ರಾಯರು ಭಕ್ತರಿಗೆ ಭೌತಿಕ ಸುಖಸಾಧನೆಗಳನ್ನು ನೀಡುವುದರೊಂದಿಗೆ ಅಂತರಂಗದ ಸಾತ್ವಿಕತೆಯನ್ನೂ ಹೆಚ್ಚಿಸುತ್ತಿರುವರು. ಅವರು ಮತದ ಗುತ್ತಿಗೆಯಲ್ಲ. ಕಾಲಕ್ಕೆ ತಮ್ಮನ್ನು ಕಟ್ಟಿಕೊಂಡಿಲ್ಲ. ಯಾವೊಬ್ಬ ವ್ಯಕ್ತಿಯಲ್ಲಿ ಸಿಕ್ಕುಬಿದ್ದಿಲ್ಲ. ಮಠಕ್ಕೆ ಅಂಟಿಕೊಂಡಿಲ್ಲ. ಆದ್ದರಿಂದ ರಾಯರು ಪೂಜ್ಯರು. ಜೀವನದಲ್ಲಿ ನಡೆಯುತ್ತ ನಿಲ್ಲಬಾರದು. ನಿಂತೂ ನಡೆಯಬೇಕು. ನಡೆದರೆ ಶಕ್ತಿ.
|ಪಂ. ಪೂರ್ಣಪ್ರಜ್ಞಾಚಾರ್ಯ ಮಳಗಿಮಹಾಕವಿ ಕಾಳಿದಾಸ ತನ್ನ ಸಾಹಿತ್ಯದಲ್ಲಿ ಒಂದಡೆ ಹೀಗೆ ವರ್ಣಿಸುತ್ತಾನೆ. ಪ್ರಾಂಶುಲಭ್ಯೇ ಫಲೆ ಲೋಭಾತ್ ಉದ್ಬಾಹುರಿವ ವಾಮನಃ ಅರ್ಥ.. ಎತ್ತರದ ವೃಕ್ಷದಲ್ಲಿರುವ, ರುಚಿಯಾದ ಹಣ್ಣಿಗೆ ಆಸೆಪಟ್ಟ ಒಬ್ಬ ಕುಳ್ಳ ವ್ಯಕ್ತಿ ಕೈಗಳನ್ನು ಮೇಲಕ್ಕೆತ್ತಿ ಪಡೆಯಲು ಪ್ರಯತ್ನಿಸಿದಂತೆ. ಹಾಗೆ ಆಚಾರ್ಯಮಧ್ವರ ಸಿದ್ಧಾಂತ ಒಂದು ಉನ್ನತವಾದ ಕಲ್ಪತರು. ಉದ್ಬಾಹುರಿವ ವಾಮನಃ ಎಂಬಂತೆ ನಮ್ಮ ಪರಿಸ್ಥತಿ. ನಮ್ಮ ಮಂತ್ರಾಲಯ ಪ್ರಭುಗಳು ಬಾನೆತ್ತರಕ್ಕೆ ಬೆಳೆದ ಮಧ್ವಸಿದ್ಧಾಂತವೆಂಬ ಕಲ್ಪತರುವಿನ ತುಟ್ಟತುದಿಗೆ ಹೋಗಿ ಅಲ್ಲಿರುವ ತತ್ವಗಳೆಂಬ ಮಹಾಫಲಗಳನ್ನು ತಮ್ಮ ಗ್ರಂಥಗಳ ಮೂಲಕ ಎಲ್ಲರಿಗೆ ತಲುಪಿಸಿದ ಮಹಾನುಭಾವರು. ಶ್ರೀರಾಘವೇಂದ್ರರು ವಿಶ್ವಸಂತರು. ದೈವೀಪುರುಷರು. ಶಾಪಾನುಗ್ರಹ ಸಮರ್ಥರು. ಭವ್ಯಸ್ವರೂಪರು. ಗುರುರಾಯರು ದೇವರನ್ನು ತಿಳಿದವರು ಮಾತ್ರವಲ್ಲ ಕಂಡು ಅನುಭವಿಸಿದವರು. ರಾಯರಿಗೆ ಎಲ್ಲರೂ ಬೇಕು. ಎಲ್ಲರಿಗೂ ಅವರು ಬೇಕು. ಅವರು ವಿಶ್ವದ ಸೊತ್ತು. ಸಮಸ್ತ ವಿಶ್ವಕ್ಕೆ ಅವರು ಗೊತ್ತು. ಧರೆಯ ಮೇಲಿದ್ದ ಜನರ ಪೊರೆಯುವೆ ಎಂಬುದು ದೇವರಿಗೆ ಅವರಿತ್ತ ಉತ್ತರ.
