ವಿರೋಧಪಕ್ಷಗಳ ನಾಯಕರಾಗಿ ರಾಹುಲ್ ಗಾಂಧಿ ಲೋಕಸಭೆಯ ವಿಶೇಷ ಅಧಿವೇಶನದಲ್ಲಿ ತೋರಿದ ಋಣಾತ್ಮಕ ವರ್ತನೆಗಳು ಅಸತ್ಯಗಳು ಹಾಗೂ ಮಿಥ್ಯಾರೋಪಗಳಿಗಷ್ಟೇ ಸೀಮಿತವಾಗಿರಲಿಲ್ಲ. ಅಧಿವೇಶನದ ಅಂತಿಮ ಕಾರ್ಯಕ್ರಮವಾದ ಪ್ರಧಾನಮಂತ್ರಿಗಳ ಭಾಷಣದ ಸಂದರ್ಭದಲ್ಲಿ ಅವರು ತೋರಿದ ನಡವಳಿಕೆ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತರುವುದಾಗಿತ್ತು. ಪ್ರಧಾನಮಂತ್ರಿಗಳ ಭಾಷಣ ಆರಂಭವಾಗುತ್ತಿದ್ದಂತೇ ಅದಕ್ಕೆ ಅಡ್ಡಿಯುಂಟುಮಾಡುವ ಕೃತ್ಯಕ್ಕೆ ರಾಹುಲ್ ಗಾಂಧಿ ಯಾವ ಹಿಂಜರಿಕೆಯೂ ಇಲ್ಲದೆ ಮುಂದಾದರು. ಅದಕ್ಕಾಗಿ ಅವರು ತಮ್ಮ ಪಕ್ಷದ ಸಂಸದರನ್ನು ಮತ್ತೆಮತ್ತೆ ಒತ್ತಾಯಿಸಿ ಸಭಾಧ್ಯಕ್ಷರ ಮುಂದಿನ ‘ಬಾವಿ’ಗೆ ಅಟ್ಟುತ್ತಿದ್ದುದನ್ನು ದೇಶವೇ ನೋಡಿತು. ಅವರಿಂದ ಒತ್ತಾಯ ಹಾಗೂ ಉತ್ತೇಜನಕ್ಕೆ ಒಳಗಾದ ಸಂಸದರು ಪ್ರಧಾನಮಂತ್ರಿಗಳ ಭಾಷಣದುದ್ದಕ್ಕೂ ಘೊಷಣೆಗಳನ್ನು ಕೂಗುತ್ತ ನಿರಂತರವಾಗಿ ಅಡ್ಡಿಯೊಡ್ಡಿದರು. ಸಭಾಧ್ಯಕ್ಷರ ಯಾವ ಮಾತಿಗೂ, ವಿನಂತಿಗೂ ಅವರು ಕಿವಿಗೊಡಲಿಲ್ಲ. ‘ನೀವು ಮಾಡುತ್ತಿರುವುದು ನಿಮಗೆ ಶೋಭೆ ತರುವಂಥದ್ದಲ್ಲ’ ಎಂದು ಸಭಾಧ್ಯಕ್ಷರು ರಾಹುಲ್ ಗಾಂಧಿಯವರಿಗೇ ಹೇಳಿದ್ದೂ ಪ್ರಯೋಜನಕ್ಕೆ ಬರಲಿಲ್ಲ. ಭಾಷಣದಲ್ಲಿ ‘ಹೆದರಬೇಡಿ ಮತ್ತು ಹೆದರಿಸಬೇಡಿ’ ಎಂದು ತಮ್ಮ ಪಕ್ಷದ ಸಂಸದರಿಗೆ ದೊಡ್ಡದಾಗಿ ಹೇಳಿದ್ದ ಈ ನಾಯಕ ತಾವು ಮತ್ತು ಇತರ ವಿರೋಧಪಕ್ಷಗಳ ನಾಯಕರು ಎತ್ತಿದ್ದ ಪ್ರಶ್ನೆಗಳಿಗೆ ಪ್ರದಾನಮಂತ್ರಿಗಳು ನೀಡುತ್ತಿದ್ದ ಉತ್ತರಗಳನ್ನು ಆಲಿಸುವ ಧೈರ್ಯವನ್ನಾಗಲೀ, ತಾಳ್ಮೆಯನ್ನಾಗಲೀ ತೋರಲೇ ಇಲ್ಲ.
