ಬೆಂಗಳೂರು:‘ಜನರ ನಿರೀಕ್ಷೆ ಸಾಕಾರ, ಮತ್ತೊಮ್ಮೆ ಅಧಿಕಾರ’ದ ಅಚಲ ವಿಶ್ವಾಸದೊಂದಿಗೆ ವಿಜಯದ ಕಡೆ ನಡೆಯಲು ಆಡಳಿತ ಬಿಜೆಪಿ ದೃಢಸಂಕಲ್ಪ ಮಾಡಿದೆ. ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಶುಕ್ರವಾರ ನಡೆದ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯು ಅಭಿವೃದ್ಧಿ ಮಾರ್ಗದಲ್ಲಿ ಜನ-ಮನ ಗೆಲ್ಲುವ ಪಣ ತೊಟ್ಟಿದೆ. ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮ, ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಕುರಿತು ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಮಾಹಿತಿ ನೀಡುವ ಉತ್ಸಾಹದೊಂದಿಗೆ ಸನ್ನದ್ಧವಾಗಿದೆ.
ಅಭಿವೃದ್ಧಿ ಪ್ರಧಾನ ಕಾರ್ಯಸೂಚಿಯೇ 2023ರ ವಿಧಾನಸಭೆ ಚುನಾವಣೆಗೆ ಪ್ರಧಾನ ಅಜೆಂಡಾ ಎಂಬ ನಿಲುವನ್ನು ಪುನರುಚ್ಚರಿಸಿದ್ದು, ಅಭಿವೃದ್ಧಿ ಅಸ್ತ್ರ ಬಳಸಿಕೊಂಡು ಪ್ರತಿಪಕ್ಷ ಕಾಂಗ್ರೆಸ್​ನ ಅಪಪ್ರಚಾರ ಹೋಗಲಾಡಿಸಲು ತೀರ್ಮಾನಿಸಿದೆ.
ಮತ್ತೊಂದು ಹೆಜ್ಜೆ ಮುಂದೆ:ಹೊಸಪೇಟೆಯಲ್ಲಿ ನಡೆದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಿಷನ್ 150 ಗುರಿಯೊಂದಿಗೆ ವಿಜಯಯಾತ್ರೆ ಕಹಳೆ ಮೊಳಗಿಸಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ನಮ್ಮ ನಡೆ ವಿಜಯದ ಕಡೆ’ ಎಂಬ ಮತ್ತೊಂದು ವಿಶ್ವಾಸದ ಹೆಜ್ಜೆಯಿರಿಸಿದೆ. ಪ್ರತಿಪಕ್ಷಗಳ ರಣತಂತ್ರಕ್ಕೆ ಪ್ರತಿಯಾಗಿ ಕಾರ್ಯತಂತ್ರ ರೂಪಿಸುವ ಜತೆಗೆ ಸರ್ಕಾರದ ಸಾಧನೆ ಮತ್ತು ಪಕ್ಷದ ತತ್ವ-ಸಿದ್ಧಾಂತಗಳ ಬಲದೊಂದಿಗೆ ಚುನಾವಣಾ ಮುನ್ನುಡಿ ಬರೆದಿದೆ. ಕೇಂದ್ರ, ರಾಜ್ಯ ಸರ್ಕಾರದ ಯೋಜನೆ-ಸಾಧನೆಗಳನ್ನು ಪ್ರತಿ ಮನೆಗೆ ತಲುಪಿಸಲು ಪ್ರತಿಬೂತ್​ನಲ್ಲಿ ಐದು ಜನರ ಸಕ್ರಿಯ ತಂಡ ರಚಿಸಿ, ವಿಜಯಸಂಕಲ್ಪಕ್ಕೆ ಪೂರಕ ವಾತಾವರಣ ಸೃಷ್ಟಿಸಲು ಮುಂದಾಗಿದೆ.