ಶ್ರೀರಾಘವೇಂದ್ರಗುರುಸಾರ್ವಭೌಮರ ನಿಕಟವರ್ತಿಗಳಾದ, ಗುರುರಾಜರ ಅಂತರಂಗ ಶಿಷ್ಯರಾದ, ಮಹಾಜ್ಞಾನಿಗಳಾದ ಅಪ್ಪಣಾಚಾರ್ಯರು ತಮ್ಮ ಮನ ಬಿಚ್ಚಿ, ಹೃದಯತುಂಬಿ, ಭಾವೋದ್ವೇಗದಿಂದ ರಚಿಸಿದ ಸಂಸ್ಕೃತ ಪದ್ಯ ಶ್ರೀರಾಘವೇಂದ್ರಸ್ತೋತ್ರ. ಪಂಡಿತರಿಂದ ಪಾಮರರವರೆಗೆ ಸರ್ವರಿಗೂ ಸರ್ವಾಭೀಷ್ಟಪ್ರದವಾದ ಸ್ತೋತ್ರವಿದು. ಸ್ವತಃ ಶ್ರೀರಾಘವೇಂದ್ರರೇ ಈ ಸ್ತೋತ್ರ, ಮಂತ್ರಸದೃಶವೆಂದು, ಶ್ರೀಹಯಗ್ರೀವದೇವರೇ ಇದಕ್ಕೆ ಸಾಕ್ಷಿ. ಸಾಕ್ಷಿ ಹಯಾಸ್ಯೋತ್ರ ಹೀ ಎಂದು ವೃಂದಾವನದಲ್ಲಿದ್ದು ಅದೃಶ್ಯರಾಗಿ ಆಡಿದ ಮಾತೇ ಇದಕ್ಕೆ ಪರಮ ಪ್ರಮಾಣ. ಅಂತಃಸ್ತೋತ್ರದಲ್ಲಿಯ ರಾಯರ ಅನೇಕ ಗುಣಗಳಲ್ಲಿ ಕೆಲವು ಗುಣಗಳನ್ನು ಅರಿಯುವ ಪ್ರಯತ್ನವಿದು.
ದೇವಾಲಿ ಸೇವಿತ ಪರಾಂಘಿ ಪಯೋಜ ಲಗ್ನಾ ಗುರುರಾಜರ ಈ ಸ್ತೋತ್ರದಲ್ಲಿ ದೇವತೆಗಳನ್ನು ದುಂಬಿಗೆ ಹೋಲಿಸಿದ್ದನ್ನು ಕಾಣುತ್ತೇವೆ . ದುಂಬಿ ಒಂದು ವಿಶಿಷ್ಟಗುಣವುಳ್ಳದ್ದು. ದುಂಬಿ ಎಂದೋ ಒಮ್ಮೆ ಕುಸುಮದ ಮಕರಂದವನ್ನು ಸ್ವೀಕರಿಸುವುದಿಲ್ಲ. ಹೂವಿನ ಪರಿಮಳಕ್ಕೆ ಆಕರ್ಷಿತವಾದ ದುಂಬಿ ಪ್ರತಿನಿತ್ಯ ಜೇನನ್ನು ಸ್ವೀಕರಿಸಿ ಸಂಗ್ರಹಿಸುತ್ತದೆ. ಅದರಂತೆ ದೇವತೆಗಳು ಪರಮಾತ್ಮನ ಗುಣಗಳ ಸೆಳೆತಕ್ಕೆ ಒಳಪಟ್ಟು ಪ್ರತಿಕ್ಷಣವೂ ದೇವರನ್ನು ಆಶ್ರಯಿಸುತ್ತಾರೆ, ಆರಾಧಿಸುತ್ತಾರೆ. ಯಾವುದೋ ನಿಮಿತ್ತಕ್ಕೆ ಪರಮಾತ್ಮನನ್ನು ಆಶ್ರಯಿಸಿದವರಲ್ಲ ದೇವತೆಗಳು. ಇದು ಅವರ ಸ್ವಭಾವ. ಅಂತಃ ದೇವಾಂಶ ಸಂಭೂತರು ನಮ್ಮ ಗುರುರಾಘವೇಂದ್ರರು.