ಲೋಕಸಭೆಯ ವಿಶೇಷ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಅರ್ಪಣೆಯ ಕಾರ್ಯಕ್ರಮದ ಅಂಗವಾದ ಪ್ರಧಾನಮಂತ್ರಿಗಳ ಭಾಷಣದ ಸಂದರ್ಭದಲ್ಲಿ ವಿರೋಧಪಕ್ಷಗಳ ನಾಯಕ ಹಾಗೂ ಅವರ ಹಿಂಬಾಲಕರ ಈ ಬಗೆಯ ಅಸಹಿಷ್ಣುತಾ ಹಾಗೂ ಅಪ್ರಜಾಪ್ರಭುತ್ವೀಯ ನಡವಳಿಕೆ ಸಂಸತ್​ನ ಇತಿಹಾಸದಲ್ಲಿ ಕಂಡುಕೇಳರಿಯದ ಋಣಾತ್ಮಕ ಪ್ರಕರಣ. ವಿರೋಧಪಕ್ಷಗಳ ನಾಯಕನಾಗಿ ತಾನು ಹೇಗೆ ವರ್ತಿಸಲಿದ್ದೇನೆ ಎನ್ನುವುದರ ಸೂಚನೆಯನ್ನು ರಾಹುಲ್ ಗಾಂಧಿ ದೇಶಕ್ಕೆ ನೀಡಿದ್ದು ಹೀಗೆ. ಇದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸಹಜವಾಗಿಯೇ ಗುರುತಿಸಿದರು. ಹಿಂದಿನ ದಿನ ಅಂದರೆ ಜುಲೈ 2ರಂದು ವಿರೋಧಪಕ್ಷಗಳ ಹೊಸ ನಾಯಕ ಎತ್ತಿದ್ದ ವಿಷಯಗಳು, ಮಾಡಿದ ಸುಳ್ಳು ಆರೋಪಗಳು ಮತ್ತು ಇಂದು ತಮ್ಮ ಭಾಷಣವನ್ನು ಅಡ್ಡಿಪಡಿಸಲು ನಡೆಸುತ್ತಿದ್ದ ಖಂಡನೀಯ ಕೃತ್ಯಗಳ ಜತೆ ಈ ‘ಐವತ್ತನಾಲ್ಕರ ಯುವನಾಯಕ’ ಲೋಕಸಭೆಯಲ್ಲಿ ಹಿಂದೆ ಪ್ರದರ್ಶಿಸಿದ್ದ, ಸಂಸತ್ ಸನ್ನಡತೆಗಳಿಗೆ ಧಕ್ಕೆ ತರುವ ನಡವಳಿಕೆಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಗಳು ಸಭಾಧ್ಯಕ್ಷರಿಗೆ ಹೇಳಿದ್ದು ‘ಇವುಗಳನ್ನು ಬಾಲಕ ಬುದ್ಧಿ ಎಂದು ನಿರ್ಲಕ್ಷಿಸಬೇಡಿ. ಗಂಭೀರವಾಗಿ ಪರಿಗಣಿಸಿ’ ಎಂದು. ಕಾಂಗ್ರೆಸ್ ಪಕ್ಷ ಮರುದಿನ ರಾಜ್ಯಸಭೆಯಲ್ಲಿ ತೋರಿದ್ದೂ ಅಶಿಸ್ತಿನ ಹಾಗೂ ಅಗೌರವದ ನಡವಳಿಕೆಯೇ. ಅಲ್ಲಿಯೂ ಪ್ರಧಾನಮಂತ್ರಿಗಳ ಭಾಷಣ ಅಡ್ಡಿಗೊಳಗಾಯಿತು ಮತ್ತು ಅದರಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಮತ್ತು ರಾಜ್ಯಸಭೆಯಲ್ಲಿ ವಿರೋಧಪಕ್ಷಗಳ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಪಾತ್ರವಿದ್ದದ್ದು ಖೇದಕರ. ತಮ್ಮವರೆಲ್ಲರನ್ನೂ ಒಟ್ಟುಗೂಡಿಸಿಕೊಂಡು ಅವರು ಸದನದಿಂದ ಹೊರನಡೆದಾಗ ಸಭಾಧ್ಯಕ್ಷ ಹಾಗೂ ಉಪರಾಷ್ಟ್ರಪತಿ ಜಗ್​ದೀಪ್ ಧನ್​ಕರ್ ಹೇಳಿದ, ‘ಇವರು ಕೇವಲ ಸದನವನ್ನು ತೊರೆದು ಹೋಗಿಲ್ಲ, ಮರ್ಯಾದೆಯನ್ನು ತೊರೆದು ಹೋಗಿದ್ದಾರೆ’ ಎಂಬ ಮಾತು ಅವರ ನೋವಿಗಷ್ಟೇ ಅಲ್ಲ, ಸಂಸದೀಯ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟಿರುವ ಎಲ್ಲ ದೇಶವಾಸಿಗಳ ನೋವಿಗೂ ದನಿಯಾಯಿತು. ತಮ್ಮ ಹಿರಿತನ ಹಾಗೂ ದೀರ್ಘ ರಾಜಕೀಯ ಅನುಭವ ಅಂದು ಅರ್ಥ ಕಳೆದುಕೊಂಡದ್ದು, ಸಂಸದೀಯ ಸನ್ನಡತೆಗಳಲ್ಲಿ ಮಾರ್ಗದರ್ಶಕರಾಗಬೇಕಾಗಿದ್ದ ತಾವು ‘ಬಾಲಕ ಬುದ್ಧಿ’ಯ ಹಿಂಬಾಲಕರಾಗಿ ಹೋಗುತ್ತಿದ್ದುದು ಮಲ್ಲಿಕಾರ್ಜುನ ಖರ್ಗೆಯವರಿಗೆ ತಿಳಿಯಲೇ ಇಲ್ಲ.
