ರಾಜ್ಯದಲ್ಲಿ ಲೋಕಸಭೆ ಮೊದಲ ಹಂತದ ಚುನಾವಣೆ ಮುಗಿದು, ಎರಡನೇ ಹಂತದ ಕಸರತ್ತು ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ಇದೇ ಸಂದರ್ಭದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ‘ವಿಜಯವಾಣಿ’ಯೊಂದಿಗೆ ಸಂವಾದದಲ್ಲಿ ಭಾಗಿಯಾಗಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ 24 ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ನಿಶ್ಚಿತವೆಂದು ಅಮಿತ ವಿಶ್ವಾಸ ವ್ಯಕ್ತಪಡಿಸಿದರು.
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ದೇಶದ ಚುನಾವಣೆಯಿದು ಎಂದು ನಾಡಿನ ಜನರು ಅರ್ಥ ಮಾಡಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪರವಾದ ಅಲೆ, ಸರ್ಕಾರದ ಸಾಧನೆ, ಜನಸಾಮಾನ್ಯರ ಭಾವನೆ, ಸ್ಪಂದನೆಯ ಆಧಾರದಲ್ಲಿ ಮೈತ್ರಿಕೂಟ ಮೇಲುಗೈ ಸಾಧಿಸುವುದು ಖಚಿತ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಪರ್ಫಾಮೆನ್ಸ್ ಈ ಬಾರಿಯೂ ಉತ್ತಮವಾಗಿರಲಿದೆ ಎನ್ನುವುದು ಆರ್.ಅಶೋಕ್ ಭರವಸೆಯ ನುಡಿ.
. ಚುನಾವಣೆ ಒಂದು ಹಂತ ಮುಗಿದಿದೆ, ಹೇಗಿದೆ ಚಿತ್ರಣ?ದೇಶದಲ್ಲಿ ಸ್ಥಿರ ಸರ್ಕಾರ ಬೇಕು ಎಂದು ಜನ ಮಾತನಾಡುತ್ತಿದ್ದಾರೆ. ಹೊರಗಿನ ಶತ್ರುವಿನಿಂದ ಭಾರತ ಕಾಪಾಡುವರು ಬೇಕು, ದೇಶದ ಹಿರಿಮೆ ಎತ್ತರಕ್ಕೆ ತೆಗೆದುಕೊಂಡು ಹೋಗುವ ಬಲಿಷ್ಠ ನಾಯಕ ಬೇಕೆಂದು ಜನ ಯೋಚಿಸುತ್ತಾರೆ. ಹಾಗೆಯೇ ಇದು ವಿಧಾನಸಭೆ ಚುನಾವಣೆ ಅಲ್ಲ. ನಮ್ಮ ಕಡೆಯಿಂದ ಒಳ್ಳೆಯ ರೀತಿ ಪ್ರಚಾರ ನಡೆದಿದೆ. ಮೋದಿ, ಅಮಿತ್ ಷಾ ಪ್ರಚಾರಕ್ಕೆ ವೇಗ ನೀಡಿದ್ದಾರೆ. ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಕೈ ಗನ್ನಡಿಯಾಗಿ ಜನರ ಮುಂದೆ ಇಟ್ಟಿದ್ದಾರೆ. ಇನ್ನು ಕಳೆದ ಹದಿನೈದು ವರ್ಷದಲ್ಲಿ ನಮ್ಮ ಪಕ್ಷದ ಫಲಿತಾಂಶ ಪ್ರಗತಿಯಾಗಿದೆ. ಈ ಬಾರಿಯೂ ಮುಂದುವರಿಯಲಿದೆ. ಕಾಂಗ್ರೆಸ್​ನವರು ರಾಜ್ಯದ ಮಟ್ಟದ ಚುನಾವಣೆ ರೀತಿ ಫೋಕಸ್ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯ ನೇತೃತ್ವ ಎಂದು ಹೇಳುತ್ತಿಲ್ಲ, ರಾಹುಲ್​ರನ್ನು ಅನ್ ಫಿಟ್ ಎಂಬಂತೆ ಬಿಂಬಿಸಿದ್ದಾರೆ. ಸಿದ್ದರಾಮಯ್ಯರನ್ನೇ ಫೋಕಸ್ ಮಾಡುತ್ತಿದ್ದಾರೆ. ಅಂದರೆ ರಾಹುಲ್ ಗಾಂಧಿಯನ್ನು ಡಮ್ಮಿ ಪೀಸ್ ಮಾಡಿದ್ದಾರೆ.
