ಲಾಕ್​ಡೌನ್​ನಿಂದಸಂಕಷ್ಟಕ್ಕೀಡಾಗಿದ್ದ ಲಕ್ಷಾಂತರ ಕಾರ್ವಿುಕರಿಗೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್. ಮಂಜುನಾಥ್ ಊಟ, ದಿನಸಿ ಕಿಟ್ ವಿತರಿಸಿ ಹಸಿದವರಿಗೆ ಆಸರೆಯಾಗಿದ್ದಾರೆ. ಏಷ್ಯಾದಲ್ಲಿ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶದ ಶೇ.80 ಭಾಗ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿದೆ. ಇಲ್ಲಿ ಸುಮಾರು 8 ಲಕ್ಷ ಜನಸಂಖ್ಯೆಯಿದ್ದು, ಅದರಲ್ಲಿ ಶೇ.95 ಜನರು ಕಾರ್ವಿುಕರಿದ್ದಾರೆ. ಲಾಕ್​ಡೌನ್ ವೇಳೆ ದುಡಿಮೆಯಿಲ್ಲದೇ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿಯಲ್ಲಿ ಸರ್ಕಾರ ನೆರವಿನ ಹಸ್ತ ಚಾಚುವ ಮೊದಲೇ, ಮಂಜುನಾಥ್ ಅವರು ಗಾರ್ವೆಂಟ್ಸ್ ಮತ್ತು ಕೂಲಿ ಕಾರ್ವಿುಕರು, ಬಡ ಜನರಿಗೆ ಊಟ, ದಿನಸಿ ಕಿಟ್, ಔಷಧ ನೆರವನ್ನು ನೀಡಿದ್ದಾರೆ.
36 ಕ್ಯಾಂಟೀನ್​ಗಳಿಂದ ಸೇವೆ
ಲಾಕ್​ಡೌನ್ ಘೋಷಣೆ ಮಾಡಿದ ಬೆನ್ನಲ್ಲೇ ಶಾಸಕ ಮಂಜುನಾಥ್ ಹಸಿದವರಿಗೆ ಆಹಾರ ವಿತರಣೆ ಆರಂಭಿಸಿದರು. ನಂತರ ದಾಸರಹಳ್ಳಿ, ಹೆಗ್ಗನಹಳ್ಳಿ, ಚಿಕ್ಕಬಾಣಾವರ, ಮಲ್ಲಸಂದ್ರ, ಪೀಣ್ಯ ಕೈಗಾರಿಕಾ ಪ್ರದೇಶ, ಚೊಕ್ಕಸಂದ್ರ, ರಾಜಗೋಪಾಲನಗರ, ಶೆಟ್ಟಿಹಳ್ಳಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (ಎಚ್​ಡಿಡಿ), ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (ಎಚ್​ಡಿಕೆ) ಹೆಸರಲ್ಲಿ ಕ್ಯಾಂಟೀನ್ ಆರಂಭಿಸಿದರು. ಆದರೆ, ಅಭಿಮಾನಿಗಳು ಮಂಜುನಾಥ್ ಹೆಸರಿನಲ್ಲೇ ಒಟ್ಟು 36 ಕ್ಯಾಂಟೀನ್ ತೆರೆದು ಪ್ರತಿನಿತ್ಯ 40 ಸಾವಿರ ಜನರಿಗೆ ಊಟ ಹಂಚಿಕೆಗೆ ಕೈಜೋಡಿಸಿದ್ದಾರೆ. ಇವರ ಸೇವಾ ಕಾರ್ಯಕ್ಕೆ ಮಾಜಿ ಪ್ರಧಾನಿ ದೇವೇಗೌಡ, ರಾಜ್ಯ ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಶರವಣ ಅವರು ಸ್ಥಳಕ್ಕೆ ಬಂದು ಊಟ ಹಂಚಿಕೆ ಮಾಡುವ ಮೂಲಕ ಬೆಂಬಲಿಸಿದ್ದಾರೆ.
80 ಸಾವಿರ ದಿನಸಿ ಕಿಟ್
ಕ್ಷೇತ್ರದಲ್ಲಿ ಯಾವೊಬ್ಬ ನಾಗರಿಕನೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಸ್ವಂತ ಹಣದಿಂದ 16 ಸಾವಿರ ದಿನಸಿ ಕಿಟ್​ಗಳನ್ನು ವಿತರಣೆ ಮಾಡಿದ್ದಾರೆ. ಇವರ ನೆರವಿಗೆ ಹೆಗಲು ಕೊಟ್ಟು ಸೇವೆ ಮಾಡಲು ಮುಂದಾದ ತಮ್ಮ ಬೆಂಬಲಿಗ ಮುಖಂಡರು, ಅಭಿಮಾನಿ ಸಂಘಗಳ ಕಾರ್ಯಕರ್ತರು ವಾರ್ಡ್​ವಾರು ತಲಾ 5ರಿಂದ 10 ಸಾವಿರ ದಿನಸಿ ಕಿಟ್ ತಯಾರಿಸಿ ವಿತರಣೆ ಮಾಡಿದ್ದಾರೆ. ಅಕ್ಕಿ, ಬೇಳೆ, ಎಣ್ಣೆ, ಸಕ್ಕರೆ, ಸಾಂಬಾರ್ ಪದಾರ್ಥ ಒಳಗೊಂಡ ಸುಮಾರು 80 ಸಾವಿರ ಕಿಟ್​ಗಳನ್ನು ಜನರಿಗೆ ತಲುಪಿಸಿದ್ದಾರೆ.
