ಬೆಂಗಳೂರು:ಉಸ್ತಾದ್ ರಫೀಕ್ ಖಾನ್ ಮತ್ತು ಅಂಕುಶ್ ಎನ್. ನಾಯಕ್ ಜುಗಲ್​ಬಂದಿ ‘ಸಿತಾರ್ ವಾದನ’ ಸಂಗೀತಪ್ರಿಯರನ್ನು ಮುದಗೊಳಿಸಿದ್ದು ಒಂದೆಡೆಯಾದರೆ, ಪದ್ಮಶ್ರೀ ಪುರಸ್ಕೃತ ಪಂ.ಎಂ. ವೆಂಕಟೇಶ್ ಕುಮಾರ್ ಅವರ ಕಂಠದಲ್ಲಿ ಮೂಡಿಬಂದ ರಾಗಗಳು ನೆರೆದಿದ್ದವರ ಮನಸೂರೆಗೊಂಡಿತು. ಸಂಗೀತ ಸಂಜೆಯಲ್ಲಿ ಗಾನ ಕೋಗಿಲೆಗಳ ಕಂಠದಿಂದ ಹೊರಹೊಮ್ಮಿದ ಸಂಗೀತ ಸ್ವರಗಳು, ಸಿತಾರ್ ವಾದನ, ತಬಲಾ ನಿನಾದ ಬೆಂಗಳೂರಿನ ಜನರನ್ನು ಮತ್ರಮುಗ್ಧಗೊಳಿಸಿದವು.


ಕಬ್ಬನ್ ಪಾರ್ಕ್​ನಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಇದೇ ಮೊದಲ ಬಾರಿಗೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಚಾನೆಲ್ ಭಾನುವಾರ ಆಯೋಜಿಸಿದ್ದ ‘ಸಂಗೀತ ಸಂಜೆ’ ಕಾರ್ಯಕ್ರಮದಲ್ಲಿ ಕಿಕ್ಕಿರಿದು ಭಾಗಿಯಾಗಿದ್ದ ನೂರಾರು ಕಲಾಭಿಮಾನಿಗಳು ಸಂಗೀತ ಸ್ವರಗಳಲ್ಲಿ ಮೈ ಮರೆತರು.
ಸಂಜೆ 7 ರಿಂದ ರಾತ್ರಿ 10 ಗಂಟೆಯವರೆಗೆ ಸಂಗೀತ ಕಛೇರಿ ನಡೆಯಿತು. ನಿರಂತರ ಮೂರು ಗಂಟೆ ನಡೆದ ಕಛೇರಿಯಲ್ಲಿ ಸಂಗೀತ ಪ್ರೇಮಿಗಳು ಮುಳುಗಿದರು. ಸಂಗೀತ ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಂಡು ಸಂಭ್ರಮಿಸಿದರು. ಬೆಂಗಳೂರು ಮಾತ್ರವಲ್ಲದೆ ಉತ್ತರ ಕರ್ನಾಟಕದ ಕಲಬುರಗಿ, ಗದಗ, ಹುಬ್ಬಳ್ಳಿ ಸೇರಿ ಹಲವು ಜಿಲ್ಲೆಗಳಿಂದ ಆಗಮಿಸಿದ್ದರು.


ಮೊದಲ ಒಂದೂವರೆ ಗಂಟೆ ಉಸ್ತಾದ್ ರಫೀಕ್ ಖಾನ್ ಮತ್ತು ಅಂಕುಶ್ ಎನ್. ನಾಯಕ್ ಅವರ ಜುಗಲ್​ಬಂದಿ ‘ಸಿತಾರ್ ವಾದನ’ ಸಂಗೀತ ಪ್ರಿಯರನ್ನು ರಂಜಿಸಿತು. ಇವರಿಗೆ ತಬಲದಲ್ಲಿ ಪಂ. ರಾಜೇಂದ್ರ ನಾಕೋಡ್ ಸಾಥ್ ಮೋಡಿ ಮಾಡಿತು. ಸಿತಾರ್ ವಾದನದಲ್ಲಿನ ಹಲವು ಪ್ರಕಾರಗಳನ್ನು ನುಡಿಸುವ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟರು. ಪ್ರತಿ ವಾದನಕ್ಕೂ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಪ್ರತಿ ರಾಗದಲ್ಲಿಯೂ ಲಯಕ್ಕೆ ತಕ್ಕಂತೆ ತಲೆದೂಗುವಂತೆ ಮಾಡಿದರು. ಜನರು ಕುಳಿತಲ್ಲಿಯೇ ತಾಳ ಹಾಕುತ್ತಾ ಜುಗಲ್​ಬಂದಿಯನ್ನು ಆನಂದಿಸಿದರು.


