ಗಂಗಾವತಿ:ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನಪ್ರಿಯತೆ ಗಳಿಸಿದ್ದ ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ರಾಜಾ ಶ್ರೀರಂಗದೇವರಾಯಲು ಮಂಗಳವಾರ ನಿಧನರಾಗಿದ್ದಾರೆ. ಈ ಮೂಲಕ ರಾಜಕೀಯ ಮುತ್ಸದ್ದಿ, ಸರಳ ಸಜ್ಜನಿಕೆ ನಾಯಕನನ್ನು ಕಳೆದುಕೊಂಡಂತಾಗಿದೆ.
ವಿಜಯನಗರ ಸಾಮ್ರಾಜ್ಯದ ಅರವೀಡು ವಂಶಸ್ಥರಾದ ರಾಯಲು ಅವರು ಕನಕಗಿರಿ ಕ್ಷೇತ್ರದಿಂದ 1982, 1985, ಗಂಗಾವತಿ ವಿಧಾನಸಭೆ ಕ್ಷೇತ್ರದಿಂದ 1989, 1994 ಮತ್ತು 1999ರ ಅವಧಿಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲವು ಸಾಧಿಸಿದ್ದರು. ಐದು ಬಾರಿ ಶಾಸಕ, ಒಮ್ಮೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
1992ರಲ್ಲಿ ಅಂದಿನ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಕಾಡಾ ಮತ್ತು ಗಡಿನಾಡು ಅಭಿವೃದ್ಧಿ ಸಚಿವರಾಗಿದ್ದು, ರಾಯಚೂರು ಜಿಲ್ಲೆಗೆ ಉಸ್ತುವಾರಿಯಾಗಿದ್ದರು. ಸಚಿವ ಸ್ಥಾನ ಸ್ವೀಕರಿಸಿದ ಮೊದಲ ದಿನವೇ ಸಿಎಂ ಜತೆಗೂಡಿ ಅತಿವೃಷ್ಟಿಯಿಂದ ನರಳುತ್ತಿದ್ದ ಗಂಗಾವತಿಗೆ ಕರೆತಂದು ವೈಮಾನಿಕ ಸಮೀಕ್ಷೆ ನಡೆಸಿದ್ದರು.
ಇದನ್ನೂ ಓದಿ:ಮಾಜಿ ಸಚಿವ ಶ್ರೀರಂಗದೇವರಾಯಲು ನಿಧನ
2002ರಲ್ಲಿ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಖಾದಿ ಗ್ರಾಮದ್ಯೋಗ ಮಂಡಳಿ ಅಧ್ಯಕ್ಷರಾಗಿ, ಮೊದಲ ಬಾರಿಗೆ ಗಂಗಾವತಿಯಲ್ಲಿ ರಾಜ್ಯಮಟ್ಟದ ಖಾದಿ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಕಲ್ಪಿಸಿದ್ದರು. ವಸತಿಹೀನರಿಗೆ ಶಾಶ್ವತ ಸೂರಿನ ಕಲ್ಪಿಸುವ ನಿಟ್ಟಿನಲ್ಲಿ ಪಣತೊಟ್ಟಿದ್ದರಲ್ಲದೆ, 2002ರಲ್ಲಿ ಆಶ್ರಯ ಯೋಜನೆಯಡಿ ಹಲವು ಜನರಿಗೆ ನಿವೇಶನ ಒದಗಿಸಿದ್ದರು. 30 ಹಾಸಿಗೆ ಆಸ್ಪತ್ರೆಯನ್ನು 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಿದರಲ್ಲದೆ, ಸುಸಜ್ಜಿತ ಕಟ್ಟಡಕ್ಕೆ ಅನುದಾನ ಮಂಜೂರು ಮಾಡಿಸಿದ್ದರು.
ತಾಲೂಕಿಗೆ ಎನ್‌ಇಕೆಎಸ್‌ಆರ್‌ಟಿಸಿ ಬಸ್ ಡಿಪೋ ಆರಂಭಕ್ಕೆ ಇವರು ಕಾರಣರಾದರು. ಹಂಪಿ-ಆನೆಗೊಂದಿ ಸಂಪರ್ಕಕ್ಕಾಗಿ ತಳವಾರ ಘಟ್ಟದ ಬಳಿ ಸೇತುವೆ ಮಂಜೂರು ಮಾಡಿಸಿದ್ದರಲ್ಲದೆ, 16 ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ಕ್ರೋಡೀಕರಿಸಿದ್ದರು.