. ಈ ಬಾರಿ ರಾಜ್ಯದಲ್ಲಿ ಎಷ್ಟು ಸ್ಥಾನ ಗೆಲ್ಲುತ್ತೀರಿ?ರಾಜ್ಯದಲ್ಲಿ ನಿಶ್ಚಿತವಾಗಿ 24 ಸ್ಥಾನ ಗೆಲ್ಲುತ್ತೇವೆ. ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡಿದ್ದೇವೆ. ನಮಗಿದು ಬಹು ಮುಖ್ಯ ಚುನಾವಣೆಯಾಗಿದೆ. ಶತಾಯಗತಾಯ ಗೆಲ್ಲಬೇಕೆಂದು ಹೊರಟಿದ್ದೇವೆ. ಸಣ್ಣಪುಟ್ಟ ಸಮಸ್ಯೆ ಇದೆ, ಕಳೆದ ಬಾರಿಗಿಂತ ಹೆಚ್ಚು ಸಂಘಟನಾತ್ಮಕ ಕೆಲಸ ನಡೆಯುತ್ತಿದೆ. ಪೇಜ್ ಪ್ರಮುಖ್, ಮಾನಿಟರ್ ವ್ಯವಸ್ಥೆ, ವಿಸ್ತಾರಕರು ಬಂದಿದ್ದಾರೆ.
. ಆರ್​ಎಸ್​ಎಸ್ ಬೆಂಬಲ ನೀಡಿಲ್ಲ ಎಂದು ಮಾತಿದೆಯಲ್ಲ…ಆರ್​ಎಸ್​ಎಸ್​ಗೂ ರಾಜಕೀಯಕ್ಕೂ ಸಂಬಂಧವಿಲ್ಲ. ಅವರಿಗೆ ನಮ್ಮ ಪಕ್ಷದ ಬಗ್ಗೆ ಸಹಾನುಭೂತಿ ಇರಬಹುದು. ಆದರೆ, ರಾಜಕೀಯದಲ್ಲಿ ಅವರು ಸಕ್ರಿಯವಾಗಿ ತೊಡಗಿಕೊಂಡಿಲ್ಲ. ನಮ್ಮ ಕಾರ್ಯಕರ್ತರು ಹುರುಪಿನಿಂದ ಕೆಲಸ ಮಾಡುತ್ತಿದ್ದಾರೆ. ಇದು ಎಲ್ಲ ಕಡೆ ಕಾಣಿಸುತ್ತಿದೆ. ಕಾಂಗ್ರೆಸ್​ನಲ್ಲಿ ನೋಡುವುದಾದರೆ ಹಾವು-ಏಣಿ ಆಟವೇ ನಡೆದಿದೆ. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಇರಬೇಕೆಂದರೆ ಡಿ.ಕೆ.ಸುರೇಶ್ ಬೆಂ.ಗ್ರಾಮಾಂತರದಲ್ಲಿ ಸೋಲಬೇಕು. ಇಂತಹ ಒಳ ರಾಜಕೀಯ ಕಾಂಗ್ರೆಸ್​ನಲ್ಲಿದೆ. ಬೆಂಗಳೂರು ಗ್ರಾಮಾಂತರದಲ್ಲಿ ನಮ್ಮ ಅಭ್ಯರ್ಥಿ ಹೃದಯವಂತ. ಅವರ ಚುನಾವಣೆ ರಾಹುಲ್, ಸೋನಿಯಾ ಗೆಲ್ಲಬೇಕೆಂದಿಲ್ಲ. ದೇಶಕ್ಕಾಗಿ ಚುನಾವಣೆಗೆ ಹೊರಟಿಲ್ಲ. ಕೆಲವು ಕಡೆ ಅಭ್ಯರ್ಥಿ ನೋಡಿದರೆ ಅವರು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ತೋರುತ್ತದೆ.