ಲಾಭಕ್ಕಾಗಿ, ತಮ್ಮ ಸ್ವಾರ್ಥಕ್ಕಾಗಿ, ಪ್ರತಿಷ್ಠೆಗಾಗಿ, ಜನರ ದೃಷ್ಟಿಯಲ್ಲಿ ತಾನು ಉತ್ತಮನೆನಿಸುವುದಕ್ಕಾಗಿ ದೇವರನ್ನು ಸ್ತುತಿಸುವುದು, ನೂರಾರು ಅಪೇಕ್ಷೆಗಳಿಂದ ಕೂಡಿದ ವ್ರತ ನಿಯಮಗಳಿಂದ ಭಗವಂತನನ್ನು ಆರಾಧಿಸುವುದು ಇದು ಸಾಮಾನ್ಯ ಮನುಷ್ಯರ ಸ್ವಭಾವವೇ ಹೊರತು ಮಹಾತ್ಮರಾದ, ದೇವತೆಗಳ ಸ್ವಭಾವವಲ್ಲ.
ಅಪ್ಪಣಾಚಾರ್ಯರು ನಮ್ಮ ರಾಯರನ್ನು ದೇವಸ್ವಭಾವದವರು ಎನ್ನುತ್ತಾರೆ. ರಾಯರು ಸದಾಕಾಲ, ಯಾವ ಲೌಕಿಕ ಅಪೇಕ್ಷೆ ಇಲ್ಲದೆಯೆ ದೇವರನ್ನು ಚಿಂತಿಸುವರು. ಕಡು ಬಡತನದಲ್ಲಿ ಜೀವಿಸುವಾಗಲೂ ದೇವರಲ್ಲಿ, ತಾವು ನಂಬಿದ ಸತ್ಯಧರ್ಮದಲ್ಲಿ, ಸದಾ ರತರಾದ ಕಾರಣ ರಾಯರು ದೇವಸ್ವಭಾವದವರು. ತಮ್ಮನ್ನು ಆಶ್ರಯಿಸಿ ಬಂದ ಭಕ್ತರಿಗೆ ಯಾವ ಸ್ವಾರ್ಥವಿಲ್ಲದೆ ಅನುಗ್ರಹಿಸುತ್ತಿರುವರು. ಆದ್ದರಿಂದ ರಾಯರು ದೇವಸ್ವಭಾವದವರು.
ದೇವಸ್ವಭಾವಃ ಸಕಲಪ್ರದರಾದ ನಮ್ಮ ರಾಯರು! ದೇವ = ದೇವರ, ಸ್ವ-ಭಾವ = ತನ್ನ ಇಚ್ಛೆ. ದೇವರ ಇಚ್ಛೆ, ಅವನ ಸಂಕಲ್ಪನ್ನು ಅರಿತು ತಮ್ಮ ಬಳಿಬಂದ ಭಕ್ತರಿಗೆ ಸರ್ವಸ್ವವನ್ನು ದಯಪಾಲಿಸುವರು ನಮ್ಮ ರಾಯರು ಆದ್ದರಿಂದ ದೇವಸ್ವಭಾವದವರು.
ದೈವೀಸಂಪತ್ತಿನ ಸಾಕಾರಮೂರ್ತಿಗಳು ಗುರು ರಾಘವೇಂದ್ರರು. ಧರ್ಮದ ಬಿಗಿ, ಜ್ಞಾನದ ಗುರಿ, ಕರ್ಮದ ಕಟ್ಟು, ನೀತಿಯ ನೆಲೆ, ಭಕ್ತಿಯ ಬಲದ ಪಂಚಮಹಾಭೂತಗಳಿಂದ ಎಲ್ಲರ ಬದುಕಿನ ಪ್ರಪಂಚವನ್ನು ನಿರ್ವಿುಸುತ್ತಿರುವರು. ವಿವಿಧತೆಯಲ್ಲಿಯೂ ಏಕತೆ ತರುತ್ತಿರುವರು ರಾಯರು.
