ಚಿಕ್ಕಮಗಳೂರು:ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸಂಶೋಧನಾ ಗುಣ ಬೆಳೆಸಲು ಪ್ರಾರಂಭಿಸಲಾಗಿದ್ದ ರಾಜ್ಯದ ಪ್ರೌಢಶಾಲೆಗಳಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್ ಯೋಜನೆ ಸೂಕ್ತ ಮಾರ್ಗದರ್ಶಕರಿಲ್ಲದೆ ಹಳ್ಳ ಹಿಡಿದಿದೆ.
21ನೇ ಶತಮಾನದಲ್ಲಿ ಭಾರತವನ್ನು ವಿಶ್ವದ ಶಕ್ತಿಮಾನ್ ರಾಷ್ಟ್ರವನ್ನಾಗಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅಟಲ್ ಇನ್ನೋವೇಶನ್ ಮಿಷನ್​ನಡಿ ರಾಜ್ಯದ 550ಕ್ಕೂ ಹೆಚ್ಚು ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಆರಂಭಿಸಲಾಗಿದೆ. ವಿದ್ಯಾರ್ಥಿಗಳಲ್ಲಿನ ಉದ್ಯಮಶೀಲತೆ, ವಿಜ್ಞಾನ- ತಂತ್ರಜ್ಞಾನದ ಕೌಶಲತೆ ಬೆಳೆಸಲು ಈ ಯೋಜನೆ ಸಹಾಯಕವಾಗಲಿದೆ. ಆದರೆ, ಲ್ಯಾಬ್ ನಿರ್ವಹಣೆಗೆ ನಿರ್ದಿಷ್ಟ ಮಾರ್ಗಸೂಚಿ- ಬೋಧಕರಿಲ್ಲದೆ ಶಾಲೆಗಳ ಶಿಕ್ಷಕರು, ಮುಖ್ಯಶಿಕ್ಷಕರು ಗೊಂದಲಕ್ಕೆ ಸಿಲುಕಿದ್ದಾರೆ.
ವಿಜ್ಞಾನ ಶಿಕ್ಷಕರಿಗೆ ಎಟಿಎಲ್ ನಿರ್ವಹಣೆ ಜವಾಬ್ದಾರಿ ಕೊಡಲಾಗಿದೆ. 8, 9, 10ನೇ ತರಗತಿಗೆ ಮಕ್ಕಳಿಗೆ ಪಠ್ಯಕ್ರಮ ಬೋಧನೆ ಜತೆಗೆ ಎಟಿಎಲ್​ಗೆ ಬರುವ ವಿದ್ಯಾರ್ಥಿಗಳಿಗೂ ಬೋಧನೆ ಮಾಡುವುದು ಸಮಸ್ಯೆಯಾಗುತ್ತಿದೆ. ಮುಖ್ಯವಾಗಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯ ಬೋಧನೆಗೆ ಈ ಕೇಂದ್ರಗಳಿರುವ ಶಾಲೆಯಲ್ಲಿ ತೊಂದರೆಯಾಗುತ್ತಿದೆ.
ತರಗತಿ-ಸಮಯ ಹೊಂದಾಣಿಕೆ ಸಮಸ್ಯೆ:ಎಟಿಎಲ್ ಕೇಂದ್ರದಲ್ಲಿ ಯಾವ ತರಗತಿಯ ಮಕ್ಕಳಿಗೆ ಯಾವ ಸಮಯದಲ್ಲಿ ಕಲಿಸಬೇಕೆಂಬ ಮಾಹಿತಿ ಇಲ್ಲ. ಆಸಕ್ತ ಮಕ್ಕಳು ಲ್ಯಾಬ್​ಗೆ ಬಂದರೆ ಅವರು ನಿತ್ಯ ತರಗತಿಗಳನ್ನು ತಪ್ಪಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಕೆಲವೆಡೆ ಶಾಲೆ ಪ್ರಾರಂಭಕ್ಕೂ ಮೊದಲು ಒಂದು ಗಂಟೆ ಹಾಗೂ ರಜೆ ದಿನದಲ್ಲಿ ಈ ಲ್ಯಾಬ್ ನಡೆಸಲಾಗುತ್ತಿದೆ.
