| ಅವಿನಾಶ್ ಜೈನಹಳ್ಳಿ ಮೈಸೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರ ಸಂಬಂಧ ಪ್ರಭಾವಿಗಳು ಕೆಲ ಭ್ರಷ್ಟಾಚಾರಿಗಳ ರಕ್ಷಣೆಗೆ ನಿಂತಿದ್ದು, ಈ ಸಂಬಂಧ ತನಿಖಾ ತಂಡದ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಆದರೆ, ತನಿಖಾ ತಂಡ ಯಾವ ಪ್ರಭಾವಕ್ಕೂ ಒಳಗಾಗದೆ ತನಿಖೆ ನಡೆಸುತ್ತಿದೆ.
ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಲೇ ಮುಡಾದ ಕೆಲ ಸಿಬ್ಬಂದಿ ಅಕ್ರಮಕ್ಕೆ ಸಂಬಂಧಿಸಿದ ಮೂಲ ದಾಖಲೆಗಳನ್ನು ನಾಶಪಡಿಸಿದ್ದಾರೆ ಎಂದು ದೂರುಗಳು ಕೇಳಿಬಂದಿತ್ತು. ಇದೀಗ ಕೆಲ ಭ್ರಷ್ಟರು ತಮ್ಮ ಅವಧಿಯ ಭ್ರಷ್ಟಾಚಾರ ಮುಚ್ಚಿಕೊಳ್ಳಲು ತನಿಖಾ ತಂಡದ ಮೇಲೆಯೇ ಪ್ರಭಾವಿಗಳಿಂದ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ತಮ್ಮ ಅವಧಿಯ ಭ್ರಷ್ಟಾಚಾರದ ದಾಖಲೆಗಳನ್ನು ನಾಶ ಮಾಡುವಂತೆ ಹಾಗೂ ತಮ್ಮ ಅವಧಿಯಲ್ಲಿ ಯಾವುದೇ ಲೋಪ ಆಗಿಲ್ಲ ಎಂದು ವರದಿ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ಜತೆಗೆ ತನಿಖಾ ಮಾಹಿತಿಯನ್ನು ಎಲ್ಲೂ ಸೋರಿಕೆ ಮಾಡದಂತೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ಆದರೆ, ತನಿಖಾಧಿಕಾರಿಗಳು ಮಾತ್ರ ಯಾವುದೇ ಪ್ರಭಾವಕ್ಕೂ ಒಳಗಾಗದೆ ತನಿಖೆಯನ್ನು ನಿಷ್ಟಕ್ಷಪಾತವಾಗಿ ಮಾಡುತ್ತಿದ್ದಾರೆ. ಪ್ರತಿಯೊಂದು ಕಡತಗಳನ್ನು ಪರಿಶೀಲಿಸುತ್ತಿದ್ದಾರೆ. ಪೂರಕವಾಗಿ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಅಧಿಕಾರಿಗಳು ಗುರುವಾರವೂ ತನಿಖೆ ಮುಂದುವರಿಸಿದ್ದಾರೆ. ಪ್ರಾಧಿಕಾರದಲ್ಲಿನ 50:50ರ ಅನುಪಾತ, ಬದಲಿ ನಿವೇಶನ ಹಂಚಿಕೆ ಸಂಬಂಧಿಸಿದ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ. ಮುಡಾದ ಬಹುತೇಕ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದಾರೆ. ಅಕ್ರಮಕ್ಕೆ ಸಂಬಂಧಿಸಿದ ಮೂಲ ದಾಖಲೆಗಳ ನಾಶದ ಬಗ್ಗೆಯೂ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಲಭ್ಯ ಇರುವ ಕಡತಗಳನ್ನು ಮುಂದಿಟ್ಟುಕೊಂಡಿರುವ ತನಿಖಾ ತಂಡ ಉಳಿದ ದಾಖಲೆಗಳಿಗಾಗಿ ಮುಡಾ ಸಿಬ್ಬಂದಿಯನ್ನು ಪ್ರಶ್ನಿಸತೊಡಗಿದೆ ಎನ್ನಲಾಗಿದೆ.