ಒಟ್ಟಾರೆಯಾಗಿ ಸಂಸತ್​ನ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ವರ್ತನೆ ಸಂಸದೀಯ ಪ್ರಜಾಪ್ರಭುತ್ವ ಇತಿಹಾಸದ ಒಂದು ಕಪ್ಪುಚುಕ್ಕೆಯಾಯಿತು. ಅದಾದ ನಂತರ ಕಾಂಗ್ರೆಸ್ ಪಾಳಯದಲ್ಲಿ ಮಂಥನ ನಡೆಯಬಹುದು ಮತ್ತು ಅದರಿಂದಾಗಿ ನಾಯಕವರ್ಗದ ನಡವಳಿಕೆಯಲ್ಲಿ ಧನಾತ್ಮಕ ಬದಲಾವಣೆ ಕಂಡುಬರಬಹುದು, ರಾಹುಲ್ ಗಾಂಧಿಯವರು ತಮ್ಮ ಬಾಲಕ ಬುದ್ಧಿಯನ್ನು ತೊರೆಯಲು ಪ್ರಯತ್ನ ಆರಂಭಿಸಬಹುದು ಎಂಬ ನಿರೀಕ್ಷೆ ಸುಳ್ಳಾಯಿತು. ರಾಹುಲ್ ಗಾಂಧಿ ಒಂದಾದ ಮೇಲೊಂದು ಅಧ್ವಾನಗಳನ್ನು ಎಸಗುತ್ತ ಸಾಗಿದರು. ತಮ್ಮ ಇಂಡಿ ಘಟಬಂಧನದ ಸಹಯೋಗಿ ಡಿಎಂಕೆ ಅಧಿಕಾರದಲ್ಲಿರುವ ತಮಿಳುನಾಡಿನ ಕಳ್ಳಕುರಿಚಿಯಲ್ಲಿ ನಡೆದ ಕಳ್ಳಭಟ್ಟಿ ದುರಂತದ ಸಂತ್ರಸ್ತರನ್ನು ನೆನಪಿಸಿಕೊಳ್ಳದ ರಾಹುಲ್ ಗಾಂಧಿ ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಪ್ರದೇಶದ ಹಾತ್ರಾಸ್​ನಲ್ಲಿ ‘ಸತ್ಸಂಗ’ವೊಂದರಲ್ಲಿ ಕಾಲ್ತುಳಿತಕ್ಕೆ ಬಲಿಯಾದವರಿಗಾಗಷ್ಟೇ ಮರುಗಿ ಅಲ್ಲಿಗೆ ಓಡಿದರು, ಬಿಜೆಪಿ ಆಡಳಿತವಿರುವ ಮಣಿಪುರಕ್ಕೂ ಹಾರಿದರು. ಪಶ್ಚಿಮ ಬಂಗಾಳ ಮುಖ್ಯವಾಗಿ ಸಂದೇಶ್​ಖಾಲಿ ಅವರಿಗೆ ಇನ್ನೂ ನೆನಪಾಗಿಲ್ಲ. ತಮ್ಮ ‘ಭೇಟಿ’ಗಳಿಂದ ಅವರು ಪ್ರದರ್ಶಿಸಿದ್ದು ತಾವು ಗಮನಿಸುವುದು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಘಟಿಸುವ ದುರಂತಗಳನ್ನಷ್ಟೇ ಎನ್ನುವುದನ್ನು. ನೋವಿನಲ್ಲೂ ರಾಜಕೀಯದ ಅವಕಾಶ ಹುಡುಕುವ ಈ ನಡವಳಿಕೆಯನ್ನು ಬಾಲಕ ಬುದ್ಧಿ ಎಂದು ಪ್ರಜ್ಞಾವಂತ ಪ್ರಜೆಗಳು ನಿರ್ಲಕ್ಷಿಸಬಹುದೇ?