ಪ್ರವಾಸ ತಂತ್ರ ಬದಲು:ಮಿಷನ್ 150 ಗುರಿ ಸಾಧಿಸಲು ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯ, ಎರಡರ ಬಲವನ್ನು ಸಮರ್ಪಕವಾಗಿ ಬಳಸಿಕೊಳ್ಳಲೆಂದು ರಾಜ್ಯ ನಾಯಕರ ಪ್ರವಾಸದ ತಂತ್ರಗಾರಿಕೆಯನ್ನು ಬದಲಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ತಂಡವು ‘ವಿಜಯಸಂಕಲ್ಪ’ದ ಹೆಸರಿನಲ್ಲಿ ರಾಜಕೀಯ ಯಾತ್ರೆ ಕೈಗೊಳ್ಳಲಿದೆ. ಅ.11ರಂದು ರಾಯಚೂರಿನಿಂದ ಆರಂಭಿಸಿ ಡಿ.25ರೊಳಗೆ 50 ವಿಧಾನಸಭೆ ಕ್ಷೇತ್ರಗಳಲ್ಲಿ ಈ ಯಾತ್ರೆ ಮುಗಿಸಿ, ಪಕ್ಷದ ಪರ ಅಲೆ ಹುಟ್ಟಿಹಾಕಲು ಉದ್ದೇಶಿಸಿದೆ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ರಾಜ್ಯಾಧ್ಯಕ್ಷರ ನೇತೃತ್ವದ ಮತ್ತೊಂದು ತಂಡವು 100 ವಿಧಾನಸಭೆ ಕ್ಷೇತ್ರಗಳಲ್ಲಿ ಸಂಘಟನಾ ಪ್ರವಾಸ ಕೈಗೊಂಡು ಕಾರ್ಯಕರ್ತರನ್ನು ಚುನಾವಣೆಗೆ ಶ್ರಮಿಸಲು ಸಜ್ಜುಗೊಳಿಸಲಿದೆ. ಒಟ್ಟಾರೆ ಡಿ.31ರೊಳಗೆ ಮೊದಲ ಹಂತದ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲಿದೆ. ಗುರಿ ಮಾತ್ರ ಆಕರ್ಷಕವಾಗಿದ್ದರೆ ಸಾಲದು, ಯಶಸ್ವಿಗೊಳಿಸುವ ಛಲವೂ ಬೇಕು ಎಂಬ ವರಿಷ್ಠರ ಸೂಚನೆಯನ್ನು ಶಿರಸಾಪಾಲಿಸುತ್ತೇವೆ ಎಂಬ ಸಂದೇಶವನ್ನು ಈ ಸಭೆ ರವಾನಿಸಿದೆ.
ಪ್ರತಿಪಕ್ಷ ಕಾಂಗ್ರೆಸ್​ನ ‘ಪೇಸಿಎಂ’ ಅಭಿಯಾನಕ್ಕೆ ಸಮರ್ಥ ಎದಿರೇಟು ನೀಡುವಲ್ಲಿ ಸಚಿವರ ವೈಫಲ್ಯ ಎದ್ದುಕಾಣುತ್ತಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ. ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆ ಶುಕ್ರವಾರ ನಡೆದಿದ್ದು, ಪೇಸಿಎಂ ಅಭಿಯಾನ ಮತ್ತು ಜೋಡೋ ಯಾತ್ರೆ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆಯಾಯಿತು ಎಂದು ಮೂಲಗಳು ತಿಳಿಸಿವೆ. ಗುತ್ತಿಗೆದಾರರ ಸಂಘದ 40 ಕಮಿಷನ್ ಆರೋಪವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ‘ಪೇಸಿಎಂ’ ಅಭಿಯಾನ ನಡೆಸಿದ್ದು, ಅಷ್ಟೇ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಬೇಕಾದ ಸಚಿವರು ಹಿಂದೆ ಬಿದ್ದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆರೋಪವನ್ನು ರಾಜಕೀಯ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದ್ದು ಹೊಸದಲ್ಲ. ಅದಕ್ಕೆ ತಕ್ಕ ಉತ್ತರ ನೀಡುವ ಅಸ್ತ್ರಗಳನ್ನು ಸಕಾಲಕ್ಕೆ ಬಳಸಿದ್ದರೆ, ಪೇಸಿಎಂ ತೀವ್ರತೆ ತಗ್ಗಿಸಲು ಸಾಧ್ಯವಿತ್ತು ಎಂಬ ಅಸಹನೆ ಹೊರಹಾಕಿದರು ಎನ್ನಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಪೇಸಿಎಂ ಭಿತ್ತಿಪತ್ರ ಅಂಟಿಸುವ ತನಕ ಗುಪ್ತಚರ ಹಾಗೂ ಗೃಹ ಇಲಾಖೆ ಏನು ಮಾಡುತ್ತಿತ್ತು ಎಂದು ಸಿಂಗ್ ಪ್ರಶ್ನಿಸಿ, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲು ಪ್ರಮಾಣ ಹೆಚ್ಚಳ ಬೇಡಿಕೆಯನ್ನು ಪುರಸ್ಕರಿಸಿ, ಅ.9ರೊಳಗೆ ಎಸ್​ಟಿ ಮೀಸಲು ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿಗೆ ಒತ್ತಾಯಿಸುವ ಒಕ್ಕೊರಲ ನಿರ್ಣಯವನ್ನು ಸಭೆ ಅಂಗೀಕರಿಸಿದೆ ಎಂದು ನಂತರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಸುದ್ದಿಗಾರರಿಗೆ ತಿಳಿಸಿದರು.