. ಕಾಂಗ್ರೆಸ್ ಮಂತ್ರಿಗಳ ಮಕ್ಕಳಿಗೆ ಟಿಕೆಟ್ ನೀಡಿದ ಪರಿಣಾಮವೇನು?ಕಾಂಗ್ರೆಸ್​ಗೆ ಅಭ್ಯರ್ಥಿಗಳೇ ಸಿಗಲಿಲ್ಲ, ಆರು ತಿಂಗಳಿನಿಂದಲೂ ಪರದಾಡಿದರು. ಕೊನೆಗೆ ಮಂತ್ರಿಗಳೇ ಸ್ಪರ್ಧೆ ಮಾಡಬೇಕೆಂದು ಹೈಕಮಾಂಡ್ ಒತ್ತಡ ಹೆಚ್ಚಾದ ನಂತರ ಅವರ ಮಕ್ಕಳಿಗೆ ಟಿಕೆಟ್ ನೀಡಲಾಯಿತು. ಇದು ಕಾಂಗ್ರೆಸ್​ನ ಕ್ರಿಮಿನಲ್ ಲೆಕ್ಕಾಚಾರ. ಅಭ್ಯರ್ಥಿಯೂ ಆಯಿತು, ಬಂಡವಾಳವೂ ಅವರದ್ದೇ. ಕುಟುಂಬದವರಿಗೆ ಮಣೆ ಹಾಕಿದ್ದರ ಬಗ್ಗೆ ಜನರೇ ಮಾತನಾಡುತ್ತಿದ್ದಾರೆ. ಇದು ಬಿಜೆಪಿಗೆ ಪ್ಲಸ್ ಆಗಲಿದೆ.
. ಬಿಜೆಪಿಯಲ್ಲಿ ಸಮಸ್ಯೆ ಹಾಗೇ ಉಳಿದು ನಾಯಕರ ನಡುವೆ ಸಮನ್ವಯ ಕೊರತೆ ಎದ್ದು ಕಾಣಿಸುತ್ತಿದೆಯಲ್ಲ?ಪ್ರತಿ ಚುನಾವಣೆಯಲ್ಲೂ ಸಮಸ್ಯೆ ಇದ್ದೇ ಇರುತ್ತದೆ. ನಮ್ಮದು ಬಿಡಿ ಕಾಂಗ್ರೆಸ್​ಗೆ ಕೋಲಾರದಲ್ಲಿ ಕೈ ಅಭ್ಯರ್ಥಿಗೆ ಅವರದೇ ಪಕ್ಷದ ನಾಯಕರು ಸಹಕಾರ ನೀಡಿಲ್ಲ, ಬೆಳಗಾವಿಯಲ್ಲಿ ಕೈ ಅಭ್ಯರ್ಥಿ ಸೋಲಿಸಲು ಅವರದೇ ಪಕ್ಷದ ನಾಯಕರು ಷಡ್ಯಂತ್ರ ಮಾಡಿದ್ದಾರೆ. ಹುಬ್ಬಳ್ಳಿ ಧಾರವಾಡ, ಹಾವೇರಿಯಲ್ಲೂ ಅದೇ ರೀತಿ ಒಮ್ಮತ ಕಾಣುತ್ತಿಲ್ಲ.
. ನಿಮ್ಮ ಚುನಾವಣೆ ತಂತ್ರಗಾರಿಕೆ ವರ್ಕೌಟ್ ಆಗಿದೆಯೇ?ಬಿಟ್ಟ ಎಲ್ಲ ಬಾಣ ಗುರಿ ತಲುಪಬೇಕೆಂದಿಲ್ಲ. ನಮ್ಮದು ಹೆಚ್ಚು ಪ್ರಮಾಣದ ಬಾಣಗಳು ಗುರಿ ಸೇರುತ್ತವೆ. ರಾಜ್ಯಕ್ಕೆ ಮೋದಿ ಬಂದಾಗ ಅಲೆ ಏಳುತ್ತದೆ. ಅದು ಪ್ಲಸ್. ಈ ಹಿಂದೆ ಕಡಿಮೆ ಶಾಸಕರಾಗಿದ್ದಾಗಲೂ ಬಿಜೆಪಿ ಹೆಚ್ಚು ಗೆದ್ದಿದೆ. ದೇಶಕ್ಕೆ ಮೋದಿ ಬೇಕು ಎಂಬ ಜನರ ಭಾವನೆ. ಅದೇ ಕಾಂಗ್ರೆಸ್ ಪರವಾಗಿ ಆ ಪಕ್ಷದ ನಾಯಕರು ಬಂದರೆ ಏನೂ ಪರಿಣಾಮ ಬೀರಲ್ಲ.