ತಮ್ಮ ಸ್ಥಾನ ಇಂದು ಅಧಿಕೃತವಾಗಿ ರಾಷ್ಟ್ರ ರಾಜಕಾರಣದಲ್ಲಿ ಯಾವ ಮಟ್ಟಕ್ಕೇರಿದೆ ಎನ್ನುವುದನ್ನು ರಾಹುಲ್ ಗಾಂಧಿ ಇನ್ನೂ ಅರ್ಥಮಾಡಿಕೊಂಡಿಲ್ಲ. ವಿವಿಧ ವೃತ್ತಿಯ ಜನರನ್ನು ಭೇಟಿಯಾಗಿ ಮಾತಾಡಿಸಿ ಅವರೊಂದಿಗೆ ಫೋಟೋ, ವಿಡಿಯೋ ತೆಗೆಸಿಕೊಳ್ಳುವುದು ರಾಹುಲ್ ಗಾಂಧಿಯವರ ‘ಹವ್ಯಾಸ’ಗಳಲ್ಲೊಂದು. ಇವು ಕೃತ್ರಿಮ, ಇಲ್ಲಿ ಕಾಣುವುದು ನಟನೆ ಎಂಬ ಆಪಾದನೆಗಳು ಆಗಾಗ ಕೇಳಿಬರುತ್ತಲೇ ಇವೆ. ರಾಹುಲ್ ಗಾಂಧಿಯವರ ‘ಹವ್ಯಾಸ’ ಮತ್ತದರ ಕುರಿತಾಗಿನ ಅಪನಂಬಿಕೆ ದೊಡ್ಡದಾಗಿ ಕಾಣಿಸಿಕೊಂಡದ್ದು ಲೋಕಸಭೆಯ ವಿಶೇಷ ಅಧಿವೇಶನ ಮುಕ್ತಾಯವಾದ ಮರುದಿನವೇ. ಜುಲೈ 5ರಂದು ಎಂಟು ಛಾಯಾಗ್ರಾಹಕರು ಮತ್ತು ಒಬ್ಬರು ‘ನಿರ್ದೇಶಕ’ರ ಜತೆ ನ್ಯೂ ಡೆಲ್ಲಿ ರೈಲ್ವೇ ಸ್ಟೇಷನ್​ಗೆ ಹೋದ ರಾಹುಲ್ ಗಾಂಧಿ ಅಲ್ಲಿ ಸುಮಾರು ಐವತ್ತು ರೈಲು ಚಾಲಕರನ್ನು ಭೇಟಿಯಾಗಿ ಅವರ ಕಷ್ಟಸುಖಗಳನ್ನು ವಿಚಾರಿಸಿದ ಸುದ್ದಿ ಬಂತು. ಅದರ ಹಿಂದೆಯೇ, ರಾಹುಲ್ ಗಾಂಧಿ ಭೇಟಿಯಾದದ್ದು ನಿಜವಾದ ರೈಲು ಚಾಲಕರನ್ನಲ್ಲ, ಅವರ ವೇಷದಲ್ಲಿ ಅಲ್ಲಿಗೆ ಕರೆತರಲಾಗಿದ್ದ ಬೇರೆಯವರನ್ನು ಎಂದು ಉತ್ತರ ರೈಲ್ವೇಯ ಮುಖ್ಯ ಜನಸಂಪರ್ಕಾಧಿಕಾರಿ ದೀಪಕ್ ಕುಮಾರ್ ಹೇಳಿಕೆ ನೀಡಿದ ಸುದ್ದಿಯೂ ಬಂತು! ಇದು ನಿಜವೇ ಆಗಿದ್ದರೆ ಈ ‘ಬಾಲಕ ಬುದ್ಧಿ’ ವಿರೋಧಪಕ್ಷಗಳ ನಾಯಕನಿಗೆ ಸೂಕ್ತವೇ? ಇಂತಹ ನಾಯಕ ಲೋಕಸಭೆಗೆ ಸೂಕ್ತವೇ?
