ಬೆಂಗಳೂರು: ಕ್ವಾರಂಟೈನ್​ಗೆ ಕರೆದೊಯ್ಯಲು ಬಂದಿದ್ದ ಕರೊನಾ ವಾರಿಯರ್ಸ್​ಗಳನ್ನು ಅಟ್ಟಾಡಿಸಿ, ಪೊಲೀಸರ ಬ್ಯಾರಿಕೇಡ್, ಪೆಂಡಾಲ್​ಗಳನ್ನು ಧ್ವಂಸಗೊಳಿಸಿದ ಪಾದರಾಯನಪುರ ಪುಂಡರ ದಾಂಧಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪೊಲೀಸರು, ಆಶಾ ಕಾರ್ಯ ಕರ್ತೆಯರ ಜತೆಗೆ ಸ್ಥಳಕ್ಕಾಗಮಿಸಿದ್ದ ಬಿಬಿಎಂಪಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲು ದುಷ್ಕರ್ವಿುಗಳು ಸಂಚು ರೂಪಿಸಿರುವ ಅನುಮಾನ ಮೂಡಿದೆ.
ಈ ಘಟನೆ ಹಿಂದೆ ಸಂಘಟನೆಯೊಂದರ ಕೈವಾಡ ವಿರುವ ಶಂಕೆಯೂ ವ್ಯಕ್ತವಾಗಿದೆ. ಕೈಯಲ್ಲಿ ಚಾಕು, ದೊಣ್ಣೆ, ಕಲ್ಲು ಹಿಡಿದ ಪುಂಡರ ಗುಂಪು ಸಿಸಿ ಕ್ಯಾಮರಾ ಒಡೆದುಹಾಕಿ, ‘ಪೊಲೀಸರು, ಡಾಕ್ಟರ್​ನ ಬಿಡಬೇಡಿ ಸಾಯಿಸಿ ಬಿಡಿ’ ಎಂದು ಕೂಗುತ್ತ ಕಲ್ಲು ಎಸೆದು ಹತ್ಯೆಗೆ ಯತ್ನಿಸಿದರೆಂಬ ವಿಚಾರ ಪೊಲೀಸರು ದಾಖಲಿಸಿರುವ ಎಫ್​ಐಆರ್​ನಲ್ಲಿ ಉಲ್ಲೇಖವಾಗಿದೆ.
ಜಗಜೀವನ್​ರಾಮನಗರ ಠಾಣೆ ಪಿಎಸ್​ಐ ರಮಣ್ ಗೌಡ, ತಮ್ಮ ದೂರಿನಲ್ಲಿ ಈ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಏ.19ರ ರಾತ್ರಿ ಬಿಬಿಎಂಪಿ ವೈದ್ಯಾಧಿಕಾರಿ ಡಾ. ಎಂ.ಸಿ. ಯೋಗೇಶ್ ಜತೆ 58 ಮಂದಿಯನ್ನು ಕ್ವಾರಂಟೈನ್ ಮಾಡುವ ಕೆಲಸಕ್ಕೆ ಸಿಬ್ಬಂದಿ ಜತೆ ತೆರಳಲಾಗಿತ್ತು. ಸಂಜೆ 6.30ರಲ್ಲಿ ಅರಾಫತ್ ನಗರ 10ನೇ ಕ್ರಾಸ್​ನಲ್ಲಿ 15 ಜನರನ್ನು ಕ್ವಾರಂಟೈನ್​ಗೆ ಕಳುಹಿಸಿ ಉಳಿದ 43 ಜನರ ವಿಚಾರಣೆ ನಡೆಸಲಾಗುತ್ತಿತ್ತು. ಸುಜಾತಾ ಟೆಂಟ್ ಮುಂದೆ 11ನೇ ಕ್ರಾಸ್ ಚೆಕ್​ಫೋಸ್ಟ್ ಬಳಿಗೆ ರಾತ್ರಿ 7.20ರಲ್ಲಿ ಆರೋಪಿಗಳಾದ ವಾಜಿದ್, ಇರ್ಫಾನ್, ಕಬೀರ್, ಅಹಮದ್ ಸೇರಿ 100ಕ್ಕೂ ಅಧಿಕ ಮಂದಿ ಗುಂಪು ಕಟ್ಟಿಕೊಂಡು ಬಂದರು. ಕೈಯಲ್ಲಿ ಕಲ್ಲು, ದೊಣ್ಣೆ ಮತ್ತು ಚಾಕು ಹಿಡಿದುಕೊಂಡಿದ್ದರು.