. ಚುನಾವಣೆಯಲ್ಲಿ ಕಾಂಗ್ರೆಸ್ ಅಗ್ರೆಸಿವ್ ಆದಂತಿದೆಯಲ್ಲ?ನದಿಯಲ್ಲಿ ಮುಳುಗುವವ ಜೋರಾಗಿ ಬಡಿದುಕೊಳ್ಳುತ್ತಾನೆ. ಅದೇ ರೀತಿ ಕಾಂಗ್ರೆಸ್ ಸ್ಥಿತಿ. ನೂರಕ್ಕೆ ನೂರು ಇದು ಅವರಿಗೆ ಗೊತ್ತು, ಕನಿಷ್ಠ ಲೋಕಸಭೆಯಲ್ಲಿ ವಿರೋಧ ಪಕ್ಷ ಸ್ಥಾನಮಾನ ಗಳಿಸಬೇಕು ಎಂಬುದು ಅವರ ಗುರಿ.
. ನಿಮ್ಮ ಪಕ್ಷದ ಈಶ್ವರಪ್ಪ ಸ್ಪರ್ಧಿಯಾಗಿದ್ದಾರೆ, ಅವರ ಸ್ಪರ್ಧೆ ಯಾರಿಗೆ ಹೊಡೆತ ಕೊಡಲಿದೆ?ಈಶ್ವರಪ್ಪ ಸ್ಪರ್ಧೆಯು ನಮಗೆ, ಮಾಧ್ಯಮ, ಎದುರಾಳಿಗಳಿಗೆ ಪ್ರಶ್ನೆಯಾಗೇ ಉಳಿದಿದೆ. ಅನೇಕ ಸರ್ವೆ ಮಾಡಿದರೂ ಈಶ್ವರಪ್ಪ ಯಾರ ಮತ ಕೀಳುತ್ತಾರೆ ಎಂಬುದು ಇನ್ನೂ ಗೌಪ್ಯವಾಗಿದೆ. ಶಿವಮೊಗ್ಗದಲ್ಲಿ ಬಿಜೆಪಿ ದೊಡ್ಡ ಅಂತರದಲ್ಲಿ ಗೆಲ್ಲಲಿದ್ದು, ಅವರ ಸ್ಪರ್ಧೆಯಿಂದ ವ್ಯತ್ಯಾಸ ಆಗಲ್ಲ.
. ಕಾಂಗ್ರೆಸ್​ಗೆ ಕೌಂಟರ್ ತಡವಾಗುತ್ತಿದೆ ಅನಿಸಿಲ್ಲವೇ?ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಆಗಿದ್ದು ಆಗಿ ಹೋಯಿತು. ಟಿಕೆಟ್ ಹಂಚಿಕೆ, ಜಾಲತಾಣ ಸಮಸ್ಯೆಯಾಯಿತು. ಈ ಬಾರಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದ್ದು ಪ್ರಚಾರ ಸೇರಿ ಎಲ್ಲದರಲ್ಲೂ ಕ್ರಮ ಕೈಗೊಳ್ಳಲಾಗಿದೆ. ಕಾಂಗ್ರೆಸ್​ನವರು ಜಾಹಿರಾತಲ್ಲಿ ಚೊಂಬು ಕೊಟ್ಟರು, ನಾವು ಎರಡು ದಿನ ಬಳಿಕ ಅಧಿಕೃತ ಅಂಕಿಸಂಖ್ಯೆ ಸಹಿತ ಕಾಂಗ್ರೆಸ್ ಚಿಪ್ಪು ಕೊಟ್ಟಿದ್ದನ್ನು ರಾಜ್ಯಕ್ಕೆ ತಿಳಿಸಿದೆವು. ಐವತ್ತು ವರ್ಷದಲ್ಲಿ ಅವರು ಏನು ಕೊಟ್ಟಿಲ್ಲ, ನಾವು ಏನು ಕೊಟ್ಟೆವು ಎಂದು ಜನರ ಮುಂದೆ ಇಟ್ಟಿದ್ದೇವೆ.