ನಂತರದ ಒಂದೂವರೆ ಗಂಟೆ ಪದ್ಮಶ್ರೀ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಗಾಯನ ಮೋಡಿ ಮಾಡಿತು. ಇವರಿಗೆ ಹಾಮೋನಿಯಂನಲ್ಲಿ ನರೇಂದ್ರ ನಾಯಕ್, ತಬಲದಲ್ಲಿ ಕೇಶವ ಜೋಶಿ ಹಾಗೂ ಹಿಮ್ಮೇಳದಲ್ಲಿ ವೆಂಕಟೇಶ್ ಪುರೋಹಿತ, ಆದಿತ್ಯ ಪಲ್ಲಕ್ಕಿ, ಜಗನ್ನಾಥ ಸಾಥ್ ನೀಡಿದರು. ವೆಂಕಟೇಶ್ ಕುಮಾರ್ ಅವರ ಕಂಠದಲ್ಲಿ ಮೂಡಿಬಂದ ರಾಗಗಳು ಪ್ರೇಕ್ಷಕರನ್ನು ಹಿಡಿದಿಟ್ಟವು. ಅದಾದ ನಂತರ ಅವರಿಗೆ ಖ್ಯಾತಿ ತಂದುಕೊಟ್ಟಿರುವ ಪ್ರಸಿದ್ಧ ಗೀತೆಗಳಾದ ‘ತೊರೆದು ಜೀವಿಸಬಹುದೆ ಹರಿ ನಿನ್ನ ಚರಣವನು’, ‘ಶಿವ ಶಿವ ಶಿವ ಪೂಜಿಸೋ’, ‘ಅಕ್ಕ ಕೇಳೆ ನಾನೊಂದು ಕನಸ ಕಂಡೆ’, ‘ಒಂದು ಬಾರಿ ಸ್ಮರಣೆ ಸಾಲದೆ’, ‘ಕೂಗಿದರೂ ದನಿ ಕೇಳದೆ’ ಹೀಗೆ ಹಲವು ಗೀತೆಗಳ ಮೂಲಕ ರಂಜಿಸಿದರು. ಸಂಗೀತ ಕಛೇರಿ ನಂತರ ಕಲಾವಿದರನ್ನು ಸನ್ಮಾನಿಸಲಾಯಿತು.
ವಿಆರ್​ಎಲ್ ಮೀಡಿಯಾ ಪ್ರೖೆ. ಲಿ. ಉಪಾಧ್ಯಕ್ಷ ಅರುಣ್ ಕರಡಿ, ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ, ದಿಗ್ವಿಜಯ ನ್ಯೂಸ್ ಸಂಪಾದಕ ಸಿದ್ದು ಕಾಳೋಜಿ, ಎ.ಜೆ. ಹೆಲ್ತ್​ಕೇರ್​ನ ಜಿ.ಆರ್. ಜೋಶಿ, ಸದಾಶಿವ ಕುಡ್ವ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿತ್ತು. ಸಭಾಂಗಣದಲ್ಲಿದ್ದ ಕುರ್ಚಿಗಳು ತುಂಬಿದ್ದು ಮಾತ್ರವಲ್ಲದೆ, ಸಾಕಷ್ಟು ಸಂಖ್ಯೆಯಲ್ಲಿ ಜನರು ಗಂಟೆಗಟ್ಟಲೆ ನಿಂತುಕೊಂಡೇ ಸಂಗೀತವನ್ನು ಆಲಿಸಿದ್ದು ವಿಶೇಷವಾಗಿತ್ತು.