5 ವರ್ಷದ ನಡಾವಳಿ ಪರಿಶೀಲನೆ:ತನಿಖಾ ತಂಡ ಇದೀಗ ಮುಡಾದ 5 ವರ್ಷದ ಸಭಾ ನಡಾವಳಿಯನ್ನು ಪರಿಶೀಲಿಸುತ್ತಿದ್ದಾರೆ. ಈ ಸಂಬಂಧ ಮುಡಾ ಅಧಿಕಾರಿಗಳು 7 ಸಾವಿರ ಪುಟದ ಜೆರಾಕ್ಸ್ ಪ್ರತಿಯನ್ನು ತನಿಖಾ ತಂಡಕ್ಕೆ ನೀಡಿದ್ದಾರೆ. ಯಾವ ಸಭೆಯಲ್ಲಿ ಏನೆಲ್ಲ ತೀರ್ಮಾನ ಆಗಿದೆ, ಇದಕ್ಕೆ ಸರ್ಕಾರದಿಂದ ಅನುಮತಿ ದೊರೆತಿದೆಯಾ? ಸೇರಿದಂತೆ ಎಲ್ಲ ರೀತಿ ಪರಿಶೀಲನೆ ನಡೆಸುತ್ತಿದ್ದಾರೆ.

ಸಿಎಂ ರಾಜೀನಾಮೆ ನೀಡಲಿ:ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮ ಅವರಿಗೆ ನಿವೇಶನ ಕೊಟ್ಟಿರುವುದು ತಪ್ಪಲ್ಲ. ಆದರೆ ಅಧಿಕಾರಿಗಳು ಸಮಾನಾಂತರ ಬಡಾವಣೆಯಲ್ಲಿ ನಿವೇಶನ ನೀಡಬೇಕಿತ್ತು. ನೋಟಿಫೈ, ಡಿನೋಟಿಫೈ ಮಾಡಲು ಪ್ರಭಾವ, ಜಮೀನಿನ ಅಕ್ರಮ ನೋಂದಣಿಯಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದು ನಿಜವೇ ಆಗಿದ್ದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ, ಶಾಸಕ ಜಿ.ಟಿ.ದೇವೇಗೌಡ ಆಗ್ರಹಿಸಿದರು. ಕಷ್ಟಪಟ್ಟು ಮೇಲೆ ಬಂದಿರುವ ನಾನು, ಮಾನ-ಮರ್ಯಾದೆ ಉಳಿಸಿಕೊಂಡು ಪ್ರಾಮಾಣಿಕತೆಯಿಂದ ಬದುಕಿದವನು. ಅಕ್ರಮವಾಗಿ ಮುಡಾದಿಂದ 100 ನಿವೇಶನ ಪಡೆದಿದ್ದೇನೆ ಎಂದು ನನ್ನ ವಿರುದ್ಧ ಆರೋಪಿಸಲಾಗಿದೆ. ಇದನ್ನು ಸಾಬೀತುಪಡಿಸಿದರೆ ಒಂದಲ್ಲ ನೂರು ನಿವೇಶನವನ್ನೂ ಒಂದೇ ದಿನ ಬರೆದುಕೊಂಡುತ್ತೇನೆ ಎಂದು ಜಿಟಿಡಿ ಸವಾಲು ಹಾಕಿದರು.
3.15 ಲಕ್ಷ ಚದರಡಿ ಭೂಮಿ ನಾಲ್ಕೈದು ವ್ಯಕ್ತಿಗಳಿಗೆ ಮಂಜೂರು:50:50 ಅನುಪಾತದಡಿ ನಾಲ್ಕೈದು ವ್ಯಕ್ತಿಗಳಿಗೆ 2023ರ ಮಾರ್ಚ್​ನಿಂದ ಜೂನ್ ತಿಂಗಳವರೆಗೆ 3.15 ಲಕ್ಷ ಚದರಡಿ ಭೂಮಿಯನ್ನು ಮುಡಾ ಹಂಚಿಕೆ ಮಾಡಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ದೂರಿದರು.

