ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜ್ಯ ಸರ್ಕಾರವು ನಿಜ ವೀರಶೈವ ಬಸವೇಶ್ವರರ ಇತಿಹಾಸಕ್ಕೆ ಅಪಚಾರ ಮತ್ತು ದ್ರೋಹ ಎಸಗಿದೆ. ಕೂಡಲೇ ಶಾಲಾ ಪಠ್ಯದಲ್ಲಿ ಪ್ರಕಟಿಸಿರುವ ಸುಳ್ಳನ್ನು ಹಿಂಪಡೆಯಬೇಕು ಎಂದು ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆ ಆಗ್ರಹಿಸಿದೆ. ಈ ಸಂಬಂಧ ಶನಿವಾರ ಸಂಸ್ಥೆ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ದೋಷಗಳನ್ನು ಸರಿಪಡಿಸುವ ಕೆಲಸವಾಗದಿದ್ದರೆ, ಕಾನೂನಾತ್ಮಕವಾಗಿ ಹೋರಾಟ ಮಾಡಲಾಗುತ್ತದೆ ಎಂಬ ಎಚ್ಚರಿಕೆ ನೀಡಿದೆ. ‘ಶಾಲಾ ಪಠ್ಯಪರಿಷ್ಕರಣೆಯಲ್ಲಿ ಬಸವಣ್ಣನವರು ವೀರಶೈವ ಸಿದ್ಧಾಂತವನ್ನು ಪ್ರಚಾರಪಡಿಸಿದರು’ ಎಂಬುದನ್ನು ಕೈಬಿಟ್ಟಿದ್ದು, ಬಸವಣ್ಣನವರು ‘ಅರಿವನ್ನೇ ಗುರು’ವಾಗಿಸಿಕೊಂಡು ಇಷ್ಟಲಿಂಗದ ಹೊಸ ಪರಿಕಲ್ಪನೆಯನ್ನು ನೀಡಿದರು ಎಂದು ಪ್ರಕಟಿಸಲಾಗಿದೆ. ಈ ಬದಲಾವಣೆ ಧರ್ಮ, ಇತಿಹಾಸ ಮತ್ತು ಸಮಾಜಕ್ಕೆ ಸರ್ಕಾರ ಮಾಡುತ್ತಿರುವ ಅಪಚಾರ ಮುಗ್ಧ ಮಕ್ಕಳಲ್ಲಿ ಅನಗತ್ಯ ಸುಳ್ಳು ಪ್ರಚಾರದಿಂದ ಗೊಂದಲ ಮೂಡಿಸುವ ಪ್ರಜ್ಞಾಪೂರ್ವಕ ನಡೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಸರ್ಕಾರದ ಈ ನಡೆಯನ್ನು ಸಂಸ್ಥೆಯು ಬಲವಾಗಿ ಖಂಡಿಸುತ್ತದೆ. ಈ ಸುಳ್ಳು ಪಠ್ಯವನ್ನು ಹಿಂಪಡೆಯುವವರೆಗೂ ಸಮಾಜವನ್ನು ಈ ಅಸತ್ಯದಿಂದ ರಕ್ಷಿಸುವ ಕಾರ್ಯವನ್ನು ಮಾಡಲು ಸಂಸ್ಥೆಯು ಕಟಿಬದ್ಧವಾಗಿದೆ ಎಂದು ತಿಳಿಸಿದೆ.
ಆಗಿರುವುದೇನು?:2016ರಲ್ಲಿ ಸಿದ್ದರಾಮಯ್ಯನವರೇ ಸಿಎಂ ಆಗಿದ್ದ ಅವಧಿಯಲ್ಲಿ ಡಾ. ಬರಗೂರು ರಾಮಚಂದ್ರಪ್ಪ ಸರ್ವಾಧ್ಯಕ್ಷತೆಯಲ್ಲಿ 15 ವಿಶ್ರಾಂತ ಪ್ರಾಧ್ಯಾಪಕರನ್ನು ಒಳಗೊಂಡ ಸಮಿತಿಯು ಪಠ್ಯ ಪರಿಷ್ಕರಣೆ ಮಾಡಿತ್ತು. 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಬಸವೇಶ್ವರರನ್ನು ಭಾವಚಿತ್ರ ಸಹಿತ ‘ವೀರಶೈವ ಸಿದ್ಧಾಂತವನ್ನು ಬಸವೇಶ್ವರರು ಹಾಗೂ ಅನುಯಾಯಿಗಳಾದ ಶರಣರು ಪ್ರಚಾರಪಡಿಸಿದರು ಎಂದು ಮತ್ತು ಕೂಡಲಸಂಗಮದಲ್ಲಿ ಶೈವಗುರುಗಳ ಸಾನ್ನಿಧ್ಯದಲ್ಲಿ ಲಿಂಗದೀಕ್ಷೆಯನ್ನು ಪಡೆದು ಧ್ಯಾನಸಾಧನೆ ಮಾಡಿದರು’ ಎಂದು ಪ್ರಕಟಿಸಲಾಗಿತ್ತು. ಆದರೆ, ಈ ಸಾಲಿನ ಪಠ್ಯ ಪರಿಷ್ಕರಣೆಯಲ್ಲಿ ವೀರಶೈವ ಸಿದ್ಧಾಂತವನ್ನು ಪ್ರಚಾರಪಡಿಸಿದರು ಎಂಬುದನ್ನು ಕೈಬಿಟ್ಟು ಬಸವಣ್ಣನವರು ‘ಅರಿವನ್ನೇ ಗುರು’ವಾಗಿಸಿಕೊಂಡು ಇಷ್ಟಲಿಂಗದ ಹೊಸ ಪರಿಕಲ್ಪನೆಯನ್ನು ನೀಡಿದರು ಎಂದು ಪ್ರಕಟಿಸಲಾಗಿದೆ.
