ವಸಂತದಲ್ಲಿ ಚಿಗುರಿದ ಮರಗಿಡಗಳಿಗೆ ಮಳೆಗಾಲದಲ್ಲಿ ಮತ್ತಷ್ಟು ಹುರುಪು ಬರುತ್ತದೆ; ಹಸಿರು ಹೆಚ್ಚುತ್ತದೆ. ಹಾದಿಯ ಇಕ್ಕೆಲಗಳನ್ನು ಅವರಿಸುವ ಹಸಿರು ಹೊದಿಕೆ ; ಎಲೆಗಳಿಂದ ತೊಟ್ಟಿಕ್ಕುವ ಹನಿಗಳು ಹಾದಿಹೋಕನಿಗೆ ಹೊಸ ಹೊಸ ಕಥೆಗಳನ್ನು ಹೇಳುತ್ತವೆ. ಹಾಗೇ ಮಳೆಗಾಲದಲ್ಲಿ ನೂರಾರು, ಸಾವಿರಾರು ಕ್ರಿಮಿಕೀಟಗಳು ಅಸ್ತಿತ್ವ ಪಡೆಯುತ್ತವೆ.
ಮಕ್ಕಳಿಗೂ-ದೋಣಿಗೂ ಅದೇನೋ ನಂಟು. ನದಿಯಲ್ಲಿ ದೋಣಿ ಕಂಡರೆ ತಾನೂ ಅದರಲ್ಲಿ ಪಯಣಿಸಬೇಕೆಂಬ ಆಸೆ. ದೋಣಿಯಲ್ಲಿ ಸಾಗುವಾಗ ಕೈಗಳನ್ನು ನೀರಿನಲ್ಲಿ ಇಳಿಬಿಟ್ಟು ಆಟ ಆಡುವ ಉಮೇದು. ಹಾಗೆ ಮಾಡುವುದು ಡೇಂಜರ್ ಎಂದು ದೋಣಿಯವ ಎಚ್ಚರಿಸಿದರೂ ಡೊಂಟ್ ಕೇರ್. ಇಂಥ ಮಕ್ಕಳು ಮಳೆಗಾಲ ಬಂದಾಗ ಸುಮ್ಮನೆ ಕೂಡ್ರುತ್ತಾರೆಯೇ! ಶಾಲಾ ಪಟ್ಟಿಯ ಹಾಳೆಗಳೆಲ್ಲ ದೋಣಿಯಾಗಿ ಆಕಾರ ಪಡೆಯುತ್ತವೆ. ಅದರಲ್ಲೂ ಕಲರ್ ಪೆನ್ನಿನಲ್ಲಿ ಬರೆದ ಹಾಳೆಗಳಾದರಂತೂ ದೋಣಿಗೂ ರಂಗು. ತೋಟದ ಕಾಲುವೆ ಇರಲಿ, ಅಂಗಳದ ತುದಿಯ ಕಾಲುವೆ ಇರಲಿ ಅಥವಾ ಬೆಟ್ಟಬೇಣದ ನೀರು ಹೋಗುವ ದಾರಿ ಇರಲಿ ಎಲ್ಲಾದರೂ ಸರಿ, ದೋಣಿ ಬಿಟ್ಟು ಅದು ನೀರಿನಲ್ಲಿ ಕುಣಿಯುತ್ತ, ತೇಲುತ್ತ ಹೋಗುವುದನ್ನು ನೋಡುವುದು ಎಂದರೆ ಎಲ್ಲಿಲ್ಲದ ಪ್ರೀತಿ. ಯಾರ ದೋಣಿ ಹೆಚ್ಚು ದೂರ ಹೋಗುತ್ತದೆ ಎಂಬ ಸ್ಪರ್ಧೆ ಬೇರೆ. ಆಗ ಗೊತ್ತಾಗುತ್ತಿರಲಿಲ್ಲ ಈ ಮೋಜಿನಾಟದಲ್ಲಿ ಒಂದು ಅದ್ಭುತವಾದ ಜೀವನಸಂದೇಶ ಸಹ ಇದೆ ಎಂದು. ನೀರಿನಲ್ಲಿ ಬಿಟ್ಟ ದೋಣಿ ತೇಲುತ್ತ ಹೊಯ್ದಾಡುತ್ತ ಸಾಗುತ್ತದೆ. ಕೆಲವೊಮ್ಮೆ ತಿರುವಿನಲ್ಲಿ ಸಿಲುಕಿ ಮುಂದೆ ಸಾಗದೆ ನಿಂತುಬಿಡುತ್ತದೆ. ಇನ್ನೇನು ಮುಳುಗಿಹೋಯಿತು ಎನ್ನುವಂತಾದಾಗ ಮತ್ತೆ ನಗುವುದಿದೆ. ಕೆಲ ದೋಣಿಗಳು ಸ್ವಲ್ಪ ದೂರವೂ ಸಾಗದೆ ಪಲ್ಟಿ ಹೊಡೆದು ಮುಳುಗುವುದಿದೆ. ಕೊನೆಗೆ ಕಾಣದಂತೆ ಮಾಯವಾಗುತ್ತದೆ.