ಈ ವಿವಾದದ ತರುವಾಯ ಒಂದು ವಾರದೊಳಗೇ ಕಾಂಗ್ರೆಸ್ ಪಕ್ಷವೇ ಬಾಲಕ ಬುದ್ಧಿಯನ್ನು ಪ್ರದರ್ಶಿಸಿಬಿಟ್ಟಿತು. ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜುಲೈ 11ರಂದು ರಾಹುಲ್ ಗಾಂಧಿಯವರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದರು ಎಂದು ಕಾಂಗ್ರೆಸ್ ಪಕ್ಷ ಹೇಳಿಕೊಂಡಿತು. ಇದು ಸಹಜವಾಗಿಯೇ ಗಮನ ಸೆಳೆಯುವ ವಿಷಯ. ಜಾಗತಿಕ ಆಗುಹೋಗುಗಳಲ್ಲಿ ಅತಿಮುಖ್ಯ ಪಾತ್ರ ವಹಿಸುವ ಹಾಗೂ ಇಂದು ಚೀನಾ ವಿರುದ್ಧ ಭಾರತದ ಮುಖ್ಯ ಸಾಮರಿಕ ಸಹಯೋಗಿಯಾಗಿರುವ ಅಮೆರಿಕದ ಪ್ರಭಾವಿ ಉಪಾಧ್ಯಕ್ಷೆ ಮೂರನೆಯ ಬಾರಿಗೆ ಭಾರತದ ಪ್ರಧಾನಮಂತ್ರಿಯಾಗಿರುವ ನರೇಂದ್ರ ಮೋದಿಯವರನ್ನು ಕಡೆಗಣಿಸಿ, ಭಾರತದ ರಾಜತಾಂತ್ರಿಕ ಹಾಗೂ ಸಾಮರಿಕ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರವಿಲ್ಲದ ವಿರೋಧಪಕ್ಷಗಳ ನಾಯಕ ರಾಹುಲ್ ಗಾಂಧಿಯವರ ಜತೆ ಮಾತಾಡುವ ಆಸಕ್ತಿ ತೋರಿದ್ದು ಹಲವರ ಹುಬ್ಬೇರಿಸಿತು. ರಾಹುಲ್ ಗಾಂಧಿಯವರನ್ನು ಭಾರತದ ಮುಂದಿನ ಪ್ರಧಾನಿಯಾಗಿ ಕಮಲಾ ಹ್ಯಾರಿಸ್ ನೋಡುತ್ತಿರಬಹುದು, ಮುಂದೊಮ್ಮೆ ಅಮೆರಿಕದ ಅಧ್ಯಕ್ಷೆಯಾಗಿ ತಾವು ಪ್ರಧಾನಮಂತ್ರಿ ರಾಹುಲ್ ಗಾಂಧಿಯವರೊಂದಿಗೆ ವ್ಯವಹರಿಸಬೇಕಾಗಬಹುದು ಎಂಬ ದೂರಗಾಮಿ ಲೆಕ್ಕಾಚಾರದಿಂದ ಉಪಾಧ್ಯಕ್ಷೆ ಹ್ಯಾರಿಸ್ ಈ ನಡೆ ಪ್ರದರ್ಶಿಸಿರಬಹುದು ಎಂಬ ಊಹಾಪೋಹಗಳೂ ಹಾರಾಡತೊಡಗಿದವು. ಇವುಗಳಿಗೆ ಬಲ ಬಂದದ್ದು ಅಮೆರಿಕದ ಡೆಮೋಕ್ರಾಟಿಕ್ ಪಕ್ಷ ಹಾಗೂ ಭಾರತದ ಕಾಂಗ್ರೆಸ್ ಪಕ್ಷಗಳೆರಡೂ ಜಾಗತಿಕ ಆರ್ಥಿಕ-ರಾಜಕೀಯ ಬೆಳವಣಿಗೆಗಳನ್ನು ತೆರೆಯ ಹಿಂದೆ ನಿಂತು ನಿರ್ದೇಶಿಸುವ ತಥಾಕಥಿತ ಡೀಪ್ ಸ್ಟೇಟ್​ನ ಗಾಢಪ್ರಭಾವದಲ್ಲಿವೆ ಎಂಬ ವದಂತಿಗಳು ಈ ದಿನಗಳಲ್ಲಿ ದಟ್ಟವಾಗುತ್ತಿರುವುದರಿಂದಾಗಿ. ತಮ್ಮ ನಾಯಕ ಇಂದು ಎಷ್ಟು ಮಹಾನ್, ಸದ್ಯದಲ್ಲೇ ಇನ್ನೆಷ್ಟು ಮಹಾನ್ ಆಗಲಿದ್ದಾರೆ ಎಂದು ಕಾಂಗ್ರೆಸ್ಸಿಗರು ಹೆಮ್ಮೆಪಟ್ಟುಕೊಂಡದ್ದೂ ಆಯಿತು.