30ಕ್ಕೂ ಹೆಚ್ಚಿನ ಮಠಾಧೀಶರು ಭಾಗಿ:ಸಭೆಯಲ್ಲಿ ಸಿಂಧಗಿಯ ಶ್ರೀ ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ, ಮಹಾರಾಷ್ಟ್ರದ ಕಪಿಲಧಾರದ ಡಾ. ವಿರೂಪಾಕ್ಷ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರಿನ ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆಯ ಡಾ. ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಫಾಳಾದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರಿನ ಡಾ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ರಟ್ಟೆಹಳ್ಳಿಯ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಎಮ್ಮಿಗನೂರಿನ ಶ್ರೀ ವಾಮದೇವ ಶಿವಾಚಾರ್ಯ ಸ್ವಾಮೀಜಿ ಸೇರಿ 30ಕ್ಕೂ ಹೆಚ್ಚಿನ ಮಠಾಧೀಶರು ಭಾಗವಹಿಸಿದ್ದರು.
.ರಾಜ್ಯ ಸರ್ಕಾರವು 2016ರಲ್ಲಿ ಪ್ರಕಟಿಸಿದ 4 ವಚನ ಸಂಪುಟಗಳ ಆವೃತ್ತಿಗಳಲ್ಲಿ ಬಸವೇಶ್ವರರೇ ತಮ್ಮನ್ನು ‘ಬರಿಯ ಶೈವನಾಗಿದ್ದ ನನ್ನನ್ನು ನಿಜವೀರಶೈವವನ್ನಾಗಿಸಿದ ಚನ್ನಬಸವಣ್ಣನಿಗೆ ನಮೋ ಎಂದು ಜೀವಿಸುವೆನು’ ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ. (ವಚನ ಸಂಖ್ಯೆ 1092) 3ನೇ ಆವೃತ್ತಿಯನ್ನು ಸಿದ್ದರಾಮಯ್ಯನವರೇ ಬಿಡುಗಡೆ ಮಾಡಿದ್ದು, ಡಾ. ಎಂ.ಎಂ. ಕಲಬುರ್ಗಿ ಪ್ರಧಾನ ಸಂಪಾದಕರಾಗಿದ್ದರು. ಈ ಸಂಪಾದಕೀಯದಲ್ಲಿಯೂ ಸ್ಪಷ್ಟವಾಗಿ ಪ್ರಕ್ಷಿಪ್ತವಾಗಿರಬಹುದಾದ ವಚನಗಳನ್ನು ಹಾಗೂ ವಚನಕಾರರನ್ನು ಬಿಟ್ಟು ಬಿಡಲಾಗಿದೆ ಎಂದು ಬರೆದುಕೊಂಡಿದ್ದಾರೆ. ಅದಾದ ಮೇಲೆಯೇ ಬಸವಣ್ಣನವರ ಉಲ್ಲೇಖಿಸಿದ ನಿಜ ವೀರಶೈವವಿರುವ ವಚನವಿದೆ.