ಈ ಜಮೀನಿನಲ್ಲಿ 20*30 ಅಳತೆಯ ನಿವೇಶನವನ್ನು 540 ಜನರಿಗೆ ಕೊಡಬಹುದಾಗಿತ್ತು ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಮುಡಾದಲ್ಲಿ ನಡೆದಿರುವ ಒಂದೊಂದೇ ಹಗರಣ ಎಪಿಸೋಡ್ ರೀತಿಯಲ್ಲಿ ನಿತ್ಯ ಹೊರ ಬರುತ್ತಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಬಾಗಿಲಿಗೂ ತಲುಪಿದೆ. ಮುಡಾದಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿರುವುದು ಸ್ಪಷ್ಟವಾಗಿದೆ. ಆದರೆ, ಸರ್ಕಾರ ಮೊಂಡಾಟಕ್ಕೆ ಬಿದ್ದಿದೆ ಎಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ನನ್ನ ಪತ್ನಿಗೆ ನೀಡಿರುವ ಬದಲಿ ನಿವೇಶನ ಕಾನೂನುಬದ್ಧವಾಗಿದೆ. ಕಾನೂನುಬಾಹಿರ ಎನ್ನುತ್ತಿರುವ ಬಿಜೆಪಿ ನಾಯಕರು ಈ ಸಂಬಂಧ ದಾಖಲೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ಮುಡಾ ಪ್ರಕರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ಅವರಂತೆ ನಮಗೂ ರಾಜಕೀಯವಾಗಿ ಪ್ರತಿರೋಧ ನೀಡಲು ತಿಳಿದಿದೆ. ಮುಡಾ ಹಗರಣದ ವಿರುದ್ಧವಾಗಿ ಬಿಜೆಪಿ ನಾಯಕರು ಜೆ.ಪಿ.ನಡ್ಡಾ ಅಧ್ಯಕ್ಷತೆಯಲ್ಲೇ ಪ್ರತಿಭಟನೆ ಮಾಡಲಿ. ಪ್ರತಿರೋಧ ನೀಡಲು ನಮಗೂ ತಿಳಿದಿದೆ ಎಂದು ತಿರುಗೇಟು ನೀಡಿದರು.

ಇಂದು ಬಿಜೆಪಿ ಪ್ರತಿಭಟನೆ:ಮುಡಾ ಹಗರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಜು.12ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿದೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು. ಅಂದು ಬೆಳಗ್ಗೆ 10.30ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ. ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಿಂದ ಸುಮಾರು 10 ಸಾವಿರು ಜನರು ಭಾಗವಹಿಸಲಿದ್ದಾರೆ. ಪ್ರತಿಭಟನಾ ಸಭೆಯ ನಂತರ ಪಾದಯಾತ್ರೆ ಮೂಲಕ ಮುಡಾ ಕಚೇರಿ ಆವರಣಕ್ಕೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, ಶಾಸಕ ಸಿ.ಎನ್.ಅಶ್ವತ್ಥ ನಾರಾಯಣ್, ಎಂಎಲ್​ಸಿ ಸಿ.