ಆದರೆ ಎರಡೇ ದಿನಗಳಲ್ಲಿ ಗಾಳಿಯ ದಿಕ್ಕು ಬದಲಾಯಿತು. ಹ್ಯಾರಿಸ್-ಗಾಂಧಿ ದೂರವಾಣಿ ಮಾತುಕತೆಯ ಬಗ್ಗೆ ವಿವರಗಳನ್ನು ಪಡೆದುಕೊಳ್ಳಲು ಶ್ವೇತಭವನವನ್ನು ಸಂರ್ಪಸಿದ ವಾಷಿಂಗ್​ಟನ್​ನಲ್ಲಿರುವ ಪಿಟಿಐ ವಾರ್ತಾಸಂಸ್ಥೆಯ ಮುಖ್ಯ ಬಾತ್ಮೀದಾರ ಲಲಿತ್ ಝಾ ಅವರಿಗೆ ಉಪಾಧ್ಯಕ್ಷೆಯವರ ಕಚೇರಿಯಿಂದ ಅಂತಹ ಯಾವ ದೂರವಾಣಿಯ ದಾಖಲೆಯೂ ತಮ್ಮಲ್ಲಿಲ್ಲ ಎಂಬ ಸುದ್ದಿ ಬಂತು. ಇದರ ಸರಳ ಅರ್ಥ ರಾಹುಲ್ ಗಾಂಧಿಯವರಿಗೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಂದ ಯಾವ ದೂರವಾಣಿ ಕರೆಯೂ ಬಂದಿಲ್ಲ ಎಂದು. ಅಂದರೆ ಈ ದೂರವಾಣಿ ಕರೆ ಒಂದು ಕಟ್ಟುಕಥೆಯೇ? ಅಥವಾ ಅದು ಉಪಾಧ್ಯಕ್ಷೆಯ ಹೆಸರು ಹೇಳಿಕೊಂಡು ಮತ್ತಾರೋ ತಮಾಷೆಗಾಗಿ ಆಡಿದ ಆಟವೇ? ಅಂದರೆ ನಮ್ಮ ದೇಶದ ವಿರೋಧಪಕ್ಷಗಳ ನಾಯಕ ಯಾರಿಗೋ ತಮಾಷೆಯ ವಸ್ತುವಾಗಿಬಿಟ್ಟಿದ್ದಾರೆಯೇ? ಹಾಗೇ ನಡೆದಿದ್ದರೆ ಆ ದೂರವಾಣಿ ಸಂಭಾಷಣೆಯಲ್ಲಿ ‘ಬಾಲಕ ಬುದ್ಧಿ’ ಹೇಗೆ ಪ್ರದರ್ಶಿತಗೊಂಡಿರಬಹುದು?
ನಾವೀಗ ಮತ್ತೆ ಲೋಕಸಭೆಗೆ ಹಿಂತಿರುಗೋಣ. ಮಾನ್ಸೂನ್/ಬಜೆಟ್ ಅಧಿವೇಶನದ ಮೊದಲ ದಿನವೇ ರಾಹುಲ್ ಗಾಂಧಿ ಮತ್ತೊಮ್ಮೆ ‘ಬಾಲಕ ಬುದ್ಧಿ’ಯನ್ನು ಪ್ರದರ್ಶಿಸಿದರು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಕುರಿತಾಗಿ ಪ್ರಶ್ನೆಯೆತ್ತಿದ ರಾಹುಲ್ ಗಾಂಧಿ ದೇಶದ ಪರೀಕ್ಷಾ ವ್ಯವಸ್ಥೆಯನ್ನು ‘ವಂಚನೆ’ (್ಟ್ಠ) ಎಂದು ಬಣ್ಣಿಸುವ ಅತಿರೇಕಕ್ಕೆ ಹೋದರು. ಅಲ್ಲಿಗೆ ನಿಲ್ಲದೆ, ಹಣವಿರುವ ಯಾರಾದರೂ ಸೀಟ್​ಗಳನ್ನು ಗಳಿಸಿಕೊಳ್ಳಬಹುದು ಎಂದೂ ಹೇಳಿದ್ದು ಅವರಿಗೇ ಮುಳುವಾಗುವಂತಹ ಮಾತಾಗಿತ್ತು. ಸ್ವತಃ ರಾಹುಲ್ ಗಾಂಧಿ ದೆಹಲಿಯ ಸೈಂಟ್ ಸ್ಟೀಫನ್ ಕಾಲೇಜ್​ನಲ್ಲಿ ಸ್ಪೋರ್ಟ್ಸ್ ಕೋಟಾದಲ್ಲಿ ಸೀಟ್ ಗಿಟ್ಟಿಸಿಕೊಂಡಿದ್ದರು ಎಂಬ ಆಪಾದನೆ ಬಹಳ ಹಳೆಯದು. ಅವರು ಪ್ರಮಾಣಪತ್ರ ಸಲ್ಲಿಸಿದ್ದು ಶೂಟಿಂಗ್ ಕ್ರೀಡೆಯಲ್ಲಿ ಪ್ರಾವೀಣ್ಯ, ಸಾಧನೆ ತೊರಿದ ಬಗೆಗಂತೆ. ಆದರೆ ಆ ಕ್ರೀಡೆಯಲ್ಲಿ ಅವರ ಸಾಧನೆ ಎಲ್ಲೂ ವರದಿಯಾಗಿಲ್ಲ ಎಂಬ ಮಾತೂ ಕೇಳಿಬರುತ್ತಲೇ ಇದೆ.