ವಾರಿಯರ್ಸ್​ಗೆ ಗೌರವ
ಕರೊನಾ ಭೀತಿಯ ನಡುವೆ ಪ್ರತಿನಿತ್ಯ ಕೆಲಸ ಮಾಡುತ್ತಿರುವ ಆರೋಗ್ಯ ಸಿಬ್ಬಂದಿ, ಪೊಲೀಸ್ ಅಧಿಕಾರಿ, ಆಶಾ ಕಾರ್ಯಕರ್ತೆಯರು, ಪೌರಕಾರ್ವಿುಕರು, ನೀರುಗಂಟಿಗಳು, ವಾಹನ ಚಾಲಕರ ಸೇವೆಯನ್ನು ಗುರುತಿಸಿ ಗೌರವಿಸಿದ್ದಾರೆ. ಅಗತ್ಯವುಳ್ಳವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಮನೆಗಳಿಗೆ ಗ್ಯಾಸ್ ವಿತರಣೆ ಮಾಡುತ್ತಿರುವ ಸಿಬ್ಬಂದಿಗೆ ಗೌರವ ಸಲ್ಲಿಸುವ ಕಾರ್ಯಕ್ಕೂ ಮುಂದಾಗಲಿದ್ದಾರೆ.
ಛಾಯಾಗ್ರಾಹಕರಿಗೆ ಆಸರೆ
ಲಾಕ್​ಡೌನ್​ನಿಂದ ಮದುವೆ, ನಾಮಕರಣ ಮತ್ತಿತರ ಶುಭ ಕಾರ್ಯಗಳಿಗೆ ಸರ್ಕಾರ ಅಂಕುಶ ಹಾಕಿದ್ದು, ಛಾಯಾಗ್ರಾಹಕರ ದುಡಿಮೆಗೆ ಪೆಟ್ಟು ಬಿದ್ದಿದೆ. ಹೀಗಾಗಿ ತಮ್ಮ ಕ್ಷೇತ್ರದ ಛಾಯಾಗ್ರಾಹಕರನ್ನು ಗುರುತಿಸಿ, ಅವರ ಕುಟುಂಬಕ್ಕೆ ಆಸರೆ ಯಾಗುವುದಾಗಿ ಮಂಜುನಾಥ್ ಭರವಸೆ ನೀಡಿದ್ದಾರೆ.
10 ಸಾವಿರ ಮಂದಿಗೆ 125 ಟನ್ ತರಕಾರಿ ಹಂಚಿಕೆ
ಆದ್ಯ ಫೌಂಡೇಶನ್ ಸಹಕಾರದೊಂದಿಗೆ ಹಾಸನ ಜಿಲ್ಲೆಯ ರೈತರಿಂದ ನೇರವಾಗಿ 125 ಟನ್ ತರಕಾರಿಗಳನ್ನು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ದಾಸರಹಳ್ಳಿಯ ಮಲ್ಲಸಂದ್ರ ವಾರ್ಡ್​ನ ಸುಮಾರು 10 ಸಾವಿರ ಜನರಿಗೆ ವಿತರಿಸಲಾಯಿತು. ಅಗತ್ಯವಿದ್ದವರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಜತೆಗೆ ಕರೊನಾ ಸೋಂಕು ಹರಡದಂತೆ ಸ್ವಚ್ಛತೆ, ಸಾಮಾಜಿಕ ಅಂತರ ಜಾಗೃತಿ ಮೂಡಿಸಿದ್ದಾರೆ.
ಪೌಷ್ಟಿಕ ಆಹಾರ ವಿತರಣೆ
ಜೆಡಿಎಸ್ ಮುಖಂಡ ಚರಣ್​ಗೌಡ ನೇತೃತ್ವದಲ್ಲಿ ಬಡಜನರಿಗೆ ಕೋಳಿ ಹಾಗೂ ಮೊಟ್ಟೆ ವಿತರಣೆ ಮಾಡಲಾಯಿತು. ಸೋಮಶೆಟ್ಟಿಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ಊಟದ ಜೊತೆಗೆ ಮೊಟ್ಟೆಗಳನ್ನು ವಿತರಿಸಲಾಗುತ್ತಿತ್ತು. ಹೆಗ್ಗನಹಳ್ಳಿಯಲ್ಲಿ ಎಚ್.ಆರ್. ಪ್ರಕಾಶ್ ನೇತೃತ್ವದಲ್ಲಿ 5 ಸಾವಿರ ಜನಕ್ಕೆ ಆಹಾರ ಕಿಟ್ ವಿತರಿಸಲಾಯಿತು.
ನಾಳೆ ಬೆಳಗ್ಗೆ 7ರವರೆಗೆ ಕರ್ಫ್ಯೂ: ಅಗತ್ಯ ಸೇವೆ ಹೊರತುಪಡಿಸಿ ಅನಗತ್ಯವಾಗಿ ಹೊರಬಂದರೆ ಕ್ರಮ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two − one =
Remember me