ಟಿ. ರವಿ ಸೇರಿ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಬೆಂಗಳೂರು:ಮುಡಾದಲ್ಲಿ ನಡೆದಿರುವ ನಿವೇಶನಗಳ ಹಂಚಿಕೆಯಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಹಗರಣವನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ (ಸಿಜೆ) ಪತ್ರ ಬರೆದಿರುವ ಅವರು, ಈ ಹಗರಣದಲ್ಲಿ ಮುಖ್ಯಮಂತ್ರಿ ಪತ್ನಿ ಪಾರ್ವತಿ ಅವರಿಗೆ ಒಟ್ಟು 14 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವುದು ಮಾಧ್ಯಮಗಳ ಮುಖಾಂತರ ತಿಳಿದು ಬಂದಿದೆ. ಈ ಹಿನ್ನೆಲೆ ರಾಜ್ಯದ ಸಂಪುಟ ದರ್ಜೆ ಸಚಿವರೊಬ್ಬರು ಮೂಡಾದಲ್ಲಿದ್ದ ಕಡತಗಳನ್ನು ಬೆಂಗಳೂರಿಗೆ ತರಿಸಿಕೊಂಡಿದ್ದಾರೆ. ಈ ಮುಖೇನ ಭ್ರಷ್ಟಾಚಾರ ಮುಚ್ಚಿಹಾಕುವ ಪ್ರಯತ್ನ ದೊಡ್ಡ ಮಟ್ಟದಲ್ಲಿ ನಡೆದಿದೆ ಎಂದು ಪತ್ರದಲ್ಲಿ ದೂರಿದ್ದಾರೆ.
ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ 2ನೇ ಬಾರಿ ಮುಖ್ಯಮಂತ್ರಿಯಾಗಿದ್ದು ಬಿಜೆಪಿಯ ಎಲ್ಲರಿಗೂ ಹೊಟ್ಟೆಯುರಿ. ಅದಕ್ಕಾಗಿ ಕುತಂತ್ರ ಮಾಡುತ್ತಿದ್ದಾರೆ. ಇಂತಹ ಷಡ್ಯಂತ್ರಕ್ಕೆಲ್ಲ ನಾನು ಹೆದರುವುದಿಲ್ಲ. ಮುಡಾ ಮೊದಲಿನಿಂದಲೂ ಗಬ್ಬೆದ್ದು ಹೋಗಿದ್ದು, ಅದನ್ನು ಸ್ವಚ್ಛ ಮಾಡಬೇಕಾಗಿದೆ. ಮುಡಾ ಹಗರಣದ ತನಿಖೆ ನಡೆಸಿ ಸರಿಪಡಿಸುತ್ತೇವೆ.
| ಸಿದ್ದರಾಮಯ್ಯ ಮುಖ್ಯಮಂತ್ರಿ
ಮುಡಾ ಹಗರಣದಲ್ಲಿ ಸಿಎಂ ಹೆಸರು ತಳುಕು ಹಾಕಿ ಕೊಂಡಿರು ವುದರಿಂದ ಅವರು ರಾಜೀನಾಮೆ ನೀಡಬೇಕು. ಈ ಜಮೀನು ಭೂಸ್ವಾಧೀನ ಆರಂಭಿಸಿ ಬಳಿಕ ಒತ್ತಡ ಬಂದು ಡಿನೋಟಿಫಿಕೇಷನ್ ಮಾಡಿರುವ ಸಾಧ್ಯತೆ ಇದೆ. ಬದಲಿ ನಿವೇಶನದ ಹೆಸರಿನಲ್ಲಿ 14 ಸೈಟ್ ಪಡೆದಿರುವುದು ಕಾನೂನು ಬಾಹಿರವಾಗುತ್ತದೆ. ಕೂಡಲೇ ಇದನ್ನು ಸಿಬಿಐ ತನಿಖೆಗೆ ನೀಡಬೇಕು. ಸಚಿವ ಬೈರತಿ ಸುರೇಶ್ ಅಲ್ಲಿನ ಎಲ್ಲ ಕಡತ ತಂದು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.
| ಜಗದೀಶ ಶೆಟ್ಟರ್ ಸಂಸದ
| ಸದೇಶ್ ಕಾರ್ವಡ್ ಮೈಸೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿರುವ ಬಹುಕೋಟಿ ರೂ. ಹಗರಣ ಹಿನ್ನೆಲೆಯಲ್ಲಿ ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳು, ನಗರ ಯೋಜನಾ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆಗಳಿಗೆ ಮೂಗುದಾರ ಹಾಕಲು ಸರ್ಕಾರ ಹೊಸದಾಗಿ ‘ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯ’ವನ್ನು ಸೃಜಿಸಿದೆ.
ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳು, ನಗರ ಯೋಜನಾ ಪ್ರಾಧಿಕಾರಗಳು (ಬಿಡಿಎ, ಬಿಬಿಎಂಪಿ, ಬಿಎಂಆರ್​ಡಿಎ, ಬಿಎಂಐಸಿಎಪಿಎ ಹೊರತá-ಪಡಿಸಿ) ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿ ಉತ್ತಮ ಆಡಳಿತ ನಿರ್ವಹಣೆ ಹಾಗೂ ಆರ್ಥಿಕ ನಿಯಂತ್ರಣ ಸಾಧಿಸುವ ಉದ್ದೇಶದಿಂದ ‘ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯ’ವನ್ನು ಜುಲೈ 8 ರಂದು ಸೃಜಿಸಲಾಗಿದ್ದು, ಈ ಆಯುಕ್ತಾಲ ಯಕ್ಕೆ ಹಿರಿಯ ಐಎಎಸ್ ಅಧಿಕಾರಿಯನ್ನು ಆಯುಕ್ತರನ್ನಾಗಿ ನೇಮಿಸಲು ಸರ್ಕಾರ ನಿರ್ಧರಿಸಿದೆ. ಇನ್ನು ಮುಂದೆ ರಾಜ್ಯದ ಎಲ್ಲ ಪ್ರಾಧಿಕಾರಗಳು, ಯೋಜನಾ ಇಲಾಖೆ ಆ ಆಯುಕ್ತಾಲಯ ವ್ಯಾಪ್ತಿಗೆ ಬರಲಿವೆ.
ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 50:50 ಅನುಪಾತದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, ನಿವೇಶನ ಹಂಚಿಕೆಯಲ್ಲಿ ಸಾವಿರಾರು ಕೋಟಿ ರೂ. ಹಗರಣ ನಡೆದಿದೆ. ಸರ್ಕಾರ ನಿಯಮಗಳಿಗೆ ವಿರುದ್ಧವಾಗಿ ಪ್ರಾಧಿಕಾರದಲ್ಲಿ ತೀರ್ವನಗಳನ್ನು ಕೈಗೊಂಡರೂ ಅದನ್ನು ಪರಿಶೀಲಿಸುವ ವ್ಯವಸ್ಥೆ ಇರಲಿಲ್ಲ. ಇದು ಮುಡಾದಲ್ಲಿ ಸಾವಿರಾರು ಕೋಟಿ ರೂ. ಹಗರಣಕ್ಕೆ ದಾರಿ ಮಾಡಿಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಇಂತಹ ತಪ್ಪುಗಳು ಆಗಬಾರದು ಎಂಬ ಉದ್ದೇಶದಿಂದ ಪ್ರಾಧಿಕಾರಗಳನ್ನು ನಿಯಂತ್ರಿಸಲು ನೂತನ ಆಯುಕ್ತಾಲಯ ಸೃಜಿಸಲಾಗಿದೆ.