ಅನುಭವಿಗಳು-ಅನುಭಾವಿಗಳು ಜೀವನವನ್ನು ನದಿಗೆ ಹೋಲಿಸುತ್ತಾರೆ. ಒಂದು ನದಿ ಹೇಗೆ ಸಾಗರ ಸೇರುವವರೆಗೆ ಹರಿವಿನಲ್ಲಿ ಏರುತ್ತ ಇಳಿಯುತ್ತ, ತಿರುವಿನಲ್ಲಿ ಬಾಗಿ ಬಳುಕುತ್ತ ಸಾಗುತ್ತದೆಯೋ ಹಾಗೆ ಮಾನವನ ಜೀವನ ಕೂಡ ಏರಿಳಿತಗಳಲ್ಲಿ ಸಾಗುತ್ತದೆ. ಮೋಕ್ಷವು ಮನುಷ್ಯನ ಅಂತಿಮ ಗುರಿ ಎಂದು ಆಸ್ತಿಕರು ನಂಬುತ್ತಾರೆ. ನದಿಯು ಸಮುದ್ರದಲ್ಲಿ ಲೀನವಾಗಿ ಹೇಗೆ ಸಿಂಧುವಿನಲ್ಲಿ ಬಿಂದುವಾಗಿ ಸಾರ್ಥಕತೆ ಪಡೆಯುವುದೋ ಹಾಗೆ ಮಾನವನು ಮೋಕ್ಷದ ಮೂಲಕ ಜೀವನ ಸಾಫಲ್ಯ ಪಡೆಯುತ್ತಾನೆ ಎಂಬುದು ಆಸ್ತಿಕರ ಶ್ರದ್ಧೆ. ಅಲ್ಲಿಯವರೆಗೆ ಪುನಃ ಪುನಃ ಜನ್ಮವೆತ್ತಿ ಬರಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಆಚಾರ್ಯ ಶಂಕರರು ಇದನ್ನೇ ‘ಪುನರಪಿ ಜನನಂ ಪುನರಪಿ ಮರಣಂ’ ಎಂದು ಹೇಳಿದ್ದಾರೆ. ‘ಚುಟುಕು ಬ್ರಹ್ಮ’ ಎಂದೇ ಖ್ಯಾತರಾದ ದಿನಕರ ದೇಸಾಯಿ ಅವರು ‘ನದಿಯ ಆತ್ಮಚರಿತ್ರೆ’ ಎಂಬ ಕವನದಲ್ಲಿ ನದಿಯ ಜೀವನ ಪಯಣವನ್ನು ಸೊಗಸಾಗಿ ವರ್ಣಿಸಿದ್ದಾರೆ. ‘ಸಹ್ಯಾದ್ರಿ ಶೃಂಗದಲಿ ಜನಿಸಿದೆನು ನಾನು/ ಚಿಕ್ಕಂದಿನಲ್ಲಿ ನನ ಬಾಳು ಸವಿಜೇನು/ ಚಲ್ಲವಾಡುತ ಜಿಗಿದು ಕುಣಿಯುತ್ತಲಿದ್ದೆ/ ಬಂಡೆಗಲ್ಲಿನ ದಾಹ ತಣಿಸುತ್ತಲಿದ್ದೆ/ ಮುಂದೆ ಕಂದರದಲ್ಲಿ ಭೋರೆಂದು ಹಾರಿ/ ಲಲಿತ ಜಲಪಾತದಲಿ ಚೇತನವ ತೋರಿ/ ಬೆಟ್ಟವನ್ನು ಬಿಟ್ಟು ಬಿಸಿ ಬೈಲೊಳಗೆ ಬಂದೆ/ ಇಷ್ಟರಲಿ ಯೌವನವು ಬಂತೆನಗೆ/ ಮುಂದೆ ದಾರಿಯಲಿ ಹಳ್ಳಗಳು ನೂರಾರು