. ಅಭಿವೃದ್ಧಿಯಿಂದೇ ಗೆಲ್ಲುವ ಗುರಿಯಾಗಿದ್ದರೆ, ಪ್ರಧಾನಿಯವರ ಭಾವನಾತ್ಮಕ ಪ್ರಚಾರ ಅಗತ್ಯವಿತ್ತೇ?ಅಭಿವೃದ್ಧಿ ಮಾಡಿದ್ದನ್ನು ಮೋದಿ ಹೇಳುತ್ತಲೇ ಬಂದಿದ್ದಾರೆ. ಪ್ರತಿ ಕಾರ್ಯಕ್ರಮದ ಕೊನೆಯ ಹತ್ತು ನಿಮಿಷ ರಿಪೋರ್ಟ್ ಕಾರ್ಡ್ ಇಡುತ್ತಿದ್ದಾರೆ. ಆದರೆ ಕಾಂಗ್ರೆಸ್​ನವರು ತಮ್ಮ ಅಧಿಕಾರದ ಅವಧಿಯಲ್ಲಿ ಏನು ಮಾಡಿದ್ದೇವೆಂದು ಹೇಳುತ್ತಿಲ್ಲ. ಕೇಂದ್ರದಲ್ಲಿ ಮಾಡಿದ ಸಾಧನೆ ಹೇಳಬೇಕಲ್ಲ. ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಏನು ಮಾಡಿದರು ಎಂದು ಜನರಿಗೆ ಹೇಳಲಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾವ ರೀತಿ ಅನಾಹುತ ಆಗಲಿದೆ ಎಂದು ತಿಳಿಸುತ್ತಿದ್ದೇವೆ. ನಾವು ಎಲ್ಲರಿಗೂ ಸಮಾನ ಕಾನೂನು ಎಂದರೆ ಅವರು ಷರಿಯತ್ ಕಾನೂನು ತರುತ್ತೇವೆ ಎಂದು ಹೇಳುತ್ತಾರೆ. ಈ ದೇಶದಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಅಂದರು. ಅವರ ಗುರಿ ಅಲ್ಪಸಂಖ್ಯಾತರ ಮತ ಮಾತ್ರ, ದೇಶದ ಅಭಿವೃದ್ಧಿ ಬಗ್ಗೆ ಚಕಾರವಿಲ್ಲ. ಸಿದ್ದರಾಮಯ್ಯ ಸರ್ಕಾರ ದಲಿತರ ಹಣವನ್ನು ಬೇರೆ ಉದ್ದೇಶಕ್ಕೆ ಯಾವ ಕಾರಣಕ್ಕೆ ಬಳಸಿದರೆಂದು ಹೇಳಬೇಕಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರು ನಿಧನರಾದಾಗ ದೆಹಲಿಯಲ್ಲಿ ಆರು ಅಡಿ ಜಾಗ ಕೊಡಲಿಲ್ಲ. ಅವರ ನಾಯಕರಿಗೆ ಎಕರೆ ಗಟ್ಟಲೆ ಜಾಗ ಕೊಟ್ಟರು. ಅಂಬೇಡ್ಕರ್ ವಿರುದ್ಧ ಅಭ್ಯರ್ಥಿ ನಿಲ್ಲಿಸಿ ಸೋಲಿಸಿದರು. ಅಂಬೇಡ್ಕರ್ ಸೋಲಿಸಿದವರಿಗೆ ಪದ್ಮಶ್ರೀ ಕೊಟ್ಟರು, ಕಾಂಗ್ರೆಸ್​ನವರು ಇಂತಹ ಹೀನ ರಾಜಕೀಯ ಮಾಡುವುದಾ? ಇದಕ್ಕೆ ಉತ್ತರ ನೀಡಬೇಕಲ್ಲ.
. ಹಿಂದೆ ಎನ್​ಡಿಎ ಇಂಡಿಯಾ ಶೈನಿಂಗ್ ಎಂದು ಸೋತಿರಿ. ಈಗಲೂ 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆಂಬುದು ಅತಿಯಾದ ಆತ್ಮವಿಶ್ವಾಸ ಅನಿಸುತ್ತಿಲ್ಲವೇ?ವಾಜಪೇಯಿ ಸೋತಿದ್ದು ಭಗವದ್ಗೀತೆ ಅಂದು ಕೊಂಡೆವು. ಅಂದು ಅವರ ಅಧಿಕಾರದ ಅವಧಿಯಲ್ಲಿ ಮಾಡಿದ ಕೆಲಸವನ್ನು ಜನರಿಗೆ ತಿಳಿಸುವಲ್ಲಿ ಸೋತರು. ಸುವರ್ಣ ಚತುಷ್ಪತ ರಸ್ತೆ, ಸರ್ಕಾರಿ ಶಾಲೆಗಳಿಗೆ ಅಗಾಧವಾದ ಅನುದಾನ ಕೊಟ್ಟರು. ಆದರೆ ಈ ಬಾರಿ ನಮಗೆ ಭಯ ಇಲ್ಲ. ಆಗಿನ ಸ್ಥಿತಿಯೇ ಬೇರೆ. ಇಂದು ಎದುರಾಳಿ ತಂಡಕ್ಕೆ ಕ್ಯಾಪ್ಟನ್ನೇ ಇಲ್ಲ.
