್ದುಪಡಿ ತಂದಿರುವ ತಮಿಳುನಾಡು ಸರ್ಕಾರದ ನಿರ್ಧರವನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್​ನಲ್ಲಿ 200 ರಿಟ್ ಅರ್ಜಿ ಸಲ್ಲಿಕೆಯಾಗಿವೆ. ವಿಚಾರಣೆ ನಡೆಸಿದ ವಿಭಾಗೀಯಪೀಠ, ಈ ತಿದ್ದುಪಡಿ ನ್ಯಾಯಾಂಗಕ್ಕೆ ಸಮಾನಾಂತರ ವೇದಿಕೆ ರಚಿಸಲು ಪ್ರಯತ್ನಿಸಿದೆ ಮತ್ತು ಕಾರ್ಯಾಂಗಕ್ಕೆ ಅನಗತ್ಯ ಅಧಿಕಾರ ನೀಡಿದೆ ಎಂಬ ಅಭಿಪ್ರಾಯಪಟ್ಟು ತಿದ್ದುಪಡಿಯನ್ನು ಸಂವಿಧಾನ ವಿರೋಧಿ ಎಂದು ತೀರ್ಪು ನೀಡಿದೆ. ಕಾನೂನು ಪದವಿ ಅಥವಾ ಕಾನೂನು ತತ್ವಗಳ ಪರಿಚಯ ಇಲ್ಲದ ಡಿಆರ್​ಗಳು ಅಧಿಕಾರ ಚಲಾಯಿಸುವುದು ಸರಿಯಲ್ಲ ಎಂದು ಉಲ್ಲೇಖಿಸಿತ್ತು. ಹೀಗಾಗಿ ಕರ್ನಾಟಕದ ತಿದ್ದುಪಡಿ ಮಸೂದೆಗೂ ಹಿನ್ನೆಡೆಯಾಗುವ ಸಾಧ್ಯತೆ ಇದೆ.
3 ವರ್ಷದಲ್ಲಿ 86 ಪ್ರಕರಣಕಳೆದ ಮೂರು ವರ್ಷಗಳಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಸಿದ ಸಂಬಂಧ ರಾಜ್ಯದಲ್ಲಿ 86 ಪ್ರಕರಣ ದಾಖಲಾಗಿವೆ. ಜಯನಗರ ಜಿಲ್ಲಾನೋಂದಣಾಧಿ ಕಚೇರಿ-15, ಶಿವಾಜಿನಗರ ಜಿಲ್ಲಾ ನೋಂದಣಾಧಿಕಾರಿ ಕಚೇರಿ-29, ಗಾಂಧಿನಗರ-13, ರಾಜಾಜಿನಗರ-5, ಬಸವನಗುಡಿ-3, ಬೆಂಗಳೂರು ಗ್ರಾಮಾಂತರ-1, ಬಳ್ಳಾರಿ-2, ದಾವಣಗೆರೆ-1, ಬೆಳಗಾವಿ-1, ಕೋಲಾರ-2, ರಾಯಚೂರು-2, ಚಿಕ್ಕಬಳ್ಳಾಪುರ ವ್ಯಾಪ್ತಿ-1, ಉಡುಪಿ-3, ಮೈಸೂರು-1, ಚಾಮರಾಜ ನಗರ-2, ತುಮಕೂರು-1, ಮಂಡ್ಯ ವ್ಯಾಪ್ತಿಯಲ್ಲಿ 3 ಪ್ರಕರಣಗಳು ದಾಖಲಾಗಿವೆ. 2 ಪ್ರಕರಣಗಳಲ್ಲಿ 7 ಸಬ್​ರಿಜಿಸ್ಟ್ರಾರ್​ಗಳು ಶಾಮೀಲಾಗಿದ್ದು, ಇಲಾಖೆ ವಿಚಾರಣೆ ಪ್ರಗತಿಯಲ್ಲಿವೆ.