ಸೇರಿ/ ಸಂಸಾರ ವಿಸ್ತಾರ ಬೆಳೆದು ಮಿತಿ ಮೀರಿ/ ದೋಣಿ ಹಡಗದ ಬಳಗ ಮೈಮೇಲೆ ನಿಂತು/ ಸಂಸಾರ ಭಾರವೇ ಸಾಕಾಗಿ ಬಂತು/ ಜಂತು ಮೊಸಳೆಗಳೆಲ್ಲ ಒಡಲಲ್ಲಿ ಸೇರಿ/ ಬೇನೆ ತಂದವು, ಸಾಕು ಜೀವನ, ಮುರಾರಿ/ ಮುಂದೆ ಉಸುಬಿಗೆ ಬರಲು ಮುದುಕಾದೆ ದೇವ/ ಮಂದಮಂದನೆ ಸಾಗಿ ಜಿಣುಗಾಯ್ತು ಜೀವ/ ಇನ್ನು ಕಡಲನು ಸೇರೆ ಮರಣದಲಿ ಶಾಂತಿ/ ಮುನ್ನೀರ ತೆರೆಯಲ್ಲಿ ಜೀವನದ ಕ್ರಾಂತಿ/.’ ಈ ಕವನ ಜೀವನದರ್ಶನ ಮಾಡಿಸುವ ಪರಿ ಅನನ್ಯ.
‘ಈ ದೇಹವು ಸಂಸಾರ ಸಾಗರವನ್ನು ದಾಟಿಸುವ ಸುಂದರ ನೌಕೆಯಾಗಿದೆ. ಮತ್ತು ಈ ನೌಕೆಯನ್ನು ನಡೆಸುವ ಅಂಬಿಗನು ಸದ್ಗುರುವೆ ಆಗಿದ್ದಾನೆ ಎಂದು ಶ್ರೀಮದ್ಭಾಗವತದಲ್ಲಿ ಹೇಳಲಾಗಿದೆ. ಈ ನೌಕೆಯನ್ನು ಯೋಗ್ಯರೀತಿಯಿಂದ ಇನ್ನೊಂದು ದಡಕ್ಕೆ ಒಯ್ಯಲು ಸದ್ಗುರುವಿನ ಕೃಪೆ ಅತ್ಯವಶ್ಯಕವಾಗಿದೆ’ ಎಂದು ಶ್ರೀ ಶ್ರೀಧರ ಸ್ವಾಮಿಗಳು ಹೇಳುತ್ತಾರೆ. ಸಂಸಾರ ಸಾಗರದ ಯಾನಕ್ಕೆ ದೇಹವೇ ನೌಕೆಯಾಗುವ ಸೋಜಿಗ ಇದು. ದಾಸರು ಹೇಳಿದರು- ‘ಮಾನವ ಜನ್ಮ ದೊಡ್ಡದು…’
* * *
ಮಲೆನಾಡ ಹಳ್ಳಿಗಳಲ್ಲಿ ಕಾಲುದಾರಿ ಅಂತ ಇರುತ್ತದೆ. ಅಂದರೆ ನಡೆದು ಹೋಗಲು ಬಳಸುವ ಹಾದಿ. ಜನರು ಓಡಾಡಿ ಓಡಾಡಿ ಒಂದೂವರೆ ಎರಡು ಅಡಿಯಷ್ಟು ಜಾಗ ಸವೆದಿರುತ್ತದೆ. ಹೀಗಾಗಿ ಅಲ್ಲಿ ಹುಲ್ಲು ಹುಟ್ಟಲು ಆಸ್ಪದ ಇರುವುದಿಲ್ಲ. ವಾಹನ ಓಡಾಡಲು ಬೇರೆ ರಸ್ತೆ ಇರುತ್ತದೆ. ಅಂಥ ಎಕ್ಸ್​ಪರ್ಟ್ ಡ್ರೖೆವರ್ ಇದ್ದರೆ ಈ ಕಾಲುದಾರಿಯಲ್ಲಿ ಸರ್ಕಸ್ ಮಾಡುತ್ತ ಬೈಕ್ ಓಡಿಸಬಹುದೇನೋ ಅಷ್ಟೇ. ಯಲ್ಲಾಪುರ ತಾಲೂಕಿನ ಹಿರೇಸರ ಎಂಬ ಹಳ್ಳಿಯ ಹಳ್ಳದ ಆಚೆಗೆ ಕಾನಬೇಣ ಅಂತ ದೊಡ್ಡ ಗುಡ್ಡ ಪ್ರದೇಶ. ಮೊದಲು ಇದು ಸಮೃದ್ಧ ಹುಲ್ಲುಗಾವಲು. ಇಡೀ ಊರಿಗೆ ಸೇರಿದ ಜಾಗ. ಅಲ್ಲಿ ಆಯಾ ಕುಟುಂಬಕ್ಕೆ ಇಂತಿಷ್ಟು ಜಾಗ ಎಂದು ಮೀಸಲು. ಆ ಜಾಗದಿಂದ ಹುಲ್ಲು, ಕರಡ (ಒಣಗಿದ ಹುಲ್ಲು) ಒಯ್ಯುವುದು ಎಷ್ಟೋ ಕಾಲದಿಂದ ಬಂದ ರೂಢಿ. ಉಮಚಗಿ ಹಾಗೂ ಹಿರೇಸರ ನಡುವೆ ಸಂಪರ್ಕ ಕಲ್ಪಿಸುತ್ತದೆ ಈ ಬೇಣ. ಅಲ್ಲಿ ಜನರು ನಡೆದಾಡಲು ಕಾಲುದಾರಿ ಇತ್ತು. ದೂರದಿಂದ ನೋಡಿದರೆ ಥೇಟ್ ತಲೆಯ ಬೈತಲೆ ಹಾಗೆ ಕಾಣುತ್ತದೆ. ಅದೊಂದು ವಿಶಿಷ್ಟ ನೋಟ. ಬೇಸಿಗೆಯಲ್ಲಿ ಕರಡ ಕಡಿದ ನಂತರದಲ್ಲಿ ಬಟಾಬಯಲಾಗುವ ಆ ಬೇಣ ಒಂದೆರಡು ಮಳೆ ಬೀಳುತ್ತಿದ್ದಂತೆ ಹಸಿರು ಚಾದರ ಹೊದೆಯುತ್ತಿದ್ದುದು ಒಂದು ಅಪೂರ್ವ ನೋಟ. ನಿಸರ್ಗದ ಅದ್ಭುತ ಕ್ಯಾನ್ವಾಸ್. ಈಗ ಆ ಪ್ರದೇಶದ ಚಿತ್ರಣ ಬದಲಾಗಿದೆ. ಅದು ಬೇರೆ ವಿಷಯ. ಇಂಥ ಕಾಲುದಾರಿ ಮಳೆಗಾಲದಲ್ಲಿ ವಿಪರೀತ ಜಾರುತ್ತದೆ. ತುಸು ಕಾಲು ಜಾರಿದರೂ ಬೀಳೋದು ಪಕ್ಕಾ. ಹೀಗೆ ಬಿದ್ದು ಬಟ್ಟೆ ಗಲೀಜಾಗುವುದು ಮಾಮೂಲು. ಬಿದ್ದ ರಭಸಕ್ಕೆ ಸೊಂಟ, ಕೈ ಕಾಲಿಗೆ ದೊಡ್ಡ ಪೆಟ್ಟು ಮಾಡಿಕೊಂಡು ಆಸ್ಪತ್ರೆಗೆ ಹೋದವರು ಕೂಡ ಕಡಿಮೆ ಏನಿಲ್ಲ. ಇಂಥ ದಾರಿಯಲ್ಲಿ ಬ್ಯಾಲೆನ್ಸ್ ಮಾಡುತ್ತ ನಡೆಯುವುದು ಮುಖ್ಯ. ಜೀವನದಲ್ಲಿ ಸಮತೋಲನ ಕಾಪಾಡಿಕೊಂಡು ನಡೆಯುವ ಅಮೂಲ್ಯ ಪಾಠವನ್ನು ಸಹ ಇಂತಹ ದಾರಿಗಳು ಕಲಿಸುತ್ತವೆ.