ಕೋವಿಡ್-19 ಸಿಬ್ಬಂದಿ ಕೂರಲು ಹಾಕಿದ್ದ ಕುರ್ಚಿ ಎಸೆದು, ಟೆಂಟ್​ಹೌಸ್ ಕಿತ್ತೆಸೆದು ದೊಣ್ಣೆಯಿಂದ ವಿದ್ಯುತ್ ದೀಪ, ಸಿಸಿ ಕ್ಯಾಮರಾ ನಾಶ ಮಾಡಿ ದಾಂಧಲೆ, ಗಲಭೆ ಸೆರೆ ಆಗದಂತೆ ಸಂಚು ರೂಪಿಸಿದರು. ಆದರೂ ಪೊಲೀಸರು, ಗುಂಪು ಸೇರಬೇಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಬುದ್ಧಿವಾದ ಹೇಳಿದರು. ಕೆರಳಿದ ಕಿಡಿಗೇಡಿಗಳು ಪೊಲೀಸರು ಮತ್ತು ವೈದ್ಯರನ್ನು ಕೊಂದು ಬಿಡಿ. ಇಲ್ಲಿಂದ ಅವರು ಹೋಗಲು ಬಿಡಬೇಡಿ ಎಂದು ಕಲ್ಲು, ದೊಣ್ಣೆಗಳನ್ನು ಪೊಲೀಸರ ಕಡೆಗೆ ಎಸೆದು ಹಲ್ಲೆ ನಡೆಸಿದರು. ಸಾರ್ವಜನಿಕ ಆಸ್ತಿ ನಾಶ ಮಾಡಿದರು. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂದು ಪಿಎಸ್​ಐ ಆರೋಪಿಸಿದ್ದಾರೆ.
ಪಾದರಾಯನಪುರದಲ್ಲಿ ನಡೆದ ಗಲಭೆ ಸಂಬಂಧ ಪ್ರತ್ಯೇಕ ಐದು ಎಫ್​ಐಆರ್ ದಾಖಲಾಗಿವೆ. ಪೊಲೀಸರು 4 ದೂರುಗಳು ಮತ್ತು ಒಬ್ಬರು ವೈದ್ಯಾಧಿಕಾರಿ ದೂರು ನೀಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವೈದ್ಯರ ಮಾತು ಕೇಳಬೇಡಿ
ವೈದ್ಯರು, ಪೊಲೀಸರ ಮಾತು ಕೇಳಬೇಡಿ. ಅವರನ್ನು ಹಿಡಿದು ಹೊಡೆಯಿರಿ ಎಂದು ಕೂಗಾಡಿಕೊಂಡು ಬಂದ ಗುಂಪು, ರಸ್ತೆಗೆ ಅಳವಡಿಸಿದ್ದ ಬ್ಯಾರಿಕೇಡ್, ಶೀಟ್​ಗಳನ್ನು ಕಿತ್ತು ಹಾಕಿದರು. ತಡೆಯಲು ಹೋದ ಪೊಲೀಸರ ಮೇಲೆ ಕಲ್ಲು ಎಸೆದು ಗೂಂಡಾವರ್ತನೆ ತೋರಿದರು ಎಂದು ಮುಖ್ಯಪೇದೆ ಗಜೇಂದ್ರ, ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇಲ್ಲಿಯೇ ಪರೀಕ್ಷೆ ಮಾಡಿ?