ಪೂರ್ಣಗೊಳ್ಳುವ ಹೊತ್ತಿಗೆ ಸೇತುವೆ ಕುಸಿದಿದ್ದರಿಂದ ತೀವ್ರ ನೊಂದಿದ್ದರು. ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಸಾಕಷ್ಟು ಶ್ರಮಿಸಿದ್ದು, ಪದವಿ ಕಾಲೇಜು ಮಂಜೂರು, ಜತೆಗೆ ಮೂರು ಎಕರೆ ಭೂಮಿಯನ್ನು ಕಾಲೇಜಿಗೆ ದೇಣಿಗೆ ಕೊಡಿಸುವ ಮೂಲಕ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪದವಿ ಕಾಲೇಜು ಆರಂಭಕ್ಕೆ ಕಾರಣರಾದರು.
ರೈತಪರ ಕಾಳಜಿ ಹೊಂದಿದ್ದ ರಾಯಲು, ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಅಧುನೀಕರಣಕ್ಕೆ ಪಣ ತೊಟ್ಟಿದ್ದರು. ತಜ್ಞರನ್ನು ಕ್ಷೇತ್ರಕ್ಕೆ ಕರೆಯಿಸಿಕೊಳ್ಳುವ ಮೂಲಕ ಸರ್ಕಾರಕ್ಕೆ ಶಾಶ್ವತ ವ್ಯವಸ್ಥೆಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಎರಡು ಬೆಳೆಗೆ ನೀರು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸುತ್ತಿದ್ದರು. ನೀರು ಬಿಡುವರಿಗೂ ವಿರಮಿಸುತ್ತಿರಲಿಲ್ಲ. ಆಡಳಿತದುದ್ದಕ್ಕೂ ಪ್ರಾಮಾಣಿಕವಾಗಿ ಜನಸೇವೆ ಮಾಡಿದ್ದರು. ಭ್ರಷ್ಟಚಾರ ಸುಳಿಯದಂತೆ ಎಚ್ಚರಿಕೆ ವಹಿಸುತ್ತಿದ್ದರು.
ಜೀವನದುದ್ದಕ್ಕೂ ಕಪ್ಪು ಚುಕ್ಕೆಯಿಲ್ಲದೆ ಆಡಳಿತ ನಡೆಸಿದ ಶ್ರೇಷ್ಠ ರಾಜಕಾರಣಿಗಳ ಪಟ್ಟಿಯಲ್ಲಿ ಇವರೂ ಇದ್ದಾರೆ. ಖಾದಿ ವಸ ಹೊರತುಪಡಿಸಿ ಇತರೆ ಬಟ್ಟೆ ತೊಡುತ್ತಿರಲಿಲ್ಲ. ಮಿತಭಾಷೆಯಾಗಿದ್ದರೂ ಕೆಲಸದ ವಿಚಾರದಲ್ಲಿ ಇವರದು ರಾಜಿಯಾಗುವ ವ್ಯಕ್ತಿತ್ವವಲ್ಲ.
ನಾಳೆ ಅಂತ್ಯಕ್ರಿಯೆ: ಮಾಜಿ ಸಚಿವ ಶ್ರೀರಂಗದೇವರಾಯಲು ಪಾರ್ಥಿವ ಶರೀರವನ್ನು ಬುಧವಾರ ಬೆಳಗ್ಗೆವರಿಗೂ ಗಂಗಾವತಿ ಸ್ವಗೃಹದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ವ್ಯವಸ್ಥೆಗೊಳಿಸಿದ್ದು, ನಂತರ ಅನೆಗೊಂದಿಯಲ್ಲೂ ಈ ವ್ಯವಸ್ಥೆ ಇರಲಿದೆ. ಸಂಜೆ ಆನೆಗೊಂದಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten + 6 =
Remember me