ದಾವಣಗೆರೆ ಸಮಾವೇಶದ ಚರ್ಚೆ:ಸಿದ್ದರಾಮೋತ್ಸವಕ್ಕೆ ಮಾರುತ್ತರ ನೀಡಲು ಉದ್ದೇಶಿತ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸುವ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದ್ದು, ರೂಪರೇಷೆ ಅಂತಿಮವಾಗಿಲ್ಲ ಎಂದು ಮೂಲಗಳು ಹೇಳಿವೆ. ದೊಡ್ಡಬಳ್ಳಾಪುರದಲ್ಲಿ ‘ಜನಸ್ಪಂದನ’ ಸಮಾವೇಶ ಉದ್ಘಾಟನೆಯಾಗಿದೆ. ದಾವಣಗೆರೆಯಲ್ಲಿ ಜನಸ್ಪಂದನ ಸಮಾವೇಶದ ಸಮಾರೋಪ ಹೆಸರಿನಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಜನಬಲ ಪ್ರದರ್ಶನಕ್ಕೆ ಸಭೆ ಸಹಮತ ವ್ಯಕ್ತಪಡಿಸಿದೆ ಎಂದು ತಿಳಿದಿದೆ.
ಬೆಂಗಳೂರು:ಸುಳ್ಳು ಆರೋಪಗಳನ್ನು ಪದೇ ಪದೆ ಹೇಳಿ ಸತ್ಯವಾಗಿಸಲು ಹೆಣಗುತ್ತಿರುವ ಕಾಂಗ್ರೆಸ್​ನ ದುರಾಡಳಿತವನ್ನು ರಾಜ್ಯದ ಜನರು ಮರೆತಿಲ್ಲವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಅರಮನೆ ಮೈದಾನದ ತ್ರಿಪುರವಾಸಿನಿಯ ಭವ್ಯ ಸಭಾಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ವಿಶೇಷ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಭ್ರಷ್ಟಾಚಾರ, ಹದಗೆಟ್ಟ ಸಾಮಾಜಿಕ ಸಾಮರಸ್ಯ, ಕಾನೂನು ಮತ್ತು ಸುವ್ಯವಸ್ಥೆ ಕಂಡುಂಡ ಜನರು ಕಳೆದ ಚುನಾವಣೆಯಲ್ಲಿ ತಿರಸ್ಕರಿಸಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ದೋಷಪೂರಿತ ನಿರ್ಣಯಗಳಿಂದ ಅಭಿವೃದ್ಧಿಯಲ್ಲಿ ರಾಜ್ಯಕ್ಕೆ ಹಿನ್ನಡೆಯಾಯಿತು. ತುಷ್ಟೀಕರಣಕ್ಕಾಗಿ ಪಿಎಫ್​ಐನಂತಹ ದೇಶದ್ರೋಹಿ ಸಂಘಟನೆ ವಿರುದ್ಧದ ಕೇಸ್​ಗಳನ್ನು ರದ್ದುಪಡಿಸಿತು. ಕೆಲವು ಇಲಾಖೆಗಳಲ್ಲಿ ಶೇ.100 ಭ್ರಷ್ಟಾಚಾರ ತುಂಬಿ ತುಳಕಿದ್ದನ್ನು ಜನರು ಮರೆತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಭಾವಿಸಿದಂತಿದೆ ಎಂದು ತಿವಿದರು.
ಬಿಎಸ್​ವೈ ಗುಟುರು:ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ ಕೇಂದ್ರದಲ್ಲಿ ನರೇಂದ್ರ ಮೋದಿ ನಾಯಕತ್ವದ ಬಲ, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ ಎಂದರು. ಮಧ್ಯವರ್ತಿಗಳ ಹಸ್ತಕ್ಷೇಪಕ್ಕೆ ಅವಕಾಶವಿಲ್ಲದೆ ಯೋಜನೆಗಳ ಫಲ ಜನರಿಗೆ ತಲುಪಿದೆ. ಜನರಿಂದ ದೇಶದೆಲ್ಲೆಡೆ ತಿರಸ್ಕೃತವಾದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲೂ ನೆಲಕಚ್ಚಲಿದೆ ಎಂದು ಭವಿಷ್ಯ ನುಡಿದರು.
ಭಾರತದಿಂದ ಓಡಲು ದಾರಿ ಹುಡುಕಾಟ:ಪಕ್ಷದ ರಾಜ್ಯಾಧ್ಯಕ್ಷ ಮಾತನಾಡಿ ಭಯೋತ್ಪಾದನೆ, ಭ್ರಷ್ಟಾಚಾರವೇ ಕಾಂಗ್ರೆಸ್​ನ ದೊಡ್ಡ ಕೊಡುಗೆಯಾಗಿದೆ. ಆ ಪಕ್ಷದ ಮುಖಂಡರೆಲ್ಲರೂ ಒಂದಲ್ಲ ಒಂದು ಹಗರಣದಲ್ಲಿ ಸಿಲುಕಿದ್ದು, ಬಿಜೆಪಿ ವಿರುದ್ಧ ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಸಭೆಯಲ್ಲಿ ರಾಜ್ಯದ ಸಚಿವರು, ಸಂಸದರು, ಕೋರ್ ಕಮಿಟಿ ಸದಸ್ಯರು, ಶಾಸಕರು, ಪದಾಧಿಕಾರಿಗಳು ಹಾಜರಿದ್ದರು. ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜುಗೌಡ ನಿರ್ವಹಿಸಿದರು.