ಎರಡನೇ ಸಂಪರ್ಕದಲ್ಲಿದ್ದ 43 ಮಂದಿಯನ್ನು ಕ್ವಾರಂಟೈನ್​ಗೆ ಕರೆದುಕೊಂಡು ಹೋಗುವ ಕೆಲಸದಲ್ಲಿ ತೊಡಗಿದ್ದಾಗ ಕೆಲವರು ಬಂದು ತಡೆದು ಇಲ್ಲಿಯೇ ಪರೀಕ್ಷೆ ಮಾಡುವಂತೆ ಗಲಾಟೆ ಮಾಡಿದರು ಎಂದು ಮುಖ್ಯಪೇದೆ ವೈ.ಟಿ. ವೆಂಕಟೇಶ್, ದೂರಿನಲ್ಲಿ ಆರೋಪಿಸಿದ್ದಾರೆ. ಆಗ ವೈದ್ಯಾಧಿಕಾರಿ ಮತ್ತು ನರ್ಸ್​ಗಳು ಸರ್ಕಾರದ ಶಿಷ್ಟಾಚಾರದ ಪ್ರಕಾರ ಕ್ವಾರಂಟೈನ್ ಮಾಡಬೇಕೆಂದು ಮನವರಿ ಮಾಡಿದರು. ಬಿಡದೆ ವಾಜಿದ್ ಗುಂಪು, ಸರ್ಕಾರಿ ಅಧಿಕಾರಿಗಳನ್ನು ತಡೆದು ತಳ್ಳಾಡಿ ಕಲ್ಲು, ದೊಣ್ಣೆಯಿಂದ ಹಲ್ಲೆ ನಡೆಸಿ ಓಡಿ ಹೋದರು ಎಂದು ತಿಳಿಸಿದ್ದಾರೆ.
ರಕ್ಷಣೆಯಲ್ಲಿ ಹೊರಬಂದೆ
ಕರೊನಾ ಶಂಕಿತರನ್ನು ಕ್ವಾರಂಟೈನ್ ಮಾಡುವ ಕಾರ್ಯದಲ್ಲಿ ತೊಡಗಿದ್ದಾಗ ಅಲ್ಲಿಗೆ ಬಂದ ಕಿಡಿಗೇಡಿಗಳು ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಅವರನ್ನು ಕರೆದುಕೊಂಡು ಹೋಗುವುದಾದರೆ ನಮ್ಮನ್ನೂ ಕರೆದುಕೊಂಡು ಹೋಗುವಂತೆ ಪಟ್ಟು ಹಿಡಿದರು ಎಂದು ಚಾಮರಾಜಪೇಟೆ ವಿಭಾಗ ವೈದ್ಯಾಧಿಕಾರಿ ಎಂ.ಸಿ. ಡಾ. ಯೋಗೇಶ್, ದೂರಿನಲ್ಲಿ ವಿವರಿಸಿದ್ದಾರೆ.
ಗುಂಪು ಸೇರಿದ್ದ ಕಿಡಿಗೇಡಿಗಳು ಕಲ್ಲು, ದೊಣ್ಣೆಯಿಂದ ಹಲ್ಲೆಗೆ ಮುಂದಾದರು. ಕೆಲವೇ ನಿಮಿಷಗಳಲ್ಲಿ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿತು. ಪೊಲೀಸರು ಗಾಯಗೊಂಡರು. ನೂಕುನುಗ್ಗಲು ಉಂಟಾಯಿತು. ಎಚ್ಚೆತ್ತ ಪೊಲೀಸರು ನಮ್ಮನ್ನು ರಕ್ಷಣೆ ಮಾಡಿ ಅಲ್ಲಿಂದ ಕರೆದು ಕೊಂಡು ಬಂದರು. ಕೆಲಹೊತ್ತಿಗೆ ಕಲ್ಲು ತೂರಾಟ, ದೊಣ್ಣೆಯಿಂದ ಹಲ್ಲೆ, ಬ್ಯಾರಿಕೇಡ್ ಕಿತ್ತು ಎಸೆದು ದಾಂಧಲೆ ನಡೆಸಿ ಕೋವಿಡ್-19 ಸೇವೆಗೆ ಅಡ್ಡಿ ಉಂಟು ಮಾಡಿದರು ಎಂದು ಡಾ. ಯೋಗೇಶ್ ಹೇಳಿದ್ದಾರೆ.
ಏನಿದೆ ಎಫ್​ಐಆರ್​ನಲ್ಲಿ?