ಹಾಗೆ ನೋಡಿದರೆ ಮಳೆಗಾಲವೇ ಒಂದು ಪಾಠಶಾಲೆ. ನಿಸರ್ಗದ ಕ್ಲಾಸ್​ರೂಮ್ ಅಳತೆ ಮೀರಿದರೆ ಆಪತ್ತು ಕಟ್ಟಿಟ್ಟ ಬುತ್ತಿ ಎಂಬುದನ್ನು ನೀರು ಉಕ್ಕೇರಿ ತೋಟ, ಗದ್ದೆಗಳಿಗೆ ನುಗ್ಗಿ ಹಾನಿ ಮಾಡುವ ಹಳ್ಳ ಸಂಕೇತಿಸುತ್ತದೆ. ಜೋರು ಮಳೆ ಬಂದು ಶಾಲೆಗೆ ರಜೆ ಕೊಟ್ಟಾಗ ನೀರಲ್ಲಿ ಆಟವಾಡುತ್ತ ನಿಧಾನಕ್ಕೆ ವಾಪಸ್ ಮನೆಗೆ ಹೋಗುವ ಖುಷಿ, ಮಳೆಗೆ ಛತ್ರಿ ಉಲ್ಟಾ ಆಗಿ ಏನು ಮಾಡುವುದೆಂದು ತೋಚದೆ ಇದ್ದಾಗ, ಗಾಳಿ ಬರುವ ದಿಕ್ಕಿನಲ್ಲಿಯೇ ಕೊಡೆ ಹಿಡಿದರೆ ಮತ್ತೆ ಮೊದಲಿನ ಸ್ಥಿತಿಗೆ ಬರುವುದೆಂಬ ಪಾಠ ಕಲಿಸಿದ ದಾರಿಯಲ್ಲಿ ಸಿಕ್ಕ ಅಪರಿಚಿತ ಬಂಧು, ಮನೆಯಲ್ಲಿ ಅಮ್ಮ ಮಾಡಿದ ಹಲಸಿನ ಹಣ್ಣಿನ ಕಡುಬಿಗೆ ತಾಜಾ ತುಪ್ಪ ಹಾಕಿಕೊಂಡು ತಿನ್ನುವ ಸಂಭ್ರಮ, ಒಲೆಯ ಕೆಂಡದಲ್ಲಿ ಹಲಸಿನ ಬೀಜ ಸುಟ್ಟು ಮೆಲ್ಲುವ ಮಜಾ, ಹೊರಗೆ ಮಳೆ ಸುರಿಯುವಾಗ ಎರಡೆರಡು ಕಂಬಳಿ ಹೊದ್ದು ಮಲಗುವ ಸುಖ, ಸಂಜೆಯ ಹೊತ್ತಿಗೆ ನೊರಜು ಕಚ್ಚದಿರಲಿ ಎಂದು ಅಡಕೆ ಸಿಪ್ಪೆಗೆ ಹೊಗೆ ಹಾಕುವ ಉಪಾಯ, ಜೋರು ಮಳೆಯಲ್ಲಿ ಉಕ್ಕೇರಿದ ಹಳ್ಳ ನೋಡಲು ಹೋಗಿ ಮನೆಯಲ್ಲಿ ಬೈಸಿಕೊಂಡಿದ್ದು… ಓಹ್! ಮಳೆಗಾಲದ ಚಿತ್ರಗಳು ಒಂದಾ, ಎರಡಾ… ಅದೊಂದು ನೆನಪಿನ ಮೂಟೆ. ಮಳೆರಾಯನಿಗೆ ನಮೋ ನಮಃ! ಆದ್ರೂ ಮಳೆ ಮಾಡುವ ಅವಾಂತರ ಕಂಡಾಗ ಒಮ್ಮೊಮ್ಮೆ ಮಳೆರಾಯನ ಮೇಲೆ ಕೋಪವೂ ಉಕ್ಕೇರುತ್ತಿತ್ತು.