ಶೂಟಿಂಗ್ ಕ್ರೀಡೆಯಲ್ಲಿ ರಾಹುಲ್ ಗಾಂಧಿ ಪರಿಣಿತರೋ ಇಲ್ಲವೋ, ರಾಜಕೀಯದಲ್ಲಿ ಅವರ ಗುರಿಗಾರಿಕೆ ಮಾತ್ರ ಅಸಡ್ಡಾಳ ಎನ್ನುವುದು ದೇಶಕ್ಕೇ ಪರಿಚಿತ. ಯಾರ್ಯಾರ ಮೇಲೋ ಏನೇನೋ ಆರೋಪ ಮಾಡಿ, ಅವಹೇಳನಕಾರಿ ಮಾತುಗಳನ್ನಾಡಿ ಅವರು ಮೂವತ್ತಕ್ಕೂ ಹೆಚ್ಚಿನ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ, ಒಮ್ಮೆ ನ್ಯಾಯಾಲಯದಲ್ಲಿ ಕ್ಷಮೆ ಯಾಚಿಸಿಯಾಗಿದೆ, ಮತ್ತೊಂದರಲ್ಲಿ ಶಿಕ್ಷೆಯೂ ಆಗಿದೆ. ಸವೋಚ್ಚ ನ್ಯಾಯಾಲಯ ತಡೆ ನೀಡಿರುವುದರಿಂದ ಅವರು ಕಾರಾಗೃಹದಿಂದ ಹೊರಗಿದ್ದಾರೆ. ರಾಹುಲ್ ಗಾಂಧಿಯವರ ಗುರಿಗಾರಿಕೆ ಲೋಕಸಭೆಯಲ್ಲಿ ವಿರೋಧಪಕ್ಷಗಳ ನಾಯಕನಂತಹ ಮಹತ್ವದ ಸ್ಥಾನ ಪಡೆದುಕೊಂಡ ಮೇಲೂ ತಪ್ಪುತ್ತಲೇ ಇದೆ. ವಿಶೇಷ ಅಧಿವೇಶನದಲ್ಲಾದಂತೆ ಜುಲೈ 22ರಂದು ಆರಂಭವಾದ ಬಜೆಟ್ ಅಧಿವೇಶನದಲ್ಲೂ ಅವರು ತಮ್ಮ ಅಪ್ರಬುದ್ಧ, ಅವಿವೇಕಿ ನಡೆಗಳನ್ನು ಪ್ರದರ್ಶಿಸುತ್ತ ಹೋಗುವ ಸೂಚನೆ ಮೊದಲ ದಿನವೇ ದೊರೆತಾಗಿದೆ. ವಾರದ ನಂತರವೂ ಅದು ಧನಾತ್ಮಕವಾಗಿ ಬದಲಾಗಿಲ್ಲ. ಜುಲೈ 29ರಂದು ಬಜೆಟ್ ಬಗ್ಗೆ ಮಾತಾಡಬೇಕಾದ ಅವರು ಅದನ್ನು ಬಿಟ್ಟು ತಮ್ಮ ಎಂದಿನ ಗೀಳುಗಳಾದ ಅದಾನಿ, ಅಂಬಾನಿ, ಅಗ್ನಿವೀರ್, ಜಾತಿಗಣತಿ ರಾಗಗಳನ್ನೇ ಹಾಡಿ ಸಭಾಧ್ಯಕ್ಷರಿಂದ ತೀಕ್ಷ ್ಣ ಬುದ್ಧಿಮಾತು ಹೇಳಿಸಿಕೊಂಡಿದ್ದಾರೆ. ಹದಿನೆಂಟನೆಯ ಲೋಕಸಭೆ ತನ್ನ ಪೂರ್ಣ ಅವಧಿ ಪೂರೈಸಿದರೆ, ಅಷ್ಟು ಕಾಲ ರಾಹುಲ್ ಗಾಂಧಿ ವಿರೋಧಪಕ್ಷಗಳ ನಾಯಕರಾಗಿಯೇ ಮುಂದುವರಿದರೆ ಇಂತಹ ಅಧ್ವಾನಗಳೂ ಮುಂದುವರಿಯಬಹುದು.