| ಕೆ.ಎನ್. ಚನ್ನೇಗೌಡ ವಿಜಯವಾಣಿ ಸಂಪಾದಕ
ಮಾಧ್ಯಮಗಳು ಎಂದಿಗೂ ನಮ್ಮ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತವೆ. ಆದರೆ, ಇದೇ ಮೊದಲ ಬಾರಿಗೆ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಕಾರ್ಯಕ್ರಮ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ, ರಾಜ್ಯದ ವಿವಿಧ ನಗರಗಳಲ್ಲಿಯೂ ಆಯೋಜಿಸುವಂತೆ ಈ ಮೂಲಕ ಮನವಿ ಮಾಡುತ್ತೇನೆ.
| ಉಸ್ತಾದ್ ರಫೀಕ್ ಖಾನ್
ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಮುತ್ತಿನಂತೆ ಪೋಣಿಸಿದ್ದಾರೆ. ಬೆಂಗಳೂರಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಧನ್ಯವಾದಗಳನ್ನು ಹೇಳಲು ಇಚ್ಛಿಸುತ್ತೇನೆ.
| ಪಂ.ಎಂ. ವೆಂಕಟೇಶ್​ಕುಮಾರ್
ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂತು. ಮಹಾನ್ ಸಂಗೀತ ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಂಡಿದ್ದು ಸಖತ್ ಖುಷಿ ನೀಡಿತು. ಮಕ್ಕಳಿಗೆ ಈ ಕಾರ್ಯಕ್ರಮವು ಸ್ಪೂತಿದಾಯಕವಾಗಿತ್ತು.
| ಲಕ್ಷ್ಮೀ ಶೆಟ್ಕರ್
ಸಂಗೀತ ಕಾರ್ಯಕ್ರಮದಿಂದ ದಿನನಿತ್ಯದ ಒತ್ತಡಗಳಿಂದ ಮುಕ್ತಿಗೊಳ್ಳುವಂತಾಯಿತು, ಭಾನುವಾರವನ್ನು ಕುಟುಂಬ ಸಮೇತರಾಗಿ ಬಂದು ಸಂಭ್ರಮಿಸಲು ವೇದಿಕೆ ಕಲ್ಪಿಸಿರುವುದಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ.
| ಪ್ರಿಯಾಂಕ ಮೊಳ್ಕರ್
ಪಂ.ವೆಂಕಟೇಶ್​ಕುಮಾರ್ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ಬೆಳಗ್ಗೆ ಆರಂಭವಾಗುವುದೇ ಯೂಟ್ಯೂಬ್​ನಲ್ಲಿ ಇವರ ಹಾಡುಗಳನ್ನು ಕೇಳುವ ಮೂಲಕ. ಇವತ್ತು ನೇರವಾಗಿ ಕಾರ್ಯಕ್ರಮ ನೋಡುತ್ತಿರುವುದಕ್ಕೆ ಖುಷಿಯಾಗುತ್ತಿದೆ.
| ಅನುಪಮಾ
ಕ್ಲಾಸಿಕಲ್ ಕಾರ್ಯಕ್ರಮವಾಗಿರುವುದರಿಂದ ‘ಫೀಲಿಂಗ್ ಗ್ರೇಟ್​ಫುಲ್’. ದೊಡ್ಡ ಅಭಿಯಾನಿಯಾಗಿರುವುದರಿಂದ ಒಂದು ರೀತಿಯಲ್ಲಿ ಭಕ್ತಿಭಾವ ಮೂಡುತ್ತಿದೆ. ತುಂಬಾ ಎಂಜಾಯ್ ಮಾಡಿದೆವು.
| ರಾಘವೇಂದ್ರ ಜೋಶಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