ನಿರ್ದಿಷ್ಟ ಪಠ್ಯಕ್ರಮವಿಲ್ಲ
ಪಠ್ಯವಿದ್ದರೆ ಸಿದ್ಧತೆ ಮಾಡಿಕೊಂಡು ಬೋಧನೆ ಮಾಡಬಹುದು. ಎಟಿಎಲ್​ಗೆ ನಿರ್ದಿಷ್ಟ ಪಠ್ಯಕ್ರಮವೇ ಇಲ್ಲ. ಯಾವ ವಿಷಯವನ್ನು ವಿಜ್ಞಾನ ಶಿಕ್ಷಕರು ಇವರಿಗೆ ಬೋಧನೆ ಮಾಡಬೇಕೆಂಬ ಗೊಂದಲ ಲ್ಯಾಬ್ ಆರಂಭವಾಗಿ ವರ್ಷವಾದರೂ ಕಾಡುತ್ತಿದೆ. ಕೇಂದ್ರ ಸರ್ಕಾರ ನಿಗದಿ ಮಾಡಿದ ಕಂಪನಿಯೊಂದು 550 ಶಾಲೆಗೂ 8.50 ಲಕ್ಷ ರೂ. ಮೌಲ್ಯದ ವಿಜ್ಞಾನ, ತಂತ್ರಜ್ಞಾನ, ವಿದ್ಯುನ್ಮಾನದ ಪರಿಕರಗಳನ್ನು ಸರಬರಾಜು ಮಾಡಿದೆ. ಕಂಪನಿ ಪ್ರತಿನಿಧಿ ಒಮ್ಮೆ ಬಂದು ಪರಿಕರ ಬಳಕೆ ಮಾಹಿತಿ ನೀಡಿದ್ದಾರೆ. ಸೂಕ್ಷ್ಮದರ್ಶಕ, ಕಂಡೆನ್ಸರ್, ರೋಬಾಟ್ ಬಿಡಿ ಭಾಗ, ಎಲೆಕ್ಟ್ರಾನಿಕ್ ಸೆನ್ಸರ್ ಸೇರಿ ಹಲವು ಪರಿಕರಗಳಿವೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ ಬಳಸಿ ಪ್ರಾಜೆಕ್ಟ್ ತಯಾರು ಮಾಡಬೇಕು. ಆದರೆ ಎಲೆಕ್ಟ್ರಾನಿಕ್ ಪರಿಕರಗಳ ಬಳಕೆ ಅನೇಕ ಶಿಕ್ಷಕರಿಗೇ ಗೊತ್ತಿಲ್ಲ. ಇನ್ನು ವಿದ್ಯಾರ್ಥಿಗಳ ಸ್ಥಿತಿ ದೇವರೇ ಬಲ್ಲ.
20 ಲಕ್ಷ ರೂ. ಅನುದಾನ
ಮಕ್ಕಳ ಸಂಖ್ಯೆ, ಶಾಲೆ ಗುಣಮಟ್ಟ ಹಾಗೂ 1500 ಚದರ ಅಡಿ ಹಾಲ್ ಸೌಲಭ್ಯ ಹೊಂದಿರುವ ಪ್ರೌಢಶಾಲೆಗೆ ನೀತಿ ಆಯೋಗ ಅಟಲ್ ಟಿಂಕರಿಂಗ್ ಲ್ಯಾಬ್ ಮಂಜೂರು ಮಾಡುತ್ತದೆ. ಇದಕ್ಕೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕು. ಲ್ಯಾಬ್ ಪ್ರಾರಂಭ ವರ್ಷ 12 ಲಕ್ಷ ರೂ. ಅನುದಾನ ನೀಡಲಿದ್ದು, 2 ಲಕ್ಷ ರೂ.ನಂತೆ 4 ವರ್ಷ ಉಳಿದ ಹಣ ನೀಡಲಾಗುತ್ತದೆ. ಪ್ರಾರಂಭ ವರ್ಷದ 12 ಲಕ್ಷ ರೂ.ಗಳಲ್ಲಿ 8.50 ಲಕ್ಷ ರೂ. ವೆಚ್ಚದಲ್ಲಿ ವಿಜ್ಞಾನ-ತಂತ್ರಾಂಶ ಪರಿಕರ ಸರಬರಾಜು ಮಾಡಲಾಗುತ್ತದೆ. 1.50 ಲಕ್ಷ ರೂ.ನಲ್ಲಿ ಲ್ಯಾಬ್​ಗೆ ಮೂಲ ಸೌಲಭ್ಯ ಮಾಡಿಕೊಳ್ಳಬೇಕು. 2 ಲಕ್ಷ ರೂ. ನಿರ್ವಹಣೆಗೆ ಬಳಸಬೇಕು.
ಮಕ್ಕಳಲ್ಲಿ ವಿಜ್ಞಾನ- ತಂತ್ರಜ್ಞಾನದ ಕೌಶಲ ಬೆಳೆಸಲು ಅಟಲ್ ಟಿಂಕರಿಂಗ್ ಲ್ಯಾಬ್ ಉತ್ತಮ ಯೋಜನೆಯಾಗಿದೆ. ಆದರೆ, ಇದಕ್ಕೆ ನಿರ್ದಿಷ್ಟ ಪಠ್ಯಕ್ರಮ, ಸಮಯ ನಿಗದಿ ಮಾಡಿಲ್ಲ. ಜತೆಗೆ ವಿಷಯ ತಜ್ಞ ಬೋಧಕರಿಲ್ಲ. ಶಾಲೆಯ ವಿಜ್ಞಾನ ಶಿಕ್ಷಕರು ಈಗ ಬೋಧನೆ ಮಾಡುತ್ತಿದ್ದು, ತರಗತಿ ಬೋಧನೆಗೆ ಇದು ತೊಂದರೆಯಾಗುತ್ತಿದೆ.
| ಡಿ.ಎಸ್.ಪುಟ್ಟಸ್ವಾಮಿಗೌಡ ಮುಖ್ಯಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಚಿಕ್ಕಮಗಳೂರು
ಎಐಎಂನಲ್ಲಿ ಏನೇನು?