ವಿಶೇಷ ಅಧಿವೇಶನದಲ್ಲಿ ತಾವು ಮಾಡಿದ ಮಿಥ್ಯಾರೋಪಗಳ ಬಗ್ಗೆ ಬಿಜೆಪಿ ಸಂಸದರು ಸಿಡಿದೆದ್ದಾಗ ಬಾಣ ಹೃದಯಕ್ಕೇ ತಾಗಿದೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡ ರಾಹುಲ್ ಗಾಂಧಿ ಬಜೆಟ್ ಅಧಿವೇಶನದಲ್ಲಿ ಅವರ ಅಸಂಬದ್ಧ ಮಾತುಗಳಿಗೆ ಬಿಜೆಪಿ ಪಾಳಯದಲ್ಲಿ ಲೇವಡಿಯ ನಗೆ ಎದ್ದಾಗ ಹತಾಶೆಗೊಂಡರು. ಲೋಕಸಭೆಯಲ್ಲಿ ‘ಬಾಲಕ ಬುದ್ಧಿ’ಗೆ ಸೂಕ್ತ ಪ್ರತಿಕ್ರಿಯೆ ಯಾವುದು ಎಂದು ಇದರಿಂದ ಗೊತ್ತಾಗುತ್ತದೆ. ಆದರೆ ಲೋಕಸಭೆಯ ಹೊರಗೆ?
ನಮ್ಮ ಬದ್ಧವೈರಿ ಚೀನಾದ ಆಡಳಿತಪಕ್ಷದ ಬೇಹುಗಾರಿಕಾ ವಿಭಾಗದೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಳ್ಳುವ, ವಿವಾದಿತ ಗಡಿಯಲ್ಲಿ ಚೀನೀ ಸೇನೆಗೆದುರಾಗಿ ನಮ್ಮ ಸೇನೆ ನಿಂತಿದ್ದಾಗ ರಹಸ್ಯವಾಗಿ ಚೀನೀ ರಾಯಭಾರ ಕಚೇರಿಗೆ ಹೋಗುವ, ದೇಶದೆಲ್ಲೆಡೆ ಬೆಂಕಿ ಬಿದ್ದಿದೆ ಎಂದು ದೇಶವಾಸಿಗಳನ್ನು ಹೆದರಿಸಿ ತಾನು ಮಾತ್ರ ‘ಅಶಾಂತ ದೇಶದ ಅಶಾಂತ ಕಾಶ್ಮೀರ’ದಲ್ಲಿ ತಂಗಿಯೊಂದಿಗೆ ಆರಾಮವಾಗಿ ಸ್ಕೀಯಿಗ್ ಮಜಾ ಅನುಭವಿಸುವ, ಉಪನ್ಯಾಸ ನೀಡಲೆಂದು ವಿದೇಶಗಳಿಗೆ ಹೋಗಿ ವಾರಗಟ್ಟಲೆ ಎಲ್ಲೋ ಮಾಯವಾಗಿಬಿಡುವ ಈ ವ್ಯಕ್ತಿಯ ಚಟುವಟಿಕೆಗಳನ್ನು ‘ಬಾಲಕ ಬುದ್ಧಿ’ ಎಂದು ದೇಶದ ಪ್ರಜ್ಞಾವಂತರು ನಿರ್ಲಕ್ಷ ್ಯ ಮಾಡಬಾರದು.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ಜೈಲಿನಿಂದ ನ್ಯಾಯಾಧೀಶರಿಗೆ ನಟ ದರ್ಶನ್ ಮನವಿ; ಪತ್ರದಲ್ಲಿ ಏನೇನಿದೆ..?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 13 =
Remember me