ಆನ್​ಲೈನ್ ದಾಖಲೆ ನೋಂದಣಿಜಮೀನಿಗೆ ಸಂಬಂಧಪಟ್ಟ ಆಸ್ತಿ ನೋಂದಣಿಗೆ ಭೂಮಿ ತಂತ್ರಾಂಶದಲ್ಲಿ ಪಹಣಿ ಪಡೆದು ದಸ್ತಾವೇಜು ನೋಂದಣಿ ಮಾಡಲಾಗುತ್ತಿದೆ. ಅದೇ ರೀತಿಯಾಗಿ ಬಿಬಿಎಂಪಿ, ನಗರ ಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯ ಆಸ್ತಿಯಗಳಿಗೆ ಇ-ಆಸ್ತಿ ತಂತ್ರಾಂಶದಲ್ಲಿ ಮತ್ತು ಪಂಚಾಯಿತಿ ವ್ಯಾಪ್ತಿಯ ಆಸ್ತಿಗೆ ಇ-ಸ್ವತ್ತು ಸಾಫ್ಟ್​ವೇರ್​ನಲ್ಲಿ ಇ-ಖಾತೆ ನೀಡಲಾಗುತ್ತಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬಡಾವಣೆ ಮತ್ತು ವಸತಿ ಯೋಜನೆಗಳ ಆಸ್ತಿಗಳಿಗೆ ಯೂನಿಫೈಡ್ ಲ್ಯಾಂಡ್ ಮ್ಯಾನೇಜ್ಮೆಂಟ್ ಸಿಸ್ಟಂನಲ್ಲಿ (ಯುಎಲ್​ಎಂಎಸ್) ಖಾತೆ ನೀಡಲಾಗುತ್ತಿದೆ. ಇನ್ನು ಮುಂದೆ ಪಕ್ಷಕಾರರು ನೀಡುವ ದಾಖಲೆ ಪಡೆಯದೆಯೇ ಸಾಫ್ಟ್​ವೇರ್ ನೀಡುವ ಮಾಹಿತಿ ಪಡೆದು ನೋಂದಣಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದರಿಂದ ನಕಲಿ ದಾಖಲೆ ಸೃಷ್ಟಿಸಿ ದಸ್ತಾವೇಜು ನೋಂದಣಿಗೆ ಕಡಿವಾಣ ಬೀಳಲಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಭಾರ ಆಯುಕ್ತ ಕೆ.ಎ. ದಯಾನಂದ್, ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಇಂದಿನಿಂದ ರಿಜಿಸ್ಟ್ರೇಷನ್​ಗೆ ಇ-ಆಸ್ತಿ ಕಡ್ಡಾಯ
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ದಸ್ತಾವೇಜು ನೋಂದಣಿಗೆ ಇ-ಆಸ್ತಿ ತಂತ್ರಾಂಶದಿಂದ ಪಡೆದ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಸೋಮವಾರದಿಂದ (ಸೆ.9) ಚಾಮರಾಜನಗರ, ಚಿತ್ರದುರ್ಗ, ಬಾಗಲಕೋಟೆ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ. ಈ ಜಿಲ್ಲೆಗಳ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೆ ಇ-ಆಸ್ತಿ ತಂತ್ರಾಂಶದಿಂದ ಇ-ಖಾತಾ ವಿತರಿಸಲಾಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶದೊಂದಿಗೆ ಇ-ಆಸ್ತಿ ಸಾಫ್ಟ್​ವೇರ್ ಸಂಯೋಜನೆ ಮಾಡಲಾಗಿದೆ. ತಂತ್ರಾಂಶದಿಂದ ಮಾಹಿತಿ ಪಡೆದು ದಸ್ತಾವೇಜು ನೋಂದಣಿ ಮಾಡಬೇಕೆಂದು ಸಬ್ ರಿಜಿಸ್ಟ್ರಾರ್​ಗಳಿಗೆ ಕಂದಾಯ ಇಲಾಖೆ ಸೂಚಿಸಿದೆ.
ಹುಟ್ಟುಹಬ್ಬದಂದು ಹಸೆಮಣೆ ಏರಲು ಸಜ್ಜಾದ ಸ್ಯಾಂಡಲ್​ವುಡ್​ ಕ್ವೀನ್​!? ರಮ್ಯಾ ಕೈಹಿಡಿಯುವ ವರನ್ಯಾರು ಗೊತ್ತೇ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen − nine =
Remember me