ನೂತನ ಆಯುಕ್ತಾಲಯ ಸೃಜಿಸಿರುವ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದ್ದ ಆರ್ಥಿಕ ಅಧಿಕಾರಗಳನ್ನು ಇದೀಗ ನೂತನ ಆಯುಕ್ತಾಲಯದ ಆಯುಕ್ತರಿಗೆ ಹಸ್ತಾಂತರಿಸಲಾಗಿದೆ. ಹಾಗಾಗಿ, ಇನ್ನು ಮುಂದೆ ಪ್ರಾಧಿಕಾರಗಳು ಪ್ರತಿಯೊಂದಕ್ಕೂ ಆಯುಕ್ತಾಲದಿಂದ ಅನುಮೋದನೆ ಪಡೆಯುವ ಅನಿವಾರ್ಯತೆ ನಿರ್ವಣವಾಗಲಿದೆ. ನಗರಾಭಿವೃದ್ಧಿ ಪ್ರಾಧಿಕಾರಗಳು ಮಂಡಿಸುವ ಬಜೆಟ್ ಅನ್ನು ಪರಿಶೀಲಿಸುವ ಹಾಗೂ ಅನುಮೋದಿಸುವ ಅಧಿಕಾರವನ್ನು ಆಯುಕ್ತಾಲಯಕ್ಕೆ ನೀಡಲಾಗಿದೆ. ಅಲ್ಲದೆ, ಸರ್ಕಾರಕ್ಕೆ ಸಲ್ಲಿಸಬೇಕಾದ ಎಲ್ಲ ಕಡತಗಳು ಇನ್ನು ಮುಂದೆ ಈ ಆಯುಕ್ತಾಲಯದ ಮೂಲಕ ಸಲ್ಲಿಕೆಯಾಗಲಿದ್ದು, ಆಯುಕ್ತಾಲಯದ ಹಂತದಲ್ಲಿ ಪರಿಶೀಲನೆ ನಡೆಯಲಿದೆ. ಪ್ರಾಧಿಕಾರಗಳ ಲೆಕ್ಕ ಪರಿಶೋಧನಾ ವರದಿಗಳು, ವಾರ್ಷಿಕ ಲೆಕ್ಕಪತ್ರ ಹಾಗೂ ಪ್ರತಿಯೊಂದು ಸಭೆಗಳ ನಿರ್ಣಯಗಳನ್ನು ಆಯುಕ್ತಾಲಯ ಪರಿಶೀಲಿಸಲಿದೆ. ಅಲ್ಲದೆ, ಪ್ರಾಧಿಕಾರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸುವ ಅಧಿಕಾರವನ್ನು ಆಯುಕ್ತಾಲಯಕ್ಕೆ ನೀಡಲಾಗಿದೆ. ಬಹುಮುಖ್ಯವಾಗಿ ಒಂದು ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಯೋಜನೆಗಳಿಗೆ ನೂತನ ಆಯುಕ್ತಾಲಯದಿಂದ ಅನುಮೋದನೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಹಾಗಾಗಿ ಬದಲಿ ನಿವೇಶನ ಹಂಚಿಕೆಯಲ್ಲಿ ಆಗುವ ಅಕ್ರಮಗಳು, ಬಡಾವಣೆಗಳನ್ನು ನಿಯಮಕ್ಕೆ ವಿರುದ್ಧವಾಗಿ ನಿರ್ವಿುಸುವುದಕ್ಕೆ ಕಡಿವಾಣ ಬೀಳುವ ನಿರೀಕ್ಷೆ ಹೊಂದಲಾಗಿದೆ.

ವಾಲ್ಮೀಕಿ ನಿಗಮ ಹಗರಣ ಮತ್ತು ಮುಡಾ ನಿವೇಶನ ಹಂಚಿಕೆ ಹಗರಣ ಬಹಳ ಗಂಭೀರವಾಗಿದ್ದು, ಹಗರಣ ಸಿಬಿಐ ತನಿಖೆ ಆಗಬೇಕು. ಮುಖ್ಯಮಂತ್ರಿ ಸಿಬಿಐನಿಂದ ಕ್ಲೀನ್ ಚಿಟ್ ಪಡೆದುಕೊಂಡು ತಾವು ಶುದ್ಧಹಸ್ತರು ಎಂದು ತೋರಿಸಲಿ.
| ಯದುವೀರ್ ಒಡೆಯರ್ ಮೈಸೂರು ಸಂಸದ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 10 =
Remember me