ಅಂದಹಾಗೆ, ‘ಬಿಸಿಲು ಮಳೆ ಮಂಗನ ಮದುವೆ/ ಚೋರಟೆ ಚಕ್ಲಿ ನಂಜುಳೆ ಪಾಯಸ…’ ಎಂಬುದು ಆ ಕಾಲದ ಮಕ್ಕಳ ಫೇಮಸ್ ಹಾಡಾಗಿತ್ತು!ವಸಂತದಲ್ಲಿ ಚಿಗುರಿದ ಮರಗಿಡಗಳಿಗೆ ಮಳೆಗಾಲದಲ್ಲಿ ಮತ್ತಷ್ಟು ಹುರುಪು ಬರುತ್ತದೆ; ಹಸಿರು ಹೆಚ್ಚುತ್ತದೆ. ಹಾದಿಯ ಇಕ್ಕೆಲಗಳನ್ನು ಅವರಿಸುವ ಹಸಿರು ಹೊದಿಕೆ ; ಎಲೆಗಳಿಂದ ತೊಟ್ಟಿಕ್ಕುವ ಹನಿಗಳು ಹಾದಿಹೋಕನಿಗೆ ಹೊಸ ಹೊಸ ಕಥೆಗಳನ್ನು ಹೇಳುತ್ತವೆ. ಹಾಗೇ ಮಳೆಗಾಲದಲ್ಲಿ ನೂರಾರು, ಸಾವಿರಾರು ಕ್ರಿಮಿಕೀಟಗಳು ಅಸ್ತಿತ್ವ ಪಡೆಯುತ್ತವೆ. ಕಾಡಿನಲ್ಲಿ ಜೀರುಂಡೆಗಳ ಸಮೂಹಗಾನ; ಸುಳಿವೇ ಸಿಗದ ಹಾಗೆ ಕಾಲನ್ನು ಕಚ್ಚಿ ಹಿಡಿದು ರಕ್ತ ಹೀರುವ ಉಂಬಳ; ಗದ್ದೆಯ ಬದುವಿನತ್ತ ಬರುವ ಏಡಿ- ಇವಕ್ಕೆಲ್ಲ ನಿಸರ್ಗವೇ ಆಮಂತ್ರಣ ನೀಡುತ್ತದೆ. ಇನ್ನು ಮನೆಯ ಒಳಗೆ ಹೊರಗೆ ಠಳಾಯಿಸುವ ಹುಳ ಹುಪ್ಪಡಿಗಳು ಬೇರೆ. ಹೆಸರು ಗೊತ್ತಿಲ್ಲದವು ಎಷ್ಟೋ. ಅಥವಾ ಹೆಸರೇ ಇಲ್ಲವೋ! ಈ ಪೈಕಿ ಎಷ್ಟೋ ಜೀವಿಗಳ ಆಯುಷ್ಯ ದಿನಗಳ ಲೆಕ್ಕದಲ್ಲಿ ಇರುತ್ತದೆ. ಆದರೂ ಇವೆಲ್ಲ ಸೃಷ್ಟಿಯ ಭಾಗಗಳೇ. ಭೂಮಿಯಲ್ಲಿ ಇರುವ ಜೀವಸಂಕುಲಗಳ ಬಗ್ಗೆ ನಮ್ಮ ಹಿರಿಯರು ಸಕಲ ಎರೆಂಬತ್ತುಕೋಟಿ ಜೀವರಾಶಿ ಎಂದು ಹೇಳುವುದುಂಟು. ಸರಿಯಾಗಿ ಲೆಕ್ಕ ಹಾಕಿ ನೋಡಿದರೆ ಬಹುಶಃ ಇಷ್ಟು ಜೀವರಾಶಿಗಳು ಇರಬಹುದೇನೋ!