.ಕೊಂಡಗೂಳಿ ಕೇಶಿರಾಜ, ಜೇಡರ ದಾಸಿಮಯ್ಯ, ಮಹಾಶಿವಶರಣೆ ಅಕ್ಕ ಮಹಾದೇವಿ, ಅಲ್ಲಮ ಪ್ರಭು ಸೇರಿ ಅನೇಕ ಶರಣರಿಗೆ ಬಸವಣ್ಣವರು ಭೇಟಿಯಾಗುವುದಕ್ಕಿಂತ ಮೊದಲೇ ಅವರವರ ಗುರುಗಳಿಂದ ಇಷ್ಟಲಿಂಗ ದೀಕ್ಷೆಯನ್ನು ಪಡೆದು ನಿತ್ಯದಲ್ಲಿ ಇಷ್ಟಲಿಂಗೋಪಾಸನೆಯನ್ನು ಮಾಡುತ್ತಿದ್ದರು ಎನ್ನುವ ಸಂಗತಿಯನ್ನು ಯಾರೂ ಅಲ್ಲಗಳೆಯುವಂತಿಲ್ಲ.
.ಮೆಹೆಂಜೋದಾರೋ ನಾಗರಿಕತೆ ಎಂಬ ಪುಸ್ತಕದಲ್ಲಿ ಅಂದಿನ ಭಾರತೀಯ ಪ್ರಾಚ್ಯಶಾಸ್ತ್ರ ಇಲಾಖೆಯ ಅಧ್ಯಕ್ಷರಾಗಿದ್ದ ಸರ್ ಜಾನ್ ಮಾರ್ಷಲ್ ಅವರು ಇಷ್ಟಲಿಂಗದ ಪಳೆಯುಳಿಕೆಗಳು ಸಿಂಧೂ ನಾಗರಿಕತೆಯ ಉತ್ಖನದಲ್ಲಿ ದೊರಕಿವೆ ಎಂದು 1935ರಲ್ಲಿ ದಾಖಲಿಸಿದ್ದಾರೆ. ಅಂದರೆ 5 ಸಾವಿರ ವರ್ಷದಷ್ಟು ಪ್ರಾಚೀನವಾದ ಇಷ್ಟಲಿಂಗ ಪೂಜೆಯ ಸತ್ಯಾಂಶಕ್ಕೆ ತಿಲಾಂಜಲಿ ಕೊಟ್ಟು ಪಠ್ಯವನ್ನು ತಿರುಚಿದ್ದೂ ಸಹ ಅಕ್ಷಮ್ಯ.
.1909ರಲ್ಲಿ ಎಚ್.ಕೆ. ವೀರಬಸವಯ್ಯ ಎಂಬ ವಕೀಲರು ಸ್ವಾಮಿ ವಿವೇಕಾನಂದ ಸಮಾಜದ ಅಡಿಯಲ್ಲಿ ಕಲ್ಕತ್ತಾದಲ್ಲಿ ನಡೆದ ಭಾರತದ ಪ್ರಥಮ ಧಾರ್ವಿುಕ ಸಮ್ಮೇಳನದಲ್ಲಿ ವೀರಶೈವ ಪ್ರಬಂಧದಲ್ಲಿ ಬಸವೇಶ್ವರರು ವೀರಶೈವ ಧರ್ಮವನ್ನು ಸ್ವೀಕರಿಸಿದ್ದನ್ನು ಅನುಮಾನಕ್ಕೆ ಎಡೆಇಲ್ಲದಂತೆ ದಾಖಲಿಸಿದ್ದಾರೆ.
.ಸ್ಕಂದ ಪುರಾಣದಲ್ಲಿ ವೇದವ್ಯಾಸರು ವೀರಶೈವರ ಲಕ್ಷಣಗಳ ಕುರಿತು ‘ಯಾರು ಎಡಗೈಯಲ್ಲಿ ಇಷ್ಟಲಿಂಗವನ್ನು ತದೇಕ ಚಿತ್ತದಿಂದ ಪೂಜಿಸುತ್ತಾರೋ ಅವರೇ ವೀರಶೈವರು’ ಎಂದು ಬರೆದಿದ್ದಾರೆ. ಆದ್ದರಿಂದ ಇಂದಿನ ಸರ್ಕಾರ ಇದೇ ಪಕ್ಷದ ಹಿಂದಿನ ಸರ್ಕಾರವಿದ್ದಾಗ ವೀರಶೈವ ಲಿಂಗಾಯತ ಸಮಾಜ, ಧರ್ಮ ಒಡೆಯುವ 2017-18ನೇ ಸಾಲಿನಲ್ಲಿ ಮಾಡಿದ್ದರ ಮುಂದುವರಿದ ನಡೆ ಎಂದು ಊಹಿಸಬಹುದಾಗಿದೆ.
ಆನೆ ಹಾವಳಿಗೆ ಶಾಶ್ವತ ಪರಿಹಾರ ಶೋಧಕ್ಕೆ ಅಂತಾರಾಷ್ಟ್ರೀಯ ಸಮ್ಮೇಳನ: ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