ಜನ್ಮ, ಜಾತಿ, ಹುಟ್ಟಿದ ಪರಿಸರ, ಸಂಸ್ಕಾರ, ಆಹಾರ, ವಿಹಾರ, ವೇಷಭೂಷಗಳು ವಿಚಿತ್ರವಾಗಿರಬಹುದು. ಇಂತಹ ಎಲ್ಲರ ಬದುಕಿಗೆ ಆದ್ಯಾತ್ಮಿಕತೆಯ, ಆಸ್ತಿಕತೆಯ ವಿಚಾರ ಸಿಂಚನಗಳಿಂದ ಬದುಕಿಗೆ ದಿಕ್ಕು ತೋರಿಸಿ, ಕ್ರಾಂತಿ ಮಾಡುತ್ತಿರುವವರು ಶ್ರೀರಾಘವೇಂದ್ರರು.
ರಾಯರು ತಮ್ಮ ಆತ್ಮಸಾಧನ, ಆತ್ಮಸಿದ್ಧಿಗಳಿಂದ ಆತ್ಮತೃಪ್ತರಾಗಿ ಉಳಿಯಲಿಲ್ಲ. ಅವರ ಸಿದ್ಧಿ ಲೋಕಮುಖವಾಗಿ ಕೆಲಸ ಮಾಡಿತು. ಗುರುರಾಯರ ಪ್ರಚಂಡ ಪಾಂಡಿತ್ಯ, ಪ್ರತಿಭೆ, ಹರಿಭಕ್ತಿ, ಉಪಾಸನಾಸಿದ್ಧಿ, ಪ್ರಸಿದ್ಧಿ, ಗ್ರಂಥಲೇಖನ, ಲೊಕೋಪಕಾರ ಇವೆಲ್ಲ ರಾಯರ ಜೀವನದ, ವ್ಯಕ್ತಿತ್ವದ ಅವಿಭಾಜ್ಯ ಅಂಗಗಳು. ಆದ್ದರಿಂದ ರಾಯರು ದೇವಸ್ವಭಾವದವರು, ಪೂಜ್ಯರು.
ವಿದ್ವತ್ ಪರಿಜ್ಞೆಯ ಮಹಾ ವಿಶೇಷಃ ಶ್ರೀಸುಧೀಂದ್ರರ ವರಕುವರರಾದ, ಗುರುರಾಜರಲ್ಲಿಯ ಅತ್ಯದ್ಭುತ ಮಹಾಗುಣಗಳನ್ನು ಮೇಧಾವಿ ಮೂರ್ಧನ್ಯರಿಂದ, ವಿದ್ವತ್ಪೂರ್ಣರಾದ ಜ್ಞಾನಿಗಳಿಂದ ಮಾತ್ರವೇ ತಿಳಿಯಲು ಸಾಧ್ಯ. ಗುರುರಾಜರು ಇಂತಹ ಅಸಾಧಾರಣ ದೈವೀಸಂಪತ್ತು ಪಡೆದದ್ದು ಹರಿಪಾದಕಂಜ ನಿಷೇವಣದಿಂದ ರಾಯರಿಗಿರುವ ಪರಮಾತ್ಮನ ಪಾದಕಮಲದಲ್ಲಿಯ ಅಚಲವಾದ ಭಕ್ತಿ, ಶ್ರದ್ಧೆಗಳೇ ಅವರನ್ನು ಪೂಜ್ಯರನ್ನಾಗಿಸಿವೆ.