. ಕಾಂಗ್ರೆಸ್ ನ್ಯಾಯ್ ಗ್ಯಾರಂಟಿ ಎಂದು ಹೊರಟಿದೆಯಲ್ಲ? ಆದರ ಪರಿಣಾಮ ಏನು?ಕಾಂಗ್ರೆಸ್ ನ್ಯಾಯ್ ಉತ್ಪ್ರೇಕ್ಷೆ. ಅಷ್ಟೊಂದು ಹಣ ಕೊಡಲು ಸಾಧ್ಯವೇ? ಅದು ಜನರಿಗೂ ಗೊತ್ತು. ಹಾಗೆಯೇ ಈ ವಿಷಯ ಜನರಿಗೆ ತಲುಪಿಯೇ ಇಲ್ಲ. ಕೇಂದ್ರದಲ್ಲಿ ಅವರು ಅಧಿಕಾರಕ್ಕೆ ಬಂದು ಗ್ಯಾರಂಟಿ ಕೊಟ್ಟರೆ ಸೈನಿಕರ ಗನ್ ಕಿತ್ತುಕೊಂಡು ಬಂದು ಆಯುಧ ಪೂಜೆಗೆ ಇಡಬೇಕಷ್ಟೇ.
. ಆಸ್ತಿ ಮರು ಹಂಚಿಕೆ ವಿಚಾರ ಪ್ರಸ್ತಾಪವಾಗಿದೆಯಲ್ಲ?ಕಾಂಗ್ರೆಸ್​ನವರು ಸ್ಯಾಮ್ ಪಿತ್ರೋಡರನ್ನು ಗುರುವಾಗಿ ಇಟ್ಟುಕೊಂಡಿದ್ದಾರೆ. ಆತ ಅವರ ಪ್ರಚಾರಕ, ಸಲಹೆಗಾರ. ಅವರ ಬಾಯಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಶೇ.55 ಸರ್ಕಾರದ ವಶಕ್ಕೆ ಪಡೆಯುವ ಬಗ್ಗೆ ಹೇಳಿಸಿದ್ದಾರೆ. ನಂತರ ಆ ಹೇಳಿಕೆ ವೈಯಕ್ತಿಕ ಅಂದರು. ಅದರೆ ಆ ಮಾತು ಪಿತ್ರೋಡಾ ಮಾತು ಪಿತ್ರಾರ್ಜಿತ ಆಸ್ತಿಗೆ ವಡೆ ಇಟ್ಟಂತಾಗಿದೆ.
. ಬಿಜೆಪಿ- ಜೆಡಿಎಸ್ ಮೈತ್ರಿ ಎಷ್ಟು ವರ್ಕೌಟ್ ಆಗಿದೆ?ಬಿಜೆಪಿ- ಜೆಡಿಎಸ್ ಮೈತ್ರಿ ದೂರದೃಷ್ಟಿಯಲ್ಲೇ ಮಾಡಿರುವುದು. ದಕ್ಷಿಣ ಭಾಗದಲ್ಲೂ ಬಿಜೆಪಿ ಪ್ರಬಲ ಆಗಬೇಕು. ಒಕ್ಕಲಿಗ ಪ್ರಾಬಲ್ಯ ಇರುವ ಕಡೆ ಗೆಲ್ಲಬೇಕು. ಮುಂದಿನ ದಿನಗಳಲ್ಲೂ ಮೈತ್ರಿಗೆ ಒಳ್ಳೆಯದಾಗಿದೆ. ಈ ಬಾರಿ ಮಂಡ್ಯ, ಗ್ರಾಮಾಂತರದಲ್ಲಿ ಮೈತ್ರಿ ಖಂಡಿತವಾಗಿ ಲಾಭವಾಗಿದೆ.
ಬಿರು ಬಿಸಿಲಿಗೆ ಕಾದು ಕೆಂಡದಂತಾಗಿದ್ದ ರಾಜಧಾನಿಗೆ ತಂಪೆರೆದ ಮಳೆರಾಯ: ಬೆಂಗಳೂರು ಮಂದಿ ಫುಲ್​ ಖುಷ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