ಮಳೆಗಾಲದ ಅವಧಿಯಲ್ಲಿ ಮಠಾಧೀಶರು, ಸಂತರು ಚಾತುರ್ವಸ ವ್ರತ ಆಚರಣೆ (ಆಷಾಢ ಮಾಸದ ಗುರುಪೂರ್ಣಿಮೆಯಂದು ಆರಂಭ) ಮಾಡುತ್ತಾರೆ. ಹಿಂದೆ ಸಂಪರ್ಕ ಸಾಧನಗಳು ಅಷ್ಟಾಗಿ ಇಲ್ಲದಿದ್ದ ಕಾಲದಲ್ಲಿ ಬೇರೆ ಬೇರೆ ಕಡೆ ಸಂಚಾರ ಮಾಡುವುದು ಕಷ್ಟಕರವಾಗಿತ್ತು. ಹೀಗಾಗಿ ಮಳೆಗಾಲದಲ್ಲಿ ಸಂಚಾರ ಕಡಿಮೆ ಮಾಡುತ್ತಿದ್ದರು. ಮಠಾಧೀಶರು, ಸಂತರು ಅಂತಮುಖಿಗಳಾಗಿ ಅಧ್ಯಾತ್ಮಿಕ ಸಾಧನೆ ಮಾಡಲು, ಆಂತರಿಕ ಶಕ್ತಿ ಹೆಚ್ಚಿಸಿಕೊಳ್ಳಲು ಇದು ಪರ್ವಕಾಲ. ಮೇಲ್ನೋಟಕ್ಕೆ ಕಣ್ಣಿಗೆ ಕಾಣದ ಎಷ್ಟೋ ಜೀವಿಗಳು, ಕ್ರಿಮಿಕೀಟಗಳು ನಡೆದಾಡುವಾಗ ನಮಗೆ ಆರಿವಿಲ್ಲದೆ ಕಾಲಡಿಯಲ್ಲಿ ಸಿಲುಕಿ ಅಪಾಯಕ್ಕೀಡಾಗುವ ಸಾಧ್ಯತೆ ಇರುತ್ತದೆ. ಹೀಗೆ ಆಗಬಾರದು ಎಂಬ ಕಾರಣಕ್ಕೆ ಜೈನ ಸಂನ್ಯಾಸಿಗಳು ಮಳೆಗಾಲದ ಅವಧಿಯಲ್ಲಿ ಸಂಚಾರ ಕಡಿಮೆ ಮಾಡಿ ಒಂದು ಸ್ಥಳದಲ್ಲಿ ನೆಲೆಸುವ ರೂಢಿ ಇದೆ. ಸಾಮಾನ್ಯವಾಗಿ ಜೈನ ಸಂನ್ಯಾಸಿಗಳು ಬಹಳ ದಿನಗಳ ಕಾಲ ಒಂದೇ ಕಡೆಗೆ ನಿಲ್ಲುವವರಲ್ಲ. ಮಳೆಗಾಲದಲ್ಲಿ ಮಾತ್ರ ಹೀಗೆ ಉಳಿಯುತ್ತಾರೆ. ಒಂದು ಸಣ್ಣ ಜೀವಜಂತುವಿಗೂ ಕೂಡ ತನ್ನಿಂದ ತೊಂದರೆ ಆಗಬಾರದು ಎಂಬ ಈ ಮಾನವೀಯ ಗುಣ ಎಂಥ ಅದ್ಭುತ ಪರಿಕಲ್ಪನೆ! ನಿಸರ್ಗದ ಎಲ್ಲ ಜೀವರಾಶಿಗಳ ಬಗ್ಗೆಯೂ ಅಂತಃಕರಣ ಹೊಂದುವ ವಿಶಾಲ ಹೃದಯದ ಸಂಕೇತ ಇದು. ವಾಸ್ತವದಲ್ಲಿ ಸೃಷ್ಟಿಯ ನಿಯಮವೇ ಹಾಗೆ. ಇಲ್ಲಿ ಮಾನವ ಸಹ ಒಂದು ಭಾಗವೇ ಹೊರತು ಮಾನವನೇ ಎಲ್ಲವೂ ಅಲ್ಲ. ಆದರೆ ಈ ಸತ್ಯ ಅರಿಯದೆ ಅಹಂಕಾರ ಪ್ರದರ್ಶನಕ್ಕೆ ಮುಂದಾಗುವುದು ಎಲ್ಲ ಸಮಸ್ಯೆಯ ಮೂಲ. ‘ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ/ ಸುಟ್ಟರೆ ನೊಸಲಿಗೆ ವಿಭೂತಿಯಾದೆ/ ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ/ ನೀನಾರಿಗಾದೆಯೋ ಎಲೆ ಮಾನವಾ…’ ಎಂದು ಗೋವು ಸವಾಲೆಸೆಯುವುದು ( ಜಿ.ಎಸ್.ನರಸಿಂಹಾಚಾರ್ಯರ ಕವನ) ಇದಕ್ಕೇ ಇರಬೇಕು.
ಕೊನೇ ಮಾತು:ಮಳೆಗಾಲದ ಆರಂಭದಲ್ಲಿ ಜೋರು ಮಳೆ ಸುರಿದು ಭರ್ಜರಿ ಗಾಳಿ ಬೀಸಿದರೆ ನೀರು ಭೂಮಿಯ ಒಳಕ್ಕೆ ಇಳಿದು ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ. ಹಳ್ಳ ಕೊಳ್ಳಗಳಲ್ಲಿ ಒರತೆ ಒಸರುತ್ತದೆ. ಹಾಗಾದಾಗ ಮಾತ್ರ ಮುಂದೆ ಬೇಸಿಗೆಯಲ್ಲಿ ನೀರು ಇರುತ್ತದೆ. ಕಳೆದ ವರ್ಷ ಹಾಗೇ ಆಯಿತು. ಜೂನ್ ಮೊದಲ ವಾರದಲ್ಲಿ ಮಳೆ ಬರಲಿಲ್ಲ. ಜುಲೈ ತಿಂಗಳಲ್ಲಿ ಕೆಲ ದಿನ ಮಳೆ ಬಂದಿದ್ದು ಬಿಟ್ಟರೆ ಮಳೆಗಾಲ ನಾಪತ್ತೆ. ಈ ಸಲ ಆರಿದ್ರಾ ಮಳೆ ಜೋರಾಗಿ ಅಬ್ಬರಿಸಿದೆ. ಮುಂದೆ ನೋಡಬೇಕು. ಹಾಗೇ ಮನುಜನ ಹೃದಯದ ಒಳಗೂ ಮಳೆನೀರು ಜಿನುಗಲಿ; ದ್ವೇಷ, ಅಸೂಯೆ ಇತ್ಯಾದಿ ಭಾವನೆಗಳು ತೊಳೆದು ಹೋಗಲಿ. ಆಗ ಈ ನಂದನ ಆನಂದದ ಸದನವಾಗಬಲ್ಲದು.
ಕುಮಾರಸ್ವಾಮಿ ಕೆಲಸ ಮಾಡಿಲ್ಲ ಎನ್ನುವುದಕ್ಕೆ ಚನ್ನಪಟ್ಟಣದಲ್ಲಿ ಬಂದಿರುವ 10 ಸಾವಿರ ಅರ್ಜಿಗಳೇ ಸಾಕ್ಷಿ: ಡಿಕೆಶಿ ತಿರುಗೇಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + three =
Remember me