ರಾಯರು ಶ್ರೀಹರಿಯನ್ನು ನಂಬಿದ್ದಕ್ಕೆ ಭಕ್ತಿಯಿಂದ, ಜ್ಞಾನದಿಂದ, ವೈರಾಗ್ಯ, ತಪಸ್ಸು, ಯಶಸ್ಸು, ಶುದ್ಧ ಸಾಧನ, ಸಾತ್ವಿಕ ಸ್ವಭಾವ, ಕಾರುಣ್ಯ, ಇಂತಹ ಅನೇಕ ಗುಣಗಳಿಂದ ತಮ್ಮ ಬದುಕಿನಲ್ಲಿ ಬಾನೆತ್ತರಕ್ಕೆ ಬೆಳೆದರು. ಅನಾದಿಯಾಗಿ, ಸಕಲದೇವತೆಗಳು, ಋಷಿಮುನಿಗಳಿಂದ ಅನುಸರಿಸಿದ ಪರಂಪರೆಯಾಗಿ, ಸಂಪ್ರದಾಯವಾಗಿ ಬೆಳೆದುಬಂದ ಶ್ರೀಮಧ್ವಮತ ವರ್ಧನರಾದರು, ಶ್ರೀಮನ್ಮಧ್ವಾಚಾರ್ಯರ, ಶ್ರೀಜಯತೀರ್ಥರ ಗ್ರಂಥಗಳ ಭಾವವನ್ನು ಅರಿಯಲು ತಮ್ಮ ಗ್ರಂಥಗಳಿಂದ ಭಾವದೀಪರಾದರು. ಭಗವದ್ಗೀತೆ, ಉಪನಿಷತ್ತುಗಳ ವ್ಯಾಖ್ಯಾನಗಳಿಂದ ಅನನ್ಯ ಖ್ಯಾತಿಯನ್ನು ಹೊಂದಿದರು. ಟೀಕಾಚಾರ್ಯರ ಗ್ರಂಥಗಳಿಗೆ ವ್ಯಾಖ್ಯಾನಿಸುವ ಮೂಲಕ ಅಸಾಧಾರಣ ಗುರುಭಕ್ತಿಗೆ ಉಪಮೆಯಾದರು. ಇವೆಲ್ಲ ಗುಣಗಳು ವಿದ್ವತ್ಪರಿಜ್ಞೇಯ ಮಹಾ ವಿಶೇಷಗಳು. ಸಾಮಾನ್ಯರ ಮತಿಗೆ ಎಟುಕದ, ನಿಲುಕದ ಗುಣಗಳು.
ಹರಿದಾಸರು ಕಂಡ ಗುರುರಾಜರು.
ರಾ ಎನಲು ರಾಶಿದೋಶಗಳ ದಹಿಸುವದು
ಘ ಎನಲು ಘನ ಜ್ಞಾನ ಭಕುತಿಯನಿತ್ತು
ವೇಂ ಎನ್ನೆ ವೇಗದಿ ಜನನ ಮರಣ ಗೆದ್ದು
ದ್ರ ಎನೆ ದ್ರವಿಣಾಕ್ಷ ಶೃತಿ ಗೇವ ಘನಕಾಂಬ.
ಶ್ರೀವಿಜಯದಾಸರ ಶಿಷ್ಯರಾದ ಗೋಪಾಲದಾಸರು ರಾಯರ ಹೆಸರಿನಲ್ಲಿರುವ ಒಂದೊಂದು ಅಕ್ಷರಕ್ಕೂ ಎಷ್ಟು ಮಹತ್ವವಿದೆ ಎಂಬುದಾಗಿ ಶ್ರೀರಾಘವೇಂದ್ರ ಎಂಬ ಶಬ್ದದ ಮಹಿಮೆಯನ್ನು ಸಾರಿದ್ದಾರೆ.
ಹೀಗೆ ಜಗನ್ನಾಥದಾಸರು, ವಾಸುದೇವ ವಿಠ್ಠಲ ಎಂಬ ನಾಮಾಂಕಿರಾದ ವೇಣೀಸೋಮಾಪುರದಲ್ಲಿ ವಾಸವಾಗಿರುವ ಶ್ರೀವ್ಯಾಸತತ್ವಜ್ಞರು, ಪ್ರಸನ್ನವೆಂಕಟದಾಸರು, ಕನಕಾದ್ರಿವಿಠಲರು, ಶ್ರೀಶೇಷದಾಸರು ಮೊದಲಾದ ಅನೇಕ ಮಹನೀಯ ದಾಸವರ್ಗ, ಗುರುರಾಜರ ಮಹಿಮೆಯನ್ನು ಅತ್ಯಂತ ಭಕ್ತಿಯಿಂದ ತಮ್ಮ ಶಬ್ದಗಳಲ್ಲಿ ಕಟ್ಟಿಹಾಕುವ ಪ್ರಯತ್ನವನ್ನು ಮಾಡಿದೆ.
ಮನುಷ್ಯರ ಸಮಸ್ಯೆ ಬಲು ವಿಚಿತ್ರ. ಬದುಕಲು ಬೇಕಾದದ್ದು ಪಡೆದಿಲ್ಲ. ಪಡೆದದ್ದು ಉಳಿಯುತ್ತಿಲ್ಲ. ಇದ್ದದ್ದು ಅನುಭವಿಸುತ್ತಿಲ್ಲ. ಎಡೆ ಬಿಡದ ಕಾದಾಟ. ಇದು ಸಕಲರ ಸಂಸಾರ. ಇವು ಬಾಳಿನ ಗೋಳುಗಳು. ಇವಕ್ಕೆ ಎಲ್ಲರೂ ಅಷ್ಟೆ. ಸಮಸ್ಯೆ ಅನೇಕ. ಅವುಗಳಿಗೆ ಪರಿಹಾರ ಒಂದೆ. ಅದುವೇ ಶ್ರೀರಾಘವೇಂದ್ರರು.
ರಾಯರು ಭಕ್ತರಿಗೆ ಭೌತಿಕ ಸುಖಸಾಧನೆಗಳನ್ನು ನೀಡುವುದರೊಂದಿಗೆ ಅಂತರಂಗದ ಸಾತ್ವಿಕತೆಯನ್ನೂ ಹೆಚ್ಚಿಸುತ್ತಿರುವರು. ಅವರು ಮತದ ಗುತ್ತಿಗೆಯಲ್ಲ. ಕಾಲಕ್ಕೆ ತಮ್ಮನ್ನು ಕಟ್ಟಿಕೊಂಡಿಲ್ಲ. ಯಾವೊಬ್ಬ ವ್ಯಕ್ತಿಯಲ್ಲಿ ಸಿಕ್ಕುಬಿದ್ದಿಲ್ಲ. ಮಠಕ್ಕೆ ಅಂಟಿಕೊಂಡಿಲ್ಲ. ಆದ್ದರಿಂದ ರಾಯರು ಪೂಜ್ಯರು. ಜೀವನದಲ್ಲಿ ನಡೆಯುತ್ತ ನಿಲ್ಲಬಾರದು. ನಿಂತೂ ನಡೆಯಬೇಕು. ನಡೆದರೆ ಶಕ್ತಿ. ನಡೆಯುವವರು ಶಕ್ತರು. ನಿಂತರೆ ಅಶಕ್ತರು. ಬದುಕಿನ ಅಡೆತಡೆ ಪರಿಹರಿಸಿ ಗುರುರಾಜರು ಮುನ್ನಡೆಸುವರು ಅದಕ್ಕೆ ರಾಯರು ಪೂಜ್ಯರು. ಮನದ ಮಲವನ್ನು ಕಳೆಯುವ, ದೇಹದ ದೋಷಗಳನ್ನು ಪರಿಹರಿಸುವ, ಸಂತಾನ, ಸಂಪತ್ತು, ಪರಿಶುದ್ಧಭಕ್ತಿ, ಮುಂತಾದ ಅನೇಕ ಗುಣಮಂಡಿತರಾದ ಮಂತ್ರಾಲಯ ಪ್ರಭುಗಳ 352ನೇಯ ಆರಾಧನಾ ಅಂಗವಾಗಿ ರಾಯರ ಅಂತರ್ಯಾಮಿಯಾದ ಶ್ರೀಹರಿಯ ಚರಣಕಮಲಗಳಲ್ಲಿ ನುಡಿನಮನವನ್ನು ಸಲ್ಲಿಸುತ್ತಿದ್ದೇನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