ನೀತಿ ಆಯೋಗದ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ 2018ರಲ್ಲಿ ಅಟಲ್ ಇನ್ನೋವೇಶನ್ ಮಿಷನ್ (ಎಐಎಂ) ಪ್ರಾರಂಭ ಮಾಡಿದೆ. ಇದರಡಿ ಅಟಲ್ ಟಿಂಕರಿಂಗ್ ಲ್ಯಾಬ್, ಇನ್​ಕ್ಯೂಬೆಶನ್ ಸೆಂಟರ್, ನ್ಯೂ ಇಂಡಿಯಾ ಚಾಲೆಂಜಸ್, ಮೆಂಟರ್ ಆಫ್ ಚೇಂಜ್ ಪ್ರೋಗ್ರಾಂ, ಅಟಲ್ ಕಮ್ಯುನಿಟಿ ಇನ್ನೋವೇಶನ್ ಸೆಂಟರ್, ರಿಸರ್ಚ್ ಆಂಡ್ ಇನ್ನೋವೇಶನ್ ಫಾರ್ ಸ್ಮಾಟಲ್ ಎಂಟರ್​ಪ್ರೖೆಸಸ್ ಎಂಬ 6 ವಿಭಾಗದಲ್ಲಿ ಯುವ ಸಮೂಹವನ್ನು ಆಧುನಿಕ ಯುಗಕ್ಕೆ ಸಿದ್ಧಗೊಳಿಸುವ ಉದ್ದೇಶವಿದೆ.
ನಿಪುಣ ತಂತ್ರಜ್ಞರ ಕೊರತೆ
ಎಟಿಎಲ್​ಗಳಿಗೆ ವಿಜ್ಞಾನ-ತಾಂತ್ರಿಕತೆ ನೈಪುಣ್ಯ ಹೊಂದಿದ ಬಿಇ ಪದವೀಧರ ಬೋಧಕರ ಅಗತ್ಯವಿದೆ. ಆದರೆ ಪ್ರೌಢಶಾಲೆಗಳಲ್ಲಿ ವಿಜ್ಞಾನ ಬೋಧಿಸುವ ಶಿಕ್ಷಕರಿಗೆ ಇಂಜಿನಿಯರಿಂಗ್ ಪದವಿ ಮಟ್ಟದ ಪ್ರಾಜೆಕ್ಟ್​ಗಳ ಬೋಧನೆ ಜವಾಬ್ದಾರಿ ನೀಡಲಾಗಿದೆ. ಇದರಿಂದ ಹೊಸ ಪ್ರಾಜೆಕ್ಟ್​ಗಳನ್ನು ವಿಜ್ಞಾನ ಶಿಕ್ಷಕರು ಯೂ ಟ್ಯೂಬ್​ನಲ್ಲಿ ಕಲಿತು ಬೋಧಿಸಬೇಕಾಗಿದೆ. ವಿಷಯ ಪರಿಣತರಿಲ್ಲದೆ ವಿಜ್ಞಾನ ಮಾದರಿಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ಇಲ್ಲಿ ಮಾಡಿಕೊಡಲಾಗುತ್ತದೆ. ಹೊಸ ವಸ್ತು ವಿಷಯಗಳ ಬಗ್ಗೆ ಮಕ್ಕಳಿಗೆ ಸರಿಯಾದ ಮಾಹಿತಿ ಸಿಗುವ ಅನುಮಾನವಿದೆ. ಹೀಗಾಗಿ ವಿಜ್ಞಾನ ವಿಷಯಗಳನ್ನು ಮಕ್ಕಳು ಆರಂಭದಲ್ಲಿಯೇ ತಪ್ಪಾಗಿ ಗ್ರಹಿಸುವ ಅಪಾಯ ಕೂಡ ಎದುರಾಗಿದೆ. ವಿಜ್ಞಾನದ ಪ್ರಯೋಗಗಳು, ಎಲೆಕ್ಟ್ರಾನಿಕ್ ಪ್ರಕ್ರಿಯೆಗಳ ಮಾಡೆಲ್​ಗಳು ವಿದ್ಯಾರ್ಥಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆಯಾದರೂ ಇದರ ಬಗ್ಗೆ ಖಚಿತ ಜ್ಞಾನ ಸಿಗದೆ ತಿಳಿವಳಿಕೆ ಕೂಡ ಅಪೂರ್ಣವಾಗುತ್ತಿದೆ.
| ಮಲ್ಲಿಕಾರ್ಜುನ ಕಬ್ಬೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