ದುಷ್ಕರ್ವಿುಗಳ ಕೈಗಳಲ್ಲಿ ಕಲ್ಲು, ದೊಣ್ಣೆ, ಚಾಕುಗಳಿದ್ದವು. ಕೋವಿಡ್-19 ಸಿಬ್ಬಂದಿಗಾಗಿ ಹಾಕಿದ್ದ ಕುರ್ಚಿ ಎಸೆದು, ಟೆಂಟ್​ಹೌಸ್ ಕಿತ್ತರು. ದೊಣ್ಣೆಯಿಂದ ವಿದ್ಯುತ್ ದೀಪ, ಸಿಸಿ ಕ್ಯಾಮರಾ ನಾಶ ಮಾಡಿದರು. ಬುದ್ಧಿವಾದ ಹೇಳಿದ ಪೊಲೀಸರು, ವೈದ್ಯರನ್ನು ಕೊಂದು ಬಿಡಿ ಎಂದು ಕೂಗಿದರು. ಸಾರ್ವಜನಿಕ ಆಸ್ತಿ ನಾಶಪಡಿಸಿದರು, ಸರ್ಕಾರಿ ಕರ್ತ್ಯವಕ್ಕೆ ಅಡ್ಡಿಪಡಿಸಿದರು.
ಮಹಿಳೆ ಸೇರಿ ನಾಲ್ವರು ಕಸ್ಟಡಿಗೆ
ಪಾದರಾಯನಪುರ ದಾಂಧಲೆ ಪ್ರಕರಣ ಸಂಬಂಧ ಭಾನುವಾರ ರಾತ್ರಿ ಒಬ್ಬ ಮಹಿಳೆ ಸೇರಿ 59 ಮಂದಿಯನ್ನು ಬಂಧಿಸಿದ್ದ ಪಶ್ಚಿಮ ವಿಭಾಗ ಪೊಲೀಸರು ಸೋಮವಾರ ಮತ್ತೆ 51 ಜನರನ್ನು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಐವರು ಬಾಲಾಪರಾಧಿಗಳಾಗಿದ್ದಾರೆ. ಸೋಮವಾರ ಸಂಜೆ ಕೋರಮಂಗಲದ ನ್ಯಾಯಾಧೀಶರ ಮನೆಗೆ ಬಂಧಿತ 54 ಜನರನ್ನು ಹಾಜರುಪಡಿಸಿದಾಗ ನ್ಯಾಯಾಧೀಶರು ಮಹಿಳಾ ಆರೋಪಿ ಫರಿದಾ ಸೇರಿ ನಾಲ್ವರನ್ನು 7 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರೆ, ಉಳಿದ 50 ಜನರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದರು. ಬಾಲಾಪರಾಧಿಗಳನ್ನು ಬಾಲಮಂದಿರಕ್ಕೆ ಕಳುಹಿಸಲು ಸಿದ್ಧತೆ ನಡೆದಿದೆ. ಪಾದರಾಯನ ಪುರದ ಬಿಗಿ ಭದ್ರತೆಗೆ ಗರುಡ ಪಡೆ, 10 ಕೆಎಸ್​ಆರ್​ಪಿ, 5 ಸಿಎಆರ್ ತುಕಡಿ ಜತೆಗೆ ಪಶ್ಚಿಮ ಮತ್ತು ಉತ್ತರ ವಿಭಾಗದ 500 ಸಿವಿಲ್ ಪೊಲೀಸರನ್ನು ನಿಯೋಜಿಸಲಾಗಿದೆ. ಕರೊನಾ ವಾರಿಯರ್ಸ್ ಮೇಲಿನ ಗೂಂಡಾಗಿರಿ ಹಿಂದೆ ಸಂಘಟನೆಯೊಂದರ ಕೈವಾಡ ಇರುವ ಬಗ್ಗೆ ತನಿಖೆ ಮುಂದುವರಿದಿದೆ. ಬಂಧಿತರಲ್ಲಿ ವಾಹನ, ಮನೆ ಕಳ್ಳತನ ಸೇರಿ ಅಪರಾಧ ಕೃತ್ಯಗಳಲ್ಲಿ ಕೆಲವರು ಭಾಗಿಯಾಗಿರುವುದು ಕಂಡುಬಂದಿದೆ.
ಕರೊನಾ ವೈರಸ್​ ಪತ್ತೆ ಮಾಡುವ ಡೋರ್​ಬೆಲ್​ ಸಂವೇದಕ ಯಂತ್ರ ಶೋಧಿಸಿದ 16ರ ಬಾಲಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