ಬಿಜೆಪಿ ವಿಜಯರಥಕ್ಕೆ ತಡೆ ಅಸಾಧ್ಯ:ಅಭಿವೃದ್ಧಿಯ ಭದ್ರ ಬುನಾದಿ, ಜನರ ಆಶೋತ್ತರಗಳಿಗೆ ಸ್ಪಂದಿಸಿದ ವಿಶ್ವಾಸ, ಪಾರದರ್ಶಕ ಆಡಳಿತದ ವಿಶ್ವಾಸ ಬಲವುಳ್ಳ ಬಿಜೆಪಿ ವಿಜಯರಥವನ್ನು ತಡೆಯುವುದು ಕಾಂಗ್ರೆಸ್​ಗೆ ಸಾಧ್ಯವಿಲ್ಲ ಎಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಭಿವೃದ್ಧಿಗೆ ಹೊಸ ಆಯಾಮ ನೀಡಿದೆ. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳು ವರದಾನವಾಗಿವೆ. ಪಕ್ಷದ ಸಂಘಟನಾತ್ಮಕ, ಸಮರ್ಪಣಾಮನೋಭಾವದ ಕಾರ್ಯಕರ್ತರ ಪಡೆ, ಹಗಲಿರುಳು ಶ್ರಮಕ್ಕೆ ಸಿದ್ಧವಾಗಿರುವ ಮುಖಂಡರು ಬೆನ್ನಿಗಿದ್ದು, ಪ್ರತಿಪಕ್ಷಗಳು ಏನೇ ಕಸರತ್ತು ಮಾಡಿದರೂ ಫಲಿಸುವುದಿಲ್ಲ ಎಂದು ಭವಿಷ್ಯ ನುಡಿದರು.
ಬಿಎಸ್​ವೈಗೆ ಸನ್ಮಾನ:ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ, ಚುನಾವಣಾ ಸಮಿತಿ ಸದಸ್ಯರಾಗಿ ಬಿ.ಎಸ್. ಯಡಿಯೂರಪ್ಪ ನೇಮಕವಾದ ನಂತರ ಪಾಲ್ಗೊಂಡ ಮೊದಲ ರಾಜ್ಯ ಕಾರ್ಯಕಾರಿಣಿ ಸಭೆಯಿದಾಗಿತ್ತು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಗೈರು ಗಮನಾರ್ಹ:ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಕರುಣಾಕರರೆಡ್ಡಿ ಸೇರಿ ಹಲವು ಶಾಸಕರ, ಮುಖಂಡರು ಸಭೆಗೆ ಗೈರು ಹಾಜರಾಗಿದ್ದರು. 592 ಅಪೇಕ್ಷಿತ ಪ್ರತಿನಿಧಿಗಳಿಗೆ ಆಹ್ವಾನ ನೀಡಿದ್ದರೆ, 436 ಪ್ರತಿನಿಧಿಗಳು ಹಾಜರಿದ್ದರು ಎನ್ನಲಾಗಿದೆ.
ಸಾವರ್ಕರ್ ಆಕರ್ಷಣೆ:ಸಭಾ ಮಂಟಪದ ಬಲಭಾಗದಲ್ಲಿ ಕೃತಕವಾಗಿ ನಿರ್ವಿುಸಿದ್ದ ವೀರಸಾವರ್ಕರ್ ಸೆರೆವಾಸ ಅನುಭವಿಸಿದ ಅಂಡಮಾನ್ ಕಾರಾಗೃಹ, ಬಂದೀಖಾನೆಯು ಆಕರ್ಷಣೆ ತಾಣವಾಗಿತ್ತು.
ವಾಟ್ಸ್​ಆ್ಯಪ್​ ಬಳಕೆ ಅಪಾಯಕಾರಿಯೇ?; ಇಲ್ಲಿದೆ ಆತಂಕಕಾರಿ ಮಾಹಿತಿ!

ಒಡೆಯರ್ ಎಕ್ಸ್​​ಪ್ರೆಸ್​ ಆಗಿ ಬದಲಾದ ಟಿಪ್ಪು ಎಕ್ಸ್​ಪ್ರೆಸ್​: ರಾಜ್ಯದ 2 ರೈಲುಗಳಿಗೆ ಹೊಸ ಹೆಸರು; ವಿವರ ಇಲ್ಲಿದೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − thirteen =
Remember me
